ಭೂಸ್ವಾಧೀನ ವಾಪಾಸ್‌: ದೇವನಹಳ್ಳಿಯಲ್ಲಿಯೂ ಇಲ್ಲ, ಬಾದಾಮಿಯಲ್ಲಿಯೂ ಇಲ್ಲ, ಸರ್ಕಾರದ ನಿಲುವು ಬದಲು?

land acquisition in karnataka

ಬೆಂಗಳೂರು: ದೇವನಹಳ್ಳಿ ಭೂಸ್ವಾಧೀನವನ್ನು ಕೈಬಿಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿ ಎರಡು ತಿಂಗಳು ಕಳೆದರೂ ಅಧಿಕೃತ ಅಧಿಸೂಚನೆ ಹೊರಬಿದ್ದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿರುವ ಹೊತ್ತಿನಲ್ಲಿಯೇ, ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಭೂಸ್ವಾಧೀನ  ಕೈಬಿಡುವ ಕುರಿತೂ ಸರ್ಕಾರ ಇದೇ ರೀತಿಯ ನಿರ್ಲಕ್ಷ್ಯ ತೋರುತ್ತಿರುವುದು ಬೆಳಕಿಗೆ ಬಂದಿದೆ.

 

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹುಲಕುರ್ಕಿ, ಬ್ಯಾಡರಬೂದಿಹಾಳ ಮತ್ತು ಗುಳೇದಗುಡ್ಡ ತಾಲೂಕಿನ ಹಂಗರಂಗಿ ಗ್ರಾಮಗಳಲ್ಲಿನ ಕೃಷಿ ಭೂಮಿಯನ್ನು ಕೈಗಾರಿಕಾ ಪ್ರದೇಶದ ಸಲುವಾಗಿ ಭೂ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಈ ಭೂಸ್ವಾಧೀನ ಪ್ರಕ್ರಿಯೆಯಿಂದ 2218.33 ಎಕರೆ ಜಮೀನನ್ನು ಕೈ ಬಿಡುವಂತೆ ಕಳೆದ ಜನವರಿಯಲ್ಲಿಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ, ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಂಡೇ ಇಲ್ಲ. ಇದರಿಂದಾಗಿ ರೈತರು ಅಡ್ಡಕತ್ತರಿಯಲ್ಲಿ ಸಿಕ್ಕಿಬಿದ್ದಂತಾಗಿದ್ದಾರೆ.

 

ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ತೀರ್ಮಾನದಂತೆ ಕಳೆದ ಜನವರಿ 3 ರಂದು ಜಂಟಿ ಸಮೀಕ್ಷೆ ನಡೆಸಲಾಗಿತ್ತು.  ಭೂಸ್ವಾಧೀನ ಪಡಿಸಿದ ಒಟ್ಟಾರೆ 2218.33 ಎಕರೆ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡುವ ಬಗ್ಗೆ  ಜನವರಿ 13ರಂದೇ  ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇದಾಗಿ ಎಂಟು ತಿಂಗಳು ಕಳೆದರೂ ಸರ್ಕಾರ ಇನ್ನೂ ಈ ಪ್ರಸ್ತಾವನೆಯನ್ನು ಪರಿಶೀಲಿಸುತ್ತಲೇ ಇದೆ.

 

land acquisition in karnataka

 

ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಪಾಟೀಲ್‌ ಜಿ.ಟಿ. (ಬೀಳಗಿ) ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ನೀಡಿದ ಉತ್ತರದಲ್ಲಿ ಈ ಬಗ್ಗೆ ಮಾಹಿತಿ ಇದೆ.

 

ʻʻದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈ ಬಿಟ್ಟಿದ್ದೇವೆ. ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈ ಬಿಡಲು ನಿರ್ಧರಿಸಿದೆʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಜುಲೈ 15 ರಂದು ಉನ್ನತಮಟ್ಟದ ಸಭೆಯ ನಂತರ ಪ್ರಕಟಿಸಿದ್ದರು.

 

ಅಂತೆಯ 2023ರ ವಿಧಾನಸಭಾ ಚುನಾವಣೆಯ ವೇಳೆ, ಬಾಗಲಕೋಟೆ ಜಿಲ್ಲೆ ಹಲಕುರ್ಕಿ ಗ್ರಾಮದಲ್ಲಿ ರೈತರ ಸಮ್ಮತಿಯಿಲ್ಲದೇ ವಶಪಡಿಸಿಕೊಂಡಿದ್ದ ಜಮೀನನ್ನು ಹಿಂದಿರುಗಿಸಲಾಗುವುದು ಎಂದು ಕಾಂಗ್ರೆಸ್‌ ಪಕ್ಷ ಭರವಸೆ ನೀಡಿತ್ತು. ಈ ಎರಡೂ ಪ್ರಕರಣಗಳಲ್ಲಿ ಸರ್ಕಾರ ವಿಳಂಬ ಮಾಡುತ್ತಿರುವುದನ್ನು ನೋಡಿದರೆ, ಸರ್ಕಾರದ ನಿಲುವಿನಲ್ಲಿ ಏನಾದರೂ ಬದಲಾವಣೆಯಾಗಿದೆಯೇ ಎಂಬ ಅನುಮಾನ ರೈತರನ್ನು ಕಾಡುತ್ತಿದೆ.

 

ಏನಿದು ಪ್ರಕರಣ?

 

ಬಾಗಲಕೋಟೆ ಜಿಲ್ಲೆ, ಬಾದಾಮಿ ತಾಲ್ಲೂಕು, ಹಲಕುರ್ಕಿ, ಬ್ಯಾಡರಬೂದಿಹಾಳ ಮತ್ತು ಗುಳೇದಗುಡ್ಡ ತಾಲ್ಲೂಕು, ಹಂಗರಂಗಿ ಗ್ರಾಮಗಳಲ್ಲಿ ಕೈಗಾರಿಕಾ ಪ್ರದೇಶ ನಿರ್ಮಿಸಲುವ ಸಲುವಾಗಿ 2218.11 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು 2022ರ ಆಗಸ್ಟ್‌ 26ರಂದು ಮತ್ತು ಬ್ಯಾಡರಬೂದಿಹಾಳ ಗ್ರಾಮದಲ್ಲಿ ಹೆಚ್ಚುವರಿಯಾಗಿ 0-11 ಗುಂಟೆ ಜಮೀನನ್ನು ಸ್ವಾಧೀನಪಡಿಸಲು 2023ರ ಫೆಬ್ರವರಿ 25 ಕೆಐಎಡಿಬಿಯು  ಅಧಿಸೂಚನೆ ಹೊರಡಿಸಿತ್ತು.

 

ಈ  ಪ್ರಾಥಮಿಕ ಅಧಿಸೂಚನೆಯಲ್ಲಿನ 2218.11 ಎಕರೆ ಜಮೀನಿನ ಪೈಕಿ 444.31 ಎಕರೆ ಜಮೀನಿನ  ಭೂ ಸ್ವಾಧೀನಕ್ಕೆ 2023ರ ಫೆಬ್ರವರಿ 20ರಂದು ಅಂತಿಮ ಅಧಿಸೂಚನೆ ಕೂಡ ಹೊರಡಿಸಲಾಗಿತ್ತು. ಈ 444.31 ಎಕರೆ ಜಮೀನಿಗೆ ಎಕರೆ ಒಂದಕ್ಕೆ18.00 ಲಕ್ಷ ರು.ಗಳಂತೆ ಪರಿಹಾರ ಪಾವತಿಸಲು ಕೂಡ ಮಂಡಳಿ ತೀರ್ಮಾನಿಸಿತ್ತು.

 

ಆದರೆ ಈ ಭೂಸ್ವಾಧೀನಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಫಲವತ್ತಾಧ ಕೃಷಿ ಭೂಮಿಯನ್ನು ಕೈಗಾರಿಕೆಗೆ ಬಿಟ್ಟುಕೊಡುವ ಮಾತೇ ಇಲ್ಲ ಎಂದು ಎಚ್ಚರಿಸಿದ್ದರು. ಆಗಿನ ಬಿಜೆಪಿ ಸರ್ಕಾರದ ಈ ಕ್ರಮವನ್ನು ವಿಪಕ್ಷ ಕಾಂಗ್ರೆಸ್‌  ಕೂಡ ತೀವ್ರವಾಗಿ ವಿರೋಧಿಸಿತ್ತಲ್ಲದೆ, ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿತ್ತು. ಅಲ್ಲದೆ ತಾನು ಅಧಿಕಾರಕ್ಕೆ ಬಂದಲ್ಲಿ, ಈ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡುವುದಾಗಿ ಕಾಂಗ್ರೆಸ್‌ ಅಧಿಕೃತವಾಗಿಯೇ ಪ್ರಕಟಿಸಿತ್ತು.

 

ಹೋರಾಟ ಮಾಡುತ್ತಿದ್ದ ರೈತರು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದರು. ಅವರು ವಿಧಾನಸಭೆಯಲ್ಲಿ ಕೂಡ ಈ ವಿಷಯವನ್ನು ಪ್ರಸ್ತಾಪಿಸಿ,  ರೈತರ ಅಭಿಪ್ರಾಯ ಹಾಗೂ ಗ್ರಾಮಸಭೆ ನಡೆಸದೆ ಭೂ ಸ್ವಾಧೀನ ಪಡಿಸಿಕೊಂಡಿರುವ ರೈತರ ಭೂಮಿಯನ್ನು ಅವರಿಗೆ ಮರಳಿಸಬೇಕೆಂದು ಒತ್ತಾಯಿಸಿದ್ದರು. ಆದರೆ ಸಿದ್ದರಾಮಯ್ಯ ಅವರೇ ಈಗ ಮುಖ್ಯಮಂತ್ರಿಯಾಗಿದ್ದಾರೆ. ಆದರೂ ಕಳೆದ ಎರಡು ವರ್ಷಗಳಿಂದ ರೈತರ ಈ ಸಮಸ್ಯೆಯನ್ನು ಬಗೆಹರಿಸಿಲ್ಲ.

 

ಭೂಸ್ವಾಧೀನ  ಏಕೆ?

 

5 ಸಾವಿರ ಜನಸಂಖ್ಯೆ ಇರುವ ಹಲಕುರ್ಕಿ ಗ್ರಾಮವೊಂದರಲ್ಲಿಯೇ  3 ಸಾವಿರ ಎಕರೆ ಜಮೀನು ಇದೆ. ಇದು ಸಂಪೂರ್ಣವಾಗಿ ಫಲವತ್ತತೆಯಿಂದ ಕೂಡಿ ರೈತರ ಬದುಕಿಗೆ ಆಸರೆಯಾಗಿದೆ. ಬಿಜೆಪಿ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದ ಮುರುಗೇಶ ನಿರಾಣಿ ಅವರು, ಇಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಹಾಗೂ ಕೈಗಾರಿಕೆಗಳ ಸ್ಥಾಪನೆಗಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದರು ಎಂದು ಅಲ್ಲಿನ ರೈತರು ದೂರಿದ್ದರು.

 

ನಾವು ವರ್ಷಕ್ಕೆ ಎರಡು ಬೆಳೆ ಬೆಳೆದು ಜೀವನ ನಡೆಸುತ್ತಿದ್ದೇವೆ. ಈ ಭೂಮಿ ವಶಕ್ಕೆ ಪಡೆದರೆ ಶೇ.60 ರಷ್ಟು ಕುಟುಂಬಗಳು ಬೀದಿ ಪಾಲಾಗುತ್ತವೆ. ಸರ್ಕಾರ  ಏಕಾಏಕಿ ಕೃಷಿ  ಜಮೀನನ್ನು ಸ್ವಾಧೀನಪಡಿಸಿಕೊಂಡು ನಮ್ಮನ್ನು ಬೀದಿ ಪಾಲು ಮಾಡಲು ಹೊರಟಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.

 

land acquisition in karnataka

 

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಹಿಂದಿನ ಬಿಜೆಪಿ ಸರ್ಕಾರದ ಕ್ರಮವನ್ನು ರದ್ದುಪಡಿಸಿರಲಿಲ್ಲ. ರೈತರ ಆತಂಕವನ್ನು ದೂರ ಮಾಡುವತ್ತ ಒಂದೇ ಒಂದು ಹೆಜ್ಜೆ ಇಟ್ಟಿರಲಿಲ್ಲ. ಇದಕ್ಕೆ ಬದಲಾಗಿ, ‘ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಿರುವ 444.31 ಎಕರೆ ಜಮೀನನ್ನು ಭೂ ಸ್ವಾಧೀನದಿಂದ ಕೈ ಬಿಡುವುದು ಕಷ್ಟ ಸಾಧ್ಯವಾಗಿರುತ್ತದೆ. ಆದರೆ ಉಳಿದ ಜಮೀನುಗಳಿಗೆ ಅಂತಿಮ ಅಧಿಸೂಚನೆ ಹೊರಡಿಸುವ ಪೂರ್ವದಲ್ಲಿ ಸಾಧಕ ಬಾಧಕಗಳನ್ನು ಚರ್ಚಿಸಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ವಿಧಾನಸಭೆಯಲ್ಲಿಯೇ ಪ್ರಕಟಿಸಿತ್ತು.

 

ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನೇ  ಕಾಂಗ್ರೆಸ್‌ ಸರ್ಕಾರ ಮರೆತಂತೆ ವರ್ತಿಸಲಾರಂಭಿಸಿತ್ತು.

 

ಈ ಕುರಿತು ʻದಿ ಫೈಲ್‌ʼ,  ʻಮಾತಿನಿಂದ ಹಿಂದೆ ಸರಿದು ವಚನ ಭ್ರಷ್ಟವಾಯಿತೇ ಕಾಂಗ್ರೆಸ್‌ ಸರ್ಕಾರ?ʼ ಎಂಬ ವರದಿ ಪ್ರಕಟಿಸಿ, ಎಚ್ಚರಿಸಿತ್ತು.

 

2,218 ಎಕರೆ ಜಮೀನು ವಾಪಸ್‌ ವಿಚಾರ; ಮಾತಿನಿಂದ ಹಿಂದೆ ಸರಿದು ವಚನ ಭ್ರಷ್ಟವಾಯಿತೇ ಕಾಂಗ್ರೆಸ್‌ ಸರ್ಕಾರ?

 

ಜಂಟಿ ಸಮೀಕ್ಷೆಗೆ ನಿರ್ಧಾರ

 

ಮುಂದೆ 2024ರ ಫೆಬ್ರವರಿ 20ರಂದು ನಡೆದ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) 388ನೇ ಸಭೆಯಲ್ಲಿ ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಿರುವ 444.31 ಎಕರೆ ಮತ್ತು 0.11 ಗುಂಟೆ ಜಮೀನನ್ನು ಹೊರತುಪಡಿಸಿ ಉಳಿದ 1773.20 ಎಕರೆ ಜಮೀನಿನ ಬಗ್ಗೆ ಇಲಾಖೆಯ ಅಧಿಕಾರಿಗಳು ಮತ್ತು ಉದ್ದಿಮೆದಾರರಿಂದ ಜಂಟಿ ಸ್ಥಳ ಪರಿಶೀಲನೆ ನಡೆಸಿ, ವರದಿ ಪಡೆಯಲು ನಿರ್ಣಯಿಸಲಾಗಿತ್ತು.

 

ಕೈಗಾರಿಕಾ ಪ್ರದೇಶಾಭಿವೃದ್ಧಿಪಡಿಸಲು ಈ ಜಮೀನು ಯೋಗ್ಯವಾಗಿದೆಯೇ ಹಾಗೂ ಉದ್ದಿಮೆದಾರರಿಂದ ಬೇಡಿಕೆ ಇದೆಯೇ ಎಂಬುದನ್ನು ಈ ಜಂಟಿ ಸಮೀಕ್ಷೆಯ ಸಂದರ್ಭದಲ್ಲಿ ಪರಿಶೀಲಿಸಲು ಉದ್ದೇಶಿಸಲಾಗಿತ್ತು.

 

land acquisition in karnataka

 

ʻʻ ಮಂಡಳಿ ಸಭೆಯ ನಿರ್ಣಯದಂತೆ ದಿನಾಂಕ 03-01-2025 ರಂದು ಈ ಜಮೀನುಗಳ ಸ್ಥಳ ಪರಿಶೀಲನೆಯನ್ನು ಮಾಡಿದ್ದು, ಸುಮಾರು 200-00 ಎಕರೆ ಜಮೀನು 4 ಗ್ರಾಮಗಳಿಗೆ ಸೇರಿದ ಗೋಮಾಳ ಸರ್ಕಾರಿ ಜಮೀನಾಗಿದೆ. ಇದರಲ್ಲಿ ಅವಲಂಬಿತರಾಗಿ ಸುಮಾರು 35 ಕುಟುಂಬಗಳು ಸಾಗುವಳಿ ಮಾಡುತ್ತಿದ್ದು, ಈ  ಜಮೀನುಗಳು ತುಂಬಾ ಫಲವತ್ತಾಗಿವೆ. ರೈತರು ವರ್ಷಕ್ಕೆ  ಎರಡು ಬೆಳೆಗಳನ್ನು ಬೆಳೆಯುತ್ತಿದ್ದಾರೆ.

 

ಈ ಜಮೀನುಗಳು ಬಾಗಲಕೋಟೆ ಜಿಲ್ಲೆಯಿಂದ ಸುಮಾರು 30ಕಿ.ಮೀ ದೂರದಲ್ಲಿ ಇರುತ್ತದೆ. ಜಂಟಿ ಸ್ಥಳ ತನಿಖೆ ಸಮಯದಲ್ಲಿ ರೈತರು ತುಂಬಾ ವಿರೋಧ ವ್ಯಕ್ತಪಡಿಸಿದರೂ ಸೂಕ್ತ ಭದ್ರತೆಯೊಂದಿಗೆ ಜಂಟಿ ಸ್ಥಳ ತನಿಖೆ ಮಾಡಿ ಭೂಸ್ವಾಧೀನಪಡಿಸಿದ ಒಟ್ಟಾರೆ 2218-33 ಎಕರೆ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ದಿನಾಂಕ:13-01-2025 ರಂದು ಸರ್ಕಾರ ಪ್ರಸ್ತಾವನೆ ಸ್ವೀಕರಿಸಿದ್ದು, ಇದು ಸರ್ಕಾರದ ಪರಿಶೀಲನೆಯಲ್ಲಿದೆʼʼ ಎಂದು ಸಚಿವ ಎಂ.ಬಿ. ಪಾಟೀಲ ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

 

ಇಕ್ಕಟ್ಟಿನಲ್ಲಿ ಶಾಸಕ ಜಿ.ಟಿ. ಪಾಟೀಲ್‌

 

ಹುಲಕುರ್ಕಿಯಲ್ಲಿ ಭೂಸ್ವಾಧೀನ ವಿರೋಧಿಸಿ ರೈತರು ನಡೆದ ಹೋರಾಟದಲ್ಲಿ ಗುರುತಿಸಿಕೊಂಡೇ ಬಂದಿದ್ದ ಕಾಂಗ್ರೆಸ್‌ ನಾಯಕ ಜಿ ಟಿ ಪಾಟೀಲ್‌ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ʻʻಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಹಲಕುರ್ಕಿ ಗ್ರಾಮದ ಭೂಸ್ವಾಧೀನ ವಿಚಾರವನ್ನು ವಿಧಾನಸಭೆ ಅಧಿವೇಶನದಲ್ಲಿ ಇಟ್ಟು ರದ್ದುಪಡಿಸಲಾಗುವುದು’ʼ ಎಂದು ಅಲ್ಲಿನ ರೈತರಿಗೆ ಅವರು ಚುನಾವಣೆಯ ಸಂದರ್ಭದಲ್ಲಿ ಭರವಸೆ  ಕೂಡ ನೀಡಿದ್ದರು.

 

ಆದರೆ ಸರ್ಕಾರದ ವಿಳಂಬ ನೀತಿಯಿಂದಾಗಿ ಅವರೀಗ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಹೊಸ ಸರ್ಕಾರದ ಮೊದಲ ಅಧಿವೇಶನದಲ್ಲಿಯೇ ಈ ಬಗ್ಗೆ ಜಿ ಟಿ ಪಾಟೀಲ್‌ ಗಮನ ಸೆಳೆಯುವ ಸೂಚನೆ ಮಂಡಿಸಿದ್ದರು. ಆಗ ಉತ್ತರಿಸಿದ್ದ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್, ‘ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಿರುವ 444.31 ಎಕರೆ ಜಮೀನನ್ನು ಭೂ ಸ್ವಾಧೀನದಿಂದ ಕೈ ಬಿಡುವುದು ಕಷ್ಟ ಸಾಧ್ಯವಾಗಿರುತ್ತದೆ. ಆದರೆ ಉಳಿದ ಜಮೀನುಗಳಿಗೆ ಅಂತಿಮ ಅಧಿಸೂಚನೆ ಹೊರಡಿಸುವ ಪೂರ್ವದಲ್ಲಿ ಸಾಧಕ ಬಾಧಕಗಳನ್ನು ಚರ್ಚಿಸಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಉತ್ತರಿಸಿದ್ದರು.

 

ಆದರೆ ಭೂಸ್ವಾಧೀನ ವಿರೋಧಿಸುತ್ತಿರುವ ರೈತರ ಪರವಾಗಿಯೇ ನಿಂತಿದ್ದ ಜಿ ಟಿ ಪಾಟೀಲ್‌ ಇತ್ತೀಚೆಗೆ ನಡೆದ ವಿಧಾನಸಭೆಯ ಅಧಿವೇಶನದಲ್ಲಿಯೂ ʻಬಾದಾಮಿ ತಾಲೂಕಿನ ಹುಲಕುರ್ಕಿಯಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಭೂಸ್ವಾಧೀನಪಡಿಸಿಕೊಂಡ ಭೂಮಿಯನ್ನು ಮರಳಿ ರೈತರಿಗೆ ಬಿಟ್ಟುಕೊಡುವ ಪ್ರಕ್ರಿಯೆ ಯಾವ ಹಂತದಲ್ಲಿದೆ?, ಯಾವ ಕಾಲಮಿತಿಯೊಳಗೆ ಭೂಮಿಯನ್ನು ಮರಳಿಸಲಾಗುವುದು? ಎಂದು ಪ್ರಶ್ನೆ ಕೇಳಿದ್ದರಲ್ಲದೆ, ವಿವರ ನೀಡುವಂತೆ ಸಚಿವರನ್ನು ಕೋರಿದ್ದರು.

 

ಈ ಎಲ್ಲ ಬೆಳವಣಿಗೆ ಕುರಿತು ʻದಿ ಫೈಲ್‌ʼ ನೊಂದಿಗೆ ಮಾತನಾಡಿದ ಜಿ ಟಿ ಪಾಟೀಲ್‌, ʻʻತಾವು ಭೂಸ್ವಾಧೀನದ ವಿರುದ್ಧ ಹೋರಾಟ ನಡೆಸುತ್ತಿರುವ ರೈತರ ಪರವಾಗಿಯೇ ನಿಂತಿದ್ದೇನೆ. ಯಾವುದೇ ಕಾರಣಕ್ಕೂ ರೈತರ ಫಲವತ್ತಾದ ಭೂಮಿಯನ್ನು ಕಸಿದುಕೊಳ್ಳಲು ಅವಕಾಶ ನೀಡುವುದಿಲ್ಲʼʼ ಎಂದು ಸ್ಪಷ್ಟಪಡಿಸಿದ್ದಾರೆ.

 

ರೈತರಿಗೆ ಭೂಮಿಯನ್ನು ಬಿಟ್ಟುಕೊಡಲು ಸರ್ಕಾರ ವಿಳಂಬ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ʻʻಸರ್ಕಾರದ ಕೆಲಸವೆಂದರೆ ದೇವರ ಕೆಲಸ. ದೇವರು ಯಾವಾಗ ವರ ಕೊಡುತ್ತಾನೋ, ಆಗ ನಾವು ಪಡೆದುಕೊಳ್ಳಬೇಕುʼʼ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.

Your generous support will help us remain independent and work without fear.

Latest News

Related Posts