ಬೆಂಗಳೂರು : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 11 ನಿಗಮಗಳ ಪೈಕಿ 8 ನಿಗಮಗಳಿಗೆ 2 ವರ್ಷವಾದರೂ ಅಧ್ಯಕ್ಷರೇ ನೇಮಕಗೊಂಡಿಲ್ಲ. ಇದರಿಂದಾಗಿ ನಿಗಮಗಳ ವಿವಿಧ ಯೋಜನೆಗಳು ಸರಿಯಾಗಿ ಜಾರಿಯಾಗದೆ, ಕಳೆದ ಆರ್ಥಿಕ ಸಾಲಿನಲ್ಲಿ 72.55 ಕೋಟಿ ರು. ಅನುದಾನ ಬಳಕೆಯಾಗದೆ ಉಳಿದಿದೆ.
2024-25ನೇ ಸಾಲಿನಲ್ಲಿ ಈ ಎಂಟು ನಿಗಮಗಳಿಗೆ ಒಟ್ಟು 172 ಕೋಟಿ ರು. ಅನುದಾನ ನೀಡಲಾಗಿತ್ತು. ಇದರಲ್ಲಿ ವಿವಿಧ ಯೋಜನೆಗಳಿಗೆ ಹಂಚಿಕೆಯಾಗಿದ್ದ ಅನುದಾನದಲ್ಲಿ 72.55 ರು. ಉಳಿಕೆಯಾಗಿದೆ. ಅಧ್ಯಕ್ಷರಿಲ್ಲದೇ ಇರುವುದರಿಂದ ಫಲಾನುಭವಿಗಳ ಆಯ್ಕೆ ಸರಿಯಾಗಿ ನಡೆಯದೇ ಅನುದಾನ ಸಂಪೂರ್ಣವಾಗಿ ಬಳಕೆಯಾಗಿಲ್ಲ.
ಕಳೆದ ವಿಧಾನಸಭಾ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಸದಸ್ಯ ಡಿ.ಟಿ. ಶ್ರೀನಿವಾಸ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್ ತಂಗಡಗಿ ನೀಡಿರುವ ಲಿಖಿತ ಉತ್ತರದಿಂದ ಅನುದಾನ ಉಳಿಕೆಯಾಗಿರುವುದು ಬಹಿರಂಗಗೊಂಡಿದೆ.
ಇಲಾಖೆಯಡಿ ಬರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ನಿಜ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಮಾತ್ರ ಅಧ್ಯಕ್ಷರು ನೇಮಕಗೊಂಡಿದ್ದಾರೆ. ಉಳಿದ 8 ನಿಗಮಗಳ ಅಧ್ಯಕ್ಷರು ನೇಮಕಗೊಳ್ಳದೇ ಇರುವುದರಿಂದ ಇಲಾಖಾ ಸಚಿವರೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಈ ನಿಗಮಗಳಿಗೆ ಅಧ್ಯಕ್ಷರನ್ನು ನೇಮಿಸಿಲ್ಲ.
ಅಭಿವೃದ್ಧಿ ನಿಗಮಗಳಿಗೆ ಪೂರಕವಾಗಿ ರೂಪಿಸಿದ ಯೋಜನೆಗಳಾವುವು, ಇದಕ್ಕೆ ನಿಗದಿಪಡಿಸಿರುವ ಅನುದಾನವೆಷ್ಟು, ಖರ್ಚಾಗಿರುವ ಅನುದಾನವೆಷ್ಟು ಹಾಗೂ ಉಳಿಕೆಯಾಗಿರುವ ಅನುದಾನವೆಷ್ಟು? ಎಂದು ವಿಧಾನ ಪರಿಷತ್ತಿನ ಸದಸ್ಯ ಡಿ.ಟಿ. ಶ್ರೀನಿವಾಸ ಪ್ರಶ್ನೆ ಕೇಳಿದ್ದರು. ಇದಕ್ಕೆ ಸಚಿವ ಶಿವರಾಜ ಎಸ್ ತಂಗಡಗಿ ವಿವರವಾಗಿ ಉತ್ತರ ನೀಡಿದ್ದಾರೆ. ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಲ್ಲಿ ಅತಿ ಹೆಚ್ಚು ಎಂದರೆ 43.41 ಕೋಟಿ ರು. ಅನುದಾನ ಉಳಿಕೆಯಾಗಿದೆ.
ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಲ್ಲಿ 5.95 ಕೋಟಿ ರು. ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ 5.65 ಕೋಟಿ ರು., ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದಲ್ಲಿ 6.16 ಕೋಟಿ ರು., ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಲ್ಲಿ 8.78 ಕೋಟಿ ರು., ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದಲ್ಲಿ 2.56 ಕೋಟಿ ರು., ಕರ್ನಾಟಕ ಒಕ್ಕಲಿಗ ಸಮುದಾಯದ ಅಭಿವೃದ್ಧಿ ನಿಗಮದಲ್ಲಿ ಅತಿ ಕಡಿಮೆ ಎಂದರೆ 3.01 ಲಕ್ಷ ರು. ಉಳಿಕೆಯಾಗಿದೆ.
ಹೊಸದಾಗಿ ಆರಂಭಗೊಂಡಿರುವ ಕರ್ನಾಟಕ ಕಾಡುಗೊಲ್ಲ ಅಭಿವೃದ್ಧಿ ನಿಗಮದಲ್ಲಿ 2024-25ನೇ ಸಾಲಿನಲ್ಲಿ ವಿವಿಧ ಆರು ಯೋಜನೆಗಳಿಗೆ ಸಂಬಂಧಿಸಿದಂತೆ ಮೊದಲ ಬಾರಿಗೆ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 1,425 ಅರ್ಜಿಗಳು ಬಂದಿದ್ದವು. ಇದರಲ್ಲಿ ಒಟ್ಟು 742 ಫಲಾನುಭವಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಡಿಬಿಟಿ ಕಾರ್ಯವು ನಡೆಯುತ್ತಿದೆ. ಉಳಿದ ಫಲಾನುಭವಿಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲು ಕ್ರಮವಹಿಸಲಾಗಿದೆ ಎಂದು ಸಚಿವರು ಉತ್ತರದಲ್ಲಿ ವಿವರಿಸಿದ್ದಾರೆ.
ಶಿರಾದಲ್ಲಿ ನಡೆದ ಉಪ ಚುನಾವಣೆ ಸಂದರ್ಭದಲ್ಲಿ ಅಂದರೆ 2020ರ ಸೆಪ್ಟೆಂಬರ್ 28 ರಂದು ಆಗಿನ ಬಿಜೆಪಿ ಸರ್ಕಾರ ಈ ನಿಗಮ ರಚಿಸಿತ್ತು. ಆದರೆ ಹೆಸರಿನ ವಿವಾದದಿಂದಾಗಿ ಈ ನಿಗಮ ಕಾರ್ಯಾರಂಭಿಸಿರಲಿಲ್ಲ. 2024-25ನೇ ಸಾಲಿನಲ್ಲಿಯೇ ಮೊದಲ ಬಾರಿಗೆ ಈ ನಿಗದಡಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆರು ಯೋಜನೆಗಳಿಗೆ ಒಟ್ಟು 45 ಕೋಟಿ ರು. ಅನುದಾನ ಒದಗಿಸಲಾಗಿತ್ತು.
ಬಳಕೆಯಾಗದ ʻಗಂಗಾ ಕಲ್ಯಾಣʼದ ಅನುದಾನ
ಬಹುತೇಕವಾಗಿ ಎಲ್ಲ ನಿಗಮಗಳಲ್ಲಿಯೂ ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿಲ್ಲಿ ನಿಗದಿಪಡಿಸಿದ ಅನುದಾನದಲ್ಲಿ ಹೆಚ್ಚು ಹಣ ಉಳಿದಿದೆ. ʻಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮʼದಲ್ಲಿಯಂತೂ ಕೊಟ್ಟ ಅನುದಾನದಲ್ಲಿ ಒಂದು ರು. ಕೂಡ ಖರ್ಚಾಗಿಲ್ಲ. 2024-25ನೇ ಸಾಲಿನಲ್ಲಿ ಈ ಯೋಜನೆಗೆ 5.37 ಕೋಟಿ ರು. ನೀಡಲಾಗಿತ್ತು. ಅಷ್ಟೂ ಅನುದಾನ ಉಳಿಕೆಯಾಗಿದೆ ಎಂದು ಸಚಿವರು ವಿಧಾನ ಪರಿಷತ್ತಿಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.
ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಹಿಂದುಳಿದ ವರ್ಗಕ್ಕೆ ಸೇರಿದ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಕೊಳವೆಬಾವಿಯನ್ನು ಕೊರೆದು, ಪಂಪ್ ಮೋಟಾರ್ ಹಾಗೂ ವಿದ್ಯುದ್ಧೀಕರಣ ಮಾಡಿ ನೀರನ್ನು ಒದಗಿಸಲಾಗುತ್ತದೆ. ಈ ಯೋಜನೆಯು ಸಂಪೂರ್ಣ ಸಹಾಯಧನ ಯೋಜನೆಯಾಗಿದೆ.
ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಯೋಜನೆಯನ್ನು ʻಜೀಜಾವು ಜಲ ಭಾಗ್ಯ ಯೋಜನೆʼ ಎಂಬ ಹೆಸರಿನಲ್ಲಿ ಜಾರಿಗೆ ತರಲಾಗಿತ್ತು. ಇದಕ್ಕಾಗಿ ಅತ್ಯಂತ ಹೆಚ್ಚು ಅಂದರೆ 28.62 ಕೋಟಿ ರು. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ ಖರ್ಚಾಗಿದ್ದು ಮಾತ್ರ 11.25 ಲಕ್ಷ ರು. ಹೀಗಾಗಿ 28.50 ಕೋಟಿ ರು. ಅನುದಾನ ಹಾಗೆಯೇ ಉಳಿಕೆಯಾಗಿದೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.
ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಯೋಜನೆಗೆ 5.15 ಕೋಟಿ ರು. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 2.59 ಕೋಟಿ ಮಾತ್ರ ಖರ್ಚಾಗಿದೆ. ಹೀಗಾಗಿ 2.55 ಕೋಟಿ ರು. ಅನುದಾನ ಉಳಿಕೆಯಾಗಿದೆ. ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಯೋಜನೆಗೆ 2 ಕೋಟಿ ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 45 ಲಕ್ಷ ಮಾತ್ರ ಖರ್ಚಾಗಿದ್ದು, 1.55 ಕೋಟಿ ರು. ಅನುದಾನ ಉಳಿಕೆಯಾಗಿದೆ ಎಂದು ಸಚಿವರು ನೀಡಿದ ಉತ್ತರದಿಂದ ಗೊತ್ತಾಗಿದೆ.
ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದಲ್ಲಿ ಈ ಯೋಜನೆಗೆ 7.54 ಕೋಟಿ ರು. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 5.18 ಕೋಟಿ ರು. ಖರ್ಚಾಗಿದೆ. 2.36 ಕೋಟಿ ರು. ಅನುದಾನ ಉಳಿಕೆಯಾಗಿದೆ. ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದಲ್ಲಿ ಈ ಯೋಜನೆಯನ್ನು 2024-25ನೇ ಸಾಲಿನಲ್ಲಿ ಜಾರಿಗೇ ತಂದಿರಲಿಲ್ಲ. ಹೀಗಾಗಿ ಅನುದಾನವನ್ನು ಕೂಡ ನಿಗದಿಪಡಿಸಿರಲಾಗಿರಲಿಲ್ಲ ಎಂಬುದು ಸಚಿವರು ನೀಡಿದ ಉತ್ತರದಿಂದ ತಿಳಿದು ಬಂದಿದೆ.
ಕರ್ನಾಟಕ ಒಕ್ಕಲಿಗ ಸಮುದಾಯದ ಅಭಿವೃದ್ಧಿ ನಿಗಮ ಮಾತ್ರ ಈ ಯೋಜನೆಯಡಿ ನಿಗದಿಯಾಗಿದ್ದ ಅನುದಾನದಲ್ಲಿ ಹೆಚ್ಚಿನ ಪಾಲು ಬಳಸಿಕೊಂಡಿದೆ. ಒಟ್ಟು 20.52 ಲಕ್ಷ ರು. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 20.26 ಲಕ್ಷ ರು. ಅನುದಾನ ಬಳಕೆಯಾಗಿದೆ. ಕೇವಲ 26 ಸಾವಿರ ರು. ಮಾತ್ರ ಉಳಿಕೆಯಾಗಿದೆ. ಕರ್ನಾಟಕ ಕಾಡುಗೊಲ್ಲ ಅಭಿವೃದ್ಧಿ ನಿಗಮದಲ್ಲಿ ಈ ಯೋಜನೆಗೆ 13 ಕೋಟಿ ರು. ನಿಗದಿಪಡಿಸಲಾಗಿತ್ತು. ಆದರೆ ಇನ್ನೂ ಹಂಚಿಕೆ ನಡೆಯುತ್ತಿರುವುದರಿಂದ ಉಳಿದ ಹಣದ ಮಾಹಿತಿ ಲಭ್ಯವಾಗಿಲ್ಲ ಎಂದು ಸಚಿವರು ವಿಧಾನ ಪರಿಷತ್ತಿಗೆ ನೀಡಿದ ಉತ್ತರದಲ್ಲಿ ಹೇಳಿದ್ದಾರೆ.
ಯಾವ ಯೋಜನೆಗಳಲ್ಲಿ ಉಳಿಕೆ?
ಕರ್ನಾಟಕ ವಿಶ್ವ ಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಲ್ಲಿ ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು ಯೋಜನೆಗೆ 1.21 ಕೋಟಿ ಅನುದಾನ ನೀಡಲಾಗಿತ್ತು. ಇದರಲ್ಲಿ 36 ಲಕ್ಷ ಉಳಿಕೆಯಾಗಿದೆ. ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ನಿಗದಿಪಡಿಸಿದ್ದ 2.95 ಕೋಟಿ ರು. ಅನುದಾನದಲ್ಲಿ 82 ಲಕ್ಷ ಉಳಿಕೆಯಾಗಿದೆ. ಬ್ಯಾಂಕ್‌ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಹಾಯಧನ ಯೋಜನೆಗೆ ನಿಗದಿಪಡಿಸಿದ್ದ 29 ಲಕ್ಷ ರು.ಗಳೂ ಉಳಿಕೆಯಾಗಿದೆ.
ಅರಿವು ಶೈಕ್ಷಣಿಕ ನೇರಸಾಲ ಯೋಜನೆಗೆ (ನವೀನ) ನಿಗದಿಪಡಿಸಿದ್ದ 95.82 ಲಕ್ಷ ಅನುದಾನದಲ್ಲಿ 22.49 ಲಕ್ಷ ಉಳಿಕೆಯಾಗಿದೆ. ಸ್ವಾವಲಂಬಿ ಸಾರಥಿ ಯೋಜನೆಗೆ ನಿಗದಿಪಡಿಸಲಾಗಿದ್ದ 2.13 ಕೋಟಿ ರು.ಗಳಲ್ಲಿ 1.71. ಕೋಟಿ ರು. ಉಳಿಕೆಯಾಗಿದೆ. ಈ ನಿಗಮದ ಏಳು ಯೋಜನೆಗಳಿಗೆ ಒಟ್ಟು 13.68 ಕೋಟಿ ಅನುದಾನ ನೀಡಲಾಗಿತ್ತು.
ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ನಿಗದಿಪಡಿಸಿದ್ದ 1.68 ಕೋಟಿ ರು. ಅನುದಾನದಲ್ಲಿ 28 ಲಕ್ಷ ಉಳಿಕೆಯಾಗಿದೆ. ಬ್ಯಾಂಕ್‌ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಹಾಯಧನ ಯೋಜನೆಗೆ ನಿಗದಿಪಡಿಸಿದ್ದ 42 ಲಕ್ಷವೂ ಉಳಿಕೆಯಾಗಿದೆ. ಅರಿವು ಶೈಕ್ಷಣಿಕ ನೇರಸಾಲ ಯೋಜನೆಗೆ (ನವೀನ) ನಿಗದಿಪಡಿಸಿದ್ದ 1.32 ಕೋಟಿ ರು. ಅನುದಾನದಲ್ಲಿ 88 ಲಕ್ಷ ರು. ಉಳಿಕೆಯಾಗಿದೆ. ಅದೇ ರೀತಿ, ಅರಿವು ಶೈಕ್ಷಣಿಕ ನೇರಸಾಲ (ನವೀಕರಣ) ಯೋಜನೆಗೆ ನಿಗದಿಪಡಿಸಿದ್ದ 1.98 ಕೋಟಿ ರು. ಅನುದಾನದಲ್ಲಿ 1.29 ಕೋಟಿ ರು. ಉಳಿಕೆಯಾಗಿದೆ.
ಸ್ವಾವಲಂಬಿ ಸಾರಥಿ ಯೋಜನೆಗೆ ನಿಗದಿಪಡಿಸಲಾಗಿದ್ದ 1.26 ಕೋಟಿ ರು.ಗಳಲ್ಲಿ 93 ಲಕ್ಷ ರು. ಉಳಿಕೆಯಾಗಿದೆ. ವಿದೇಶಿ ವ್ಯಾಸಂಗ ಸಾಲ ಯೋಜನೆಗೆ ನಿಗದಿಪಡಿಸಿದ್ದ 40 ಲಕ್ಷ ರು.ಗಳಲ್ಲಿ 30 ಲಕ್ಷ ರು. ಉಳಿಕೆಯಾಗಿದೆ. ಈ ನಿಗಮದ ಏಳು ಯೋಜನೆಗಳಿಗೆ ಒಟ್ಟು 9.06 ಕೋಟಿ ರು. ಅನುದಾನ ನೀಡಲಾಗಿತ್ತು ಎಂದು ಸಚಿವರು ನೀಡಿರುವ ಉತ್ತರದಿಂದ ಗೊತ್ತಾಗಿದೆ.
ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದಲ್ಲಿ ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ನಿಗದಿಪಡಿಸಿದ್ದ 4.98 ಕೋಟಿ ರು. ಅನುದಾನದಲ್ಲಿ 1.10 ಕೋಟಿ ರು. ಉಳಿಕೆಯಾಗಿದೆ. ಬ್ಯಾಂಕ್‌ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಹಾಯಧನ ಯೋಜನೆಗೆ ನಿಗದಿಪಡಿಸಿದ್ದ 71 ಲಕ್ಷ ರು ಅನುದಾನದಲ್ಲಿ 11 ಲಕ್ಷ ರು. ಅನುದಾನ ಉಳಿಕೆಯಾಗಿದೆ. ಅರಿವು ಶೈಕ್ಷಣಿಕ ನೇರಸಾಲ ಯೋಜನೆಗೆ (ನವೀನ) ನಿಗದಿಪಡಿಸಿದ್ದ1.42 ಕೋಟಿ ರು. ಅನುದಾನದಲ್ಲಿ 82 ಲಕ್ಷ ರು. ಉಳಿಕೆಯಾಗಿದೆ.
ಅದೇ ರೀತಿ, ಅರಿವು ಶೈಕ್ಷಣಿಕ ನೇರಸಾಲ (ನವೀಕರಣ) ಯೋಜನೆಗೆ ನಿಗದಿಪಡಿಸಿದ್ದ 50 ಲಕ್ಷ ರು. ಅನುದಾನದಲ್ಲಿ 7.09 ಲಕ್ಷ ರು. ಉಳಿಕೆಯಾಗಿದೆ. ಸ್ವಾವಲಂಬಿ ಸಾರಥಿ ಯೋಜನೆಗೆ ನಿಗದಿಪಡಿಸಲಾಗಿದ್ದ 5.34 ಕೋಟಿ ರು.ಗಳಲ್ಲಿ 5.34 ಕೋಟಿ ರು.ಗಳೂ ಸಂಪೂರ್ಣವಾಗಿ ಬಳಕೆಯಾಗಿದೆ. ವಿದೇಶಿ ವ್ಯಾಸಂಗ ಸಾಲ ಯೋಜನೆಗೆ ನಿಗದಿಪಡಿಸಿದ್ದ 170 ಲಕ್ಷ ರು.ಗಳಲ್ಲಿ 170 ಲಕ್ಷ ರು.ಗಳೂ ಉಳಿಕೆಯಾಗಿದೆ. ಈ ನಿಗಮದ ಏಳು ಯೋಜನೆಗಳಿಗೆ ಒಟ್ಟು 22.19 ಕೋಟಿ ರು. ಅನುದಾನ ನೀಡಲಾಗಿತ್ತು ಎಂದು ಸಚಿವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.
ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಲ್ಲಿ ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ನಿಗದಿಪಡಿಸಿದ್ದ 4.98 ಕೋಟಿ ರು. ಅನುದಾನದಲ್ಲಿ 82 ಲಕ್ಷ ರು. ಉಳಿಕೆಯಾಗಿದೆ. ಬ್ಯಾಂಕ್‌ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಹಾಯಧನ ಯೋಜನೆಗೆ ನಿಗದಿಪಡಿಸಿದ್ದ 71 ಲಕ್ಷ ರು. ಅನುದಾನದಲ್ಲಿ 9 ಲಕ್ಷ ರು. ಅನುದಾನ ಉಳಿಕೆಯಾಗಿದೆ. ಅರಿವು ಶೈಕ್ಷಣಿಕ ನೇರಸಾಲ ಯೋಜನೆಗೆ (ನವೀನ) ನಿಗದಿಪಡಿಸಿದ್ದ1.42 ಕೋಟಿ ರು. ಅನುದಾನದಲ್ಲಿ 97.70 ಲಕ್ಷ ರು. ಉಳಿಕೆಯಾಗಿದೆ.
ಅದೇ ರೀತಿ, ಅರಿವು ಶೈಕ್ಷಣಿಕ ನೇರಸಾಲ (ನವೀಕರಣ) ಯೋಜನೆಗೆ ನಿಗದಿಪಡಿಸಿದ್ದ 48 ಲಕ್ಷ ರು. ಅನುದಾನದಲ್ಲಿ 7.24 ಲಕ್ಷ ರು. ಉಳಿಕೆಯಾಗಿದೆ. ಸ್ವಾವಲಂಬಿ ಸಾರಥಿ ಯೋಜನೆಗೆ ನಿಗದಿಪಡಿಸಲಾಗಿದ್ದ 5.34 ಕೋಟಿ ರು.ಗಳಲ್ಲಿ 85 ಲಕ್ಷ ರು. ಉಳಿಕೆಯಾಗಿದೆ. ವಿದೇಶಿ ವ್ಯಾಸಂಗ ಸಾಲ ಯೋಜನೆಗೆ ನಿಗದಿಪಡಿಸಿದ್ದ 60 ಲಕ್ಷ ರು.ಗಳಲ್ಲಿ 60 ಲಕ್ಷ ರು.ಗಳೂ ಉಳಿಕೆಯಾಗಿದೆ. ಈ ನಿಗಮದ ಏಳು ಯೋಜನೆಗಳಿಗೆ ಒಟ್ಟು 18.90 ಕೋಟಿ ರು. ಅನುದಾನ ನೀಡಲಾಗಿತ್ತು ಎಂದು ಸಚಿವರು ಉತ್ತರದಲ್ಲಿ ವಿವರಿಸಿದ್ದಾರೆ.
ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದಲ್ಲಿ ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ನಿಗದಿಪಡಿಸಿದ್ದ 4.98 ಕೋಟಿ ರು. ಅನುದಾನದಲ್ಲಿ 1.24 ಕೋಟಿ ರು. ಉಳಿಕೆಯಾಗಿದೆ. ಬ್ಯಾಂಕ್‌ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಹಾಯಧನ ಯೋಜನೆಗೆ ನಿಗದಿಪಡಿಸಿದ್ದ 36 ಲಕ್ಷ ರು. ಅನುದಾನದಲ್ಲಿ8 ಲಕ್ಷ ರು. ಅನುದಾನ ಉಳಿಕೆಯಾಗಿದೆ. ಅರಿವು ಶೈಕ್ಷಣಿಕ ನೇರಸಾಲ ಯೋಜನೆಗೆ (ನವೀನ) ನಿಗದಿಪಡಿಸಿದ್ದ71 ಲಕ್ಷ ರು. ಅನುದಾನದಲ್ಲಿ 35 ಲಕ್ಷ ರು. ಉಳಿಕೆಯಾಗಿದೆ.
ಅದೇ ರೀತಿ, ಅರಿವು ಶೈಕ್ಷಣಿಕ ನೇರಸಾಲ (ನವೀಕರಣ) ಯೋಜನೆಗೆ ನಿಗದಿಪಡಿಸಿದ್ದ 40 ಲಕ್ಷ ರು. ಅನುದಾನದಲ್ಲಿ 8.25 ಲಕ್ಷ ರು. ಉಳಿಕೆಯಾಗಿದೆ. ಸ್ವಾವಲಂಬಿ ಸಾರಥಿ ಯೋಜನೆಗೆ ನಿಗದಿಪಡಿಸಲಾಗಿದ್ದ 1.08 ಕೋಟಿ ರು.ಗಳಲ್ಲಿ 21 ಲಕ್ಷ ರು. ಉಳಿಕೆಯಾಗಿದೆ. ವಿದೇಶಿ ವ್ಯಾಸಂಗ ಸಾಲ ಯೋಜನೆಗೆ ನಿಗದಿಪಡಿಸಿದ್ದ 60 ಲಕ್ಷ ರು.ಗಳಲ್ಲಿ 60 ಲಕ್ಷ ರು.ಗಳೂ ಉಳಿಕೆಯಾಗಿದೆ. ಈ ನಿಗಮದ 6 ಯೋಜನೆಗಳಿಗೆ ಒಟ್ಟು 8.13 ಕೋಟಿ ರು. ಅನುದಾನ ನೀಡಲಾಗಿತ್ತು ಎಂದು ಸಚಿವರ ಉತ್ತರದಿಂದ ಗೊತ್ತಾಗಿದೆ.
ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಲ್ಲಿ ಶ್ರೀ ಶಹಜೀರಾಜೇ ಸಮೃದ್ಧಿ ಯೋಜನೆಗೆ 5 ಕೋಟಿ ರು. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 3.60 ಕೋಟಿ ರು. ಖರ್ಚು ಮಾಡಿದ್ದು, 1.40 ಕೋಟಿ ರು. ಉಳಿಕೆಯಾಗಿದೆ. ಬ್ಯಾಂಕ್‌ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಹಾಯಧನ ಯೋಜನೆಗೆ ನಿಗದಿಪಡಿಸಿದ್ದ 48 ಲಕ್ಷ ರು. ಅನುದಾನದಲ್ಲಿ47 ಲಕ್ಷ ರು. ಅನುದಾನ ಉಳಿಕೆಯಾಗಿದೆ. ಅರಿವು ಶೈಕ್ಷಣಿಕ ನೇರಸಾಲ ಯೋಜನೆಗೆ (ನವೀನ) ನಿಗದಿಪಡಿಸಿದ್ದ2 ಕೋಟಿ ರು. ಅನುದಾನದಲ್ಲಿ 48 ಲಕ್ಷ ರು. ಉಳಿಕೆಯಾಗಿದೆ.
ಅದೇ ರೀತಿ, ಅರಿವು ಶೈಕ್ಷಣಿಕ ನೇರಸಾಲ (ನವೀಕರಣ) ಯೋಜನೆಗೆ ನಿಗದಿಪಡಿಸಿದ್ದ1.70 ಕೋಟಿ ರು. ಅನುದಾನದಲ್ಲಿ ಸಂಪೂರ್ಣ ಹಣ ಬಳಕೆಯಾಗಿದೆ. ಸ್ವಾವಲಂಬಿ ಸಾರಥಿ ಯೋಜನೆಗೆ ನಿಗದಿಪಡಿಸಲಾಗಿದ್ದ 9 ಕೋಟಿ ರು.ಗಳಲ್ಲಿ 8.01 ಕೋಟಿ ರು. ಉಳಿಕೆಯಾಗಿದೆ.
ರಾಜಶ್ರೀ ಶಾಹುಮಹಾರಾಜ ವಿದೇಶಿ ಸಾಲ ಯೋಜನೆಗೆ (ನವೀನ) 80 ಲಕ್ಷ ರು. ಅನುದಾನ ನಿಗದಿಪಡಿಸಲಾಗಿದ್ದು, 65 ಲಕ್ಷ ರು.ಉಳಿಕೆಯಾಗಿದೆ. ರಾಜಶ್ರೀ ಶಾಹುಮಹಾರಾಜ ವಿದೇಶಿ ಸಾಲ ಯೋಜನೆಗೆ (ನವೀಕರಣ) 20 ಲಕ್ಷ ರು. ನಿಗದಿಪಡಿಸಲಾಗಿದ್ದು, ಈ ಹಣ ಸಂಪೂರ್ಣವಾಗಿ ಬಳಕೆಯಾಗಿದೆ. ಮರಾಠ ಮಿಲ್ಟ್ರೀ ಹೋಟೆಲ್ ಯೋಜನೆಗೆ 4 ಕೋಟಿ ರು. ನಿಗದಿಪಡಿಸಲಾಗಿದ್ದು, 3.90 ಕೋಟಿ ರು. ಉಳಿಕೆಯಾಗಿದೆ. ಅಮೃತ ಮುನ್ನಡೆ ಯೋಜನೆಗೆ 14.35 ಲಕ್ಷ ರು. ನಿಗದಿಪಡಿಸಲಾಗಿದ್ದು, ಈ ಅನುದಾನವೂ ಸಂಪೂರ್ಣವಾಗಿ ಬಳಕೆಯಾಗಿದೆ. ಈ ನಿಗಮದಡಿ ಒಟ್ಟು 10 ಯೋಜನೆಗಳು ಜಾರಿಗೆ ಬಂದಿದ್ದು, 51.94 ಕೋಟಿ ರು. ಅನುದಾನ ಒದಗಿಸಲಾಗಿತ್ತು ಎಂದು ಸಚಿವರು ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ.
ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಲ್ಲಿ ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ನಿಗದಿಪಡಿಸಿದ್ದ 10 ಲಕ್ಷ ರು. ಅನುದಾನದಲ್ಲಿ ಸಂಪೂರ್ಣ ಬಳಕೆಯಾಗಿದೆ. ಬ್ಯಾಂಕ್‌ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಹಾಯಧನ ಯೋಜನೆಗೆ ನಿಗದಿಪಡಿಸಿದ್ದ 1 ಲಕ್ಷ ರು. ಅನುದಾನದಲ್ಲಿ 18 ಸಾವಿರ ರು. ಅನುದಾನ ಉಳಿಕೆಯಾಗಿದೆ. ಅರಿವು ಶೈಕ್ಷಣಿಕ ನೇರಸಾಲ ಯೋಜನೆಗೆ (ನವೀನ) ನಿಗದಿಪಡಿಸಿದ್ದ 3 ಲಕ್ಷ ರು. ಅನುದಾನದಲ್ಲಿ 27 ಸಾವಿರ ರು. ಉಳಿಕೆಯಾಗಿದೆ.
ಅದೇ ರೀತಿ, ಅರಿವು ಶೈಕ್ಷಣಿಕ ನೇರಸಾಲ (ನವೀಕರಣ) ಯೋಜನೆಗೆ ನಿಗದಿಪಡಿಸಿದ್ದ 6.58 ಲಕ್ಷ ರು. ಅನುದಾನದಲ್ಲಿ 1.48 ಲಕ್ಷ ರು. ಉಳಿಕೆಯಾಗಿದೆ. ಸ್ವಾವಲಂಬಿ ಸಾರಥಿ ಯೋಜನೆಗೆ ನಿಗದಿಪಡಿಸಲಾಗಿದ್ದ 7.44 ಲಕ್ಷ ರು.ಗಳಲ್ಲಿ 69 ಸಾವಿರ ರು. ಉಳಿಕೆಯಾಗಿದೆ. ವಿದೇಶಿ ವ್ಯಾಸಂಗ ಸಾಲ ಯೋಜನೆಗೆ ನಿಗದಿಪಡಿಸಿದ್ದ 4.10 ಲಕ್ಷ ರು.ಗಳಲ್ಲಿ 1.60 ಲಕ್ಷ ರು.ಗಳೂ ಬಳಕೆಯಾಗಿದೆ. ಕೌಶಾಲಾಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ನಿಗದಿಪಡಿಸಿದ್ದ 1.48 ಲಕ್ಷ ರು.ಗಳಲ್ಲಿ 13 ಸಾವಿರ ರು. ಉಳಿಕೆಯಾಗಿದೆ. ಈ ನಿಗಮದ 9 ಯೋಜನೆಗಳಿಗೆ ಒಟ್ಟು 54.12 ಲಕ್ಷ ರು. ಅನುದಾನ ನೀಡಲಾಗಿತ್ತು ಎಂದು ಸಚಿವರು ನೀಡಿರುವ ಉತ್ತರದಿಂದ ಗೊತ್ತಾಗಿದೆ.
ಅಧ್ಯಕ್ಷರಿದ್ದರೂ ಖರ್ಚಾಗದ ಅನುದಾನ
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಎನ್.ಜಿ. ಕೀರ್ತಿ ಗಣೇಶ್ ಅವರನ್ನು ನೇಮಕ ಮಾಡಲಾಗಿದೆ. ಈ ನಿಗಮದಲ್ಲಿ ಒಟ್ಟು 9 ಯೋಜನೆಗಳನ್ನು ಜಾರಿಗೆ ತರಲಾಗಿದ್ದು, 88.34 ಕೋಟಿ ರು. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 14.26 ಕೋಟಿ ರು. ಅನುದಾನ ಉಳಿಕೆಯಾಗಿದೆ.
ಹೊಲಿಗೆ ಯಂತ್ರ ವಿತರಣೆ ಯೋಜನೆಗೆ ನಿಗದಿಪಡಿಸಲಾಗಿದ್ದ 8 ಕೋಟಿ ರು. ಅನುದಾನದಲ್ಲಿ ಅಷ್ಟೂ ಅನುದಾನ ಉಳಿಕೆಯಾಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ.
ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರನ್ನು 2024ರ ನವೆಂಬರ್‌ನಲ್ಲಿ ನೇಮಕ ಮಾಡಲಾಗಿದೆ. ಈ ನಿಗಮಕ್ಕೆ 2024-25ನೇ ಸಾಲಿನಲ್ಲಿ ಏಳು ಯೋಜನೆಗಳಿಗಾಗಿ 12.04 ಕೋಟಿ ರು. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 2 ಕೋಟಿ ರು. ಅನುದಾನ ಬಳಕೆಯಾಗದೆ ಉಳಿಕೆಯಾಗಿದೆ.
ಸ್ವಾವಲಂಬಿ ಸಾರಥಿ ಯೋಜನೆಗೆ ಮತ್ತು ಗಂಗಾ ಕಲ್ಯಾಣ ನೀರಾವರಿ ಯೋಜನೆಗೆ ನಿಗದಿಪಡಿಸಿದ್ದ ಅನುದಾನ ಮಾತ್ರ ಸಂಪೂರ್ಣವಾಗಿ ಬಳಕೆಯಾಗಿದೆ ಎಂದು ಸಚಿವರು ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ.
ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ವಿಜಯಾನಂದ ಎಸ್ ಕಾಶಪ್ಪನವರ್ ಅವರನ್ನು 2024ರ ಫೆಬ್ರವರಿಯಲ್ಲಿಯೇ ನೇಮಕ ಮಾಡಲಾಗಿದೆ. ಈ ನಿಗಮದ ಮೂಲಕ 10 ಯೋಜನೆಗಳು ಜಾರಿಗೆ ಬಂದಿದ್ದು, ಒಟ್ಟು 94.85 ಕೋಟಿ ರು. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ21.78 ಕೋಟಿ ರು. ಅನುದಾನ ಬಳಕೆಯಾಗದೆ ಉಳಿದಿದೆ.
ಸ್ವಾವಲಂಬಿ ಸಾರಥಿ ಯೋಜನೆಗೆ 29.58 ಕೋಟಿ ರು. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ21.12 ಕೋಟಿ ಖರ್ಚಾಗಿದೆ. 8.46 ಕೋಟಿ ರು. ಅನುದಾನ ಉಳಿಕೆಯಾಗಿದೆ. ಜೀವಜಲ ಯೋಜನೆಗೆ 33.01 ಕೋಟಿ ರು. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ5.93 ಕೋಟಿ ರು. ಉಳಿಕೆಯಾಗಿದೆ.
ವೀರಶೈವ-ಲಿಂಗಾಯತ ಸಮುದಾಯದ ವಿದ್ಯಾರ್ಥಿಗಳಿಗೆ ವೃತ್ತಿಪರ, ತಾಂತ್ರಿಕ, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್ ಕೋರ್ಸ್‌ಗಳಿಗೆ ಶಿಕ್ಷಣ ಸಾಲ ಸೌಲಭ್ಯವನ್ನು ಒದಗಿಸುವ ಯೋಜನೆಯಾದ ʻಬಸವ ಬೆಳಗುʼ ಯೋಜನೆಗೆ 9.92 ಕೋಟಿ ರು. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 3.93 ಕೋಟಿ ರು. ಅನುದಾನ ಉಳಿಕೆಯಾಗಿದೆ. ಇದೇ ನವೀಕರಣ ಯೋಜನೆಗೆ 10 ಕೋಟಿ ರು. ಅನುದಾನ ಒದಗಿಸಲಾಗಿತ್ತು. ಅದರಲ್ಲಿಯೂ 94 ಲಕ್ಷ ರು. ಅನುದಾನ ಉಳಿಕೆಯಾಗಿದೆ ಎಂದು ಸಚಿವರು ವಿಧಾನ ಪರಿಷತ್ತಿಗೆ ನೀಡಿದ ಉತ್ತರದಲ್ಲಿ ವಿವರಿಸಿದ್ದಾರೆ.
ಹಿಂದುಳಿದ ವರ್ಗಗಳ 8 ನಿಗಮಗಳಿಗೆ ಅಧ್ಯಕ್ಷರೇ ಇಲ್ಲ; ಆದರೂ ಅಧ್ಯಕ್ಷರ ಸಿಬ್ಬಂದಿ ವೇತನಕ್ಕೆಂದು 40.74 ಲಕ್ಷ ಖರ್ಚು
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ 8 ನಿಗಮಗಳಿಗೆ ಅಧ್ಯಕ್ಷರೇ ನೇಮಕಗೊಂಡಿಲ್ಲದಿದ್ದರೂ ಕಳೆದ ಆರ್ಥಿಕ ಸಾಲಿನಲ್ಲಿ ಅಧ್ಯಕ್ಷರ ಸಿಬ್ಬಂದಿ ವೇತನವೆಂದು 40.74 ಲಕ್ಷ ರು. ಖರ್ಚು ಮಾಡಲಾಗಿತ್ತು. ಈ ಕುರಿತು ʻದಿ ಫೈಲ್ʼ ವಿವರವಾದ ವರದಿ ಪ್ರಕಟಿಸಿತ್ತು.