ಅನಧಿಕೃತವಾಗಿ ವಿದೇಶಿ ಮದ್ಯ ಆಮದು; ಸರ್ಕಾರಕ್ಕೆ 11.50 ಕೋಟಿ ಆದಾಯ ನಷ್ಟ ಪತ್ತೆ ಹಚ್ಚಿದ ಸಿಎಜಿ

ಬೆಂಗಳೂರು;  ಪರವಾನಿಗೆ ಇಲ್ಲದೆಯೇ ಅನಧಿಕೃತವಾಗಿ ವಿದೇಶಿ ಮದ್ಯವನ್ನು ಆಮದು ಮಾಡಿಕೊಂಡಿದ್ದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ 11.50 ಕೋಟಿಯಷ್ಟು ಆದಾಯ ನಷ್ಟವಾಗಿರುವ ಪ್ರಕರಣವನ್ನು  ಪ್ರಧಾನ ಮಹಾಲೇಖಪಾಲರು ಪತ್ತೆ ಹಚ್ಚಿದ್ದಾರೆ.

 

ವಿದೇಶಿ ಮದ್ಯವನ್ನು ಅಮದು ಮಾಡಿಕೊಳ್ಳಲು ಯಾವುದೇ ಅನುಮತಿಯಿರದಿದ್ದರೂ ಸಹ 2003-04ರಿಂದ 2022-23ರವರೆಗೆ ರಾಜ್ಯದಲ್ಲಿ ವಿದೇಶಿ ಮದ್ಯವನ್ನು ಆಮದು ಮಾಡಿಕೊಳ್ಳಲಾಗಿತ್ತು. ಇದರಿಂದಾಗಿ ಸರ್ಕಾರಕ್ಕೆ 11.50 ಕೋಟಿಯಷ್ಟು ಆದಾಯ ನಷ್ಟವಾಗಿದೆ ಎಂದು ಸಿಎಜಿ ವರದಿಯು ಸರ್ಕಾರದ ಗಮನಕ್ಕೆ ತಂದಿದೆ.

 

2025ರ ಆಗಸ್ಟ್‌ ನಲ್ಲಿ ನಡೆದಿದ್ದ ಕರ್ನಾಟಕ ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆಯಾಗಿರುವ ಸಿಎಜಿ ವರದಿಯು ಸಿಎಲ್‌ 11 ಎ ಪರವಾನಗಿ ಇಲ್ಲದೆ ವಿದೇಶಿ ಮದ್ಯ ಆಮದು ಪರವಾನಿಗೆ ಶುಲ್ಕದ ನಷ್ಟದ ಕುರಿತು ವಿವರಿಸಿರುವುದು ತಿಳಿದು ಬಂದಿದೆ.

 

ಕರ್ನಾಟಕ ಅಬಕಾರಿ ಅಧಿನಿಯಮ 1965ರ ಪ್ರಕಾರ ವಿದೇಶಿ ಮದ್ಯವು ಭಾರತೀಯ ಮದ್ಯವನ್ನು ಹೊರತುಪಡಿಸಿ ಎಲ್ಲಾ ಮದ್ಯಗಳನ್ನು ಒಳಗೊಂಡಿದೆ. ಭಾರತದ ಹೊರಗೆ ತಯಾರಾಗುವ ಮದ್ಯವು ವಿದೇಶಿ ಮದ್ಯವೆಂದು ಈ ನಿಯಮದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

 

ಮದ್ಯ ಮತ್ತು ಮದ್ಯ ಸಾರ ವಿತರಣೆಗಾಗಿ ಕರ್ನಾಟಕ ರಾಜ್ಯ ಪಾನೀಯ ನಿಗಮ (ಕೆಎಸ್‌ಬಿಸಿಎಲ್‌) ಗೆ ಸರ್ಕಾರವು ಪರವಾನಗಿ ನೀಡುತ್ತಿದೆ. ಇದರ ಪ್ರಕಾರ ಕರ್ನಾಟಕ ರಾಜ್ಯ ಪಾನೀಯ ನಿಗಮವು  ಸಿಎಲ್‌ 11 ಪರವಾನಗಿಯು ವಿತರಕ ಪರವಾನಗಿಯಾಗಿದೆ.  ಅಂತಹ ಪರವಾನಗಿದಾರರು ಹೊರಗಿನ ರಾಜ್ಯದಿಂದ ವಿದೇಶಿ ಮದ್ಯವನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡುವುದಿಲ್ಲ.

 

 

ಆದರೆ ನಿಯಮ 3 (11)ರ ಷರತ್ತಿನ ಪ್ರಕಾರ ಅಬಕಾರಿ ಆಯುಕ್ತರು ಪರವಾನಗಿದದಾರರಿಗೆ ಭಾರತದ ಹೊರಗಿನಿಂದ ಆಮದು ಮಾಡಲಾದ ವಿದೇಶಿ ಮದ್ಯವನ್ನು ಮಾರಾಟ ಮಾಡಲು ಅನುಮತಿ ನೀಡಬಹುದು. ಸಿಎಲ್‌ 11 ಪರವಾನಗಿದಾರರಿಗೆ ಮಾತ್ರ ಭಾರತದ ಹೊರಗಿನಿಂದ ಆಮದು ಮಾಡಲಾದ ವಿದೇಶಿ  ಮದ್ಯವನ್ನು ಮಾರಾಟ ಮಾಡಲು ಅನುಮತಿ ಇದೆ. ಆದರೆ ವಿದೇಶಿ ಮದ್ಯವನ್ನು ಆಮದು ಮಾಡಿಕೊಳ್ಳಲು ಯಾವುದೇ ಅನುಮತಿ ನೀಡಿಲ್ಲ.

 

ಕರ್ನಾಟಕ ರಾಜ್ಯ ಪಾನೀಯ ನಿಗಮದ ಕಾರ್ಯವೈಖರಿ ಕುರಿತು ಸಿಎಜಿಯು ಲೆಕ್ಕ ಪರಿಶೋಧನೆ ನಡೆಸಿದೆ. ಕರ್ನಾಟಕ ರಾಜ್ಯದ ಹೊರಗಿನ ಇತರ ಅಧಿಕೃತ ಸಂಸ್ಥೆಗಳಿಂದ ವಿದೇಶಿ ಮದ್ಯವನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿರುವುದನ್ನು ಲೆಕ್ಕ ಪರಿಶೋಧನೆ ವೇಳೆ ಪತ್ತೆ ಹಚ್ಚಿದೆ.

 

ಅಬಕಾರಿ ಇಲಾಖೆಯು ಕರ್ನಾಟಕ ರಾಜ್ಯ ಪಾನೀಯ ನಿಗಮಕ್ಕೆ ಸಿಎಲ್‌ 11 ಎ ಅಡಿಯಲ್ಲಿ ಪರವಾನಗಿ ನೀಡಿಲ್ಲ. ಹಾಗೂ ವಾರ್ಷಿಕವಾಗಿ 50 ಲಕ್ಷ ರು ಶುಲ್ಕವನ್ನೂ ಕೇಳಲಿಲ್ಲ. ಇದರ ಪರಿಣಾಮ ಕರ್ನಾಟಕ ರಾಜ್ಯ ಪಾನೀಯ ನಿಗಮವು ವಿದೇಶಿ ಮದ್ಯವನ್ನು ಅನಧಿಕೃತವಾಗಿ ಆಮದು ಮಾಡಿಕೊಂಡಿತು. 2003-04ರಿಂದ 2022-23ರವರೆಗೆ ರಾಜ್ಯಕ್ಕೆ 11.50 ಕೋಟಿಯಷ್ಟು ಆದಾಯ ನಷ್ಟವಾಯಿತು ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಪರವಾನಗಿ ಅಗತ್ಯವಿಲ್ಲವೆಂದಿದ್ದ ನಿಗಮ

 

ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದ  ಸಿಎಜಿಯು ಪಾನೀಯ ನಿಗಮದಿಂದ ಸ್ಪಷ್ಟನೆ ಕೋರಿತ್ತು. ಇದಕ್ಕೆ ಉತ್ತರಿಸಿರುವ ನಿಗಮವು ‘ ಭಾರತದ ಹೊರಗಿನಿಂದ ನೇರವಾಗಿ ವಿದೇಶಿ ಮದ್ಯವನ್ನು ಆಮದು ಮಾಡಿಕೊಳ್ಳುತ್ತಿಲ್ಲ. ವಿತರಕರ ಪರವಾನಗಿಯ ಅನುದಾನ ಮತ್ತು ನವೀಕರಣಕ್ಕಾಗಿ ರಾಜ್ಯ ಸರ್ಕಾರವು ಸವಲತ್ತು ಶುಲ್ಕವನ್ನು ವಿಧಿಸುತ್ತಿದೆ. ಇದರ ಪ್ರಕಾಋ   ಅಧಿಕೃತ ಸಂಸ್ಥೆಗಳಿಂದ ಪಡೆದ ವಿದೇಶಿ ಮದ್ಯವನ್ನು 18 ಕೋಟಿ ಸವಲತ್ತು ಶುಲ್ಕವನ್ನು ಪಾವತಿಸಿ ವಿತರಿಸುತ್ತಿದೆ ಎಂದು ಉತ್ತರಿಸಿತು. ಹೀಗಾಗಿ ಸಿಎಲ್‌ 11 ಎ ಪರವಾನಿಗೆ ಪಡೆಯುವ ಅಗತ್ಯವಿಲ್ಲ ಎಂದು ಸಮಜಾಯಿಷಿ ನೀಡಿತ್ತು.

 

ಸಮಜಾಯಿಷಿ ಒಪ್ಪದ ಸಿಎಜಿ

 

ಕರ್ನಾಟಕ ರಾಜ್ಯ ಪಾನೀಯ ನಿಗಮವು ನೀಡಿದ್ದ ಉತ್ತರ, ಸಮಜಾಯಿಷಿಯನ್ನು ಸಿಎಜಿಯು ಒಪ್ಪಿರಲಿಲ್ಲ. ಏಕೆಂದರೇ ಕರ್ನಾಟಕ ರಾಜ್ಯ ಪಾನೀಯ ನಿಗಮವು ರಾಜ್ಯದ ಹೊರಗಿನ ಇತರ ಅಧಿಕೃತ ಏಜೆನ್ಸಿಗಳಿಂದ ವಿದೇಶಿ ಮದ್ಯವನ್ನು ಪಡೆಯುತ್ತಿದೆ. ಇದು ಕರ್ನಾಟಕಕ್ಕೆ ಮದ್ಯವನ್ನು ಆಮದು ಮಾಡಿಕೊಳ್ಳುವುದಕ್ಕೆ ಸಮನಾಗಿರುತ್ತದೆ. ಅಲ್ಲದೇ ಸಿಎಲ್‌ 11 ಪರವಾನಗಿಯು ಆಮದು ಮಾಡಿಕೊಳ್ಳಲು ಯಾವುದೇ ಅನುಮತಿ ನೀಡುವುದಿಲ್ಲ ಎಂದು ಸಿಎಜಿಯು ವರದಿಯಲ್ಲಿ ಹೇಳಿದೆ.

 

 

ಅದೇ ರೀತಿ ಸಿಎಲ್‌ 11 ಪರವಾನಗಿ ಶುಲ್ಕವನ್ನು ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಯಮಗಳು 1968ರ ನಿಯಮ 8ರ ಅಡಿಯಲ್ಲಿ ನಿರ್ದಿಷ್ಟಪಡಿಸಿಲ್ಲ. ಆದ್ದರಿಂದ ಸಿಎಲ್‌ 11 ಪರವಾನಗಿಯನ್ನು ಹೊಂದಲು ಸರ್ಕಾರವು ಸವಲತ್ತು ಶುಲ್ಕವನ್ನು ಸೂಚಿಸುತ್ತದೆ. ಮತ್ತು ಅದರಂತೆ ನಿಗಮವು ಪಾವತಿಸುತ್ತದೆ. ನಿಗಮವು ನೀಡಿದ್ದ ಉತ್ತರವನ್ನು ಅಬಕಾರಿ ಇಲಾಖೆಯು ಪರಿಗಣಿಸಿತ್ತು.

 

ಸಿಎಜಿ ವ್ಯಕ್ತಪಡಿಸಿದ್ದ ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರೊಂದಿಗೆ ಅಬಕಾರಿ ಆಯುಕ್ತರು ಮತ್ತು ಆರ್ಥಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಚರ್ಚಿಸಿದ್ದರು. ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಸಿಎಜಿಗೆ ಉತ್ತರವನ್ನು ನೀಡಿತ್ತು.

 

ಆದರೆ ಸಿಎಜಿಯು ಈ ಉತ್ತರವನ್ನು ಒಪ್ಪಿರಲಿಲ್ಲ ಎಂಬುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

 

ರಾಜ್ಯದಲ್ಲಿರುವ ಒಟ್ಟು ಮೈಕ್ರೋ ಬ್ರೂವೆರಿಗಳ ಪೈಕಿ 25 ಮೈಕ್ರೋ ಬ್ರೂವೆರಿಗಳಲ್ಲಿ ಗ್ರಾಹಕರಿಗೆ ತಾಜಾ ಬಿಯರ್ ಸಿಗುತ್ತಿಲ್ಲ. ಬದಲಿಗೆ  15 ದಿನಗಳಿಂದ 2 ತಿಂಗಳವರೆಗೆ ಹೆಚ್ಚು ಹಳೆಯದಾದ ಬಿಯರ್‍‌ಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ ಎಂದು ಪ್ರಧಾನ ಮಹಾಲೇಖಪಾಲರು ಪತ್ತೆ ಹಚ್ಚಿದ್ದರು.

 

2 ತಿಂಗಳ ಹಿಂದಿನ ಬಿಯರ್‍‌ ಮಾರಾಟ, ತಪಾಸಣೆಗೊಳಪಡದ ಉತ್ಪಾದನೆ, ವಹಿವಾಟು; ಖಜಾನೆಗೆ ಭಾರೀ ನಷ್ಟ

ವಿಸ್ಕಿ ಮತ್ತು ಬ್ರಾಂಡಿಯಲ್ಲಿ ನಿಗದಿತ ಅನುಪಾತದ ಪ್ರಕಾರ ಮಾಲ್ಟ್‌ ಮದ್ಯಸಾರವನ್ನು ಮಿಶ್ರಣ ಮಾಡುತ್ತಿಲ್ಲ ಎಂದು ಸಿಎಜಿಯು ಬೆಳಕಿಗೆ ತಂದಿದ್ದರ ಬೆನ್ನಲ್ಲೇ ಮೈಕ್ರೋ ಬ್ರೂವೆರಿಗಳಲ್ಲಿಯೂ ಸಹ 2 ತಿಂಗಳವರೆಗೆ ಹೆಚ್ಚು ಹಳೆಯದಾದ ಬಿಯರ್‍‌ಗಳನ್ನು ನೀಡಲಾಗುತ್ತಿದೆ ಎಂದು ಬಹಿರಂಗಪಡಿಸಿದ್ದರು.

 

2025ರ ಆಗಸ್ಟ್‌ನಲ್ಲಿ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳಿಗೆ ಮಂಡನೆಯಾಗಿರುವ ಸಿಎಜಿ ವರದಿಯು, ಕರ್ನಾಟಕ ಅಬಕಾರಿ ಇಲಾಖೆಯ ಕಾರ್ಯವೈಖರಿಯ ಮತ್ತೊಂದು ಮುಖವನ್ನು ತೆರೆದಿಟ್ಟಂತಾಗಿತ್ತು.

Your generous support will help us remain independent and work without fear.

Latest News

Related Posts