ಅಗತ್ಯ ಜಾಗ ಕೊಡುವಲ್ಲಿ ರಾಜ್ಯ ಸರ್ಕಾರ ವಿಫಲ; ಕೇಂದ್ರ ಸರ್ಕಾರದ ಬೀದರ್‌ ಸೋಲಾರ್‌ ಪಾರ್ಕ್‌ ಯೋಜನೆ ರದ್ದು

solar park in karnataka

ಬೆಂಗಳೂರು : ಸೋಲಾರ್‌ ಪಾರ್ಕ್‌ಗೆ ಅಗತ್ಯವಾಗಿರುವಷ್ಟು ಜಾಗವನ್ನು ಹೊಂದಿಸುವಲ್ಲಿ ರಾಜ್ಯ ಸರ್ಕಾರವು ವಿಫಲವಾದ ಕಾರಣಕ್ಕೆ ಬೀದರ್‌ನಲ್ಲಿ ನಿರ್ಮಿಸಲುದ್ದೇಶಿಸಿದ್ದ ಸೋಲಾರ್‌ ಪಾರ್ಕ್‌ ಯೋಜನೆಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ.

 

ಕೇಂದ್ರ ಸರ್ಕಾರ ರಾಜ್ಯಕ್ಕೆ ಕೇವಲ 2 ಸೋಲಾರ್‌ ಪಾರ್ಕ್‌ ಯೋಜನೆಗಳನ್ನು ಮಂಜೂರು ಮಾಡಿತ್ತು. ಅದರಲ್ಲಿ ತುಮಕೂರು ಜಿಲ್ಲೆಯ ಪಾವಗಡದಲ್ಲಿ  ಈಗಾಗಲೇ ಸೋಲಾರ್‌ ಪಾರ್ಕ್‌ ನಿರ್ಮಾಣಗೊಂಡಿದೆ. ಮತ್ತೊಂದು ಪಾರ್ಕ್‌ ಅನ್ನು ಬೀದರ್‌ನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು.  ಕಳೆದ ಏಳೆಂಟು ವರ್ಷಗಳಿಂದ ಅಗತ್ಯ ಜಾಗ ಹೊಂದಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಿತ್ತಾದರೂ, ಅಗತ್ಯವಿರುವಷ್ಟ ಜಾಗ ದೊರೆಯದೇ ಇರುವ ಕಾರಣಕ್ಕೆ ಈ ಯೋಜನೆಯನ್ನು ರದ್ದುಪಡಿಸಲಾಗಿದೆ ಎಂದು ಕೇಂದ್ರ ಹೇಳಿದೆ.

 

solar park in karnataka

 

ಈ ವಿಷಯವನ್ನು ಕೇಂದ್ರ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಹ್ಲಾದ ಜೋಶಿ ಆಗಸ್ಟ್‌ನಲ್ಲಿ ನಡೆದ ಸಂಸತ್‌ ಅಧಿವೇಶನದ ಸಂದರ್ಭದಲ್ಲಿ ರಾಜ್ಯಸಭೆಗೆ ಖಚಿತ ಪಡಿಸಿದ್ದಾರೆ. ರಾಜ್ಯಸಭಾ ಸದಸ್ಯ ನಾರಾಯಣ ಕೊರಗಪ್ಪ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ʻʻಸೋಲಾರ್‌ ಪಾರ್ಕ್‌ ಅಭಿವೃದ್ಧಿ ಮತ್ತು  ಅಲ್ಟ್ರಾ ಮೆಗಾ ಸೋಲಾರ ಪವರ್‌ ಪ್ರಾಜೆಕ್ಟ್ಸ್‌ ʼʼ (Development of Solar Parks and Ultra Mega Solar Power Projects) ಯೋಜನೆಯಡಿ ಬೀದರ್‌ಗೆ ಮಂಜೂರು ಮಾಡಲಾಗಿದ್ದ ಸೋಲಾರ್‌ ಪಾರ್ಕ್‌ ಯೋಜನೆಯನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

 

ಸೋಲಾರ್‌ ವಿದ್ಯುತ್‌ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 2014ರ ಡಿಸೆಂಬರ್‌ನಲ್ಲಿ ಈ ಯೋಜನೆ ಜಾರಿಗೆ ತಂದಿತ್ತು. ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಕನಿಷ್ಠ 25 ಸೋಲಾರ್‌ ಪಾರ್ಕ್‌ಗಳನ್ನು ನಿರ್ಮಿಸಿ, ಒಟ್ಟು 20 ಸಾವಿರ ಮೆ.ವ್ಯಾ. ವಿದ್ಯುತ್‌ ಉತ್ಪಾದಿಸುವ ಗುರಿಯನ್ನು ಹೊಂದಲಾಗಿತ್ತು. 2017ರಲ್ಲಿ ಈ ಯೋಜನೆಯ ಗುರಿಯನ್ನು ಮರು ನಿಗದಿಪಡಿಸಿ, 2025-26ರ ಒಳಗೆ ಒಟ್ಟು 40 ಸಾವಿರ ಮೆಗ ವಾಟ್‌ ವಿದ್ಯುತ್‌ ಉತ್ಪಾದಿಸುವ ಪಾರ್ಕ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು.

 

ಈ ಯೋಜನೆಯಡಿ ಪಾವಗಡದಲ್ಲಿ 2000 ಮೆ.ವ್ಯಾ. ಮತ್ತು ಬೀದರ್‌ನಲ್ಲಿ 500 ಮೆ.ವ್ಯಾ. ವಿದ್ಯುತ್‌ ಉತ್ಪಾದನೆಯ ಸೋಲಾರ್‌ ಪಾರ್ಕ್‌ ನಿರ್ಮಿಸಲು ಉದ್ದೇಶಿಸಲಾಗಿತ್ತು. ಪಾವಗಡದಲ್ಲಿ ಐದು ಹಳ್ಳಿಗಳಲ್ಲಿನ 13 ಸಾವಿರ ಎಕರೆ ಪ್ರದೇಶದಲ್ಲಿ ಈ ಯೋಜನೆ ಅನುಷ್ಠಾನಗೊಂಡಿದ್ದು, 2,050 ಮೆಗಾ ವಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಆದರೆ ಬೀದರ್‌ನಲ್ಲಿ ಜಾಗ ಸಿಗದೇ ಇರುವ ಕಾರಣಕ್ಕೆ ಯೋಜನೆ ಅನುಷ್ಠಾನಗೊಂಡಿರಲೇ ಇಲ್ಲ.

 

solar park in karnataka

 

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆಆರ್‌ಇಡಿಎಲ್‌) ಈ ಯೋಜನೆ ಜಾರಿಗೆ ತರುವ ಹೊಣೆ ಹೊತ್ತಿದ್ದು, ಬೀದರ್‌ನಲ್ಲಿ 2019 ರಿಂದಲೂ ಜಾಗ ಹೊಂದಿಸುವ ಪ್ರಯತ್ನ ನಡೆಸಿತ್ತು. ಆದರೆ ಜಿಲ್ಲೆಯಲ್ಲಿ ಬಹುತೇಕ ಕೃಷಿ ಯೋಗ್ಯ ಭೂಮಿ ಇರುವುದರಿಂದ ಹಾಗೂ ಅರಣ್ಯ ಪ್ರದೇಶ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ದೊಡ್ಡ ಪ್ರಮಾಣದಲ್ಲಿ ಸೋಲಾರ್‌ ಪಾರ್ಕ್‌ ನಿರ್ಮಾಣಕ್ಕೆ ಅಗತ್ಯವಾಗಿರುವ ಭೂಮಿ ಲಭ್ಯವಾಗಿರಲಿಲ್ಲ.

 

ಖಾಸಗಿ ಜಮೀನನ್ನು 28 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ ಮೇಲೆ ಪಡೆದು, ಪ್ರತಿ ಎಕರೆಗೆ 21, 500 ರೂ. ಮೊತ್ತವನ್ನು ನೇರವಾಗಿ ರೈತರಿಗೆ ನೀಡಲು ಕೂಡ ಕೆಆರ್‌ಇಡಿಎಲ್‌ ತೀರ್ಮಾನಿಸಿತ್ತು. ಪ್ರತಿ ವರ್ಷ ಶೇ. 5 ರಷ್ಟು ಗುತ್ತಿಗೆ ಹಣವನ್ನು ಏರಿಸಲಾಗುವುದು ಎಂಬ ಭರವಸೆ ಕೂಡ ನೀಡಿತ್ತು. ಆದರೆ ಸಾವಿರಾರು ಎಕರೆಯಷ್ಟು ಜಾಗ ಅಲ್ಲಿ ದೊರೆತಿರಲಿಲ್ಲ.

 

ಕೇಂದ್ರ ಸರ್ಕಾರವು ʻʻಸೋಲಾರ್‌ ಪಾರ್ಕ್‌ ಅಭಿವೃದ್ಧಿ ಮತ್ತು  ಅಲ್ಟ್ರಾ ಮೆಗಾ ಸೋಲಾರ ಪವರ್‌ ಪ್ರಾಜೆಕ್ಟ್ಸ್‌ ʼʼ ಯೋಜನೆಯಡಿ ಸೋಲಾರ್‌ ಪಾರ್ಕ್‌ ನಿರ್ಮಾಣದ ವಿವರವಾದ ಯೋಜನಾ ವರದಿ ಸಿದ್ಧಪಡಿಸಲು 25 ಲಕ್ಷ ಹಾಗೂ ಸೋಲಾರ್‌ ಪಾರ್ಕ್‌ ನಿರ್ಮಾಣಕ್ಕೆ ಒಂದು ಮೆಗಾ ವಾಟ್‌ಗೆ 20 ಲಕ್ಷದಂತೆ ಅಥವಾ ಯೋಜನೆಯ ಒಟ್ಟು ಮೊತ್ತದಲ್ಲಿ ಶೇ.30 ರಷ್ಟನ್ನು ರಾಜ್ಯಕ್ಕೆ ನೀಡುವುದಾಗಿ ತಿಳಿಸಿತ್ತು.

 

ಕೊಟ್ಟಿದ್ದೇ ಎರಡು

 

ʻʻಸೋಲಾರ್‌ ಪಾರ್ಕ್‌ ಅಭಿವೃದ್ಧಿ ಮತ್ತು  ಅಲ್ಟ್ರಾ ಮೆಗಾ ಸೋಲಾರ ಪವರ್‌ ಪ್ರಾಜೆಕ್ಟ್ಸ್‌ ʼʼ ಯೋಜನೆಯಡಿ ರಾಜ್ಯಕ್ಕೆ ಎರಡೇ ಸೋಲಾರ್‌ ಪಾರ್ಕ್‌ಗಳನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿತ್ತು. ಗುಜರಾತ್‌ ರಾಜ್ಯಕ್ಕೆ ಏಳು, ಮಧ್ಯಪ್ರದೇಶಕ್ಕೆ ಎಂಟು, ಮಹಾರಾಷ್ಟ್ರಕ್ಕೆ ನಾಲ್ಕು ಪಾರ್ಕ್‌ಗಳನ್ನು ಮಂಜೂರು ಮಾಡಿತ್ತು. ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಸೋಲಾರ್‌ ಪಾರ್ಕ್‌ಗಳ ನಿರ್ಮಾಣಕ್ಕೆ ಸಾಕಷ್ಟು ಅವಕಾಶವಿದ್ದರೂ ಎರಡೇ ಪಾರ್ಕ್‌ ನಿರ್ಮಾಣಕ್ಕೆ ಒಪ್ಪಿಗೆ ನೀಡಿತ್ತು.

 

solar park in karnataka

 

ಈ ಯೋಜನೆಯ ಎರಡನೇ ಹಂತದಲ್ಲಿ, ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಕಲಬುರಗಿಯಲ್ಲಿ 500 ಮೆ.ವಾ. ವಿದ್ಯುತ್‌ ಉತ್ಪಾದನೆಯ ಒಂದು ಪಾರ್ಕ್‌ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತಾದರೂ ಅದು ಕೂಡ ರದ್ದಾಗಿದೆ. ಹೀಗಾಗಿ ಪಾವಗಡದ ಯಶಸ್ಸಿನ ನಂತರ ಉತ್ತರ ಕರ್ನಾಟಕದಲ್ಲಿ ಅದೇ ಮಾದರಿಯ ಸೋಲಾರ್‌ ಪಾರ್ಕ್‌ ನಿರ್ಮಿಸಬೇಕೆಂಬ ರಾಜ್ಯ ಸರ್ಕಾರದ ಕನಸಿಗೆ ತಣ್ಣೀರೆರಚಿದಂತಾಗಿದೆ. ಈಗ ಕೆ. ಜೆ. ಜಾರ್ಜ್ ಇಂಧನ ಖಾತೆ ಸಚಿವರಾಗಿದ್ದಾರೆ.

 

 

ಈ ಹಿಂದೆ ರಾಜ್ಯದವರೇ ಆದ ಭಗವಂತ ಖೂಬಾ ಕೇಂದ್ರದ ನವೀಕರಿಸಬಹುದಾದ ಇಂಧನ ಇಲಾಖೆಯ ರಾಜ್ಯ ಸಚಿವರಾಗಿದ್ದರು. ಈಗ  ರಾಜ್ಯದ  ಹಿರಿಯ ರಾಜಕಾರಣಿ ಪ್ರಹ್ಲಾದ ಜೋಶಿ ಈ ಖಾತೆಯ ಸಚಿವರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸೋಲಾರ್‌ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸಾಧ್ಯವಿರುವ ಕಡೆಗಳಲೆಲ್ಲಾ ಸೋಲಾರ್‌ ಪಾರ್ಕ್‌ ನಿರ್ಮಾಣಕ್ಕೆ ಮುಂದಾಗಲು ರಾಜ್ಯ ಸರ್ಕಾರಕ್ಕೆ ಅವಕಾಶವಿದೆ.

 

solar park in karnataka

 

ʻʻಸೋಲಾರ್‌ ಪಾರ್ಕ್‌ ಅಭಿವೃದ್ಧಿ ಮತ್ತು  ಅಲ್ಟ್ರಾ ಮೆಗಾ ಸೋಲಾರ ಪವರ್‌ ಪ್ರಾಜೆಕ್ಟ್ಸ್‌ ʼʼ ಯೋಜನೆಯನ್ನು 2028-29ನೇ ಆರ್ಥಿಕ ಸಾಲಿನಲ್ಲಿ ಕೊನೆಗೊಳಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ಯೋಜನೆಯಡಿ ಹೊಸ ಪಾರ್ಕ್‌ಗಳನ್ನು ಕೈಗೆತ್ತಿಕೊಳ್ಳಲು 2026ರ ಮಾರ್ಚ್‌ ವರೆಗೆ ಮಾತ್ರ ಕೇಂದ್ರ ಸರ್ಕಾರ ಅನುಮತಿ ನೀಡಲಿದೆ. ಈ ಸಮಯದ ಮಿತಿಯೊಳಗೆ ರಾಜ್ಯ ಸರ್ಕಾರ ಹೊಸ ಪ್ರಸ್ತಾವಗಳನ್ನು ಕೇಂದ್ರಕ್ಕೆ ಕಳಿಸಬಹುದಾಗಿದೆ.

 

ಶೇ.82 ರಷ್ಟು ಸಾಧನೆ 

 

ಸೋಲಾರ್‌ ಪಾರ್ಕ್‌ ಅಭಿವೃದ್ಧಿ ಮತ್ತು  ಅಲ್ಟ್ರಾ ಮೆಗಾ ಸೋಲಾರ ಪವರ್‌ ಪ್ರಾಜೆಕ್ಟ್ಸ್‌ ಯೋಜನೆ ಅನುಷ್ಠಾನದಲ್ಲಿ ಇತರ ರಾಜ್ಯಗಳಿಗೆ ಹೋಲಿದರೆ ರಾಜ್ಯದ ಸಾಧನೆ ಉತ್ತಮವಾಗಿದೆ. ಅನುಮತಿ ನೀಡಿದ ಎರಡು ಸೋಲಾರ್‌ ಪಾರ್ಕ್‌ಗಳಲ್ಲಿ ಒಟ್ಟು 2500 ಮೆ.ವಾ. ವಿದ್ಯುತ್‌ ಉತ್ಪಾದಿಸುವ ಗುರಿ ನಿಗದಿಪಡಿಸಲಾಗಿತ್ತು. ಒಂದು ಪಾರ್ಕ್‌ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದರೂ 2,050 ಮೆ.ವಾ. ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಇದರಿಂದಾಗಿ ಶೇ.82 ರಷ್ಟು ಸಾಧನೆ ಮಾಡಿದಂತಾಗಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.

 

ಆಗಸ್ಟ್‌ನಲ್ಲಿ ಈ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಪಾವಗಡ ಸೋಲಾರ್‌ ಪಾರ್ಕಿನಲ್ಲಿ 2015-16 ರಿಂದ ಕೆಎಸ್‌ಪಿಡಿಸಿಎಲ್‌ ನಿರುಪಯುಕ್ತವಾದ 1,897 ಎಕರೆ ಭೂಮಿಗೂ ಬಾಡಿಗೆ ನೀಡುತ್ತಿದೆ ಎಂದು ಈ ಸಿಎಜಿ ವರದಿಯಲ್ಲಿ ಆಕ್ಷೇಪಣೆ ವ್ಯಕ್ತಪಡಿಸಲಾಗಿತ್ತು.

 

ಮನೆ, ಭೂಮಿ, ಜಾಹೀರಾತು, ಮೊಬೈಲ್ ಟವರ್, ಸೋಲಾರ್‌ ಪಾರ್ಕ್ ತೆರಿಗೆ; ವಸೂಲಿಗೆ 1,142.60 ಕೋಟಿ ರು ಬಾಕಿ

 

ರಾಜ್ಯದಲ್ಲಿರುವ ಸೋಲಾರ್‌ ಪಾರ್ಕ್‌ ಸೇರಿದಂತೆ ಮನೆ, ಭೂಮಿ ಮೇಲಿನ ತೆರಿಗೆ, ಜಾಹೀರಾತು, ಮೊಬೈಲ್‌ ಟವರ್‌ ತೆರಿಗೆ ವಸೂಲಿ ಮಾಡುವಲ್ಲಿ ಹಿಂದೆ ಬಿದ್ದಿರುವ ಗ್ರಾಮ ಪಂಚಾಯಿತಿಗಳು 1,142.60 ಕೋಟಿ ರು. ಬಾಕಿ ಉಳಿಸಿಕೊಂಡಿರುವುದನ್ನು ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ಬಹಿರಂಗಪಡಿಸಿತ್ತು. ಈ ಕುರಿತು ʻದಿ ಫೈಲ್‌ʼ ವರದಿ ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts