ಅಕ್ರಮ ನೇಮಕಾತಿ; ಅಂತಿಮ ವಿಚಾರಣೆ ಬಾಕಿಯಿದ್ದರೂ 54 ಎಪಿಪಿಗಳ ಅಮಾನತು ತೆರವುಗೊಳಿಸಿದ ಸರ್ಕಾರ

ಬೆಂಗಳೂರು; ವಾಮ ಮಾರ್ಗಗಳ ಮೂಲಕ ನೇಮಕಗೊಂಡಿದ್ದರು ಎನ್ನಲಾಗಿದ್ದ 54  ಸಹಾಯಕ ಸರ್ಕಾರಿ ಅಭಿಯೋಜಕರ (ಎಪಿಪಿ) ಅಮಾನತನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರವು ತೆರವುಗೊಳಿಸಿದೆ. ಈ 54 ಎಪಿಪಿಗಳ ವಿರುದ್ಧ ಲೋಕಾಯುಕ್ತದಲ್ಲಿ ಅಂತಿಮ ವಿಚಾರಣೆಗೆ ಬಾಕಿ ಇದ್ದರೂ ಸಹ ಅಮಾನತು ತೆರವುಗೊಳಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

ವಿಶೇಷವೆಂದರೇ ಈ ಅಕ್ರಮ ನೇಮಕ ಪ್ರಕರಣವು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ  ಮೊದಲ ಅವಧಿಯಲ್ಲಿ ನಡೆದಿತ್ತು. ಈ ಪ್ರಕರಣದ ಕುರಿತು ಲೋಕಾಯುಕ್ತ ಸಂಸ್ಥೆಯು ತನಿಖೆ ಕೈಗೊಂಡಿತ್ತು. ಈ ಮಧ್ಯೆ ಅಕ್ರಮ ಫಲಾನುಭವಿಗಳೂ ವಿವಿಧ ನ್ಯಾಯಾಲಯಗಳ ಮೆಟ್ಟಿಲೇರಿದ್ದರು. ಅಮಾನತು ತೆರವುಗೊಳಿಸಲು ಸರ್ಕಾರಕ್ಕೂ ಮನವಿ ಸಲ್ಲಿಸಿದ್ದರು. ಆದರೆ ಹಿಂದಿನ ಬಿಜೆಪಿ ಸರ್ಕಾರವು ಅಮಾನತು ತೆರವುಗೊಳಿಸಿರಲಿಲ್ಲ. ಅಲ್ಲದೇ ಪ್ರತಿ 6 ತಿಂಗಳಿಗೊಮ್ಮೆ ಅಮಾನತು ಆದೇಶವನ್ನು ವಿಸ್ತರಿಸಿ ಆದೇಶ ಹೊರಡಿಸಿತ್ತು.

 

ಹೀಗೆ ಕಳೆದ ಏಳೆಂಟು ವರ್ಷಗಳಿಂದಲೂ ಈ ಅಕ್ರಮ ನೇಮಕಾತಿ ಪ್ರಕರಣವು ವಿಚಾರಣೆಯಲ್ಲಿತ್ತಾದರೂ ಈಗಿನ ಸರ್ಕಾರವು, ಅಕ್ರಮ ಫಲಾನುಭವಿಗಳ ಒತ್ತಡಕ್ಕೆ ಮಣಿದು ಅಮಾನತು ಆದೇಶವನ್ನು ಹಿಂಪಡೆದುಕೊಂಡಿರುವುದು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

 

ಈ ಎಲ್ಲಾ ಕಡೆ ಅಕ್ರಮ ಫಲಾನುಭವಿಗಳಿಗೆ ಹಿನ್ನಡೆಯುಂಟಾಗಿತ್ತಲ್ಲದೇ ಅವರ ಅರ್ಜಿಗಳೂ ವಜಾಗೊಂಡಿದ್ದವು. ಹೀಗಿದ್ದರೂ ರಾಜ್ಯ ಕಾಂಗ್ರೆಸ್‌ ಸರ್ಕಾರವು 54 ಮಂದಿ ಸಹಾಯಕ ಸರ್ಕಾರಿ ಅಭಿಯೋಜಕರ ಅಮಾನತನ್ನು ತೆರವುಗೊಳಿಸಿ ಅವರನ್ನು ಕರ್ತವ್ಯಕ್ಕೆ ಪುನರ್‍‌ ಸ್ಥಾಪಿಸಿ 2025ರ ಸೆ.16ಂದು ಆದೇಶ ಹೊರಡಿಸಿದೆ.

 

ಈ ಆದೇಶಕ್ಕೆ ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರು ಅನುಮೋದನೆ ನೀಡಿದ್ದಾರೆ ಎಂದು ಗೊತ್ತಾಗಿದೆ.  ಒಳಾಡಳಿತ ಇಲಾಖೆಯು ಹೊರಡಿಸಿರುವ ಅಮಾನತು ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪ್ರಕರಣದ ಹಿನ್ನೆಲೆ

 

ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಒಟ್ಟು 61 ಸಹಾಯಕ ಸರ್ಕಾರಿ ಅಭಿಯೋಜಕರ ಮೇಲಿನ ಆರೋಪಗಳು ತನಿಖೆಯಿಂದ ದೃಢಪಟ್ಟಿದ್ದವು. ಹೀಗಾಗಿ  ಅವರುಗಳ ವಿರುದ್ಧ ಸಕ್ಷಮ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ದಾಖಲಾಗಿದ್ದವು. ಮತ್ತು ಅವರ ಮೇಲಿನ ಆರೋಪಗಳು ಮೇಲ್ನೋಟಕ್ಕೆ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸರ್ಕಾರವು ಅವರುಗಳ ಮೇಲಿನ ಆರೋಪಗಳಿಗೆ ಲೋಕಾಯುಕ್ತ ಇಲಾಖೆ ವಿಚಾರಣೆಯನ್ನು ಬಾಕಿಯಿರಿಸಿತ್ತು. ಹಾಗೂ  ಕರ್ನಾಟಕ ನಾಗರಿಕ ಸೇವಾ ನಿಯಮಗಳು (ಸಿಸಿಎ) ನಿಯಮಾವಳಿಗಳು 1957ರ ನಿಯಮ 10(1) (ಸಿ) (ಡಿ)ರಂತೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸೇವೆಯಿಂದ ಅಮಾನತುಗೊಳಿಸಿತ್ತು.

 

 

ಅಮಾನತಾದ 61 ಸಹಾಯಕ ಸರ್ಕಾರಿ ಅಭಿಯೋಜಕರುಗಳಲ್ಲಿ ಶೋಭ ತಮ್ಮಣ್ಣ ಭಜಂತ್ರಿ, ಸಿ. ಜೆ (ಕಿವಿ) ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಚಿಕ್ಕೋಡಿ ಇವರು 2019ರ ಅಕ್ಟೋಬರ್‍‌ 1ರಂದು ಮರಣ ಹೊಂದಿದ್ದರು. ಹೀಗಾಗಿ  ಇವರ ವಿರುದ್ಧ ಹೂಡಲಾದ ಲೋಕಾಯುಕ್ತ ಇಲಾಖೆ ವಿಚಾರಣೆಯಿಂದ ಅಬೆಟೆಡ್‌ ಎಂಬ ಉಪ ಲೋಕಾಯುಕ್ತರ ಶಿಫಾರಸ್ಸನ್ನು ಅಂಗೀಕರಿಸಿತ್ತು. ಹೀಗಾಗಿ  ಇವರ ವಿರುದ್ಧದ ಇಲಾಖೆ ವಿಚಾರಣೆಯನ್ನು ಸರ್ಕಾರದ (ಆದೇಶ ಸಂಖ್ಯೆ ಒಇ 495 ಪಿಪಿಇ 2018, 2020ರ ಅಕ್ಟೋಬರ್‍‌ 14ರಂದು)  ಮುಕ್ತಾಯಗೊಳಿಸಿ ಆದೇಶಿಸಿತ್ತು.

 

ಅಮಾನತುಗೊಂಡಿದ್ದ  ಸಹಾಯಕ ಸರ್ಕಾರಿ ಅಭಿಯೋಜಕರುಗಳು 2020ರ ಮೇ 6ರಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ನಿಯಮಾನುಸಾರ ಪರಿಶೀಲಿಸಿ ಕೈಗೊಂಡ ಕ್ರಮದ ಬಗ್ಗೆ ಅರ್ಜಿದಾರರಿಗೆ ಹಿಂಬರಹ ನೀಡುವಂತೆ ನಿರ್ದೇಶಿಸಲಾಗಿತ್ತು.

 

 

2020ರ ಮಾರ್ಚ್‌ 20ರಂದು ಅಮಾನತುಗೊಂಡಿರುವ ಸಹಾಯಕ ಸರ್ಕಾರಿ ಅಭಿಯೋಜಕರುಗಳ ವಿರುದ್ಧ ಸ್ಪೆಷಲ್‌ ಕೇಸ್‌ 305/2017 (ಕ್ರಿಮಿನಲ್ ಪ್ರಕರಣ) ಸಕ್ಷಮ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಾಕಿ ಇದೆ. ಹಾಗೂ ಈ ಸಹಾಯಕ ಸರ್ಕಾರಿ ಅಭಿಯೋಜಕರುಗಳ ವಿರುದ್ಧ ಲೋಕಾಯುಕ್ತರು ದುರ್ನಡತೆ ಆಪಾದನೆ ಮೇಲೆ ಇಲಾಖೆ ವಿಚಾರಣೆ ಆರಂಭಿಸಿದ್ದಾರೆ. ಈ ಹಂತದಲ್ಲಿ ಈ ಅಮಾನತು ಆದೇಶವನ್ನು ಹಿಂಪಡೆದಲ್ಲಿ ಈ ಸಹಾಯಕ ಸರ್ಕಾರಿ ಅಭಿಯೋಜಕರುಗಳೂ ತಾವು ಕರ್ತವ್ಯ ನಿರ್ವಹಿಸುವಂತಹ ತಮ್ಮ ತಮ್ಮ ನ್ಯಾಯಾಲಯಗಳಲ್ಲಿ ಸರ್ಕಾರದ ಪರವಾಗಿ ಹಾಜರಾಗಿ ಆರೋಪಿತರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಅಭಿಯೋಜನೆಗೆ ಒಳಪಡಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹಿಂದಿನ ಸರ್ಕಾರವು  ಅಭಿಪ್ರಾಯ ಪಟ್ಟಿತ್ತು.

 

 

ಆದ್ದರಿಂದ ಸರ್ಕಾರದ ಆದೇಶ ಸಂಖ್ಯೆ ಒಇ 156 ಪಿಪಿಇ 2018ರ 2020ರ ಮಾರ್ಚ್‌ 20ರಂದು ಹೊರಡಿಸಿರುವ ಅಮಾನತು ಆದೇಶವನ್ನು ಹಿಂಪಡೆಯವುದು ಸೂಕ್ತವಾಗಿರುವುದಿಲ್ಲ. ಈ ಕಾರಣಗಳ ಹಿನ್ನೆಲೆಯಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರು, ಸಹಾಯಕ ಸರ್ಕಾರಿ ವಕೀಲರ ಅಮಾನತು ಆದೇಶವನ್ನು ತೆರವುಗೊಳಿಸಲು ಸಮಂಜಸವಾದ ಕಾರಣಗಳು ಇಲ್ಲ. ಹೀಗಾಗಿ ಈ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ಹಿಂಬರಹ ನೀಡಲಾಗಿತ್ತು.  ಅಲ್ಲದೇ ಇವರನ್ನು ಅಮಾನತುಗೊಳಿಸಿ 6 ತಿಂಗಳು ಆಗಿರುವುದರಿಂದ ಅವರುಗಳ ಅಮಾನತು ಆದೇಶವನ್ನು ಪುನರ್‍‌ ಪರಿಶೀಲಿಸಿ 2020ರ ಸೆ.20ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವಿಸ್ತರಿಸಿ ಆದೇಶಿಸಿತ್ತು.

 

ಅಲ್ಲದೇ ಕೆಎಟಿ (ಅರ್ಜಿ ಸಂಖ್ಯೆ 5829-5250/2020 20201ರ ಜನವರಿ 20ರಂದು)  ಹೊರಡಿಸಿದ್ದ ಆದೇಶದಲ್ಲಿ ಅಮಾನತುಗೊಂಡ ಸಹಾಯಕ ಸರ್ಕಾರಿ ಅಭಿಯೋಜಕರುಗಳು 2020ರ ನವೆಂಬರ್‍‌ 9ರಂದು ಸರ್ಕಾರಕ್ಕೆ ಸಲ್ಲಿಸಿದ್ದ ಮನವಿಯನ್ನು ಅಜಯಕುಮಾರ್ ಚೌಧರಿ ಇವರ ಪ್ರಕರಣದ ಹಿನ್ನೆಲೆಯಲ್ಲಿ ಅಮಾನತು ಆದೇಶವನ್ನು ಪರಿಶೀಲಿಸುಂತೆ ನಿರ್ದೇಶಿಸಲಾಗಿತ್ತು.

 

ಹಾಗೂ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠದ ರಿಟ್‌ ಪಿಟಿಷನ್ ಸಂಖ್ಯೆ ಎ119515/2020ರ ದಿನಾಂಕ 2020ರ ಮೇ 14ರ ತೀರ್ಪನ್ನು ಪ್ರಶ್ನಿಸಿದ್ದ  ಅಮಾನತಿನಲ್ಲಿರುವ ಸಹಾಯಕ ಸರ್ಕಾರಿ ಅಭಿಯೋಜಕರುಗಳಲ್ಲಿ ಕೆಲವರು ಸರ್ವೋಚ್ಛ ನ್ಯಾಯಾಲಯದಲ್ಲಿ ಎಸ್‌ಎಲ್‌ಪಿ ದಾಖಲಿಸಿದ್ದರು. ಆದರೆ ಈ ಪ್ರಕರಣಗಳನ್ನು ನ್ಯಾಯಾಲಯವು 20204 ನವೆಂಬರ್‍‌ 19ರಂದು ವಜಾಗೊಳಿಸಿ ಆದೇಶಿಸಿತ್ತು.

 

ಅಮಾನತಿನಲ್ಲಿರುವ ಕೆಲವು ಸಹಾಯಕ ಸರ್ಕಾರಿ ಅಭಿಯೋಜಕರುಗಳು ಸರ್ಕಾರಕ್ಕೆ ಮತ್ತೊಂದು  ಮನವಿ ಸಲ್ಲಿಸಿದ್ದರು.  ಸರ್ವೋಚ್ಛ ನ್ಯಾಯಾಲಯವು ಇಲಾಖೆ ವಿಚಾರಣೆಗೆ ಸಂಬಂಧಿಸಿದಂತೆ ಮತ್ತು ಕರ್ನಾಟಕ ಉಚ್ಛ ನ್ಯಾಯಾಲಯವು ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ನೀಡಿದೆ. ಹೀಗಾಗಿ   60 ಸಹಾಯಕ ಸರ್ಕಾರಿ ಅಭಿಯೋಜಕರು, ಸರ್ಕಾರಿ ವಕೀಲರ ಅಮಾನತು ಆದೇಶನವನ್ನು ತೆರವುಗೊಳಿಸಿ ಸ್ಥಳ ನಿಯುಕ್ತಿಗೊಳಿಸಿ ಕರ್ತವ್ಯ ನಿರ್ವಹಿಸಲು ಆದೇಶ ಹೊರಡಿಸಬೇಕು ಎಂದು ಮತ್ತೊಮ್ಮೆ ಕೋರಿದ್ದರು.

 

ಈ ನ್ಯಾಯಾಲಯಗಳ ಆದೇಶ ಮತ್ತು ತೀರ್ಪುಗಳ ಹಿನ್ನೆಲೆಯಲ್ಲಿ ಅಮಾನತಿನಲ್ಲಿರುವ ಸಹಾಯಕ ಸರ್ಕಾರಿ ಅಭಿಯೋಜಕರುಗಳ ಮನವಿಯನ್ನು ಅಜಯಕುಮಾರ್ ಚೌಧರಿ ಪ್ರಕರಣದಲ್ಲಿನ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಕೆಎಟಿ ಆದೇಶದಂತೆ ಅಮಾನತು ಆದೇಶ ತೆರವುಗೊಳಿಸುವಂತೆ ಕೋರಿ ಸಲ್ಲಿಕೆಯಾದ ಮನವಿಗಳನ್ನು ಪುನರ್ ಪರಿಶೀಲಿಸಿತ್ತು.

 

ಈ ಸಹಾಯಕ ಸರ್ಕಾರಿ ಅಭಿಯೋಜಕರ ವಿರುದ್ಧದ ಲೋಕಾಯುಕ್ತ ಇಲಾಖೆ ವಿಚಾರಣೆಯ ಪ್ರಕರಣವು ಬಾಕಿಇತ್ತು.  ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿದ್ದ ರಿಟ್‌  (ಅರ್ಜಿ 10732/2019 ಮತ್ತು 50869/2019ರ)  ಪ್ರಕರಣಗಳಿಗೆ ಸಂಬಂಧಿಸಿದಂತೆ 2021ರ ಡಿಸೆಂಬರ್‍‌ 8ರಂದು ಹೊರಡಿಸಿದ್ದ ಆದೇಶಗಳನ್ನು  ಅವಲೋಕಿಸಿತ್ತು. ಈ  ಅಂಶಗಳ ಹಿನ್ನೆಲೆಯಲ್ಲಿ ಈ ಹಂತದಲ್ಲಿ ಅವರುಗಳ ಅಮಾನತು ತೆರವುಗೊಳಿಸುವುದು ಸೂಕ್ತವಾಗಿರುವುದಿಲ್ಲ ಎಂದು ಹಿಂದಿನ ಬಿಜೆಪಿ  ಸರ್ಕಾರವು ಎರಡನೇ ಬಾರಿಗೆ  ತೀರ್ಮಾನಿಸಿತ್ತು. ಅದರಂತೆ ಅಮಾನತು ಆದೇಶವನ್ನು 3 ತಿಂಗಳ ಅವಧಿಗೆ ಮುಂದುವರೆಸಿ ಆದೇಶಿಸಿತ್ತು.

 

 

ಆದರೂ ಸರ್ಕಾರಿ ಅಭಿಯೋಜಕರುಗಳು ಉಚ್ಛ ನ್ಯಾಯಾಲಯವು 2022ರ ಜುಲೈ 7ರಂದು ನೀಡಿದ್ದ ಮಧ್ಯಂತರ ಆದೇಶವದಲ್ಲಿನ ಅಂಶಗಳನ್ನು ಮುಂದಿರಿಸಿ ತಮ್ಮ ಅಮಾನತು ತೆರವುಗೊಳಿಸಬೇಕು ಎಂದು 2022ರ ಜುಲೈ 14ರಂದು ಮತ್ತೊಂದು ಮನವಿ ಸಲ್ಲಿಸಿದ್ದರು. ಆದರೆ ಇವರ ಅಮಾನತು ಆದೇಶವನ್ನು ಪುನರ್‍‌ ಪರಿಶೀಲಿಸಿ 60 ಸಹಾಯಕ ಸರ್ಕಾರಿ ಅಭಿಯೋಜಕರ ಅಮಾನತನ್ನು ಮುಂದಿನ 3 ತಿಂಗಳಿವರೆಗೆ ಮುಂದುವರೆಸಿ ಆದೇಶಿಸಲಾಗಿತ್ತು.

 

ಈ ವಿಶೇಷ ಮೇಲ್ಮನವಿ ಪ್ರಕರಣವು (ಎಸ್‌ಎಲ್‌ಪಿ (ಸಿ) ಸಂಖ್ಯೆ 16773/2022 ರ ಪ್ರಕರಣವು 2024ರ ನವೆಂಬರ್‍‌ 19ರಂದು ವಿಚಾರಣೆಗೆ ಬಂದಿತ್ತು. ಇದು ಪೆಂಡಿಂಗ್‌ (ಫೈನಲ್ ಹಿಯರಿಂಗ್‌) ಲೀಸ್ಟ್‌ ಬಿಫೋರ್ ಕೋರ್ಟ್/ಬೆಂಚ್‌ -ಆರ್ಡರ್‍‌ 04-04-2025 ಎಂದು ಹೇಳಿತ್ತು.

 

ಅಮಾನತಿಲ್ಲಿರುವ ಸಹಾಯಕ ಸರ್ಕಾರಿ ಅಭಿಯೋಜಕರುಗಳನ್ನುಕರ್ನಾಟಕ ಲೋಕಾಯುಕ್ತ ಶಿಫಾರಸ್ಸಿನ ಅನ್ವಯ ಮತ್ತು ಕರ್ನಾಟಕ ನಾಗರಿಕ ಸೇವಾ ನಿಯಮಗಳೂ ನಿಯಮ 8 (viii) ಅನ್ವಯ 6 ಮಂದಿ ಸಹಾಯಕ ಸರ್ಕಾರಿ ಅಭಿಯೋಜಕರ ಸೇವೆಯಿಂದ ತೆಗೆದುಹಾಕಿ ವಜಾಗೊಳಿಸಿ ಆದೇಶಿಸಿತ್ತು.

 

ಕಾಂಗ್ರೆಸ್‌ ಸರ್ಕಾರದ ಸಮರ್ಥನೆಯೇನು?

 

ವಾಸ್ತವವಾಗಿ ಸರ್ಕಾರದ ನೀತಿ ನಿರೂಪಣೆ ನಿಲುವಾಗಿ 6 ತಿಂಗಳ ಅವಧಿಯೊಳಗೆ ಇಲಾಖೆ ವಿಚಾರಣೆಯನ್ನು ಆರಂಭಿಸಿದ್ದಲ್ಲಿ ಅಥವಾ ದೋಷಾರೋಪಣೆ ಪಟ್ಟಿಯನ್ನು ಹೊರಡಿಸಿದ್ದಲ್ಲಿ 6 ತಿಂಗಳ ಒಳಗಾಗಿಯೇ ಸರ್ಕಾರಿ ನೌಕರರನ್ನು ಸೇವೆ ಪುನರ್‍‌ ಸ್ಥಾಪಿಸಲು ಸಕ್ಷಮ ಪ್ರಾಧಿಕಾರಿಯು ನಿರ್ಧರಿಸಬಹುದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಅಮಾನತಿನಲ್ಲಿರುವ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ 54 ಸಹಾಯಕ ಸರ್ಕಾರಿ ಅಭಿಯೋಜಕರುಗಳ ಅಮಾನತನ್ನು ತೆರವುಗೊಳಿಸಲು  ಸರ್ಕಾರವು ತೀರ್ಮಾನಿಸಿದೆ. ಈ ಸಂಬಂಧ  2025ರ ಸೆ.16ರಂದು ಆದೇಶ ಹೊರಡಿಸಿದೆ.

 

ಈ ಆದೇಶದ ಪ್ರಕಾರ ಲೋಕಾಯುಕ್ತ ಇಲಾಖೆ ವಿಚಾರಣೆಯನ್ನು ಬಾಕಿ ಇರಿಸಿ ಅಮಾನತು ತೆರವುಗೊಳಿಸಿ ಕರ್ತವ್ಯಕ್ಕೆ ಪುನರ್‍‌ ಸ್ಥಾಪನೆ ಮಾಡಿ ಆದೇಶಿಸಿದೆ.

 

ಪುನರ್ ಸ್ಥಾಪನೆಗೊಳ್ಳಲಿರುವ   54 ಮಂದಿ ಪಟ್ಟಿ

 

ಮಹಮ್ಮದ್‌ ಅಜ್ಮಲ್‌ ಪಾಷ (ತುಮಕೂರು), ಸಿ ಜೆ ಸುಬ್ರಮಣ್ಯ (ಚನ್ನಪಟ್ಟಣ), ಶಿವನಂಜಪ್ಪ (ಚನ್ನರಾಯಪಟ್ಟಣ), ಗೀತಾ ಸಿದ್ದರಾಮಪ್ಪ ಅಸೂಟಿ (ಧಾರವಾಡ), ಕುಮುದಿನಿ ಎಸ್‌ (ಚಿಕ್ಕಬಳ್ಳಾಪುರ), ಮಾಯಣ್ಣಗೌಡ (ಹಾಸನ),ವೀರೇಂದ್ರ ಪಾಟೀಲ್ (ಚಿತ್ರದುರ್ಗ), ರೂಪಾ ಎ ಟಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ಸುಮಂಗಲ ಚಂದ್ರಶೇಖರ ನಾಯ್ಕ (ಉಡುಪಿ),

 

 

ರವೀಂಧ್ರಸಾ (ಧಾರವಾಡ), ಚೇತನ್ ತುಕಾರಾಮ ನಾಯ್ಕ (ಮಂಗಳೂರು ದಕ್ಷಿಣ ಕನ್ನಡ), ಗುರುಸ್ವಾಮಿ (ಚಿಕ್ಕಬಳ್ಳಾಪುರ), ಸಾಹೇಬಗೌಡ (ಚಿತ್ತಾಪುರ ಕಲ್ಬುರ್ಗಿ), ಎಸ್‌ ಎನ್‌ ವೆಂಕಟೇಶ್‌ (ಆನೇಕಲ್‌), ಎನ್‌ ಕುಮಾರ್ (ಚಳ್ಳಕೆರೆ ಚಿತ್ರದುರ್ಗ), ರೇಖಾ (ಹುಣಸೂರು, ಮೈಸೂರು), ಎಂ ಎಲ್‌ ಚಂದ್ರಾರೆಡ್ಡಿ (ಮುಧೋಳ), ರೂಪ (ಕೋಲಾರ),

 

 

 

 

 

ಕೆ ಎಂ ರಘು (ತುಮಕೂರು), ಸುನೀಲ್ ಪಾಟೀಲ್ (ಮೂಡಿಗೆರೆ ಚಿಕ್ಕಮಗಳೂರು), ಪುಷ್ಪಾವತಿ (ಬೆಂಗಳೂರು ನಗರ), ಬಸಲಿಂಗಪ್ಪಾ ಬಾಳಗೊಂಡ (ಅಥಣಿ), ಶಿಲ್ಪಾ ಜೋಷಿ (ಮೂಡಲಗಿ ಬೆಳಗಾವಿ), ಹರೀಶ್‌ (ಚನ್ನರಾಯಪಟ್ಟಣ ಹಾಸನ), ಎನ್‌ ಅನುರಾಧ (ಮಾಲೂರು ಕೋಲಾರ) ಸಿ ಹೃಷಿಕೇಷ (ಕನಕಪುರ), ಸರೋಜಿನಿ ವೀರಪ್ಪ ಬಟಕುರ್ಕಿ (ಬೀಳಗಿ ಬಾಗಲಕೋಟೆ), ಮೊಹಮದ್‌ಖಾಜಾ (ಬಂಗಾರಪೇಟೆ ಕೋಲಾರ), ಎಂ ಕೆ ವಿಜಯಕುಮಾರ್ (ರಾಮನಗರ), ಎಚ್‌ ಸಿ ರವೀಂದ್‌ (ಮೈಸೂರು),

 

 

ಶಿವಮ್ಮ ಹೆಚ್‌ ವಿ (ತಿಪಟೂರು ತುಮಕೂರು), ಎಸ್‌ ಎನ್‌ ಮಮತ (ಅರಕಲಗೂಡು ಹಾಸನ), ಧೀರೇಂದ್ರ (ಶಿವಮೊಗ್ಗ), ಧನಪಾಲ್‌ ದೇವಪ್ಪ ಹಾರೋಗೇರಿ (ಬೆಳಗಾವಿ),ವಿನಾಯಕ ಎಸ್ ಪಾಟೀಲ್ (ಧಾರವಾಡ), ಸಂಗನಗೌಡ ಪ ನಾಯಕ (ಬದಾಮಿ ಬಾಗಲಕೋಟೆ),

 

ಟಿ ಎಂ ವಿಮಲ (ಅರಸಿಕೇರೆ), ಎ ಎನ್ ರಾಜಣ್ಣ (ಗುಂಡ್ಲುಪೇಟೆ), ಟಿ ರಾಖಿ (ಗುಬ್ಬಿ ತುಮಕೂರು), ದಾದಾಪೀರ್‍‌ ಶಬ್ಬೀರ್ ಅಹ್ಮದ್‌ ಭನುವಳ್ಳಿ (ಶಿಕಾರಿಪುರ ಶಿವಮೊಗ್ಗ), ಛಾಯಾದೇವಿ (ಕಲ್ಬುರ್ಗಿ), ಜ್ಞಾನೇಂದ್ರ (ನಾಗಮಂಗಲ), ವೇಣುಕುಮಾರ್ ಎ ಎಸ್‌ (ಚಿಕ್ಕಬಳ್ಳಾಪುರ), ಶೇಖ್ ಅಹ್ಮದ್‌ (ಕೊರಟಗೆರೆ ತುಮಕೂರು), ವಿಜಯಚಂದ್ರ ಪ್ರಭು (ಗಂಗಾವತಿ ಕೊಪ್ಪಳ), ಶ್ರೀನಿವಾಸ ಎಂ (ಬಂಗಾರಪೇಟೆ ಕೋಲಾರ),

 

 

ಲಿಂಗೇಶ್ವರ ಜೆ (ಚಳ್ಳಕೆರೆ ಚಿತ್ರದುರ್ಗ), ಮೋಹನ್ ಬಿ (ದೊಡ್ಡಬಳ್ಳಾಪುರ), ವಿಜಯಲಕ್ಷ್ಮಿ ಅಥರ್ಗ (ಬೀಳಗಿ), ವೈ ಎಸ್ ಮೋಹನ್ (ಆನೇಕಲ್), ಬಿ ನಾರಾಯಣಸ್ವಾಮಿ (ಕನಕಪುರ), ರಂಜನಾ ಸುರೇಶ್‌ ಪಾಟೀಲ್ (ಬೈಲಹೊಂಗಲ), ಪೂರ್ಣಿಮಾ (ತಿಪಟೂರು) ಇದ್ದಾರೆ.

ಎಪಿಪಿಗಳ ಅಕ್ರಮ ನೇಮಕದಲ್ಲಿ ಭಾಗಿಯಾಗಿದ್ದ 2ನೇ ಆರೋಪಿ ಅಧಿಕಾರಿಗೆ ಆಡಳಿತಾಧಿಕಾರಿ ಹುದ್ದೆ

 

ವಿಶೇಷವೆಂದರೇ ಈ ಪ್ರಕರಣದಲ್ಲಿ ಎರಡನೆ ಆರೋಪಿಯಾಗಿದ್ದ ನಾರಾಯಣಸ್ವಾಮಿ ಅವರಿಗೆ ಆಡಳಿತಾಧಿಕಾರಿ ಹುದ್ದೆಯನ್ನು ನೀಡಲಾಗಿತ್ತು.

 

ಎಪಿಪಿ ನೇಮಕಾತಿಯಲ್ಲಿ ಅಕ್ರಮ; ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿರುದ್ಧದ ದೂರು ಬಹಿರಂಗ

 

ಅಷ್ಟೇ ಅಲ್ಲ ಈ  ನೇಮಕಾತಿಯಲ್ಲಿ ಸರ್ಕಾರದ ಹಿಂದಿನ ಮುಖ್ಯ ಕಾರ್ಯದರ್ಶಿಯೂ ಭಾಗಿ ಆಗಿದ್ದರು ಎಂಬ ದೂರೂ ಸಹ ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು.

Your generous support will help us remain independent and work without fear.

Latest News

Related Posts