ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಪೂರೈಕೆ ಸುಧಾರಿಸುವ ಉದ್ದೇಶದಿಂದ 2000ದಿಂದ 2016ರ ಅವಧಿಯಲ್ಲಿ ಜಾರಿಗೊಳಿಸಲಾದ 32 ಅಸಮರ್ಪಕ ಯೋಜನೆಗಳಿಗೆ ಮಿತಿ ಮೀರಿ ಹಣ ವಿನಿಯೋಗಿಸಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ʻಸರ್ಕಾರದ ದುಡ್ಡೂ ಹೋಯಿತು, ಜನರಿಗೆ ಕುಡಿಯುವ ನೀರೂ ಸಿಗಲಿಲ್ಲʼ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಈ ಯೋಜನೆಗಳ ಫಲಾನುಭವಿಗಳ ಲೆಕ್ಕದಲ್ಲಿ ತಲಾ 4,076 ರು. ವೆಚ್ಚ ಮಾಡಲಾಗಿದೆ. ಇದು ಆರಂಭದಲ್ಲಿ ನಿಗದಿಗೊಳಿಸಿದ್ದಕ್ಕಿಂತ ಶೇಕಡ 41ರಷ್ಟು ಅಧಿಕ. ಆದರೂ ಈ ಯೋಜನೆಗಳು ಅಸಮರ್ಪಕವಾಗಿ ಅನುಷ್ಠಾನಗೊಂಡಿವೆ. ಇವುಗಳಲ್ಲಿನ ಶೇ. 86 ರಷ್ಟು ನೀರಿನ ಮಾದರಿಗಳು ಕುಡಿಯಲು ಯೋಗ್ಯವಾಗಿಯೇ ಇಲ್ಲ ಎಂಬುದು ಸರ್ಕಾರದ ಪರವಾಗಿ ನಡೆದ ಅಧ್ಯಯನದಿಂದ ಬಹಿರಂಗಗೊಂಡಿದೆ.

ಮೌಲ್ಯ ಮಾಪನ ಸಮಾಲೋಚನಾ ಸಂಸ್ಥೆಯಾಗಿರುವ (ECO) ʻನಬಾರ್ಡ್ ಕನ್ಸಲ್ಟೆನ್ಸಿ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (ನ್ಯಾಬ್‌ಕಾನ್ಸ್ -NABCONS) ಈ ಅಧ್ಯಯನ ನಡೆಸಿತ್ತು. ಈ ವರದಿಯನ್ನು ಕರ್ನಾಟಕ ಮೇಲ್ವಿಚಾಋಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ. ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಕೋರಿಕೆಯ ಮೇರೆಗೆ ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ ಈ ಅಧ್ಯಯನ ನಡೆಸಿತ್ತು.
ಈ 32 ಯೋಜನೆಗಳ ಆರಂಭಿಕ ಕರಾರು ಮೊತ್ತ 151 ಕೋಟಿ ರು. ಆಗಿತ್ತು. ಈ ಯೋಜನೆಯ ಫಲಾನುಭವಿಗಳ ತಲಾವಾರು ವೆಚ್ಚ 2,557 ರು.ಗಳಾಗಬಹುದೆಂದು ಅಂದಾಜಿಸಲಾಗಿತ್ತು. ನಂತರ, ಈ ಯೋಜನೆಗಳ ವೆಚ್ಚ 191 ಕೋಟಿಗೆ ಏರಿಕೆಯಾಗಿತ್ತು. ಆದರೂ ಯೋಜನೆಗಳು ಸಂಪೂರ್ಣವಾಗಿ ಅನುಷ್ಠಾನಗೊಂಡಿರಲಿಲ್ಲ. ಮತ್ತೊಮ್ಮೆ ಈ ಯೋಜನೆಗಳ ವೆಚ್ಚವನ್ನು 214 ಕೋಟಿಗೆ ಏರಿಸಲಾಗಿತ್ತು. ಅಂದರೆ, ಒಟ್ಟಾರೆ ಶೇಕಡ 41ರಷ್ಟು ಹೆಚ್ಚಳ ಮಾಡಲಾಗಿತ್ತು. ಇದರಿಂದಾಗಿ ತಲಾ ಫಲಾನುಭವಿ ವೆಚ್ಚವೂ ಸಹಜವಾಗಿಯೇ 4,076 ರು.ಗಳಿಗೆ ಏರಿಕೆಯಾಗಿದೆ. ಇದೇ ರೀತಿಯಾಗಿ, ಕುಟುಂಬವಾರು ವೆಚ್ಚವು 14,690 ರು.ಗಳಿಂದ 20,777 ರು.ಗಳಿಗೆ ಏರಿಕೆ ಕಂಡಿತು. ಹೀಗೆ ಮಿತಿ ಮೀರಿ ವೆಚ್ಚ ಮಾಡಿದರೂ ಯೋಜನೆಗಳು ನಿಷ್ಪಲವಾಗಿವೆ ಎಂದು ಈ ಅಧ್ಯಯನ ವರದಿ ಹೇಳಿದೆ.
ಈ ಯೋಜನೆಗಳು ಜಾರಿಗೆ ಬಂದಾಗ ರಾಜ್ಯದಲ್ಲಿ ಕಾಂಗ್ರೆಸ್, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ, ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ, ಬಿಜೆಪಿ ಹಾಗೂ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಯಾವುದೇ ಸರ್ಕಾರವೂ ಈ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಮುಂದಾಗದೇ ಇರುವುದು ಈ ಅಧ್ಯಯನ ವರದಿಯಿಂದ ಸ್ಪಷ್ಟವಾಗಿದೆ.

ಕರಡಿಗುಡ್ಡದಲ್ಲಿ ತಲಾವಾರು ವೆಚ್ಚ 5,781!
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು 14 ಜಿಲ್ಲೆಗಳಲ್ಲಿ ಇರುವ 34 ಯೋಜನೆಗಳ ಬಗ್ಗೆ ಅಧ್ಯಯನ ನಡೆಸುವಂತೆ ಕೋರಿತ್ತು. ಇದರಲ್ಲಿ 13 ಬಹುಗ್ರಾಮ ಯೋಜನೆಗಳಾಗಿದ್ದರೆ (ಎಂವಿಎಸ್), 20 ನೀರು ಸರಬರಾಜು ಯೋಜನೆಗಳಾಗಿದ್ದವು (ಡಬ್ಲ್ಯುಎಸ್‌ಎಸ್) ಮತ್ತು ಒಂದು ಪೈಪಿನ ಮೂಲಕ ನೀರು ಸರಬರಾಜು ಮಾಡುವ (ಪಿಡಬ್ಲ್ಯುಎಸ್‌ಎಸ್) ಯೋಜನೆಯಾಗಿತ್ತು.
ಇದರಲ್ಲಿ ಗೋಗಿ ಹಾಗೂ 10 ಹಳ್ಳಿಗಳನ್ನು ಒಳಗೊಂಡ ಎಂವಿಎಸ್ ಯೋಜನೆಗೆ ಅತ್ಯಂತ ಕಡಿಮೆ ಅಂದರೆ 976 ರು. ತಲಾವಾರು ವೆಚ್ಚಮಾಡಲಾಗಿದ್ದರೆ, ಕರಡಿಗುಡ್ಡ ಹಾಗೂ 18 ಹಳ್ಳಿಗಳನ್ನು ಒಳಗೊಂಡ ಎಂವಿಎಸ್ ಯೋಜನೆಗೆ 5,781 ರು. ವ್ಯಯಿಸಲಾಗಿದೆ. ಅಳ್ಳಗಿ ಹಾಗೂ 6 ಹಳ್ಳಿಗಳ ಎಂವಿಎಸ್ ಯೋಜನೆಗೆ ವ್ಯಯಿಸಿರುವ ತಲಾವಾರು ವೆಚ್ಚ 5, 373 ರು.ಗಳಾಗಿವೆ. ಹೆಚ್ಚಿನ ಮೂಲಸೌಕರ್ಯಹಳ ಅಗತ್ಯತೆ ಬಿದ್ದಿರುವುದು ಮತ್ತು ಯೋಜನೆ ಅನುಷ್ಠಾನ ಪ್ರೇಶದಲ್ಲಿನ ಭೌಗೋಳಿಕ ಸ್ಥಿತಿ, ಕಡಿಮೆ ಜನಸಂಖ್ಯಾ ಸಾಂದ್ರತೆ ಅಥವಾ ಇನ್ನಿತರ ಕೆಲವು ಕಾರಣಗಳು ಈ ಹೆಚ್ಚಿನ ವೆಚ್ಚಕ್ಕೆ ಕಾರಣವಾಗಿರಬಹುದು ಎಂದು ಈ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
ಕೌವ್ಲೂರು ಮತ್ತು ಆರು ಗ್ರಾಮಗಳಲ್ಲಿ ಜಾರಿಗೆ ತಂದಿರುವ ಎಂವಿಎಸ್ ಯೋಜನೆಯಲ್ಲಿ ತಲಾವಾರು ವೆಚ್ಚ 1,146 ರು.ಗಳಾಗಿದ್ದರೆ, ಪ್ರತಿ ಮನೆಯ ವೆಚ್ಚ 5,726 ರು.ಗಳಾಗಿವೆ. ಇದು ಉತ್ತಮ ವೆಚ್ಚದ ದಕ್ಷತೆಯನ್ನು ಪ್ರದರ್ಶಿಸಿದೆ. ಈ ಯೋಜನೆ ಮಾದರಿಯಾಗಿದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
ಈ ಪ್ರಾಜೆಕ್ಟ್ ಗಳಿಗಾಗಿ ಮಾಡಲಾಗಿರುವ ತಲಾ ಕುಟುಂಬವಾರು ವೆಚ್ಚದಲ್ಲಿ ವ್ಯಾಪಕ ವ್ಯತ್ಯಾಸಗಳು ಕಂಡುಬಂದಿವೆ. ಎಂವಿಎಸ್ ಯೋಜನೆಯಡಿ ಗೋಗಿ ಮತ್ತು 10 ಹಳ್ಳಿಗಳಿಗೆ ಕಡಿಮೆ, ಅಂದರೆ ಕುಟುಂಬಕ್ಕೆ ತಲಾ 4,879 ರು. ವೆಚ್ಚವಾಗಿದೆ. ಇದೇ ವೇಳೆ, ನವಲಕಲ್ ಹಾಗೂ ಇತರ 7 ಹಳ್ಳಿಗಳನ್ನು ಒಳಗೊಂಡ ಯೋಜನೆಗೆ ಇದು 38,821 ರು. ವೆಚ್ಚ ಆಗಿರುವುದು ಕಂಡುಬಂದಿದೆ. ಎಂವಿಎಸ್ ಯೋಜನೆಗಳಡಿ ಅಳ್ಳಗಿ ಹಾಗೂ ಇತರ 6 ಗ್ರಾಮಗಳಿಗೆ ಕುಟುಂಬಕ್ಕೆ 36,900 ರು. ಮತ್ತು ಕರಡಿಗುಡ್ಡ ಹಾಗೂ 18 ಗ್ರಾಮಗಳಿಗೆ ತಲಾ ರೂ 36,133 ಖರ್ಚು ಮಾಡಲಾಗಿದೆ ಎಂದು ವರದಿ ಹೇಳಿದೆ.
ಶೇ. 109 ರಷ್ಟು ಅಧಿಕ ವೆಚ್ಚ
ಮುದೇನಗುಡಿಯ ಡಬ್ಲ್ಯುಎಸ್ಎಸ್ ಯೋಜನೆಗೆ ಮಾಡಲಾಗಿರುವ 2,406 ರು. ತಲಾ ವೆಚ್ಚ ಮತ್ತು 12,026 ರು. ಕುಟುಂಬವಾರು ಖರ್ಚನ್ನು ಮಧ್ಯಮ ಶ್ರೇಣಿಯ ವೆಚ್ಚವೆಂದು ಗುರುತಿಸಲಾಗಿದೆ. ಇದು ಸಮತೋಲಿತ ವೆಚ್ಚ ನಿರ್ವಹಣೆಯನ್ನು ಸೂಚಿಸಿದರೂ, ಇದನ್ನು ಇನ್ನಷ್ಟು ಸುಧಾರಿಸಲು ಅವಕಾಶವಿದೆ ಎಂದೂ ತಜ್ಞರು ಸೂಚಿಸಿದ್ದಾರೆ. ಡಿ.ಎಸ್. ಹಡಗಲಿ ಹಾಗೂ ಗುಜಮಾಗಡಿ ಡಬ್ಲ್ಯುಎಸ್ಎಸ್ ಯೋಜನೆಯಲ್ಲಿ ತಲಾ ವೆಚ್ಚ 2,661 ರು. ಹಾಗೂ ಕುಟುಂಬವಾರು ವೆಚ್ಚ ರು. 13,299 ಕಂಡುಬಂದಿದ್ದು, ಇದು ಹೆಚ್ಚು ವೆಚ್ಚದ ವರ್ಗದಡಿ ಬರುತ್ತದೆ.



ಕರಡಿಗುಡ್ಡ ಹಾಗೂ 18 ಗ್ರಾಮಗಳ ಎಂವಿಎಸ್ ಯೋಜನೆಯು ಎರಡೂ ವಿಭಾಗಗಳಲ್ಲಿ ಅತ್ಯಧಿಕ ವೆಚ್ಚದಿಂದ ಕೂಡಿದ್ದು, ಕ್ರಮವಾಗಿ ತಲಾ ವೆಚ್ಚ ರು. 5,781 ಹಾಗೂ ಕುಟುಂಬ ವೆಚ್ಚ ರು. 36,133 ಆಗಿದೆ. ನವಲ್ಕರ್ ಹಾಗೂ ಗ್ರಾಮಗಳನ್ನು ಒಳಗೊಂಡ ಯೋಜನೆಗೆ ಕುಟುಂಬವಾರು ವೆಚ್ಚವು ರು. 38,821 ಎಂಬುದು ತಿಳಿದುಬಂದಿದೆ. ಗೂಗಿ ಹಾಗೂ 10 ಹಳ್ಳಿಗಳನ್ನು ಒಳಗೊಂಡ ಯೋಜನೆಯು ಅತ್ಯಂತ ಕಡಿಮೆ ವೆಚ್ಚದ ಪ್ರಾಜೆಕ್ಟ್ ಆಗಿದ್ದು, ಪ್ರತಿ ವ್ಯಕ್ತಿಗೆ ರು. 976 ಮತ್ತು ಪ್ರತಿ ಕುಟುಂಬಕ್ಕೆ ರು. 4,879 ಖರ್ಚಾಗಿದೆ. ಒಟ್ಟು 32 ಯೋಜನೆಗಳ ಪೈಕಿ 22 ಯೋಜನೆಗಳಲ್ಲಿ ಶೇಕಡ 4ರಿಂದ ಶೇಕಡ 109ರವರೆಗೆ ಮಿತಿಮೀರಿದ ವೆಚ್ಚ ಕಂಡುಬಂದಿದೆ ಎಂದು ಮೌಲ್ಯಮಾಪನ ಅಧ್ಯಯನ ವರದಿಯಲ್ಲಿ ದಾಖಲಿಸಲಾಗಿದೆ.
ಒಟ್ಟಾರೆ, ನೀರು ಸರಬರಾಜು ಯೋಜನೆಗಳ ಅನುಷ್ಠಾನದಲ್ಲಿ ಮಿತಿಮೀರಿದ ವೆಚ್ಚವು ವ್ಯಾಪಕ ಸಮಸ್ಯೆಯನ್ನು ಸೂಚಿಸುತ್ತದೆ. ಕಳಪೆ ಹಣಕಾಸು ಯೋಜನೆ, ಹಿತಾಸಕ್ತಿದಾರರು ತೊಡಗಿಸಿಕೊಳ್ಳುವಿಕೆಯಲ್ಲಿ ಅಸಮರ್ಪಕತೆ, ಕಾರ್ಯಾರಂಭಕ್ಕಾಗಿ ವಿದ್ಯುತ್ ಸಂಪರ್ಕಗಳನ್ನು ಒದಗಿಸುವಲ್ಲಿ ವಿಳಂಬ (ವಿಶೇಷವಾಗಿ ಜೆಸ್ಕಾಂನಿಂದ) ಮತ್ತು ಕಾರ್ಯಾಚರಣೆಯ ಸಂಯೋಜನೆಯಲ್ಲಿನ ಲೋಪಗಳು ಈ ಮಿತಿಮೀರಿದ ವೆಚ್ಚಕ್ಕೆ ಕಾರಣವೆಂದು ವರದಿಯು ಬೊಟ್ಟು ಮಾಡಿದೆ.
ಅಧಿಕ ವೆಚ್ಚಕ್ಕೆ ಕಾರಣಗಳೇನು?
ಕಳಪೆ ಹಣಕಾಸು ಯೋಜನೆ: ಕಳಪೆ ಹಣಕಾಸು ಯೋಜನೆಯು ಮಿತಿಮೀರಿದ ವೆಚ್ಚಕ್ಕೆ ಮುಖ್ಯ ಕಾರಣಗಳಲ್ಲಿ ಒಂದಾಗಿದೆ. ಆರಂಭಿಕ ಆಯವ್ಯಯ ಸಿದ್ಧಪಡಿಸುವಾಗ ಅನಿರೀಕ್ಷಿತ ವೆಚ್ಚಗಳು, ಹಣದುಬ್ಬರ ಮತ್ತು ಸಾದಿಲ್ವಾರು ಖರ್ಚುಗಳನ್ನು ಪರಿಗಣಿಸದಿರುವುದು ಕಂಡುಬಂದಿದೆ. ಕಳಪೆ ಹಣಕಾಸು ಯೋಜನೆಯು ಸಂಪನ್ಮೂಲಗಳ ಹಂಚಿಕೆಯ ಹಳಿ ತಪ್ಪಿಸುವ ಜೊತೆಗೆ ಲಭ್ಯ ಬಜೆಟ್ ಮೊತ್ತವನ್ನು ತಗ್ಗಿಸುತ್ತದೆ ಎಂದು ಅಧ್ಯಯನ ವರದಿ ಹೇಳಿದೆ.
ವಿಪರೀತ ವೆಚ್ಚಕ್ಕೆ ಕಾರಣವಾಯಿತೇ ಪ್ರತ್ಯೇಕ ಟೆಂಡರ್?
ಈ ಪ್ರಾಜೆಕ್ಟುಗಳಿಗೆ ಸಂಬಂಧಿಸಿದ ವಿದ್ಯುತ್ ಕಾಮಗಾರಿಗಳಿಗೆ ಪ್ರತ್ಯೇಕ ಟೆಂಡರ್‌ಗಳನ್ನು ಆಹ್ವಾನಿಸಿರುವುದು ಯೋಜನೆಗಳ ವಿಪರೀತ ವೆಚ್ಚ ಹಾಗೂ ವಿಳಂಬಕ್ಕೆ ಮತ್ತೊಂದು ಗಮನಾರ್ಹ ಕಾರಣವೆಂಬುದು ಅಧ್ಯಯನದಿಂದ ದೃಢಪಟ್ಟಿದೆ.
ವಿದ್ಯುತ್ ಕೆಲಸಗಳಿಗೆ ಸಾಮಾನ್ಯವಾಗಿ ನೋಡಲ್ ಪ್ರಾಧಿಕಾರದ ನಿರ್ದಿಷ್ಟ ಪರವಾನಗಿ ಅಗತ್ಯವಿರುವುದರಿಂದ ಈ ಪರಿಸ್ಥಿತಿ ಉಂಟಾಗುತ್ತದೆ. ಸಾಮಾನ್ಯವಾಗಿ ನೀರು ಸರಬರಾಜು ಯೋಜನೆಯ ಗುತ್ತಿಗೆದಾರರು ಈ ಪರವಾನಗಿ ಹೊಂದಿರುವುದಿಲ್ಲ. ಈ ಅಡಚಣೆಯಿಂದಾಗಿ ಯೋಜನಾ ನಿರ್ವಹಣೆ ಪ್ರಕ್ರಿಯೆಯು ಸಂಕೀರ್ಣಗೊಳ್ಳುತ್ತದೆ ಎಂದು ವರದಿ ತಿಳಿಸಿದೆ.
ವಿದ್ಯುತ್ ಕಾಮಗಾರಿಗಳಿಗೆ ಪ್ರತ್ಯೇಕ ಟೆಂಡರ್‌ಗಳನ್ನು ಕರೆಯುವುದು ಹಲವಾರು ಸವಾಲುಗಳನ್ನು ಕೂಡ ಮುಂದೊಡ್ಡುತ್ತದೆ. ಬಹುಸಂಖ್ಯೆಯ ಗುತ್ತಿಗೆದಾರರ ಒಳಗೊಳ್ಳುವಿಕೆಯು ಸಮನ್ವಯದಲ್ಲಿನ ಸಮಸ್ಯೆಗಳು, ಸಂವಹನದಲ್ಲಿನ ತೊಡಕುಗಳು ಹಾಗೂ ಸಂಘರ್ಷಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇವು, ಯೋಜನೆಗಳ ಸಮಯಾವಧಿ ವಿಳಂಬಗೊಳ್ಳಲು ಎಡೆಮಾಡಿಕೊಡಬಹುದು ಎಂದು ಈ ಅಧ್ಯಯನ ವರದಿ ಅಭಿಪ್ರಾಯ ಪಟ್ಟಿದೆ.
ಟೆಂಡರ್‌ಗಳನ್ನು ಪ್ರತ್ಯೇಕವಾಗಿ ನೀಡುವ ಹಾಗೂ ಮೌಲ್ಯಮಾಪನ ಮಾಡುವ ಅನಿವಾರ್ಯವು ಯೋಜನಾವಧಿಯ ಸಮಯವನ್ನು ಗಣನೀಯವಾಗಿ ಅಧಿಕಗೊಳಿಸುತ್ತದೆ. ಟೆಂಡರ್ ಪ್ರಕ್ರಿಯೆಯ ಪ್ರತಿಯೊಂದು ಹಂತವೂ ವಿಳಂಬಕ್ಕೆ ಕೊಡುಗೆ ನೀಡುತ್ತದೆ. ಪ್ರತ್ಯೇಕ ಟೆಂಡರ್‌ಗಳು ಹೆಚ್ಚಿನ ಆಡಳಿತಾತ್ಮಕ ಮತ್ತು ಮಿತಿಮೀರದ ವೆಚ್ಚಗಳಿಗೆ ಕಾರಣವಾಗುತ್ತವೆ. ಸಮನ್ವಯದ ಕೊರತೆಯು ಯೋಜನೆಯ ವೆಚ್ಚವನ್ನು ಮತ್ತಷ್ಟು ಹೆಚ್ಚಿಸಿ ಅಸಮರ್ಪಕತೆ ಹಾಗೂ ನಕಲು ಮಾಡುವ ಪ್ರಯತ್ನಗಳಿಗೆ ಆಸ್ಪದವಾಗಬಹುದು ಎಂದು ವರದಿ ಸ್ಪಷ್ಟಪಡಿಸಿದೆ.
ಉಪಗುತ್ತಿಗೆ ನೀಡಲು ಸಲಹೆ
ಪ್ರಾಥಮಿಕ ನೀರು ಸರಬರಾಜು ಯೋಜನೆಗಳ ಒಪ್ಪಂದಗಳ ಅಡಿಯಲ್ಲಿ ವಿದ್ಯುತ್ ಕಾಮಗಾರಿಗಳ ಉಪಗುತ್ತಿಗೆಗೆ ಅನುಮತಿಸುವುದು ಈ ಸವಾಲುಗಳನ್ನು ಕಡಿಮೆ ಮಾಡಲು ಪರ್ಯಾಯ ಮಾರ್ಗವಾಗಿದೆ. ಈ ವಿಧಾನದ ಅನುಸರಣೆಯಿಂದ ಹಲವಾರು ಪ್ರಯೋಜನಗಳಿವೆ ಎಂದು ಅಧ್ಯಯನ ವರದಿ ಅಭಿಪ್ರಾಯ ಪಟ್ಟಿದೆ.
ಮುಖ್ಯ ಗುತ್ತಿಗೆದಾರರಿಗೆ ವಿದ್ಯುತ್ ಕಾಮಗಾರಿಗಳ ಉಪಗುತ್ತಿಗೆ ನೀಡಲು ಅನುವು ಮಾಡಿಕೊಡುವ ಮೂಲಕ ಸಮನ್ವಯದ ಸಮಸ್ಯೆಗಳು ಕಡಿಮೆಯಾಗಿ ಯೋಜನೆಯ ಮೇಲ್ವಿಚಾರಣೆ ಪ್ರಕ್ರಿಯೆ ಸರಳಗೊಳ್ಳುತ್ತದೆ. ಇದರಿಂದ, ಪ್ರತ್ಯೇಕ ಟೆಂಡರ್ ಪ್ರಕ್ರಿಯೆಗಳ ಅಗತ್ಯವನ್ನು ತೊಡೆದುಹಾಕಿ ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸಲು ಸಾಧ್ಯವಾಗುತ್ತದೆ. ಉಪಗುತ್ತಿಗೆಗೆ ಅನುಮತಿ ನೀಡುವುದು ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಹಂಚಿಕೆ ಮಾಡಲು ಮತ್ತು ಆಡಳಿತಾತ್ಮಕ ವೆಚ್ಚ ತಗ್ಗಿಸಲು ಸಹಕಾರಿಯಾಗುತ್ತದೆ ಎಂದು ವರದಿ ವಿವರಿಸಿದೆ.
ಉಪಗುತ್ತಿಗೆ ನೀಡುವ ಹಂತದಲ್ಲಿ ವಿದ್ಯುತ್ ಕಾಮಗಾರಿಗಳಿಗೆ ಸಂಬಂಧಿಸಿದ ಎಲ್ಲಾ ನಿಯಂತ್ರಕ ಮತ್ತು ಗುಣಮಟ್ಟದ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಮುಖ್ಯ ಗುತ್ತಿಗೆದಾರರನ್ನು ಜವಾಬ್ದಾರರನ್ನಾಗಿ ಮಾಡುವ ಅಗತ್ಯವಿರುತ್ತದೆ. ಇದು ಯೋಜನೆಯ ಸಮಗ್ರತೆಗೆ ಧಕ್ಕೆಯಾಗದಂತೆ ಅನುಸರಣೆಯನ್ನು ಖಾತರಿಗೊಳಿಸುತ್ತದೆ ಎಂದು ವರದಿಯಲ್ಲಿ ಅಭಿಪ್ರಾಯ ಪಡಲಾಗಿದೆ.
ಸಕ್ರಿಯ ಪಾಲುದಾರಿಕೆಯ ಪಾತ್ರ : ನೀರು ಸರಬರಾಜು ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸರ್ಕಾರಿ ಇಲಾಖೆಗಳು, ಸ್ಥಳೀಯ ಸಮುದಾಯಗಳು ಮತ್ತು ಖಾಸಗಿ ಭೂಮಾಲೀಕರು ಸೇರಿದಂತೆ ವಿವಿಧ ಪಾಲುದಾರರ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ಸಹಕಾರ ಅತ್ಯಗತ್ಯವಾಗಿದೆ.
ಪಾಲುದಾರರು ಸಮರ್ಪಕವಾಗಿ ತೊಡಗಿಸಿಕೊಳ್ಳದಿದ್ದರೆ ಅಥವಾ ಸಮಾಲೋಚನೆಯಲ್ಲಿ ಭಾಗಿಯಾಗದಿದ್ದರೆ ತಪ್ಪುಗ್ರಹಿಕೆಗಳು, ವಿಳಂಬ ಹಾಗೂ ಪ್ರತಿರೋಧಗಳು ಉದ್ಭವವಾಗುತ್ತವೆ. ಇವು ಯೋಜನಾ ವೆಚ್ಚದ ಹೆಚ್ಚಳಕ್ಕೆ ಎಡೆಮಾಡಿಕೊಡಬಹುದು. ಉದಾಹರಣೆಗೆ, ಪೈಪ್ ಲೈನ್ ಮೂಲಸೌಕರ್ಯವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯ ಕುರಿತು ಖಾಸಗಿ ಆಸ್ತಿ ಮಾಲೀಕರೊಂದಿಗಿನ ಸಂವಹನದ ಕೊರತೆಯು ವ್ಯಾಪಕ ಪ್ರಮಾಣದ ಹಾನಿ ಹಾಗೂ ದುರಸ್ತಿ ವೆಚ್ಚಗಳಿಗೆ ಕಾರಣವಾಗುತ್ತದೆ ಎಂದು ಈ ಅಧ್ಯಯನ ವರದಿಯಲ್ಲಿ ಪಟ್ಟಿ ಮಾಡಲಾಗಿದೆ.
ಸಿಬ್ಬಂದಿಯ ಅಸಮರ್ಪಕ ತರಬೇತಿ, ಕಳಪೆ ನಿರ್ವಹಣಾ ಅಭ್ಯಾಸಗಳು ಹಾಗೂ ಸೂಕ್ತ ನಿರ್ವಹಣಾ ಶಿಷ್ಟಾಚಾರಗಳ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕಾರ್ಯಾಚರಣೆಯಲ್ಲಿ ಅಸಮರ್ಥತೆ ತಲೆದೋರಿ, ವೆಚ್ಚ ಹೆಚ್ಚಳದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಸಂಪನ್ಮೂಲಗಳು ವ್ಯರ್ಥಗೊಳ್ಳಲು, ಪದೇ ಪದೇ ಸ್ಥಗಿತಗೊಳ್ಳಲು ಮತ್ತು ಹೆಚ್ಚಿನ ದುರಸ್ತಿ ವೆಚ್ಚಗಳಿಗೆ ಇವು ಕಾರಣವಾಗುತ್ತವೆ.
ಉದಾಹರಣೆಗೆ, ಯಾಂತ್ರೀಕೃತ ಉಳುಮೆ ಅಥವಾ ರಸ್ತೆ ಕಾಮಗಾರಿಗಳಿಂದ ವಿತರಣಾ ಜಾಲಕ್ಕೆ ಉಂಟಾಗುವ ಹಾನಿಯನ್ನು ತ್ವರಿತವಾಗಿ ಸರಿಪಡಿಸದಿರುವುದು ದುರಸ್ತಿ ವೆಚ್ಚ ಹಾಗೂ ನೀರಿನ ನಷ್ಟವನ್ನು ಅಧಿಕಗೊಳಿಸುತ್ತದೆ ಎಂದು ಮೌಲ್ಯಮಾಪನ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಗ್ರಾಮೀಣ ಕುಡಿಯುವ ನೀರಿನ 34 ಯೋಜನೆ ಅಸಮರ್ಪಕ; ಕಲುಷಿತ ನೀರು ಸರಬರಾಜು, ಬಹುಕೋಟಿ ಪೋಲು
ಈ 32 ಯೋಜನೆಗಳಲ್ಲಿ ಶೇ. 86 ರಷ್ಟು ಕುಡಿಯುವ ನೀರಿನ ಮಾದರಿಗಳು ಕುಡಿಯಲು ಯೋಗ್ಯವಾಗಿಲ್ಲ ಎಂಬ ಅಘಾತಕಾರಿ ಮಾಹಿತಿಯ ಕುರಿತು ʻದಿ ಫೈಲ್ʼ ವರದಿ ಪ್ರಕಟಿಸಿತ್ತು.





