236 ತಾಲೂಕುಗಳಲ್ಲಿ ತಾಲೂಕು ಕೌಶಲ್ಯ ಮಿಷನ್‌ಗಳೇ ಇಲ್ಲ, ಮೀಸಲಾತಿಯೂ ಇಲ್ಲ; ಕೈತಪ್ಪಿಹೋದ 175 ಕೋಟಿ

ಬೆಂಗಳೂರು;  ರಾಜ್ಯದಲ್ಲಿ ಯುವಕರಿಗೆ ಉದ್ಯೋಗ, ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತೆಯನ್ನು ಸಕ್ರಿಯಗೊಳಿಸುವ  ಉದ್ದೇಶ ಹೊಂದಿರುವ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ ಅಡಿಯ ಪ್ರಗತಿಯು ನಿರಾಶದಾಯಕವಾಗಿದೆ. ಅಲ್ಲದೇ ರಾಜ್ಯದ 236 ತಾಲೂಕುಗಳಲ್ಲಿ ತಾಲೂಕು ಕೌಶಲ್ಯ ಮಿಷನ್‌ಗಳನ್ನು ರಚಿಸಿಯೇ ಇಲ್ಲ.

 

ಅಲ್ಲದೇ ಕೌಶಲ್ಯ  ತರಬೇತಿ ಕೇಂದ್ರಗಳಲ್ಲಿ  ನಿಗದಿತ ಮೀಸಲಾತಿ ಪಾಲನ್ನು ಅನುಸರಿಸಿಲ್ಲ. ಹೀಗಾಗಿ ರಾಜ್ಯದ ಹಲವು  ತರಬೇತಿ  ಕೇಂದ್ರಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳ ಸಂಖ್ಯೆಯೂ ಕಡಿಮೆ ಪ್ರಮಾಣದಲ್ಲಿತ್ತು.  ಅದೇ ರೀತಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿಯೂ   ಪ್ರಾದೇಶಿಕ ಅಸಮಾನತೆ ಎದ್ದು ಕಂಡಿದೆ.

 

ಸಿಎಜಿಯು ಕರ್ನಾಟಕ ವಿಧಾನಮಂಡಲದಲ್ಲಿ  ಸಲ್ಲಿಸಿರುವ ವರದಿಯು   ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಜಾರಿಗೊಳಿಸಿರುವ ವಿವಿಧ ಯೋಜನೆಗಳು, ಬಿಡುಗಡೆಯಾದ ಅನುದಾನ ಮತ್ತು ಮಾಡಿರುವ ವೆಚ್ಚದ ಕುರಿತು ವಿಶ್ಲೇಷಣೆ ನಡೆಸಿದೆ.

 

ಸಿದ್ದರಾಮಯ್ಯ ಅವರು ಮೊದಲನೇ ಅವಧಿಯಲ್ಲಿ (2017) ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯನ್ನು ಜಾರಿಯಾಗಿತ್ತು. ಈ ಯೋಜನೆ ಜಾರಿಯಾಗಿ 8 ವರ್ಷಗಳಾದರೂ ಸಹ ರಾಜ್ಯದ ಬಹುತೇಕ ತಾಲೂಕುಗಳಲ್ಲಿ ಕೌಶಲ್ಯ ಮಿಷನ್‌ಗಳನ್ನು ರಚಿಸಿಲ್ಲ. ಹೀಗಾಗಿ ವಾರ್ಷಿಕ 5 ಲಕ್ಷ ಯುವಕರನ್ನು ಕುಶಲಿಗಳನ್ನಾಗಿಸುವಲ್ಲಿ ಪ್ರಗತಿಯು ನಿರೀಕ್ಷಿತ ಪ್ರಮಾಣದಲ್ಲಿಲ್ಲ ಎಂಬುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

 

ಸಿಎಂಕೆಕೆವೈ ಮಾರ್ಗಸೂಚಿಗಳ ಪ್ರಕಾರ ಸರ್ಕಾರಿ,  ಖಾಸಗಿ ವಲಯ ಮತ್ತು ಕೈಗಾರಿಕೆ ಸಂಸ್ಥೆಗಳ ಅಡಿಯಲ್ಲಿ ತರಬೇತಿ ಕೇಂದ್ರಗಳ (ಟಿಸಿ) ಮೂಲಕ ವೃತ್ತಿಪರ ತರಬೇತಿಗಳನ್ನು ಒದಗಿಸಬೇಕಿತ್ತು. ಇದಕ್ಕಾಗಿ ತಾಲೂಕು ಮಟ್ಟದಲ್ಲಿ ಕೌಶಲ್ಯ ಮಿಷನ್‌ಗಳನ್ನು ಸ್ಥಾಪಿಸಬೇಕಿತ್ತು. ಆದರೆ ರಾಜ್ಯದ 236 ತಾಲೂಕುಗಳಲ್ಲಿ 8 ವರ್ಷಗಳಾದರೂ  ಕೌಶಲ್ಯ ಮಿಷನ್‌ಗಳೇ ಸ್ಥಾಪನೆಯಾಗಿರಲಿಲ್ಲ.

 

ಹೀಗಾಗಿ ರಾಜ್ಯ ವಾರ್ಷಿಕ ಕ್ರಿಯಾ ಯೋಜನೆಯನ್ನು ತಯಾರಿಸುವ ಯೋಜನೆಯು ತಾಲೂಕು ಮಟ್ಟದಲ್ಲಿ ಕೌಶಲ್ಯ ಅಭಿವೃದ್ಧಿಯ ಅವಶ್ಯಕತೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಕೌಶಲ್ಯ ಇಲಾಖೆಯು ಗುರುತಿಸಿದ್ದ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ನೀಡಿದ್ದ ಕೌಶಲ್ಯ ತರಬೇತಿಗಳ ಪಟ್ಟಿಯನ್ನು ಪಡೆಯಬೇಕಿತ್ತು. ಹಾಗೆಯೇ ಸಂಪನ್ಮೂಲಗಳನ್ನು ಗರಿಷ್ಠಗೊಳಿಸಲು, ನಕಲು ತಪ್ಪಿಸಲು ಮತ್ತು ಫಲಾನುಭವಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಲು ಯೋಜನೆ ಸಿದ್ಧಪಡಿಸಬೇಕಿತ್ತು.

 

 

ಆದರೆ  ಆರಂಭಿಕ ಮೂರು ವರ್ಷಗಳಲ್ಲಿ ಲಭ್ಯವಿದ್ದ ಹಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕೌಶಲ್ಯ ಮಿಷನ್‌ಗೆ ಸಾಧ್ಯವಾಗಲಿಲ್ಲ. ಇದರಿಂದ 173.53 ಕೋಟಿ ಹಣವು ಕೈ ತಪ್ಪಿ ಹೋಯಿತು. ಅಲ್ಲದೇ ಅಗತ್ಯ ಆಧರಿತ ಕ್ರಿಯಾ ಯೋಜನೆಯನ್ನು ರೂಪಿಸದೇ ಒಟ್ಟು  341.11 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದರಿಂದ ಖರ್ಚು ಮಾಡದ ಅಥವಾ ಬಳಕೆಯಾಗದ ಬಾಕಿಯು ಅಂದಾಜು 119.89 ಕೋಟಿ ರು ಸಂಸ್ಥೆಗಳ ಬಳಿಯಲ್ಲಿಯೇ ಉಳಿದಿದೆ ಎಂದು ಸಿಎಜಿಯು ಲೆಕ್ಕ ಪರಿಶೋಧನೆ ವೇಳೆ ಪತ್ತೆ ಹಚ್ಚಿರುವುದು ಗೊತ್ತಾಗಿದೆ.

 

2017-18 ಮತ್ತು 2022-23ರ ನಡುವೆ ಕೌಶಲ್ಯ ಮಿಷನ್‌ ಒಟ್ಟು 366.76 ಕೋಟಿ ರು  ಹಂಚಿಕೆಯಾಗಿತ್ತು. ಅದರಲ್ಲಿ 230.01 ಕೋಟಿ ಬಿಡುಗಡೆ ಮಾಡಲಾಗಿತ್ತು. ಮತ್ತು 93.47 ಕೋಟಿ ರು ವೆಚ್ಚ ಮಾಡಿರುವುದಕ್ಕೆ ಹಣ ಬಳಕೆ ಪ್ರಮಾಣ ಪತ್ರಗಳನ್ನು ಅನುಷ್ಠಾನ ಸಂಸ್ಥೆಗಳು ಸಲ್ಲಿಸಿವೆ. ಆದರೆ ಏಜೆನ್ಸಿಗಳಿಗೆ ಬಿಡುಗಡೆಯಾದ ಉಳಿದ 136.54 ಕೋಟಿ ರು. ಗಳಿಗೆ ಹಣಬಳಕೆ ಪ್ರಮಾಣ ಪತ್ರಗಳನ್ನು ಪಡೆಯಲು ಕೌಶಲ್ಯ ಮಿಷನ್‌ಗೆ ಸಾಧ್ಯವಾಗಲಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

2018-19ರಿಂದ 2022-23ರವರೆಗೆ 13,15,669 ಅಭ್ಯರ್ಥಿಗಳ ಪೈಕಿ 1,15,822 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. ಆದರೆ ತರಬೇತಿ ಪಡೆದ ಅಭ್ಯರ್ಥಿಗಳಲ್ಲಿ 3,487 ಅಭ್ಯರ್ಥಿಗಳು ಮಾರ್ಗಸೂಚಿಗಳಲ್ಲಿ ನಿರ್ದಿಷ್ಟಪಡಿಸಿದ ವಯಸ್ಸಿನ ಮಿತಿಯನ್ನು ಮೀರಿದ್ದರಿಂದಾಗಿ ಅನರ್ಹಗೊಂಡಿದ್ದರು. ಮೂಲ ಸೌಕರ್ಯ, ಸಲಕರಣೆಗಳ ಕೊರತೆ ಮತ್ತು ಟಿಸಿಗಳ ತಪ್ಪಾದ ಶ್ರೇಣಿಕರಣಗಳಂತಹ ತರಬೇತಿ ಕೇಂದ್ರಗಳ ಮಾನ್ಯತೆಯಲ್ಲಿ ನ್ಯೂನತೆಗಳು ಕಂಡು ಬಂದಿವೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.

 

ಯೋಜನೆಗಳು ಮತ್ತು ಅದರ ಮಾದರಿಗಳನ್ನು ಪ್ರಚಾರ ಮಾಡಲು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಗಮನಾರ್ಹವಾಗಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಹೀಗಾಗಿ 4.70 ಕೋಟಿ ರು ವೆಚ್ಚದಲ್ಲಿ ರಚಿಸಿದ್ದ ಮೂಲಸೌಕರ್ಯಗಳು ಕಡಿಮೆ ಬಳಕೆಯಾಗಿದ್ದವು. 2017-2023ರ ಅವಧಿಯಲ್ಲಿ ವರ್ಷಕ್ಕೆ 5 ಲಕ್ಷ ತರಬೇತಿಯ ಗುರಿಗೆ ಎದುರಾಗಿ ಕೇವಲ 1,15,822 ವ್ಯಕ್ತಿಗಳಿಗೆ ಮಾತ್ರ ತರಬೇತಿ ನೀಡಲಾಗಿದೆ. ಇದಲ್ಲದೇ ಕೇವಲ 21,055 ಅಭ್ಯರ್ಥಿಗಳು ಮಾತ್ರ ತರಬೇತಿ ನಂತರ ಉದ್ಯೋಗಗಳನ್ನು ಪಡೆದರು. ಇದು ಕಡ್ಡಾಯವಾಗಿದ್ದ ಶೇ.70ಕ್ಕಿಂತಲೂ ಕಡಿಮೆಯಾಗಿದೆ ಎಂದು ಸಿಎಜಿ ವರದಿಯು ವಿಶ್ಲೇಷಣೆ ಮಾಡಿದೆ.

 

ಮತ್ತೊಂದು ಸಂಗತಿ ಎಂದರೇ 4,652 ಅಭ್ಯರ್ಥಿಗಳನ್ನು ಹೊಂದಿದ್ದ 165 ಗುಂಪುಗಳನ್ನು ಒಳಗೊಂಡ 88 ತರಬೇತಿ ಕೇಂದ್ರಗಳಲ್ಲಿ  ನಿಗದಿತ ಮೀಸಲಾತಿ ಪಾಲನ್ನು ಅನುಸರಿಸಿಲ್ಲ. ನಿರ್ದಿಷ್ಟವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳ ಸಂಖ್ಯೆಯು ಕಡ್ಡಾಯವಾಗಿ ನಿಗದಿಪಡಿಸಿದ್ದ ಸಂಖ್ಯೆಗಿಂತಲೂ ಕಡಿಮೆ ಇತ್ತು. 930 ಅಭ್ಯರ್ಥಿಗಳ ಪೈಕಿ  ಪರಿಶಿಷ್ಟ ಜಾತಿಗೆ ಸೇರಿದ ಶೇ.20ರಷ್ಟು  ಮಂದಿಯಿದ್ದರು. ಮತ್ತು ಪರಿಶಿಷ್ಟ ಪಂಗಡದಲ್ಲಿ ಶೇ.7ರಷ್ಟಿತ್ತು.

 

ಜಿಲ್ಲಾ ಕೌಶಲ್ಯ ಮಿಷನ್‌ಗಳೂ ಸಹ ತಮ್ಮ ತಪಾಸಣೆ ಸಮಯದಲ್ಲಿ ಕೇಂದ್ರಗಳು ಮೀಸಲಾತಿ ನೀತಿಯನ್ನು ಅನುಸರಿಸುತ್ತಿವೆಯೇ ಅಥವಾ ಇಲ್ಲವೇ ಎಂದು ಪರಿಶೀಲನೆ ನಡೆಸಿರಲೇ ಇಲ್ಲ. ಮತ್ತು ಈ ಅಂಶವನ್ನು ಖಚಿತಪಡಿಸಿಕೊಳ್ಳಲೂ ಇಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಿದೆ.

 

 

ಇನ್ನು, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೌಶಲ್ಯ ಮಿಷನ್‌ ತರಬೇತಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿಯೂ  ಗಮನಾರ್ಹವಾಗಿ  ಪ್ರಾದೇಶಿಕ ಅಸಮಾನತೆ ಇತ್ತು. ಬೆಂಗಳೂರು, ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳ ಪ್ರಮಾಣವು ಕಳೆದ 5 ವರ್ಷಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ತರಬೇತಿ ಪಡೆದ ಒಟ್ಟು ತರಬೇತಿಯ ಶೇ.1ಕ್ಕಿಂತಲೂ ಕಡಿಮೆ ಇತ್ತು ಎಂಬುದನ್ನು ಸಿಎಜಿಯು ಪತ್ತೆ ಹಚ್ಚಿದೆ.

 

‘ಯೋಜನೆಯ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನದಲ್ಲಿ ಆಡಳಿತ ಮಂಡಳಿಯ ರಚನೆಯಿಲ್ಲದಿರುವುದು ಯೋಜನೆಯ ಏಕಕಾಲಿಕ ಮತ್ತು ಸಮಗ್ರ ಮೌಲ್ಯಮಾಪನ ಕೊರತೆ, ಕೌಶಲ್ಯ ಮಿಷನ್‌ನಿಂದ ಕ್ಲೇಮುಗಳ ಇತ್ಯರ್ಥದಲ್ಲಿ ವಿಳಂಬ, ನಿಯಮಿತ ತಪಾಸಣೆಗಳನ್ನು ನಡೆಸುವ ಮೂಲಕ ತಮ್ಮ ಜವಾಬ್ದಾರಿಗಳನ್ನು ಪೂರೈಸಲು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿಗಳ ಅಸಮರ್ಥತೆಯೂ ಇತ್ತು,’ ಎಂದು ಸಿಎಜಿಯು ಹಲವು ನ್ಯೂನತೆಗಳನ್ನು ಹೊರಗೆಡವಿದೆ.

 

ಶಿಫಾರಸ್ಸುಗಳೇನು?

 

ಕ್ಷೇತ್ರ ಮಟ್ಟದಲ್ಲಿ ಸಮನ್ವಯ ಸಾಧಿಸಲು ತಾಲೂಕು ಮಟ್ಟದ ಮಿಷನ್‌ಗಳನ್ನು ರಚಿಸಬೇಕು. ಯೋಜನೆಗಳ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ತರಬೇತಿ ಕ್ರಮಗಳಲ್ಲಿ ದಕ್ಷತೆ ಮತ್ತು ಪರಿಣಾಮಗಳನ್ನು ಗರಿಷ್ಠಗೊಳಿಸಬೇಕು. ಇತರೆ ಸರ್ಕಾರಿ ಇಲಾಖೆಗಳ ಯೋಜನೆಗಳೊಂದಿಗೆ ಪ್ರಯತ್ನಗಳನ್ನು ಸಮನ್ವಯಗೊಳಿಸಬೇಕು ಎಂದು ಶಿಫಾರಸ್ಸು ಮಾಡಿದೆ.

ಪ್ರಾದೇಶಿಕ ಅಸಮತೋಲನವನ್ನು ಪರಿಹರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ವಾಸ್ತವಿಕ ವಾರ್ಷಿಕ ತರಬೇತಿ ಗುರಿಗಳನ್ನು ನಿಗದಿಪಡಿಸಬೇಕು. ಪರಿಣಾಮಕಾರಿ ಮೇಲ್ವಿಚಾರಣೆ ನಡೆಸಬೇಕು ಎಂದು ಶಿಫಾರಸ್ಸು ಮಾಡಿರುವುದು ವರದಿಯಿಂದ ಗೊತ್ತಾಗಿದೆ.

 

ಕೌಶಲ್ಯಾಭಿವೃದ್ಧಿಗೆ 1,500 ಕೋಟಿ ರು; ಶಾಲಾ ಕಾಲೇಜು ಕಟ್ಟಡಗಳ ಅನುದಾನಕ್ಕೆ ಕೈ ಹಾಕಿದ ಸರ್ಕಾರ

 

ಕೌಶಲ್ಯಾಭಿವೃದ್ಧಿಗೆ 1,500 ಕೋಟಿ ರು ಗಳನ್ನು ಬೇಡಿಕೆ ಇರಿಸಿದ್ದ ಇಲಾಖೆಯು ಇದಕ್ಕಾಗಿ ಶಾಲಾ ಕಾಲೇಜುಗಳ ಕಟ್ಟಡಗಳ ನಿಧಿಗೆ ಕೈ ಹಾಕಿತ್ತು. ಈ ಕುರಿತು ‘ದಿ ಫೈಲ್‌‘ 2023ರ ನವೆಂಬರ್‍‌ 7ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

SUPPORT THE FILE

Latest News

Related Posts