ಬೆಂಗಳೂರು: ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿಇ) ಅಡಿ ಭೌತಿಕವಾಗಿ ಮಕ್ಕಳು ಶಾಲೆಗಳಿಗೆ ಹಾಜರಾಗದೇ ಇದ್ದರೂ ಕೇವಲ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ತೋರಿಸಿ, ಕೆಲ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಇಲಾಖೆಯನ್ನೇ ವಂಚಿಸುತ್ತಿರುವುದನ್ನು ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಒಪ್ಪಿಕೊಂಡಿದ್ದಾರೆ.
ಬೆಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ಇಂತಹ ಪ್ರಕರಣ ಇರುವುದು ಇಲಾಖೆಯ ಗಮನಕ್ಕೆ ಬಂದಿದೆ ಎಂದು ಅವರು ವಿಧಾನಪರಿಷತ್ತಿಗೆ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಅವರು, ಈಗಾಗಲೇ ಉಪ ನಿರ್ದೇಶಕರ ಹಂತದಲ್ಲಿ ಈ ರೀತಿ ವಂಚನೆ ಮಾಡಿದ ಶಾಲೆಗಳಿಗೆ ನೋಟಿಸ್ ಜಾರಿ ಮಾಡಿ ಹೆಚ್ಚುವರಿಯಾಗಿ ಪಾವತಿಸಲಾಗಿರುವ ಅನುದಾನವನ್ನು ಹಿಂಪಡೆಯಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಉತ್ತರ ವಲಯದಲ್ಲಿ ʻಜೆ.ಕೆ. ನಾಯ್ಡು ಶಾಲೆʼ ಎಂಬ ಹೆಸರಿನ ಶಿಕ್ಷಣ ಸಂಸ್ಥೆಗೆ ಸೇರಿದ ಒಟ್ಟು 15 ಶಾಲೆಗಳಲ್ಲಿ ಈ ರೀತಿಯ ವಂಚನೆ ನಡೆದಿದೆ ಎಂದು ಸಚಿವರು ತಾವು ನೀಡಿದ ಉತ್ತರದಲ್ಲಿ ವಿವರಿಸಿದ್ದಾರೆ.
ಶಾಲೆಯವರು ನೀಡಿದ ದಾಖಲಾತಿಯ ನೈಜತೆಯನ್ನು ಪರಿಶೀಲಿಸದೆ ಆರ್‌ಟಿಇ ನೋಡಲ್ ಅಧಿಕಾರಿ ಶೇ.25ರಷ್ಟು ಸೀಟುಗಳನ್ನು ನಿಯಮಬಾಹಿರವಾಗಿ ಹಂಚಿಕೆ ಮಾಡಿರುವುದು ಬೆಳಕಿಗೆ ಬಂದಿದೆಯೇ ಎಂದು ಕೇಳಿದ ಪ್ರಶ್ನೆಗೆ ಸಚಿವ ಮಧು ಬಂಗಾರಪ್ಪʻಹೌದುʼ ಎಂದು ಉತ್ತರಿಸಿದ್ದಾರೆ.
ಹಾಗಿದ್ದರೆ ಈ ವಂಚನೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಳಿದ ಪ್ರಶ್ನೆಗೆ , ʻʻಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆಯ ಉತ್ತರ ವಲಯದ ಆರ್‌ಟಿಇ ನೋಡಲ್ ಅಧಿಕಾರಿ ಹಾಗೂ ಶಿಕ್ಷಣ ಸಂಯೋಜಕ ಜಗದೀಶ್ ಎಂಬುವರನ್ನು ಅಮಾನತುಗೊಳಿಸಲಾಗಿದೆ. ಈ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಕ್ರಮವಹಿಸಲಾಗುತ್ತಿದೆʼʼ ಎಂದು ಸಚಿವರು ಮಾಹಿತಿ ಒದಗಿಸಿದ್ದಾರೆ.
ಕೇಂದ್ರ ಸರ್ಕಾರವು ಶಿಕ್ಷಣ ಹಕ್ಕು ಕಾಯ್ದೆಯನ್ನು ರೂಪಿಸುತ್ತಿದ್ದಂತೆಯೇ ಅದನ್ನು ದೇಶದಲ್ಲಿಯೇ ಮೊದಲು ಜಾರಿಗೆ ತಂದಿದ್ದು ಕರ್ನಾಟಕ. 2012ರಿಂದಲೇ ಈ ಕಾಯ್ದೆ ನಮ್ಮ ರಾಜ್ಯದಲ್ಲಿ ಜಾರಿಯಲ್ಲಿದೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಕಾಯ್ದೆಯನ್ನು ದುರ್ಬಲಗೊಳಿಸುತ್ತಿವೆ ಮತ್ತು ಕಾಯ್ದೆಯ ಅಡಿಯಲ್ಲಿ ವಂಚಿಸುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಲೇ ಇತ್ತು.
ಖಾಸಗಿ ಶಾಲೆಗಳಿಗೆ 1,968.26 ಕೋಟಿ ಪಾವತಿ
ಕಳೆದ ಐದು ವರ್ಷಗಳ ಅವಧಿಯಲ್ಲಿ ಸರ್ಕಾರವು ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿಇ) ಅಡಿ ದಾಖಲಾದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖಾಸಗಿ ಅನುದಾನರಹಿತ ಶಾಲೆಗಳಿಗೆ 1,968.26 ಕೋಟಿ ರು.ಗಳನ್ನು ಮರುಪಾವತಿ ಮಾಡಿದೆ. ಒಟ್ಟು 15.25 ಲಕ್ಷ ಆರ್‌ಟಿಇ ಮಕ್ಕಳು ಇದರಿಂದಾಗಿ ಶಿಕ್ಷಣ ಪಡೆದಿದ್ದಾರೆ ಎಂಬ ಮಾಹಿತಿಯೂ ಶಿಕ್ಷಣ ಸಚಿವರ ಉತ್ತರದಲ್ಲಿದೆ.
ವರ್ಷದಿಂದ ವರ್ಷಕ್ಕೆ ಆರ್‌ಟಿಇ ಮೂಲಕ ಶಿಕ್ಷಣ ಪಡೆಯುವ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಯುತ್ತಿದೆ. 2020-21ನೇ ಸಾಲಿನಲ್ಲಿ 4,62,655 ಮಕ್ಕಳು ಆರ್‌ಟಿಇ ಮೂಲಕ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಶಿಕ್ಷಣ ಪಡೆದಿದ್ದರು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಅಂದರೆ 2024-25ನೇ ಸಾಲಿನಲ್ಲಿ ಕೇವಲ 1,19,018 ಮಕ್ಕಳು ಮಾತ್ರ ಆರ್‌ಟಿಐನ ಲಾಭ ಪಡೆದುಕೊಂಡಿದ್ದಾರೆ.
2020-21 ನೇ ಶೈಕ್ಷಣಿಕ ಸಾಲಿನಲ್ಲಿ 4,62, 655 ಮಕ್ಕಳು ಆರ್‌ಟಿಐ ಅಡಿಯಲ್ಲಿ ಅನುದಾನರಹಿತ ಶಾಲೆಗಳಿಗೆ ಸೇರ್ಪಡೆಯಾಗಿದ್ದರು. ಒಟ್ಟು 10,566 ಶಾಲೆಗಳು ಇವರಿಗೆ ಪ್ರವೇಶ ನೀಡಿದ್ದವು. ಹೀಗಾಗಿ ಈ ಶಾಲೆಗಳಿಗೆ ಶಿಕ್ಷಣ ಇಲಾಖೆಯು 605.99 ಕೋಟಿ ರು. ಮರುಪಾವತಿ ಮಾಡಿತ್ತು ಎಂಬುದು ಈ ಉತ್ತರದಿಂದ ಗೊತ್ತಾಗಿದೆ. ಕೋವಿಡ್ ಕಾರಣದಿಂದಾಗಿ ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಸೇರ್ಪಡೆಯಾಗಿದ್ದ ಮಕ್ಕಳ ಸಂಖ್ಯೆಯಲ್ಲಿ ಈ ವರ್ಷ ದಿಢೀರ್ ಹೆಚ್ಚಳವಾಗಿತ್ತು.
2021-22ನೇ ಸಾಲಿನಲ್ಲಿ 3,96,592 ಮಕ್ಕಳು ಆರ್‌ಟಿಇ ಅಡಿಯಲ್ಲಿ ಅನುದಾನರಹಿತ ಶಾಲೆಗಳಿಗೆ ಸೇರ್ಪಡೆಯಾಗಿದ್ದು, ಒಟ್ಟು9,794 ಶಾಲೆಗಳು ಇವರಿಗೆ ಪ್ರವೇಶ ನೀಡಿದ್ದವು. ಹೀಗಾಗಿ ಈ ಶಾಲೆಗಳಿಗೆ ಶಿಕ್ಷಣ ಇಲಾಖೆಯು 458.44 ಕೋಟಿ ರು. ಮರುಪಾವತಿ ಮಾಡಿತ್ತು ಎಂಬುದು ಈ ಉತ್ತರದಿಂದ ತಿಳಿದು ಬಂದಿದೆ.
2022-23ನೇ ಸಾಲಿನಲ್ಲಿ 3,15,252 ಮಕ್ಕಳು ಆರ್‌ಟಿಇ ಅಡಿಯಲ್ಲಿ ಅನುದಾನರಹಿತ ಶಾಲೆಗಳಿಗೆ ಸೇರ್ಪಡೆಯಾಗಿದ್ದು, ಒಟ್ಟು8,681 ಶಾಲೆಗಳು ಇವರಿಗೆ ಪ್ರವೇಶ ನೀಡಿದ್ದವು. ಹೀಗಾಗಿ ಈ ಶಾಲೆಗಳಿಗೆ ಶಿಕ್ಷಣ ಇಲಾಖೆಯು 424.20 ಕೋಟಿ ರು. ಮರುಪಾವತಿ ಮಾಡಿತ್ತು ಎಂಬುದು ಶಿಕ್ಷಣ ಸಚಿವರು ನೀಡಿರುವ ಉತ್ತರದಿಂದ ಗೊತ್ತಾಗಿದೆ.
2023-24ನೇ ಸಾಲಿನಲ್ಲಿ 2,31,723 ಮಕ್ಕಳು ಆರ್‌ಟಿಇ ಅಡಿಯಲ್ಲಿ ಅನುದಾನರಹಿತ ಶಾಲೆಗಳಿಗೆ ಸೇರ್ಪಡೆಯಾಗಿದ್ದು, ಒಟ್ಟು7,168 ಶಾಲೆಗಳು ಇವರಿಗೆ ಪ್ರವೇಶ ನೀಡಿದ್ದವು. ಹೀಗಾಗಿ ಈ ಶಾಲೆಗಳಿಗೆ ಶಿಕ್ಷಣ ಇಲಾಖೆಯು 322.65 ಕೋಟಿ ರು. ಮರುಪಾವತಿ ಮಾಡಿತ್ತು ಎಂದು ಶಿಕ್ಷಣ ಸಚಿವರು ಈ ಉತ್ತರದಲ್ಲಿ ತಿಳಿಸಿದ್ದಾರೆ.
2024-25ನೇ ಸಾಲಿನಲ್ಲಿ 1,19,018 ಮಕ್ಕಳು ಆರ್‌ಟಿಇ ಅಡಿಯಲ್ಲಿ ಅನುದಾನರಹಿತ ಶಾಲೆಗಳಿಗೆ ಸೇರ್ಪಡೆಯಾಗಿದ್ದು, ಒಟ್ಟು4,227 ಶಾಲೆಗಳು ಇವರಿಗೆ ಪ್ರವೇಶ ನೀಡಿದ್ದವು. ಹೀಗಾಗಿ ಈ ಶಾಲೆಗಳಿಗೆ ಶಿಕ್ಷಣ ಇಲಾಖೆಯು 156.98 ಕೋಟಿ ರು. ಮರುಪಾವತಿ ಮಾಡಿತ್ತು ಎಂಬುದು ಈ ಉತ್ತರದಿಂದ ಗೊತ್ತಾಗಿದೆ.
ಅನುದಾನಿತ ಶಾಲೆಗಳಲ್ಲಿ ಆರ್‌ಟಿಇ ಮೂಲಕ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. 2020-21 ನೇ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 1,987 ಮಕ್ಕಳು ಆರ್‌ಟಿಇ ಮೂಲಕ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ನಡೆಸಿದ್ದರು. 2024-25ನೇ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 2,109 ವಿದ್ಯಾರ್ಥಿಗಳು ಆರ್‌ಟಿಇ ಮೂಲಕ ಪ್ರವೇಶ ಪಡೆದಿದ್ದಾರೆ ಎಂದು ಸಚಿವರು ನೀಡಿರುವ ಉತ್ತರದಿಂದ ಗೊತ್ತಾಗಿದೆ.
103 ಕೋಟಿ ರು. ಮಾರ್ಗಪಲ್ಲಟ; ಆರ್‌ಟಿಇ ಅರ್ಹ 64,000ಕ್ಕೂ ಹೆಚ್ಚು ಮಕ್ಕಳು ಖಾಸಗಿ ಶಾಲೆ ಶಿಕ್ಷಣದಿಂದ ವಂಚಿತ!
ಈ ಹಿಂದೆ ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಶುಲ್ಕ ಮರುಪಾವತಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲಿನ ಶಾಸನ ಬದ್ಧ ಅನುದಾನದ ಪೈಕಿ ಒಟ್ಟು 103 ಕೋಟಿ ರು.ಗಳನ್ನು ಮಾರ್ಗಪಲ್ಲಟಗೊಳಿಸಿದ್ದರಿಂದಾಗಿ ಸುಮಾರು 64 ಸಾವಿರಕ್ಕೂ ಹೆಚ್ಚು ಮಕ್ಕಳು ಉತ್ತಮ ಗುಣಮಟ್ಟದ ಖಾಸಗಿ ಶಾಲೆಗಳಲ್ಲಿನ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂಬ ಗುರುತರವಾದ ಆರೋಪ ಕೇಳಿ ಬಂದಿತ್ತು.