ಬೆಂಗಳೂರು; ಸ್ಮಾರ್ಟ್ ಮೀಟರ್ ಅಳವಡಿಕೆ ಸಂಬಂಧ ವಿದ್ಯುತ್ ಸರಬರಾಜು ಕಂಪನಿಗಳು ಆಹ್ವಾನಿಸಿದ್ದ ಟೆಂಡರ್‍ನಲ್ಲಿ ಭಾಗವಹಿಸಿದ್ದ ರಾಜಶ್ರೀ ಎಲೆಕ್ಟ್ರಿಕಲ್ ಸೇರಿದಂತೆ ಇನ್ನಿತರೆ ಕಂಪನಿಗಳು, ವಿವಿಧ ದರಗಳನ್ನು ನಮೂದಿಸಿರುವುದು ಇದೀಗ ಬಹಿರಂಗವಾಗಿದೆ.
ಒಂದೇ ಮಾದರಿ ಮತ್ತು ನಿರ್ದಿಷ್ಟತೆಗಳನ್ನೊಳಗೊಂಡಿರುವ ಉಪಕರಣಗಳಿಗೆ ವಿವಿಧ ಕಂಪನಿಗಳು ವಿವಿಧ ದರಗಳನ್ನು ಟೆಂಡರ್‍ನಲ್ಲಿ ನಮೂದಿಸಿದೆ. ಒಂದೇ ಉಪಕರಣಕ್ಕೆ ವಿವಿಧ ಕಂಪನಿಗಳು ನಮೂದಿಸಿರುವ ದರದಲ್ಲಿ 801, 1,942, 2,676 ರು ನಷ್ಟು ವ್ಯತ್ಯಾಸವಿರುವುದು ಕಂಡುಬಂದಿದೆ.
ಸ್ಮಾರ್ಟ್ ಮೀಟರ್ ಅಳವಡಿಕೆ ಸಂಬಂಧ ಆಹ್ವಾನಿಸಿದ್ದ ಟೆಂಡರ್‍ನಲ್ಲಿ ಯಾವುದೇ ಅಕ್ರಮವೆಸಗಿಲ್ಲ, ಭ್ರಷ್ಟಾಚಾರ ನಡೆದಿಲ್ಲ ಮತ್ತು ಯಾವುದೇ ರೀತಿಯಲ್ಲಿಯೂ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಕಾಂಗ್ರೆಸ್ ಸರ್ಕಾರವು ವಿಧಾನಮಂಡಲದ ಅಧಿವೇಶನದಲ್ಲಿ ಸಮರ್ಥಿಸಿಕೊಳ್ಳುತ್ತಿರುವ ಬೆನ್ನಲ್ಲೇ ಟೆಂಡರ್ ಪ್ರಕ್ರಿಯೆ ಮತ್ತು ಕಂಪನಿಗಳು ನಮೂದಿಸಿದ್ದ ದರಗಳು ಮುನ್ನೆಲೆಗೆ ಬಂದಿವೆ.
ಶಾಸಕ ಸಿ ಟಿ ರವಿ ಅವರು ಈ ಕುರಿತು ಚುಕ್ಕೆ ಗುರುತಿನ ಕೇಳಿದ್ದರು. ಇದಕ್ಕೆ ಉತ್ತರಿಸಿರುವ ಕೆ ಜೆ ಜಾರ್ಜ್ ಅವರು ಟೆಂಡರ್‍ನಲ್ಲಿ ಭಾಗವಹಿಸಿದ್ದ ಕಂಪನಿಗಳು ಮತ್ತು ನಮೂದಿಸಿದ್ದ ದರಗಳ ವಿವರಗಳನ್ನು ಒದಗಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ರಾಜಶ್ರೀ ಎಲೆಕ್ಟ್ರಿಕಲ್ಸ್ ನಮೂದಿಸಿದ್ದ ದರವೆಷ್ಟು?
ಸಿಂಗಲ್ ಫೇಸ್ ಸ್ಮಾರ್ಟ್ ಮಿಟರ್ -ಕಮ್ಯುನಿಕೇಷನ್ ಮಾಡ್ಯುಲ್ ಪಾಲಿಕಾರ್ಬೋನೆಟ್ ಬಾಕ್ಸ್ ಅಳವಡಿಸಲು ರಾಜಶ್ರಿ ಎಲೆಕ್ಟ್ರಿಕಲ್ಸ್ 5,949.00 ರು ನಮೂದಿಸಿದ್ದರು. ವಿ ಆರ್ ಪಾಟೀಲ್ ವಿವಿಧ್ ವಿದ್ಯುತ್ ನಿರ್ಮಾಣ್ ಲಿಮಿಟೆಡ್ 6,200 ರು ನಮೂದಿಸಿತ್ತು. ತ್ರೀ ಫೇಸ್ ಸಿ ಟಿ ಆಪರೇಟೆಡ್ ಕಮ್ಯುನಿಕೇಷನ್ ಮಾಡ್ಯುಲ್ ಪಾಲಿ ಕಾರ್ಬೋನೆಟ್ ಬಾಕ್ಸ್‌ಗೆ 11,089 ರು ಗಳನ್ನು ರಾಜಶ್ರೀ ಎಲೆಕ್ಟ್ರಿಕಲ್ಸ್ ನಮೂದಿಸಿದ್ದರೇ ವಿ ಆರ್ ಪಾಟೀಲ್ ವಿವಿಧ್ ವಿದ್ಯುತ್ ನಿರ್ಮಾಣ್ ಲಿಮಿಟೆಡ್ 12,500 ರು ಗಳನ್ನು ನಮೂದಿಸಿತ್ತು.
ಅದೇ ರೀತಿ ತ್ರೀ ಫೇಸ್ ಸಿ ಟಿ ಆಪರೇಟೆಡ್ ಸ್ಮಾರ್ಟ್ ಮೀಟರ್ ಕಮ್ಯುನಿಕೇಷನ್ ಮಾಡ್ಯುಲ್ ಮತ್ತು ಪಾಲಿಕಾರ್ಬೋನೇಟ್ ಬಾಕ್ಸ್ 4 ಸಂಖ್ಯೆ ಸಿ ಟಿ ರಾಜಶ್ರೀ ಎಲೆಕ್ಟ್ರಿಕಲ್ 31,599 ರು ನಮೂದಿಸಿತ್ತು. ಇದೇ ಉಪಕರಣಕ್ಕೆ ವಿ ಆರ್ ಪಾಟೀಲ್ ವಿವಿಧ್ ವಿದ್ಯುತ್ ನಿರ್ಮಾಣ್ ಲಿಮಿಟೆಡ್ 33,000 ರು.ಗಳನ್ನು ನಮೂದಿಸಿತ್ತು.
ಈ ಟೆಂಡರ್‍ನಲ್ಲಿ ರಾಜಶ್ರೀ ಎಲೆಕ್ಟ್ರಿಕಲ್ ಎಲ್ 1 ಬಿಡ್‌ದಾರರಾಗಿ ಹೊರ ಹೊಮ್ಮಿತ್ತು. ನಂತರ ಈ ಕಂಪನಿಯೊಂದಿಗೆ ದರ ಸಂಧಾನ ನಡೆಸಿ ಗುತ್ತಿಗೆ ಆದೇಶ ನೀಡಲಾಗಿತ್ತು.
ಗುತ್ತಿಗೆ ಆದೇಶದಲ್ಲೇನಿದೆ?
ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್ -ಕಮ್ಯುನಿಕೇಷನ್ ಮಾಡ್ಯುಲ್ ಪಾಲಿಕಾರ್ಬೋನೆಟ್ ಬಾಕ್ಸ್ ಅಳವಡಿಸಲು 4,998 ರು (ಜಿಎಸ್‌ಟಿ ಸೇರಿಸಿ)ಗೆ ಕಾರ್ಯಾದೇಶ ಹೊರಡಿಸಿತ್ತು. ತ್ರೀ ಫೇಸ್ ಸಿ ಟಿ ಆಪರೇಟೆಡ್ ಸ್ಮಾರ್ಟ್ ಮಿಟರ್ ಕಮ್ಯುನಿಕೇಷನ್ ಮಾಡ್ಯುಲ್ ಮತ್ತು ಪಾಲಿಕಾರ್ಬೋನೇಟ್ ಬಾಕ್ಸ್ 4 ಸಂಖ್ಯೆ ಗೆ 8,880 ರು., ಮತ್ತು 28,080 ದರಕ್ಕೆ ಕಾರ್ಯಾದೇಶ ನೀಡಿರುವುದು ಉತ್ತರದಿಂದ ಗೊತ್ತಾಗಿದೆ.
ಹೆಸ್ಕಾಂ ಗೆ ನಮೂದಿಸಿದ್ದ ದರವೇನು?
ಸಿಂಗಲ್ ಫೇಸ್ ಸ್ಮಾರ್ಟ್ ಮಿಟರ್ -ಕಮ್ಯುನಿಕೇಷನ್ ಮಾಡ್ಯುಲ್ ಪಾಲಿಕಾರ್ಬೋನೆಟ್ ಬಾಕ್ಸ್ ಅಳವಡಿಸಲು ಸ್ಮಾರ್ಟ್ ವೆಂಚರ್ಸ್ 5,148.00 ರು ನಮೂದಿಸಿತ್ತು. ಐಡಿಯಲ್ ಎಂಟರ್ ಪ್ರೈಸೆಸ್ 5,247.00 ರು ನಮೂದಿಸಿತ್ತು. ತ್ರೀ ಫೇಸ್ ಸಿ ಟಿ ಆಪರೇಟೆಡ್ ಕಮ್ಯುನಿಕೇಷನ್ ಮಾಡ್ಯುಲ್ ಪಾಲಿ ಕಾರ್ಬೋನೆಟ್ ಬಾಕ್ಸ್‌ಗೆ 9,147 ರು ಗಳನ್ನು ಸ್ಮಾರ್ಟ್ ವೆಂಚರ್ಸ್ ನಮೂದಿಸಿದ್ದರೇ ಐಡಿಯಲ್ ಎಂಟರ್ ಪ್ರೈಸೆಸ್ 9,323 ರು ಗಳನ್ನು ನಮೂದಿಸಿತ್ತು.
ಅದೇ ರೀತಿ ತ್ರೀ ಫೇಸ್ ಸಿ ಟಿ ಆಪರೇಟೆಡ್ ಸ್ಮಾರ್ಟ್ ಮಿಟರ್ ಕಮ್ಯುನಿಕೇಷನ್ ಮಾಡ್ಯುಲ್ ಮತ್ತು ಪಾಲಿಕಾರ್ಬೋನೇಟ್ ಬಾಕ್ಸ್ 4 ಸಂಖ್ಯೆ ಸಿ ಟಿ ಸ್ಮಾರ್ಟ್ ವೆಂಚರ್ಸ್ 28,993 ರು ನಮೂದಿಸಿತ್ತು. ಇದೇ ಉಪಕರಣಕ್ಕೆ ಐಡಿಯಲ್ ಎಂಟರ್ ಪ್ರೈಸೆಸ್ 29,481 ರು.ಗಳನ್ನು ನಮೂದಿಸಿತ್ತು.
ಎಲ್ ಬಿಡ್‌ದಾರರಾದ ಸ್ಮಾರ್ಟ್ ವೆಂಚರ್ಸ್‌ಗೆ ಕ್ರಮವಾಗಿ 4,998, 8,880, 28,080 ರು ಮೊತ್ತಕ್ಕೆ ಕಾರ್ಯಾದೇಶ ಹೊರಡಿಸಿತ್ತು.
ಹೆಸ್ಕಾಂಗೆ ನಮೂದಿಸಿದ್ದ ದರದ ವಿವರ
ಸಿಂಗಲ್ ಫೇಸ್ ಸ್ಮಾರ್ಟ್ ಮಿಟರ್ -ಕಮ್ಯುನಿಕೇಷನ್ ಮಾಡ್ಯುಲ್ ಪಾಲಿಕಾರ್ಬೋನೆಟ್ ಬಾಕ್ಸ್ ಅಳವಡಿಸಲು ಎಲೈಟ್ ಇಂಜಿನಿಯರಿಂಗ್ ಅಂಡ್ ಕನ್ಸಟ್ರಕ್ಷನ್ಸ್ 4,985 ರು ನಮೂದಿಸಿತ್ತು. ಆರ್ ಎಸ್ ಕೇಬಲ್ಸ್ 4,999 ರು ನಮೂದಿಸಿತ್ತು. ತ್ರೀ ಫೇಸ್ ಸಿ ಟಿ ಆಪರೇಟೆಡ್ ಕಮ್ಯುನಿಕೇಷನ್ ಮಾಡ್ಯುಲ್ ಪಾಲಿ ಕಾರ್ಬೋನೆಟ್ ಬಾಕ್ಸ್‌ಗೆ 8,800 ರು ಗಳನ್ನು ಎಲೈಟ್ ಇಂಜಿನಿಯರಿಂಗ್ ಅಂಡ್ ಕನ್ಸ್‌ಟ್ರಕ್ಷನ್ಸ್ ನಮೂದಿಸಿದ್ದರೇ ಆರ್ ಎಸ್ ಕೇಬಲ್ಸ್ 8,900 ರು ಗಳನ್ನು ನಮೂದಿಸಿತ್ತು.
ಅದೇ ರೀತಿ ತ್ರೀ ಫೇಸ್ ಸಿ ಟಿ ಆಪರೇಟೆಡ್ ಸ್ಮಾರ್ಟ್ ಮಿಟರ್ ಕಮ್ಯುನಿಕೇಷನ್ ಮಾಡ್ಯುಲ್ ಮತ್ತು ಪಾಲಿಕಾರ್ಬೋನೇಟ್ ಬಾಕ್ಸ್ 4 ಸಂಖ್ಯೆ ಸಿ ಟಿ ಎಲೈಟ್ ಇಂಜನಿಯರಿಂಗ್ ಅಂಡ್ ಕನ್ಸ್‌ಟ್ರಕ್ಷನ್ಸ್ 27,500 ರು ನಮೂದಿಸಿತ್ತು. ಇದೇ ಉಪಕರಣಕ್ಕೆ ಆರ್ ಎಸ್ ಕೇಬಲ್ಸ್ 28,000 ರು.ಗಳನ್ನು ನಮೂದಿಸಿತ್ತು.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಲ್ಲಿ ಟೆಂಡರ್ ನೀಡುವ ಕಾರ್ಯವು ಮಂಡಳಿಯಲ್ಲಿ ಚರ್ಚೆಯಾಗಿದೆ. ಮತ್ತು ಅನುಮೋದನೆಗೆ ಸಲ್ಲಿಸಿದೆ. ಕಾರ್ಯಾದೇಶ ಇನ್ನೂ ನೀಡಿಲ್ಲ. ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿರುವುದು ಗೊತ್ತಾಗಿದೆ.
ರಾಜ್ಯದಲ್ಲಿ ಸ್ಮಾರ್ಟ್ ವಿದ್ಯುತ್ ಮೀಟರ್‌ಗಳ ಖರೀದಿ ಮತ್ತು ಅಳವಡಿಕೆಗೆ ಸಂಬಂಧಿಸಿದ ಟೆಂಡರ್‌ನಲ್ಲಿ ಯಾವುದೇ ಅಕ್ರಮವೆಸಗಿಲ್ಲ ಎಂದು ಪ್ರತಿಪಾದಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ರಾಜಶ್ರೀ ಎಲೆಕ್ಟ್ರಿಕಲ್ ಸಂಸ್ಥೆ ಬೆನ್ನಿಗೆ ನಿಂತಿತ್ತು.
ಅಲ್ಲದೇ ಈ ಪ್ರಕರಣದ ಕುರಿತು ರಾಜ್ಯ ಉಚ್ಛ ನ್ಯಾಯಾಲಯವು ವ್ಯಕ್ತಪಡಿಸಿದ್ದ ಅಭಿಪ್ರಾಯದ ಕುರಿತು ರಾಜ್ಯ ಸರ್ಕಾರವು ತನ್ನ ನಿಲುವನ್ನು ಇದುವರೆಗೂ ಪ್ರಕಟಿಸಿಲ್ಲ. ಇದೇ 11ರಂದು ನಡೆಯಲಿರುವ ವಿಧಾನಮಂಡಲ ಅಧಿವೇಶನಕ್ಕೆ ಇಂಧನ ಇಲಾಖೆಯು ನೀಡಿರುವ ಉತ್ತರದಲ್ಲಿ ಎಲ್ಲಿಯೂ ತನ್ನ ನಿಲುವುನ್ನು ತಿಳಿಸಿರಲಿಲ್ಲ.
ಸ್ಮಾರ್ಟ್ ಮೀಟರ್ ಅಳವಡಿಕೆ ಟೆಂಡರ್‍ನಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಕುರಿತು ಪ್ರತಿಪಕ್ಷ ಬಿಜೆಪಿಯು ಕಾನೂನು ಹೋರಾಟ ನಡೆಸಿದೆ. ಈ ಪ್ರಕರಣದಲ್ಲಿ ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಹಾಗೂ ಇತರ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವರದಿ ಕೇಳಿತ್ತು. ಅಲ್ಲದೇ ಇದಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ಈ ಬೆಳವಣಿಗೆಗಳನ್ನಾಧರಿಸಿ ಪ್ರತಿಪಕ್ಷ ಬಿಜೆಪಿಯು ಇದೇ 11ರಂದು ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರದ ಮೇಲೆ ಮುಗಿಬೀಳಲು ಸಜ್ಜಾಗಿದೆ. ಈ ಸಂಬಂಧ ವಿಧಾನ ಪರಿಷತ್ತಿನ ಸದಸ್ಯ ಸಿ ಟಿ ರವಿ ಅವರು ಸಹ ಚುಕ್ಕೆ ಗುರುತಿನ ಪಶ್ನೆ (34) ಕೇಳಿದ್ದಾರೆ. ಇದಕ್ಕೆ ಇಂಧನ ಇಲಾಖೆಯು ಈಗಾಗಲೇ ಉತ್ತರ ಸಲ್ಲಿಸಿತ್ತು.
‘ಸ್ಮಾರ್ಟ್ ಮೀಟರ್ ಅಳವಡಿಕೆ ಟೆಂಡರ್‍ನ್ನು ನಿಯಮಾನುಸಾರ ಪಾರದರ್ಶಕವಾಗಿಯೇ ನಡೆಸಲಾಗಿದೆ. ಇದರಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಮತ್ತು ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ. ಹೀಗಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಉದ್ದೇಶವನ್ನು ಹಿಂದಕ್ಕೆ ಪಡೆಯುವ ಉದ್ದೇಶವೇ ಇಲ್ಲ,’ ಎಂದು ಉತ್ತರದಲ್ಲಿ ವಿವರಿಸಿತ್ತು.
ಹಾಗೆಯೇ ಸಿಂಗಲ್ ಫೇಸ್, ತ್ರೀ ಫೇಸ್ ಸ್ಮಾರ್ಟ್ ಮೀಟರ್ ಅಳವಡಿಕೆ ಸಂಬಂಧ ವಿದ್ಯುತ್ ಸರಬರಾಜು ಕಂಪನಿಗಳು ಆಹ್ವಾನಿಸಿದ್ದ ಟೆಂಡರ್‍ನಲ್ಲಿ ಭಾಗವಹಿಸಿದ್ದ ಕಂಪನಿಗಳ ವಿವರ ಮತ್ತು ಬಿಡ್‌ನಲ್ಲಿ ನಮೂದಿಸಿದ್ದ ಮೊತ್ತದ ವಿವರಗಳನ್ನೂ ಉತ್ತರದಲ್ಲಿ ಒದಗಿಸಿತ್ತು.
ಸ್ಮಾರ್ಟ್ ಮೀಟರ್‍ಗೆ ವಿಧಿಸಿದ್ದ ದುಬಾರಿ ದರದ ಬಗ್ಗೆಯೂ ರಾಜ್ಯ ಉಚ್ಛ ನ್ಯಾಯಾಲಯವು ಖಾರವಾಗಿ ಕಟುವಾಗಿ ಪ್ರತಿಕ್ರಿಯಿಸಿತ್ತು. ಈ ಬಗ್ಗೆ ನ್ಯಾಯಾಲಯವು ನೀಡಿದ್ದ ಅಭಿಪ್ರಾಯದ ಕುರಿತು ಸರ್ಕಾರದ ನಿಲುವೇನು ಎಂದು ಶಾಸಕ ಸಿ ಟಿ ರವಿ ಅವರು ಕೇಳಿದ್ದ ಪ್ರಶ್ನೆಗೆ ಸರ್ಕಾರವು ತನ್ನ ನಿಲುವನ್ನು ತಿಳಿಸಿಲ್ಲ. ಬದಲಿಗೆ ಈ ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ವಿಚಾರಣೆಗೆ ದಿನಾಂಕ ನಿಗದಿಪಡಿಸಿರುವ ಬಗ್ಗೆ ಮಾಹಿತಿ ಒದಗಿಸಿ ಕೈತೊಳೆದುಕೊಂಡಿತ್ತು.
ನ್ಯಾಯಾಲಯ ಪ್ರಶ್ನೆಯಲ್ಲೇನಿತ್ತು?
ನೆರೆ ರಾಜ್ಯಗಳಲ್ಲಿ ಕಡಿಮೆ ದರ ಇದ್ದರೂ, ಕರ್ನಾಟಕದಲ್ಲಿ ದುಬಾರಿ ಬೆಲೆಗೆ ಏಕೆ ನಿಗದಿಪಡಿಸಲಾಗಿದೆ ಎಂದು ಖಾರವಾಗಿ ಪ್ರಶ್ನಿಸಿತ್ತು. ಗ್ರಾಹಕರಿಗೆ ಗೊಂದಲ ಉಂಟುಮಾಡುವ ನೀತಿಗಳನ್ನು ರೂಪಿಸದಂತೆ ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಕೆಲ ಕಾಲ ವಾದ ಆಲಿಸಿದ್ದ ನ್ಯಾಯಪೀಠವು ‘ಕೆಇಆರ್‌ಸಿ ಮಾರ್ಗಸೂಚಿಗಳಿಗೆ ಅನುಗುಣವಾಗಿ ಯಾವ ರೀತಿ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಬೇಕೋ ಅದೇ ರೀತಿ ಅಳವಡಿಸಲು ಮುಂದಾಗಿ. ಅದು ಬಿಟ್ಟು ಪ್ರೀ ಪೇಯ್ಡ್, ಪೋಸ್ಟ್ ಪೇಯ್ಡ್ ಎಂದು ಅನಗತ್ಯವಾಗಿ ಗ್ರಾಹಕರನ್ನು ಗೊಂದಲದ ಗೂಡಿಗೆ ತಳ್ಳುವ ಕೆಲಸ ಮಾಡಬೇಡಿ’ ಎಂದು ಹೇಳಿತ್ತು.
ಹಾಗೆಯೇ ಅನ್ಯ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಿಮ್ಮ ಸ್ಮಾರ್ಟ್ ಮೀಟರ್ ದರ ಹೆಚ್ಚಾಗಿ ನಿಗದಿ ಮಾಡಿದ್ದೀರಲ್ಲಾ ಎಂದು ನ್ಯಾಯಾಲಯವು ಪ್ರಶ್ನಿಸಿತ್ತು. ಪ್ರೀ ಪೇಯ್ಡ್ ಅಥವಾ ಪೋಸ್ಟ್ ಪೇಯ್ಡ್ ಯಾವುದೇ ರೀತಿಯ ಶುಲ್ಕ ಪಾವತಿಯಾದರೂ ಸರಿಯೇ. ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ ಎಂಬ ನಿಮ್ಮ ನಿಲುವು ಮಾತ್ರ ಗ್ರಾಹಕರಿಗೆ ಹೊರೆಯಾಗುವಂತಿದೆಯೆಲ್ಲಾ. ಈ ರೀತಿಯ ಕ್ರಮಗಳಿಂದಾಗಿ ಸಾರ್ವಜನಿಕರು ಹೊರೆಯಿಂದ ನರಳುವಂತೆ ಮಾಡಬೇಡಿ,” ಎಂದು ಹೇಳಿತ್ತು.
ನ್ಯಾಯಾಲಯವು ಹೀಗೆ ಖಾರವಾಗಿ ಪ್ರಶ್ನಿಸಿದ್ದರೂ ಸಹ ಸರ್ಕಾರವು ಈ ಬಗ್ಗೆ ತನ್ನ ನಿಲುವೇನು ಎಂದು ವಿಧಾನ ಮಂಡಲಕ್ಕೆ ಸ್ಪಷ್ಟವಾಗಿ ತಿಳಿಸಿರಲಿಲ್ಲ.
ನಿಲುವು ತಿಳಿಸದೇ ಕೈತೊಳೆದುಕೊಂಡಿದ್ದೇಕೆ ಸರ್ಕಾರ?
ಸ್ಮಾರ್ಟ್ ಮೀಟರ್‍ಗಳನ್ನು ಹೊಸ ಗ್ರಾಹಕರಿಗೆ ಅಳವಡಿಸಲು ಕೇಂದ್ರೀಯ ವಿದ್ಯುಚ್ಛಕ್ತಿ ಪ್ರಾಧಿಕಾರವು ಕಡ್ಡಾಯ ಮಾಡಿದೆ. ಇದನ್ನು ಪ್ರಶ್ನಿಸಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಮೂವರು ಗ್ರಾಹಕರು ಉಚ್ಛ ನ್ಯಾಯಾಲಯದಲ್ಲಿ ಪ್ರತ್ಯೇಕವಾಗಿ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಅರ್ಜಿದಾರರು ಹೊಸ ಗ್ರಾಹಕರಲ್ಲ. ಬದಲಿಗೆ ಸ್ಟಾಟಿಕ್ ಮೀಟರ್ ಹೊಂದಿರುವ ಗ್ರಾಹಕರಾಗಿದ್ದಾರೆ.
ಇದರಲ್ಲಿ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಅರ್ಜಿದಾರರುಗಳಿಗೆ ಸೀಮಿತಗೊಳಿಸಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ನ್ಯಾಯಾಲಯದಿಂದ ತಡೆ ನೀಡಲಾಗಿದೆ. ಈ ಅರ್ಜಿಗಳ ವಿಚಾರಣೆಯನ್ನು ವಿವಿಧ ದಿನಾಂಕಗಳಂದು ನಡೆಸಿದೆ. ಆದೇಶವನ್ನು ಕಾಯ್ದಿರಿಸಿದೆ. ರಿಟ್ ಅರ್ಜಿ 1865/2025 ಇನ್ನೂ ವಿಚಾರಣೆಗೆ ಬಂದಿಲ್ಲ. ಮುಂದುವರೆದು ಸ್ಮಾರ್ಟ್ ಮೀಟರ್ ಅಳವಡಿಕೆ ಪ್ರಶ್ನಿಸಿ ಮೂರು ಸಾರ್ವಜನಿಕ ಅರ್ಜಿಗಳು ದಾಖಲಾಗಿವೆ. ಈ ಎಲ್ಲಾ ಅರ್ಜಿಗಳನ್ನು ಒಟ್ಟುಗೂಡಿ ವಿಚಾರಣೆ ಕೈಗೆತ್ತಿಕೊಂಡಿದೆ. 2025ರ ಆಗಸ್ಟ್ 19ಕ್ಕೆ ವಿಚಾರಣೆಗೆ ದಿನಾಂಕ ನಿಗದಿಪಡಿಸಿದೆ ಎಂದು ಉತ್ತರದಲ್ಲಿ ಸಚಿವ ಕೆ ಜೆ ಜಾರ್ಜ್ ಅವರು ಮಾಹಿತಿ ಒದಗಿಸಿತ್ತು.
ನಿಯಮ ಉಲ್ಲಂಘನೆಯಾಗಿಲ್ಲವೆಂದಿದ್ದ ಸರ್ಕಾರ
ಸರ್ಕಾರಿ ಗುತ್ತಿಗೆಯ ಟೆಂಡರ್‍ಗಳಲ್ಲಿ ಭಾಗಿಯಾಗದಂತೆ ನಿಷೇಧಕ್ಕೆ ಗುರಿಯಾಗಿರುವ ಕಂಪನಿಗೆ ಸ್ಮಾರ್ಟ್ ಮೀಟರ್‍ನ ತಂತ್ರಾಂಶ ಮತ್ತು ಕಾರ್ಯನಿರ್ವಹಣೆ ವ್ಯವಸ್ಥೆ ಪೂರೈಕೆಮಾಡುವ ಹೊಣೆ ನೀಡಿರುವುದು, ನಿಷೇಧಕ್ಕೆ ಒಳಗಾಗಿರುವ ಕಂಪನಿಯ ಜತೆ ವ್ಯವಹಾರ ನಡೆಸುವ ಕುರಿತು ಕೆಟಿಪಿಪಿ ನಿಯಮವೇನು ಎಂದು ಸಿ ಟಿ ರವಿ ಅವರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸರ್ಕಾರವು ಇಡೀ ಪ್ರಕ್ರಿಯೆಯಲ್ಲಿ ಯಾವುದೇ ನಿಯಮಗಳು ಉಲ್ಲಂಘನೆಯಾಗಿಲ್ಲ ಎಂದು ಪ್ರತಿಪಾದಿಸಿತ್ತು.
ಸರ್ಕಾರದ ಪ್ರತಿಪಾದನೆಯೇನಾಗಿತ್ತು?
ಸ್ಮಾರ್ಟ್ ಮೀಟರ್ ಸೇವೆ ಒದಗಿಸಲು ಭಾಗವಹಿಸುವ ಬಿಡ್‌ದಾರರು, ಸ್ಮಾರ್ಟ್ ಮೀಟರ್‍ನಿಂದ ಸಂವಹನವನ್ನು ಕಂಟ್ರೋಲ್ ರೂಂಗೆ ಹಾಗೂ ಗ್ರಾಹಕರಿಗೆ ಒದಗಿಸಲು ಎಎಂಐ ಸಾಫ್ಟ್‌ವೇರ್ ಒದಗಿಸಲು ಅರ್ಹ ಸಂಸ್ಥೆ ಜತೆ ಒಡಂಬಡಿಕೆ ಮಾಡಲು ಅವಕಾಶ ಕಲ್ಪಿಸಿಕೊಂಡಿದೆ. ಈ ಪ್ರಕರಣದಲ್ಲಿ ಎಲ್ 1 ಬಿಡ್‌ದಾರರಾದ ರಾಜಶ್ರೀ ಎಲೆಕ್ಟ್ರಿಕಲ್ ಸಂಸ್ಥೆಯವರು ಸಾಫ್ಟ್‌ವೇರ್ ಸೇವೆ ಪಡೆಯಲು ಬಿಸಿಐಟಿಎಸ್ ಹಾಗೂ ಜೀನಸ್ ಸಂಸ್ಥೆಯ ವಿವರಗಳನ್ನು ಟೆಂಡರ್ ದಸ್ತಾವೇಜಿನಲ್ಲಿ ಸಲ್ಲಿಸಿದ್ದರು. ಟೆಂಡರ್ ಪರಿಶೀಲನೆ ನಂತರ ಈ ಎರಡೂ ಸಂಸ್ಥೆಗಳಿಂದ ಸೇವೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ಒದಗಿಸಿತ್ತು.
ರಾಜಶ್ರೀ ಎಲೆಕ್ಟ್ರಿಕಲ್ ಸಂಸ್ಥೆಯವರು ಬಿಸಿಐಟಿಎಸ್ ಸಂಸ್ಥೆಯೊಂದಿಗೆ 2025ರ ಜನವರಿ 22ರಂದು ಒಡಂಬಡಿಕೆ ಮಾಡಿಕೊಂಡಿದ್ದಾರೆ. ಬಿಸಿಐಟಿಎಸ್ ಸಂಸ್ಥೆಯು ದೇಶದ 11 ರಾಜ್ಯಗಳ 18 ವಿದ್ಯುತ್ ಸರಬರಾಜು ಸಂಸ್ಥೆಗಳಲ್ಲಿ ಎಎಂಐ ಸಾಫ್ಟ್‌ವೇರ್ ಸೇವೆ ಒದಗಿಸುತ್ತಿದೆ. ಈ ಸಂಸ್ಥೆಯನ್ನು ಪೂರ್ವಾಂಚಲ ವಿದ್ಯುತ್ ವಿತರಣಾ ನಿಗಮದಿಂದ 2023ರ ಜನವರಿ 6ರಿಂದ 2 ವರ್ಷಗಳ ಅವಧಿಗೆ ಕಂಪನಿಯ ವ್ಯಾಪ್ತಿಯಲ್ಲಿ ಯಾವುದೇ ಟೆಂಡರ್‍ನಲ್ಲಿ ಭಾಗವಹಿಸದಂತೆ ನಿರ್ಬಂಧ ಹೇರಲಾಗಿತ್ತು. ಈ ನಿರ್ಬಂಧ ಅವಧಿಯು 2025ರ ಜನವರಿ 5ರಂದು ಮುಕ್ತಾಯಗೊಂಡಿದೆ ಎಂದು ವಿವರಿಸಿತ್ತು.
ಅಲ್ಲದೇ ರಾಜಶ್ರೀ ಎಲೆಕ್ಟ್ರಿಕಲ್ ಸಂಸ್ಥೆಯವರು ಬಿಸಿಐಟಿಎಸ್ ಸಂಸ್ಥೆಯೊಂದಿಗೆ 2025ರ ಜನವರಿ 22ರಂದು ಒಡಂಬಡಿಕೆ ಮಾಡಿಕೊಂಡಿದೆ. ನಿರ್ಬಂಧ ಅವಧಿ ಮುಕ್ತಾಯಗೊಂಡ ನಂತರ ಒಡಂಬಡಿಕೆ ಮಾಡಿಕೊಂಡಿರುವುದರಿಂದ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಸಮರ್ಥಿಸಿಕೊಂಡಿತ್ತು.
‘ಕೆಟಿಪಿಪಿ ಕಾಯ್ದೆ ಸೆಕ್ಷನ್ 14 ಎ ರಂತೆ ನಿಷೇಧಿತ ಕಂಪನಿಯೊಂದಿಗೆ ಟೆಂಡರ್ ವ್ಯವಹಾರ ನಡೆಸುವಂತಿಲ್ಲ. ಆದರೆ ಈ ಒಡಂಬಡಿಕೆಯನ್ನು ನಿರ್ಬಂಧದ ಅವಧಿ ಮುಕ್ತಾಯಗೊಂಡ ನಂತರ ಎಲ್ ಬಿಡ್‌ದಾರರಾದ ರಾಜಶ್ರಿ ಎಲೆಕ್ಟ್ರಿಕಲ್ಸ್ ಸಂಸ್ಥೆಯವರು ಮಾಡಿಕೊಂಡಿದ್ದಾರೆ. ಹೀಗಾಗಿ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಮತ್ತು ಸಾಫ್ಟ್‌ವೇರ್ ಸೇವೆ ಒದಗಿಸುತ್ತಿರುವ ಬಿಸಿಐಟಿಎಸ್ ಸಂಸ್ಥೆಯೊಂದಿಗೆ ಯಾವುದೇ ಒಡಂಬಡಿಕೆ ಮಾಡಿಕೊಂಡಿಲ್ಲ,’ ಎಂದು ಸಚಿವ ಕೆ ಜೆ ಜಾರ್ಜ್ ಅವರು ವಿವರಿಸಿತ್ತು.