ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮತದಾರರಿಗೆ ಸಂಬಂಧಿಸಿದ ದತ್ತಾಂಶಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಪ್ರಕರಣದಲ್ಲಿ ಆರೋಪಿತ ಅಧಿಕಾರಿಗಳಿಗೆ ಈಗಿನ ಕಾಂಗ್ರೆಸ್ ಸರ್ಕಾರವು ಉಳಿದೆಲ್ಲ ಅಧಿಕಾರಿಗಳಿಗಿಂತಲೂ ಆಯಕಟ್ಟಿನ ಸ್ಥಾನ ಕೊಟ್ಟಿದೆ. ಪ್ರಮುಖವಾಗಿ ತುಷಾರ್ ಗಿರಿನಾಥ್ ಅವರಿಗೆ ಗೃಹ ಮತ್ತು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಕರುಣಿಸಿದೆ.
ಮತ ಕಳ್ಳತನ ಕುರಿತು ತನಿಖೆ ಮಾಡಬೇಕು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರಿನಲ್ಲಿ ನಡೆದಿದ್ದ ಬೃಹತ್ ರ್‍ಯಾಲಿಯಲ್ಲಿ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿರುವ ಬೆನ್ನಲ್ಲೇ, ಈ ಹಿಂದೆ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ಕಾಂಗ್ರೆಸ್ ಆರೋಪಿಸಿದ ತುಷಾರ್ ಗಿರಿನಾಥ್ ಮತ್ತಿತರ ಅಧಿಕಾರಿಗಳಿಗೆ ಆಯಕಟ್ಟಿನ ಹುದ್ದೆ ಕರುಣಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ವಿಶೇಷವೆಂದರೇ ಅಂದು ಬಿಬಿಎಂಪಿಯ ಮುಖ್ಯ ಆಯುಕ್ತರಾಗಿದ್ದ ತುಷಾರ್ ಗಿರಿನಾಥ್ ಅವರು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ಎಸಗಿ, ಬಿಜೆಪಿಯೊಂದಿಗೆ ನಿಕಟ ಸಖ್ಯ ಹೊಂದಿರುವ ʻಚಿಲುಮೆʼ ಸಂಸ್ಥೆಗೆ ಚುನಾವಣಾ ಪ್ರಕ್ರಿಯೆಯ ಮತದಾರರ ಪಟ್ಟಿ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಿ ಮತದಾರರ ದತ್ತಾಂಶವನ್ನು ಖಾಸಗಿಯವರ ಪಾಲಾಗಿಸಿದ್ದರು ಎಂಬ ಗುರುತರವಾದ ಆರೋಪಕ್ಕೆ ಗುರಿಯಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಆಗಿನ ಮುಖ್ಯ ಕಾರ್ಯದರ್ಶಿಗಳಿಗೆ ದೂರು ಕೂಡ ನೀಡಿದ್ದರು.
ಬೆಂಗಳೂರು ಮತದಾರರ ಪಟ್ಟಿ ಸಿದ್ಧಗೊಳ್ಳುತ್ತಿದ್ದಾಗ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅವರು ಮತದಾರರ ಪಟ್ಟಿ ತಿರುಚಿದ್ದಾರೆ ಮತ್ತು ಮತದಾರರ ದತ್ತಾಂಶ ವಂಚನೆ ಮಾಡಲು ಟೆಂಡರ್ ಇಲ್ಲದೆ “ಚಿಲುಮೆ” ಕಂಪನಿಗೆ ನೀಡಿದ್ದಾರೆ. ಈ ಮೂಲಕ ಬಿಜೆಪಿಗೆ ಅಕ್ರಮ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ದೊಡ್ಡ ಗಂಟಲಲ್ಲಿ ಆರೋಪಿಸುತ್ತಿತ್ತು.
ಹಾಗೆಯೇ ಈ ಬಗ್ಗೆ ಆಗಿನ ಮುಖ್ಯ ಕಾರ್ಯದರ್ಶಿಯು ತುಷಾರ್ ಗಿರಿನಾಥ್ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಚುನಾವಣಾ ಆಯೋಗಕ್ಕೆ ಪತ್ರ ಸಹ ಬರೆದಿದ್ದರು. ಆದರೇ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದು 2 ವರ್ಷಗಳನ್ನು ಪೂರ್ಣಗೊಳಿಸಿದ್ದರೂ ಸಹ ತುಷಾರ್ ಗಿರಿನಾಥ್ ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಮತ್ತು ದತ್ತಾಂಶ ವಂಚನೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಗುರಿಯಾಗಿರುವ ಚಿಲುಮೆ ಸಂಸ್ಥೆಯ ವಿರುದ್ಧ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮತದಾರರ ಜಾಗೃತಿ ಹೆಸರಿನಲ್ಲಿ ಚಿಲುಮೆ ಸಂಸ್ಥೆಯನ್ನು ತೊಡಗಿಸಿಕೊಂಡಿದ್ದ ಅವಧಿಯಲ್ಲಿಯೇ ಬಿಬಿಎಂಪಿ ಆಯುಕ್ತರಾಗಿದ್ದ ತುಷಾರ್ ಗಿರಿನಾಥ್ ಅವರಿಗೆ ಎರಡೆರಡು ಇಲಾಖೆಗಳ ಜವಾಬ್ದಾರಿಯನ್ನು ನೀಡಿದೆ. ಸರ್ಕಾರದ ಈ ಕ್ರಮವು ಮತದಾರರ ಪಟ್ಟಿ ತಿರುಚಿದ್ದಾರೆ ಎಂದು ಆರೋಪಿಸಿ ಬೃಹತ್ ರ‍್ಯಾಲಿ ನಡೆಸುತ್ತಿರುವ ರಾಹುಲ್ ಗಾಂಧಿ ಅವರನ್ನೇ ಅಣಕಿಸಿದಂತಾಗಿದೆ.
ಅಷ್ಟೇ ಅಲ್ಲ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮತದಾರರ ಜಾಗೃತಿ ಮತ್ತು ಪರಿಷ್ಕರಣೆ ಹೆಸರಿನಲ್ಲಿ ಮತದಾರರಿಗೆ ಸಂಬಂಧಿಸಿದ ದತ್ತಾಂಶಗಳನ್ನು ʻಚಿಲುಮೆ ಎಜುಕೇಷನಲ್ ಕಲ್ಬರಲ್ ಅಂಡ್ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ʼ ಅಕ್ರಮವಾಗಿ ಸಂಗ್ರಹಿಸಿತ್ತು ಎಂಬ ಪ್ರಕರಣದ ವಿರುದ್ಧ ಸಿದ್ಧರಾಮಯ್ಯ, ಡಿ ಕೆ ಶಿವಕುಮಾರ್ ಆದಿಯಾಗಿ ಇಡೀ ಕಾಂಗ್ರೆಸ್ ಮುಖಂಡರು ಅಬ್ಬರಿಸಿದ್ದರು.
ತುಷಾರ್ ಗಿರಿನಾಥ್ ಅವರು ಮಾತ್ರವಲ್ಲ ಬಿಬಿಎಂಪಿಯ ಇತರೆ ಅಧಿಕಾರಿಗಳೂ ಈ ಆರೋಪಕ್ಕೆ ಗುರಿಯಾಗಿದ್ದರು. ಕಂದಾಯ ಅಧಿಕಾರಿ ಕೆ ಚಂದ್ರಶೇಖರ್, ವಿಶೇಷ ಕರ್ತವ್ಯಾಧಿಕಾರಿ ವಿ ಬಿ ಭೀಮಾಶಂಕರ್, ಸುಹೇಲ್ ಅಹ್ಮದ್, ಉಪ ಕಂದಾಯ ಅಧಿಕಾರಿಗಳಾದ ಗುಲ್ತಾಜ್ ಫಾತಿಮಾ ಅವರ ವಿರುದ್ಧ ಜಂಟಿ ಇಲಾಖೆ ವಿಚಾರಣೆ ನಡೆಸಲು ಕಾರಣ ಕೇಳುವ ನೋಟೀಸ್ ಜಾರಿಗೊಳಿಸಿತ್ತು. ಅಲ್ಲದೇ ಅದರೊಂದಿಗೇ ಆರೋಪಿತ ಅಧಿಕಾರಿಗಳಿಗೆ ದೋಷಾರೋಪಣೆ ಪಟ್ಟಿಯನ್ನು ಜಾರಿ ಮಾಡಿತ್ತು. ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ನಗರಾಭಿವೃದ್ಧಿ ಇಲಾಖೆಯಲ್ಲಿ ಕಡತ ತೆರೆದಿತ್ತು.
ಹಿಂದಿನ ಬಿಜೆಪಿ ಸರ್ಕಾರದ ಕಡೇ ದಿನಗಳಲ್ಲಿ ಈ ಪ್ರಕರಣವು ಬಹಿರಂಗಗೊಂಡಿತ್ತು ಇದನ್ನು ಪ್ರಬಲ ರಾಜಕೀಯ ಅಸ್ತ್ರವನ್ನಾಗಿಸಿಕೊಂಡಿದ್ದ ಕಾಂಗ್ರೆಸ್ ಇದನ್ನು ವೋಟರ್ ಗೇಟ್ ಹಗರಣ ಎಂದು ಬೊಬ್ಬೆ ಹೊಡೆದಿತ್ತು. ಬಿಬಿಎಂಪಿಯಿಂದ ಬಿ. ಎಲ್ ಓ (ಬೂತ್ ಮಟ್ಟದ ಅಧಿಕಾರಿ) ಎಂದು ಗುರುತಿನ ಚೀಟಿ ಹಾಕಿಕೊಂಡು ಈ ಅಕ್ರಮ ಎಸೆಯಲಾಗಿದೆ. ಈ ಅಕ್ರಮದ ಹಿಂದೆ ಸಚಿವರು ಹಾಗೂ ಸಿ ಎಂ ಬಸವರಾಜ ಬೊಮ್ಮಾಯಿ ಇದ್ದಾರೆ ಸಿದ್ಧರಾಮಯ್ಯ, ಡಿಕೆಶಿವಕುಮಾರ್ ಆದಿಯಾಗಿ ಎಲ್ಲ ಸಚಿವ, ಮುಖಂಡರು ಆರೋಪಿಸಿದ್ದರು.
ಅದೇ ರೀತಿ ರಾಜ್ಯ ಕಾಂಗ್ರೆಸ್ ನಾಯಕರು ಅಂದಿನ ಸಿ ಎಂ ಬೊಮ್ಮಾಯಿ ಸೇರಿದಂತೆ ಇತರರ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಕಾರ್ಯಧ್ಯಕ್ಷರಾಗಿದ್ದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಪ್ರಧಾನ ಕಾರ್ಯದರ್ಶಿ ವಿಜಯ್ ಮುಳುಗುಂದ್ ಅವರ ಜತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ಮತದಾರರ ಪಟ್ಟಿ ಅಕ್ರಮ ಸಂಬಂಧ ದೂರು ನೀಡಿದ್ದರು.
ಆದರೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದು 2 ವರ್ಷಗಳನ್ನು ಪೂರ್ಣಗೊಳಿಸಿದ್ದರೂ ಸಹ ಚಿಲುಮೆ ಹಗರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿಲ್ಲ. ಆನಂತರದಲ್ಲಿ ಕಾಂಗ್ರೆಸ್ ಪಕ್ಷವು ತನ್ನದೇ ಆಡಳಿತದ ಅವಧಿಯಲ್ಲಿ ಇದಕ್ಕೆ ಸಂಬಂಧಿಸಿದ ಮಾಹಿತಿಯ ಕಡತವನ್ನು ಒದಗಿಸಲು ಸಹ ನಿರಾಕರಿಸಿತ್ತು. ಇದರಿಂದಾಗಿ ಮತದಾರರ ಪಟ್ಟಿಯಲ್ಲಿ ಅಕ್ರಮ ಅಪವಾದ ಹಿನ್ನೆಲೆಗೆ ಸರಿಯಿತು.
ಎರಡು ವರ್ಷ ಕಳೆದ ನಂತರ ನಿನ್ನೆಯಿಂದ ರಾಹುಲ್ ಗಾಂಧಿ ಮತಕಳ್ಳತನದ ಬಗ್ಗೆ ಪುನಃ ಬೆಂಗಳೂರಿನಲ್ಲಿ ಅಬ್ಬರಿಸುತ್ತಿದ್ದಾರೆ. ಚುನಾವಣಾ ಆಯೋಗವೇ ವ್ಯವಸ್ಥಿತವಾಗಿ ಮತದಾರರ ಪಟ್ಟಿಯನ್ನು ತಿರುಚಿದ್ದು ಅಸ್ತಿತ್ವದಲ್ಲೇ ಇಲ್ಲದವರನ್ನು ಮತದಾರರನ್ನಾಗಿ ತೋರಿಸಿ ಲಕ್ಷಗಟ್ಟಲೆ ಮತ ಲೂಟಿ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸುತ್ತಿದ್ದಾರೆ.
ಇತ್ತ, ಇದೇ ಕಾಂಗ್ರೆಸ್ ಸರ್ಕಾರ ಅದೇ ತುಷಾರ್ ಗಿರಿನಾಥ್ ಅವರನ್ನು ತಾನೇ ಮಾಡಿದ್ದ ಆಪಾದನೆಗಳನ್ನೂ ಮರೆತು ಬೆಂಗಳೂರು ಮತದಾರ ಪಟ್ಟಿ ತಯಾರಿಸುವ ಬಿಬಿಎಂಪಿಯಲ್ಲೂ ಎರಡು ವರ್ಷ ಮುಂದುವರೆಸಿ ಈಗ ರಾಜ್ಯ ಕಾನೂನು ಸುವ್ಯವಸ್ಥೆಯ ಹೊಣೆ ಹೊಂದಿರುವ ಗೃಹ ಇಲಾಖೆ ಮತ್ತು ಬಿಬಿಎಂಪಿಯ ಮೇಲುಸ್ತುವಾರಿ ಹೊಂದಿರುವ ನಗರಾಭಿವೃದ್ಧಿ ಇಲಾಖೆ ಎರಡಕ್ಕೂ ಅಪರ ಮುಖ್ಯ ಕಾರ್ಯದರ್ಶಿಯನ್ನಾಗಿ ಮಾಡಿದೆ.
‘ಅಲ್ಲದೇ ಅವರನ್ನೇ ಬಿಬಿಎಂಪಿಯ ಆಡಳಿತಾಧಿಕಾರಿಯನ್ನಾಗಿ ಮಾಡಿದೆ. ಕುರಿ ಹಿಂಡಿನ ಮಾಲೀಕ ಕುರಿಗಳನ್ನು ಕಾಯಲು ತೋಳವನ್ನು ನೇಮಿಸಿ ನಂತರ ನನ್ನ ಕುರಿ ಕಾಣೆಯಾಗುತ್ತಿವೆ ಎಂದರೆ ಅದಕ್ಕೆ ಯಾರು ಹೊಣೆ,’ ಎಂದು ಪ್ರಶ್ನಿಸುತ್ತಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು.
ಮತಕಳ್ಳತನದ ಬಗ್ಗೆ ತನಿಖೆ ನಡೆಸಲು ರಾಹುಲ್ ಗಾಂಧಿ ಅವರು ಸೂಚನೆ ನೀಡಿರುವ ಬೆನ್ನಲ್ಲೇ ಒಂದಿಷ್ಟು ಪ್ರಶ್ನೆಗಳು ಕೇಳಿ ಬಂದಿವೆ;
ಪ್ರಶ್ನೆಗಳ ಪಟ್ಟಿ
1. ಮತಗಳ್ಳತನದ ಮೂಲವಾಗಿರುವ ಚಿಲುಮೆ ವೋಟರ್ ಗೇಟ್ ಹಗರಣವು ಚುನಾವಣೆಗೆ ಮುನ್ನವೇ ಬೆಳಕಿಗೆ ಬಂದಿದ್ದರೂ ಇದುವರೆಗೂ ಏಕೆ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿಲ್ಲ? ನಿಮ್ಮ ಮುಖ್ಯ ನಾಯಕರು ಆ ಸಂದರ್ಭದಲ್ಲಿ ಸುಳ್ಳು ಹೇಳಿದ್ದರೇ?
2. ಚಿಲುಮೆ ವೋಟರ್ ಗೇಟ್ ಸಂದರ್ಭದಲ್ಲಿ ‘ಸರ್ಕಾರಿ ನೌಕರʼರೆಂದು ಐಡೆಂಟಿಟಿ ಕಾರ್ಡ್ ಕೊಟ್ಟಿದ್ದಾರೆ. ಚುನಾವಣೆ ಆಯೋಗ ಮಾಡುವ ಕೆಲಸವನ್ನು ಬೇರೆ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿದ್ದ ಪ್ರಕರಣದಲ್ಲಿ ತುಷಾರ್ ಗಿರಿನಾಥ್ ಅವರನ್ನೇ ಕಳೆದ 2 ವರ್ಷದಿಂದಲೂ ಬಿಬಿಎಂಪಿಯ ಮುಖ್ಯ ಆಯಕ್ತರನ್ನಾಗಿ ಮುಂದುವರೆಸಿದ್ದಾದರೂ ಏಕೆ?
3. ಪ್ರಸ್ತುತ ಈಗ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನೂ ಕರುಣಿಸಿ, ಮತ್ತು ಬಿಬಿಎಂಪಿಯ ಆಡಳಿತಾಧಿಕಾರಿಯನ್ನಾಗಿ ಮಾಡಲಾಗಿದೆ. ಹೀಗೆ ತುಷಾರ್ ಗಿರಿನಾಥ್ ವೋಟರ್ ಲಿಸ್ಟ್ ಸಂದರ್ಭದಲ್ಲಿ ಅವ್ಯವಹಾರ ಎಸಗಿರಲಿಲ್ಲ ಎಂದು ಈಗ ನಿಮ್ಮ ಸರ್ಕಾರ ಸೂಚ್ಯವಾಗಿ ಹೇಳುತ್ತಿದೆಯೇ, ಇದನ್ನು ಹೇಗೆ ವಿವರಿಸುತ್ತೀರಿ?
4. ಕಾಂಗ್ರೆಸ್ ನ ರಮೇಶ್ ಬಾಬು ಅವರು ತುಷಾರ್ ಗಿರಿನಾಥ್ ವಿರುದ್ಧ ಮುಖ್ಯ ಕಾರ್ಯದರ್ಶಿಗಳಿಗೆ ದೂರುಕೊಟ್ಟ ಬಗ್ಗೆ ವ್ಯಾಪಕ ಪ್ರಚಾರ ಆಗಿತ್ತು. ಆನಂತರದಲ್ಲಿ ಅದೇ ತುಷಾರ್ ಗಿರಿನಾಥ್ ರನ್ನು ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು. ನಿಮ್ಮ ಮಾತಿಗೂ ಕುರಿ ಕಾಯಲು ತೋಳ ನೇಮಿಸುವ ನಿಮ್ಮದೇ ಪಕ್ಷದ ಸರ್ಕಾರದ ಕೃತಿಗೂ ಏನಾದರೂ ಸಂಬಂಧ ಇದೆಯೆ?
5. ನಿಮ್ಮ ಪಕ್ಷದವರೇ ಆರೋಪ ಮಾಡಿ ಆಮೇಲೆ ನಿಮ್ಮ ಪಕ್ಷದವರೇ ತನಿಖೆಗೆ ಆದೇಶಿಸಿದ ಕಡತಗಳನ್ನೇ ಆರ್.ಟಿ.ಐ. ಅಡಿ ಕೋರಿದಾಗ ನಿಯಮಬಾಹಿರವಾಗಿ ಮಾಹಿತಿ ನಿರಾಕರಿಸಿರುವುದು ತಮ್ಮ ಗಮನದಲ್ಲಿದೆಯೇ?
6. ನಿಮ್ಮ ಸರ್ಕಾರದ ಮುಖ್ಯಮಂತಿ, ಉಪಮುಖ್ಯಮಂತ್ರಿ ಮತ್ತು ಇತರ ಸಚಿವರು ತಾವೇ ಮಾಡಿದ ಆರೋಪಗಳನ್ನೇ ಮರೆತು ಆರೋಪಿತ ಅಧಿಕಾರಿಗಳನ್ನೇ ಪೋಷಿಸುತ್ತಿರುವುದು, ಆ ಅಧಿಕಾರಿಗಳು ಎಲ್ಲ ತನಿಖೆಗಳನ್ನು ಹಳ್ಳ ಹಿಡಿಸುತ್ತಿರುವುದು, ಮತ್ತು ತನಿಖೆಗಳ ಬಗ್ಗೆ ಮಾಹಿತಿ ಮುಚ್ಚಿಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿದೆಯೇ?
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮತದಾರರ ಜಾಗೃತಿ ಮತ್ತು ಪರಿಷ್ಕರಣೆ ಹೆಸರಿನಲ್ಲಿ ಮತದಾರರಿಗೆ ಸಂಬಂಧಿಸಿದ ದತ್ತಾಂಶಗಳನ್ನು ಚಿಲುಮೆ ಎಜುಕೇಷನಲ್ ಕಲ್ಚರಲ್ ಅಂಡ್ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಅಕ್ರಮವಾಗಿ ಸಂಗ್ರಹಿಸಿತ್ತು ಎಂಬ ಪ್ರಕರಣದ ವಿರುದ್ಧ ದೊಡ್ಡ ಮಟ್ಟದಲ್ಲಿ ಅಬ್ಬರಿಸಿದ್ದ ಕಾಂಗ್ರೆಸ್ ಪಕ್ಷವು ಇದೀಗ ತನ್ನದೇ ಆಡಳಿತದ ಅವಧಿಯಲ್ಲಿ ಇದಕ್ಕೆ ಸಂಬಂಧಿಸಿದ ಮಾಹಿತಿಯ ಕಡತವನ್ನು ಒದಗಿಸಲು ನಿರಾಕರಿಸಿತ್ತು.
ಚಿಲುಮೆ ‘ವೋಟರ್ ಗೇಟ್ ‘ಹಗರಣದಲ್ಲಿ ಬೊಬ್ಬೆ ಹೊಡೆದು ಈಗ ಮಾಹಿತಿ ನೀಡಲು ನಿರಾಕರಿಸಿದ ಕಾಂಗ್ರೆಸ್
ಚಿಲುಮೆ ಎಜುಕೇಷನಲ್ ಕಲ್ಚರಲ್ ಅಂಡ್ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸಂಸ್ಥೆಯೊಂದಿಗೆ ಭಾಗಿಯಾಗಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಅರೋಪಕ್ಕೆ ಬಿಬಿಎಂಪಿ ಅಧಿಕಾರಿಗಳು ಗುರಿಯಾಗಿದ್ದರು. ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ನಗರಾಭಿವೃದ್ದಿ ಇಲಾಖೆಯಲ್ಲಿ ಕಡತ ತೆರೆದಿತ್ತು.
ಈ ಟ್ರಸ್ಟ್‌ನೊಂದಿಗೆ ಭಾಗಿಯಾಗಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಹೇಳಲಾಗಿದ್ದ ಅಧಿಕಾರಿಗಳ ಪಟ್ಟಿಯನ್ನು ನಗರಾಭಿವೃದ್ದಿ ಇಲಾಖೆಯು ಸಿದ್ಧಪಡಿಸಿತ್ತು. ಕಂದಾಯ ಅಧಿಕಾರಿ ಕೆ ಚಂದ್ರಶೇಖರ್, ವಿಶೇಷ ಕರ್ತವ್ಯಾಧಿಕಾರಿ ವಿ ಬಿ ಭೀಮಾಶಂಕರ್, ಸುಹೇಲ್ ಅಹ್ಮದ್, ಉಪ ಕಂದಾಯ ಅಧಿಕಾರಿಗಳಾದ ಗುಲ್ತಾಜ್ ಫಾತಿಮಾ ಅವರ ವಿರುದ್ಧ ಜಂಟಿ ಇಲಾಖೆ ವಿಚಾರಣೆ ನಡೆಸಲು ಕಾರಣ ಕೇಳುವ ನೋಟೀಸ್ ಜಾರಿಗೊಳಿಸಿತ್ತು. ಅಲ್ಲದೇ ಅದರೊಂದಿಗೇ ಆರೋಪಿತ ಅಧಿಕಾರಿಗಳಿಗೆ ದೋಷಾರೋಪಣೆ ಪಟ್ಟಿಯನ್ನು ಜಾರಿ ಮಾಡಿತ್ತು.
ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯು 2024ರ ಫೆಬ್ರುವರಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರವನ್ನೂ ಬರೆದಿತ್ತು. ಈ ಪತ್ರವನ್ನಾಧರಿಸಿ ಇಲಾಖೆಯಲ್ಲಿ ತೆರೆದಿದ್ದ ಕಡತವು ಕಳೆದ ಒಂದು ವರ್ಷದಿಂದಲೂ ಒಂದೇ ಕಡೇ ಪಾರ್ಕ್ ಮಾಡಿಡಲಾಗಿತ್ತು.
ಇದೇ ಕಡತಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ 2025ರ ಜನವರಿ 16ರಂದು ಆರ್‍ಟಿಐ ಅಡಿಯಲ್ಲಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿತ್ತು. ಈ ಕಡತಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲು ಅವಕಾಶವಿಲ್ಲ ಎಂದು ನಗರಾಭಿವೃದ್ಧಿ ಇಲಾಖೆಯು 2025ರ ಜನವರಿ 22ರಂದು ಹಿಂಬರಹ ನೀಡಿತ್ತು.
ಹಿಂಬರಹದಲ್ಲೇನಿತ್ತು?
ಮಾಹಿತಿ ಕೋರಿರುವ ಕಡತ ಸಂಖ್ಯೆ ನಅಇ 207 ಬಿಬಿಎಸ್ 2022ರಲ್ಲಿ ಇಲಾಖೆ ವಿಚಾರಣೆ ಪ್ರಕ್ರಿಯೆಗೆ ಸಂಬಂಧಿಸಿದೆ. ಈ ಕಡತದಲ್ಲಿ ಅಧಿಕಾರಿ, ನೌಕರರ ವೈಯಕ್ತಿಕ ಮಾಹಿತಿ ಅಡಕವಾಗಿದೆ. ಹೀಗಾಗಿ ಈ ಮಾಹಿತಿಯು ವೈಯಕ್ತಿಕ ಮಾಹಿತಿ ವ್ಯಾಪ್ತಿಗೂ ಸಹ ಬರಲಿದೆ. ಹೀಗಾಗಿ 2013ರ ಆಗಸ್ಟ್ 14ರ ಪ್ರಕಾರ ಈ ಮಾಹಿತಿಯನ್ನು ನೀಡಲು ವಿನಾಯಿತಿ ಇದೆ ಎಂದು ಹಿಂಬರಹದಲ್ಲಿ ತಿಳಿಸಿತ್ತು.
ಹಾಗೆಯೇ ಈ ಮಾಹಿತಿಯನ್ನು ನೀಡಲು ಮಾಹಿತಿ ಹಕ್ಕು ಅಧಿನಿಯಮ 2005ರ ಪ್ರಕರಣ 8(1)(ಹೆಚ್)ರಂತೆ ವಿನಾಯಿತಿ ಇದೆ ಎಂದು ಹೇಳಿತ್ತು.
ಹಿಂದಿನ ಬಿಜೆಪಿ ಸರ್ಕಾರದ ಕಡೇ ದಿನಗಳಲ್ಲಿ ಈ ಪ್ರಕರಣವು ಬಹಿರಂಗಗೊಂಡಿತ್ತು ಇದನ್ನು ಪ್ರಬಲ ರಾಜಕೀಯ ಅಸ್ತ್ರವನ್ನಾಗಿಸಿಕೊಂಡಿದ್ದ ಕಾಂಗ್ರೆಸ್ ಇದನ್ನು ವೋಟರ್ ಗೇಟ್ ಹಗರಣ ಎಂದು ಬೊಬ್ಬೆ ಹೊಡೆದಿತ್ತು. ಬಿಬಿಎಂಪಿಯಿಂದ ಬಿ ಎಲ್ ಓ ( ಬೂತ್ ಮಟ್ಟದ ಅಧಿಕಾರಿ) ಎಂದು ಗುರುತಿನ ಚೀಟಿ ಹಾಕಿಕೊಂಡು ಈ ಅಕ್ರಮ ಎಸೆಯಲಾಗಿದೆ. ಈ ಅಕ್ರಮದ ಹಿಂದೆ ಸಚಿವರು ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಇದ್ದಾರೆ ಎಂಬುದು ಕಾಂಗ್ರೆಸ್ ಆರೋಪಿಸಿತ್ತು.
ಅದೇ ರೀತಿ ರಾಜ್ಯ ಕಾಂಗ್ರೆಸ್ ನಾಯಕರು ಅಂದಿನ ಸಿಎಂ ಬೊಮ್ಮಾಯಿ ಸೇರಿದಂತೆ ಇತರರ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಧ್ಯಕ್ಷರಾಗಿದ್ದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಪ್ರಧಾನ ಕಾರ್ಯದರ್ಶಿ ವಿಜಯ್ ಮುಳುಗುಂದ್ ಅವರ ಜತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ಮತದಾರರ ಪಟ್ಟಿ ಅಕ್ರಮ ಸಂಬಂಧ ದೂರು ನೀಡಿದ್ದರು.

ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಚಿಲುಮೆ ಸಂಸ್ಥೆಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಿದ್ದೀರಿ ಸರಿ, ಆದರೆ ಆ ಸಂಸ್ಥೆ ಅಕ್ರಮವಾಗಿ ಸಂಗ್ರಹಿಸಿರುವ ಮಾಹಿತಿ ಏನಾಯಿತು/ ಆ ಸಂಸ್ಥೆ ಬಿಬಿಎಂಪಿಗೆ ಸಲ್ಲಿಸಿದೆಯಾ, ಇಲ್ಲವೇ ಯಾವುದಾದರೂ ರಾಜಕೀಯ ಪಕ್ಷಕ್ಕೆ ಮಾರಿದೆಯಾ ಎಂದು ಅಂದು ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮಾಡಿ ಪ್ರಶ್ನಿಸಿದ್ದರು.
ಹಾಗೆಯೇ ಮಾಡಿರುವ ಅಪರಾಧಕ್ಕೆ ಅನುಮತಿ ರದ್ದತಿ ಶಿಕ್ಷೆ ಅಲ್ಲವಲ್ಲಾ, ಗುತ್ತಿಗೆಯನ್ನು ರದ್ದುಗೊಳಿಸುವ ಮೂಲಕ ಆಗಿರುವ ಅಪರಾಧವನ್ನು ಇಲಾಖೆಯೇ ಒಪ್ಪಿಕೊಂಡಂತಾಗಿfಲಲವೇ, ಸಮಾಜ ಸೇವೆಗೆ ಬೇಕಾದಷ್ಟು ಅವಕಾಶ ಇರುವಾಘ ಮತದಾರರ ಪಟ್ಟಿಯನ್ನು ಪರಿಷ್ಕರಣೆಯನ್ನು ಉಚಿತವಾಗಿ ಮಾಡುತ್ತೇವೆ ಎಂದು ಸಂಸ್ಥೆ ಅರ್ಜಿ ನೀಡಿದಾಗಲೇ ಅದರ ಹಿಂದಿನ ದುರುದ್ದೇಶ ಅರಿವು ಬಿಬಿಎಂಪಿಗೆ ಆಗಬೇಕಿತ್ತು ಎಂದೂ ಸಿದ್ದರಾಮಯ್ಯ ಅವರು ತಿವಿದಿದ್ದರು.
ಸಿದ್ದರಾಮಯ್ಯ ಅವರು ಇಷ್ಟಕ್ಕೇ ಸುಮ್ಮನಿರಲಿಲ್ಲ. ‘ಮತದಾರರ ಮಾಹಿತಿಯ ಕಳ್ಳತನ ಮತ್ತು ಒಂದು ನಿರ್ದಿಷ್ಟ ಸಮುದಾಯದ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಕಿತ್ತು ಹಾಕುವ ದುರುದ್ದೇಶದಿಂದಲೇ ರಾಜ್ಯ ಬಿಜೆಪಿ ಸರ್ಕಾರ ಮತದಾರರ ಪಟ್ಟಿ ಪರಿಷ್ಕರಣೆಯ ಕೆಲಸವನ್ನು ವಂಚಕ ಕಂಪನಿಗೆ ಕೊಟ್ಟಿದೆ. ಅಮೇರಿಕಾದ ವಾಟರ್‍ಗೇಟ್ ಪ್ರಕರಣದಂತೆ ಇದು ವೋಟರ್ ಗೇಟ್ ಪ್ರಕರಣ. ಈ ಹಗರಣದಲ್ಲಿ ನೇರವಾಗಿ ಬಸವರಾಜ ಬೊಮ್ಮಾಯಿ ಶಾಮೀಲಾಗಿದ್ದಾರೆ. ಈ ಹಗರಣದಲ್ಲಿ ಬಡಪಾಯಿಗಳ ಮೇಲೆ ಮೊಕದ್ದಮೆ ದಾಖಲು ಮಾಡಿಕೊಂಡು ಬಂಧಿಸಿ ನೈಜ ಅಪರಾಧಿಗಳನ್ನು ರಕ್ಷಣೆ ಮಾಡಲಾಗುತ್ತಿದೆ,’ ಎಂದು ಹೂಂಕರಿಸಿದ್ದರು.
ಅಷ್ಟೇ ಅಲ್ಲ ಸಿದ್ದರಾಮಯ್ಯ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದರು. ‘ ಮತದಾರರ ಪಟ್ಟಿ ಪರಿಷ್ಕರಣೆಯ ಅಕ್ರಮದ ಬಗ್ಗೆ ಚುನಾವಣೆ ಆಯೋಗಕ್ಕೆ ದೂರು ನೀಡಿ ನ್ಯಾಯಾಂಗ ತನಿಖೆಗೆ ನೀವೇ ಒಪ್ಪಿಸಬಹುದು ಎಂದು ಮನವರಿಕೆ ಮಾಡಿಕೊಟ್ಟಿದ್ದೇವೆ. ಆಯೋಗ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಕೇಂದ್ರ ಚುನಾವಣೆ ಆಯೋಗ ಬಳಿ ನ್ಯಾಯಕ್ಕಾಗಿ ಮೊರೆ ಹೋಗುತ್ತೇವೆ.,’ ಎಂದೂ ಹೇಳಿದ್ದರು.
ಹಾಗೆಯೇ ಕರ್ನಾಟಕ ಕಾಂಗ್ರೆಸ್ ಕೂಡ ಟ್ವೀಟ್ ಮಾಡಿತ್ತು. ‘ ಚಿಲುಮೆ ಎಜುಕೇಷನ್ ಇನ್ಸಿಟಿಟ್ಯುಟ್ ಎಂಬ ಸಂಸ್ಥೆ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಮತದಾರರ ಮಾಹಿತಿ ಕಳ್ಳತನ ನಡೆದಿದೆ. ಈ ಅಕ್ರಮಕ್ಕೆ ಬೆಂಗಳೂರು ಉಸ್ತುವಾರಿ ಹೊತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರೇ ನೇರ ಹೊಣೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಅಕ್ರಮ ಈಗ ಚುನಾವಣೆ ಪ್ರಕ್ರಿಯೆಗೂ ವಿಸ್ತರಿಸಿದೆ,’ ಎಂದು ಟ್ವೀಟ್ ಮೂಲಕ ಆರೋಪಿಸಿತ್ತು.
‘ಸರ್ಕಾರಿ ನೌಕರರೆಂದು ಐಡೆಂಟಿಟಿ ಕಾರ್ಡ್ ಕೊಟ್ಟಿದ್ದಾರೆ. ಎಲೆಕ್ಷನ್ ಕಮೀಷನ್ ಮಾಡೋ ಕೆಲಸವನ್ನು ಬೇರೆ ಖಾಸಗಿಯವರಿಗೆ ಕೊಟ್ಟಿದ್ದಾರೆ. ತುಷಾರ್ ಗಿರಿನಾಥ್ ಸೀನಿಯರ್ ಐಎಎಸ್ ಅಧಿಕಾರಿ ಆಗಿದ್ದಾರೆ. ಈ ಕೆಲಸದಿಂದ ಅವರು ಗೌರವ ಕಳೆದುಕೊಳ್ಳುತ್ತಿದ್ದಾರೆ,’ ಎಂದು ಡಿ ಕೆ ಶಿವಕುಮಾರ್ ಹೇಳಿದ್ದರು.
ಹಾಗೆಯೇ ‘ಒಂದು ಜಡ್ಜ್ಗೆ ಇರುವ ಅಥಾರಿಟಿ ಕಮಿಷನರ್ಗೆ ಇರುತ್ತೆ. ಚಿಲುಮೆ ಅಂತ ಹಿಂದೆ ಒಂದು ಹೆಸರು ಇತ್ತು. ಈಗ ಬದಲಾವಣೆ ಮಾಡಿದ್ದಾರೆ. ನಾವು ಮಾಡಿದ್ದು ಗಂಭೀರ ಆರೋಪ ಅಲ್ಲ. ಆದರೆ, ಸತ್ಯ. ಚಿಲುಮೆ ಎಂಟರ್ ಪ್ರೈಸಸ್, ಡಿಎಪಿ ಹೊಂಬಾಳೆಯಿಂದ ಮತದಾರರ ಡೇಟಾ ಸಂಗ್ರಹ ಹಿನ್ನೆಲೆ ದೂರು ಸಲ್ಲಿಸಿದ್ದೇವೆ. ಮತದಾನದ ಹಕ್ಕನ್ನೇ ಕಿತ್ತುಕೊಳ್ಳುವ ದೊಡ್ಡ ಪ್ರಯತ್ನ ನಡೆದಿದೆ. 7-8 ಸಾವಿರ ಕಾರ್ಯಕರ್ತರು ಬಿಎಲ್ಓ ಐಡಿ ಕಾರ್ಡ್ ಇಟ್ಟುಕೊಂಡು ಕೆಲಸ ಮಾಡಿದ್ದಾರೆ. ಸಚಿವ ಅಶ್ವತ್ಥನಾರಾಯಣ ಬಾಳ ಒಳ್ಳೆ ಕೆಲಸ ಮಾಡ್ತಿದ್ದಾರೆ ಎಂದು ಹರಿಹಾಯ್ದಿದ್ದನ್ನು ಸ್ಮರಿಸಬಹುದು.
ಚಿಲುಮೆ ಶೈಕ್ಷಣಿಕ ಸಾಮಾಜಿಕ ಸಾಂಸ್ಕತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಮಾಹಿತಿ ಕದ್ದ ಆರೋಪ ಪ್ರಕರಣ ಸಂಬಂಧ ಸಂಪೂರ್ಣ ತನಿಖೆ ನಡೆಸಲು ರಾಜ್ಯ ಚುನಾವಣೆ ಆಯೋಗ ತನಿಖಾಧಿಕಾರಿಯನ್ನು ನೇಮಿಸಿತ್ತು. ಬೆಂಗಳೂರು ಪ್ರಾದೇಶಿಕ ಆಯುಕ್ತ ಅಮ್ಲನ್ ಬಿಸ್ವಾಸ್ ಅವರನ್ನು ಈ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ನೀಡಿ ಚುನಾವಣೆ ಆಯೋಗ ಆದೇಶ ಹೊರಡಿಸಿತ್ತು.
ಅಷ್ಟೇ ಅಲ್ಲದೇ ಈ ಪ್ರಕರಣದ ಕುರಿತಾಗಿ ತನಿಖೆ ನಡೆಸುವ ಸಂಬಂಧ ತೆರೆದಿದ್ದ ಕಡತವು ಕಳೆದ ಒಂದು ವರ್ಷದಿಂದ ಒಬ್ಬನೇ ಒಬ್ಬ ಅಧಿಕಾರಿಯ ಲಾಗಿನ್‌ನಲ್ಲೇ ಇತ್ತು.
‘ಚಿಲುಮೆ’ ಹಗರಣ; ಕಡತಕ್ಕೆ ಸಿಗದ ಮುಕ್ತಿ, ಒಂದು ವರ್ಷದಿಂದ ಒಬ್ಬೇ ಒಬ್ಬ ಅಧಿಕಾರಿ ಲಾಗಿನ್‌ನಲ್ಲೇಕಿದೆ?
ಚಿಲುಮೆ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಆ ಸಂಸ್ಥೆಯ ಕೆ.ಎಂ.ಲೋಕೇಶ್ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವುದನ್ನು ಸ್ಮರಿಸಬಹುದು.