ಬೆಂಗಳೂರು: ಗ್ಯಾರಂಟಿ ಯೋಜನೆ ಜಾರಿ ನಂತರ ರಾಜ್ಯದಲ್ಲಿ ವ್ಯಾಪಾರ-ವಹಿವಾಟು ಹೆಚ್ಚಳವಾಗಿದ್ದು, ಇದರ ಪರಿಣಾಮ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದಲ್ಲಿ ಭಾರಿ ಏರಿಕೆ ಕಂಡಿದೆ ಎಂದು ರಾಜ್ಯ ಸರ್ಕಾರ ಪ್ರಚಾರ ಮಾಡುತ್ತಿದ್ದರೂ ಈ ಗ್ಯಾರಂಟಿ ಯೋಜನೆಯ ಭಾಗವಾಗಿ ಜಾರಿಗೆ ಬಂದಿರುವ ʻಗೃಹಲಕ್ಷ್ಮಿʼ ಯೋಜನೆಗೆ ಆರಂಭಿಕ ಹಂತದಲ್ಲಿ ಮಾಡಿದ್ದ ವೆಚ್ಚಕ್ಕೂ ಮತ್ತು ಈ ಯೋಜನೆಯು ಜಿಎಸ್‌ಟಿಗೆ ನೀಡಿರುವ ಕೊಡುಗೆಯ ನಡುವೆ ಅಜಗಜಾಂತರವಿದೆ ಎಂದು ಸರ್ಕಾರದ ವಿತ್ತೀಯ ಕಾರ್ಯ ನೀತಿ ಸಂಸ್ಥೆ ನಡೆಸಿದ ಅಧ್ಯಯನವೇ ಬಹಿರಂಗಪಡಿಸಿದೆ.
ರಾಜ್ಯ ಸರ್ಕಾರದ ʻವಿತ್ತೀಯ ಕಾರ್ಯ ನೀತಿ ಸಂಸ್ಥೆʼ ಗೃಹಲಕ್ಷಿ ಯೋಜನೆ ಕುರಿತು ಅಧ್ಯಯನ ನಡೆಸಿದ್ದು, ಇದರ ವರದಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಈ ಯೋಜನೆಗೆ ಪ್ರಾರಂಭಿಕ ಹಂತದಲ್ಲಿ 18,159.4 ಕೋಟಿ ರು. ವೆಚ್ಚ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಯೋಜನೆಯು ಜಿಎಸ್‌ಟಿಗೆ 635.47 ಕೋಟಿ ರು. ಕೊಡುಗೆ ನೀಡಿತ್ತು. ಯೋಜನೆಗೆ ಮಾಡಿದ್ದ ವೆಚ್ಚಕ್ಕೂ ಮತ್ತು ಜಿಎಸ್‌ಟಿ ಮೂಲಕ ಗಳಿಸಿರುವ ಆದಾಯದ ಮಧ್ಯೆ 17,523.93 ಕೋಟಿ ರು. ಅಂತರವಿದೆ ಎಂದು ಈ ಅಧ್ಯಯನ ವರದಿಯಿಂದ ಬಹಿರಂಗಗೊಂಡಿದೆ.
2024-25ನೇ ಸಾಲಿನಲ್ಲಿ ಈ ಯೋಜನೆಯು ಜಿಎಸ್‌ಟಿಗೆ 953.20 ಕೋಟಿ ರು. ಕೊಡುಗೆ ನೀಡಿದೆ. ಆದರೆ ಈ ಯೋಜನೆಗೆ 28,608.40 ಕೋಟಿ ರು. ವೆಚ್ಚ ಮಾಡಲಾಗಿತ್ತು. ಯೋಜನೆಗೆ ಮಾಡಿರುವ ವೆಚ್ಚ ಮತ್ತು ಜಿಎಸ್‌ಟಿ ಮೂಲಕ ಗಳಿಸಿರುವ ಆದಾಯದ ಮಧ್ಯೆ 27,655.2 ಕೋಟಿ ರು ನಷ್ಟು ಅಂತರವಿದೆ.
ʻಹೊಂದಾಣಿಕೆಯಾದ ಬಳಕೆಯ ಮಾದರಿʼ ಯಡಿ ಗೃಹಲಕ್ಷ್ಮಿಯ ನಿವ್ವಳ ಹಣಕಾಸಿನ ಪರಿಣಾಮವನ್ನೂ ಸಂಶೋಧಕರು ಒರೆಗೆ ಹಚ್ಚಿದ್ದಾರೆ. ಈ ಮಾದರಿ ಪ್ರಕಾರ ಗೃಹಲಕ್ಷ್ಮಿ ಯೋಜನೆಯಿಂದಾಗಿ ಜಿಎಸ್‌ಟಿ ಮೂಲಕ ಸರ್ಕಾರ 743.52 ಕೋಟಿ ರು.ನಷ್ಟು ಆದಾಯ ಗಳಿಸಿದೆ. 2024ರ ಮಾರ್ಚ್ ಹೊತ್ತಿಗೆ ಈ ಯೋಜನೆಗೆ 18,159.4 ಕೋಟಿ ರು ವೆಚ್ಚ ಮಾಡಿತ್ತು. ಈ ಮಾದರಿ ಪ್ರಕಾರ ಯೋಜನೆಗೆ ಮಾಡಿದ್ದ ವೆಚ್ಚ ಮತ್ತು ಗಳಿಸಿರುವ ಆದಾಯದ ಮಧ್ಯೆ 17,415.88 ಕೋಟಿ ರು ಅಂತರವಿದೆ.
2024-25ನೇ ಸಾಲಿನಲ್ಲಿ ಈ ಯೋಜನೆ ಮೂಲಕ 1,115.28 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದೆ. ಆದರೆ ಈ ಸಾಲಿನಲ್ಲಿ ಯೋಜನೆಗೆ 28,608.40 ಕೋಟಿ ರು. ನಷ್ಟು ಹಣ ವ್ಯಯಮಾಡಲಾಗಿತ್ತು. ಯೋಜನೆಗೆ ಮಾಡಿದ್ದ ವೆಚ್ಚಕ್ಕೂ ಗಳಿಸಿರುವ ಆದಾಯದ ಮಧ್ಯೆ 27,493.12 ಕೋಟಿ ರು. ಅಂತರವಿದೆ ಎಂದು ಈ ಅಧ್ಯಯನದಿಂದ ತಿಳಿದು ಬಂದಿದೆ.
ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?
ರಾಜ್ಯದ ಒಟ್ಟು ಹೊಣೆಗಾರಿಕೆಯು, ಬಾಕಿ ಇರುವ ಸಾಲಗಳು, ಬಜೆಟ್‌ನಿಂದ ಹೊರಗಿರುವ ಸಾಲಗಳು ಮತ್ತು ಸಾರ್ವಜನಿಕ ಖಾತೆ ಹೊಣೆಗಾರಿಕೆಗಳನ್ನು ಒಳಗೊಂಡಿವೆ. ಬಾಕಿ ಇರುವ ಸಾಲವು ಬಜೆಟ್‌ನಿಂದ ಹೊರಗಿರುವ ಸಾಲಗಳನ್ನು ಒಳಗೊಂಡಿದೆ. ಬಾಕಿ ಇರುವ ಸಾಲವು ಜಿಎಸ್‌ಡಿಪಿಯ ಶೇ.25ರ ಗುರಿಯನ್ನು ಮೀರದಂತೆ ನೋಡಿಕೊಳ್ಳುತ್ತದೆ.
2024-25 ರ ಮಧ್ಯಂತರ ಹಣಕಾಸು ನೀತಿ ಪ್ರಕಾರ ಕರ್ನಾಟಕ ರಾಜ್ಯದ ಒಟ್ಟು ಹೊಣೆಗಾರಿಕೆ ಮತ್ತು ಬಾಕಿ ಸಾಲದಲ್ಲಿ ಗೃಹಲಕ್ಷ್ಮಿ ಯೋಜನೆಯ ಶೇಕಡಾವಾರು ಪಾಲು ಕುರಿತು ಈ ಅಧ್ಯಯನ ವರದಿಯು ಬೆಳಕು ಚೆಲ್ಲಿದೆ. 2023-24 ನೇ ಸಾಲಿಗೆ ಸಂಬಂಧಿಸಿದಂತೆ ಬಾಕಿ ಸಾಲದಲ್ಲಿ ಯೋಜನೆಯ ಪಾಲು ಸುಮಾರು ಶೇ. 3.08, ಮತ್ತು 2024-25 ರಲ್ಲಿ ಶೇ. 4.35 ಆಗಿದೆ. ಅದೇ ರೀತಿ ಒಟ್ಟು ಹೊಣೆಗಾರಿಕೆಯಲ್ಲಿ, ಗೃಹಲಕ್ಷ್ಮಿ ಯೋಜನೆಯ ಶೇಕಡಾವಾರು ಪಾಲು 2023-24 ಮತ್ತು 2024-2025 ರಲ್ಲಿ ಕ್ರಮವಾಗಿ ಶೇ. 3.01 ಮತ್ತು ಶೇ. 4.30 ಆಗಿದೆ ಎಂದು ವರದಿಯು ಹೇಳಿದೆ.
2023-24ರಲ್ಲಿ ಬಾಕಿ ಸಾಲವು ಆಯವ್ಯಯ ವೆಚ್ಚದ ಪ್ರಕಾರ 5,60,189 ಕೋಟಿ ರು. ಇತ್ತು. ಆದಾಯ ವೆಚ್ಚದಂತೆ 2023-24ರಲ್ಲಿ ಬಾಕಿ ಸಾಲವು 5,67,751 ಕೋಟಿ ರು. ಇದೆ. 2024-25ನೇ ಸಾಲಿನ ಆಯವ್ಯಯ ವೆಚ್ಚದಂತೆ 6,57,588 ಕೋಟಿ ರು. ಏರಿದೆ. ಒಟ್ಟಾರೆ ಹೊಣೆಗಾರಿಕೆಯು 2023-24ರಲ್ಲಿ ಆಯವ್ಯಯ ವೆಚ್ಚದಂತೆ 5,71,665 ಕೋಟಿ, ಆದಾಯ ವೆಚ್ಚ ಪ್ರಕಾರ 5,81,228 ಕೋಟಿ ರು. ಇದೆ. 2024-25ನೇ ಸಾಲಿನಲ್ಲಿ 6,65,095 ಕೋಟಿ ರು. ಇದೆ.
ಬಾಕಿ ಸಾಲಕ್ಕೆ ʻಗೃಹ ಲಕ್ಷ್ಮಿʼ ಯೋಜನೆಯು 2023-24ರಲ್ಲಿ ಆಯವ್ಯಯ ವೆಚ್ಚದಂತೆ ಶೇ. 3.12ರಷ್ಟು ಪಾಲು ಹೊಂದಿದೆ. ಆದಾಯ ವೆಚ್ಚದಂತೆ ಶೇ.3.08ರಷ್ಟಿದೆ. 2024-25ನೇ ಸಾಲಿನಲ್ಲಿ ಆಯವ್ಯಯ ವೆಚ್ಚದ ಪ್ರಕಾರ ಶೇ.4.35ರಷ್ಟಿದೆ. ಹಾಗೆಯೇ ಒಟ್ಟು ಹೊಣೆಗಾರಿಕೆಗೆ ಸಂಬಂಧಿಸಿದಂತೆ 2023-24ರಲ್ಲಿ ಆಯವ್ಯಯ ವೆಚ್ಚದಂತೆ ಶೇ. 3.06ರಷ್ಟು, ಆದಾಯ ವೆಚ್ಚದಂತೆ ಶೇ.3.01, 2024-25ನೇ ಸಾಲಿನಲ್ಲಿ ಆಯವ್ಯಯ ವೆಚ್ಚದಂತೆ ಶೇ.4.30ರಷ್ಟಿದೆ.
2024-25ನೇ ಸಾಲಿನ ರಾಜ್ಯದ ಆದಾಯ ಕೊರತೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಪಾಲು ಶೇ. 104ರಷ್ಟಿತ್ತು ಎಂದು ಈ ವಿತ್ತೀಯ ಸಂಸ್ಥೆಯ ಅಧ್ಯಯನವು ಹೇಳಿದೆ.
2023-24ರಲ್ಲಿ ಆಯವ್ಯಯ ವೆಚ್ಚ 2,50,933 ಕೋಟಿ ರು ಇತ್ತು. ಆದಾಯ ವೆಚ್ಚವು 2,40.731 ಕೋಟಿ ರು ಇತ್ತು. 2024-25ನೇ ಸಾಲಿನಲ್ಲಿ ಆಯವ್ಯಯ ವೆಚ್ಚವು 2,90,531 ಕೋಟಿ ಇತ್ತು. ಆಗ ರಾಜ್ಯದ ಆದಾಯದ ಕೊರತೆಯು 2023-24ರಲ್ಲಿ ಆಯವ್ಯಯ ವೆಚ್ಚದ ಪ್ರಕಾರ 12,523 ಕೋಟಿ ರು. ಇತ್ತು. ಆದಾಯ ವೆಚ್ಚವು 13,951 ಕೋಟಿ ರು. ಇತ್ತು. 2024-25ನೇ ಸಾಲಿನಲ್ಲಿ ಆಯವ್ಯಯ ವೆಚ್ಚವು 27,354 ಕೋಟಿ ರು. ಇತ್ತು.
2023-24ರಲ್ಲಿ ಆಯವ್ಯಯ ವೆಚ್ಚದಲ್ಲಿ ಗೃಹಲಕ್ಷ್ಮಿ ಯೋಜನೆಯ ಪಾಲು ಶೇ. 6.97ರಷ್ಟಿತ್ತು ಆದಾಯ ವೆಚ್ಚವು ಶೇ.7.26ರಷ್ಟಿತ್ತು. 2024-25ನೇ ಸಾಲಿನಲ್ಲಿ ಶೇ.9.84ರಷ್ಟಿತ್ತು. ಹಾಗೆಯೇ ಆದಾಯ ಕೊರತೆಗೆ ಸಂಬಂಧಿಸಿದಂತೆ ಗೃಹ ಲಕ್ಷ್ಮಿಯ ಪಾಲು 2023-14ರಲ್ಲಿ (ಆಯವ್ಯಯ ವೆಚ್ಚದಂತೆ) ಶೇ.139ರಷ್ಟಿತ್ತು. ಆದಾಯ ವೆಚ್ಚದಂತೆ ಶೇ. 125ರಷ್ಟಿತ್ತು. 2024-25ನೇ ಸಾಲಿನಲ್ಲಿ ಆದಾಯ ಕೊರತೆಯಲ್ಲಿ ಗೃಹ ಲಕ್ಷ್ಮಿ ಯೋಜನೆಯ ಪಾಲು ಶೇ. 104.5ರಷ್ಟಿತ್ತು ಎಂದು ಸಂಶೋಧನೆ ವರದಿಯು ವಿವರಿಸಿದೆ.
ಮಧ್ಯಂತರ ಹಣಕಾಸು ಯೋಜನೆಯ 2024-28ರ ವರದಿ ಪ್ರಕಾರ 2023-24 ರ ಬಜೆಟ್‌ನಲ್ಲಿ 12,523 ಕೋಟಿ ರು ಗಳಿದ್ದ ಆದಾಯ ಕೊರತೆಯು ರೂ. 2024-25 ರ ಬಜೆಟ್‌ನಲ್ಲಿ ರೂ. 27,354 ಕೋಟಿಗಳಿಗೆ ಏರಿತ್ತು. ಈ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದರೆ ಬದ್ಧ ವೆಚ್ಚದಲ್ಲಿನ ಹೆಚ್ಚಳ. ಸಂಬಳ, ಪಿಂಚಣಿ, ಬಡ್ಡಿ ಪಾವತಿ ಮತ್ತು ಆಡಳಿತಾತ್ಮಕ ವೆಚ್ಚಗಳಂತಹ ಯೋಜನೆ ಆಧಾರಿತವಲ್ಲದ ವೆಚ್ಚಗಳು ಹಿಂದಿನ ವರ್ಷಕ್ಕಿಂತ ಶೇ 14% ರಷ್ಟು ಹೆಚ್ಚಾಗಿತ್ತು ಎಂದು ವರದಿಯು ವಿಶ್ಲೇಷಿಸಿದೆ.
ನಿಖರವಾದ ವೆಚ್ಚ ತರ್ಕಬದ್ಧಗೊಳಿಸುವ ಉಪಕ್ರಮಗಳ ಪ್ರಕಾರ ಅನಿವಾರ್ಯವಲ್ಲದ ಕಾರ್ಯಕ್ರಮಗಳ ಕಾರ್ಯತಂತ್ರದ ಸ್ಥಗಿತಗೊಳಿಸುವಿಕೆಯಿಂದಾಗಿ ರಾಜ್ಯವು 2023-24 ರ ಆದಾಯ ವೆಚ್ಚದಲ್ಲಿ ಕಡಿತವನ್ನು ಸಾಧಿಸಿತ್ತು. ಇದು ಗಮನಾರ್ಹವಾಗಿ 10,202 ಕೋಟಿ ರು. ಗಳ ಕಡಿತವನ್ನು ಪ್ರತಿನಿಧಿಸಿತ್ತು.
ಒಟ್ಟು ಆದಾಯ ಕೊರತೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಪಾಲು 2023-24 ಮತ್ತು 2024-25 ರ ಕ್ರಮವಾಗಿ ಸುಮಾರು ಶೇ. 125 ಮತ್ತು ಶೇ. 104.5ರಷ್ಟಿತ್ತು. ಕರ್ನಾಟಕ ಆರ್ಥಿಕ ಸಂಹಿತೆ 2002ರ ಮಾನದಂಡಗಳ ಪ್ರಕಾರ, ಸರ್ಕಾರವು ಆದಾಯ ಕೊರತೆಯನ್ನು ಶೂನ್ಯಕ್ಕೆ ಕಾಯ್ದುಕೊಳ್ಳಬೇಕು. ಆದರೆ ಈ ಯೋಜನೆಯ ವೆಚ್ಚವು ಕರ್ನಾಟಕದ ಆದಾಯ ಕೊರತೆಯನ್ನು ಮೀರಿದೆ ಎಂದು ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.
ರಾಜ್ಯದ ಆದಾಯ ಕೊರತೆಯಲ್ಲಿ ‘ಗೃಹಲಕ್ಷ್ಮಿ’ ಯ ಪಾಲು ಶೇ.104; ಸಂಶೋಧನೆ ವರದಿ
ಕೆಎಫ್‌ಆರ್‍ಎ ಮಾನದಂಡಗಳ ಪ್ರಕಾರ ಆದಾಯ ಕೊರತೆಯನ್ನು ರಾಜ್ಯದ ಒಟ್ಟು ಜಿಎಸ್‌ಡಿಪಿಯ ಶೇ.3ರೊಳಗೇ ನಿರ್ವಹಿಸಲಾಗುತ್ತದೆ. (KFRA ಕಾಯ್ದೆ 2002). 2023-24 ರ ಪರಿಷ್ಕೃತ ಅಂದಾಜುಗಳಲ್ಲಿ ರಾಜ್ಯವು ಶೇ. 2.67ರಷ್ಟು ಹಣಕಾಸಿನ ಕೊರತೆಯನ್ನು ಅಂದಾಜಿಸಿತ್ತು. 2024-25 ರಲ್ಲಿ ಶೇ. 2.95ರಷ್ಟು ಹಣಕಾಸಿನ ಕೊರತೆ , 2023-24ರಲ್ಲಿ 68,505 ಕೋಟಿ ಮತ್ತು 2024-25ರಲ್ಲಿ 82,981 ಕೋಟಿ ರು ಆದಾಯ ವೆಚ್ಚವೆಂದು ಅಂದಾಜಿಸಿತ್ತು.
ಮಹಿಳಾ ಸಬಲೀಕರಣ ಗುರಿ ಹೊಂದಿರುವ ಗೃಹಲಕ್ಷ್ಮಿ ಯೋಜನೆಯು ರಾಜ್ಯದ ಒಟ್ಟು ಹಣಕಾಸಿನ ಕೊರತೆಗೆ ಗರಿಷ್ಠ ಪಾಲುದಾರಿಕೆ ಹೊಂದಿದೆ. ಈ ಯೋಜನೆ ಜಾರಿಯಿಂದ ಜಿಎಸ್‌ಟಿ ಸಂಗ್ರಹದಲ್ಲಿ ಏರಿಕೆಯಾಗಿದೆ ಎಂದು ಹೇಳಲಾಗಿದೆಯಾದರೂ ಈ ಯೋಜನೆ ಮೇಲಿನ ವೆಚ್ಚವು ಕರ್ನಾಟಕದ ಆದಾಯ ಕೊರತೆಯನ್ನು ಮೀರಿತ್ತು.
ಅದೇ ರೀತಿ ಕರ್ನಾಟಕ ರಾಜ್ಯದ ಒಟ್ಟು ಹೊಣೆಗಾರಿಕೆ ಮತ್ತು ಬಾಕಿ ಸಾಲದಲ್ಲಿ ಗೃಹ ಲಕ್ಷ್ಮಿ ಯೋಜನೆಯ ಪಾಲು ಸಹ ಹೆಚ್ಚುತ್ತಿದೆ. ಒಟ್ಟಾರೆ ಈ ಯೋಜನೆಯು ಹಣಕಾಸಿನ ಹೊಣೆಗಾರಿಕೆಗಳ ಸೃಷ್ಟಿಗೆ ಕಾರಣವಾಗುತ್ತದೆ. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಾಡಿರುವ ವೆಚ್ಚವು, ಈ ಯೋಜನೆಯಿಂದ ಉತ್ಪತ್ತಿಯಾಗುವ ಆದಾಯಕ್ಕಿಂತಲೂ ಹೆಚ್ಚಾಗಿದೆ ಎಂದು ಸಂಶೋಧನಾ ವರದಿಯೊಂದು ಹೊರಗೆಡವಿತ್ತು.
ಗೃಹ ಲಕ್ಷ್ಮಿ; ನಿರಂತರ ಸಾಲದ ಸುಳಿ, ಆದಾಯದ ಕೊರತೆ, ಹಣಕಾಸು ಹೊಣೆಗಾರಿಕೆ ಕಾಯ್ದೆ ಉಲ್ಲಂಘನೆ
ಯೋಜನೆ ಮೇಲಿನ ವೆಚ್ಚ, ಅದರ ಪರಿಣಾಮಗಳು, ಜಿಎಸ್‌ಟಿ ಸಂಗ್ರಹ ಮತ್ತು ಇದರಲ್ಲಾಗಿರುವ ಹೆಚ್ಚಳ, ಒಟ್ಟು ಹಣಕಾಸಿನ ಕೊರತೆ ಕುರಿತು ದತ್ತಾಂಶಗಳ ಮೂಲಕ ವಿಶ್ಲೇಷಿಸಿತ್ತು. ನಗದು ವರ್ಗಾವಣೆಯು ರಾಜ್ಯದ ಸಾಮಾಜಿಕ ಗುಂಪುಗಳಲ್ಲಿನ ಫಲಾನುಭವಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಯೋಜನೆಯು ದೀರ್ಘಾವಧಿಯವರೆಗೆ ನಡೆದರೆ, ಸಾರ್ವಜನಿಕ ವೆಚ್ಚದ ಹೊರೆಯ ವಿಷಯದಲ್ಲಿ ಯೋಜನೆಯ ಪರಿಣಾಮಗಳು ಕಡಿಮೆಯಾಗಬಹುದು. ಮತ್ತು ಭವಿಷ್ಯದಲ್ಲಿ ಧನಾತ್ಮಕ ಆದಾಯದ ಪರಿಣಾಮಗಳನ್ನು ಬೀರಬಹುದು ಎಂದು ಈ ಸಂಶೋಧನಾ ವರದಿಯು ವಿವರಿಸಿತ್ತು.
2023-24 ಮತ್ತು 2024-25ರಲ್ಲಿ ಈ ಯೋಜನೆಯ ಹಣಕಾಸು ನಿಧಿಗೆ ಕ್ರಮವಾಗಿ ಶೇ. 25.55, ಮತ್ತು ಶೇ. 33.29 ರಷ್ಟು ಹಂಚಿಕೆಯಾಗಿವೆ. 2023-24 ಮತ್ತು 2024-25ರ ಹೊಂದಾಣಿಕೆ ಮಾಡದ ಬಳಕೆ ವೆಚ್ಚದಲ್ಲಿ ಕರ್ನಾಟಕದ ಒಟ್ಟು ಹಣಕಾಸು ನಿಧಿಗೆ ಯೋಜನೆಯ ಹಂಚಿಕೆಯಲ್ಲಿ ಕ್ರಮವಾಗಿ ಶೇ. 25.38 ಮತ್ತು ಶೇ 33.08 ರಷ್ಟು ಹಂಚಿಕೆಯಾಗಿದೆ. ಹೊಂದಾಣಿಕೆ ಮಾಡದ ಬಳಕೆ ವೆಚ್ಚದೊಂದಿಗೆ ಈ ಯೋಜನೆಯ ನಿವ್ವಳ ಹಣಕಾಸಿನ ಪರಿಣಾಮದ ಲೆಕ್ಕಾಚಾರಗಳ ನಡುವಿನ ವ್ಯತ್ಯಾಸವು ಅತ್ಯಲ್ಪವಾಗಿತ್ತು ಎಂದು ಸಂಶೋಧನಾ ವರದಿಯಲ್ಲಿ ವಿವರಿಸಿತ್ತು.
‘ಹಣಕಾಸು ಠೇವಣಿಯಲ್ಲಿ ಯೋಜನೆಯ ಪಾಲು ಮತ್ತು ಯೋಜನೆಯ ನಿವ್ವಳ ಹಣಕಾಸಿನ ಪರಿಣಾಮಗಳು, ಹೊಂದಾಣಿಕೆ ಮಾಡದ ಬಳಕೆ ವೆಚ್ಚದಲ್ಲಿ ಸ್ವಲ್ಪ ಕಡಿಮೆ ಇದೆ. ಹಣಕಾಸಿನ ಕೊರತೆಯು ಸಂಪನ್ಮೂಲಗಳ ನಿವ್ವಳ ವರ್ಗಾವಣೆಯನ್ನು ಪ್ರತಿನಿಧಿಸುತ್ತದೆ. ಆದಾಗ್ಯೂ, ಈ ವರ್ಗಾವಣೆಯು ಕರ್ನಾಟಕ ಸರ್ಕಾರಕ್ಕೆ ಹಣಕಾಸಿನ ಹೊಣೆಗಾರಿಕೆಗಳ ಸೃಷ್ಟಿಗೆ ಕಾರಣವಾಗುತ್ತದೆ,’ ಎಂದು ವಿಶ್ಲೇಷಿಸಿತ್ತು.
2023-24 ಮತ್ತು 2024-25 ಸಾಲಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಒಟ್ಟು ಹೊಣೆಗಾರಿಕೆ ಮತ್ತು ಬಾಕಿ ಸಾಲದಲ್ಲಿ ಗೃಹಲಕ್ಷ್ಮಿ ಯೋಜನೆಯು ಶೇ.3.08 ಮತ್ತು ಶೇ 4.35ರಷ್ಟು ಶೇಕಡಾವಾರು ಪಾಲು ಹೊಂದಿದೆ. ಅದೇ ರೀತಿ ಒಟ್ಟು ಹೊಣೆಗಾರಿಕೆಯಲ್ಲಿ, ಗೃಹಲಕ್ಷ್ಮಿ ಯೋಜನೆಯು 2023-24 ಮತ್ತು 2024-2025 ರಲ್ಲಿ ಕ್ರಮವಾಗಿ ಶೇ. 3.01 ಮತ್ತು 4.30ರಷ್ಟಿದೆ ಎಂದು ವರದಿಯು ಬಹಿರಂಗಗೊಳಿಸಿತ್ತು.
ಹಾಗೆಯೇ ಈ ಯೋಜನೆಯು 2023-24 ಮತ್ತು 2024 ರ ಕರ್ನಾಟಕದ ಒಟ್ಟು ಹಣಕಾಸಿನ ಕೊರತೆಗೆ ಸರಿಸುಮಾರು ಶೇ. 25.38 ಮತ್ತು ಶೇ. 33.08ರಷಷ್ಟು ಪಾಲು ಹೊಂದಿತ್ತು.
ಗೃಹಲಕ್ಷ್ಮಿ ಯೋಜನೆಯ ಮೇಲೆ ಮಾಡಿದ ವೆಚ್ಚದ ದತ್ತಾಂಶ ಹೊಂದಾಣಿಕೆ ಮತ್ತು ದತ್ತಾಂಶ ಹೊಂದಾಣಿಕೆ ಮಾಡದ ಆದಾಯದ ಕೊಡುಗೆಯು ಕ್ರಮವಾಗಿ ಶೇ 15.65 ಮತ್ತು ಶೇ 18.31ರಷ್ಟಿದೆ. ಈ ಎರಡು ವಿಧಾನಗಳನ್ನು ಬಳಸಿಕೊಂಡಿರುವ ಸಂಶೋಧಕರು, ಆದಾಯ ಕೊಡುಗೆಯಲ್ಲಿನ ವ್ಯತ್ಯಾಸವು ಗಮನಾರ್ಹವಾಗಿಲ್ಲ. 2011-12ರಿಂದ 2022-23ರವರೆಗೆ ಕರ್ನಾಟಕದ ಸರಕು ಬಳಕೆಯ ಮಾದರಿಯಲ್ಲಿ ಯಾವುದೇ ಪ್ರಮುಖ ಬದಲಾವಣೆಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ವರದಿಯಲ್ಲಿ ವಿವರಿಸಿದ್ದರು.
‘ಗೃಹಲಕ್ಷ್ಮಿ ಅಡಿಯಲ್ಲಿ ವೆಚ್ಚವು ಯೋಜನೆಯಿಂದ ಉತ್ಪತ್ತಿಯಾಗುವ ಆದಾಯಕ್ಕಿಂತ ಹೆಚ್ಚಾಗಿದೆ. ಆದಾಗ್ಯೂ, ಇದು ಕಲ್ಯಾಣ ಆಧಾರಿತ ಯೋಜನೆಯಾಗಿದೆ. ಇದು ರಾಜ್ಯದ ಅರ್ಹ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ,’ ಎಂದು ವರದಿಯಲ್ಲಿ ಹೇಳಲಾಗಿತ್ತು.