ಹೊಣೆಗಾರಿಕೆ, ಬಾಕಿ ಸಾಲದಲ್ಲಿ ‘ಗೃಹಲಕ್ಷ್ಮಿ’ ಪಾಲು ಹೆಚ್ಚಳ; ಆದಾಯಕ್ಕಿಂತಲೂ ವೆಚ್ಚವೇ ಹೆಚ್ಚೆಂದ ಸಂಶೋಧನಾ ವರದಿ

ಬೆಂಗಳೂರು; ಮಹಿಳಾ ಸಬಲೀಕರಣ ಗುರಿ ಹೊಂದಿರುವ ಗೃಹಲಕ್ಷ್ಮಿ ಯೋಜನೆಯು ರಾಜ್ಯದ ಒಟ್ಟು ಹಣಕಾಸಿನ ಕೊರತೆಗೆ ಗರಿಷ್ಠ ಪಾಲುದಾರಿಕೆ ಹೊಂದಿದೆ. ಈ ಯೋಜನೆ ಜಾರಿಯಿಂದ ಜಿಎಸ್‌ಟಿ ಸಂಗ್ರಹದಲ್ಲಿ ಏರಿಕೆಯಾಗಿದೆ ಎಂದು ಹೇಳಲಾಗಿದೆಯಾದರೂ ಈ ಯೋಜನೆ ಮೇಲಿನ ವೆಚ್ಚವು ಕರ್ನಾಟಕದ ಆದಾಯ ಕೊರತೆಯನ್ನು ಮೀರಿದೆ.

 

ಅದೇ ರೀತಿ ಕರ್ನಾಟಕ ರಾಜ್ಯದ ಒಟ್ಟು ಹೊಣೆಗಾರಿಕೆ ಮತ್ತು ಬಾಕಿ ಸಾಲದಲ್ಲಿ ಗೃಹ ಲಕ್ಷ್ಮಿ ಯೋಜನೆಯ ಪಾಲು ಸಹ ಹೆಚ್ಚುತ್ತಿದೆ. ಒಟ್ಟಾರೆ ಈ ಯೋಜನೆಯು ಹಣಕಾಸಿನ ಹೊಣೆಗಾರಿಕೆಗಳ ಸೃಷ್ಟಿಗೆ ಕಾರಣವಾಗುತ್ತದೆ. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಾಡಿರುವ ವೆಚ್ಚವು, ಈ ಯೋಜನೆಯಿಂದ ಉತ್ಪತ್ತಿಯಾಗುವ ಆದಾಯಕ್ಕಿಂತಲೂ ಹೆಚ್ಚಾಗಿದೆ ಎಂದು ಸಂಶೋಧನಾ ವರದಿಯೊಂದು ಹೊರಗೆಡವಿದೆ.

 

ಗೃಹ ಲಕ್ಷ್ಮಿ ಯೋಜನೆಯ ಫ‌ಲಾನುಭವಿಗಳನ್ನು ಬಳಸಿಕೊಂಡು ಇನ್ನಷ್ಟು ಆರ್ಥಿಕ ಶಕ್ತಿ ನೀಡುವ ಸಲುವಾಗಿ ಜಂಟಿ ಹೊಣೆಗಾರಿಕೆ ಗುಂಪುಗಳನ್ನು  ರಚಿಸಲು ಸರಕಾರ ಚಿಂತನೆ ನಡೆಸಿರುವ ಹೊತ್ತಿನಲ್ಲೇ ಈ ಯೋಜನೆ ಮೇಲಿನ ವೆಚ್ಚ ಮತ್ತು ಆದಾಯದ ಕುರಿತಾದ ಸಂಶೋಧನೆ ವರದಿಯು ಮುನ್ನೆಲೆಗೆ ಬಂದಿದೆ.

 

ಸಂಶೋಧಕರು ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಮತ್ತು ಅದರ ಪರಿಣಾಮಗಳನ್ನು ಸಾಮಾಜಿಕ ಕಲ್ಯಾಣ ಯೋಜನೆಯಡಿಯಲ್ಲಿ ಹೆಚ್ಚಾಗಿ ಅವಲೋಕಿಸಿದ್ದಾರೆ. ಹಣಕಾಸಿನೇತರ ಪರಿಣಾಮಗಳನ್ನು ವಿಶ್ಲೇಷಿಸಿದ್ದಾರೆ. ಆದರೆ ಎಲ್ಲಿಯೂ ಈ ಯೋಜನೆ ಮೇಲಿನ ವೆಚ್ಚದಿಂದಾಗಿ ಉದ್ಭವಿಸಿರುವ ಆರ್ಥಿಕ  ಪರಿಣಾಮಗಳ ಕುರಿತು ವಿಶ್ಲೇಷಿಸಿಲ್ಲ.

 

ಕರ್ನಾಟಕ ವಿತ್ತೀಯ ಸಂಸ್ಥೆಯು ನಡೆಸಿರುವ ಈ ಸಂಶೋಧನೆಯು ಗೃಹ ಲಕ್ಷ್ಮಿ ಯೋಜನೆಯಿಂದಾಗಿ ರಾಜ್ಯದ ಒಟ್ಟಾರೆ ಹಣಕಾಸಿನ ನಿವ್ವಳ ಪರಿಣಾಮಗಳ ವಿವಿಧ ಮುಖಗಳನ್ನು ತೆರೆದಿಟ್ಟಿದೆ. ಅನುಪಮಾ ಗಿರಡಿ ಮಠ್‌ ಅವರು 2023-24 ಮತ್ತು 2024-25ನೇ ಸಾಲಿನ ಹಣಕಾಸಿನ ಅಂಕಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಸಂಶೋಧನೆ ನಡೆಸಿದ್ದಾರೆ.

 

ಗೃಹಲಕ್ಷ್ಮಿ ಯೋಜನೆಯ ಕಾರ್ಯಸಾಧುವಲ್ಲ, ಇದರಿಂದ ನಿರಂತರವಾಗಿ ಸಾಲದ ಸುಳಿಯಲ್ಲಿ ಸಿಲುಕಬೇಕಾಗುತ್ತದೆ. ಆದಾಯ ಕೊರತೆಗೆ ಕಾರಣವಾಗಲಿದೆ ಎಂದು ಆರ್ಥಿಕ ಇಲಾಖೆಯು ಯೋಜನೆಯ ಆರಂಭದಲ್ಲೇ ವಿವರಿಸಿತ್ತು. ಇದೀಗ ವಿತ್ತೀಯ ಕಾರ್ಯ ನೀತಿ ಸಂಸ್ಥೆಯು ನಡೆಸಿರುವ ಈ ಅಧ್ಯಯನ ವರದಿಯು ಮುನ್ನೆಲೆಗೆ ಬಂದಿದೆ.

 

ಗೃಹ ಲಕ್ಷ್ಮಿ; ನಿರಂತರ ಸಾಲದ ಸುಳಿ, ಆದಾಯದ ಕೊರತೆ, ಹಣಕಾಸು ಹೊಣೆಗಾರಿಕೆ ಕಾಯ್ದೆ ಉಲ್ಲಂಘನೆ

 

ವಿತ್ತೀಯ ಸಂಸ್ಥೆಯು ನಡೆಸಿರುವ  ಸಂಶೋಧನಾ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಯೋಜನೆ ಮೇಲಿನ ವೆಚ್ಚ, ಅದರ ಪರಿಣಾಮಗಳು, ಜಿಎಸ್‌ಟಿ ಸಂಗ್ರಹ ಮತ್ತು ಇದರಲ್ಲಾಗಿರುವ ಹೆಚ್ಚಳ, ಒಟ್ಟು ಹಣಕಾಸಿನ ಕೊರತೆ ಕುರಿತು ದತ್ತಾಂಶಗಳ ಮೂಲಕ ವಿಶ್ಲೇಷಿಸಿರುವುದು ಸಂಶೋಧನಾ ವರದಿಯಿಂದ ಗೊತ್ತಾಗಿದೆ.

 

ನಗದು ವರ್ಗಾವಣೆಯು ರಾಜ್ಯದ ಸಾಮಾಜಿಕ ಗುಂಪುಗಳಲ್ಲಿನ ಫಲಾನುಭವಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಯೋಜನೆಯು ದೀರ್ಘಾವಧಿಯವರೆಗೆ ನಡೆದರೆ, ಸಾರ್ವಜನಿಕ ವೆಚ್ಚದ ಹೊರೆಯ ವಿಷಯದಲ್ಲಿ ಯೋಜನೆಯ ಪರಿಣಾಮಗಳು ಕಡಿಮೆಯಾಗಬಹುದು. ಮತ್ತು ಭವಿಷ್ಯದಲ್ಲಿ ಧನಾತ್ಮಕ ಆದಾಯದ ಪರಿಣಾಮಗಳನ್ನು ಬೀರಬಹುದು ಎಂದು ಈ ಸಂಶೋಧನಾ ವರದಿಯು ವಿವರಿಸಿರುವುದು ತಿಳಿದು ಬಂದಿದೆ.

 

ಗೃಹಲಕ್ಷ್ಮಿ ಯೋಜನೆಯ ನಿವ್ವಳ ಹಣಕಾಸಿನ ಪರಿಣಾಮವನ್ನು ಹೊಂದಾಣಿಕೆ ಮಾಡಲಾದ ಬಳಕೆ ವೆಚ್ಚದ ದತ್ತಾಂಶಗಳು ಮತ್ತು ಹೊಂದಾಣಿಕ ಮಾಡಲಾದ ಬಳಕೆಯ ವೆಚ್ಚದ ದತ್ತಾಂಶವಿಲ್ಲದೇ ಎರಡು ಮಾರ್ಗಗಳೊಂದಿಗೆ ಒರೆಗೆ ಹಚ್ಚಿ ವಿಶ್ಲೇಷಿಸಲಾಗಿದೆ.

 

2023-24 ಮತ್ತು 2024-25ರಲ್ಲಿ ಈ ಯೋಜನೆಯ ಹಣಕಾಸು ನಿಧಿಗೆ ಕ್ರಮವಾಗಿ ಶೇ. 25.55, ಮತ್ತು ಶೇ. 33.29 ರಷ್ಟು ಹಂಚಿಕೆಯಾಗಿವೆ. 2023-24 ಮತ್ತು 2024-25ರ ಹೊಂದಾಣಿಕೆ ಮಾಡದ ಬಳಕೆ ವೆಚ್ಚದಲ್ಲಿ ಕರ್ನಾಟಕದ ಒಟ್ಟು ಹಣಕಾಸು ನಿಧಿಗೆ ಯೋಜನೆಯ ಹಂಚಿಕೆಯಲ್ಲಿ ಕ್ರಮವಾಗಿ ಶೇ. 25.38 ಮತ್ತು ಶೇ 33.08 ರಷ್ಟು ಹಂಚಿಕೆಯಾಗಿದೆ. ಹೊಂದಾಣಿಕೆ ಮಾಡದ ಬಳಕೆ ವೆಚ್ಚದೊಂದಿಗೆ ಈ ಯೋಜನೆಯ ನಿವ್ವಳ ಹಣಕಾಸಿನ ಪರಿಣಾಮದ ಲೆಕ್ಕಾಚಾರಗಳ ನಡುವಿನ ವ್ಯತ್ಯಾಸವು ಅತ್ಯಲ್ಪವಾಗಿತ್ತು ಎಂದು ಸಂಶೋಧನಾ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

‘ಹಣಕಾಸು ಠೇವಣಿಯಲ್ಲಿ ಯೋಜನೆಯ ಪಾಲು ಮತ್ತು ಯೋಜನೆಯ ನಿವ್ವಳ ಹಣಕಾಸಿನ ಪರಿಣಾಮಗಳು, ಹೊಂದಾಣಿಕೆ ಮಾಡದ ಬಳಕೆ ವೆಚ್ಚದಲ್ಲಿ ಸ್ವಲ್ಪ ಕಡಿಮೆ ಇದೆ. ಹಣಕಾಸಿನ ಕೊರತೆಯು ಸಂಪನ್ಮೂಲಗಳ ನಿವ್ವಳ ವರ್ಗಾವಣೆಯನ್ನು ಪ್ರತಿನಿಧಿಸುತ್ತದೆ. ಆದಾಗ್ಯೂ, ಈ ವರ್ಗಾವಣೆಯು ಕರ್ನಾಟಕ ಸರ್ಕಾರಕ್ಕೆ ಹಣಕಾಸಿನ ಹೊಣೆಗಾರಿಕೆಗಳ ಸೃಷ್ಟಿಗೆ ಕಾರಣವಾಗುತ್ತದೆ,’ ಎಂದು ವಿಶ್ಲೇಷಿಸಿರುವುದು ತಿಳಿದು ಬಂದಿದೆ.

 

2023-24 ಮತ್ತು 2024-25 ಸಾಲಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಒಟ್ಟು ಹೊಣೆಗಾರಿಕೆ ಮತ್ತು ಬಾಕಿ ಸಾಲದಲ್ಲಿ ಗೃಹಲಕ್ಷ್ಮಿ ಯೋಜನೆಯು ಶೇ.3.08 ಮತ್ತು ಶೇ 4.35ರಷ್ಟು ಶೇಕಡಾವಾರು ಪಾಲು ಹೊಂದಿದೆ. ಅದೇ ರೀತಿ ಒಟ್ಟು ಹೊಣೆಗಾರಿಕೆಯಲ್ಲಿ, ಗೃಹಲಕ್ಷ್ಮಿ ಯೋಜನೆಯು 2023-24 ಮತ್ತು 2024-2025 ರಲ್ಲಿ ಕ್ರಮವಾಗಿ ಶೇ. 3.01 ಮತ್ತು 4.30ರಷ್ಟಿದೆ ಎಂದು ವರದಿಯು ಬಹಿರಂಗಗೊಳಿಸಿದೆ.

 

ಹಾಗೆಯೇ ಈ ಯೋಜನೆಯು 2023-24 ಮತ್ತು 2024 ರ ಕರ್ನಾಟಕದ ಒಟ್ಟು ಹಣಕಾಸಿನ ಕೊರತೆಗೆ ಸರಿಸುಮಾರು ಶೇ. 25.38 ಮತ್ತು ಶೇ. 33.08ರಷಷ್ಟು ಪಾಲು ಹೊಂದಿದೆ ಎಂದು ವರದಿಯಲ್ಲಿ ವಿಶ್ಲೇಷಿಸಿರುವುದು ತಿಳಿದು ಬಂದಿದೆ.

 

ಗೃಹಲಕ್ಷ್ಮಿ ಯೋಜನೆಯ ಮೇಲೆ ಮಾಡಿದ ವೆಚ್ಚದ ದತ್ತಾಂಶ ಹೊಂದಾಣಿಕೆ ಮತ್ತು ದತ್ತಾಂಶ ಹೊಂದಾಣಿಕೆ ಮಾಡದ ಆದಾಯದ ಕೊಡುಗೆಯು ಕ್ರಮವಾಗಿ ಶೇ 15.65 ಮತ್ತು ಶೇ 18.31ರಷ್ಟಿದೆ. ಈ ಎರಡು ವಿಧಾನಗಳನ್ನು ಬಳಸಿಕೊಂಡಿರುವ ಸಂಶೋಧಕರು, ಆದಾಯ ಕೊಡುಗೆಯಲ್ಲಿನ ವ್ಯತ್ಯಾಸವು ಗಮನಾರ್ಹವಾಗಿಲ್ಲ.  2011-12ರಿಂದ 2022-23ರವರೆಗೆ ಕರ್ನಾಟಕದ ಸರಕು ಬಳಕೆಯ ಮಾದರಿಯಲ್ಲಿ ಯಾವುದೇ ಪ್ರಮುಖ ಬದಲಾವಣೆಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ವರದಿಯಲ್ಲಿ ವಿವರಿಸಿದ್ದಾರೆ.

 

‘ಗೃಹಲಕ್ಷ್ಮಿ ಅಡಿಯಲ್ಲಿ ವೆಚ್ಚವು ಯೋಜನೆಯಿಂದ ಉತ್ಪತ್ತಿಯಾಗುವ ಆದಾಯಕ್ಕಿಂತ ಹೆಚ್ಚಾಗಿದೆ. ಆದಾಗ್ಯೂ, ಇದು ಕಲ್ಯಾಣ ಆಧಾರಿತ ಯೋಜನೆಯಾಗಿದೆ. ಇದು ರಾಜ್ಯದ ಅರ್ಹ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ,’ ಎಂದು ವರದಿಯಲ್ಲಿ ಹೇಳಲಾಗಿದೆ.

Your generous support will help us remain independent and work without fear.

Latest News

Related Posts