ಇಸ್ಕಾನ್‌ ‘ಅಕ್ಷಯ ಪಾತ್ರೆ’ಗೆ 5.23 ಎಕರೆ ಸರ್ಕಾರಿ ಜಮೀನು; ಸಚಿವ ಸಂಪುಟಕ್ಕೆ ಪ್ರಸ್ತಾವ, ನಿಯಮ ಸಡಿಲಿಕೆ?

ಬೆಂಗಳೂರು;  5 ಎಕರೆ 23 ಗುಂಟೆ ವಿಸ್ತೀರ್ಣ ಹೊಂದಿರುವ  ಸರ್ಕಾರಿ ಬೀಳು ಜಮೀನನ್ನು ಖಾಸಗಿ ಸಂಸ್ಥೆಯಾಗಿರುವ ಇಸ್ಕಾನ್‌ಗೆ   ಮಂಜೂರು ಮಾಡುವ ಉದ್ದೇಶದಿಂದ ಕರ್ನಾಟಕ ಭೂ ಮಂಜೂರಾತಿ ನಿಯಮಗಳನ್ನೇ ಸಡಿಲಗೊಳಿಸುವ ಪ್ರಸ್ತಾವವನ್ನು ಕಂದಾಯ ಇಲಾಖೆಯು  ಸಚಿವ ಸಂಪುಟಕ್ಕೆ ಮಂಡಿಸಿದೆ.  

 

ಇಸ್ಕಾನ್‌ ಸಂಸ್ಥೆಯು ಖಾಸಗಿ ಸಂಸ್ಥೆಯಾಗಿರುವ ಕಾರಣ ನಿಯಮಗಳ ಪ್ರಕಾರ ಸರ್ಕಾರಿ ಜಮೀನನ್ನು ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲ. ಆದರೂ ಸಹ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 27ನ್ನು ಮುಂದಿರಿಸಿರುವ ಕಾಂಗ್ರೆಸ್‌ ಸರ್ಕಾರವು   5.23 ಎಕರೆ ವಿಸ್ತೀರ್ಣದ ಸರ್ಕಾರಿ ಬೀಳು ಜಮೀನನ್ನು ಮಂಜೂರು ಮಾಡಲು ಹೊರಟಿದೆ. 

 

2025ರ ಜುಲೈ 17ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕಂದಾಯ ಇಲಾಖೆಯು ಮಂಡಿಸಿರುವ ಪ್ರಸ್ತಾವದ ಕುರಿತು ಚರ್ಚೆ ನಡೆಯಲಿದೆ. ಈ ಪ್ರಸ್ತಾವವನ್ನು ಮಂಡಿಸಲು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಅನುಮೋದಿಸಿದ್ದಾರೆ.  ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ. 

 

 

 

 

 

ರಾಜ್ಯದ ವಿವಿಧೆಡೆ ಈಗಾಗಲೇ ಇಸ್ಕಾನ್‌ ಸಂಸ್ಥೆಯು ಜಮೀನನ್ನು ಹೊಂದಿರುವ ಕುರಿತು ಶಾಸನಸಭೆಗಳಲ್ಲಿ ಹಲವಾರು ಬಾರಿ ಚರ್ಚೆ ನಡೆದಿದ್ದವು. ಈ ಸಂಸ್ಥೆಗೆ ಸರ್ಕಾರಿ ಜಮೀನನ್ನು ಮಂಜೂರು ಮಾಡಿದ್ದರ ಬಗ್ಗೆಯೂ ಹಲವು ಆಕ್ಷೇಪಗಳು ವ್ಯಕ್ತವಾಗಿದ್ದವು.  

 

ಶೈಕ್ಷಣಿಕ ಉದ್ದೇಶಕ್ಕಾಗಿ ಜಮೀನು ಮಂಜೂರು ಮಾಡಬೇಕು ಎಂದು ಸ್ವತಃ ಇಸ್ಕಾನ್‌ ಸಂಸ್ಥೆಯೇ ತನ್ನ ಆರಂಭಿಕ ಮನವಿಯಲ್ಲಿ ಕೋರಿತ್ತು. ನಂತರ ಇಲಾಖೆಯು  ಧಾರ್ಮಿಕ ಉದ್ದೇಶದ ಚಾರಿಟಬಲ್‌ ಟ್ರಸ್ಟ್‌ಗಳಿಗೆ ಮಂಜೂರು ಮಾಡುವ ದರವನ್ನೇ ಆರಂಭದಲ್ಲಿ  ಶಿಫಾರಸ್ಸು ಮಾಡಿತ್ತು.  

 

ಇಸ್ಕಾನ್‌ ಗೆ 5-23 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನು ಮಂಜೂರು ಮಾಡಲು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22-ಎ(2)ಯನ್ನು ಬದಿಗಿರಿಸಲು ಹೊರಟಿರುವುದು   ಚರ್ಚೆಗೆ ಗ್ರಾಸವಾಗಿದೆ.   ಈ ಕುರಿತು ಆರ್‍‌ಟಿಐ ಅಡಿ ಸಮಗ್ರ ಕಡತವನ್ನು ಪಡೆದುಕೊಂಡಿದ್ದ ‘ದಿ ಫೈಲ್‌’, ವಿಸ್ತೃತವಾಗಿ ವರದಿ ಪ್ರಕಟಿಸಿತ್ತು. 

 

ಇಸ್ಕಾನ್‌ಗೆ 5.23 ಎಕರೆ ಸರ್ಕಾರಿ ಬೀಳು ಜಮೀನು; ನಿಯಮ ಸಡಿಲಿಕೆಗೆ ಮುಂದಾದ ಕಾಂಗ್ರೆಸ್‌ ಸರ್ಕಾರ

 

ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಹೋಬಳಿಯ ಯರಮಾರನೇಹಳ್ಳಿಯಲ್ಲಿರುವ 5-23 ಎಕರೆ ವಿಸ್ತೀರ್ಣದ ಸರ್ಕಾರಿ ಬೀಳು ಜಮೀನನ್ನು ಮಂಜೂರು ಮಾಡಬೇಕು ಎಂದು 2023ರ ಅಕ್ಟೋಬರ್‍‌ 18ರಂದು ಕಂದಾಯ ಸಚಿವ ಕೃಷ್ಣಬೈರೇಗೌಡ, ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್‍‌ ಮತ್ತು ಶಾಸಕ ಪ್ರದೀಪ್‌ ಈಶ್ವರ್‍‌ ಅವರಿಗೆ ಮನವಿ ಸಲ್ಲಿಸಿತ್ತು.  

 

ಇಸ್ಕಾನ್‌   ಮನವಿಯಲ್ಲೇನಿತ್ತು?

 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಗ್ರಾಮೀಣ ಮಕ್ಕಳಿಗಾಗಿ ಶಾಲೆಯನ್ನು ನಡೆಸಲು ಇಸ್ಕಾನ್‌  ಉದ್ದೇಶಿಸಿದೆ.  ಚಿಕ್ಕಬಳ್ಳಾಪುರ ತಾಲಕೂಕು ಮಂಡಿಕಲ್ಲು ಹೋಬಳಿ ಯರ್‍ರಮಾರೇನಹಳ್ಳಿ ಗ್ರಾಮದ ಸರ್ವೆ ನಂಬರ್‍‌ 187ರಲ್ಲಿ 4-38 ಎಕರೆ ಮತ್ತು ಸರ್ವೆ ನಂಬರ್‍‌ 191ರಲ್ಲಿ 0-98 ಗುಂಟೆ ಸೇರಿ ಒಟ್ಟಾರೆ 5-23 ಎಕರೆ ಜಮೀನು ಇದೆ. ಈ ಜಮೀನನ್ನು ಅಕ್ಷಯ ಪಾತ್ರ ಅಡುಗೆ ಮನೆ ಮತ್ತು ಆರ್ಥಿಕ ಸಾಮಾಜಿಕ ಹಿಂದುಳಿದ ಗ್ರಾಮೀಣ ಮಕ್ಕಳಿಗೆ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ಮಂಜೂರು ಮಾಡಬೇಕು ಎಂದು ಇಸ್ಕಾನ್‌ ಅಧ್ಯಕ್ಷರು ಮನವಿಯಲ್ಲಿ ಕೋರಿದ್ದರು ಎಂಬುದು ಗೊತ್ತಾಗಿದೆ.

 

 

 

ಇಸ್ಕಾನ್‌ನ   ಮನವಿಯನ್ನಾಧರಿಸಿ ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣಬೈರೇಗೌಡ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಸ್ಥಳ ತನಿಖೆ ನಡೆಸಿದ್ದ ಜಿಲ್ಲಾಧಿಕಾರಿಗಳು, ತಹಶೀಲ್ದಾರ್‍‌ ಮತ್ತು ರಾಜಸ್ವ ನಿರೀಕ್ಷಕರು, ಇಸ್ಕಾನ್‌ಗೆ 5-23 ಎಕರೆ ವಿಸ್ತೀರ್ಣದ ಸರ್ಕಾರಿ ಬೀಳು ಜಮೀನನ್ನು ಮಂಜೂರು ಮಾಡಬಹುದು ಎಂದು ಶಿಫಾರಸ್ಸು ಮಾಡಿದ್ದರು ಎಂಬುದು ಅರ್‍‌ಟಿಐ ದಾಖಲೆಯಿಂದ ತಿಳಿದು ಬಂದಿದೆ.  

 

ಉನ್ನತ ಶಿಕ್ಷಣ ಸಚಿವ ಡಾ ಎಂ ಸುಧಾಕರ್‍‌ ಅವರು ಸಲ್ಲಿಸಿದ್ದ ನಡವಳಿ ಮೇಲೆ ‘ಸಚಿವ ಸಂಪುಟದ ಮುಂದೆ ಮಂಡಿಸುವುದು,’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದ್ದರು.  

 

 

ಎಕರೆಗೆ 6.84 ಲಕ್ಷ

 

ಯರಮಾರೇನಹಳ್ಳಿ ಗ್ರಾಮದ ಮಾರ್ಗಸೂಚಿ ಮತ್ತು ಮಾರುಕಟ್ಟೆ ಮೌಲ್ಯದ ಬಗ್ಗೆ ಚಿಕ್ಕಬಳ್ಳಾಪುರ ತಾಲೂಕು ಹಿರಿಯ ಉಪ ನೋಂದಣಾಧಿಕಾರಿಗಳು 2024ರ ಜುಲೈ 12ರಂದು  ವರದಿ ನೀಡಿದ್ದರು. ಇದರ ಪ್ರಕಾರ ಯರಮಾರೇನಹಳ್ಳಿ ಗ್ರಾಮದಲ್ಲಿ ಎಕರೆ ಒಂದಕ್ಕೆ ಮಾರ್ಗಸೂಚಿ ಮೌಲ್ಯ 5,00,000 ರು ಇದೆ. ಹಾಗೂ ಮಾರುಕಟ್ಟೆ ಮೌಲ್ಯವು ಎಕರೆ ಒಂದಕ್ಕೆ 6,84,000 ರು. ಇದೆ ಎಂದು ವರದಿ ನೀಡಿತ್ತು. 

   

 

ಹಾಗೆಯೇ  ಸ್ಥಳೀಯ ಜಿಲ್ಲಾಡಳಿತವು ಮಾಡಿದ್ದ ಶಿಫಾರಸ್ಸನ್ನು ಆಧರಿಸಿ ಕಂದಾಯ ಇಲಾಖೆಯು ಈ ಸಂಬಂಧ ಕಾನೂನು ಇಲಾಖೆಯ ಅಭಿಪ್ರಾಯ ಕೋರಿತ್ತು.  

 

ಕಾನೂನು ಇಲಾಖೆಯ ಅಭಿಪ್ರಾಯದಲ್ಲೇನಿದೆ?  

 

ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22-ಎ (2) ರ ಪ್ರಕಾರ ಇಸ್ಕಾನ್‌ ಸಂಸ್ಥೆಯು ಖಾಸಗಿ ಸಂಸ್ಥೆಯಾಗಿರುವ ಕಾರಣ ಜಮೀನು ಮಂಜೂರು ಮಾಡಲು ಅವಕಾಶವಿರುವುದಿಲ್ಲ.  

 

 

ಆದರೆ ಈ ನಿಯಮಗಳಲ್ಲಿ ಏನೇ ಹೇಳಿದ್ದಾಗಿಯೂ ಸಹ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 27ರ ಅಡಿ ಪ್ರಕಾರ ರಾಜ್ಯ ಸರ್ಕಾರವು ಸ್ವತಃ ಅಥವಾ ವಿಭಾಗೀಯ ಕಮಿಷನರ್‍‌ ಅಥವಾ ಡೆಪ್ಯುಟಿ ಕಮಿಷನರ್‍‌ ಅವರ ಶಿಫಾರಸ್ಸಿನ ಮೇರೆಗೆ ನಿಯಮಗಳನ್ನು ಸಡಿಲಗೊಳಿಸಲು ಕಾರಣವಿದೆ ಎಂದು ಕಂಡು ಬಂದರೆ ಕಾರಣಗಳನ್ನು ದಾಖಲಿಸಿ, ಷರತ್ತುಗಳನ್ನು ವಿಧಿಸಿ ಆದೇಶ ಮಾಡಬಹುದಾಗಿರುತ್ತದೆ ಎಂದು ಕಾನೂನು ಇಲಾಖೆಯು ಅಭಿಪ್ರಾಯ ನೀಡಿದೆ.

 

 

ಅಲ್ಲದೇ ಧಾರ್ಮಿಕ ಉದ್ದೇಶದ ಚಾರಿಟೆಬಲ್ ಟ್ರಸ್ಟ್‌ ಗಳಿಗೆ ಜಮೀನು ಮಂಜೂರು ಮಾಡಲು  ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22 ಎ (1)(i) ದಲ್ಲಿ ಉಲ್ಲೇಖಿಸಿರುವ ಕ್ರಮ ಸಂಖ್ಯೆ 4ರಲ್ಲಿನ ನಿಯಮಗಳ ಪ್ರಕಾರ ದರ ಮಾರ್ಗಸೂಚಿಯ ಬೆಲೆ ಶೇ.25ರ ದರದಲ್ಲಿ   ಮತ್ತು ಮಾರುಕಟ್ಟೆ ಮೌಲ್ಯದ ಶೇ. 50ರಷ್ಟು  ದರದಲ್ಲಿ  ವಿಧಿಸಬಹುದು ಎಂದೂ ಅಭಿಪ್ರಾಯಿಸಿತ್ತು.  

 

 

 ಅಷ್ಟೇ ಅಲ್ಲ, ಚಿಕ್ಕಬಳ್ಳಾಪುರ ತಾಲೂಕಿನ ತಹಶೀಲ್ದಾರ್‍‌ ಕೂಡ ಧಾರ್ಮಿಕ ಉದ್ದೇಶದ ಚಾರಿಟಬಲ್‌ ಟ್ರಸ್ಟ್‌ಗಳಿಗೆ ವಿಧಿಸುವ ದರದಲ್ಲಿಯೇ ಮಂಜೂರು ಮಾಡಬಹುದು ಎಂದು ಶಿಫಾರಸ್ಸು ಮಾಡಿದ್ದರು.  

 

 

 

ಆದರೆ ಆಡಳಿತ ಇಲಾಖೆಯಾದ ಕಂದಾಯ ಇಲಾಖೆಯು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22ಎ (1) (i) ಕ್ರಮ ಸಂಖ್ಯೆ 2ರಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಜಮೀನು ಮಂಜೂರು ಮಾಡಲು ಮಾರ್ಗಸೂಚಿ ಬೆಲೆಯ ಶೇ.50ರಷ್ಟು ಮತ್ತು ಮಾರುಕಟ್ಟೆ ಮೌಲ್ಯದ ಶೇ.100ರಷ್ಟನ್ನು ವಿಧಿಸಿ ಮಂಜೂರು ಮಾಡಬಹುದು ಎಂದು ಶಿಫಾರಸ್ಸು ಮಾಡಿತ್ತು.

 

‘ಸದರಿ ಜಮೀನು ಶಿಕ್ಷಣ ಉದ್ದೇಶಕ್ಕಾಗಿ ಮಂಜೂರು ಮಾಡಲಾಗುತ್ತಿರುವುದರಿಂದ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22 ಎ (1)(i)  ಅನ್ವಯ ಮಾರುಕಟ್ಟೆ ಮೌಲ್ಯ ವಿಧಿಸಿ ಮಂಜೂರು ಮಾಡಬೇಕಾಗಿರುತ್ತದೆ,’ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯಿಸಿರುವುದು ಗೊತ್ತಾಗಿದೆ.  

 

 

ಹಾಗೆಯೇ ಈ ಪ್ರಸ್ತಾವವನ್ನು ಸಚಿವ ಸಂಪುಟದ ಮುಂದೆ ಮಂಡಿಸಬೇಕು ಎಂದು ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಜೀತ್‌ ಕೆ ನಂಬಿಯಾರ್‍‌ ಅವರು 2025ರ ಜನವರಿ 15ರಂದು ಆಡಳಿತ ಇಲಾಖೆಗೆ ತಿಳಿಸಿದ್ದರು. 

 

ಜಿಲ್ಲಾಧಿಕಾರಿ ನೀಡಿದ್ದ ವರದಿಯಲ್ಲೇನಿತ್ತು?

 

ಚಿಕ್ಕಬಳ್ಳಾಪುರ ತಾಲೂಕು ಮಂಡಿಕಲ್ಲು ಹೋಬಳಿ ಯರ್‍ರಮಾರೇನಹಳ್ಳಿ ಗ್ರಾಮದ ಸರ್ವೆ ನಂಬರ್‍‌ 187ರಲ್ಲಿ ಆರ್‍‌ಟಿಸಿಯಂತೆ ಒಟ್ಟು 5-13 ಎಕರೆ ಜಮೀನಿದೆ. ಈ ಪೈಕಿ ಬಿ ಖರಾಬು 0-15 ಗುಂಟೆ, ಜಾತ ಉಳಿಕೆ 4-38 ಎಕರೆ ಜಮೀನು ಸರ್ಕಾರಿ ಬೀಳು ಎಂಬುದಾಗಿ ವರ್ಗೀಕರಣಗೊಂಡಿದೆ. ಮತ್ತು ಯರ್‍ರಮಾರೇನಹಳ್ಳಿ ಗ್ರಾಮದ ಸರ್ವೆ ನಂಬರ್‍‌ 191ರಲ್ಲಿ ಆರ್‍‌ಟಿಸಿಯಂತೆ ಒಟ್ಟು ವಿಸ್ತೀರ್ಣ 0-25 ಗುಂಟೆ ಜಮೀನು ಸರ್ಕಾರಿ ಬೀಳು ಎಂಬುದಾಗಿ ವರ್ಗೀಕರಣಗೊಂಡಿದೆ ಎಂದು ವಿವರಿಸಿದ್ದಾರೆ. 

 

 

ಈ ಪ್ರಸ್ತಾಪಿತ ಜಮೀನಿನಲ್ಲಿ ಬೆಲೆಬಾಳುವ ಮರ, ಮಾಲ್ಕಿಗಳು ಇರುವುದಿಲ್ಲ. ಗ್ರಾಮಸ್ಥರ ಮಹಜರ್‍‌ ನಂತೆ ಗ್ರಾಮಸ್ಥರ ತಂಟೆ ತಕರಾರು ಇಲ್ಲ. ಈ ಬಗ್ಗೆ ತಯಾರಿಸಿರುವ ನಕ್ಷೆಯಂತೆ ಸರ್ಕಾರಕ್ಕೆ ಕಾಯ್ದಿರಿಸಬೇಕಾದ ಅಂಶಗಳು ಇರುವುದಿಲ್ಲ. ಈ  ಗ್ರಾಮದಲ್ಲಿ ರಾಸುಗಳಿಗೆ ಅನುಗುಣವಾಗಿ ಹೆಚ್ಚುವರಿ ಗೋಮಾಳ ಇರುತ್ತದೆ. ಪ್ರಸ್ತಾಪಿತ ಜಮೀನು ಮಂಜೂರಿ ಕೋರಿ ನಿಯಮ 50ರಲ್ಲಿ ಯಾವುದೇ ಅರ್ಜಿಗಳು ಬಾಕಿ ಇಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. 

 

 

ನಮೂನೆ 53ರಲ್ಲಿ 03 ಅರ್ಜಿಗಳು  ಮತ್ತು ನಮೂನೆ 57ರಲ್ಲಿ 01 ಅರ್ಜಿ ಸಲ್ಲಿಕೆಯಾಗಿವೆ.  ಈ  ಅರ್ಜಿಗಳನ್ನು ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು 2024ರ ಜೂನ್‌ 19ರಂದು ಅರ್ಜಿದಾರರು ಯಾರು ಅನುಭವದಲ್ಲಿ ಇರುವುದಿಲ್ಲ ಮತ್ತು ವ್ಯವಸಾಯ ಮಾಡುತ್ತಿರುವುದಿಲ್ಲ ಎಂದು ಅರ್ಜಿಗಳನ್ನು ತಿರಸ್ಕರಿಸಿ ಆದೇಶಿಸಲಾಗಿತ್ತು.

 

ಪ್ರಸ್ತಾಪಿತ ಜಮೀನು ಅನಧಿಕೃತ ಸಾಗುವಳಿಯಿಂದ ಮುಕ್ತವಾಗಿದೆ.  ಪ್ರಸ್ತಾಪಿತ ಸರ್ವೆ ನಂಬರ್‍‌ಗಳು ಭೂ ಸ್ವಾಧೀನ ಪ್ರಕ್ರಿಯೆಗಳು ನಡೆದಿರುವುದಿಲ್ಲ. ಸದರಿ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದಲ್ಲಿ ಪ್ರಕರಣಗಳು ಇರುವುದಿಲ್ಲ.ಯರ್‍ರಮಾರೇನಹಳ್ಳಿ ಗ್ರಾಮದ ಸರ್ವೆ ನಂಬರ್‍‌ 187 ಮತ್ತು 191ರ ಆರ್‍‌ಟಿಸಿ ಮತ್ತು ಆಕಾರ್‍‌ಬಂದ್‌ ವಿಸ್ತೀರ್ಣಕ್ಕೆ ತಾಳೆ ಇದೆ  ಎಂಬ ಮಾಹಿತಿಯನ್ನೂ ಒದಗಿಸಿದ್ದರು.

 

 

ರಾಷ್ಟ್ರೀಯ ಹೆದ್ದಾರಿ 44ರಿಂದ ಪ್ರಸ್ತಾಪಿತ ಜಮೀನಿಗೆ 22 ಕಿ ಮೀ ದೂರದಲ್ಲಿರುತ್ತದೆ. ಪ್ರಸ್ತಾಪಿತ ಉದ್ದೇಶಿಸಿರುವ ಜಮೀನಿನಲ್ಲಿ ಯಾವುದೇ ಕಟ್ಟಡ ವಗೈರುಗಳು ಇರುವುದಿಲ್ಲ ಮತ್ತು ಹೈಟೆನ್ನ್‌ ವಿದ್ಯುತ್‌ ವಾಹಕ ತಂತಿ ಹಾದು ಹೋಗಿರುವುದಿಲ್ಲ.  ರಸ್ತೆ ಸಂಪರ್ಕ ಹೊಂದಿದೆ ಎಂದು ವರದಿಯಲ್ಲಿ ವಿವರಿಸಿದೆ.

 

ಅರಣ್ಯಾಧಿಕಾರಿಗಳ ವರದಿಯಲ್ಲೇನಿತ್ತು?

 

ಚಿಕ್ಕಬಳ್ಳಾಪುರ ತಾಲೂಕು ಉಪ ನೋಂದಣಾಧಿಕಾರಿಗಳ ವರದಿ ಪ್ರಕಾರ ಯರ್‍ರಮಾರೇನಹಳ್ಳಿ ಗ್ರಾಮದಲ್ಲಿ ಖುಷ್ಕಿ ಜಮೀನು ಎಕರೆ ಒಂದಕ್ಕೆ 5,00,000 ರು. ಇದೆ. ಈ ಗ್ರಾಮವು ಬೇಚರಾಕ್‌ ಗ್ರಾವಾಗಿದೆ. ಈ ಜಮೀನಿನ ಸರ್ವೆ ನಂಬರ್‍‌ 187 ಮತ್ತು 191ರ ಜಮೀನುಗಳು ಯಾವುದೇ ಅರಣ್ಯ ವ್ಯಾಪ್ತಿಗೆ ಒಳಪಡುವುದಿಲ್ಲ.

 

ಚಿಕ್ಕಬಳ್ಳಾಪುರ ವಲಯದ ನರಸಿಂಹದೇವರಬೆಟ್ಟ 4ನೇ ಬೀಟ್‌ ಅರಣ್ಯ ಪ್ರದೇಶಕ್ಕೆ 200 ಮೀಟರ್‍‌ ದೂರದಲ್ಲಿರುತ್ತದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು  ವರದಿ ಸಲ್ಲಿಸಿರುವುದು ಗೊತ್ತಾಗಿದೆ.   ಸರ್ಕಾರದಿಂದ ಸರ್ಕಾರಿ ಜಮೀನು ಮಂಜೂರು ಮಾಡಿದ್ದಲ್ಲಿ ಸರ್ಕಾರವು ವಿಧಿಸುವ ಮೊತ್ತವನ್ನು ಪಾವತಿಸಲು ಬದ್ಧವಾಗಿದೆ ಎಂದು ಇಸ್ಕಾನ್‌ ಅಧ್ಯಕ್ಷರು  ಪ್ರಮಾಣ ಪತ್ರ ಹಾಜರುಪಡಿಸಿದ್ದಾರೆ.  ಈ ಸರ್ವೆ ನಂಬರ್‍‌ಗಳಲ್ಲಿನ ಜಮೀನನನ್ನು ಇಸ್ಕಾನ್‌ ಸಂಸ್ಥೆಗೆ ಮಂಜೂರು ಮಾಡುವುದರಿಂದ ಗೊಲ್ಲಹಳ್ಳಿ ಗ್ರಾಮ ಪಂಚಾಯ್ತಿಯಿಂದ ಯಾವುದೇ ಆಕ್ಷೇಪಣೆಗಳು ಇರುವುದಿಲ್ಲ ಎಂದು ಅಭಿಪ್ರಾಯಿಸಿರುವ   ಪಿಡಿಒ 2024ರ ಫೆ.2ರಂದು ಎನ್‌ಒಸಿ ನೀಡಿದ್ದರು.

 

ಇಸ್ಕಾನ್‌ ಕೋರಿಕೆಯಂತೆ ಕರ್ನಾಟಕ ಭೂ ಮಂಜೂರಾತಿ ನಿಯಮ 1969ರ ನಿಯಮ 21 ಮತ್ತು 22ಎ(1)(i) ಕ್ರಮ ಸಂಖ್ಯೆ (4) ಅನ್ವಯ ಮಂಜೂರು ಮಾಡಬಹುದಾಗಿರುತ್ತದೆ ಎಂದು ಉಪ ವಿಭಾಗಾಧಿಕಾರಿಗಳು ಶಿಫಾರಸ್ಸು ಮಾಡಿರುವುದು ಗೊತ್ತಾಗಿದೆ.  

 

‘ಆದ್ದರಿಂದ ಕಂದಾಯ ಮತ್ತು ಉನ್ನತ ಶಿಕ್ಷಣ ಸಚಿವರು ಹಾಗೂ ಚಿಕ್ಕಬಳ್ಳಾಪುರ ಸಾಸಕರು ಅವರ ಕೋರಿಕೆಯಂತೆ ಯರ್‍ರಮಾರೇನಹಳ್ಳಿಯ ಸರ್ವೆ ನಂಬರ್‍‌ 187 ಮತ್ತು 191ರಲ್ಲಿನ ಸರ್ಕಾರಿ ಬೀಳಿನ ಪ್ರದೇಶದ ಪೈಕಿ 5-23 ಎಕರೆ ಜಮೀನನ್ನು ಅಕ್ಷಯ ಪಾತ್ರೆ ಅಡುಗೆ ಮನೆ ಮತ್ತು ಆರ್ಥಿಕ ಸಾಮಾಜಿಕ ಹಿಂದುಳಿದ ಗ್ರಾಮೀಣ ಮಕ್ಕಳಿಗೆ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ಇಸ್ಕಾನ್‌ ಅವರಿಗೆ ಮಂಜೂರು ಮಾಡಬಹುದು ಎಂದು ಜಿಲ್ಲಾಧಿಕಾರಿ ಪಿ ಎನ್‌ ರವೀಂದ್ರ ಅವರು 2024ರ ಜುಲೈ 23ರಂದೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

 

 

ಆಡಳಿತಾತ್ಮಕ ಲೋಪ, ಲೆಕ್ಕಪತ್ರಗಳಲ್ಲಿನ ವ್ಯತ್ಯಾಸ, ನಿಯಮಬಾಹಿರ ಚಟುವಟಿಕೆಗಳೂ ಸೇರಿದಂತೆ ಇನ್ನಿತರೆ ಗಂಭೀರ ಲೋಪಗಳನ್ನು ಎಸಗಿರುವ ಗಂಭೀರ ಆರೋಪಕ್ಕೆ ಅಕ್ಷಯ ಪಾತ್ರ ಫೌಂಡೇಷನ್‌  ಗುರಿಯಾಗಿದೆ. ಈ ಮಧ್ಯೆಯೇ  ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ  ಚಿಕ್ಕಬಳ್ಳಾಪುರ ಜಿಲ್ಲೆಯ 08 ಸರ್ಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿತ್ತು.

 

 

 

ನಮ್ಮ ಶಾಲೆ ನಮ್ಮ ಕೊಡುಗೆ ಕಾರ್ಯಕ್ರಮದಡಿಯಲ್ಲಿ ಚಿಕ್ಕಬಳ್ಳಾಪುರದ ನಲ್ಲಕದಿರೇನಹಳ್ಳಿ, ಯಗ್ರಮಾರೇನಹಳ್ಳಿ, ರಾಮಾಪಟ್ಟಣ, ಕಠಾರಿಕದಿರೇನಹಳ್ಳಿ, ಪೈಯೂರು, ದರಬೂರು, ಮಂಡಿಕಲ್ಲು ಸರ್ಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಅಕ್ಷಯ ಪಾತ್ರ ಪ್ರತಿಷ್ಠಾನದೊಂದಿಗೆ ಅನುಷ್ಠಾನಗೊಳಿಸಲಿದೆ. ಹಿಂದಿನ  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಅವರು ಈ ಯೋಜನೆಯನ್ನು ಅನುಮೋದಿಸಿದ್ದರು.    

 

ಬಿಸಿಯೂಟ; ಸಿಬ್ಬಂದಿ ಸಂಭಾವನೆ, ಆಹಾರ ಧಾನ್ಯ, ಅಡುಗೆ ವೆಚ್ಚದ ಅನುದಾನ ಅಕ್ಷಯಪಾತ್ರೆಗೆ ವರ್ಗಾವಣೆ

 

ಅಲ್ಲದೆ ಈ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗಳ ಸಂಭಾವನೆ ಮೊತ್ತವನ್ನು ಅಕ್ಷಯ ಪಾತ್ರ ಪ್ರತಿಷ್ಠಾನಕ್ಕೆ ವರ್ಗಾಯಿಸಬೇಕು. ಶಾಲೆಯ ಅಡುಗೆ ಕೋಣೆ ನಿರ್ವಹಣೆ ಮತ್ತು ಸಂಪೂರ್ಣ ಸುಪರ್ದಿಯ ಪ್ರತಿಷ್ಠಾನಕ್ಕೆ ವಹಿಸಬೇಕು. ಅಡುಗೆ ತಯಾರಿಕೆ ವೆಚ್ಚದ ಅನುದಾನವನ್ನೂ ಪ್ರತಿಷ್ಠಾನಕ್ಕೆ ನೀಡುತ್ತಿದೆ.

Your generous support will help us remain independent and work without fear.

Latest News

Related Posts