ಬೆಂಗಳೂರು; ರಾಜ್ಯದಲ್ಲಿ ಯಾರೇ ವ್ಯಕ್ತಿಯು ತನ್ನ ಸಮುದಾಯದ ಯಾರೇ ವ್ಯಕ್ತಿಯ ಮೇಲೆ ಯಾವುದೇ ರೀತಿಯ ಸಾಮಾಜಿಕ ಬಹಿಷ್ಕಾರವನ್ನು ಹೇರುವುದು ಅಥವಾ ಹೇರಲು ಕಾರಣಕರ್ತನಾದರೇ ಅಥವಾ ಸಾಮಾಜಿಕ ಬಹಿಷ್ಕಾರವನ್ನು ಆಚರಿಸಿರುವುದು ಸಾಬೀತಾದರೇ ಅಂತಹ ವ್ಯಕ್ತಿಗಳ ವಿರುದ್ಧ ಮೂರು ವರ್ಷ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರು ಜುಲ್ಮಾನೆ ವಿಧಿಸಲಿದೆ.
ಸಾಮಾನ್ಯವಾಗಿ ಮುಕ್ತವಾಗಿ ಬಳಸಲು ಲಭ್ಯವಿರುವ ಯಾವುದೇ ಸ್ಥಳ ಪ್ರವೇಶಿಸುವುದನ್ನು ತಡೆಯುವುದು ಅಥವಾ ನಿರ್ಬಂಧಿಸುವುದು, ಇದಕ್ಕೆ ಕಾರಣಕರ್ತರಾಗುವವರನ್ನೂ ಸಹ ಈ ಅಪರಾಧ ವ್ಯಾಪ್ತಿಗೆ ತಂದಿದೆ. ಅಲ್ಲದೇ ಯಾವುದೇ ನಿರ್ದಿಷ್ಟ ಭಾಷೆಯನ್ನು ಬಳಸಲು ಹೇರುವುದು, ಸಾಂಸ್ಕೃತಿಕ ಅಡಚಣೆಯನ್ನು ಸೃಷ್ಟಿಸುವುದು ಅಥವಾ ಸೃಷ್ಟಿಸುವಂತೆ ಮಾಡುವುದು ಅಥವಾ ಒತ್ತಾಯಿಸುವುದು ಸಹ ಅಪರಾಧವಾಗಲಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟೂರು ಸಿದ್ದರಾಮನಹುಂಡಿ ಗ್ರಾಮದ ಬಳಿ ಇರುವ ಶ್ರೀನಿವಾಸಪುರ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸ್ವಕ್ಷೇತ್ರ ಕನಕಪುರದಲ್ಲಿ ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರವು ರೂಪಿಸಿರುವ ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ ) ವಿಧೇಯಕ 2025 ಮುನ್ನೆಲೆಗೆ ಬಂದಿದೆ.
ಮಹಾರಾಷ್ಟ್ರ ರಾಜ್ಯ ಸರ್ಕಾರವು ಈಗಾಗಲೇ ಸಾಮಾಜಿಕ ಬಹಿಷ್ಕಾರವನ್ನು ಅಪರಾಧೀಕರಿಸಿದ ಮೊದಲ ರಾಜ್ಯವಾಗಿದೆ. 2016ರಲ್ಲಿ ಮಹಾರಾಷ್ಟ್ರ ಸರ್ಕಾರವು ಸಾಮಾಜಿಕ ಬಹಿಷ್ಕಾರ ಕಾಯಿದೆಯು ಜಾತಿ ಮತ್ತು ಸಮುದಾಯ ಪಂಚಾಯತ್‌ಗಳಂತಹ ನ್ಯಾಯಾಂಗೇತರ ಸಂಸ್ಥೆಗಳಿಂದ ಆಚರಿಸುವ ಸಾಮಾಜಿಕ ಬಹಿಷ್ಕಾರವನ್ನು ನಿಷೇಧಿಸಿದೆ. ಇದೇ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಸಹ ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ ) ವಿಧೇಯಕ 2025ನ್ನುಮಂಡಿಸಲು ಸಿದ್ಧತೆ ನಡೆಸಿದೆ. ವಿಧೇಯಕದ ಕರಡು ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ರಾಜ್ಯದಲ್ಲಿ ಒಬ್ಬ ವ್ಯಕ್ತಿ ಅಥವಾ ಅವರ ಕುಟುಂಬ ಸದಸ್ಯರನ್ನೂ ಒಳಗೊಂಡಂತೆ ವ್ಯಕ್ತಿಗಳ ಗುಂಪಿನ ಸಾಮಾಜಿಕ ಬಹಿಷ್ಕಾರವನ್ನು ನಿಷೇಧಿಸುವುದು, ತಡೆಗಟ್ಟುವುದು ಮತ್ತು ಪರಿಹಾರ ನೀಡುವ ಉದ್ದೇಶದಿಂದ ಈ ವಿಧೇಯಕವನ್ನು ರೂಪಿಸಲಾಗಿದೆ.
ಸಾಮಾಜಿಕ ಬಹಿಷ್ಕಾರ ಹೇರಿಕೆ ಮಾಡುವುದು ಸಹ ಇನ್ನು ಮುಂದೆ ಅಪರಾಧವಾಗಲಿದೆ. ಈ ಅಪರಾಧ ಸಾಬೀತಾದರೇ ಮೂರು ವರ್ಷಗಳಿಗೆ ವಿಸ್ತರಿಸಬಹುದಾದ ಅಥವಾ ಒಂದು ಲಕ್ಷ ರು.ಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆ ಅಥವಾ ಇವರೆಡನ್ನೂ ಸೇರಿಸಿ ಜೈಲು ಶಿಕ್ಷೆಯನ್ನು ವಿಧಿಸಲು ಅವಕಾಶ ಕಲ್ಪಿಸಿಕೊಂಡಿರುವುದು ವಿಧೇಯಕದಿಂದ ತಿಳಿದು ಬಂದಿದೆ.
ಭಾರತ ಸಂವಿಧಾನದ ಪ್ರಸ್ತಾವನೆಯಲ್ಲಿ ವ್ಯಕ್ತಿಯ ಘನತೆಯನ್ನು ಖಾತ್ರಿಪಡಿಸಿದೆ. ನಾಗರೀಕರಲ್ಲಿ ಭ್ರಾತೃತ್ವವನ್ನು ಪ್ರೋತ್ಸಾಹಿಸಲಾಗಿದೆ. ಮತ್ತು ಯಾರೇ ವ್ಯಕ್ತಿಗಳ ಅಥವಾ ವ್ಯಕ್ತಿಗಳ ಗುಂಪಿನ ಮೇಲಿನ ಸಾಮಾಜಿಕ ಬಹಿಷ್ಕಾರವು ಮಾನವ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ. ಮತ್ತು ರಾಜ್ಯದ ಕೆಲವು ಭಾಗಗಳಲ್ಲಿ ವ್ಯಕ್ತಿ ಅಥವಾ ಅವರ ಕುಟುಂಬ ಸದಸ್ಯರನ್ನೂ ಒಳಗೊಂಡಂತೆ ವ್ಯಕ್ತಿಗಳ ಗುಂಪಿನ ಸಾಮಾಜಿಕ ಬಹಿಷ್ಕಾರದ ಅಮಾನವೀಯ ಪದ್ಧತಿಯು ಇನ್ನೂ ಉಳಿದಿದೆ ಎಂದು ವಿಧೇಯಕದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಒಬ್ಬ ವ್ಯಕ್ತಿ ಅಥವಾ ಅವರ ಕುಟುಂಬ ಸದಸ್ಯರನ್ನೂ ಒಳಗೊಂಡಂತೆ ವ್ಯಕ್ತಿಗಳ ಗುಂಪಿನ ಸಾಮಾಜಿಕ ಬಹಿಷ್ಕಾರದ ಪಿಡುಗನ್ನು ಸಂಪೂರ್ಣವಾಗಿ ತೆಗೆದುಹಾಕುವಲ್ಲಿ ಈಗಾಗಲೇ ಜಾರಿಯಲ್ಲಿರುವ ಕಾನೂನುಗಳು ಪರಿಣಾಮಕಾರಿಯಾಗಿಲ್ಲ ಎಂಬುದು ಸಾಬೀತಾಗಿದೆ. ಮತ್ತು ಸಾರ್ವಜನಿಕ ಕ್ಷೇಮಾಭಿವೃದ್ಧಿಯ ಹಿತಾಸಕ್ತಿಯಲ್ಲಿ ಸಾಮಾಜಿಕ ಸುಧಾರಣೆಯ ವಿಷಯವಾಗಿ ಸಾಮಾಜಿಕ ಬಹಿಷ್ಕಾರವನ್ನು ನಿಷೇಧಿಸುವುದು ಅಗತ್ಯವಾಗಿದೆ ಎಂದು ವಿಧೇಯಕದಲ್ಲಿ ಪ್ರತಿಪಾದಿಸಿರುವುದು ಗೊತ್ತಾಗಿದೆ.
ರಾಜ್ಯದಲ್ಲಿ ಜನರು ಅವರ ಮಾನವ ಹಕ್ಕುಗಳೊಂದಿಗೆ ಸೌಹಾರ್ದದಿಂದ ಬುದಕುಉವನ್ನು ಖಚಿತಪಡಿಸಿಕೊಳ್ಳುವುದು ಈ ವಿಧೇಯಕದ ಉದ್ದೇಶವಾಗಿದೆ. ಈ ವಿಧೇಯಕದಲ್ಲಿ ಜಾತಿ ಪಂಚಾಯಿತಿಯನ್ನೂ ವಿಶ್ಲೇಷಿಸಿದೆ. ಅದೇ ಸಮುದಾಯದಲ್ಲಿನ ಹಲವು ಪದ್ಧತಿಗಳನ್ನು ನಿಯಂತ್ರಿಸಲು ಸಹ ಈ ವಿಧೇಯಕವು ಸಹಕಾರಿಯಾಗಲಿದೆ.
ಸಾಮಾಜಿಕ ಬಹಿಷ್ಕಾರ ತಡೆಗಟ್ಟುವಿಕೆ, ನಿಷೇಧ, ಪರಿಹಾರ ವಿಧೇಯಕ ಮಂಡನೆಗೆ ಸಿದ್ಧತೆ; ಸಚಿವ ಸಂಪುಟಕ್ಕೆ ಪ್ರಸ್ತಾವ
‘ಸಮುದಾಯದೊಳಗೆ ಕಾರ್ಯನಿರ್ವಹಿಸುವ, ಯಾರೇ ಸದಸ್ಯನ ವೈಯಕ್ತಿಕ ಮತ್ತು ಸಾಮಾಜಿಕ ನಡವಳಿಕೆಯನ್ನು ನಿಯಂತ್ರಿಸುವ ಹಾಗೂ ಅವರ ಕುಟುಂಬಗಳನ್ನು ಒಳಗೊಂಡಂತೆ ಅದರ ಸದಸ್ಯರ ಪೈಕಿ ಯಾವುದೇ ವಿವಾದಗಳನ್ನು ಮೌಖಿಕ ಅಥವಾ ಲಿಖಿತವಾದ ವಿದ್ಯುಕ್ತ ಹೇಳಿಕೆಗಳ ಮೂಲಕ ಒಟ್ಟಾಗಿ ಪರಿಹರಿಸುವ ಅಥವಾ ನಿರ್ಧರಿಸುವ ಪಂಚಾಯತಿ ಅಥವಾ ಯಾವುದೇ ಇತರ ಹೆಸರು ಅಥವಾ ವಿವರಣೆಯಿಂದ ಕರೆಯಲಾಗುವ, ನೋಂದಾಯಿತ ಅಥವಾ ನೋಂದಾಯಿತವಲ್ಲದ ಔಪಚಾರಿಕ ಅಥವಾ ಅನೌಪಚಾರಿಕವಾದ ಯಾವುದೇ ಸಮುದಾಯಕ್ಕೆ ಸೇರಿರುವ ವ್ಯಕ್ತಿಗಳ ಗುಂಪಿನ ಮೂಲಕ ರಚಿಸಲಾದ ಸಮಿತಿಯು ಇನ್ನು ಮುಂದೆ ಸಾಮಾಜಿಕ ಬಹಿಷ್ಕಾರ ಹೇರುವಂತಿಲ್ಲ,’ ಎಂದು ಹೇಳಿದೆ.
ಸಮುದಾಯ ಎಂಬುದನ್ನೂ ಸಹ ಇದೇ ವಿಧೇಯಕದಲ್ಲಿ ಸ್ಪಷ್ಪಪಡಿಸಿದೆ.
‘ಸಮುದಾಯ ಎಂಬುದು ಜಾತಿ ಪಂಚಾಯತಿಗೆ ಸಂಬಂಧಿಸಿದಂತೆ ಹುಟ್ಟು, ಪರಿವರ್ತನೆ ಅಥವಾ ಅವರು ಸೇರಿರುವ ಅದೇ ಧರ್ಮ ಅಥವಾ ಧಾರ್ಮಿಕ ಪಂಥ, ಜಾತಿ ಅಥವಾ ಉಪಜಾತಿಯ ಯಾವುದೇ ಧಾರ್ಮಿಕ ವಿಧಿ ವಿಧಾನಗಳ ಅಥವಾ ಉತ್ಸವಗಳ ಆಚರಣೆಯ ಕಾರಣದಿಂದ ಒಟ್ಟಿಗೆ ಸೇರುವ ಸದಸ್ಯರ ಗುಂಪು,’ ಎಂದು ವಿವರಿಸಿದೆ.
ಸಾಮಾಜಿಕ ಬಹಿಷ್ಕಾರವನ್ನು ವಿಧೇಯಕದ 3ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದೆ. ಸಮುದಾಯದ ಸದಸ್ಯರ ನಡುವೆ ಯಾವುದೇ ಸಾಮಾಜಿಕ ತಾರತಮ್ಯದ ಕುರಿತ ಮೌಖಿಕವಾದ ಅಥವಾ ಲಿಖಿತವಾದ ಪರೋಕ್ಷ ಸೂಚನೆ ಅಥವಾ ಕೃತ್ಯ ಎಂದು ವಿವರಿಸಿದೆ
ಸಾಮಾಜಿಕ ಬಹಿಷ್ಕಾರ ಮಾಡಿರುವ ಕಾರಣದಿಂದಾಗಿ ತೊಂದರಗೆ ಒಳಗಾದ ಅಥವಾ ದೈಹಿಕವಾದ ಅಥವಾ ಹಣಕಾಸಿನ ತೊಂದರೆ ಅಥವಾ ಆತನ ಸ್ವತ್ತಿಗೆ ತೊಂದರೆಯನ್ನು ಅನುಭವಿಸಿದ ವ್ಯಕ್ತಿ ಮತ್ತು ಆತನ ಸಂಬಂಧಿಕರು, ಕಾನೂನುಬದ್ಧ ಪೋಷಕರು ಮತ್ತು ಕಾನೂನುಬದ್ಧ ವಾರಸುದಾರರನ್ನು ‘ಸಂತ್ರಸ್ತ’ ಎಂದು ವಿಶ್ಲೇಷಿಸಿದೆ.
ಇನ್ನೊಬ್ಬ ವ್ಯಕ್ತಿಯೊಂದಿಗೆ ವ್ಯವಹರಿಸಲು, ಬಾಡಿಗೆಗಾಗಿ ಕೆಲಸ ನಿರ್ವಹಿಸಲು ಅಥವಾ ವ್ಯಾಪಾರ ಮಾಡಲು ನಿರಾಕರಿಸುವುದು, ಪ್ರತಿಫಲಕ್ಕಾಗಿ ಸೇವೆಯನ್ನು ಸಲ್ಲಿಸುವುದಕ್ಕಾಗಿ ಸೇವೆಗಳನ್ನು ನೀಡುವ ಅಥವಾ ಒಪ್ಪಂದ ಅವಕಾಶಗಳನ್ನು ಒಳಗೊಂಡ ಸದವಕಾಶಗಳನ್ನು ನಿರಾಕರಿಸುವುದು ಸಹ ಸಾಮಾಜಿಕ ಬಹಿಷ್ಕಾರ ಎಂದು ವಿಶ್ಲೇಷಿಸಿದೆ.
ಸಹಜ ವ್ಯಾವಹಾರಿಕ ಕ್ರಮದಲ್ಲಿ ಸಾಮಾನ್ಯವಾಗಿ ಮಾಡಲಾದ ವಿಷಯಗಳ ಮೇಲಿನ ಯಾವುದೇ ನಿಬಂಧನೆಗಳನ್ನು ನಿರಾಕರಿಸುವುದು ಸಹ ಸಾಮಾಜಿಕ ಬಹಿಷ್ಕಾರದ ವ್ಯಾಪ್ತಿಯಲ್ಲಿ ಬರಲಿದೆ. ಇತರ ವ್ಯಕ್ತಿಯೊಂದಿಗೆ ನಿರ್ವಹಿಸಲಾಗುವ ವೃತ್ತಿಪರ ಅಥವಾ ವ್ಯಾವಹಾರಿಕ ಸಂಬಂಧಗಳಿಂದ ವಿಮುಖನಾಗುವಂತಿಲ್ಲ.
ಆತನ ಸಮುದಾಯದ ಯಾರೇ ಸದಸ್ಯನನ್ನು ಯಾವುದೇ ಸಾಮಾಜಿಕ ಅಥವಾ ಧಾರ್ಮಿಕ ಪದ್ಧತಿ, ಬಳಕೆ ಅಥವಾ ಸಮಾರಂಭವನ್ನು ವೀಕ್ಷಿಸುವುದರಿಂದ ಅಥವಾ ಸಾಮಾಜಿಕ, ಧಾರ್ಮಿಕ, ಸಾಮುದಾಯಿಕ ಕಾರ್ಯಕ್ರಮಗಳು, ಸಮಾರಂಭ, ಸಮಾವೇಶ ಸಭೆ ಅಥವಾ ಮೆರವಣಿಗೆಗಳಲ್ಲಿ ಪಾಲ್ಗೊಳ್ಳುವುದರಿಂದ ತಡೆಯುವಂತಿಲ್ಲ. ಅಲ್ಲದೇ ನಿರ್ಬಂಧಿಸುವಂತಿಲ್ಲ. ಹಾಗೆಯೇ ಇಂತಹ ನಿರ್ಬಂಧಕ್ಕೆ ಕಾರಣನಾಗುವುದು ಸಹ ಸಾಮಾಜಿಕ ಬಹಿಷ್ಕಾರ ಎಸಗಿದಂತೆ ಎಂದು ವಿವರಿಸಿದೆ.
ಆತನ ಸಮುದಾಯದ ಯಾರೇ ಸದಸ್ಯನನ್ನು, ಆತನದೇ ಸಮುದಾಯದ ಸದಸ್ಯರು ಸಹಜವಾಗಿ ಮತ್ತು ಸಾಮಾನ್ಯವಾಗಿ ನೆರವೇರಿಸುವ ಮದುವೆ, ಶವಸಂಸ್ಕಾರ ಅಥವಾ ಇತರೆ ಧಾರ್ಮಿಕ ಸಮಾರಂಭಗಳು ಮತ್ತು ಪದ್ಧತಿಗಳನ್ನು ನಿರ್ವಹಿಸಲು ಇರುವ ಹಕ್ಕನ್ನು ನಿರಾಕರಿಸುವಂತಿಲ್ಲ ಅಥವಾ ತಿರಸ್ಕರಿಸುವಂತಿಲ್ಲ. ನಿರಾಕರಿಸಲು ಕಾರಣನಾಗುವುದು ಸಹ ಅಪರಾಧವಾಗಲಿದೆ.
‘ಧರ್ಮಾದಾಯ ದತ್ತಿ, ಧಾರ್ಮಿಕ, ಸಾರ್ವಜನಿಕ ಉದ್ದೇಶಕ್ಕಾಗಿ ಸಂಪೂರ್ಣವಾಗಿ ಅಥವಾ ಭಾಗಶಃವಾಗಿ ಅಂತಹ ಸಮುದಾಯದ ನಿಧಿಗಳಿಂದ ಆ ಸಮುದಾಯದ ಪರವಾಗಿ ಸ್ಥಾಪಿಸಿದ ಅಥವಾ ನಿರ್ವಹಿಸುತ್ತಿರುವ ಅಥವಾ ಬಳಸುತ್ತಿರುವ ಅಥವಾ ಬಳಸಲು ಉದ್ದೇಶಿಸಿರುವ ಮತ್ತು ಆತನದೇ ಸಮುದಾಯದ ಯಾರೇ ಇತರ ಸದಸ್ಯರು ಸಾಮಾನ್ಯವಾಗಿ ಮುಕ್ತವಾಗಿ ಬಳಸಲು ಲಭ್ಯವಿರುವ ಯಾವುದೇ ಸ್ಥಳದ ಪ್ರವೇಶಿಸುವುದನ್ನು ತಡೆಯುವುದು ಅಥವಾ ನಿರ್ಬಂಧಿಸುವುದು ಇದಕಕೆ ಕಾರಣಕರ್ತರಾಗುವವರು ಸಹ ಅಪರಾಧವಾಗಲಿದೆ,’ ಎಂದು ವಿವರಿಸಿದೆ.
ಯಾವುದೇ ಶಾಲೆ, ಶೈಕ್ಷಣಿಕ ಸಂಸ್ಥೆ, ವೈದ್ಯಕೀಯ ಸಂಸ್ಥೆ, ಸಮುದಾಯ ಸಭಾಂಗಣ, ಕ್ಲಬ್ , ಸ್ಮಶಾನ, ಸಮಾಧಿ ಸ್ಥಳ ಅಥವಾ ಆತನ ಸಮುದಾಯವು ಬಳಸುವ ಅಥವಾ ಬಳಸಲು ಉದ್ದೇಶಿಸಿರುವ ಯಾವುದೇ ಇತರ ಸ್ಥಳ ಅಥವಾ ಯಾವುದೇ ಇತರ ಸಾರ್ವಜನಿಕ ಸ್ಥಳದ ಸೌಲಭ್ಯ ಒದಗಿಸುವುದನ್ನು, ಬಳಸುವುದನ್ನು ತಡೆಯುವಂತಿಲ್ಲ. ಅಥವಾ ನಿರ್ಬಂಧಿಸುವುದು ಅಥವಾ ಇದಕ್ಕೆ ಕಾರಣಕರ್ತನಗುವುದು ಸಹ ಅಪರಾಧವಾಗಲಿದೆ.
ಸಮುದಾಯದ ಯಾರೇ ಸದಸ್ಯನನ್ನು ಆತನ ಸಮುದಾಯದ ಸದಸ್ಯರಿಗೆ ಸಾಮಾನ್ಯವಾಗಿ ಮುಕ್ತವಾಗಿರುವ ಯಾವುದೇ ಪೂಜಾ ಸ್ಥಳ ಅಥವಾ ತೀರ್ಥಕ್ಷೇತ್ರ ಪ್ರವೇಶಿಸುವುದಕ್ಕೆ ತಡೆಗಟ್ಟುವುದು, ತಂಗುವುದನ್ನು ಮತ್ತು ಅನ್ಯಥಾ ರೀತಿಯಲ್ಲಿ ಬಳಸುವುದನ್ನು ತಡೆಯುವುದು ಸಹ ಅಪರಾಧವಾಗಲಿದೆ.
ಅತನ ಸಮುದಾಯದ ಯಾರೇ ಮಕ್ಕಳು ನಿರ್ದಿಷ್ಟ ಕುಟುಂಬದ ಅಥವಾ ಸಮುದಾಯದ ಇತರ ಕುಟುಂಬಗಳ ಮಕ್ಕಳೊಂದಿಗೆ ಒಟ್ಟಿಗೆ ಆಟವಾಡುವುದನ್ನು ತಡೆಯುವುದು ಸಹ ನಿರ್ಬಂಧಿಸುವುದು ಸಹ ಅಪರಾಧವಾಗಲಿದೆ.
ನೈತಿಕತೆ, ಸಾಮಾಜಿಕ ಸ್ವೀಕಾರ, ರಾಜಕೀಯ ಒಲವು, ಲಿಂಗತ್ವ ಅಥವಾ ಯಾವುದೇ ಇತರ ಆಧಾರದ ಮೇಲೆ ಸಮುದಾಯದ ಸದಸ್ಯರ ನಡುವೆ ತಾರತಮ್ಯವನ್ನು ಮಾಡುವುದು ಸಹ ಸಹ ಸಹ ಸಾಮಾಜಿಕ ಬಹಿಷ್ಕಾರವನ್ನು ಎಸಗಿದಂತಾಗುತ್ತದೆ.
ಆತನ ಸಮುದಾಯದ ಯಾರೇ ಸದಸ್ಯನನ್ನು ಯಾವುದೇ ನಿರ್ದಿಷ್ಟ ರೀತಿಯ ಬಟ್ಟೆಗಳನ್ನು ಧರಿಸಲು ಅಥವಾ ಯಾವುದೇ ನಿರ್ದಿಷ್ಟ ಭಾಷೆಯನ್ನು ಬಳಸಲು ಸಾಂಸ್ಕೃತಿಕ ಅಡಚಣೆಯನ್ನು ಸೃಷ್ಟಿಸುವುದು ಅಥವಾ ಸೃಷ್ಟಿಸುವಂತೆ ಮಾಡುವುದು ಅಥವಾ ಒತ್ತಾಯಿಸುವುದು ಸಹ ಅಪರಾಧಾಗಲಿವೆ.
ವ್ಯಕ್ತಿಯು ತನ್ನ ಅಧಿಕಾರವನ್ನು ಬಳಸಿ ಅಥವಾ ಬಳಸಲು ಕಾರಣವಾಗಿ ಸಾಮಾಜಿ ಬಹಿಷ್ಕಾರ ವಿಧಿಸಲಿಕ್ಕಾಗಿಯೇ ಜಾತಿ ಪಂಚಾಯತಿ ಸಭೆ ನಡೆಸುವುದು ಮತ್ತು ಸಭೆಗಳಲ್ಲಿ ಮತ ಚಲಾಯಿಸಲು ಅದರ ಇತರ ಸದಸ್ಯರನ್ನು ಪ್ರಭಾವಿಸುವುದು, ಅಂಥ ಸಭೆಗಳಲ್ಲಿ ಉಪಸ್ಥಿತನಾಗಿರದಿದ್ದರೂ ಸಹ ಈ ಪ್ರಕರಣದ ಅಡಿ ಅಪರಾಧ ಎಸಗಿದಂತೆ. ಜಾತಿ ಪಂಚಾಯತಿ ಸಭೆಯು ನಡೆದಾಗ ಸಾಮಾಜಿಕ ಬಹಿಷ್ಕಾರ ವಿಧಿಸುವ ನಿರ್ಣಯ ಮಾಡಿ ಅಂತ ನಿರ್ಣಯ ಹೊರಡಿಸುವುದು, ಅಂತಹ ನಿರ್ಣಯ ಅಥವಾ ಆಚರಣೆಯ ಚರ್ಚೆಗಳ ಪರವಾಗಿ ಮತ ಚಲಾಯಿಸಿದ ಪ್ರತೀ ಸದಸ್ಯನೂ ಸಹ ಈ ಪ್ರಕರಣದಡಿಯಲ್ಲಿ ಅಪರಾಧ ಎಸಗಿದಂತಾಗುತ್ತದೆ.