ಬೆಂಗಳೂರು; ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯವಿಧಾನದ ತಿದ್ದುಪಡಿ ವಿಧೇಯಕಕ್ಕೆ ರಾಷ್ಟ್ರಪತಿಗಳ ಸಹಮತಿ ಪಡೆಯುವ ಪ್ರಕ್ರಿಯೆಯು ದೀರ್ಘಕಾಲಿಕವಾಗುವ ಸಂಭವವಿರುವ ಕಾರಣ ಈ ವಿಧೇಯಕವನ್ನು ಹಿಂಪಡೆಯಲು ಪರಿಶೀಲಿಸಬಹುದು ಎಂದು ಕಾನೂನು ಇಲಾಖೆಯು ಅಭಿಪ್ರಾಯಿಸಿರುವುದು ಇದೀಗ ಬಹಿರಂಗವಾಗಿದೆ.
ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯವಿಧಾನದ ತಿದ್ದುಪಡಿ ವಿಧೇಯಕಕ್ಕೆ (The Karnataka Public Service Commission (Functions) Rules 2025ಗೆ ರಾಜ್ಯಪಾಲರು ಅಂಕಿತ ಹಾಕಿರಲಿಲ್ಲ. ಹೀಗಾಗಿ ಈ ವಿಧೇಯಕಕ್ಕೆ ರಾಷ್ಟ್ರಪತಿಗಳ ಸಹಮತಿ ಪಡೆಯಲು ರಾಜ್ಯ ಕಾಂಗ್ರೆಸ್ ಸರ್ಕಾರವು ಮುಂದಾಗಿತ್ತು. ಆದರೀಗ ಈ ಪ್ರಕ್ರಿಯೆಯೇ ದೀರ್ಘಕಾಲಿಕವಾಗಿ ಮುಂದುವರೆಯುವ ಕಾರಣ, ಈ ವಿಧೇಯಕವನ್ನು ಹಿಂಪಡೆಯಲು ಕರ್ನಾಟಕ ಸಂಪುಟಗಳ ವ್ಯವಹರಣೆಗಳ ನಿಯಮ 1977ರ ಅನ್ವಯ (The Karnataka Government (Transaction of Business) Rules ) ಅವಕಾಶವಿದೆ. ಇದನ್ನೂ ಸಹ ಪರಿಶೀಲಿಸಬಹುದು ಎಂದು ಕಾನೂನು ಇಲಾಖೆಯು ಸರ್ಕಾರಕ್ಕೆ ಸಲಹೆ ನೀಡಿದೆ.
ಈ ಸಲಹೆ ಕುರಿತು ಸಂಸದೀಯ ವ್ಯವಹಾರಗಳು ಶಾಸನ ರಚನೆ ಇಲಾಖೆ ಅಧಿಕಾರಿಗಳು ಸಚಿವ ಎಚ್ ಕೆ ಪಾಟೀಲ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು 2025ರ ಜೂನ್ 24ರಂದು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯು ಈ ಕುರಿತು (ಸಂಖ್ಯೆ; ಸಂವ್ಯಶಾಇ 158 ಪಶಾರ 2025, DPAR 182 SLA 2022) ಚರ್ಚಿಸಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ಕೆಲವು ದಾಖಲೆಗಳು ‘ದಿ ಫೈಲ್’ ಗೆ ಲಭ್ಯವಾಗಿವೆ.
ಕಾನೂನು ಇಲಾಖೆಯ ಅಭಿಪ್ರಾಯದಲ್ಲೇನಿದೆ?
ಈ ವಿಧೇಯಕಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೀಡಿರುವ ಅಭಿಪ್ರಾಯವನ್ನು ಕಾನೂನು ಇಲಾಖೆಯು 2025ರ ಜೂನ್ 10ರಂದು ನೀಡಿರುವ ತನ್ನ ಅಭಿಪ್ರಾಯದಲ್ಲಿ (ಸಂವ್ಯಶಾಇ 09 ಶಾಸನ 2025 (ಡಿಪಿಎಆರ್ 181 ಎಸ್‌ಎಲ್‌ಎ 2022) ಪ್ರಸ್ತಾವಿಸಿದೆ. ‘ಸಮಾಲೋಚನೆಯನ್ನು ಬಿಟ್ಟುಬಿಡುವುದು ಅಥವಾ ಅದರ ಅವಶ್ಯಕತೆಯನ್ನು ತೆಗೆದುಹಾಕುವುದು ಸಾಂವಿಧಾನಿಕ ಶಿಸ್ತು ಮತ್ತು ಶ್ರೇಷ್ಠತೆಯ ಉಲ್ಲಂಘನೆಯಾಗಿದೆ,’ ಎಂದು ರಾಜ್ಯಪಾಲರು ಅಭಿಪ್ರಾಯಿಸಿರುವುದನ್ನು ಅಭಿಪ್ರಾಯದಲ್ಲಿ ಪ್ರಸ್ತಾವಿಸಿರುವುದು ಗೊತ್ತಾಗಿದೆ.
ಈ ವಿಧೇಯಕವನ್ನು ಭಾರತ ಸಂವಿಧಾನದ ಅನುಚ್ಛೇಧ 200 ಮತ್ತು 201ರ ಅಡಿಯಲ್ಲಿ ರಾಷ್ಟ್ರಾಧ್ಯಕ್ಷರ ಪರ್ಯಾಲೋಚನೆಗಾಗಿ ಕಾಯ್ದಿರಿಸಿದೆ. ಹೀಗಾಗಿ ಈ ವಿಧೇಯಕವನ್ನು ಕೇಂದ್ರ ಸರ್ಕಾರದ ಗೃಹ ಸಚಿವಾಲಯ ಮೂಲಕ ರಾಷ್ಟ್ರಪತಿಗಳಿಗೆ ಕಳಿಸಬೇಕು.
ಈ ವಿಧೇಯಕದ ಕುರಿತು ರಾಜ್ಯಪಾಲರು ಈಗಾಗಲೇ ತೀರ್ಮಾನ ಕೈಗೊಂಡಿರುವಂತೆ ರಾಷ್ಟ್ರಾಧ್ಯಕ್ಷರ ಪರ್ಯಾಲೋಚನೆಗಾಗಿ ಕೇಂದ್ರ ಸರ್ಕಾರದ ಗೃಹ ಸಚಿವಾಲಯಕ್ಕೆ ಕಳಿಸಿದ್ದಲ್ಲಿ ಇಲಾಖೆಗಳೊಂದಿಗೆ ಸಮಾಲೋಚಿಸಲಿದೆ. ಹಾಗೆಯೇ ಆ ಇಲಾಖೆಗಳು ಮಾಡುವ ಅವಲೋಕನಗಳಿಗೆ ಉತ್ತರ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ತಿಳಿಸುತ್ತದೆ. ಹೀಗಾಗಿ ವಿಧೇಯಕಕ್ಕೆ ರಾಷ್ಟ್ರಪತಿಗಳ ಸಹಮತಿ ಪಡೆಯುವ ಪ್ರಕ್ರಿಯೆಯು ದೀರ್ಘಕಾಲಿಕವಾಗುವ ಸಂಭವವಿದೆ ಎಂದು ಸಂಸದೀಯ ವ್ಯವಹಾರಗಳು ಶಾಸನ ರಚನೆ ಇಲಾಖೆಯು ತನ್ನ ಅಭಿಪ್ರಾಯ ವ್ಯಕ್ತಪಡಿಸಿರುವುದು ತಿಳಿದು ಬಂದಿದೆ.
ಕೆಪಿಎಸ್ಸಿಯ ಕಾರ್ಯವಿಧಾನದ 1959ರ ವಿಧೇಯಕಕ್ಕೆ ತರಲು ಹೊರಟಿರುವ ತಿದ್ದುಪಡಿಯು ಸಂವಿಧಾನದ 320ನೇ ವಿಧಿಗೆ ವಿರುದ್ಧವಾಗಿದೆ ಮತ್ತು ಕೆಪಿಎಸ್ಸಿಯ ಸ್ವಾಯತ್ತೆಯನ್ನು ಮೊಟಕುಗೊಳಿಸುತ್ತದೆ ಎಂದು ರಾಜ್ಯಪಾಲರು ಅಭಿಪ್ರಾಯಿಸಿದ್ದರು.
1959ರ ವಿಧೇಯಕದಲ್ಲಿನ 18ನೇ ಪ್ರಕರಣದಲ್ಲಿ ನಿಯಮಗಳು ರಚನೆ ಮಾಡುವಾಗ ಲೋಕಸೇವಾ ಆಯೋಗದ ಸಮಾಲೋಚನೆ ಮಾಡಬೇಕು ಎಂದು ಶಾಸನಾತ್ಮಕವಾದ ಉಪಬಂಧವಿದೆ. ಈ ಹಿಂದೆಯೂ ಸರ್ಕಾರವು ಈ ಅಧಿನಿಯಮದ ಅಡಿಯಲ್ಲಿ ನಿಯಮಗಳ ರಚನೆ ತಿದ್ದುಪಡಿ ಮಾಡುವಾಗಲೆಲ್ಲಾ ಈ ಸಂಪ್ರದಾಯವನ್ನು ಅನುಸರಿಸಿಕೊಂಡು ಬರುತ್ತಿತ್ತು ಎಂದು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯು ಸಹ ತನ್ನ ಅಭಿಪ್ರಾಯ ನೀಡಿರುವುದು ತಿಳಿದು ಬಂದಿದೆ.
ಪ್ರಸ್ತುತ ಈ ಅಧಿನಿಯಮಕ್ಕೆ ತಿದ್ದುಪಡಿ ಪ್ರಸ್ತಾವ ಬಂದಿದೆ. ಈ ತಿದ್ದುಪಡಿ ವಿಧೇಯಕದಲ್ಲಿ ಇಂತಹ ಸಮಾಲೋಚನೆ ತೆಗೆದುಹಾಕಲು ನಿರ್ಧರಿಸಿದೆ. ಇದಕ್ಕೆ ರಾಜ್ಯಪಾಲರು ಕೆಲವು ಸ್ಪಷ್ಟೀಕರಣ ಕೋರಿದ್ದರು. ಅದು ರಾಜ್ಯ ಸರ್ಕಾರದಲ್ಲಿ ಬಾಕಿ ಇತ್ತು. ಈಗ ಬದಲಾದ ಸಮಯದಲ್ಲಿ ಈ ವಿಧೇಯಕವು ರಾಷ್ಟ್ರಾಧ್ಯಕ್ಷರ ಅನುಮೋದನೆಗಾಗಿ ರಾಜ್ಯಪಾಲರು ಕಾಯ್ದಿರಿಸಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರಗಳು ನಿಯಮಗಳನ್ನು ರಚಿಸುವಾಗ ಈ ಅಂಶವನ್ನು ಗಮನದಲ್ಲಿರಿಸಿಕೊಳ್ಳಬೇಕಿದೆ ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಲಾಗಿದೆ.
ನಿಯಮಗಳನ್ನು ರಚಿಸಿ ಹೊರಡಿಸುವಾಗ ಅದನ್ನು ರಾಜ್ಯಪಾಲರ ಆದೇಶದ ಅನುಸಾರ ಮತ್ತು ಅವರ ಹೆಸರಿನಲ್ಲಿ ಎಂದು ಉಲ್ಲೇಖಿಸಲಾಗುತ್ತದೆ. ಆದ್ದರಿಂದ ಕಾನೂನು ಇಲಾಖೆಯು ಈ ಬಗ್ಗೆ ಸಕಾರದ ವಿವೇಚನೆಯುತವಾಗಿ ಅಂತಿಮಗೊಳಿಸಬೇಕು ಎಂಬ ಅಭಿಪ್ರಾಯದ ಬಗ್ಗೆ ಪುನರ್ ಪರಿಶೀಲಿಸಬೇಕು ಎಂದು ಕೋರಿದರುವುದು ಗೊತ್ತಾಗಿದೆ.
ಅದೇ ರೀತಿ ಕಾನೂನು ಇಲಾಖೆಯು ಇದೇ ಅಭಿಪ್ರಾಯದಲ್ಲಿ ಮತ್ತೊಂದು ಸಂಗತಿಯನ್ನು ಸಹ ಪ್ರಸ್ತಾವಿಸಿದೆ. ನಿಯಮಗಳನ್ನು ರೂಪಿಸಲು, ಅಧಿಸೂಚನೆಗಳನ್ನು ಹೊರಡಿಸುವ ಮುನ್ನ ರಾಜ್ಯ ಸರ್ಕಾರದ ಅಧಿಕಾರವನ್ನು ಸಾಮಾನ್ಯವಾಗಿ ಭಾರತೀಯ ಸಂವಿಧಾನ ಮತ್ತು ಸಂಬಂಧಿತ ಶಾಸನಗಳಿಂದ ಸ್ಥಾಪಿಸಿದೆ. ಈ ಅಧಿಕಾರವು ಸರ್ಕಾರಕ್ಕೆ ಕಾನೂನು ಮತ್ತು ನಿಬಂಧನೆಗಳನ್ನು ಜಾರಿಗೆ ತರಲು ಅವಕಾಶ ನೀಡುತ್ತದೆ. ನ್ಯಾಯಾಲಯಗಳು ಕೆಲವು ಸಂದರ್ಭಗಳಲ್ಲಿ ಅಂತಹ ಅಧಿಸೂಚನೆಗಳ ಸಿಂಧುತ್ವದ ಕುರಿತು ಮಾಹಿತಿ ನೀಡಿದೆ ಎಂದು ಗಮನ ಸೆಳೆದಿದೆ.
ಹಾಗೆಯೇ ಭಾರತೀಯ ಸಂವಿಧಾನವು ರಾಜ್ಯಗಳಿಗೆ ಶಾಸಕಾಂಗ ಅಧಿಕಾರವನ್ನು ನೀಡುತ್ತದೆ. ಸಂವಿಧಾನದಲ್ಲಿನ ನಿರ್ದಿಷ್ಟ ನಿಬಂಧನೆಗಳು, ಅನುಚ್ಛೇದ 309ರಂತೆ ಸಾರ್ವಜನಿಕ ಸೇವಕರ ಸೇವಾ ಷರತ್ತುಗಳಿಗಾಗಿ ನಿಯಮಗಳನ್ನು ಮಾಡುವ ಅಧಿಕಾರವನ್ನು ತಿಳಿಸುತ್ತದೆ. ಆದ್ದರಿಂದ ಪ್ರಸ್ತಾಪಿತ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯವಿಧಾನದ ನಿಯಮಗಳು 2025ರ ಅಧಿಸೂಚನೆಯನ್ನು ಸರ್ಕಾರವೇ ಅಂತಿಮಗೊಳಿಸಿ ಅಧಿಸೂಚಿಸಬಹುದು ಎಂದೂ ಸಹ ಸಲಹೆ ನೀಡಿರುವುದು ತಿಳಿದು ಬಂದಿದೆ.
‘ರಾಜ್ಯ ಸರ್ಕಾರಗಳು ಸಾಮಾನ್ಯವಾಗಿ ತಮ್ಮ ನಿಯಮ ರೂಪಿಸುವ ಅಧಿಕಾರವನ್ನು ರಾಜ್ಯ ಶಾಸಕಾಂಗವು ಅಂಗೀಕರಿಸಿದ ನಿರ್ದಿಷ್ಟಪಡಿಸಿದ ಕಾನೂನುಗಳಿಂದ ಪಡೆಯುತ್ತವೆ. ಆದ್ದರಿಂದ ಅಧಿಸೂಚನೆಯನ್ನು ಸರ್ಕಾರವೇ ಅಂತಿಮಗೊಳಿಸಿ ಅಧಿಸೂಚಿಸಬಹುದು. ಮತ್ತು ಇದು ಕಾನೂನಾತ್ಮಕವಾಗಿಯೂ ಇತ್ಯರ್ಥವಾಗಿದೆ,’ ಎಂದು ಅಭಿಪ್ರಾಯಿಸಿದೆ.
1959ರ ವಿಧೇಯಕಕ್ಕೆ ತರಲು ಹೊರಟಿರುವ ತಿದ್ದುಪಡಿಯು ಸಂವಿಧಾನದ 320ನೇ ವಿಧಿಗೆ ವಿರುದ್ಧವಾಗಿದೆ ಮತ್ತು ಕೆಪಿಎಸ್ಸಿಯ ಸ್ವಾಯತ್ತೆಯನ್ನು ಮೊಟಕುಗೊಳಿಸುತ್ತದೆ ಎಂದು ರಾಜ್ಯಪಾಲರು ಅಭಿಪ್ರಾಯಿಸಿದ್ದರು.
ವಿಶೇಷವೆಂದರೇ ಇದೇ ವಿಧೇಯಕಕ್ಕೆ ಹಿಂದಿನ ಬಿಜೆಪಿ ಸರ್ಕಾರವು ತಿದ್ದುಪಡಿ ತರಲು ಹೊರಟಿತ್ತು. 2023ರ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಇದ್ದ ಕಾರಣಕ್ಕೆ ಈ ತಿದ್ದುಪಡಿ ವಿಧೇಯಕವನ್ನು ಈಗಿನ ಕಾಂಗ್ರೆಸ್ ಸರ್ಕಾರವು ಮುಂದುವರೆಸಿತ್ತು.
ಈ ತಿದ್ದುಪಡಿ ವಿಧೇಯಕಕ್ಕೆ ಸಂಬಂಧಿಸಿದಂತೆ ಕೆಪಿಎಸ್ಸಿಯಿಂದ ಯಾವುದೇ ಅಭಿಪ್ರಾಯವನ್ನೂ ಪಡೆದಿರಲಿಲ್ಲ. ಬದಲಿಗೆ ಸರ್ಕಾರವೇ ಗೌಪ್ಯವಾಗಿಟ್ಟಿತ್ತು. ಹೀಗಾಗಿ ಇಡೀ ತಿದ್ದುಪಡಿ ವಿಧೇಯಕದ ಬಗ್ಗೆ ರಾಜ್ಯಪಾಲರು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದರು.
ರಾಜ್ಯಪಾಲರ ಆತಂಕವೇನು?
ಈ ತಿದ್ದುಪಡಿ ವಿಧೇಯಕವನ್ನು ಗಮನಿಸಿದಂತೆ, ಸೆಕ್ಷನ್ 18 ರಾಜ್ಯ ಸರ್ಕಾರವು ತನ್ನ ವ್ಯವಹಾರ ಮತ್ತು ಹೆಚ್ಚುವರಿ ಕಾರ್ಯಗಳ ನಡವಳಿಕೆಗಾಗಿ ನಿಯಮಗಳನ್ನು ರೂಪಿಸುವ ಉದ್ದೇಶಕ್ಕಾಗಿ ಆಯೋಗದೊಂದಿಗೆ ಸಮಾಲೋಚಿಸಲು ಅವಕಾಶವನ್ನು ಒದಗಿಸುತ್ತದೆ ಎಂದು ತಿಳಿದು ಬಂದಿದೆ.
ಲೋಕಸೇವಾ ಸೇವಾ ಆಯೋಗವು ವಿಧಿ 315 ರ ಅಡಿಯಲ್ಲಿ ರಚಿಸಲಾದ ಸಾಂವಿಧಾನಿಕ ಪ್ರಾಧಿಕಾರವಾಗಿದೆ. ಲೋಕ ಸೇವಾ ಆಯೋಗದ ಕಾರ್ಯಗಳನ್ನು ಭಾರತದ ಸಂವಿಧಾನದ ವಿಧಿ 320 ರ ಅಡಿಯಲ್ಲಿ ನಿಯೋಜಿಸಲಾಗಿದೆ. ಇದರಲ್ಲಿ ನಾಗರಿಕ ಸೇವಕರ ನೇಮಕಾತಿ ವಿಧಾನ ಮತ್ತು ಇತರ ಸೇವಾ ಸಂಬಂಧಿತ ವಿಷಯಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ಆಯೋಗದೊಂದಿಗೆ ಸಮಾಲೋಚಿಸಲು ಅವಕಾಶಗಳನ್ನು ಒದಗಿಸಿದೆ.
ತಿದ್ದುಪಡಿ ವಿಧೇಯಕ; ಸಂವಿಧಾನದ 320ನೇ ವಿಧಿಗೆ ವಿರುದ್ಧ, ಕೆಪಿಎಸ್ಸಿ ಸ್ವಾಯತ್ತೆ ಮೊಟಕು, ರಾಜ್ಯಪಾಲರ ಆತಂಕ
ಈ ನಿಬಂಧನೆಯನ್ನು ಬಿಟ್ಟುಬಿಟ್ಟರೆ, ರಾಜ್ಯ ಸರ್ಕಾರವು ಆಯೋಗದೊಂದಿಗೆ ಯಾವುದೇ ರೀತಿಯಲ್ಲಿ ಸಮಾಲೋಚಿಸದೆ ಈ ವಿಷಯದಲ್ಲಿ ನಿಯಮಗಳನ್ನು ರಚಿಸುವ ಅಧಿಕಾರವನ್ನು ಹೊಂದಿರುತ್ತದೆ.
‘ಪ್ರಸ್ತಾವಿತ ತಿದ್ದುಪಡಿಯು 320 ನೇ ವಿಧಿಗೆ ವಿರುದ್ಧವಾಗಿದೆ ಮತ್ತು ಅದು ಆಯೋಗದ ಸ್ವಾಯತ್ತತೆಯನ್ನು ಮೊಟಕುಗೊಳಿಸುತ್ತದೆ ಎಂಬ ಆತಂಕ ನನಗಿದೆ,’ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಭಿಪ್ರಾಯಿಸಿದ್ದರು.
ಹೀಗಾಗಿ ಪ್ರಸ್ತಾವಿತ ತಿದ್ದುಪಡಿಯು ಸಂವಿಧಾನದ 320 ನೇ ವಿಧಿಗೆ ವಿರುದ್ಧವಾಗಿದೆಯೇ ಎಂದು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಆದ್ದರಿಂದ ಈ ಬಗ್ಗೆ ಸ್ಪಷ್ಟೀಕರಣ ಮತ್ತು ಕಾನೂನು ಅಭಿಪ್ರಾಯದೊಂದಿಗೆ ಕಡತವನ್ನು ಮರು ಸಲ್ಲಿಸಬೇಕು ಎಂದು ರಾಜ್ಯಪಾಲರು ನಿರ್ದೇಶನ ನೀಡಿದ್ದರು.
ಕರ್ನಾಟಕ ಲೋಕಸೇವಾ ಆಯೋಗ (conduct of business and additional functions 1959- funcitions rules 1973) ನಿಯಮಗಳಿಗೆ ತಿದ್ದುಪಡಿ ಮಾಡಲು ಹಿಂದಿನ ಬಿಜೆಪಿ ಸರ್ಕಾರವು ತೀರ್ಮಾನಿಸಿತ್ತು. ಈ ಸಂಬಂಧಿತ ಕಡತವನ್ನು 2022ರ ಆಗಸ್ಟ್ 19ರಂದು ಸಿಬ್ಬಂದಿ ಮತ್ತು ಅಡಳಿತ ಸುಧಾರಣೆ ಇಲಾಖೆಯು (ಕಡತ ಸಂಖ್ಯೆ; DPAR/181/SLA/2022- COMPUTER NUMBER 857064) ತೆರೆದಿತ್ತು.
ಈ ತಿದ್ದುಪಡಿಗೆ ಸಚಿವ ಸಂಪುಟದ ಅನುಮೋದನೆ ಅಗತ್ಯವಿತ್ತು. ಹೀಗಾಗಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಪರಿಶೀಲನಾ ಸಮಿತಿ ಮುಂದೆ ಈ ವಿಧೇಯಕವನ್ನು ಮಂಡಿಸಿತ್ತು. ಆದರೆ ಚುನಾವಣೆ ನೀತಿ ಸಂಹಿತೆ ಘೋಷಣೆಯಾದ ಕಾರಣಕ್ಕೆ ಈ ತಿದ್ದುಪಡಿ ವಿಧೇಯಕವು ನೆನೆಗುದಿಗೆ ಬಿದ್ದಿತ್ತು. ಕಡತವು ಸಂಬಂಧಿಸಿದ ಶಾಖೆಗೆ ಹಿಂದಿರುಗಿತ್ತು.
ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಕೆಲವೇ ಕೆಲವು ತಿಂಗಳಲ್ಲಿ ಈ ತಿದ್ದುಪಡಿ ವಿಧೇಯಕವು ಮತ್ತೆ ಚಾಲ್ತಿಗೆ ಬಂದಿತು. ಇದೇ ಕಡತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮೋದನೆಗೆ ಮರು ಮಂಡಿಸಿತ್ತು ಎಂಬುದು ತಿಳಿದು ಬಂದಿದೆ.
ಈ ಪ್ರಸ್ತಾವನೆ ಉದ್ಭವವಾಗಿದ್ದಾದರೂ ಎಲ್ಲಿಂದ?
ಈ ತಿದ್ದುಪಡಿ ವಿಧೇಯಕವು ಕರ್ನಾಟಕ ಲೋಕಸೇವಾ ಆಯೋಗಕ್ಕೆ ನೇರವಾಗಿ ಸಂಬಂಧಿಸಿದೆ. ಆದರೆ ಸರ್ಕಾರವು ಈ ಬಗ್ಗೆ ಕೆಪಿಎಸ್‌ಸಿಯಿಂದ ಯಾವುದೇ ಅಭಿಪ್ರಾಯ ಪಡೆದಿರಲಿಲ್ಲ ಮತ್ತು ಆಯೋಗದ ಅಧ್ಯಕ್ಷ, ಕಾರ್ಯದರ್ಶಿ ಅವರೊಂದಿಗೆ ಇಲಾಖೆಯು ಯಾವುದೇ ಸಭೆಯನ್ನೂ ನಡೆಸಿರಲಿಲ್ಲ. ಕೆಪಿಎಸ್‌ಸಿ ಕಾರ್ಯದರ್ಶಿ ಜತೆ ಚರ್ಚಿಸಲು ಸಭೆ ಏರ್ಪಡಿಸಲು ಡಿಪಿಎಆರ್‍ನ ಕಾರ್ಯದರ್ಶಿಯಾಗಿದ್ದ ಎಂ ಕೆ ಶ್ರೀಕರ್ ಅವರು ಸೂಚಿಸಿದ್ದರು. ಆದರೆ ಸಭೆ ನಡೆಸಿರಲಿಲ್ಲ. ಈ ತಿದ್ದುಪಡಿ ವಿಧೇಯಕದ ವಿಷಯವು ಗೌಪ್ಯವಾಗಿರಿಸಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಆಯೋಗದ ಹಾಲಿ ಕಾರ್ಯದರ್ಶಿ ಅವರೊಂದಿಗೆ ಈ ತಿದ್ದುಪಡಿ ವಿಧೇಯಕದ ಕುರಿತು ಡಿಪಿಎಆರ್ ಚರ್ಚಿಸಿದೆ. ಚರ್ಚಿಸಿದ ನಂತರ ಈ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ಕೋರುವ ಕಡತವನ್ನು ಪುನಃ ಮುಖ್ಯಮಂತ್ರಿಗೆ 2025ರ ಜನವರಿ 16ರಂದು ಮಂಡಿಸಿತ್ತು. ಕರಡು ವಿಧೇಯಕಕ್ಕೆ ಹೊಸದಾಗಿ ಹಲವು ಅಂಶಗಳನ್ನು ಸೇರಿಸಿತ್ತು.
ಆಯೋಗದ ಕಾಯ್ದೆ ಸೆಕ್ಷನ್ 15ನ್ನು ಕೈ ಬಿಡಬೇಕು ಮತ್ತು ಸೆಕ್ಷನ್ 18ರಲ್ಲಿನ (ಇತರ ಸಂದರ್ಭಗಳಲ್ಲಿ ಕಾರ್ಯವಿಧಾನ) 18(1)ರಲ್ಲಿನ ಆಯೋಗದೊಂದಿಗೆ ಸಮಾಲೋಚಿಸಿ ಎಂಬ ಪದವನ್ನು ಕೈ ಬಿಡುವುದು ಮತ್ತು ಪ್ರಧಾನ ಕಾಯ್ದೆಯಿಂದ ಸೆಕ್ಷನ್ 18, ಸಬ್ ಸೆಕ್ಷನ್ (2)ನ್ನು ಕೈ ಬಿಡಲು ಈಗಿನ ಕಾಂಗ್ರೆಸ್ ಸರ್ಕಾರವು ತೀರ್ಮಾನಿಸಿತ್ತು.
ಈ ಅಂಶಗಳನ್ನು ತಿದ್ದುಪಡಿ ವಿಧೇಯಕದಲ್ಲಿ ಸೇರಿಸಿತ್ತು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾನೂನು ಸಚಿವ ಹೆಚ್ ಕೆ ಪಾಟೀಲ್ ಅವರು 2025ರ ಮಾರ್ಚ್ 3ರಂದು ಅನುಮೋದಿಸಿದ್ದರು.
ಸಮಾಲೋಚನೆ ವಿವೇಚನೆಗೆ ಒಳಪಟ್ಟಿದೆಯೇ?
ರಾಜ್ಯಪಾಲರು ಕೋರಿದ್ದ ಸ್ಪಷ್ಟೀಕರಣ ಕುರಿತು ಸಹ ಅಧಿಕಾರಿಗಳೊಂದಿಗೆ ಚರ್ಚಿಸಿತ್ತು. ಮೂಲ ಕಾಯ್ದೆಯಲ್ಲಿ ಸೆಕ್ಷನ್ 18ನ್ನು ಕೈಬಿಡುವ ಸಂಬಂಧ ಹಲವು ಸುತ್ತಿನ ಸಭೆಗಳನ್ನೂ ನಡೆಸಿತ್ತು. ‘ಈ ಹಿನ್ನೆಲೆಯಲ್ಲಿ ಸರ್ಕಾರವು ನಿಯಮಗಳನನ್ನು ರೂಪಿಸುವ ಹಂತದಲ್ಲಿ ಆಯೋಗದೊಂದಿಗೆ ಸಮಾಲೋಚಿಸುವುದು ಸರ್ಕಾರದ ವಿವೇಚನೆಗೆ ಒಳಪಟ್ಟಿರುತ್ತದೆ ಎಂದು ಪರಿಭಾವಿಸದೇ,” ಎಂಬ ಕುರಿತೂ ಚರ್ಚೆಯಾಗಿತ್ತು.
ರಾಜ್ಯಪಾಲರು ವ್ಯಕ್ತಪಡಿಸಿದ್ದ ಆತಂಕವನ್ನು ನಿವಾರಿಸಿ ಕಡತದಲ್ಲಿ ವಿವರಣೆ ನೀಡಲಾಗಿತ್ತು. ಈ ತಿದ್ದುಪಡಿಗಳು ಭಾರತ ಸಂವಿಧಾನದ ಅನುಚ್ಛೇದ 320ಕ್ಕೆ ವಿರುದ್ಧವಾಗಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇದಾದ ಮೇಲೂ ರಾಜ್ಯಪಾಲರು ಎರಡನೇ ಬಾರಿ ಕೆಲವೊಂದು ಸ್ಪಷ್ಟೀಕರಣ ಕೋರಿ ಕಡತವನ್ನು ಹಿಂದಿರುಗಿಸಿದ್ದರು ಎಂದು ತಿಳಿದು ಬಂದಿದೆ.
ಈ ಕುರಿತಾದ ಕಡತವು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯಲ್ಲಿದೆ.