ಬೆಂಗಳೂರು; ಅರಣ್ಯ ಇಲಾಖೆಯ ಸಾಮಾಜಿಕ ಮಾಧ್ಯಮ ಖಾತೆಗಳ ನಿರ್ವಹಣೆ ಮತ್ತು ಪ್ರಚಾರದ ವ್ಯಾಪ್ತಿಯನ್ನು ಹೆಚ್ಚಿಸುವ ಸಂಬಂಧ ಅರಣ್ಯ ಇಲಾಖೆಯು ಟೆಂಡರ್ ಪ್ರಕ್ರಿಯೆ ನಡೆಸಿಲ್ಲ. ಬದಲಿಗೆ ನಿರ್ದಿಷ್ಟವಾಗಿ ಸಂವಿದಾ ಕಮ್ಯುನಿಕೇಷನ್ಸ್ (ಒಪಿಸಿ) ಪ್ರೈವೈಟ್ ಲಿಮಿಟೆಡ್‌ನಿಂದಲೇ ಸೇವೆ ಪಡೆಯಲು 4 (ಜಿ) ವಿನಾಯಿತಿ ನೀಡಿರುವುದು ಇದೀಗ ಬಹಿರಂಗವಾಗಿದೆ.
ಟೆಂಡರ್ ಪ್ರಕ್ರಿಯೆ ನಡೆಸಿದರೆ ಇಲಾಖೆಯು ಕೋರಿರುವ ಎಲ್ಲಾ ಅಂಶಗಳನ್ನು ಒದಗಿಸುವ ಮತ್ತು ಪೂರೈಸಿರುವ ಸೇವೆಗಳನ್ನು ಖಚಿತಪಡಿಸಿಕೊಳ್ಳುವುದು ಕಷ್ಟಸಾಧ್ಯವಾಗಲಿದೆ ಎಂಬ ಕಾರಣವನ್ನು ಮುಂದೊಡ್ಡಿತ್ತು. ಟೆಂಡರ್ ಪ್ರಕ್ರಿಯೆಯನ್ನು ಬದಿಗೊತ್ತಿ ನಿರ್ದಿಷ್ಟ ಕಂಪನಿಗೆ 4 (ಜಿ) ವಿನಾಯಿತಿ ಅನುಮೋದನೆ ಪಡೆದುಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಕುರಿತು ‘ದಿ ಫೈಲ್’ ಆರ್‍ಟಿಐ ಮೂಲಕ ಸಮಗ್ರ ಕಡತವನ್ನು ಪಡೆದುಕೊಂಡಿದೆ.
ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳಡಿಯಲ್ಲಿ ನಿರ್ದಿಷ್ಟ ಸಂಗ್ರಹಣೆಗಷ್ಟೇ ವಿನಾಯಿತಿ ನೀಡಿದೆ. ಆದರೆ ಅರಣ್ಯ ಇಲಾಖೆಯು ಈ ಸೇವೆಯನ್ನು ಯಾವ ಅವಧಿಗೆ, ಎಷ್ಟು ವೆಚ್ಚದಲ್ಲಿ ಸಂವಿದಾ ಕಮ್ಯುನಿಕೇಷನ್ಸ್ (ಒಪಿಸಿ) ಪ್ರೈವೈಟ್ ಲಿಮಿಟೆಡ್‌ನಿಂದ ಪಡೆಯಲು ಉದ್ದೇಶಿಸಿದೆ ಎಂಬುದನ್ನು ನಿರ್ದಿಷ್ಟವಾಗಿ ತಿಳಿಸಿರಲಿಲ್ಲ. ಅಲ್ಲದೇ ಸಂವಿದಾ ಕಮ್ಯುನಿಕೇಷನ್ಸ್ (ಒಪಿಸಿ) ಪ್ರೈವೈಟ್ ಲಿಮಿಟೆಡ್ ನೀಡಿದ್ದ ಮನವಿಗೇ ಹೆಚ್ಚು ಪ್ರಾಶಸ್ತ್ಯ ನೀಡಿರುವುದು ದಾಖಲೆಗಳಿಂದ ಗೊತ್ತಾಗಿದೆ.
ಇದಕ್ಕೆ ಆರ್ಥಿಕ ಇಲಾಖೆಯು ಆಕ್ಷೇಪವೆತ್ತಿತ್ತು. ಈ ಸೇವೆಯನ್ನು ಟೆಂಡರ್ ಪ್ರಕ್ರಿಯೆ ಮೂಲಕ ಪಡೆಯಲು ಇರುವ ತೊಂದರೆಗಳೇನು ಮತ್ತು ಈ ಸಂಬಂಧ ಸೂಕ್ತ ಸಮರ್ಥನೆ ನೀಡಬೇಕು ಎಂದು ಆರ್ಥಿಕ ಇಲಾಖೆಯು ನಿರ್ದೇಶನ ನೀಡಿತ್ತು.
ಅರಣ್ಯ ಇಲಾಖೆಯ ಪ್ರಸ್ತಾವನೆಯಲ್ಲೇನಿತ್ತು?
ಸಂವಿದಾ ಕಮ್ಯುನಿಕೇಷನ್ಸ್ ಪ್ರೈವೈಟ್ ಲಿಮಿಟೆಡ್ 2023ರ ಏಪ್ರಿಲ್ 26ರಂದು ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ಅರಣ್ಯಗಳ ಹಾಗೂ ವನ್ಯಜೀವಿಗಳ ಸಂರಕ್ಷಣೆ ಮತ್ತು ನಿರ್ವಹಣೆಯಲ್ಲಿ ಆಸಕ್ತಿ ಹೊಂದಿದೆ.
ಈ ಸಂಸ್ಥೆಯ ತಂಡದವರು ಇಲಾಖೆಯ ಪ್ರಚಾರದಲ್ಲಿ ಕಾರ್ಯನಿರ್ವಹಿಸಲು ಬಯಸಿದ್ದಾರೆ ಎಂದು ಇಲಾಖೆಯು ಹೇಳಿತ್ತು.
ಸಂವಹನ ತಂತ್ರಜ್ಞಾನ ಅಭಿವೃದ್ದಿಪಡಿಸುವಲ್ಲಿ, ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುವಲ್ಲಿ ಹಾಗೂ ಕ್ರಿಯಾತ್ಮಕ ವಿನಿಮಯ ಮಾಡುವಲ್ಲಿ ವ್ಯಾಪಕ ಅನುಭವ ಹೊಂದಿದೆ. ಇಲಾಖೆಯಲ್ಲಿ ಕಾರ್ಯಚಟುವಟಿಕೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಮತ್ತು ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಸಾಂಪ್ರದಾಯಿಕ ಹಾಗೂ ಅಧುನಿಕ ಮಾಧ್ಯಮಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲಿದೆ. ಇಲಾಖೆಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸಲು ಮತ್ತು ಪ್ರಚಾರದ ವ್ಯಾಪ್ತಿಯನ್ನು ಹೆಚ್ಚಿಸಲು ಯೋಜನೆಯ ವಿವರವಾದ ಪ್ರಸ್ತಾವನೆಯೊಂದನ್ನು ಸಲ್ಲಿಸಿದೆ. ಅದನ್ನು ಕಾರ್ಯಗತ ಮಾಡಲು ಕೋರಿರುತ್ತಾರೆ ಎಂದು ಇಲಾಖೆಯು ವಿವರಿಸಿತ್ತು.
ಅದೇ ರೀತಿ ಅರಣ್ಯ ಮತ್ತು ವನ್ಯಜೀವಿ ದಿನಾಚರಣೆಯ ಚಟುವಟಿಕೆಗಳು, ಸಾಮಾಜಿಕ ಮಾಧ್ಯಮ ಖಾತೆಗಳ ನಿರ್ವಹಣೆ, ದೃಶ್ಯ ವಾಹಿನಿ, ರೇಡಿಯೋಗಳಲ್ಲಿ ಅಭಿಯಾನ ನಡೆಸುವುದು ಅರಣ್ಯ ವಿಭಾಗಗಳಲ್ಲಿ ವಾರಕ್ಕೊಮ್ಮೆ ಉತ್ಸವ, ಅಭಿಯಾನ, ಅರಣ್ಯಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಕಾಡ್ಗಿಚ್ಚು, ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು, ಚಿಣ್ಣರ ವನ ದರ್ಶನ ಕಾರ್ಯಕ್ರಮಗಳನ್ನು ನಡೆಸಲಿದೆ ಎಂದು ವಿವರಿಸಿರುವುದು ತಿಳಿದು ಬಂದಿದೆ.
ಹಾಗೆಯೇ ಉನ್ನತ ದರ್ಜೆಯ ಕಾಫಿ ಟೇಬಲ್ ಪುಸ್ತಕಗಳನ್ನು ಪ್ರಕಟಿಸುವುದು, ಉತ್ತಮ ಗುಣಮಟ್ಟದ ಸಣ್ಣ ಸಣ್ಣ ವಿಡಿಯೋ ಮತ್ತು ಫಿಲ್ಮ್‌ಗಳನ್ನು ನಿರ್ಮಿಸುವುದು, ಇವುಗಳನ್ನು ಮಲ್ಟಿಫ್ಲೆಕ್ಸ್‌ಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರೊಜೆಕ್ಟರ್‍ಗಳಲ್ಲಿ ಪ್ರದರ್ಶಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿತ್ತು.
ಈ ಎಲ್ಲಾ ಕಾರ್ಯಕ್ರಮಗಳನ್ನು ಮುನ್ನೆಡೆಸಲು ವೃತ್ತಿಪರ ಸಂಸ್ಥೆಯ ಅವಶ್ಯಕತೆ ಇದೆ. ಇದರಲ್ಲಿ ಅನುಭವ ಹೊಂದಿರುವ ಕಂಪನಿಗೆ ಆದ್ಯತೆ ನೀಡಬೇಕು. ಈಗಾಗಲೇ ಸಂವಿದಾ ಕಮ್ಯುನಿಕೇಷನ್ಸ್ ಪ್ರೈವೈಟ್ ಲಿಮಿಟೆಡ್ ಪ್ರಸ್ತಾವ ಸಲ್ಲಿಸಿದೆ.
ವಾಣಿಜ್ಯ ಪ್ರಸ್ತಾವದಲ್ಲೇನಿದೆ?
ಸಾಮಾಜಿಕ ಮಾಧ್ಯಮಗಳ ನಿರ್ವಹಣೆ (ಫೇಸ್‌ಬುಕ್, ಟ್ವಿಟರ್, ಇನ್ಸ್ಟ್ರಾಗ್ರಾಂ, ಯೂ ಟ್ಯೂಬ್ )ಯನ್ನು 52 ವಾರಗಳಿಗೆ ನಿರ್ವಹಿಸುವುದು. ನಿರ್ದಿಷ್ಟವಾಗಿ ಅರಿವು ಮೂಡಿಸುವ ಇವೆಂಟ್‌ಗಳಿಗೆ ಪೋಸ್ಟರ್, ಬ್ಯಾನರ್‍ಸ್‌ಗಳು (ವರ್ಷಕ್ಕೆ 40 ಸಂಖ್ಯೆಯಲ್ಲಿ), ಮಾಸಿಕ ನ್ಯೂಸ್ ಲೆಟರ್, ಇದರ ವಿನ್ಯಾಸ, ಲೇಖನಗಳು (ವರ್ಷಕ್ಕೆ) ಈ ಎಲ್ಲಾ ಚಟುವಟಿಕೆಗಳಿಗೆ ತಿಂಗಳಿಗೆ 1,20,000 ರು.ನಂತೆ ವರ್ಷಕ್ಕೆ 14,40,000 ರುಗಳು ವೆಚ್ಚವಾಗಲಿದೆ ಎಂದು ವಿವರಿಸಿತ್ತು.
ಬಿತ್ತೋತ್ಸವಕ್ಕೆ (ಮೇ-ಜೂನ್)ಕ್ಕೆ 1,10,000 ರು., ವನಮಹೋತ್ಸವ (ಜುಲೈ)ಕ್ಕೆ 1,10,000 ರು, ವೈಲ್ಡ್ ಲೈಫ್ ವೀಕ್ (ಅಕ್ಟೋಬರ್) 2,15,000 ರು., ಫೈರ್ ಅವೇರ್‍ನೆಸ್ (ನವೆಂಬರ್-ಮಾರ್ಚ್) 50,000 ರು., ಅಂತರಾಷ್ಟ್ರೀಯ ಅರಣ್ಯ ದಿನಾಚರಣೆ (ಮಾರ್ಚ್) 35,000 ರು., ಮುಖ್ಯಮಂತ್ರಿ ಪದಕ (ಜೂನ್-ಜುಲೈ)ಗೆ 35,000 ರು. ಆಗಲಿದೆ ಎಂದು ಅಂದಾಜು ಪಟ್ಟಿ ಒದಗಿಸಿತ್ತು.
ದಿನಪತ್ರಿಕೆಗಳಿಗೆ ಜಾಹೀರಾತುಗಳ ವಿನ್ಯಾಸ, ಬಸ್ ಆಟೋ ಬ್ಯ್ರಾಂಡಿಂಗ್ ವಿನ್ಯಾಸ, ಯೋಜನೆಗೆ 50,000 ರು., ರೈಲ್ವೇ ನಿಲ್ದಾಣಗಳಲ್ಲಿ ಹೋರ್ಡಿಂಗ್ಸ್ ವಿನ್ಯಾಸ, ಟಿ ವಿ ಜಾಹೀರಾತುಗಳ ವಿನ್ಯಾಸಕ್ಕೆ 50,000 ರು., ಸೆಲಬ್ರಿಟಿಗಳು ಮತ್ತು ಇನ್‌ಫ್ಲೂಯೆರ್ಸ್‌ಗಳಿಂದ ರೇಡಿಯೋ ಟಿವಿ ಗಳಲ್ಲಿ ಸಂವಾದ, ಸಂದರ್ಶನಗಳಿಗೆ 2,20,000 ರು., ಬುಕ್ ಲೆಟ್‌ಗಳ ಪ್ರಕಾಶನ, ಬ್ರೋಚರ್ಸ್, ಕರ ಪತ್ರಗಳು, ಪರಿಕಲ್ಪನೆ ಮತ್ತು ವಿನ್ಯಾಸಕ್ಕೆ 1,40,000 ರು ಮತ್ತು 2024ರ ಕ್ಯಾಲೆಂಡರ್ ಪರಿಕಲ್ಪನೆ ಮತ್ತು ವಿನ್ಯಾಸಕ್ಕೆ 50,000 ರು.ಗಳು ಎಂದು ಅಂದಾಜು ವೆಚ್ಚವನ್ನು ನಮೂದಿಸಿತ್ತು.
ಒಟ್ಟಾರೆಯಾಗಿ ಜಿಎಸ್‌ಟಿ ಸೇರಿದಂತೆ 29,73,000 ರು ವೆಚ್ಚವಾಗಲಿದೆ ಎಂದು ವಾಣಿಜ್ಯ ಪ್ರಸ್ತಾವನೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಐಇಸಿ ಚಟುವಟಿಕೆಗಳ ಭಾಗವಾಗಿ ಇದನ್ನು ಕೈಗೆತ್ತಿಕೊಳ್ಳಬಹುದು. ಈ ಕಂಪನಿಯ ಕಾರ್ಯಚಟುವಟಿಕೆಗಳು ತೃಪ್ತಿದಾಯಕವಾಗಿವೆ. ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಕಾರ್ಯನಿರ್ವಹಿಸಿರುವ ಅನುಭವವನ್ನೂ ಹೊಂದಿದೆ. ಹೀಗಾಗಿ ಈ ಸಂಸ್ಥೆಯಿಂದ ಸೇವೆ ಪಡೆಯಲು 4 (ಜಿ) ಪಡೆಯಲು ಅನುಮತಿ ನೀಡಬೇಕು ಎಂದು ಅರಣ್ಯ ಇಲಾಖೆಯು ವಿಸ್ತೃತವಾಗಿ ವಿವರಿಸಿತ್ತು.
ಅರಣ್ಯ ಇಲಾಖೆಯ ಬಹುತೇಕ ಕಾರ್ಯಚಟುವಟಿಕೆಗಳು ತಾಂತ್ರಿಕ ಸ್ವರೂಪದ್ದಾಗಿದೆ. ಪ್ರತೀ ಪ್ರಚಾರದ ಸಂವಹನ, ಭಿತ್ತಿಪತ್ರಗಳು, ವಾರ್ತೆಗಳು ಇತ್ಯಾದಿಗಳ ವಿಷಯಗಳನ್ನೂ ತಾಂತ್ರಿಕವಾಗಿ ಸರಿಯಾಗಿ ತಯಾರಿಸಬೇಕಿದೆ. ಇದಕ್ಕೆ ಅರಣ್ಯ ವನ್ಯಜೀವಿ ವಿಷಯದಲ್ಲಿ ಮತ್ತು ಅರಣ್ಯ ಇಲಾಖೆಯ ಕಾರ್ಯಗಳ ಕುರಿತು ಅರಿವು ಮತ್ತು ಅನುಭವ ಅತ್ಯವಶ್ಯಕವಾಗಿರುತ್ತದೆ ಎಂದು ತಿಳಿಸಿರುವುದು ಟಿಪ್ಪಣಿ ಹಾಳೆಗಳಿಂದ ಗೊತ್ತಾಗಿದೆ.
ಟೆಂಡರ್ ಏಕೆ ಬೇಡ?
ಸಂವಿದಾ ಕಮ್ಯುನಿಕೇಷನ್ಸ್ ಪ್ರೈವೈಟ್ ಲಿಮಿಟೆಡ್ ಕಳೆದ ಮೂರು ವರ್ಷಗಳಿಂದ ಅರಣ್ಯ ಇಲಾಖೆಯ ಅನೇಕ ಕಾರ್ಯಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸಿರುವುದಲ್ಲಿ ಯಶಸ್ವಿಯಾಗಿದೆ. ಹಾಗೂ ನಿರೀಕ್ಷೆಗೆ ತಕ್ಕಂತೆ ಮತ್ತು ಸಮಯಕ್ಕೆ ಅನುಗುಣವಾಗಿ ನೆರವೇರಿಸಿದೆ. ಸೂಕ್ತ ಅನುಭವ ಮತ್ತು ಕೌಶಲ್ಯಗಳನ್ನು ಹೊಂದಿರುವ ಸಂವಿದಾ ಕಮ್ಯುನಿಕೇಷನ್ಸ್ ತಂಡವು ಅರಣ್ಯ ಇಲಾಖೆಯ ಎಲ್ಲಾ ಕೆಲಸಗಳನ್ನು ಮನಗಂಡಿದೆ. ವೃತ್ತಿಪರತೆಯಿಂದ ಕಾರ್ಯನಿರ್ವಹಿಸುತ್ತಿದೆ. ಸಂವಹನ ತಂತ್ರಗಳು, ಸಾಮಾಜಿಕ ಖಾತೆಗಳ ನಿರ್ವಹಣೆ, ಆಡಿಯೋ, ವಿಡಿಯೋ ಸೌಕರ್ಯಗಳು, ಪ್ರಚಾರ ತಂತ್ರಗಳು, ಕನ್ನಡ, ಇಂಗ್ಲೀಷ್ ಭಾಷಾ ಪ್ರಾವಿಣ್ಯತೆ ಎಲ್ಲವೂ ಒಂದೇ ಸಂಸ್ಥೆಯಿಂದಲೇ ದೊರೆಯುತ್ತಿದೆ.
ಪ್ರಸ್ತಾಪಿತ ಈ ಸೇವೆಯನ್ನು 2023-24 ಮತ್ತು 2024-25ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ ಪ್ರಕಾರ ಮಾಡಿಕೊಳ್ಳಲು ಉದ್ದೇಶಿಸಿದೆ. ಟೆಂಡರ್ ಮುಖೇನ ಆಯ್ಕೆಯಾಗುವ ಸಂಸ್ಥೆಯು ಈ ಎಲ್ಲಾ ಅಂಶಗಳನ್ನು ಒದಗಿಸುವ ಮತ್ತು ಪೂರೈಸುವಂತೆ ಖಚಿತಪಡಿಸಿಕೊಳ್ಳುವುದು ಕ್ಲಿಷ್ಟ. ಹಾಗೆಯೇ ನಮಗೆ ಬೇಕಾದ ಎಲ್ಲಾ ಸೇವೆಗಳು ಬೇರೆ ಬೇರೆ ಸಂಸ್ಥೆಗಳಿಂದ ಪಡೆಯುವುದು ದಿನನಿತ್ಯದ ಕಾರ್ಯಾಚರಣೆಗೆ ಸೂಕ್ತವೆನಿಸುವುದಿಲ್ಲ. ಹೀಗಾಗಿ 4 ಜಿ ವಿನಾಯಿತಿ ನೀಡಬೇಕು ಎಂದು ಕೋರಿತ್ತು.
ಮಾಹಿತಿಗಳ ಕೊರತೆಯಿಂದ ನರಳುತ್ತಿದೆಯೇ?
ಕರ್ನಾಟಕ ಅರಣ್ಯ ಇಲಾಖೆಯ ಸಾಮಾಜಿಕ ಜಾಲತಾಣ ಸರ್ಕಾರದ ಎಲ್ಲ ಇಲಾಖೆಗಳಿಗಿಂತಲೂ ತೀರಾ ಪೇಲವ ಮತ್ತು ನಿಷ್ಕ್ರಿಯವಾಗಿದೆ. 5 ಹುಲಿಗಳು ಅಸಹಜವಾಗಿ ಸಾವನ್ನಪ್ಪಿದ್ದರೂ ಸಹ ಸಾಮಾಜಿಕ ಜಾಲತಾಣದಲ್ಲಿ ಅದರ ವಿವರಗಳನ್ನೇ ಹಾಕಿಲ್ಲ. ಬದಲಿಗೆ ಅಂತರಾಷ್ಟ್ರೀಯ ಮಾದಕ ದ್ರವ್ಯ ಬಳಕೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಕುರಿತು ಪೋಸ್ಟ್ ಹಾಕಿತ್ತು.
ಮಾಹಿತಿಗಳ ಕಣಜವಾಗಿರುವ ಇಲಾಖೆಯು, ಜನರಿಗೆ ನದಿ, ನೀರು, ವನ್ಯಜೀವಿ, ಗಿಡ, ಮರ, ಸಂರಕ್ಷಣಾ ಕಾಯ್ದೆಗಳ ಬಗ್ಗೆ ಮಾಹಿತಿ ಕೊಡಬೇಕಿತ್ತು. ಅಲ್ಲದೇ, ಇಲಾಖೆಯ ಅತ್ಯಂತ ಮಹತ್ವದ ವಿಚಾರಗಳನ್ನು ಹೊರಜಗತ್ತಿಗೆ ತಿಳಿಸುವ ಬಿಂಬವಾಗಬೇಕಿತ್ತು. ಆದರೆ, ಅರಣ್ಯ ಇಲಾಖೆಯ ಜಾಲತಾಣವೇ ಮಾಹಿತಿಗಳ ಕೊರತೆಯಿಂದ ನರಳುತ್ತಿದೆ ಎಂದು ಅರಣ್ಯ ಇಲಾಖೆಯಲ್ಲಿಯೇ ಅಸಮಾಧಾನ ವ್ಯಕ್ತವಾಗಿದೆ.
‘ಬೆಂಗಳೂರು ಒಂದರಲ್ಲೇ ಅರಣ್ಯ ಇಲಾಖೆಗೆ ಸೇರಿದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನುಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ನಿತ್ಯ ಒಂದಲ್ಲ ಒಂದು ಕಡೆ ಅರಣ್ಯ ಇಲಾಖೆ ಸಿಬ್ಬಂದಿ ಒತ್ತುವರಿ ತೆರವುಗೊಳಿಸಿ ಸರ್ಕಾರದ ಜಮೀನನ್ನು ತಮ್ಮ ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಒಂದು ಮೂಲದ ಪ್ರಕಾರ, ಬೆಂಗಳೂರು ಮಹಾನಗರದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ ಜಮೀನು ಮರುವಶಕ್ಕೆ ಪಡೆಯಲಾಗಿದೆ. ಆದರೆ, ಈ ಮಾಹಿತಿ ಇಲಾಖೆಯ ಫೇಸ್‌ಬುಕ್, ಟ್ವಿಟರ್ ಅಥವಾ ಇನ್‌ಸ್ಟಾಗ್ರಾಂ ತಾಣಗಳಲ್ಲಿ ಬಿತ್ತರವಾಗುವುದೇ ಇಲ್ಲ,’ ಎನ್ನುತ್ತಾರೆ ಅಧಿಕಾರಿಯೊಬ್ಬರು.
ಅಷ್ಟೇ ಅಲ್ಲ, ಮಾನವ-ವನ್ಯಜೀವಿ ಸಂಘರ್ಷಕ್ಕೆ ಪರಿಹಾರ ಎನ್ನುವಂತೆ ಅನೇಕ ಕಡೆ ಉಪಟಳ ಕೊಡುವ ಆನೆಗಳನ್ನು ಹಿಡಿದು ಸ್ಥಳಾಂತರ ಮಾಡಲಾಗುತ್ತಿದೆ. ಆ ಮಾಹಿತಿಯೂ ಇಲಾಖೆಯ ಜಾಲತಾಣ ನಿರ್ವಹಿಸುವ ಪ್ರಚಾರ ಮತ್ತು ಐಸಿಟಿ ಘಟಕಕ್ಕೆ ಗೊತ್ತಾಗುವುದೇ ಇಲ್ಲ. ಮೈಸೂರಿನಲ್ಲಿ ಅರಣ್ಯ ಸಚಿವರು ಮತ್ತು ಬೃಹತ್ ಕೈಗಾರಿಕೆ ಸಚಿವರು ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗೆ ರಕ್ಷಣಾ ಕಿಟ್ ನೀಡಿದರು. ಆ ಸುದ್ದಿ ಇಲಾಖೆಯ ಜಾಲತಾಣಗಳಲ್ಲಿ ಪ್ರಕಟವಾಗಲಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.
ಅರಣ್ಯ ಇಲಾಖೆಯ ಜಾಲತಾಣದಲ್ಲಿ ಏನೇನು ಪ್ರಕಟವಾಗುತ್ತವೆ?
‘ವಿಶ್ವ ಗುಬ್ಬಿ ದಿನ, ವಿಶ್ವ ಜೌಗು ದಿನ, ವಿಶ್ವ ಹುಲಿ ದಿನ ಇಂತಹ ವಿಶೇಷ ದಿನಗಳು. ಯಾವುದೋ ಕಪ್ಪೆಯ ಮಾಹಿತಿ, ಯಾವುದೋ ಹಾವಿನ ಮಾಹಿತಿ ಪ್ರಕಟವಾಗುತ್ತದೆ. ಅಷ್ಟೇ ಅಲ್ಲ, ಕರ್ನಾಟಕದ ವನ್ಯಜೀವಿಧಾಮಗಳು, ಹುಲಿ ಸಂರಕ್ಷಿತ ಪ್ರದೇಶಗಳ ಸಣ್ಣ ಸಣ್ಣ ವಿವರಣೆ ಹಾಕುತ್ತಾರೆ. ವಿಶೇಷ ಏನೆಂದರೆ, ಈ ಎಲ್ಲ ಮಾಹಿತಿಗಳೂ ನಿಮಗೆ ವಿಕಿಪೀಡಿಯಾ ಅಥವಾ ಗೂಗಲ್ ಸರ್ಚ್ ಮಾಡಿದಾಗ ಸಿಕ್ಕೇ ಸಿಗುತ್ತದೆ. ಗೂಗಲ್‌ನಲ್ಲಿ ಸಿಗುವ ಮಾಹಿತಿಯನ್ನೇ ಅರಣ್ಯ ಇಲಾಖೆ ಪ್ರಕಟಿಸುವುದಾದರೆ, ಸಾಮಾಜಿಕ ಜಾಲ ತಾಣ ನಿರ್ವಹಣೆಗೆ ತಿಂಗಳಿಗೆ 29 ಲಕ್ಷ ರೂಪಾಯಿ ಖರ್ಚು ಮಾಡುವ ಅಗತ್ಯವೇನಿದೆ,’ ಎಂದು ಪ್ರಶ್ನಿಸುತ್ತಾರೆ ಅಧಿಕಾರಿಯೊಬ್ಬರು.
ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯನ್ನಾಗಿ ಖ್ಯಾತ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರನ್ನು ನೇಮಕ ಮಾಡಲಾಗಿತ್ತು. ನೇಮಕದ ಆದೇಶ ಮೇ 27ಕ್ಕೆ ಪ್ರಕಟವಾಯಿತು. ಜೂನ್ 3ಕ್ಕೆ ಕುಂಬ್ಳೆಯವರು ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿ, ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಈ ಮಹತ್ವದ ವಿಷಯ ಅರಣ್ಯ ಇಲಾಖೆಯ ಜಾಲತಾಣದಲ್ಲಿ ಪ್ರಕಟವಾಗಿದ್ದು ಮಾತ್ರ ಜೂನ್ 5ರಂದು, ಅಂದರೆ, ರಾಯಭಾರಿ ನೇಮಕಾತಿ ಸುದ್ದಿ ಪ್ರಕಟಿಸಿ ಬರೋಬ್ಬರಿ 10 ದಿನಗಳ ನಂತರ. ಆಮೆಗತಿ ಎನ್ನುತ್ತಾರಲ್ಲ, ಅದಕ್ಕಿಂತಲೂ ಹಿಂದಿದೆ ಎಂದು ಅಧಿಕಾರಿಗಳು ಮತ್ತಷ್ಟು ತಾಜಾ ಉದಾಹರಣೆ ನೀಡುತ್ತಾರೆ.
‘ಈ ಜಾಲತಾಣಗಳು ದಿನಕ್ಕೆ ಒಮ್ಮೆ ಬಿಡಿ, ಮೂರು ನಾಲ್ಕು ದಿನಕ್ಕೆ ಒಮ್ಮೆ ಅಪ್ ಡೇಟ್ ಆಗುತ್ತಿದೆ. ಅಂದರೆ, ಇಲಾಖೆಯಲ್ಲಿ ಏನೂ ಚಟುವಟಿಕೆಗಳೇ ನಡೆಯುತ್ತಿಲ್ಲವೇ, ನಡೆದರೂ ಅದು ಪ್ರಚಾರ ಮತ್ತು ಐಸಿಟಿ ಘಟಕದ ಗಮನಕ್ಕೆ ಬರುತ್ತಿಲ್ಲವೇ.. ಅಥವಾ ಬಂದರೂ, ಜಾಲತಾಣ ನಿರ್ವಹಿಸುವ ಹೊರಗುತ್ತಿಗೆ ಪಡೆದಿರುವ ಸಂಸ್ಥೆ ಅದನ್ನು ಸರಿಯಾಗಿ ನಿರ್ವಹಿಸುತ್ತಿಲ್ಲವೇ,, ಎಲ್ಲಕ್ಕಿಂತ ಮಿಗಿಲಾಗಿ, ಇದು ಹಣ ಹೊಡೆಯುವ ಮತ್ತೊಂದು ಘಟಕದ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆಯೇ,’ ಎಂದು ಅನುಮಾನವನ್ನೂ ವ್ಯಕ್ತಪಡಿಸುತ್ತಾರೆ ಅಧಿಕಾರಿಯೊಬ್ಬರು.