ಲೋಕಾಯುಕ್ತರೇ ದಾಖಲಿಸಿದ್ದ ಸ್ವಯಂ ಪ್ರೇರಿತ ಪ್ರಕರಣದ ಆರೋಪಿಗಳ ಬೆನ್ನೆತ್ತಿದ್ದ ಆರೋಪಿ ನಿಂಗಪ್ಪ?

ಬೆಂಗಳೂರು;   ಲೋಕಾಯುಕ್ತ ಹೆಸರಿನಲ್ಲಿ ಹಣ ವಸೂಲಿಗಿಳಿದಿದ್ದ ಎಂಬ  ಆರೋಪಕ್ಕೆ ಗುರಿಯಾಗಿ ಬಂಧನದಲ್ಲಿರುವ ಆರೋಪಿ ನಿಂಗಪ್ಪನಿಗೆ, ಲೋಕಾಯುಕ್ತರೇ ದಾಖಲಿಸಿದ್ದ ಸ್ವಯಂ ಪ್ರೇರಿತ ಪ್ರಕರಣಗಳೇ ಹಣ ವಸೂಲಿಯ ಮೂಲವಾಗಿತ್ತು!

 

ಅಬಕಾರಿ ಪರವಾನಗಿ ವಿತರಣೆ, ನವೀಕರಣದಲ್ಲಿ ಅವ್ಯವಹಾರ ಸೇರಿದಂತೆ ಇನ್ನಿತರೆ ಗುರುತರವಾದ ದೂರುಗಳು ಮತ್ತು  ಲೋಕಾಯುಕ್ತರೇ ಸ್ವಯಂ ಪ್ರೇರಿತವಾಗಿ ದಾಖಲಿಸಿದ್ದ ಪ್ರಕರಣಗಳ ಜಾಡು ಹಿಡಿದು ನಿಂಗಪ್ಪ, ಹಣ ವಸೂಲಿಗಿಳಿಯುತ್ತಿದ್ದ ಎಂಬ ಮತ್ತೊಂದು ಸಂಗತಿಯು ಇದೀಗ ಬಹಿರಂಗವಾಗಿದೆ.

 

ವಿಶೇಷವಾಗಿ ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರ ನೇತೃತ್ವದಲ್ಲಿ ಬೆಂಗಳೂರು ನಗರ ಜಿಲ್ಲೆಯ ಅಬಕಾರಿಯ ವಿವಿಧ ರೇಂಜ್‌ಗಳಲ್ಲಿ ಕಳೆದ ಒಂದು ವರ್ಷದ ಹಿಂದೆಯೇ ದಾಳಿ ನಡೆದಿತ್ತು. ಆಯುಕ್ತರು, ಉಪ ಆಯುಕ್ತರು, ಅಬಕಾರಿ ನಿರೀಕ್ಷಕರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಆರೋಪಿ ನಿಂಗಪ್ಪ ಬೆನ್ನೆತ್ತಿದ್ದ ಎಂದು ಗೊತ್ತಾಗಿದೆ.

 

ಇವರಿಗೆ ಮತ್ತೊಬ್ಬ ಆರೋಪಿ ಲೋಕಾ ಎಸ್ಪಿ ಶ್ರೀನಾಥ ಜೋಷಿ ಮತ್ತು ನಾಗರಾಜಪ್ಪ ಎಂಬ ಮತ್ತೊಬ್ಬ ಅಧಿಕಾರಿ ಸಹಕರಿಸುತ್ತಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ

 

ಲೋಕಾಯುಕ್ತ ಹೆಸರಿನಲ್ಲಿ ಲಕ್ಷಾಂತರ ರುಪಾಯಿಗಳಿಗೆ ಬೇಡಿಕೆ ಇಟ್ಟು ವಸೂಲಿ ಮಾಡಲಾಗುತ್ತಿದೆ ಎಂಬ ಪ್ರಕರಣದಲ್ಲಿ ಸಚಿವ ಆರ್‍‌ ಬಿ ತಿಮ್ಮಾಪುರ ಮತ್ತು ಲಕ್ಷಾಂತರ ರುಪಾಯಿಗಳನ್ನು ನಿಂಗಪ್ಪನಿಗೆ ನಗದಿನಲ್ಲಿ ನೀಡಿದ್ದ ಅಬಕಾರಿ ಇಲಾಖೆಯ ಅಧಿಕಾರಿಗಳ ಪಟ್ಟಿಯನ್ನು ‘ದಿ ಫೈಲ್‌’, ಬಹಿರಂಗಪಡಿಸಿತ್ತು.

 

ಇದರ ಬೆನ್ನಲ್ಲೇ ಆರೋಪಿ ನಿಂಗಪ್ಪ,  ಇಂತಹ ಅಧಿಕಾರಿಗಳ ಮಾಹಿತಿಯನ್ನು ಹೇಗೆ  ಕಲೆಹಾಕುತ್ತಿದ್ದ, ಆತನ ಕಾರ್ಯಾಚರಣೆ ಹೇಗಿತ್ತು ಎಂಬ ವಿವರ, ಮಾಹಿತಿಗಳು ಒಂದೊಂದಾಗಿ ಬಯಲಾಗುತ್ತಿವೆ.

 

ರಂಗಪ್ಪ, ಅಜಿತ್‌, ಮುರುಳಿ ಡಿ ಸಿ, ಮೋಸಸ್‌ ಮತ್ತಿತರರು ಆರೋಪಿ ನಿಂಗಪ್ಪನಿಗೆ ಲಕ್ಷಾಂತರ ರುಪಾಯಿ ನೀಡಿದ್ದರು!. ಈ ಮೇಲಿನ ಅಧಿಕಾರಿಗಳ ಕರ್ತವ್ಯ ಲೋಪವು ಲೋಕಾಯುಕ್ತರ ದಾಳಿಯಲ್ಲಿ ಬಯಲಾಗಿತ್ತು. ಇವರುಗಳ ವಿರುದ್ಧವೂ ಲೋಕಾಯುಕ್ತರು ಸ್ವಯಂ ಪ್ರೇರಿತ ಪ್ರಕರಣಗಳನ್ನು ದಾಖಲಿಸಿದ್ದರು ಎಂದು ಗೊತ್ತಾಗಿದೆ.

 

ಲೋಕ್‌/ಬಿಸಿಡಿ/5060,

 

ಲೋಕ್‌/ಬಿಸಿಡಿ/5062,

 

 

ಲೋಕ್‌/ಬಿಸಿಡಿ/5063 ಪ್ರಕರಣಗಳು ಲೋಕಾಯುಕ್ತದಲ್ಲಿ ದಾಖಲಾಗಿವೆ.

 

 

ಈ ಪ್ರಕರಣಗಳಲ್ಲಿ ಪ್ರತಿವಾದಿಯಾಗಿರುವ ಅಬಕಾರಿ ಇಲಾಖೆಯ ಆಯುಕ್ತರು, ಜಂಟಿ ಆಯುಕ್ತರು, ಡಿವೈಎಸ್ಪಿಗಳು, ನಿರೀಕ್ಷಕರು ಸೇರಿದಂತೆ ಮತ್ತಿತರೆ ಅಧಿಕಾರಿ, ಸಿಬ್ಬಂದಿಗಳ ವಿವರಗಳನ್ನು ಆರೋಪಿ ನಿಂಗಪ್ಪ, ಹಿರಿಯ ಅಧಿಕಾರಿಗಳ ನೆರವಿನೊಂದಿಗೆ ಕಲೆ ಹಾಕುತ್ತಿದ್ದ ಎಂದು ತಿಳಿದು ಬಂದಿದೆ.

 

 

ಈ ಪೈಕಿ ರಂಗಪ್ಪ, ಅಜಿತ್, ಮುರುಳಿ ಡಿ ಸಿ , ಮಲ್ಲಪ್ಪ ಬಾನುವಳ್ಳಿ, ರಾಘವೇಂದ್ರ, ರಂಗಯ್ಯ, ಜಗದೀಶ್‌ ನಾಯಕ್‌, ತಮ್ಮಣ್ಣ, ಸುಮನ್‌ ಪಾಟೀಲ್‌, ಗಾಂಧಿನಗರ (ರೇಂಜ್‌ 32) ಪದ್ಮನಾಭ ನಗರ (ರೇಂಜ್‌ 36), ಜೆ ಪಿ ನಗರ (ರೇಂಜ್‌ 38) ಇಂದಿರಾ ನಗರ (ರೇಂಜ್‌ 26), ಫ್ರೇಜರ್ ಟೌನ್‌ (ರೇಂಜ್‌ 27) ಜೀವನ್‌ ಭೀಮಾ ನಗರ, ರಾಮಮೂರ್ತಿ ನಗರ, ವೈಟ್‌ ಫೀಲ್ಡ್‌ ಸೇರಿದಂತೆ ವಿವಿಧ ರೇಂಜ್‌ಗಳಲ್ಲಿನ ಹಲವು ಅಧಿಕಾರಿಗಳನ್ನು ಭೇಟಿ ಮಾಡಿ, ಪ್ರಕರಣಗಳನ್ನು ಮುಕ್ತಾಯಗೊಳಿಸುವುದಾಗಿ ಭರವಸೆ ನೀಡಿ ಹಣ ವಸೂಲಿ ಮಾಡಿದ್ದ ಎಂದು ಗೊತ್ತಾಗಿದೆ.

 

ಬೆಂಗಳೂರು ನಗರದ 62 ಅಬಕಾರಿ ವಿಭಾಗ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಕಳೆದ ವರ್ಷ ಏಕಕಾಲಕ್ಕೆ ದಾಳಿ ನಡೆಸಿದ್ದರು, ಈ ವೇಳೆ ಹಲವು ಕಚೇರಿಗಳಲ್ಲಿ ಗಾಂಜಾ, ಮದ್ಯದ ಬಾಟಲಿಗಳು ಪತ್ತೆ ಹಚ್ಚಿದ್ದರು.

 

 

ಹಾಗೂ ದಾಖಲೆ ಇಲ್ಲದ ರೂ.2 ಲಕ್ಷ ರೂ. ಪತ್ತೆಯಾಗಿತ್ತು. ಅಲ್ಲದೇ ಖುದ್ದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್, ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಯಶವಂತಪುರ ಮತ್ತು ಬ್ಯಾಟರಾಯನಪುರ ಅಬಕಾರಿ ಕಚೇರಿಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು.

 

ಅಬಕಾರಿ ಇಲಾಖೆಯ ಇಬ್ಬರು ಜಂಟಿ ಆಯುಕ್ತರು ಹಾಗೂ ನಾಲ್ವರು ಉಪ ಆಯುಕ್ತರು ಸೇರಿದಂತೆ 150 ಅಧಿಕಾರಿಗಳನ್ನ ಕರೆಯಿಸಿ, ಇಲಾಖೆಯಲ್ಲಿ ಕಂಡುಬಂದ ಲೋಪದೋಷ ಹಾಗೂ ಕೆಲ ಸುಧಾರಣೆ ಕ್ರಮಗಳನ್ನ ಅನುಸರಿಸುವಂತೆ ಲೋಕಾಯುಕ್ತರು ತಾಕೀತು ಮಾಡಿದರು.

 

ಅಬಕಾರಿ ಇಲಾಖೆಯ ಇಬ್ಬರು ಜಂಟಿ ಆಯುಕ್ತರು ಹಾಗೂ ನಾಲ್ವರು ಉಪ ಆಯುಕ್ತರು ಸೇರಿದಂತೆ 150 ಅಧಿಕಾರಿಗಳನ್ನ ಕರೆಯಿಸಿ, ಇಲಾಖೆಯಲ್ಲಿ ಕಂಡುಬಂದ ಲೋಪದೋಷ ಹಾಗೂ ಕೆಲ ಸುಧಾರಣೆ ಕ್ರಮಗಳನ್ನು ಅನುಸರಿಸಬೇಕು ಎಂದು ಲೋಕಾಯುಕ್ತರು ತಾಕೀತು ಮಾಡಿದ್ದನ್ನು ಸ್ಮರಿಸಬಹುದು.

 

ಆರೋಪಿ ನಿಂಗಪ್ಪನು ಅಬಕಾರಿ ಇಲಾಖೆ ಆಯುಕ್ತರಿಗೆ ತಿಂಗಳಿಗೆ 3 ಲಕ್ಷ ರುಗಳಿಗೆ ಬೇಡಿಕೆ ಇರಿಸಿದ್ದ. ಈ 3 ಲಕ್ಷ ರು.ಗಳನ್ನು 3 ಕೆ ಜಿ ರೈಸ್‌ ಎಂಬ ಕೋಡ್‌ ವರ್ಡ್‌ನಲ್ಲಿ ಮೆಸೇಜ್‌ ಕಳಿಸುತ್ತಿದ್ದ. ಅಬಕಾರಿ ಇಲಾಖೆಯಲ್ಲಿ ಬಿಯುಡಿ ಹೆಸರಿನಲ್ಲಿ ಹೊರಡುತ್ತಿದ್ದ ಮೆಸೇಜ್‌ ಹೆಚ್ಚು ಜನಪ್ರಿಯವಾಗಿತ್ತು ಎಂದು ಗೊತ್ತಾಗಿದೆ.

ತಿಂಗಳಿಗೆ 3 ಲಕ್ಷಕ್ಕೆ ಬೇಡಿಕೆ, ಹಣದ ಮೌಲ್ಯಕ್ಕೆ ‘ಕೆ ಜಿ’ ಕೋಡ್‌ವರ್ಡ್‌; ಅಧಿಕಾರಿಗಳ ಹೆಸರು ಬಾಯ್ಬಿಟ್ಟ ನಿಂಗಪ್ಪ

 

ಲೋಕಾಯುಕ್ತ ಎಸ್‌ ಪಿ ಶ್ರೀನಾಥ ಜೋಷಿ ಅವರನ್ನೂ ವರ್ಗಾವಣೆ ವಿಚಾರವಾಗಿಯೇ ಆರೋಪಿ ನಿಂಗಪ್ಪ, ಸಚಿವ ತಿಮ್ಮಾಪುರ ಅವರನ್ನು ಭೇಟಿ ಮಾಡಿಸಿದ್ದ ಎಂಬ ಸಂಗತಿಯು ಮುನ್ನೆಲೆಗೆ ಬಂದಿತ್ತು.

 

ಲೋಕಾ ಎಸ್ಪಿ ಜೋಷಿ, ನಿಂಗಪ್ಪನೊಂದಿಗೆ ಅಬಕಾರಿ ಸಚಿವ ತಿಮ್ಮಾಪುರ ನಂಟು; ಐಷಾರಾಮಿ ಹೋಟೆಲ್‌ನಲ್ಲಿ ಭೇಟಿ?

 

ಆರೋಪಿ ನಿಂಗಪ್ಪನು ಲೋಕಾಯುಕ್ತ ಎಸ್‌ ಪಿ ಶ್ರೀನಾಥ್ ಜೋಷಿ ಅವರನ್ನು ಬೆಂಗಳೂರಿನ ಐಷಾರಾಮಿ ಹೋಟೆಲ್‌ವೊಂದರಲ್ಲಿ ಅಬಕಾರಿ ಸಚಿವ ಆರ್‍‌ ಬಿ ತಿಮ್ಮಾಪುರ ಅವರನ್ನು ಭೇಟಿ ಮಾಡಿಸಿದ್ದ ಎಂದು ಗೊತ್ತಾಗಿದೆ. ಆರೋಪಿ ನಿಂಗಪ್ಪನಿಗೆ ಅಬಕಾರಿ ಸಚಿವ ಆರ್‍‌ ಬಿ ತಿಮ್ಮಾಪುರ ಅವರ ಆಪ್ತ ಸಹಾಯಕ ಎಂದು ಹೇಳಲಾಗಿರುವ ರಮೇಶ್‌ ಎಂಬಾತನೂ ಪರಿಚಯವಿದ್ದ ಎಂದು ಹೇಳಲಾಗಿದೆ.

 

ನಿಂಗಪ್ಪನಿಗೆ ಅಬಕಾರಿ, ಬಿಬಿಎಂಪಿ ಅಧಿಕಾರಿಗಳೇ ಗುರಿ; ಎಫ್‌ಐಆರ್‍‌ನಲ್ಲಿಲ್ಲ ಎಸ್ಪಿ ಜೋಷಿ ಹೆಸರು

 

ಲೋಕಾಯುಕ್ತ ಹೆಸರು ಹೇಳಿ ಸರ್ಕಾರಿ ಅಧಿಕಾರಿಗಳಿಂದ ಕೋಟ್ಯಂತರ ರುಪಾಯಿ ವಸೂಲು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ  ಆರೋಪಿ ನಿಂಗಪ್ಪ ಅಬಕಾರಿ ಇಲಾಖೆಯ ವಿವಿಧ ಅಧಿಕಾರಿಗಳಿಂದ ಕಳೆದ 6 ತಿಂಗಳಿನಿಂದಲೂ  ಹಣವನ್ನು ವಸೂಲಿ ಮಾಡಿರುವುದಾಗಿ ಒಪ್ಪಿಕೊಂಡಿದ್ದ ಎಂದು  ಲೋಕಾಯುಕ್ತ ಪೊಲೀಸ್‌ ವಿಭಾಗವು ಇದೀಗ ಅಧಿಕೃತವಾಗಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು.

 

ಹಣ ವಸೂಲಿ, ಕ್ರಿಪ್ಟೋ ಕರೆನ್ಸಿಯಲ್ಲಿಯೂ ಹೂಡಿಕೆ; ‘ದಿ ಫೈಲ್‌’ ವರದಿ ಬೆನ್ನಲ್ಲೇ ಬಿಡುಗಡೆಯಾದ ಪತ್ರಿಕಾ ಹೇಳಿಕೆ

ಅಲ್ಲದೇ ಆರೋಪಿ ನಿಂಗಪ್ಪ ಎಂಬಾತನು 6 ತಿಂಗಳಿನಿಂದಲೂ  ಅಧಿಕಾರಿಗಳಿಂದ ವಸೂಲಿ ಮಾಡಿದ್ದ ಹಣವನ್ನು ಕ್ರಿಪ್ಟೋ ಕರೆನ್ಸಿಯಲ್ಲಿಯೂ ಹೂಡಿಕೆ ಮಾಡಿದ್ದ ಎಂದು ‘ದಿ ಫೈಲ್‌’, ವರದಿ ಪ್ರಕಟಿಸಿತ್ತು. ಈ  ವರದಿಯು ಅಧಿಕಾರಿ ವರ್ಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

 

 

ಇದೀಗ ಲೋಕಾಯುಕ್ತ ಪೊಲೀಸ್‌ ವಿಭಾಗವು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿಯೂ ಕ್ರಿಪ್ಟೋ ಕರೆನ್ಸಿಯಲ್ಲಿ ಆರೋಪಿಯು ಹೂಡಿಕೆ ಮಾಡಿದ್ದಾನೆ ಎಂದು ಅಧಿಕೃತವಾಗಿ ಹೇಳಿತ್ತು.

 

 

ಇದು ‘ದಿ ಫೈಲ್‌’, ವರದಿಗೆ ಮತ್ತಷ್ಟು ಬಲ ಬಂದಂತಾಗಿದೆ.

 

ಲೋಕಾ ಹೆಸರಿನಲ್ಲಿ ವಸೂಲಿ; ಬಂಧಿತ ಆರೋಪಿಯೊಂದಿಗೆ ಮೂವರು ಸಚಿವರ ಆಪ್ತ ಕಾರ್ಯದರ್ಶಿಗಳ ನಂಟು?

 

ಪತ್ರಿಕಾ ಹೇಳಿಕೆಯಲ್ಲೇನಿತ್ತು?

 

ಆರೋಪಿ ನಿಂಗಪ್ಪ ಅಬಕಾರಿ ಇಲಾಖೆಯ ವಿವಿಧ ಅಧಿಕಾರಿಗಳಿಂದ ಕಳೆದ 6 ತಿಂಗಳಿನಿಂದ ಹಣವನ್ನು ವಸೂಲಿ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಈ ರೀತಿ ವಸೂಲಿ ಮಾಡಿದ ಹಣವನ್ನು ತನ್ನ ಹಾಗೂ ತನ್ನಸಂಬಂಧಿಕರುಗಳ ಹೆಸರಿನಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿರುತ್ತೇನೆಂದು ಒಪ್ಪಿಕೊಂಡಿರುತ್ತಾನೆ ಎಂದು ಹೇಳಲಾಗಿದೆ.

 

ಹಣ ವಸೂಲಿ, ಕ್ರಿಪ್ಟೋ ಕರೆನ್ಸಿಯಲ್ಲಿಯೂ ಹೂಡಿಕೆ; ‘ದಿ ಫೈಲ್‌’ ವರದಿ ಬೆನ್ನಲ್ಲೇ ಬಿಡುಗಡೆಯಾದ ಪತ್ರಿಕಾ ಹೇಳಿಕೆ

 

‘ಆತನ ಮೊಬೈಲ್‌ನ್ನು ಪರಿಶೀಲಿಸಲಾಗಿ ಸುಮಾರು 13 ಕ್ರಿಪ್ಟೋ ವ್ಯಾಲೆಟ್‌ಗಳಲ್ಲಿ ಹಣವನ್ನು ಹೂಡಿಕೆ ಮಾಡಿರುವುದು ಕಂಡು ಬಂದಿದೆ. ಹಣದ ಮೂಲ ಪತ್ತೆ ಹಚ್ಚುವ ಸಲುವಾಗಿ ಸದರಿ ವ್ಯಾಲೆಟ್‌ಗಳನ್ನು ಫ್ರೀಜ್‌ ಆಡಿ ತನಿಖೆ ಮುಂದುವರೆಸಲಾಗಿದೆ,’ ಎಂದು ವಿವರಿಸಿತ್ತು.

 

ಅಬಕಾರಿ ಇಲಾಖೆಯ ಯಾವ ಯಾವ ಅಧಿಕಾರಿಗಳು ಆರೋಪಿ ನಿಂಗಪ್ಪನಿಗೆ ಎಷ್ಟೆಷ್ಟು  ಹಣ ನೀಡುರುತ್ತಾರೆ ಎಂಬ ಬಗ್ಗೆ ತನಿಖೆಯನ್ನು ಮುಂದುವರೆಸಲಾಗಿದೆ. ಆರೋಪಿಯೊಂದಿಗೆ ಬೇರೆ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ವಾಟ್ಸ್‌ಪ್ ಸಂದೇಶಗಳು, ಕರೆಗಳ ವಿವರಗಳು ಮತ್ತು ವಾಟ್ಸ್‌ಪ್ ಕರೆಗಳ ವಿವರಗಳನ್ನು ಪರಿಶೀಲಿಸುತ್ತಿದ್ದು ಶಾಮೀಲಾಗಿರುವ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗುತ್ತಿರುತ್ತದೆ ಎಂದು ತಿಳಿಸಿತ್ತು.

 

ವಜಾಗೊಂಡಿರುವ ಮುಖ್ಯ ಪೇದೆ ನಿಂಗಪ್ಪ ಎಂಬಾತನು  8ಕ್ಕೂ ಹೆಚ್ಚು ಕೆಎಎಸ್‌ ಅಧಿಕಾರಿಗಳಿಂದ ಹಣ ವಸೂಲು ಮಾಡಿದ್ದ ಎಂದು ಹೇಳಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಮುಂದೆ,  ಸಚಿವರುಗಳ ಆಪ್ತ ಕಾರ್ಯದರ್ಶಿಗಳ ಹೆಸರು ಸೇರಿದಂತೆ ಹಲವರ ಹೆಸರುಗಳನ್ನು ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗಿತ್ತು.

 

ಬಂಧಿತ ಆರೋಪಿ ಕೋಟ್ಯಂತರ ರೂ.ವಸೂಲಿ ಮಾಡಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಯು ಹಲವು ಪುರಾವೆ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿ ಅವರನ್ನು ಎತ್ತಂಗಡಿ ಮಾಡಲಾಗಿತ್ತು.

 

ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ?

 

ಹಣ ವಸೂಲು ಮಾಡುತ್ತಿದ್ದ ಎಂದು ಹೇಳಲಾಗಿರುವ ಆರೋಪಿತ ನಿಂಗಪ್ಪ , ಲೋಕಾಯುಕ್ತದ ಕೆಲವು ಅಧಿಕಾರಿಗಳಿಂದ ಕ್ರಿಪ್ಟೋ ಕರೆನ್ಸಿಯಲ್ಲಿಯೂ ಹೂಡಿಕೆ ಮಾಡಿಸಿದ್ದ. ಬೆಂಗಳೂರು ನಗರ ಹೊರತುಪಡಿಸಿ ಉಳಿದ ಜಿಲ್ಲೆಗಳ ಲೋಕಾ ಎಸ್ಪಿಗಳಿಂದಲೂ ಕ್ರಿಪ್ಟೋ ಕರೆನ್ಸಿಯಲ್ಲಿ ಮಧ್ಯವರ್ತಿಗಳ ಮೂಲಕ ಹೂಡಿಕೆ ಮಾಡಿಸಿದ್ದ ಎಂಬ ಆಪಾದನೆ ಕೇಳಿ ಬಂದಿತ್ತು.

 

ಅಬಕಾರಿ ಡಿಸಿಗಳಿಂದ ತಿಂಗಳಿಗೆ ಲಕ್ಷಕ್ಕೂ ಹೆಚ್ಚು ವಸೂಲಿ!

 

ಹಣಕ್ಕಾಗಿ ಬೇಡಿಕೆ ಮತ್ತು ಹಣ ನೀಡದೇ ಇದ್ದ ಹಲವು ಅಧಿಕಾರಿಗಳಿಗೆ ಬೆದರಿಕೆಯೊಡ್ಡಿದ್ದಾನೆ ಎಂದು ಆರೋಪಿತನಾಗಿರುವ ನಿಂಗಪ್ಪ, ಅಬಕಾರಿ ಡಿಸಿಗಳಿಂದ ತಿಂಗಳಿಗೆ ಲಕ್ಷಕ್ಕೂ ಹೆಚ್ಚು ವಸೂಲು ಮಾಡಿದ್ದಾನೆ ಎಂಬ ಆಪಾದನೆ ಕೇಳಿ ಬಂದಿದೆ. ವಿಜಯನಗರ ಮೆಟ್ರೋ ಸ್ಟೇಷನ್‌, ಜೀವನ್‌ ಭೀಮಾ ನಗರ, ಎಂ ಜಿ ರಸ್ತೆ, ಜೆಡಿಎಸ್‌ನ ಹಳೇ ಕಚೇರಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹಣವನ್ನು ವಸೂಲು ಮಾಡಿದ್ದ ಎಂದು ಹೇಳಲಾಗಿತ್ತು.

 

ಅಬಕಾರಿ ಹಗರಣವೊಂದರಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗಿರುವ 100ಕ್ಕೂ ಹೆಚ್ಚು ಅಬಕಾರಿ ಅಧಿಕಾರಿಗಳಿಂದ ತಿಂಗಳಿಗೆ ತಲಾ 1 ಲಕ್ಷ ರು ನಂತೆ ವಸೂಲು ಮಾಡಲಾಗುತ್ತಿತ್ತು. ಈ ಮಧ್ಯೆ ಇದೇ ಹಗರಣಕ್ಕೆ ಸಂಬಂಧಿಸಿದಂತೆ ಕೆಲವು ಅಬಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸ್‌ ವಿಭಾಗದ ಮತ್ತೊಬ್ಬ ಎಸ್‌ಪಿಯೊಬ್ಬರು ಮೊಕದ್ದಮೆ ದಾಖಲಿಸಿದ್ದರು ಎಂದು ತಿಳಿದು ಬಂದಿತ್ತು.

 

ಕೋಟ್ಯಂತರ ರು. ಕಪ್ಪುಹಣ ವರ್ಗಾವಣೆ; ಅಶ್ವಿನ್‌ ಕುಕೃತ್ಯದ ಬಗ್ಗೆ ಸಾಕ್ಷ್ಯ ನುಡಿದ ಇ ಡಿ ಉಪ ನಿರ್ದೇಶಕ

 

ಪ್ರತಿ ತಿಂಗಳೂ ತಲಾ 1 ಲಕ್ಷ ರು ನೀಡುತ್ತಿದ್ದರೂ ಸಹ ಮೊಕದ್ದಮೆ ದಾಖಲಾಗಿದ್ದಕ್ಕೆ ಈಗಾಗಲೇ ಹಣ ಕೊಟ್ಟಿದ್ದ ಅಧಿಕಾರಿಗಳು ಆರೋಪಿತ ನಿಂಗಪ್ಪ ವಿರುದ್ಧ ತಿರುಗಿ ಬಿದ್ದಿದ್ದರು ಎಂದು ಗೊತ್ತಾಗಿದೆ.

 

ಕೆಲ ವರ್ಷಗಳ ಹಿಂದೆ ನಿಂಗಪ್ಪ, ಸೇವೆಯಿಂದ ವಜಾಗೊಂಡಿದ್ದ. ಬಳಿಕ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಸರಕಾರಿ ಅಧಿಕಾರಿಗಳನ್ನು ಬೆದರಿಸಿ ಸುಲಿಗೆಯನ್ನೇ ವೃತ್ತಿ ಮಾಡಿಕೊಂಡಿದ್ದ. ಈ ಸಂಬಂಧ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹಲವು ಬಾರಿ ಜೈಲು ಸೇರಿದ್ದ ಎಂದು ತಿಳಿದು ಬಂದಿದೆ.

 

ಲೋಕಾ ಪೊಲೀಸರ ಶೋಧ; ಬರಿಗೈಯಲ್ಲಿ ಮರಳಿದ ಪೊಲೀಸರು, ತಲೆಮರೆಸಿಕೊಂಡಿದ್ದಾರೆಯೇ ಜೋಷಿ?

 

ವಿಶೇಷವೆಂದರೇ ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿಯೂ ಲೋಕಾಯುಕ್ತರಾಗಿದ್ದ ಭಾಸ್ಕರರಾವ್‌ ಅವರ ಪುತ್ರ ಮತ್ತು ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ಹಲವರಿಂದ ಹಣಕ್ಕಾಗಿ ಬೇಡಿಕೆ ಇರಿಸಿದ್ದರು. ಆ ಸಂದರ್ಭದಲ್ಲಿ ಲೋಕಾಯುಕ್ತ ಎಸ್ಪಿಯಾಗಿದ್ದ ಸೋನಿಯಾ ನಾರಂಗ್ ಅವರು ಈ ಪ್ರಕರಣವನ್ನು ಬಹಿರಂಗಪಡಿಸಿದ್ದರು. ಅಲ್ಲದೇ ಲೋಕಾಯುಕ್ತ ಹುದ್ದೆಗೆ ಭಾಸ್ಕರರಾವ್‌ ಅವರು ರಾಜೀನಾಮೆ ನೀಡಿದ್ದರು. ಹಾಗೂ ಅವರ ಪುತ್ರ ಅಶ್ವಿನ್‌ ರಾವ್‌ ಸಹ ಪೊಲೀಸರ ಬಂಧನಕ್ಕೆ ಒಳಗಾಗಿದ್ದ.

 

ಈ ಪ್ರಕರಣದ ನಂತರ ಲೋಕಾಯುಕ್ತಕ್ಕಿದ್ದ ಪೊಲೀಸ್‌ ಅಧಿಕಾರವನ್ನು ಮೊಟಕುಗೊಳಿಸಿ, ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸಲಾಗಿತ್ತು. ಆ ನಂತರ ಎಸಿಬಿಯನ್ನೂ ರದ್ದುಗೊಳಿಸಿ ಲೋಕಾಯುಕ್ತ ಸಂಸ್ಥೆಗೆ ಪುನಃ ಪೊಲೀಸ್‌ ಅಧಿಕಾರವನ್ನು ಮರು ಸ್ಥಾಪಿಸಲಾಗಿತ್ತು.  ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಎರಡು ವರ್ಷ ಪೂರ್ಣಗೊಳಿಸಿರುವ ಹೊತ್ತಿನಲ್ಲೇ  ಲೋಕಾಯುಕ್ತ ಹೆಸರಿನಲ್ಲಿ ನಿಂಗಪ್ಪ ಎಂಬಾತ ಹಣ ವಸೂಲಿ ಮಾಡಿರುವ ಪ್ರಕರಣವು ಮುನ್ನೆಲೆಗೆ ಬಂದಿದೆ. ಅಲ್ಲದೇ  ಲೋಕಾಯುಕ್ತ ಸಂಸ್ಥೆಯ ವಿಶ್ವಾಸಾರ್ಹತೆಯ ಪ್ರಶ್ನೆಯೂ ಎದುರಾಗಿದೆ.

SUPPORT THE FILE

Latest News

Related Posts