ನಿಂಗಪ್ಪನಿಗೆ ಅಬಕಾರಿ, ಬಿಬಿಎಂಪಿ ಅಧಿಕಾರಿಗಳೇ ಗುರಿ; ಎಫ್‌ಐಆರ್‍‌ನಲ್ಲಿಲ್ಲ ಎಸ್ಪಿ ಜೋಷಿ ಹೆಸರು

ಬೆಂಗಳೂರು; ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ನಡೆಯುತ್ತಿದ್ದ ಸುಲಿಗೆ ದಂಧೆಯಲ್ಲಿ ಭಾಗಿಯಾದ ಆರೋಪದಡಿ ಬಂಧನಕ್ಕೊಳಗಾಗಿರುವ ಆರೋಪಿ ವಜಾಗೊಂಡಿರುವ ಮುಖ್ಯ ಪೇದೆ ನಿಂಗಪ್ಪ ಸಾವಂತ್‌, ಅಬಕಾರಿ ಇಲಾಖೆಯ ಅಧಿಕಾರಿಗಳನ್ನೇ ಹೆಚ್ಚು ಗುರಿಯಾಗಿಸಿಕೊಂಡು ವಸೂಲಿಗಿಳಿದಿದ್ದ!

 

ಅಲ್ಲದೇ ನಿಂಗಪ್ಪ ಸಾವಂತ್‌, ಲೋಕಾಯುಕ್ತ ಸಂಸ್ಥೆಯಲ್ಲಿದ್ದ ಕೆಲವು ಅಧಿಕಾರಿಗಳ ನೆರವಿನೊಂದಿಗೆ ಇತರೆ ಇಲಾಖೆಯ ಅಧಿಕಾರಿಗಳ ಮಾಹಿತಿಯನ್ನೂ ಸಂಗ್ರಹಿಸುತ್ತಿದ್ದ. ಅವರಿಂದಲೂ ಹಣವನ್ನು ವಸೂಲಿ ಮಾಡುತ್ತಿದ್ದ!

 

ಹಾಗೆಯೇ ಲೋಕಾಯುಕ್ತದ ಹೆಸರು ಹೇಳಿಕೊಂಡು ವಸೂಲಿಗಿಳಿಯುತ್ತಿದ್ದ ಕೆಲವು ವ್ಯಕ್ತಿಗಳು, ಇಂತಹ ಕೃತ್ಯ ಎಸಗಲು ಹೊಸ ಸಿಮ್‌ ಕಾರ್ಡ್‌ಗಳನ್ನು ಖರೀದಿಸುತ್ತಿದ್ದರು. ಟ್ರೂ ಕಾಲರ್‍‌ ಅಥವಾ ತಮ್ಮ ವಾಟ್ಸಾಪ್‌ ಡಿ ಪಿ ಗಳಲ್ಲಿ ಲೋಕಾಯುಕ್ತ, ಉಪ ಲೋಕಾಯುಕ್ತ, ಹಿರಿಯ ಪೊಲೀಸ್‌ ಅಧಿಕಾರಿಗಳ ಭಾವಚಿತ್ರಗಳನ್ನು ಹಾಕಿಕೊಂಡು ವಸೂಲಿಗಿಳಿಯುತ್ತಿದ್ದರು. ಈ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳೇ ಮಾತನಾಡುತ್ತಿದ್ದಾರೆ ಎಂಬ ನಂಬಿಕೆ ಬರುವಂತೆ ಮಾಡಿ ಹೆದರಿಸುತ್ತಿದ್ದರು.

 

ಲೋಕಾಯುಕ್ತ ಪೊಲೀಸ್‌ ಅಧೀಕ್ಷಕ ಎಸ್‌ ಬದ್ರಿನಾಥ್‌ ಅವರು ಸಲ್ಲಿಸಿದ್ದ ದೂರಿನಲ್ಲಿ ಈ ಎಲ್ಲಾ ಮಾಹಿತಿಗಳಿವೆ.

 

ವಿಶೇಷವೆಂದರೇ ಈ ದೂರಿನಲ್ಲಿ ಎಲ್ಲಿಯೂ ಲೋಕಾಯುಕ್ತ ಎಸ್ಪಿ ಶ್ರೀನಾಥ್‌ ಜೋಷಿ ಅವರ ಹೆಸರನ್ನು ಉಲ್ಲೇಖಿಸಿಲ್ಲ.

 

ಬದ್ರಿನಾಥ್‌ ಅವರು ಸಲ್ಲಿಸಿದ್ದ ದೂರನ್ನಾಧರಿಸಿ ಎಫ್‌ಐಆರ್‍‌ ದಾಖಲಾಗಿದೆ.

 

 

ಬದ್ರಿನಾಥ್‌ ಅವರು ಸಲ್ಲಿಸಿದ್ದ ದೂರು  ಮತ್ತು ದಾಖಲಾಗಿರುವ ಎಫ್‌ಐಆರ್‍‌ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ನಿಂಗಪ್ಪ ಸಾವಂತ್‌ ವಿರುದ್ಧದ ಪೊಲೀಸ್‌ ತನಿಖೆ ಮತ್ತು ಮುಂದಿನ ನ್ಯಾಯಿಕ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ತಡೆ ನೀಡಿರುವ ಬೆನ್ನಲ್ಲೇ ಬದ್ರಿನಾಥ್‌ ಸಲ್ಲಿಸಿರುವ ದೂರು ಮತ್ತು ಎಫ್‌ಐಆರ್‍‌ ಪ್ರತಿಯು ಮುನ್ನೆಲೆಗೆ ಬಂದಿದೆ.

 

ಲೋಕಾಯುಕ್ತದ ಹೆಸರಿನಲ್ಲಿ ವಸೂಲಿಗಿಳಿಯುತ್ತಿದ್ದ ವ್ಯಕ್ತಿಗಳ ಬಗ್ಗೆ ಮತ್ತು ಹಣ ಕಳೆದುಕೊಂಡಿದ್ದ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸ್‌ ವಿಭಾಗದ ಕೆಲ ಅಧಿಕಾರಿಗಳು ಸಂಪರ್ಕಿಸಿದ್ದರು. ಈ ಪೈಕಿ ಹಣ ಕಳೆದುಕೊಂಡಿದ್ದವರೊಬ್ಬರು ನಿಂಗಪ್ಪ ಎಂಬಾತ ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ಆತನ ಮೊಬೈಲ್‌ ನಂಬರ್‍‌ನ್ನೂ ( 9743352339) ಸಹ ನೀಡಿದ್ದರು ಎಂಬುದು ದೂರಿನಿಂದ ತಿಳಿದು ಬಂದಿದೆ.

 

 

ನಿಂಗಪ್ಪ ಸಾವಂತ್‌ ಎಂಬಾತ ಅಬಕಾರಿ ಇಲಾಖೆಯ ಬೆಂಗಳೂರು ನಗರ ವಿಭಾಗಗಳ ಹಿರಿಯ ಅಧಿಕಾರಿಗಳು ಮತ್ತು ಬಿಬಿಎಂಪಿಯ ಕೆಲವು ಅಧಿಕಾರಿಗಳಿಗೆ ತನ್ನ ವಾಟ್ಸಾಪ್‌ ನಂಬರ್‍‌ನಿಂದ ಕರೆ ಮಾಡಿದ್ದ ಮತ್ತು ಸಂದೇಶಗಳನ್ನು ಕಳಿಸಿದ್ದ. ನಿಮ್ಮಗಳ ವಿರುದ್ಧ ಲೋಕಾಯುಕ್ತ ಕಚೇರಿಯಲ್ಲಿ ದೂರುಗಳಿವೆ. ನಿಮ್ಮ ಮೇಲೆ ದಾಳಿ ಮಾಡುವ ಸಂಭವವಿದೆ ಎಂದು ಹೆದರಿಸಿದ್ದ. ಹಾಗೂ ತನ್ನನ್ನು ಭೇಟಿ ಮಾಡಬೇಕು ಎಂದು ಒತ್ತಾಯಿಸಿದ್ದ. ಜತೆಗೆ ಅಕ್ರಮವಾಗಿ ಹಣವನ್ನೂ ವಸೂಲಿ ಮಾಡಿದ್ದ ಎಂದು ಬದ್ರಿನಾಥ್‌ ಅವರು ಸಲ್ಲಿಸಿರುವ ದೂರಿನಲ್ಲಿ ವಿವರಿಸಲಾಗಿದೆ.

 

 

ಅದೇ ರೀತಿ ನಿಂಗಪ್ಪ ಸಾವಂತ್‌, ಬೆಂಗಳೂರು ಲೋಕಾಯುಕ್ತ ಕಚೇರಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದ. ಲೋಕಾಯುಕ್ತದ ಕೆಲವು ಅಧಿಕಾರಿಗಳ ಜತೆ ಸಂಪರ್ಕ ಇದೆ ಎಂದು ಲೋಕಾಉಉಕ್ತ ಅಧಿಕಾರಿಗಳು ಬಾತ್ಮಿದಾರರಿಂದ ಮಾಹಿತಿಯನ್ನು ಪಡೆದುಕೊಂಡಿದ್ದರು. ಈತ, ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳನ್ನು ಸಂಪರ್ಕಿಸಿ ಬೇರೆ ಇಲಾಖೆಯ ಅಧಿಕಾರಿಗಳ ಮಾಹಿತಿಯನ್ನೂ ಸಂಗ್ರಹಿಸುತ್ತಿದ್ದ. ಅವರಿಂದಲೂ ಹಣವನ್ನು ವಸೂಲಿ ಮಾಡುತ್ತಿದ್ದ ಎಂಬ ಮಾಹಿತಿಯನ್ನು ಲೋಕಾಯುಕ್ತ ಪೊಲೀಸ್‌ ವಿಭಾಗವು ಕಲೆ ಹಾಕಿತ್ತು ಎಂಬುದು ದೂರಿನಿಂದ ತಿಳಿದು ಬಂದಿದೆ.

 

ನಿಂಗಪ್ಪ ಸಾವಂತ್‌, ಸೋಮವಾರವೂ ಸಹ ಕೆಲವು ಅಧಿಕಾರಿಗಳನ್ನು ಭೇಟಿ ಮಾಡಿ ಬೇರೆ ಇಲಾಖೆಯ ಸರ್ಕಾರಿ ಅಧಿಕಾರಿಗಳ ಮಾಹಿತಿಯನ್ನು ಪಡೆದು ಅವರಿಂದ ಹಣವನ್ನು ವಸೂಲಿ ಮಾಡಬಹುದು ಎಂಬ ಮಾಹಿತಿಯನ್ನು ಬಾತ್ಮಿದಾರರ ಮೂಲಕ ಕಲೆ ಹಾಕಿದ್ದರು.

 

ಈ ಬಗ್ಗೆ ಕರ್ನಾಟಕ ಲೋಕಾಯುಕ್ತ ಘಟಕದ ಪೊಲೀಸ್‌ ಅಧಿಕಾರಿಗಳನ್ನು ನೇಮಿಸಬೇಕು. ಈ ಬಗ್ಗೆ ಪರಿಶೀಲನೆ ಮಾಡಿ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸೂಚಿಸಬೇಕು ಎಂದು ಪೊಲೀಸ್‌ ಅಧೀಕ್ಷಕ ಎಸ್‌ ಬದ್ರಿನಾಥ್‌ ಅವರು ದೂರಿನಲ್ಲಿ ಕೋರಿರುವುದು ಗೊತ್ತಾಗಿದೆ.

SUPPORT THE FILE

Latest News

Related Posts