ಲೋಕಾ ಸುಲಿಗೆ ಪ್ರಕರಣ; ತನಿಖೆ ಹಳಿತಪ್ಪಿಸಲಾಗಿದೆಯೇ, ಸ್ವತಂತ್ರ ಬಾಹ್ಯ ತನಿಖಾ ಸಂಸ್ಥೆಗೆ ಹಸ್ತಾಂತರವಾಗಿಲ್ಲವೇಕೆ?

ಬೆಂಗಳೂರು;  ಲೋಕಾಯುಕ್ತ ಹೆಸರು ಹೇಳಿ ಸರ್ಕಾರಿ ಅಧಿಕಾರಿಗಳಿಂದ ಲಕ್ಷಾಂತರ ರುಪಾಯಿ ಸುಲಿಗೆ ಮಾಡಿರುವ ಪ್ರಕರಣವು ಇದೀಗ ರಾಜ್ಯಾದ್ಯಂತ ಹೆಚ್ಚು ಸದ್ದು ಮಾಡುತ್ತಿದೆ. ಈ ಪ್ರಕರಣದಲ್ಲಿ ಆರೋಪಿ ನಿಂಗಪ್ಪ ಬಂಧನವಾದ ನಂತರ ಸುಲಿಗೆಗೆ ಸಂಬಂಧಿಸಿದ ಹಲವು ಸಂಗತಿಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

 

ಲೋಕಾಯುಕ್ತ ಪೊಲೀಸ್‌ ವಿಭಾಗದ ಎಸ್ಪಿ ಶ್ರೀನಾಥ್ ಜೋಷಿ ಅವರೂ ಸಹ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಬಲವಾದ ಆರೋಪವಿದೆ. ಮಾಹಿತಿಗಳನ್ನು ಕಲೆ ಹಾಕಿದ್ದ ಲೋಕಾ ಪೊಲೀಸರು ಅವರ ಮನೆ ಮೇಲೆ ಶೋಧ ಕಾರ್ಯಾಚರಣೆ ನಡೆಸಿದ್ದರು.

 

ಲೋಕಾಯುಕ್ತ ಪೊಲೀಸ್‌ ವಿಭಾಗದ ಎಸ್ಪಿ ಶ್ರೀನಾಥ್‌ ಜೋಷಿ ಅವರ ವಿರುದ್ಧವೇ ನೇರಾನೇರ ಆರೋಪಿಸಿರುವುದರಿಂದ ಈ ಪ್ರಕರಣವು ಲೋಕಾಯುಕ್ತ ಸಂಸ್ಥೆಯ ವಿಶ್ವಾಸರ್ಹತೆಯು ಮತ್ತೊಮ್ಮೆ ಅಪಾಯದಲ್ಲಿ ಸಿಲುಕಿದೆ.

 

ಲೋಕಾ ಸಂಸ್ಥೆಯ ‘ವಿಶ್ವಾಸರ್ಹತೆ’ಯನ್ನು ಮರು ಸ್ಥಾಪಿಸುವ ನಿಟ್ಟಿನಲ್ಲಿ ಈ ಪ್ರಕರಣವನ್ನು ಲೋಕಾಯುಕ್ತ ಬಿ ಎಸ್‌ ಪಾಟೀಲ್‌ ಅವರು ಸ್ವತಂತ್ರ ಬಾಹ್ಯ ತನಿಖಾ ಸಂಸ್ಥೆಗೂ ವಹಿಸಿಲ್ಲ. ಈ ಬಗ್ಗೆ ಒಂದೇ ಒಂದು ಹೆಜ್ಜೆಯನ್ನೂ ಇಟ್ಟಿಲ್ಲ. ಸುಲಿಗೆ ಪ್ರಕರಣದ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆ ಮತ್ತು ಲೋಕಾಯುಕ್ತ ಪೊಲೀಸ್‌ ವಿಭಾಗದ ಪ್ರತೀ ಹೆಜ್ಜೆಯೂ ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

ಈ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಆರೋಪಿಗಳ ವಿರುದ್ಧ ದಾಖಲಿಸಿರುವ ಎಫ್‌ಐಆರ್‍‌ (ಅಪರಾಧ ಸಂಖ್ಯೆ 28/2025) ನ್ನು ಆರೋಪಿಗಳು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಲೋಕಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‍‌ನಲ್ಲಿಯೇ ಲೋಪಗಳು ಇವೆಯೇ ಎಂಬ ಪ್ರಶ್ನೆಗಳು ಸಹ ಉದ್ಭವಿಸಿವೆ.

 

ಆರೋಪಿ ನಿಂಗಪ್ಪ ಎಂಬಾತನನ್ನು ಬಂಧಿಸುವ ಮುನ್ನ ಲೋಕಾಯುಕ್ತ ಪೊಲೀಸರು ಕಾನೂನಿನ ಸರಿಯಾದ ಕಾರ್ಯವಿಧಾನಗಳನ್ನು ಅನುಸರಿಸಿಲ್ಲ. 2025ರ ಮೇ 31ರಂದು ಹೊಸದುರ್ಗದಲ್ಲಿ ನಿಂಗಪ್ಪನನ್ನು ಬಂಧಿಸಿದ್ದರು. ಆದರೆ ದಾಖಲೆಗಳಲ್ಲಿ 2025ರ ಜೂನ್‌ 2 ರಂದು ಬಂಧಿಸಲಾಗಿದೆ ಎಂದು ತೋರಿಸಲಾಗಿದೆ ಎಂದು ಹೈಕೋರ್ಟ್‌ಲ್ಲಿ ವಾದಿಸಿದ್ದಾರೆ. ಅಲ್ಲದೇ ಇದಕ್ಕೆ ಪೂರಕವಾಗಿ ಸಿಸಿಟಿವಿ ದೃಶ್ಯಾವಳಿಗಳಿವೆ ಎಂದು ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ.

 

ಅಂದರೆ ಲೋಕಾಯುಕ್ತ ಪೊಲೀಸರು ಆರೋಪಿ ನಿಂಗಪ್ಪನನ್ನು ಬಂಧಿಸಿದ್ದರೂ ಎರಡು ದಿನಗಳವರೆಗೆ ಏಕೆ ಅವರ ಬಂಧನವನ್ನು ತೋರಿಸಿಲ್ಲ ಎಂಬ ಪ್ರಶ್ನೆಯು ಸಹಜವಾಗಿಯೇ ಉದ್ಭವವಾಗುತ್ತದೆ.

 

ಲೋಕಾಯುಕ್ತ ಪೊಲೀಸರು ಆರೋಪಿ ನಿಂಗಪ್ಪ ಬಂಧನಕ್ಕೆ ಸೂಕ್ತ ಮತ್ತು ಸಮರ್ಥನೀಯ ಕಾರಣಗಳನ್ನು ಒದಗಿಸಿಲ್ಲ ಎಂದು ಹೇಳಲಾಗಿದೆ. ಆರೋಪಿಯನ್ನು ಕಡ್ಡಾಯ ಬಂಧಿಸುವ ಸಂಬಂಧ ಹೈಕೋರ್ಟ್‌ ಅನೇಕ ಆದೇಶಗಳನ್ನು ಹೊರಡಿಸಿದೆ. ಲೋಕಾಯುಕ್ತ ಪೊಲೀಸರು ಹೈಕೋರ್ಟ್ ಆದೇಶಗಳನ್ನು ಅನುಸರಿಸಲಿಲ್ಲವೇ ಎಂಬ ಪ್ರಶ್ನೆಯೂ ಎದುರಾಗಿದೆ. ಅಥವಾ ಪ್ರಕರಣವು ತುಂಬಾ ಆಳಕ್ಕೆ ಹೋಗದಂತೆ ನೋಡಿಕೊಳ್ಳಲು ಉದ್ದೇಶಪೂರ್ವಕವಾಗಿ ಮಾಡಲಾಗಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ.

 

ಆರೋಪಿ ನಿಂಗಪ್ಪನನ್ನು ಬಂಧನವನ್ನು ಪ್ರಶ್ನಿಸಿರುವ ಅವರ ಪತ್ನಿ ಸಲ್ಲಿಸಿದ ಅರ್ಜಿಗೆ ಲೋಕಾಯುಕ್ತ ಪೊಲೀಸರು ಇನ್ನೂ ಯಾವುದೇ ಉತ್ತರವನ್ನು ಕಂಡುಕೊಂಡಿಲ್ಲ. ಹೀಗಾಗಿ ನಿಂಗಪ್ಪ ವಿರುದ್ಧದ ತನಿಖೆಯನ್ನು ಹೈಕೋರ್ಟ್ ತಡೆಹಿಡಿದಿದೆ.

 

ಇದೇ ಪ್ರಕರಣದಲ್ಲಿ ಹೈಕೋರ್ಟ್ ಮುಂದೆ ಮೂರನೇ ಅರ್ಜಿಯೂ ಇದೆ. ಇದನ್ನು ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಷಿ ಸಲ್ಲಿಸಿದ್ದಾರೆ. ಆರೋಪಿ ನಿಂಗಪ್ಪನ ವಿರುದ್ಧ ದಾಖಲಿಸಿರುವ ಎಫ್‌ಐಆರ್ (ಅಪರಾಧ ಸಂಖ್ಯೆ 28/2025) ರಲ್ಲಿ ತನಿಖೆಗೆ ಹಾಜರಾಗುವಂತೆ ಶ್ರೀನಾಥ್ ಜೋಷಿ ಅವರಿಗೆ ನೋಟೀಸ್‌ ನೀಡಲಾಗಿದೆ. ಆದರೆ ಹೈಕೋರ್ಟ್‌ ಈ ನೋಟೀಸ್‌ಗೆ ತಡೆ ಹಿಡಿದಿದೆ. ಲೋಕಾಯುಕ್ತ ಪೊಲೀಸರು ನೋಟಿಸ್ ಜೊತೆಗೆ ಎಫ್‌ಐಆರ್ ಮತ್ತು ದೂರನ್ನು ಕಡ್ಡಾಯವಾಗಿ ಮತ್ತು ಅಗತ್ವಾಗಿ ಒದಗಿಸಬೇಕಿತ್ತು. ಆದರೆ ಲೋಕಾಯುಕ್ತ ಪೊಲೀಸರು ಇದನ್ನು ಪಾಲಿಸದಿರುವುದೇ ಇದಕ್ಕೆ ಮೂಲ ಕಾರಣ ಎಂದು ಗೊತ್ತಾಗಿದೆ.

 

ಹಾಗೆಯೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ದೂರು ಮತ್ತು ಎಫ್‌ಐಆರ್‍‌ ಪ್ರತಿಗಳನ್ನು ಸಾರ್ವಜನಿಕ ವಲಯದಲ್ಲಿ ಇಡದೇ ಅಡಗಿಸಿಟ್ಟಿದ್ದಾರೆ. ಅಧಿಕಾರಿಗಳಿಂದ ಹಣ ವಸೂಲಿ ಮತ್ತು ಸುಲಿಗೆಗೆ ಸಂಬಂಧಿಸಿದಂತೆ ದೂರುದಾರರು ಯಾರು, ಯಾವ ದೂರಿನ ಮೇಲೆ ಎಫ್‌ಐಆರ್‍‌ ದಾಖಲಿಸಲಾಗಿದೆ ಎಂಬುದನ್ನು ಲೋಕಾಯುಕ್ತ ಪೊಲೀಸರು ನಿಗೂಢವಾಗಿರಿಸಿದ್ದಾರೆ.

 

ಸುಲಿಗೆ; ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ, ಮತ್ತೊಬ್ಬ ಎಸ್ಪಿಯ ಹೆಸರು ಬಾಯ್ಬಿಟ್ಟ ಮಧ್ಯವರ್ತಿ ಗಿರಿರಾಜ್‌?

 

ಇನ್ಸ್‌ಪೆಕ್ಟರ್‍‌ ಕೂಡ ಈ ದಂಧೆಯಲ್ಲಿ ಪಾಲುದಾರರೇ ಅಥವಾ ಬಲಿಪಶುವಾಗಿದ್ದಾರೆಯೇ, ಆರೋಪಿ ನಿಂಗಪ್ಪ, ಸರ್ಕಾರಿ ನೌಕರರನ್ನೇ ಮಾತ್ರ ಗುರಿಯಾಗಿಸಿಕೊಂಡಿದ್ದರೇ, ಎಸ್‌ ಪಿ ಶ್ರೀನಾಥ್‌ ಜೋಷಿಗೆ ಏಕೆ ನೋಟೀಸ್‌ ನೀಡಲಾಯಿತು ಎಂಬ ಪ್ರಶ್ನೆಗಳು ಸಹ ಉದ್ಭವವಾಗಿವೆ.

 

ಸುಲಿಗೆ ಆರೋಪ; ಸಾಕ್ಷ್ಯ ಇದ್ದರೂ ಎಸ್ಪಿ ಶ್ರೀನಾಥ ಜೋಷಿ ಅಮಾನತಿಗೆ ಶಿಫಾರಸ್ಸು ಮಾಡದ ಲೋಕಾಯುಕ್ತ

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಭವವಾಗಿರುವ ಈ ಎಲ್ಲಾ ಪ್ರಶ್ನೆಗಳ ನಡುವೆ ಲೋಕಾಯುಕ್ತ ಸಂಸ್ಥೆಯ ಹಿರಿಯ ವಕೀಲರಾದ ವೆಂಕಟೇಶ್ ಅರಬಟ್ಟಿ ಅವರು, ಹೈಕೋರ್ಟ್‌ನ ಮುಂದಿರುವ ಅರ್ಜಿಗಳಲ್ಲಿ ಏಕೆ ಹಾಜರಾಗಲಿಲ್ಲ ಎಂಬುದು ಸಹ ನಿಗೂಢವಾಗಿದೆ. ಹೀಗಾಗಿ ಈ ಪ್ರಕರಣದ ತನಿಖೆಯನ್ನು ಹೊರಗಿನ ತನಿಖಾ ಸಂಸ್ಥೆಗೆ ಹಸ್ತಾಂತರಿಸಬೇಕು. ಇಲ್ಲದಿದ್ದಲ್ಲಿ ಈ ಹಗರಣವನ್ನು ಮಣ್ಣೆಳೆದು ಮುಚ್ಚಿ ಹಾಕಲಿದ್ದಾರೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.

 

ಲೋಕಾ ಹೆಸರಿನಲ್ಲಿ ಹಣ ವಸೂಲಿ ಪ್ರಕರಣ; ಕಾಂಗ್ರೆಸ್‌ ಪಕ್ಷದ ಬುಡಕ್ಕೆ ಬರಲಿದೆಯೇ, ಹವಾಲಾ ನಂಟಿದೆಯೇ?

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ತಕ್ಷಣವೇ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಬೇಕು ಅಥವಾ ಸೈಬರ್ ಅಪರಾಧದ ಹಿನ್ನೆಲೆ ಒಳಗೊಂಡಿರುವ ಈ ಹಗರಣದ ಬಗ್ಗೆ ವೃತ್ತಿಪರ ತನಿಖೆ ನಡೆಸಲು ಆಯ್ದ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿಯನ್ನು ರಚಿಸಲು ರಾಜ್ಯ ಸರ್ಕಾರಕ್ಕೆ ಕೋರಿಕೆ ಸಲ್ಲಿಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ನಿಂಗಪ್ಪನಿಗೆ ಕಪ್ಪ ಕೊಟ್ಟ ಅಧಿಕಾರಿಗಳೊಂದಿಗೆ ಸಿಎಂ ಸಲಹೆಗಾರರು, ಮೈಸೂರಿನ ಸಚಿವರ ನಂಟು?

ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಲು ಲೋಕಾಯುಕ್ತ ಎಸ್‌ ಪಿ ಶ್ರೀನಾಥ್‌ ಜೋಷಿ ಅವರೇ ನೇರವಾಗಿ ಆರೋಪಿ ನಿಂಗಪ್ಪನಿಗೆ ಪರಿಚಿತ ಅಧಿಕಾರಿಗಳ ಮೊಬೈಲ್‌ ನಂಬರ್‍‌ಗಳನ್ನೂ ಕಳಿಸಿದ್ದರು! ಅಲ್ಲದೇ ಸಿಎಲ್‌-7 ಲೈಸೆನ್ಸ್‌ಗಳನ್ನು ಕೊಡಿಸುವುದರಲ್ಲಿಯೂ ಆರೋಪಿ ನಿಂಗಪ್ಪನು, ಅಬಕಾರಿ ಇಲಾಖೆಯ ಹಲವು ಡಿಸಿ ಮತ್ತು ಆಯುಕ್ತರುಗಳ ಸಂಪರ್ಕ ಹೊಂದಿದ್ದ. ಮತ್ತು ಲೋಕಾಯುಕ್ತದಲ್ಲಿ ವಿಚಾರಣೆ ಎದುರಿಸುತ್ತಿದ್ದರು ಎನ್ನಲಾಗಿರುವ ಅಬಕಾರಿ ಆಯುಕ್ತರುಗಳಿಂದ ಲಕ್ಷಾಂತರ ರುಪಾಯಿಗಳನ್ನು ವಸೂಲಿ ಮಾಡಿದ್ದ!

 

ಲೋಕಾಯುಕ್ತರೇ ದಾಖಲಿಸಿದ್ದ ಸ್ವಯಂ ಪ್ರೇರಿತ ಪ್ರಕರಣದ ಆರೋಪಿಗಳ ಬೆನ್ನೆತ್ತಿದ್ದ ಆರೋಪಿ ನಿಂಗಪ್ಪ?

 

ಹಾಗೆಯೇ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತಿಂಗಳಿಗೆ 3 ಲಕ್ಷ ರು. ಹಣಕ್ಕಾಗಿ ಬೇಡಿಕೆ ಇರಿಸಿದ್ದ. 3 ಲಕ್ಷವನ್ನು 3 ಕೆ ಜಿ ರೈಸ್‌ ಎಂಬುದಾಗಿ ಕೋಡ್‌ ವರ್ಡ್‌ ಬಳಸಿದ್ದ. ಮತ್ತು ಆರೋಪಿ ನಿಂಗಪ್ಪನಿಗೆ ಲಕ್ಷಾಂತರ ರುಪಾಯಿಗಳನ್ನು ನೀಡಿದ್ದ ಅಬಕಾರಿ ಇಲಾಖೆಯ ಕೆಲವು ಆಯುಕ್ತರ ಹೆಸರುಗಳನ್ನೂ ‘ದಿ ಫೈಲ್‌’,  ಹೊರಗೆಡವಿತ್ತು.

ತಿಂಗಳಿಗೆ 3 ಲಕ್ಷಕ್ಕೆ ಬೇಡಿಕೆ, ಹಣದ ಮೌಲ್ಯಕ್ಕೆ ‘ಕೆ ಜಿ’ ಕೋಡ್‌ವರ್ಡ್‌; ಅಧಿಕಾರಿಗಳ ಹೆಸರು ಬಾಯ್ಬಿಟ್ಟ ನಿಂಗಪ್ಪ

ಲೋಕಾಯುಕ್ತ ಹೆಸರು ಹೇಳಿ ಹಣ ವಸೂಲಿ ಮಾಡುತ್ತಿದ್ದ ಎಂಬ ಆರೋಪದ ಮೇರೆಗೆ ಬಂಧಿತನಾಗಿರುವ ಆರೋಪಿ ನಿಂಗಪ್ಪನ ಪ್ರಕರಣವು ಅಧಿಕಾರಿಗಳ ವರ್ಗದಲ್ಲಿ ಭಾರೀ ಸಂಚಲನ ಮೂಡಿಸಿರುವ ಹೊತ್ತಿನಲ್ಲೇ ಇದೀಗ ನೇರವಾಗಿ ಅಬಕಾರಿ ಸಚಿವ ಆರ್‍‌ ಬಿ ತಿಮ್ಮಾಪುರ ಅವರ ಹೆಸರು ತಳಕು ಹಾಕಿಕೊಂಡಿತ್ತು.

 

ಅಬಕಾರಿ ಆಯುಕ್ತರು, ಡಿ ಸಿ, ಡಿವೈಎಸ್ಪಿಗಳ ವರ್ಗಾವಣೆಗೆ ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂದು ಅಬಕಾರಿ ಸಚಿವ ತಿಮ್ಮಾಪುರ ಅವರ ವಿರುದ್ಧ ಈಗಾಗಲೇ ಆರೋಪ ಕೇಳಿ ಬಂದಿತ್ತು. ಪ್ರತಿಪಕ್ಷ ಬಿಜೆಪಿಯೂ ಸಹ ಅಬಕಾರಿ ಸಚಿವರ ರಾಜೀನಾಮೆಗೆ ಒತ್ತಾಯಿಸಿತ್ತು. ಈ ಬೆಳವಣಿಗೆ ನಡುವೆಯೇ ಲೋಕಾಯುಕ್ತ ಎಸ್‌ ಪಿ ಶ್ರೀನಾಥ ಜೋಷಿ ಅವರನ್ನೂ ವರ್ಗಾವಣೆ ವಿಚಾರವಾಗಿಯೇ ಆರೋಪಿ ನಿಂಗಪ್ಪ, ಸಚಿವ ತಿಮ್ಮಾಪುರ ಅವರನ್ನು ಭೇಟಿ ಮಾಡಿಸಿದ್ದ ಎಂಬ ಸಂಗತಿಯು ಮುನ್ನೆಲೆಗೆ ಬಂದಿತ್ತು.

 

ನಿಂಗಪ್ಪನಿಗೆ ಅಬಕಾರಿ, ಬಿಬಿಎಂಪಿ ಅಧಿಕಾರಿಗಳೇ ಗುರಿ; ಎಫ್‌ಐಆರ್‍‌ನಲ್ಲಿಲ್ಲ ಎಸ್ಪಿ ಜೋಷಿ ಹೆಸರು

 

ಆರೋಪಿ ನಿಂಗಪ್ಪನು ಲೋಕಾಯುಕ್ತ ಎಸ್‌ ಪಿ ಶ್ರೀನಾಥ್ ಜೋಷಿ ಅವರನ್ನು ಬೆಂಗಳೂರಿನ ಐಷಾರಾಮಿ ಹೋಟೆಲ್‌ವೊಂದರಲ್ಲಿ ಅಬಕಾರಿ ಸಚಿವ ಆರ್‍‌ ಬಿ ತಿಮ್ಮಾಪುರ ಅವರನ್ನು ಭೇಟಿ ಮಾಡಿಸಿದ್ದ ಎಂದು ಗೊತ್ತಾಗಿದೆ. ಆರೋಪಿ ನಿಂಗಪ್ಪನಿಗೆ ಅಬಕಾರಿ ಸಚಿವ ಆರ್‍‌ ಬಿ ತಿಮ್ಮಾಪುರ ಅವರ ಆಪ್ತ ಸಹಾಯಕ ಎಂದು ಹೇಳಲಾಗಿರುವ ರಮೇಶ್‌ ಎಂಬಾತನೂ ಪರಿಚಯವಿದ್ದ ಎಂದು ಹೇಳಲಾಗಿದೆ.

 

ಲೋಕಾ ಎಸ್ಪಿ ಜೋಷಿ, ನಿಂಗಪ್ಪನೊಂದಿಗೆ ಅಬಕಾರಿ ಸಚಿವ ತಿಮ್ಮಾಪುರ ನಂಟು; ಐಷಾರಾಮಿ ಹೋಟೆಲ್‌ನಲ್ಲಿ ಭೇಟಿ?

 

ಲೋಕಾಯುಕ್ತ ಹೆಸರು ಹೇಳಿ ಸರ್ಕಾರಿ ಅಧಿಕಾರಿಗಳಿಂದ ಕೋಟ್ಯಂತರ ರುಪಾಯಿ ವಸೂಲು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ  ಆರೋಪಿ ನಿಂಗಪ್ಪ ಅಬಕಾರಿ ಇಲಾಖೆಯ ವಿವಿಧ ಅಧಿಕಾರಿಗಳಿಂದ ಕಳೆದ 6 ತಿಂಗಳಿನಿಂದಲೂ  ಹಣವನ್ನು ವಸೂಲಿ ಮಾಡಿರುವುದಾಗಿ ಒಪ್ಪಿಕೊಂಡಿದ್ದ ಎಂದು  ಲೋಕಾಯುಕ್ತ ಪೊಲೀಸ್‌ ವಿಭಾಗವು ಇದೀಗ ಅಧಿಕೃತವಾಗಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು.

 

ಅಲ್ಲದೇ ಆರೋಪಿ ನಿಂಗಪ್ಪ ಎಂಬಾತನು 6 ತಿಂಗಳಿನಿಂದಲೂ  ಅಧಿಕಾರಿಗಳಿಂದ ವಸೂಲಿ ಮಾಡಿದ್ದ ಹಣವನ್ನು ಕ್ರಿಪ್ಟೋ ಕರೆನ್ಸಿಯಲ್ಲಿಯೂ ಹೂಡಿಕೆ ಮಾಡಿದ್ದ ಎಂದು ‘ದಿ ಫೈಲ್‌’, ವರದಿ ಪ್ರಕಟಿಸಿತ್ತು. ಈ  ವರದಿಯು ಅಧಿಕಾರಿ ವರ್ಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

 

 

ಇದೀಗ ಲೋಕಾಯುಕ್ತ ಪೊಲೀಸ್‌ ವಿಭಾಗವು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿಯೂ ಕ್ರಿಪ್ಟೋ ಕರೆನ್ಸಿಯಲ್ಲಿ ಆರೋಪಿಯು ಹೂಡಿಕೆ ಮಾಡಿದ್ದಾನೆ ಎಂದು ಅಧಿಕೃತವಾಗಿ ಹೇಳಿತ್ತು.

 

 

ಇದು ‘ದಿ ಫೈಲ್‌’, ವರದಿಗೆ ಮತ್ತಷ್ಟು ಬಲ ಬಂದಂತಾಗಿದೆ.

 

ಲೋಕಾ ಹೆಸರಿನಲ್ಲಿ ವಸೂಲಿ; ಬಂಧಿತ ಆರೋಪಿಯೊಂದಿಗೆ ಮೂವರು ಸಚಿವರ ಆಪ್ತ ಕಾರ್ಯದರ್ಶಿಗಳ ನಂಟು?

 

ಪತ್ರಿಕಾ ಹೇಳಿಕೆಯಲ್ಲೇನಿತ್ತು?

 

ಆರೋಪಿ ನಿಂಗಪ್ಪ ಅಬಕಾರಿ ಇಲಾಖೆಯ ವಿವಿಧ ಅಧಿಕಾರಿಗಳಿಂದ ಕಳೆದ 6 ತಿಂಗಳಿನಿಂದ ಹಣವನ್ನು ವಸೂಲಿ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಈ ರೀತಿ ವಸೂಲಿ ಮಾಡಿದ ಹಣವನ್ನು ತನ್ನ ಹಾಗೂ ತನ್ನಸಂಬಂಧಿಕರುಗಳ ಹೆಸರಿನಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿರುತ್ತೇನೆಂದು ಒಪ್ಪಿಕೊಂಡಿರುತ್ತಾನೆ ಎಂದು ಹೇಳಲಾಗಿದೆ.

 

ಹಣ ವಸೂಲಿ, ಕ್ರಿಪ್ಟೋ ಕರೆನ್ಸಿಯಲ್ಲಿಯೂ ಹೂಡಿಕೆ; ‘ದಿ ಫೈಲ್‌’ ವರದಿ ಬೆನ್ನಲ್ಲೇ ಬಿಡುಗಡೆಯಾದ ಪತ್ರಿಕಾ ಹೇಳಿಕೆ

 

‘ಆತನ ಮೊಬೈಲ್‌ನ್ನು ಪರಿಶೀಲಿಸಲಾಗಿ ಸುಮಾರು 13 ಕ್ರಿಪ್ಟೋ ವ್ಯಾಲೆಟ್‌ಗಳಲ್ಲಿ ಹಣವನ್ನು ಹೂಡಿಕೆ ಮಾಡಿರುವುದು ಕಂಡು ಬಂದಿದೆ. ಹಣದ ಮೂಲ ಪತ್ತೆ ಹಚ್ಚುವ ಸಲುವಾಗಿ ಸದರಿ ವ್ಯಾಲೆಟ್‌ಗಳನ್ನು ಫ್ರೀಜ್‌ ಆಡಿ ತನಿಖೆ ಮುಂದುವರೆಸಲಾಗಿದೆ,’ ಎಂದು ವಿವರಿಸಿತ್ತು.

 

ಅಬಕಾರಿ ಇಲಾಖೆಯ ಯಾವ ಯಾವ ಅಧಿಕಾರಿಗಳು ಆರೋಪಿ ನಿಂಗಪ್ಪನಿಗೆ ಎಷ್ಟೆಷ್ಟು  ಹಣ ನೀಡುರುತ್ತಾರೆ ಎಂಬ ಬಗ್ಗೆ ತನಿಖೆಯನ್ನು ಮುಂದುವರೆಸಲಾಗಿದೆ. ಆರೋಪಿಯೊಂದಿಗೆ ಬೇರೆ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ವಾಟ್ಸ್‌ಪ್ ಸಂದೇಶಗಳು, ಕರೆಗಳ ವಿವರಗಳು ಮತ್ತು ವಾಟ್ಸ್‌ಪ್ ಕರೆಗಳ ವಿವರಗಳನ್ನು ಪರಿಶೀಲಿಸುತ್ತಿದ್ದು ಶಾಮೀಲಾಗಿರುವ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗುತ್ತಿರುತ್ತದೆ ಎಂದು ತಿಳಿಸಿತ್ತು.

 

ವಜಾಗೊಂಡಿರುವ ಮುಖ್ಯ ಪೇದೆ ನಿಂಗಪ್ಪ ಎಂಬಾತನು  8ಕ್ಕೂ ಹೆಚ್ಚು ಕೆಎಎಸ್‌ ಅಧಿಕಾರಿಗಳಿಂದ ಹಣ ವಸೂಲು ಮಾಡಿದ್ದ ಎಂದು ಹೇಳಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಮುಂದೆ,  ಸಚಿವರುಗಳ ಆಪ್ತ ಕಾರ್ಯದರ್ಶಿಗಳ ಹೆಸರು ಸೇರಿದಂತೆ ಹಲವರ ಹೆಸರುಗಳನ್ನು ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗಿತ್ತು.

 

ಬಂಧಿತ ಆರೋಪಿ ಕೋಟ್ಯಂತರ ರೂ.ವಸೂಲಿ ಮಾಡಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಯು ಹಲವು ಪುರಾವೆ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿ ಅವರನ್ನು ಎತ್ತಂಗಡಿ ಮಾಡಲಾಗಿತ್ತು.

 

ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ?

 

ಹಣ ವಸೂಲು ಮಾಡುತ್ತಿದ್ದ ಎಂದು ಹೇಳಲಾಗಿರುವ ಆರೋಪಿತ ನಿಂಗಪ್ಪ , ಲೋಕಾಯುಕ್ತದ ಕೆಲವು ಅಧಿಕಾರಿಗಳಿಂದ ಕ್ರಿಪ್ಟೋ ಕರೆನ್ಸಿಯಲ್ಲಿಯೂ ಹೂಡಿಕೆ ಮಾಡಿಸಿದ್ದ. ಬೆಂಗಳೂರು ನಗರ ಹೊರತುಪಡಿಸಿ ಉಳಿದ ಜಿಲ್ಲೆಗಳ ಲೋಕಾ ಎಸ್ಪಿಗಳಿಂದಲೂ ಕ್ರಿಪ್ಟೋ ಕರೆನ್ಸಿಯಲ್ಲಿ ಮಧ್ಯವರ್ತಿಗಳ ಮೂಲಕ ಹೂಡಿಕೆ ಮಾಡಿಸಿದ್ದ ಎಂಬ ಆಪಾದನೆ ಕೇಳಿ ಬಂದಿತ್ತು.

 

ಅಬಕಾರಿ ಡಿಸಿಗಳಿಂದ ತಿಂಗಳಿಗೆ ಲಕ್ಷಕ್ಕೂ ಹೆಚ್ಚು ವಸೂಲಿ!

 

ಹಣಕ್ಕಾಗಿ ಬೇಡಿಕೆ ಮತ್ತು ಹಣ ನೀಡದೇ ಇದ್ದ ಹಲವು ಅಧಿಕಾರಿಗಳಿಗೆ ಬೆದರಿಕೆಯೊಡ್ಡಿದ್ದಾನೆ ಎಂದು ಆರೋಪಿತನಾಗಿರುವ ನಿಂಗಪ್ಪ, ಅಬಕಾರಿ ಡಿಸಿಗಳಿಂದ ತಿಂಗಳಿಗೆ ಲಕ್ಷಕ್ಕೂ ಹೆಚ್ಚು ವಸೂಲು ಮಾಡಿದ್ದಾನೆ ಎಂಬ ಆಪಾದನೆ ಕೇಳಿ ಬಂದಿದೆ. ವಿಜಯನಗರ ಮೆಟ್ರೋ ಸ್ಟೇಷನ್‌, ಜೀವನ್‌ ಭೀಮಾ ನಗರ, ಎಂ ಜಿ ರಸ್ತೆ, ಜೆಡಿಎಸ್‌ನ ಹಳೇ ಕಚೇರಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹಣವನ್ನು ವಸೂಲು ಮಾಡಿದ್ದ ಎಂದು ಹೇಳಲಾಗಿತ್ತು.

 

ಅಬಕಾರಿ ಹಗರಣವೊಂದರಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗಿರುವ 100ಕ್ಕೂ ಹೆಚ್ಚು ಅಬಕಾರಿ ಅಧಿಕಾರಿಗಳಿಂದ ತಿಂಗಳಿಗೆ ತಲಾ 1 ಲಕ್ಷ ರು ನಂತೆ ವಸೂಲು ಮಾಡಲಾಗುತ್ತಿತ್ತು. ಈ ಮಧ್ಯೆ ಇದೇ ಹಗರಣಕ್ಕೆ ಸಂಬಂಧಿಸಿದಂತೆ ಕೆಲವು ಅಬಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸ್‌ ವಿಭಾಗದ ಮತ್ತೊಬ್ಬ ಎಸ್‌ಪಿಯೊಬ್ಬರು ಮೊಕದ್ದಮೆ ದಾಖಲಿಸಿದ್ದರು ಎಂದು ತಿಳಿದು ಬಂದಿತ್ತು.

 

ಕೋಟ್ಯಂತರ ರು. ಕಪ್ಪುಹಣ ವರ್ಗಾವಣೆ; ಅಶ್ವಿನ್‌ ಕುಕೃತ್ಯದ ಬಗ್ಗೆ ಸಾಕ್ಷ್ಯ ನುಡಿದ ಇ ಡಿ ಉಪ ನಿರ್ದೇಶಕ

 

ಪ್ರತಿ ತಿಂಗಳೂ ತಲಾ 1 ಲಕ್ಷ ರು ನೀಡುತ್ತಿದ್ದರೂ ಸಹ ಮೊಕದ್ದಮೆ ದಾಖಲಾಗಿದ್ದಕ್ಕೆ ಈಗಾಗಲೇ ಹಣ ಕೊಟ್ಟಿದ್ದ ಅಧಿಕಾರಿಗಳು ಆರೋಪಿತ ನಿಂಗಪ್ಪ ವಿರುದ್ಧ ತಿರುಗಿ ಬಿದ್ದಿದ್ದರು ಎಂದು ಗೊತ್ತಾಗಿದೆ.

 

ಕೆಲ ವರ್ಷಗಳ ಹಿಂದೆ ನಿಂಗಪ್ಪ, ಸೇವೆಯಿಂದ ವಜಾಗೊಂಡಿದ್ದ. ಬಳಿಕ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಸರಕಾರಿ ಅಧಿಕಾರಿಗಳನ್ನು ಬೆದರಿಸಿ ಸುಲಿಗೆಯನ್ನೇ ವೃತ್ತಿ ಮಾಡಿಕೊಂಡಿದ್ದ. ಈ ಸಂಬಂಧ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹಲವು ಬಾರಿ ಜೈಲು ಸೇರಿದ್ದ ಎಂದು ತಿಳಿದು ಬಂದಿದೆ.

 

ಲೋಕಾ ಪೊಲೀಸರ ಶೋಧ; ಬರಿಗೈಯಲ್ಲಿ ಮರಳಿದ ಪೊಲೀಸರು, ತಲೆಮರೆಸಿಕೊಂಡಿದ್ದಾರೆಯೇ ಜೋಷಿ?

 

ವಿಶೇಷವೆಂದರೇ ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿಯೂ ಲೋಕಾಯುಕ್ತರಾಗಿದ್ದ ಭಾಸ್ಕರರಾವ್‌ ಅವರ ಪುತ್ರ ಮತ್ತು ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ಹಲವರಿಂದ ಹಣಕ್ಕಾಗಿ ಬೇಡಿಕೆ ಇರಿಸಿದ್ದರು. ಆ ಸಂದರ್ಭದಲ್ಲಿ ಲೋಕಾಯುಕ್ತ ಎಸ್ಪಿಯಾಗಿದ್ದ ಸೋನಿಯಾ ನಾರಂಗ್ ಅವರು ಈ ಪ್ರಕರಣವನ್ನು ಬಹಿರಂಗಪಡಿಸಿದ್ದರು. ಅಲ್ಲದೇ ಲೋಕಾಯುಕ್ತ ಹುದ್ದೆಗೆ ಭಾಸ್ಕರರಾವ್‌ ಅವರು ರಾಜೀನಾಮೆ ನೀಡಿದ್ದರು. ಹಾಗೂ ಅವರ ಪುತ್ರ ಅಶ್ವಿನ್‌ ರಾವ್‌ ಸಹ ಪೊಲೀಸರ ಬಂಧನಕ್ಕೆ ಒಳಗಾಗಿದ್ದ.

 

ಈ ಪ್ರಕರಣದ ನಂತರ ಲೋಕಾಯುಕ್ತಕ್ಕಿದ್ದ ಪೊಲೀಸ್‌ ಅಧಿಕಾರವನ್ನು ಮೊಟಕುಗೊಳಿಸಿ, ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸಲಾಗಿತ್ತು. ಆ ನಂತರ ಎಸಿಬಿಯನ್ನೂ ರದ್ದುಗೊಳಿಸಿ ಲೋಕಾಯುಕ್ತ ಸಂಸ್ಥೆಗೆ ಪುನಃ ಪೊಲೀಸ್‌ ಅಧಿಕಾರವನ್ನು ಮರು ಸ್ಥಾಪಿಸಲಾಗಿತ್ತು.  ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಎರಡು ವರ್ಷ ಪೂರ್ಣಗೊಳಿಸಿರುವ ಹೊತ್ತಿನಲ್ಲೇ  ಲೋಕಾಯುಕ್ತ ಹೆಸರಿನಲ್ಲಿ ನಿಂಗಪ್ಪ ಎಂಬಾತ ಹಣ ವಸೂಲಿ ಮಾಡಿರುವ ಪ್ರಕರಣವು ಮುನ್ನೆಲೆಗೆ ಬಂದಿದೆ. ಅಲ್ಲದೇ  ಲೋಕಾಯುಕ್ತ ಸಂಸ್ಥೆಯ ವಿಶ್ವಾಸಾರ್ಹತೆಯ ಪ್ರಶ್ನೆಯೂ ಎದುರಾಗಿದೆ.

Your generous support will help us remain independent and work without fear.

Latest News

Related Posts