ಗ್ರಾಮೀಣ ಮೂಲಸೌಕರ್ಯ ನಿಧಿ ಸಾಲ; 9 ಜಿಲ್ಲೆಗಳಲ್ಲಿ ಕನಿಷ್ಠ ಬಳಕೆ, ಪ್ರಮಾಣಪತ್ರವನ್ನೇ ಸಲ್ಲಿಸದ 11 ಜಿಲ್ಲೆಗಳು

ಬೆಂಗಳೂರು; ರಸ್ತೆ, ವಿದ್ಯುತ್‌, ಅರೋಗ್ಯ ಸೇವೆಗಳು ಸೇರಿದಂತೆ ಇನ್ನಿತರೆ ಮಹತ್ತರ ಉದ್ದೇಶಗಳನ್ನು ಸಾಧಿಸುವ ಉದ್ದೇಶದಿಂದ  ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಪಡೆದಿರುವ  ಒಟ್ಟು 8,364.68 ಕೋಟಿ ರು ಸಾಲವನ್ನು ಬಳಸಿಕೊಳ್ಳುವಲ್ಲಿ ರಾಜ್ಯದ 18 ಜಿಲ್ಲೆಗಳು ಹಿಂದುಳಿದಿವೆ.

 

ಅಲ್ಲದೇ ಮಂಜೂರಾಗಿದ್ದ ಬಹು ಕೋಟಿ ಸಾಲದ ಮೊತ್ತದಲ್ಲಿ ಬಹುತೇಕ ಜಿಲ್ಲೆಗಳು  ಕನಿಷ್ಠ ಮೊತ್ತವನ್ನು ಬಳಕೆ ಮಾಡಿವೆ. ಹಾಗೆಯೇ ಹಲವು ಜಿಲ್ಲೆಗಳು ಯೋಜನೆ ಪೂರ್ಣಗೊಂಡ ವರದಿಗಳನ್ನೇ ಸಲ್ಲಿಸಿಲ್ಲ ಎಂಬ ಸಂಗತಿಯೂ ಸಹ ಇದೀಗ ಬಹಿರಂಗವಾಗಿವೆ.

 

ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಒದಗಿಸಿದ್ದ ಒಟ್ಟು 8,364.68 ಕೋಟಿ ರು ಸಾಲದ ಪೈಕಿ 2025ರ ಮಾರ್ಚ್‌ ಅಂತ್ಯಕ್ಕೆ 5,675.65 ಕೋಟಿ ರು ಮಾತ್ರ ವಿತರಣೆ ಮಾಡಿದೆ. ವಿತರಣೆಗೆ ಇನ್ನೂ 2,689.03 ಕೋಟಿ ರು ಬಾಕಿ ಉಳಿಸಿಕೊಂಡಿದೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮೇಳನದಲ್ಲಿ ಆರ್‍‌ಐಡಿಎಫ್‌ ಯೋಜನೆ ಕುರಿತು ಚರ್ಚೆ ನಡೆದಿತ್ತು. ಈ ಸಮ್ಮೇಳನಕ್ಕೆ ಇಲಾಖೆಯು ನೀಡಿರುವ ಸಮಗ್ರ ವಿವರ ಮತ್ತು ಅಂಕಿ ಅಂಶಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಗದಗ್‌ ಸೇರಿದಂತೆ 9 ಜಿಲ್ಲೆಗಳಿಗೆ 1,575.43 ಕೋಟಿ ರು ಸಾಲ ಮಂಜೂರಾಗಿದ್ದರೂ ಸಹ ಅತ್ಯಂತ ಕನಿಷ್ಟ ಮೊತ್ತವನ್ನು ಬಳಕೆ ಮಾಡಿವೆ. ಹಾಗೆಯೇ 5,175.39 ಕೋಟಿ ರು ಮೊತ್ತದ ಅತೀ ಹೆಚ್ಚಿನ ಮೊತ್ತದ ಯೋಜನೆಗಳನ್ನು ಅನುಷ್ಠಾನಗೊಳಿಸಿರುವ ಬೆಳಗಾವಿ ಜಿಲ್ಲೆ ಸೇರಿದಂತೆ 11 ಜಿಲ್ಲೆಗಳು ಯೋಜನೆ ಪೂರ್ಣಗೊಂಡ ಪ್ರಮಾಣ ಪತ್ರದ ವರದಿಯನ್ನೇ ಸಲ್ಲಿಸಿಲ್ಲ.

 

ರಾಜ್ಯದ 31 ಜಿಲ್ಲೆಗಳ ಪೈಕಿ ಬೆಂಗಳೂರು ನಗರ ಸೇರಿದಂತೆ ಒಟ್ಟು 9 ಜಿಲ್ಲೆಗಳಿಗೆ ಈ ಯೋಜನೆಯಡಿಯಲ್ಲಿ 1,575.43 ಕೋಟಿ ರು ಸಾಲ ಮಂಜೂರಾಗಿತ್ತು. ಈ ಪೈಕಿ 2025ರ ಮಾರ್ಚ್‌ ಅಂತ್ಯಕ್ಕೆ ಕೇವಲ 389.07 ಕೋಟಿ ರು ಮಾತ್ರ ವಿತರಣೆ ಆಗಿದೆ. ಸಾಲ ವಿತರಣೆಗೆ ಇನ್ನೂ 1,186.36 ಕೋಟಿ ರು ಬಾಕಿ ಇದೆ. ಹೀಗಾಗಿ ಈ ಯೋಜನೆಗಳ ಅನುಷ್ಠಾನದ ಪ್ರಗತಿಯು ತೃಪ್ತಿಕರವಾಗಿಲ್ಲ.

 

ಇನ್ನು ಹಾವೇರಿ ಸೇರಿದಂತೆ 9 ಜಿಲ್ಲೆಗಳು ಮಾತ್ರ ಪ್ರಗತಿಯು ಸಾಧಾರಣ ಮಟ್ಟದಲ್ಲಿವೆ. ಈ ಜಿಲ್ಲೆಗಳಿಗೆ ಒಟ್ಟಾರೆ 1,983.14 ಕೋಟಿ ರು ಸಾಲ ಮಂಜೂರಾಗಿತ್ತು. ಈ ಪೈಕಿ 2025ರ ಮಾರ್ಚ್‌ ಅಂತ್ಯಕ್ಕೆ 994.53 ಕೋಟಿ ರು ವಿತರಣೆಯಾಗಿದೆ. ವಿತರಣೆಗೆ ಇನ್ನೂ 988.61 ಕೋಟಿ ರು ಬಾಕಿ ಇರುವುದು ತಿಳಿದು ಬಂದಿದೆ.

 

ಕನಿಷ್ಠ ಬಳಕೆ ಮಾಡಿದ ಜಿಲ್ಲೆಗಳ ಪಟ್ಟಿ

 

ಗದಗ್ ಗೆ 124.85 ಕೋಟಿ ರು ಸಾಲ ನೀಡಲಾಗಿತ್ತು. 2023ರ ಮಾರ್ಚ್‌ 31ರ ಅಂತ್ಯಕ್ಕೆ 20.64 ಕೋಟಿ (ಶೇ 17) ರು ಮಾತ್ರ ವಿತರಣೆ ಮಾಡಿದೆ. ಬೆಂಗಳೂರು ನಗರ ಜಿಲ್ಲೆಗೆ 126.02 ಕೋಟಿ ರು ಸಾಲ ಮಂಜೂರಾಗಿತ್ತು. ಈ ಪೈಕಿ 21.46 ಕೋಟಿ ರು (ಶೇ.17) ವಿತರಣೆ ಮಾಡಿದೆ. ಬೆಂಗಳೂರು ಗ್ರಾಮಾಂತರ ಕ್ಕೆ 125.98ಕೋಟಿ ರು ಸಾಲ ಮಂಜೂರಾಗಿತ್ತು. ಈ ಪೈಕಿ 30.90 ಕೋಟಿ ರು (ಶೇ. 25) ವಿತರಣೆ ಆಗಿರುವುದು ಗೊತ್ತಾಗಿದೆ.

 

 

ದಕ್ಷಿಣ ಕನ್ನಡ ಜಿಲ್ಲೆಗೆ 42.67 ಕೋಟಿ ರು ಮಂಜೂರಾಗಿದ್ದರೇ 26.66 ಕೋಟಿ ರು (ಶೇ.27) ವಿತರಣೆ ಮಾಡಿದೆ. ಮಂಡ್ಯ ಜಿಲ್ಲೆಗೆ 45.94 ಕೋಟಿ ರು ಸಾಲ ಮಂಜೂರಾಗಿದ್ದರೇ 12.91 ಕೋಟಿ ರು (ಶೇ 28) ವಿತರಣೆ ಮಾಡಿದೆ. ರಾಮನಗರ 226.24 ಕೋಟಿ ರು ಸಾಲ ಮಂಜೂರಾಗಿದ್ದರೇ 63.98 ಕೋಟಿ ರು (ಶೇ.28) ಮಾತ್ರ ವಿತರಣೆ ಮಾಡಿದೆ.
ಚಿಕ್ಕಬಳ್ಳಾಪುರಕ್ಕೆ 128.54 ಕೋಟಿ ರು ಸಾಲ ಮಂಜೂರಾಗಿತ್ತು. ಈ ಪೈಕಿ 38.45 ಕೋಟಿ ರು ವಿತರಣೆ (ಶೇ 30) ಆಗಿದೆ. ವಿಜಯಪುರ 157.69 ಕೋಟಿ ರು ಸಾಲ ಮಂಜೂರಾಗಿತ್ತು. ಈ ಪೈಕಿ 47.40 ಕೋಟಿ ರು (ಶೇ 30) ವಿತರಣೆ ಮಾಡಿದೆ. ರಾಯಚೂರು ಜಿಲ್ಲೆಗೆ 597.50 ಕೋಟಿ ರು ಸಾಲ ಮಂಜೂರಾಗಿದ್ದರೇ 126.69 ಕೋಟಿ ರು ಮಾತ್ರ (ಶೇ.21) ವಿತರಣೆ ಮಾಡಿದೆ.

 

ಸಾಧಾರಣ ಪ್ರಗತಿ ಸಾಧಿಸಿರುವ ಜಿಲ್ಲೆಗಳೆಷ್ಟು?

 

ಹಾವೇರಿ ಜಿಲ್ಲೆಗೆ 305.32 ಕೋಟಿ ರು ಸಾಲ ನೀಡಿದ್ದರೇ 2025ರ ಮಾರ್ಚ್‌ ಅಂತ್ಯಕ್ಕೆ 169.50 ಕೋಟಿ ರು ವಿತರಣೆ ಮಾಡಿದೆ. ಕೊಡಗು ಜಿಲ್ಲೆಗೆ 20.21 ಕೋಟಿ ರು ನೀಡಿದ್ದರೇ 10.88 ಕೋಟಿ ರು ವಿತರಣೆ ಮಾಡಿದೆ. 1,273.80 ಕೋಟಿ ರುನಷ್ಟು ಸಾಲ ಪಡೆದಿರುವ ಬೆಳಗಾವಿ ಜಿಲ್ಲೆಯು 653.09 ಕೋಟಿ ರು ಮಾತ್ರ ವಿತರಣೆ ಮಾಡಿರುವುದು ತಿಳಿದು ಬಂದಿದೆ.

 

ಅದೇ ರೀತಿ ಚಾಮರಾಜನಗರ ಜಿಲ್ಲೆಗೆ 90.17 ಕೋಟಿ ರು ಸಾಲ ಮಂಜೂರಾಗಿದ್ದರೇ ಈ ಪೈಕಿ 45.83 ಕೋಟಿ ರು ವಿತರಣೆ ಮಾಡಿತ್ತು. ಗುಲ್ಬರ್ಗ ಜಿಲ್ಲೆಗೆ 63.25 ಕೋಟಿ ರು ಸಾಲ ಒದಗಿಸಿದ್ದರೇ 28.57 ಕೋಟಿ ರು ಮಾತ್ರ ಬಳಸಿಕೊಂಡಿತ್ತು. ಬೀದರ್‍‌ ಜಿಲ್ಲೆಗೆ ಮಂಜೂರಾಗಿದ್ದ 54.48 ಕೋಟಿ ರು ಸಾಲದ ಪೈಕಿ 22.37 ಕೋಟಿ ರು ವಿತರಣೆ ಮಾಡಿತ್ತು.

 

 

ಕೊಪ್ಪಳಕ್ಕೆ ಒದಗಿಸಿದ್ದ 84.00 ಕೋಟಿ ರು ಸಾಲದ ಪೈಕಿ 33.46 ಕೋಟಿ ಬಳಸಿಕೊಂಡಿತ್ತು. ಕೋಲಾರ ಜಿಲ್ಲೆಯು ಪಡೆದುಕೊಂಡಿದ್ದ 37.92 ಕೋಟಿ ರು ಸಾಲದ ಪೈಕಿ 12.85 ಕೋಟಿ ರು ವಿತರಣೆ ಮಾಡಿತ್ತು. ಅದೇ ರೀತಿ ಬಳ್ಳಾರಿ ಜಿಲ್ಲೆಯು ಸಹ 53.49 ಕೋಟಿ ರು ಸಾಲದ ಪೈಕಿ 17.98 ಕೋಟಿ ರು ಮಾತ್ರ ಬಳಸಿಕೊಂಡಿತ್ತು.

 

ಅತೀ ಹೆಚ್ಚು ಸಾಲ ಮಂಜೂರಾಗಿದ್ದ ಜಿಲ್ಲೆಗಳಿವು

 

ಬೆಳಗಾವಿಗೆ 1,273 ಕೋಟಿ, ತುಮಕೂರಿಗೆ 642 ಕೋಟಿ, ಶಿವಮೊಗ್ಗಕ್ಕೆ 630 ಕೋಟಿ, ರಾಯಚೂರಿಗೆ 598 ಕೋಟಿ, ಯಾದಗಿರಿಗೆ 525 ಕೋಟಿ, ವಿಜಯನಗರಕ್ಕೆ 520 ಕೋಟಿ, ಚಿಕ್ಕಮಗಳೂರಿಗೆ 544 ಕೋಟಿ, ದಾವಣಗೆರೆಗೆ 453 ಕೋಟಿ, ಬಾಗಲಕೋಟೆಗೆ 359 ಕೋಟಿ ಮತ್ತು ಹಾಸನಕ್ಕೆ 345 ಕೋಟಿ ರು ಸಾಲ ಮಂಜೂರಾಗಿತ್ತು.

 

 

ಪ್ರಮಾಣ ಪತ್ರವನ್ನೇ ಸಲ್ಲಿಸದ ಜಿಲ್ಲೆಗಳ ಪಟ್ಟಿ

 

5,175.39 ಕೋಟಿ ರು ಮೊತ್ತದ ಅತೀ ಹೆಚ್ಚಿನ ಮೊತ್ತದ ಯೋಜನೆಗಳನ್ನು ಅನುಷ್ಠಾನಗೊಳಿಸಿರುವ ಬೆಳಗಾವಿ ಜಿಲ್ಲೆ ಸೇರಿದಂತೆ 11 ಜಿಲ್ಲೆಗಳು ಯೋಜನೆ ಪೂರ್ಣಗೊಂಡ ಪ್ರಮಾಣ ಪತ್ರದ ವರದಿಯನ್ನೇ ಸಲ್ಲಿಸಿಲ್ಲ. ಈ ಪಟ್ಟಿಯಲ್ಲಿ ಬಾಗಲಕೋಟೆ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಯಾದಗಿರಿ, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಾಮರಾಜನಗರ ಜಿಲ್ಲೆಯೂ ಸೇರಿದೆ.

 

ಇದು ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು, ಜೀವನದ ಗುಣಮಟ್ಟವನ್ನು ಸುಧಾರಿಸಲು ಮತ್ತು ಆರ್ಥಿಕ ಬೆಳವಣಿಗೆಗೆ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯು ಸಹಕಾರಿಯಾಗಿದೆ.

 

ರಸ್ತೆ, ನೀರಾವರಿ ವ್ಯವಸ್ಥೆ, ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆಗಳು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಮತ್ತು ಜೀವನದ ಗುಣಮಟ್ಟ ಸುಧಾರಣೆ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯಮ ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ, ತರಬೇತಿ ಮತ್ತು ಶಿಕ್ಷಣಕ್ಕೆ ಪ್ರವೇಶವನ್ನು ಹೆಚ್ಚಿಸುತ್ತದೆ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ.

Your generous support will help us remain independent and work without fear.

Latest News

Related Posts