ಗ್ಯಾರಂಟಿ ಯೋಜನೆಗೆ ಕ್ಲೌಡ್‌ ಸೇವೆ; ಇ-ಚಲನ್ ಹಗರಣದಲ್ಲಿ ಭಾಗಿಯಾಗಿರುವ ಕಂಪನಿಗೆ 4(ಜಿ) ವಿನಾಯಿತಿ

ಬೆಂಗಳೂರು; ರಾಜ್ಯದ ಗ್ಯಾರಂಟಿ ಯೋಜನೆಗಳ ಅಪ್ಲಿಕೇಷನ್‌ ಹೋಸ್ಟ್‌ ಮತ್ತು ಕ್ಲೌಡ್‌ ಸೇವೆ ಪಡೆಯಲು ಆಂಧ್ರ ಪ್ರದೇಶದ ಇ-ಚಲನ್‌ ಹಗರಣದಲ್ಲಿ ಭಾಗಿಯಾಗಿರುವ ಡಾಟಾ ಎವಾಲ್ಯು ಸೊಲ್ಯೂಷನ್ಸ್‌ ಕಂಪನಿಗೆ 4(ಜಿ) ವಿನಾಯಿತಿಯ ಆದೇಶ ಹೊರಡಿಸಿರುವುದನ್ನು ದಿ ಫೈಲ್‌’, ಆರ್‌ಟಿಐ ದಾಖಲೆಗಳ ಮೂಲಕ ಇದೀಗ ಹೊರಗೆಳೆಯುತ್ತಿದೆ.

 

ಮಾಜಿ ಡಿಜಿಪಿ ಎನ್‌ ಸಾಂಬಶಿವರಾವ್‌ ಅವರ ಅಳಿಯ ಕೊಮ್ಮಿರೆಡ್ಡಿ ಅವಿನಾಶ್‌ ನಿರ್ದೇಶಕರಾಗಿರುವ ಕಂಪನಿಯಿಂದಲೇ ಕ್ಲೌಡ್‌ ಸೇವೆಯನ್ನು ಪಡೆಯಲು 2023ರ ಜೂನ್‌ 28ರಂದು 4(ಜಿ) ಆದೇಶ ಹೊರಡಿಸಿತ್ತು. ಈ ಆದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಅನುಮೋದಿಸಿದ್ದರು.

 

ಆಂಧ್ರ ಪ್ರದೇಶದ ಇ-ಚಲನ್‌ ಹಗರಣದಲ್ಲಿ ಭಾಗಿಯಾಗಿರುವ ಕಂಪನಿಯಿಂದಲೇ ಕ್ಲೌಡ್‌ ಸೇವೆ ಪಡೆದಿರುವುದು ಇದೀಗ ವಿವಾದಕ್ಕೆ ದಾರಿಮಾಡಿಕೊಟ್ಟಿದೆ.

 

ಈ ಸಂಬಂಧ ‘ದಿ ಫೈಲ್‌’ 228 ಪುಟಗಳ ಕಡತವನ್ನು ಆರ್‍‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

ಸಂಚಾರ ದಂಡಗಳಿಗೆ ಸಂಬಂಧಿಸಿದಂತೆ ಸವಾರರಿಂದ ಪಡೆದ ಪಾವತಿಗಳನ್ನು ರೇಜರ್ ಪೇ ಎಂಬ ಪಾವತಿ ಗೇಟ್‌ವೇಗೆ ಜಮಾ ಮಾಡಲು ಇಲಾಖೆಯೊಂದಿಗೆ ಡೇಟಾ ಇವಾಲ್ಯೂ ಸೊಲ್ಯೂಷನ್ಸ್‌ ಕಂಪನಿಯು ಒಪ್ಪಂದ ಮಾಡಿಕೊಂಡಿತ್ತು. ಟ್ರಾಫಿಕ್‌ ಇ-ಚಲನ್‌ ಹೆಸರಿನಲ್ಲಿ ಸಂಗ್ರಹಿಸಿದ್ದ ಸಂಪೂರ್ಣ ದಂಡದ ಮೊತ್ತವಾದ 36.5 ಕೋಟಿ ರುಪಾಯಿಗಳನ್ನು ರೇಜರ್ ಪಿಇ ಎಂಬ ನಕಲಿ ಅಪ್ಲಿಕೇಶನ್‌ಗೆ ತಿರುಗಿಸಿತ್ತು. ಇದರಿಂದಾಗಿ ಆಂಧ್ರಪ್ರದೇಶ ರಾಜ್ಯ ಪೊಲೀಸ್ ಇಲಾಖೆಗೆ ಗಣನೀಯ ನಷ್ಟವನ್ನುಂಟುಮಾಡಿತ್ತು

 

ಈ ಹಗರಣಕ್ಕೆ ಸಂಬಂಧಿಸಿದಂತೆ ಕಂಪನಿಯ ನಿರ್ದೇಶಕ ಕೊಮ್ಮಿರೆಡ್ಡಿ ಅವಿನಾಶ್‌ ಅವರನ್ನು ಆಂಧ್ರ ಪೊಲೀಸರು ಬಂಧಿಸಿದ್ದರು.

 

ಆರೋಪಿತ ನಿರ್ದೇಶಕ ಕೊಮ್ಮಿರೆಡ್ಡಿ ಅವಿನಾಶ್‌, ಅಮೆಜಾನ್ ಕ್ಲೌಡ್ ಸೇವೆಗಳ ಮೂಲಕ ಬಹು ಕಂಪನಿಗಳಿಗೆ 52 ರೀತಿಯ ಸೇವೆಗಳನ್ನು ಒದಗಿಸುವ ಮೂಲಕ ತನ್ನ ವ್ಯವಹಾರವನ್ನು ವಿಸ್ತರಿಸಿದ್ದ ಎಂದು ಆಂಧ್ರ ಪೊಲೀಸರು ತನಿಖೆ ವೇಳೆಯಲ್ಲಿ ಪತ್ತೆ ಹಚ್ಚಿದ್ದರು. ಕ್ಲೌಡ್ ಸೇವೆಗಳನ್ನು ವಿಸ್ತರಿಸಿದ ಕಂಪನಿಗಳಿಂದ ಸೇವಾ ಶುಲ್ಕವಾಗಿ ವಸೂಲು ಮಾಡಿದ್ದ 25 ಕೋಟಿ ರುಪಾಯಿಗಳಿಗಾಗಿ ಆಂಧ್ರ ಪೊಲೀಸರು ಕ್ರಮ ಕೈಗೊಂಡಿದ್ದರು.

 

ಹೈದರಾಬಾದ್, ತೆಲಂಗಾಣ ಮತ್ತು ಕರ್ನಾಟಕದ ವಿವಿಧ ಬ್ಯಾಂಕ್‌ಗಳಲ್ಲಿ ರೇಜರ್ ಪಿಇ ಹೆಸರಿನಲ್ಲಿ ಈ ಕಂಪನಿಯ ನಿರ್ದೇಶಕ ಕೊಮ್ಮಿರೆಡ್ಡಿ ಅವಿನಾಶ್‌ ಖಾತೆಗಳನ್ನು ತೆರೆದಿದ್ದ. ಅಲ್ಲದೆ ಈ ಆರೋಪಿಯು ತೆಲಂಗಾಣದಲ್ಲಿ ವೈದ್ಯಕೀಯ ಸೇವೆಗಳು ಮತ್ತು ಡಿಸ್ಕಾಮ್‌ಗಳಿಗೆ ಸಂಬಂಧಿಸಿದ ಇಲಾಖೆಗೆ ಸೇವೆಗಳನ್ನು ಒದಗಿಸುತ್ತಿದ್ದರು. ಮತ್ತು ಕೇಂದ್ರ ಸರ್ಕಾರಕ್ಕೂ ಸಾಲ ಸೇವೆಗಳನ್ನು ನೀಡುತ್ತಿದ್ದರು.

 

ಆರೋಪಿಗಳು 2018 ರಿಂದ ಜನವರಿ 2019 ರವರೆಗೆ 36.58 ಕೋಟಿ ಹಣವನ್ನು ಬೇರೆಡೆಗೆ ತಿರುಗಿಸಿದ್ದರು. ಇಷ್ಟೆಲ್ಲಾ ಅರೋಪಗಳನ್ನು ಮೆತ್ತಿಕೊಂಡಿರುವ ಡಾಟಾ ಇವಾಲ್ಯೂ ಸೊಲ್ಯೂಷನ್ಸ್‌ ಕಂಪನಿಯಿಂದಲೇ ರಾಜ್ಯದ ಕಾಂಗ್ರೆಸ್‌ ಸರ್ಕಾರವು ಗ್ಯಾರಂಟಿ ಯೋಜನೆಗಳ ಅಪ್ಲಿಕೇಷನ್‌ನ್ನು ಕ್ಲೌಡ್‌ನಲ್ಲಿ ಹೋಸ್ಟ್‌ ಸೇವೆ ಪಡೆದಿರುವುದು ದಾಖಲೆಗಳಿಂದ ಗೊತ್ತಾಗಿದೆ.

 

ಡಾಟಾ ಇವಾಲ್ಯೂ ಸೊಲ್ಯೂಷನ್ಸ್‌ ಕಂಪನಿಯ ವಿರುದ್ಧ ಇಂತಹದ್ದೊಂದು ಗುರುತರವಾದ ಆರೋಪ ಮತ್ತು ಕಂಪನಿಯ ನಿರ್ದೇಶಕನ್ನೇ ಆಂಧ್ರ ಪೊಲೀಸರು ಬಂಧಿಸಿದ್ದರೂ ಸಹ ರಾಜ್ಯ ಕಾಂಗ್ರೆಸ್‌ ಸರ್ಕಾರದ ಆರ್ಥಿಕ ಇಲಾಖೆ ಮತ್ತು ಇ-ಆಡಳಿತ ಇಲಾಖೆಯು ಪರಿಶೀಲನೆಯನ್ನೇ ನಡೆಸಿಲ್ಲ. ಕಡತದಲ್ಲಿನ ಟಿಪ್ಪಣಿ ಹಾಳೆಯಲ್ಲಿ ಎಲ್ಲಿಯೂ ಈ ಕಂಪನಿಯ ಮೇಲಿನ ಆರೋಪ ಮತ್ತು ಕಂಪನಿಯ ನಿರ್ದೇಶಕ ಕೊಮ್ಮಿರೆಡ್ಡಿ ಅವಿನಾಶ್‌ ಎಂಬಾತ ಬಂಧನಕ್ಕೊಳಗಾಗಿರುವ ಕುರಿತು ಕಡತದದಲ್ಲಿ ಚರ್ಚಿಸಿಲ್ಲ.

 

ರಾಜ್ಯದಲ್ಲಿ ನಡೆದಿರುವುದೇನು?

 

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಗೆ ಅವಶ್ಯಕವಿದ್ದ ಕ್ಲೌಡ್‌ ಸೇವೆಯನ್ನು ಇಎಸ್‌ಡಿಎಸ್‌ ನಿಂದ 89.90 ಲಕ್ಷ ರು ವೆಚ್ಚದಲ್ಲಿ ಗರಿಷ್ಠ 2 ತಿಂಗಳ ಅವಧಿಗೆ ಪಡೆಯಲು ಕೆಟಿಪಿಪಿ ಕಾಯ್ದೆಯ 4(ಜಿ) ವಿನಾಯಿತಿ ಪಡೆದಿತ್ತು.

 

 

ಈ ಸಂಬಂಧ ಆಡಳಿತ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ ಪ್ರಸ್ತಾವಿತ ಸೇವೆಯನ್ನು ಒಟ್ಟಾರೆ 1,55,53,761 ವೆಚ್ಚದಲ್ಲಿ ಸಂಗ್ರಹಣೆ ಮಾಡಿಕೊಳ್ಳಲು ಉದ್ದೇಶಿಸಿತ್ತು. ಇದರ ವ್ಯತ್ಯಾಸದ ಮೊತ್ತವಾಗಿರುವ 65,53,761 ರು. ವೆಚ್ಚಕ್ಕೆ ವಿನಾಯಿತಿ ನೀಡಲು ಪ್ರಸ್ತಾವಿಸಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

 

 

 

ಈ ಮಧ್ಯೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಜಾರಿಗೊಳಿಸಿದ್ದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಇ-ಆಡಳಿತ ಇಲಾಖೆಗೆ ಕ್ಲೌಡ್‌ ಸೇವೆಯು ಅವಶ್ಯಕವಿತ್ತು. ಇಎಸ್‌ಡಿಎಸ್‌ನಿಂದ ಪಡೆದಿದ್ದ ಕ್ಲೌಡ್‌ ಮೇಲೆ ಟ್ರಾಫಿಕ್‌ ಹೆಚ್ಚಿತ್ತು. ಹೀಗಾಗಿ ಹೆಚ್ಚುವರಿಯಾಗಿ ಡಾಟಾ ಇವಾಲ್ಯೂ ಸೊಲ್ಯೂಷನ್ಸ್‌ ಕಂಪನಿಯ AZURE AND AWSಗಳಿಂದ ಕ್ಲೌಡ್‌ ಸೇವೆ ಪಡೆಯಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಯು 4(ಜಿ) ವಿನಾಯಿತಿ ಕೋರಿತ್ತು.

 

‘ಪ್ರಸ್ತುತ ಸದರಿ ಕ್ಲೌಡ್‌ನ ಮೇಲೆ ಟ್ರಾಫಿಕ್‌ ಜಾಸ್ತಿ ಇರುವುದರಿಂದ ಹೆಚ್ಚುವರಿಯಾಗಿ M/S DataEvolve ಸಂಸ್ಥೆಯ Azure and AWS ಗಳಿಂದ ಕ್ಲೌಡ್‌ ಸೇವೆಯನ್ನು ಕ್ರಮವಾಗಿ 33.13 ಲಕ್ಷ ಮತ್ತು 30.00 ಲಕ್ಷ ರು. ವೆಚ್ಚದಲ್ಲಿ ಕ್ಲೌಡ್‌ ನಲ್ಲಿ ಅಪ್ಲಿಕೇಷನ್‌ಗಳನ್ನು ಹೋಸ್ಟ್‌ ಮಾಡುವ ದಿನದವರೆಗೆ ಪಡೆಯಲು ಕೆಟಿಪಿಪಿ ಕಾಯ್ದೆ ಸೆಕ್ಷನ್‌ 4(ಜಿ) ಅಡಿ ವಿನಾಯಿತಿ ನೀಡಬೇಕು,’ ಎಂದು ಕೋರಿತ್ತು.

 

 

ಇದಕ್ಕೂ ಮೊದಲೇ ಡಾಟಾ ಎವಾಲ್ಯೂ ಸೊಲ್ಯೂಷನ್ಸ್‌ ಕಂಪನಿಯು 2023ರ ಜೂನ್‌ 10ರಂದು ಇ-ಆಡಳಿತ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು ಎಂಬುದು ಕಡತದ ಹಾಳೆಗಳಿಂದ ತಿಳಿದು ಬಂದಿದೆ.

 

ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಒತ್ತಡ ಹೆಚ್ಚಿತ್ತು. ಗ್ಯಾರಂಟಿ ಯೋಜನೆಗಳ ಪೈಕಿ ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಯುವನಿಧಿ ಯೋಜನೆ ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್‌ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿತ್ತು. ಇದಕ್ಕಾಗಿ ಅಪ್ಲಿಕೇಷನ್‌ ಹೋಸ್ಟ್‌ ಮಾಡಲು ಖಾಸಗಿ ಸೇವಾದಾರರಿಂದ ಪಡೆಯಲು ಮುಂದಾಗಿತ್ತು.

 

 

ಸೇವಾ ಸಿಂಧು ಅರ್ಜಿಯ ಮೂಲಕ ನಾಗರಿಕರಿಂದ ಗಣನೀಯ ಪ್ರತಿಕ್ರಿಯೆಯನ್ನು ಪಡೆಯುವ ನಿರೀಕ್ಷೆಯಿಟ್ಟುಕೊಂಡಿತ್ತು. ಕ್ಲೌಡ್ ಸೇವಾ ಪೂರೈಕೆದಾರರ ಮೂಲಕ ಅಪ್ಲಿಕೇಶನ್ ನ್ನು ಹೋಸ್ಟ್ ಮಾಡಲು ಇ-ಆಡಳಿತ ಇಲಾಖೆಯು ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ಸಮಯದ ಅಭಾವದಿಂದಾಗಿ ಕೆಟಿಟಿಪಿ ಟೆಂಡರ್ ಪ್ರಕ್ರಿಯೆಯ ನಂತರ ಕ್ಲೌಡ್ ಇನ್ಫ್ರಾ ಸೇವಾ ಪೂರೈಕೆದಾರರ ಆಯ್ಕೆ ಪ್ರಕ್ರಿಯೆ ನಡೆಸಿಲ್ಲ ಎಂದು ತನ್ನ ಅಭಿಪ್ರಾಯದಲ್ಲಿ ತಿಳಿಸಿತ್ತು.

 

 

‘ಆದ್ದರಿಂದ 3 ಹೆಸರಾಂತ ಸೇವಾ ಪೂರೈಕೆದಾರರಿಂದ ಕೋಟೇಶನ್‌ಗಳನ್ನು ಕೋರಲಾಗಿದೆ. ಇಎಸ್‌ಡಿಎಸ್‌ನಲ್ಲಿ, Azure and AWSಗೆ ಹೋಲಿಸಿದರೆ ಸಿಎಸ್‌ಪಿ ತೆರಿಗೆಗಳನ್ನು ಒಳಗೊಂಡಂತೆ ಕನಿಷ್ಠ 44.95 ಲಕ್ಷ ಪ್ರತಿ ತಿಂಗಳಿಗೆ ವೆಚ್ಚವಾಗಲಿದೆ,’ ಎಂದು ಉಲ್ಲೇಖಿಸಿತ್ತು.

 

ಈ 2 ತಿಂಗಳ ಕಾಲ ಸೇವೆಗಳನ್ನು ಪಡೆಯಲು ಒಟ್ಟಾರೆ 89.90 ಲಕ್ಷ ರು ಗಳು ಆಗಲಿದೆ. ಆದ್ದರಿಂದ, ಕೆಟಿಪಿಪಿ 4(ಜಿ) ಅಡಿಯಲ್ಲಿ ಇಎಸ್‌ಡಿಗಳಿಂದ ಕ್ಲೌಡ್ ಸೇವೆಗಳನ್ನು ಗರಿಷ್ಠ 2 ತಿಂಗಳ ಅವಧಿಗೆ 89.90 ಲಕ್ಷ ಮೊತ್ತಕ್ಕೆ ಅಥವಾ ಕ್ಲೌಡ್ ಸೇವೆಗಳಲ್ಲಿ ಅರ್ಜಿಗಳನ್ನು ಹೋಸ್ಟ್ ಮಾಡುವ ದಿನದವರೆಗೆ ಆಗುವ ವಾಸ್ತವಿಕ ವೆಚ್ಚ ಭರಿಸಬೇಕು. 5 ಗ್ಯಾರಂಟಿ ಯೋಜನೆಗಳ ಅರ್ಜಿಗಳನ್ನು ಹೋಸ್ಟ್‌ ಮಾಡುವ ಗರಿಷ್ಠ ಸಮಯದಲ್ಲಿ ಒತ್ತಡ ಉಂಟಾಗಲಿದೆ. ಇದನ್ನು ನಿಭಾಯಿಸಬೇಕಿದೆ ಎಂದು ಆರ್ಥಿಕ ಇಲಾಖೆಗೆ ವಿವರಿಸಿತ್ತು.

 

 

ಇದನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು 4 (ಜಿ) ವಿನಾಯಿತಿಯನ್ನು ನೀಡಿತ್ತು. 2023ರ ಜೂನ್‌ 13ರಂದು ಇಎಸ್‌ಡಿಎಸ್‌ನಿಂದ 89.90 ಲಕ್ಷ ರು. ವೆಚ್ಚದಲ್ಲಿ ಗರಿಷ್ಠ 2 ತಿಂಗಳ ಅವಧಿಗೆ ಅಥವಾ ಕ್ಲೌಡ್‌ನಲ್ಲಿ ಅಪ್ಲಿಕೇಷನ್‌ಗಳನ್ನು ಹೋಸ್ಟ್‌ ಮಾಡಲು ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದರು.

 

 

 

ಆದರೆ ಎಸ್‌ಡಿಸಿಯಲ್ಲಿ ಸೇವಾ ಸಿಂಧು ಅಪ್ಲಿಕೇಷನ್‌ನ್ನು ಹೋಸ್ಟ್‌ ಮಾಡಿದ್ದರೂ ಸಹ ಅದನ್ನು ಕ್ಲೌಡ್‌ಗೆ ಅಪ್‌ಲೋಡ್‌ ಮಾಡುವಾಗ ತಾಂತ್ರಿಕ ದೋಷ ಕಂಡು ಬಂದಿತ್ತು ಹೀಗಾಗಿ ಸೇವಾ ಸಿಂಧು ಅರ್ಜಿಗಳು ಸಿದ್ಧಗೊಂಡಿರಲಿಲ್ಲ. ತಾಂತ್ರಿಕ ದೋಷಗಳನ್ನು ನಿವಾರಣೆ ಮಾಡುವ ಸಂಬಂಧ ಮತ್ತೊಂದು ಕ್ಲೌಡ್‌ ಸೇವೆ ಒದಗಿಸುವ ಪೂರೈಕೆದಾರರ ಹೊಂದಬೇಕಿದೆ ಎಂದು ಇ-ಆಡಳಿತ ಇಲಾಖೆಯು ಪ್ರಸ್ತಾವಿಸಿತ್ತು.

 

 

ಈ ಸಂಬಂಧ ಎಡಬ್ಲ್ಯೂಎಸ್‌ ನ ಪಾಲುದಾರರಾದ m/s dataevolve ನಿಂದ ಒಟ್ಟು 30 ಲಕ್ಷ ರುಪಾಯಿಗಳಿಗೆ ಕ್ಲೌಡ್‌ ಸೇವೆ ಪಡೆಯಲು ದರ ಪಟ್ಟಿಯನ್ನು ಒದಗಿಸಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

 

 

ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಲು ಅರ್ಜಿದಾರರ ನಡುವೆಯೇ ನೂಕುನುಗ್ಗಲು ಇತ್ತು. ಒಂದು ದಿನದಲ್ಲಿ 10 ಲಕ್ಷ ಅರ್ಜಿಗಳನ್ನು ದಾಟಿದ್ದವು. ಮತ್ತು 3 ಪ್ರಮುಖ ಗ್ಯಾರಂಟಿ ಯೋಜನೆಗಳಾದ ಗೃಹ ಜ್ಯೋತಿ, ಗೃಹ ಲಕ್ಷ್ಮಿ ಮತ್ತು ಶಕ್ತಿ ಯೋಜನೆ ನೋಂದಾವಣೆ ಅವಧಿ ಮುಗಿಯಲಿದೆ. ಹೀಗಾಗಿ ಬೃಹತ್ ಹೊರೆಯನ್ನು ನಿಭಾಯಿಸಲು  ಹೆಚ್ಚುವರಿ ಕ್ಲೌಡ್ ಆಯ್ಕೆಗಳ ಅಗತ್ಯವಿದೆ ಎಂದು ಪ್ರಸ್ತಾವಿಸಿತ್ತು.

 

 

ಇದನ್ನೂ ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು m/s dataevolve ನಿಂದ ಕ್ರಮವಾಗಿ 33.13 ಲಕ್ಷ ಮತ್ತು 30.00 ಲಕ್ಷ ರು ವೆಚ್ಚದಲ್ಲಿ ಕ್ಲೌಡ್‌ ಸೇವೆ ಪಡೆಯಲು 2023ರ ಜೂನ್‌ 28ರಂದು ಅಧಿಸೂಚನೆ ಹೊರಡಿಸಿತ್ತು.

SUPPORT THE FILE

Latest News

Related Posts