ಭೂಮಿ ಖರೀದಿಯಲ್ಲಿ 100 ಕೋಟಿ ಅಕ್ರಮಕ್ಕೆ ಹುನ್ನಾರ; ಬೌರಿಂಗ್‌ ಇನ್‌ಸ್ಟಿಟ್ಯೂಟ್ ವಿರುದ್ಧ ದೂರು

ಬೆಂಗಳೂರು; ನಗರದ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಒಂದಾದ ಬೌರಿಂಗ್‌ ಇನ್ಸಿಟಿಟ್ಯೂಟ್‌ ವಿರುದ್ಧ ಜಮೀನು ಖರೀದಿ ವ್ಯವಹಾರದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಜಮೀನು ಖರೀದಿ ವ್ಯವಹಾರದಲ್ಲಿ ಸುಮಾರು 100 ಕೋಟಿ ರು ಲಪಟಾಯಿಸುವ ಹುನ್ನಾರ ನಡೆದಿದೆ ಎಂದು ಕ್ಲಬ್‌ನ ಕೆಲವು ಸದಸ್ಯರು ಸಹಕಾರ ಸಂಘಗಳ ನಿಬಂಧಕರಿಗೆ ದೂರು ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.

 

ಜಮೀನು ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಕ್ಲಬ್‌ನ ಕೆಲ ಸದಸ್ಯರು ಪತ್ತೆ ಹಚ್ಚಿ ದಾಖಲೆ ಸಮೇತ ದೂರು ನೀಡಿದ್ದರೂ ಸಹಕಾರ ಇಲಾಖೆಯು ಇದುವರೆಗೂ ಯಾವುದೇ ಕ್ರಮವಹಿಸಿಲ್ಲ ಎಂದು ಗೊತ್ತಾಗಿದೆ.

 

ಸುಮಾರು 100 ಕೋಟಿ ರುಗಳನ್ನು ಲಪಟಾಯಿಸುವ ಸಂಚು ನಡೆದಿದೆ ಎಂಬ ಆರೋಪವಿದ್ದರೂ ಸಹ ಸಹಕಾರ ಸಂಘಗಳ ಇಲಾಖೆಯು ಕನಿಷ್ಠ ವಿಚಾರಣೆಯನ್ನೂ ನಡೆಸದಿರುವುದು ಸಂಶಯಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

ಈ ಕುರಿತು ಸಚಿವ ಕೆ ಎನ್‌ ರಾಜಣ್ಣ ಅವರೊಂದಿಗೂ ಕ್ಲಬ್‌ನ ಕೆಲ ಸದಸ್ಯರು ಚರ್ಚಿಸಿದ್ದರು. ಆದರೂ ಸಹ ಈ ದೂರಿನ ಬಗ್ಗೆ ಯಾವುದೇ ಕ್ರಮವಹಿಸಿಲ್ಲ ಎಂದು ತಿಳಿದು ಬಂದಿದೆ.

 

ಕ್ಲಬ್‌ನ ಕೆಲ ಸದಸ್ಯರು ನೀಡಿರುವ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ದೂರಿನಲ್ಲೇನಿದೆ?

 

ಜಮೀನು ಖರೀದಿ ಸೇರಿದಂತೆ ಇನ್ನಿತರೆ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಬೇಕಾದಲ್ಲಿ ಕ್ಲಬ್‌ನ ಸರ್ವ ಸದಸ್ಯರ ಸಭೆಯ ಪೂರ್ವಾನುಮತಿ ಪಡೆಯಬೇಕು. ಆದರೆ ಕ್ಲಬ್‌ನ ಆಡಳಿತ ಮಂಡಳಿಯು ಸಭೆಯ ಪೂರ್ವಾನುಮತಿ ಪಡೆಯದೇ ಜಮೀನು ಖರೀದಿ ಸಂಬಂಧ 10 ಕೋಟಿ ರು ಮುಂಗಡವಾಗಿ ಪಾವತಿಸಿದೆ ಎಂದು ಕ್ಲಬ್‌ನ ಕೆಲವು ಸದಸ್ಯರು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಅದೇ ರೀತಿ ಮುಂದಿನ ಜೂನ್‌ 6ರಂದು ನಡೆಸಲು ನಿಗದಿಯಾಗಿರುವ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ರದ್ದುಗೊಳಿಸಬೇಕು ಎಂದು ಕ್ಲಬ್‌ನ ಕೆಲವು ಸದಸ್ಯರು ಸಹಕಾರ ಸಂಘಗಳ ರಿಜಿಸ್ಟ್ರಾರ್‍‌ಗೆ ನೀಡಿರುವ ದೂರಿನಲ್ಲಿ ಕೋರಿರುವುದು ತಿಳಿದು ಬಂದಿದೆ.

 

 

ಆಂಧ್ರದ ಗಡಿಯಲ್ಲಿ 24 ಎಕರೆ ಖರೀದಿ!

 

ಬೌರಿಂಗ್‌ ಇನ್ಸಿಟಿಟ್ಯೂಟ್‌ ಆಡಳಿತ ಮಂಡಳಿಯು ಆಂಧ್ರದ ಗಡಿಯಲ್ಲಿನ ಬಾಗೇಪಲ್ಲಿಯಲ್ಲಿ ಬೌರಿಂಗ್‌ ಕ್ಲಬ್‌-2ನ್ನು ನಿರ್ಮಾಣ ಮಾಡಲು ಮುಂದಾಗಿದೆ. ಇದಕ್ಕೆ ಬಾಗೇಪಲ್ಲಿಯಲ್ಲಿ 24 ಖರೀದಿಸಲಿದೆ. ಎಕರೆಗೆ 4 ಕೋಟಿ ರು ನಂತೆ ಪಾವತಿಸಲಿದೆ. ಆದರೆ ವಾಸ್ತವದಲ್ಲಿ ಬಾಗೇಪಲ್ಲಿಯಲ್ಲಿ ಮಾರುಕಟ್ಟೆ ದರವು ಎಕರೆಗೆ ಅಂದಾಜು 50 ಲಕ್ಷ ರು ಇದೆ. ಆದರೂ ಕ್ಲಬ್‌ನ ಆಡಳಿತ ಮಂಡಳಿಯು ಎಕರೆಗೆ 4 ಕೋಟಿಯಂತೆ ಒಟ್ಟಾರೆ 100 ಕೋಟಿ ರು ಪಾವತಿಸಲು ನಿರ್ಧಾರ ತೆಗೆದುಕೊಂಡಿದೆ. ಇದೊಂದೇ ವ್ಯವಹಾರದಲ್ಲಿ ಕ್ಲಬ್‌ ಗೆ 100 ಕೋಟಿ ರು ನಷ್ಟವಾಗಲಿದೆ ಎಂದು ಕೆಲ ಸದಸ್ಯರು ಆಪಾದಿಸಿರುವುದು ದೂರಿನಿಂದ ಗೊತ್ತಾಗಿದೆ.

 

ಪೂರ್ವಾನುಮತಿಯಿಲ್ಲದೇ 10 ಕೋಟಿ ಮುಂಗಡ!

 

ಬಾಗೇಪಲ್ಲಿಯಲ್ಲಿ 24 ಎಕರೆ ಜಮೀನು ಖರೀದಿಸುವ ಪ್ರಸ್ತಾವದ ಕುರಿತು ಕ್ಲಬ್‌ನ ಯಾವುದೇ ಷೇರುದಾರರ ಸರ್ವ ಸದಸ್ಯರ ಸಭೆಯಲ್ಲಿ (ಎಸ್‌ಜಿಎಂ) ಕಾರ್ಯಸೂಚಿಯಾಗಿ ಮಂಡಿಸಿಲ್ಲ. ಸರ್ವ ಸದಸ್ಯರ ಒಪ್ಪಿಗೆಯನ್ನೇ ಪಡೆಯದೇ ಆಡಳಿತ ಮಂಡಳಿಯು ಭೂಮಿ ಮಾರಾಟಗಾರರೊಂದಿಗೆ ಒಡಂಬಡಿಕೆ (ಎಂಒಯು) ಮಾಡಿಕೊಂಡಿದೆ. ಈ ವ್ಯವಹಾರ ನಡೆಯುವ ಮುನ್ನ ಸರ್ವ ಸದಸ್ಯರ ಪೂರ್ವಾನುಮತಿ ಪಡೆದಿಲ್ಲ. ಅಲ್ಲದೇ 10 ಕೋಟಿ ರು.ಗಳನ್ನು 2025ರ ಮಾರ್ಚ್‌ 31ಕ್ಕೂ ಮುನ್ನವೇ ಪಾವತಿಸಿದೆ ಎಂದು ದೂರಿನಲ್ಲಿ ಸದಸ್ಯರು ಆರೋಪಿಸಿರುವುದು ತಿಳಿದು ಬಂದಿದೆ.

 

 

2024-25ನೇ ಹಣಕಾಸು ವರ್ಷದಲ್ಲಿ ಕೈಗೊಂಡಿರುವ ನಿರ್ಧಾರಗಳಿಗೆ ಅನುಮೋದನೆ ಪಡೆಯಲು 2025ರ ಜೂನ್‌ 6ರಂದು ವಾರ್ಷಿಕ ಸರ್ವ ಸದಸ್ಯರ ಸಭೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಬಾಗೇಪಲ್ಲಿಯಲ್ಲಿನ 24 ಎಕರೆ ಖರೀದಿಗೂ ಸಹ ಅನುಮೋದನೆ ಪಡೆಯಲು ಸಂಚು ನಡೆಸಿದ್ದಾರೆ ಎಂದು ಕೆಲ ಸದಸ್ಯರು, ಸಹಕಾರ ಸಂಘಗಳ ನಿಬಂಧಕರ ಗಮನಸೆಳೆದಿರುವುದು ದೂರಿನಿಂದ ಗೊತ್ತಾಗಿದೆ.

 

ಮತ್ತೊಂದು ಸಂಗತಿ ಎಂದರೇ ಬೌರಿಂಗ್‌ ಕ್ಲಬ್‌ ಆಡಳಿತ ಸಮಿತಿಯು ಕೇವಲ ವಾರ್ಷಿಕ ಸದಸ್ಯರ ಸಭೆಯ ನೋಟೀಸ್‌ನ್ನು ಮಾತ್ರ ಪ್ರಕಟಿಸಿದೆ. ಇದುವರೆಗೂ ಸಭೆಯ ಕಾರ್ಯಸೂಚಿಯನ್ನಾಗಲೀ, ಅಥವಾ ಆರ್ಥಿಕ ವರದಿಯನ್ನಾಗಲೀ ಕ್ಲಬ್‌ನ ಸದಸ್ಯರಿಗೆ ವಿತರಿಸಿಲ್ಲ. ನಿಯಮಗಳ ಪ್ರಕಾರ ಎಜಿಎಂ ನೋಟೀಸ್‌ನೊಂದಿಗೇ ಅಜೆಂಡಾ ಹಾಗೂ ಆರ್ಥಿಕ ವರದಿ ನೀಡಬೇಕು. ಆದರೆ ಈ ಯಾವ ಪ್ರಕ್ರಿಯೆಯೂ ನಡೆದಿಲ್ಲ ಎಂದು ಸದಸ್ಯರು ಆಪಾದಿಸಿರುವುದು ತಿಳಿದು ಬಂದಿದೆ.

 

 

8 ವರ್ಷಗಳಲ್ಲಿ 400 ಕೋಟಿ ಮೊತ್ತದ ಯೋಜನೆಗಳು

 

ಕ್ಲಬ್‌ನ ಆಡಳಿತ ಮಂಡಳಿಯು ಕಳೆದ 8 ವರ್ಷಗಳಲ್ಲಿ ಸುಮಾರು 400 ಕೋಟಿ ರು ಮೊತ್ತದ ವಿವಿಧ ಯೋಜನೆಗಳ ಬಗ್ಗೆ ನಿರ್ಧಾರಗಳನ್ನು ಕೈಗೊಂಡಿದೆ. ಇಲ್ಲಿಯೂ ಸಹ ಅವ್ಯವಹಾರಗಳು ನಡೆದಿವೆ. ಪ್ರಸ್ತುತ ಕ್ಲಬ್‌ನಲ್ಲಿ 5,500 ಶಾಶ್ವತ ಸದಸ್ಯರಿದ್ದಾರೆ. ಅವರಲ್ಲಿ ಕೇವಲ 300ರಿಂದ 500 ಸದಸ್ಯರು ಮಾತ್ರ ಸರ್ವ ಸದಸ್ಯರ ಸಭೆಗೆ ಹಾಜರಾಗುತ್ತಾರೆ. ಹೀಗಿದ್ದರೂ ಸಹ ಪ್ರಮುಖ ನಿರ್ಣಯಗಳಿಗೆ ಅನುಮತಿ ಪಡೆಯಲಾಗುತ್ತಿದೆ ಎಂದು ಕೆಲ ಸದಸ್ಯರು ದೂರಿರುವುದು ಗೊತ್ತಾಗಿದೆ.

 

ಪ್ರಶ್ನಿಸಿದರೆ ಬೆದರಿಕೆ, ಕಿರುಕುಳ

 

ಕ್ಲಬ್‌ನ ಆಡಳಿತ ಮಂಡಳಿಯ ನಿರ್ಣಯ, ತೀರ್ಮಾನಗಳನ್ನು ಪ್ರಶ್ನಿಸುವ ಸದಸ್ಯರಿಗೆ ಬೆದರಿಸುವುದು ಮತ್ತು ಕಿರುಕುಳ ನೀಡಲಾಗುತ್ತಿದೆ. ಹಾಗೆಯೇ ಸದಸ್ಯತ್ವನ್ನು ಅಮಾನತುಗೊಳಿಸಲಾಗುತ್ತಿದೆ ಎಂದು ಸದಸ್ಯರು ದೂರಿದ್ದಾರೆ. ಅದೇ ರೀತಿ ಆಡಳಿತ ಮಂಡಳಿಯು ತನ್ನ ಅಕ್ರಮಗಳನ್ನು ಮುಚ್ಚಿ ಹಾಕಿಕೊಳ್ಳಲು ಸರ್ಕಾರದ ಉನ್ನತ ಅಧಿಕಾರಿಗಳಿಗೆ ಶುಲ್ಕದಲ್ಲಿ ಭಾರೀ ರಿಯಾಯಿತಿ ತೋರುತ್ತಿದ್ದಾರೆ ಎಂದೂ ಆಪಾದಿಸಿರುವುದು ತಿಳಿದು ಬಂದಿದೆ.

SUPPORT THE FILE

Latest News

Related Posts