ಬೆಂಗಳೂರು; ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ದತ್ತಾಂಶಗಳ ಅಧ್ಯಯನ ವರದಿಯಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಜಾತಿ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂದು ಕೇಳಿ ಬಂದಿದ್ದ ದೂರುಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ತಳ್ಳಿ ಹಾಕಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ದತ್ತಾಂಶಗಳ ಅಧ್ಯಯನ ವರದಿ ಕುರಿತು ಸಚಿವ ಸಂಪುಟದ ಮುಂದುವರೆದ ಸಭೆಗೆ ಇಲಾಖೆಯು ಮಂಡಿಸಿರುವ ವಿವರಣೆಗಳಲ್ಲಿ ಈ ಕುರಿತು ಮಾಹಿತಿಯನ್ನು ಒದಗಿಸಿದೆ. ಇಲಾಖೆಯು ಸಚಿವ ಸಂಪುಟಕ್ಕೆ ಒದಗಿಸಿರುವ ಈ ವಿವರಣೆಯು ‘ದಿ ಫೈಲ್’ಗೆ ಲಭ್ಯವಾಗಿದೆ.
2015ರ ದತ್ತಾಂಶಗಳ ಅಧ್ಯಯನ ವರದಿಯಲ್ಲಿ ಒಕ್ಕಲಿಗರು ಮತ್ತು ಲಿಂಗಾಯತ ಜಾತಿ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಇದರ ವಿರುದ್ಧ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯವು ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿತ್ತು. ಅಲ್ಲದೇ ಈ ವರದಿಯು ಅವೈಜ್ಞಾನಿಕವಾಗಿದ್ದು ಸರ್ಕಾರವು ಹೊಸದಾಗಿ ಸಮೀಕ್ಷೆ ನಡೆಸಬೇಕು ಎಂದು ಈ ಎರಡೂ ಸಮುದಾಯಗಳು ಆಗ್ರಹಿಸಿದ್ದವು. ಇದರ ಬೆನ್ನಲ್ಲೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ನೀಡಿರುವ ವಿವರಣೆಯು ಮುನ್ನೆಲೆಗೆ ಬಂದಿದೆ.
ವಿವರಣೆಯಲ್ಲೇನಿದೆ?
ಒಕ್ಕಲಿಗ ಮತ್ತು ಲಿಂಗಾಯತ ಜಾತಿ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂಬ ದೂರು ಸಹಜವಾಗಿಯೇ ಹಿಂದುಳಿದ ಮತ್ತು ಮುಂದುವರೆದ ಕೆಲ ಜಾತಿಗಳ ಕೆಲವರ ಅಭಿಪ್ರಾಯವಾಗಿದೆ. ಜನಗಣತಿಯಂತೆ ಕರ್ನಾಟಕದ 2001ರ ಜನಸಂಖ್ಯೆ 5.28 ಕೋಟಿ, 2011ರ ಜನಸಂಖ್ಯೆ ಪ್ರಕಾರ 6.11 ಕೋಟಿಯಾಗಿದೆ. ‘ಅಂದರೇ 10 ವರ್ಷದ ಏರಿಕೆ ಪ್ರಮಾಣ ಶೇ.15.6 (ಅದರ ಹಿಂದಿನ ದಶಕಕ್ಕೆ ಹೋಲಿಸಿದಾಗ ಶೇ.1.47 ಇಳಿಕೆಯಾಗಿದೆ). ಅಂದರೆ, ವಾರ್ಷಿಕ ಶೇ. 1.3ರಷ್ಟು ಜನಸಂಖ್ಯೆ ಏರಿಕೆ ದರವಾಗಿರುವುದು ನಿರ್ವಿವಾದದ ಅಂಶವಾಗಿದೆ. ಹಾಗೆ 2015ರಲ್ಲಿ ಒಟ್ಟು ಜನಸಂಖ್ಯೆಯನ್ನು ಅಂದಾಜು ಮಾಡಿದಾಗ (projected) 6.35 ಕೋಟಿಯಾಗಿರುತ್ತದೆ. ಅಂದಿಗೆ ಸರ್ವೆ ಕಾರ್ಯದಲ್ಲಿ ಮಾಹಿತಿ ಸಂಗ್ರಹಿಸಲು ಸಾಧ್ಯವಾದದ್ದು 5.98 ಕೋಟಿ ಅಂದರೆ ಶೇ.97.23 ಆಗುತ್ತದೆ,’ ಎಂದು ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿರುವ ಟಿಪ್ಪಣಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಯಾವುದೇ ಜಾತಿಗೆ ಸೇರಿಸಲು ಸಾಧ್ಯವಿಲ್ಲ
ಒಕ್ಕಲಿಗರಲ್ಲಿ ಅಂದಾಜು ಮೂವತ್ತು ಲಕ್ಷದಷ್ಟು ಹಾಗೂ ಲಿಂಗಾಯತರಲ್ಲಿ ಅಂದಾಜು ನಲವತ್ತು ಲಕ್ಷದಷ್ಟು ಮತ್ತು ಇತರೆ ಕೆಲವು ಜಾತಿಗಳಲ್ಲಿ ಹತ್ತು ಲಕ್ಷದಷ್ಟು ಕಡಿಮೆ ಇದೆ ಎಂಬಂತೆ ಅಂದರೆ ಒಂದು ಕೋಟಿ ಜನಸಂಖ್ಯೆ ಕಡಿಮೆ ತೋರಿಸಿದ್ದಾರೆ ಎಂದು ವಾದವಿದೆ. ಹಾಗಾದರೇ ಆ ಒಂದು ಕೋಟಿ ಜನಸಂಖ್ಯೆಯನ್ನು ಯಾವ ಜಾತಿಯಲ್ಲಿ ಸೇರಿಸಿದ್ದಾರೆ ಎಂದು ಪರಿಶೀಲಿಸಿದರೇ ಯಾವುದೇ ಜಾತಿಗೆ ಸೇರಿಸಲು ಸಾಧ್ಯವಿಲ್ಲ ಎಂದು ಇಲಾಖೆಯು ಸಮರ್ಥನೆಗಳನ್ನು ಒದಗಿಸಿರುವುದು ತಿಳಿದು ಬಂದಿದೆ.
8 ಕೋಟಿ ಎಂದು ಲೆಕ್ಕ ಹಾಕಬೇಕೆ?
ಎಲ್ಲರೂ ತಮ್ಮ ತಮ್ಮ ಜಾತಿಯ ಸಂಖ್ಯೆ ಕಡಿಮೆಯಾಗಿದೆ ಎಂದೇ ಭಾವಿಸಿರುತ್ತಾರೆ. ಅಂದರೆ ಆ ಒಂದು ಕೋಟಿ ಜನಸಂಖ್ಯೆಯನ್ನು ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಬಿಟ್ಟಿದ್ದಾರೆ ಎಂದು ಭಾವಿಸಿ ಸೇರ್ಪಡೆ ಮಾಡಿದರೇ ಈಗಿನ ಕರ್ನಾಟಕ ಜನಸಂಖ್ಯೆ 7ಕೋಟಿಗೆ ಬದಲಾಗಿ 8 ಕೋಟಿ ಎಂದು ಲೆಕ್ಕ ಹಾಕಬೇಕಾಗುತ್ತದೆ. ಇದನ್ನು ಒಪ್ಪುವಂತಹದ್ದಲ್ಲವೆಂದಾದಲ್ಲಿ ಸರ್ವೆಯ ಅಂಕಿ ಅಂಶಗಳು ಬಹುಪಾಲು ಸತ್ಯಕ್ಕೆ ಹತ್ತಿರವಾದ ಅಂಕಿ ಅಂಶಗಳೇ ಆಗಿವೆ ಎಂದು ಇಲಾಖೆಯು ಟಿಪ್ಪಣಿಯಲ್ಲಿ ಮಾಹಿತಿ ಒದಗಿಸಿದೆ.
‘ಈಗ ರಾಜ್ಯದಲ್ಲಿ 7 ಕೋಟಿ ಜನಸಂಖ್ಯೆ ಇದೆ ಎಂದು ಪರಿಗಣಿಸಿದರೆ ಲಿಂಗಾಯತರ ಜನಸಂಖ್ಯೆ 7765 ಲಕ್ಷ ಒಕ್ಕಲಿಗರ ಜನಸಂಖ್ಯೆ 72.06 ಲಕ್ಷ ಎಂದೇ ಪರಿಗಣಿಸಬೇಕಾಗುತ್ತದೆ,’ ಎಂದು ಇಲಾಖೆಯು ವಿವರಿಸಿರುವುದು ಗೊತ್ತಾಗಿದೆ.
ಒಕ್ಕಲಿಗ, ಲಿಂಗಾಯತರಿಗೆ ಅನ್ಯಾಯವಾಗಿದೆಯೇ?
ಈ ವರದಿಯಿಂದ ಸಾಕಷ್ಟು ಅನ್ಯಾಯವಾಗಿದೆ ಎಂದು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಹಲವು ಮುಖಂಡರು, ಚುನಾಯಿತ ಜನಪ್ರತಿನಿಧಿಗಳು ಸಹ ಆರೋಪಿಸಿದ್ದರು. ಈ ಆರೋಪಗಳಿಗೂ ಇಲಾಖೆಯು ಸಮಜಾಯಿಷಿಯನ್ನು ನೀಡಿದೆ.
ಆಯೋಗವು ಈಗ ಪ್ರವರ್ಗ 3 ಎ ಗೆ ಇರುವ ಶೇ.4 ಮೀಸಲಾತಿಯನ್ನು ಶೇ.7ಕ್ಕೆ, ಪ್ರವರ್ಗ 3 ಬಿ ಇರುವ ಶೇ. 5 ಮೀಸಲಾತಿಯನ್ನು ಶೇ.8ಕ್ಕೆ ಏರಿಸಿ ಶಿಫಾರಸ್ಸು ಮಾಡಿದೆ. ಹೀಗಾಗಿ ಆಯಾ ವರ್ಗಗಳಲ್ಲಿ ಮೀಸಲಾತಿ ದುಪ್ಪಟ್ಟಾಗಿದೆ. ಈ ಪ್ರವರ್ಗಗಳಲ್ಲಿ ಹಿಂದುಳಿದವರಿಗೆ ಗಣನೀಯ ಪ್ರಮಾಣದಲ್ಲಿ ಮೀಸಲಾತಿಯ ಅನುಕೂಲವಾಗುತ್ತದೆ. ಆದ್ದರಿಂದ ಆಯೋಗವು ಅನ್ಯಾಯ ಮಾಡಿದೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅನುಮಾನಗಳಿಗೆ ತೆರೆ ಎಳೆದಿರುವುದು ಗೊತ್ತಾಗಿದೆ.
ಕರ್ನಾಟಕದ ಜನಸಂಖ್ಯೆ ಇನ್ನೂ ಹೆಚ್ಚು ಇದೆಯೇ?
ಕೇಂದ್ರ ಸರ್ಕಾರ ನಡೆಸಿರುವ ಜನಗಣತಿ 2011ರ ಪ್ರಕಾರ ರಾಜ್ಯದ ಒಟ್ಟಾರೆ ಜನಸಂಖ್ಯೆ 6.11 ಕೋಟಿಯಾಗಿದೆ. 2015ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಂತೆ ರಾಜ್ಯದ ಒಟ್ಟಾರೆ ಜನಸಂಖ್ಯೆಯನ್ನು 6.35 ಕೋಟಿ ಎಂದು ಅಂದಾಜಿಸಲಾಗಿದೆ. 5.98 ಕೋಟಿ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಹಾಗಾಗಿ ಸಮೀಕ್ಷೆಯಲ್ಲಿ ದಾಖಲಾಗಿರುವ ಜನಸಂಖ್ಯೆ, 2011ರ ಜನಗಣತಿ ಸಂಖ್ಯೆಗೆ ವಾಸ್ತವವಾಗಿದೆ ಎಂದು ಉತ್ತರಿಸಿರುವುದು ತಿಳಿದು ಬಂದಿದೆ.
ಜಾತಿ ಒಡೆದಿದ್ದಾರೆಯೇ?
ಆಯೋಗದ ವರದಿಯ (ಪುಟ ಸಂಖ್ಯೆ 168 ಪ್ರಯಾರ 4 ಮತ್ತು 5ರಲ್ಲಿ) ವಿವರಿಸಿರುವಂತೆ ಎಲ್ಲಾ ಉಪ ಜಾತಿಗಳ ಮಾಹಿತಿ ಸಂಗ್ರಹಿಸಲಾಗಿದೆ. ಇದರ ಸೂಚ್ಯಂಕ ಏನೇ ಇದ್ದರೂ ಮುಖ್ಯ ಜಾತಿಯಡಿಯಲ್ಲಿ ಸೂಕ್ತವಾಗಿ ಪರಿಗಣಿಸಿ ಅದರಂತೆ, ವರದಿ ಸಲ್ಲಿಸಿದೆ. ಹೀಗಾಗಿ ಜಾತಿಯಿಂದ ಉಪ ಜಾತಿ ವಿಭಜಿಸಿ ಜಾತಿಯನ್ನು ಒಡೆದಿಲ್ಲ ಎಂದು ಇಲಾಖೆಯು ತನ್ನ ಉತ್ತರದಲ್ಲಿ ಸ್ಪಷ್ಟಪಡಿಸಿದೆ.