ಡಿ ಸಿ ಗಳ ದೃಢೀಕರಣವಿಲ್ಲ, ಶಿಫಾರಸ್ಸೂ ಇಲ್ಲ; ನೇರ ಮಾರ್ಗದಲ್ಲಿ ನಿರ್ಮಿತಿ ಕೇಂದ್ರಕ್ಕೆ 4 ಜಿ ವಿನಾಯಿತಿ

ಬೆಂಗಳೂರು;  ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನಿರ್ಮಿತಿ ಕೇಂದ್ರದಿಂದ ನಡೆಯುವ ಕಾಮಗಾರಿಗಳು ಕಳಪೆ ಮಟ್ಟದಿಂದ ಕೂಡಿವೆ ಎಂಬ ಗುರುತರವಾದ ಆರೋಪಗಳು ಮತ್ತು ಹಲವು ನಿರ್ಮಿತಿ ಕೇಂದ್ರಗಳ ವಿರುದ್ಧ ಸಿಬಿಐ ಸೇರಿದಂತೆ ಮತ್ತಿತರೆ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿದ್ದರೂ ಸಹ ಈಗಿನ ಕಾಂಗ್ರೆಸ್ ಸರ್ಕಾರವೂ ನಿರ್ಮಿತಿ ಕೇಂದ್ರಗಳಿಗೆ 4(ಜಿ) ವಿನಾಯಿತಿ ನೀಡಿ ಆದೇಶ ಹೊರಡಿಸಿದೆ.

 

ನಿರ್ಮಿತಿ ಕೇಂದ್ರಗಳು ಮತ್ತು ಕಾರ್ನಿಕ್‌ ಸಂಸ್ಥೆಯು ಅಧಿಸೂಚನೆಯಲ್ಲಿರುವ ಷರತ್ತುಗಳನ್ನು  ಪಾಲಿಸಿ  ಕಾರ್ಯನಿರ್ವಹಿಸಿರುವ ಕುರಿತು ಜಿಲ್ಲಾಧಿಕಾರಿಗಳು ಯಾವುದೇ ದೃಢೀಕರಣ ನೀಡಿಲ್ಲ ಮತ್ತು 4(ಜಿ) ವಿನಾಯಿತಿಗೆ ಯಾವುದೇ ಶಿಫಾರಸ್ಸು ಮಾಡಿಲ್ಲ. ಆದರೂ ವಸತಿ ಇಲಾಖೆಯು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರ ಸೂಚನೆಯಂತೆ ನೇರವಾಗಿ 4(ಜಿ) ವಿನಾಯಿತಿ ಪ್ರಸ್ತಾವ ಸಲ್ಲಿಸಿತ್ತು.

 

ವಸತಿ ಇಲಾಖೆಯ ಈ ಪ್ರಸ್ತಾವನೆಯ ಹಿಂದೆ ಗುತ್ತಿಗೆದಾರರ ಕೈವಾಡವಿದೆ ಎಂಬ ಆರೋಪಗಳಿವೆ. ಜಿಲ್ಲಾಧಿಕಾರಿಗಳಿಂದ ಯಾವುದೇ ದೃಢೀಕರಣ ಪತ್ರ ಮತ್ತು ಶಿಫಾರಸ್ಸು ನೀಡದೇ ಇದ್ದರೂ ಸಹ  ನಿರ್ಮಿತಿ ಕೇಂದ್ರಗಳಿಗೆ 4(ಜಿ) ವಿನಾಯಿತಿ ನೀಡಿ  2025ರ ಮಾರ್ಚ್‌ 12ರಂದು ಅಧಿಸೂಚನೆ ಹೊರಡಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

 

ಗುತ್ತಿಗೆದಾರರ ಹಿಡಿತದಲ್ಲಿರುವ ನಿರ್ಮಿತಿ ಕೇಂದ್ರಗಳ ಬಗ್ಗೆ ಸರ್ಕಾರಿ ಭರವಸೆಗಳ ಸಮಿತಿಯೂ ಭಾರೀ ಅಸಮಾಧಾನ ವ್ಯಕ್ತಪಡಿಸಿತ್ತು. ನಿರ್ಮಿತಿ  ಕೇಂದ್ರಗಳು ಗುತ್ತಿಗೆದಾರರನ್ನು ಅವಲಂಬಿಸುತ್ತಿರುವುದೇ ಕಳಪೆ ಕಾಮಗಾರಿ ಪ್ರಕರಣಗಳು ಹೆಚ್ಚಲು ಕಾರಣವಾಗಿವೆ. ಸರಕಾರ ಪರ್ಯಾಯ ಯೋಜನೆ ರೂಪಿಸಬೇಕು ಎಂದು ಭರವಸೆ ಸಮಿತಿಯು ಶಿಫಾರಸ್ಸು ಮಾಡಿದ್ದರೂ ಸಹ ಈಗಿನ ಕಾಂಗ್ರೆಸ್‌ ಸರ್ಕಾರವು 4(ಜಿ) ವಿನಾಯಿತಿಯನ್ನು ನೀಡಿ ಅಧಿಸೂಚನೆ ಹೊರಡಿಸಿರುವುದಕ್ಕೆ ಆರ್ಥಿಕ ಇಲಾಖೆಯಲ್ಲಿ ಭಾರೀ ಆಕ್ಷೇಪ ಕೇಳಿ ಬಂದಿದೆ.

 

ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’, ಆರ್‌ಟಿಐ ಅಡಿಯಲ್ಲಿ ಸಮಗ್ರ ದಾಖಲಾತಿಗಳನ್ನು ಪಡೆದುಕೊಂಡಿದೆ.

 

ವಸತಿ ಸಚಿವ ಬಿ ಝಡ್‌ ಜಮೀರ್‌ ಅಹ್ಮದ್‌ ಖಾನ್‌ ಅವರ ಸೂಚನೆಯಂತೆ ನಿರ್ಮಿತಿ ಕೇಂದ್ರಗಳಿಗೆ 4 (ಜಿ) ವಿನಾಯಿತಿ ಪ್ರಸ್ತಾವವು ಆರ್ಥಿಕ ಇಲಾಖೆಗೆ ಸಲ್ಲಿಕೆಯಾಗಿತ್ತು.

 

ಟಿಪ್ಪಣಿಯಲ್ಲೇನಿದೆ?

 

ಸರ್ಕಾರದ ವಿವಿಧ ಇಲಾಖೆಗಳ ಕಾಮಗಾರಿಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ನವೀನ ಕಟ್ಟಡ ನಿರ್ಮಾಣ ಸಾಮಗ್ರಿಗಳು, ಮೊದಲನೇ ಅಚ್ಚು ಹಾಕಿದ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ರಾಜ್ಯದ 31 ಜಿಲ್ಲಾ ನಿರ್ಮಿತಿ ಕೇಂದ್ರಗಳು ಕ್ಯಾಷುಟೆಕ್‌ ನಿರ್ಮಿತಿ ಕೇಂದ್ರ ಹಾಗೂ ಕಾರ್ನಿಕ್ ಸಂಸ್ಥೆಯ ಸೇವೆಗಳನ್ನು 2.00 ಕೋಟಿ ರು. ಗರಿಷ್ಠ ಮಿತಿಯಲ್ಲಿ ಕೈಗೊಳ್ಳಬೇಕಿದೆ. 2025-26ಏ ಸಾಲಿನ ಮಾರ್ಚ್‌ 2026ರ ಅಂತ್ಯದವರೆಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಅಧಿನಿಯಮ 1999 ಕಲಂ 4-ಜಿ ವಿನಾಯಿತಿ ನೀಡುವಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಟಿಪ್ಪಣಿಯಲ್ಲಿ ಸೂಚಿಸಿದ್ದರು.

 

 

ಅದರಂತೆ ವಸತಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ನವೀನ್‌ರಾಜ್‌ ಸಿಂಗ್‌ ಅವರು 2 ವರ್ಷಗಳ ಅವಧಿಗೆ 4 ಜಿ ವಿನಾಯಿತಿ ವಿಸ್ತರಿಸಬೇಕು ಎಂದು ಕೋರಿದ್ದರು. ಇದನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ಆಕ್ಷೇಪಣೆಗಳನ್ನು ಎತ್ತಿತ್ತು.

 

ಜಿಲ್ಲಾಧಿಕಾರಿಗಳ ದೃಢೀಕರಣವೇ ಇಲ್ಲ, ಶಿಫಾರಸ್ಸೂ ಇಲ್ಲ

 

2024ರ ಫೆ.19ರಂದೇ   ನಿರ್ಮಿತಿ ಕೇಂದ್ರಗಳಿಗೆ 4 (ಜಿ) ವಿನಾಯಿತಿಯನ್ನು ಒಂದು ವರ್ಷದ ಅವಧಿಗೆ ನೀಡಿತ್ತು.

 

ಈ ಅಧಿಸೂಚನೆಯಲ್ಲಿ ವಿಧಿಸಿದ್ದ ಷರತ್ತುಗಳನ್ನು ನಿರ್ಮಿತಿ ಕೇಂದ್ರಗಳು ಪಾಲಿಸಿವೆಯೇ ಎಂಬ ಬಗ್ಗೆ ವಸತಿ ಇಲಾಖೆಯು ಯಾವುದೇ ಅನುಪಾಲನೆ ವರದಿ ನೀಡಿಲ್ಲ. ಅಲ್ಲದೇ ಅಧಿಸೂಚನೆ ಹೊರಡಿಸಿದ ವರ್ಷದಲ್ಲಿ ನಿರ್ಮಿತಿ ಕೇಂದ್ರಗಳು ಮತ್ತು ಕಾರ್ನಿಕ್‌ ಸಂಸ್ಥೆಯು ಕಾರ್ಯನಿರ್ವಹಿಸಿರುವ ಕುರಿತು ಯಾವುದೇ ಜಿಲ್ಲೆಯ  ಜಿಲ್ಲಾಧಿಕಾರಿಗಳು ಯಾವುದೇ ದೃಢೀಕರಣ ನೀಡಿರಲಿಲ್ಲ. ಮತ್ತು ಕೆಟಿಪಿಪಿ ಕಾಯ್ದೆ ಸೆಕ್ಷನ್‌ 4 ಜಿ ವಿನಾಯಿತಿಯನ್ನು ಮುಂದುವರೆಸುವ ಕುರಿತು ಯಾವುದೇ ಶಿಫಾರಸ್ಸನ್ನಾಗಲೀ, ಪ್ರಸ್ತಾವನೆಯನ್ನಾಗಲೀ ಸಲ್ಲಿಸಿರಲಿಲ್ಲ ಎಂಬ ಸಂಗತಿಯು ಆರ್ಥಿಕ ಇಲಾಖೆಯ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

 

‘ಜಿಲ್ಲಾಧಿಕಾರಿಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ನಿರ್ಮಿತಿ ಕೇಂದ್ರಗಳ ಸೇವೆಗಳನ್ನು ಮುಂದುವರೆಸುವ ಕುರಿತು ಯಾವುದೇ ಜಿಲ್ಲಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸದೇ ಇದ್ರೂ ಆಡಳಿತ ಇಲಾಖೆಯು ಇಲಾಖೆ ಸಚಿವರ ಕೋರಿಕೆ ಮೇರೆಗೆ 4 (ಜಿ) ವಿನಾಯಿತಿ ಮುಂದುವರೆಸುವ ಪ್ರಸ್ತಾವನೆ ಸಲ್ಲಿಸಿದೆ,’ ಎಂದು ಆರ್ಥಿಕ ಇಲಾಖೆಯ  ಟಿಪ್ಪಣಿ ಹಾಳೆಯಲ್ಲಿ ದಾಖಲಿಸಿರುವುದು ಕಂಡು ಬಂದಿದೆ.

 

ಅದೇ ರೀತಿ 2024ರ ಫೆ.19ರಂದು ವಿಧಿಸಿದ್ದ ಷರತ್ತುಗಳನ್ನು ಎಲ್ಲಾ ನಿರ್ಮಿತಿ ಕೇಂದ್ರಗಳು ಮತ್ತು ಕಾರ್ನಿಕ್‌ ಸಂಸ್ಥೆಯು ಕಟ್ಟುನಿಟ್ಟಾಗಿ ಪಾಲಿಸಿರುವುದರ ಕುರಿತು ಜಿಲ್ಲಾಧಿಕಾರಿಗಳಿಂದ ದೃಢೀಕರಣ ಪತ್ರ ಪಡೆದು ಸೂಕ್ತ ಸಮರ್ಥನೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಪರಿಶೀಲಿಸಬಹುದು ಎಂದು ಆರ್ಥಿಕ ಇಲಾಖೆಯ ಅಧಿಕಾರಿ ಗೋಪಾಲ್‌ ಬಿ ವಿ ಅವರು ಟಿಪ್ಪಣಿ ಹಾಳೆಯಲ್ಲಿ ವಿವರಿಸಿದ್ದರು.

 

 

ಆದರೆ ಆರ್ಥಿಕ ಇಲಾಖೆಯು ನೀಡಿರುವ ಕಡತದಲ್ಲಿ ಎಲ್ಲಿಯೂ ಜಿಲ್ಲಾಧಿಕಾರಿಗಳು ನೀಡಿರುವ ದೃಢೀಕರಣ ಪತ್ರಗಳ ಪ್ರತಿಗಳು ಕಂಡು ಬಂದಿಲ್ಲ. ಆದರೆ ಕರ್ನಾಟಕ ರಾಜ್ಯ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕರು ನೇರವಾಗಿ ವಸತಿ ಇಲಾಖೆಗೆ ಕಡತ ಸಲ್ಲಿಸಿದ್ದರು. ಇದೇ ಕಡತವನ್ನಾಧರಿಸಿ ವಸತಿ ಇಲಾಖೆಯ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಟಿಪ್ಪಣಿ ಹೊರಡಿಸಿದ್ದರು.

 

ಆದರೂ ವಸತಿ ಇಲಾಖೆಯ ಸಚಿವ ಬಿ ಝಡ್‌ ಜಮೀರ್‌ ಅಹ್ಮದ್‌ ಖಾನ್‌ ಅವರ ಒತ್ತಡ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಮಿತಿ ಕೇಂದ್ರಗಳಿಗೆ 4 (ಜಿ) ವಿನಾಯಿತಿ ನೀಡಿ ಅಧಿಸೂಚನೆ ಹೊರಡಿಸಲು ಅನುಮೋದನೆ ನೀಡಿರುವುದು ಗೊತ್ತಾಗಿದೆ.

 

 

ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲೇ ಕಾರ್ಯನಿರ್ವಹಿಸುತ್ತಿರುವ ನಿರ್ಮಿತಿ ಕೇಂದ್ರಗಳು ಗುಣಮಟ್ಟದ ಕಾಮಗಾರಿ ನಡೆಸುತ್ತಿಲ್ಲ.  ಗುತ್ತಿಗೆದಾರರನ್ನು ಅವಲಂಬಿಸುತ್ತಿರುವುದೇ ಕಳಪೆ ಕಾಮಗಾರಿ ಪ್ರಕರಣಗಳು ಹೆಚ್ಚಲು ಕಾರಣ.  ವಿವಿಧೆಡೆ ನಿರ್ಮಿತಿ ಕೇಂದ್ರ ನಿರ್ವಹಿಸುತ್ತಿರುವ ಕಾಮಗಾರಿಗಳು ಕಳೆಪೆಯಾಗಿವೆ. ಕೆಲವು ಕಾಮಗಾರಿಗಳು ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ.

 

ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಕಾಮಗಾರಿ ವಿಷಯದಲ್ಲಿ ಕಣ್ಣಿದ್ದರು ಕುರುಡರಂತೆ ವರ್ತಿಸಲಾಗುತ್ತಿದೆ ಎಂಬ ಆಕ್ರೋಶವು ರಾಜ್ಯದ ಹಲವು  ನಗರಸಭೆಗಳ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾಗುತ್ತಲೇ ಇವೆ.

 

ನಗರಗಳ ವ್ಯಾಪ್ತಿಯಲ್ಲಿ ನಡೆದಿರುವ ಸಿಸಿ ರಸ್ತೆ, ಶೌಚಾಲಯ ಬಹುತೇಕ  ಕಾಮಗಾರಿಗಳು ಸಂಪೂರ್ಣ ಕಳಪೆಯಾಗಿವೆ ಗುಣಮಟ್ಟದಿಂದ ಕೂಡಿಲ್ಲ. ಸರಿಯಾಗಿ ಕ್ಯೂರಿಂಗ್‌ ಮಾಡುತ್ತಿಲ್ಲ ಎಂದು ಹಲವು ನಗರಸಭೆಗಳ  ಸದಸ್ಯರು ಹರಿಹಾಯುತ್ತಲೇ ಇದ್ದಾರೆ.

 

ಕೆಲವು  ನಿರ್ಮಿತಿ ಕೇಂದ್ರಗಳ ನಡೆದಿದೆ ಎನ್ನಲಾಗಿರುವ  ಅವ್ಯವಹಾರ ಪ್ರಕರಣಗಳನ್ನ ಸಿಬಿಐ ತನಿಖೆ ನಡೆಸುತ್ತಿವೆ. ಇಂತಹ ಹಲವು ಪ್ರಕರಣಗಳನ್ನು ಹೈಕೋರ್ಟ್‌ನ ವಿಭಾಗೀಯ ಪೀಠಗಳು ನೇರವಾಗಿ ಸಿಬಿಐಗೆ ಒಪ್ಪಿಸಿವೆ.   ವಿವಿಧೆಡೆ ಪ್ರವಾಹದಿಂದ ತೊಂದರೆಗೊಳಗಾಗಿರುವ ಪ್ರದೇಶದಲ್ಲಿ ಹಿಂದೆ ನಿರ್ಮಾಣವಾಗಿದ್ದ ಆಸರೆ ಮನೆಗಳ ನಿರ್ಮಾಣದಲ್ಲಿಯೂ ನಿರ್ಮಿತಿ ಕೇಂದ್ರಗಳು ಕಳಪೆ ಕಾಮಗಾರಿ ನಡೆಸಿದ್ದವು. ಸಿವಿಲ್‌ ಕಾಮಗಾರಿಗಳು ಅಪೂರ್ಣಗೊಂಡಿದ್ದರೂ ಸಹ ಪೂರ್ಣಗೊಂಡಿವೆ ಎಂದು ವರದಿ ನೀಡಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts