ಬೆಂಗಳೂರು; ರೇರಾ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಇಂತಹ ಪ್ರಕರಣಗಳಲ್ಲಿ ಭೂ ಕಂದಾಯ ರೂಪದಲ್ಲಿ ದಂಡ ವಸೂಲಿ ಮಾಡಲು ರೇರಾ ಕಾಯ್ದೆಯಲ್ಲಿ ಅವಕಾಶಗಳಿದ್ದರೂ 1,427 ಪ್ರಕರಣಗಳಲ್ಲಿ ಬಿಲ್ಡರ್, ಡೆವಲಪರ್ಸ್‌ಗಳಿಂದ ಒಟ್ಟಾರೆ 666,97,40,187 ರು.ಗಳನ್ನು ವಸೂಲು ಮಾಡುವಲ್ಲಿ ಸರ್ಕಾರವು ವಿಫಲವಾಗಿದೆ.
ಭೂ ಕಂದಾಯ ಬಾಕಿ ಕುರಿತು ವಿಧಾನಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ಎಸ್ ಎಲ್ ಭೋಜೇಗೌಡ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ವಸತಿ ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್ ಅವರು ಭೂ ಕಂದಾಯ ಬಾಕಿ ಇರುವ ಮೊತ್ತದ ಅಂಕಿ ಅಂಶದ ಮಾಹಿತಿ ಒದಗಿಸಿದ್ದಾರೆ. ಆದರೆ ಬಹುಕೋಟಿಗಳಷ್ಟು ಬಾಕಿ ಉಳಿಸಿಕೊಂಡಿರುವ ಬಿಲ್ಡರ್, ಡೆವಲಪರ್ಸ್‌ಗಳ ವಿವರಗಳನ್ನು ಒದಗಿಸಿಲ್ಲ.
2024 ರ ಡಿಸೆಂಬರ್ 31ರ ಅಂತ್ಯಕ್ಕೆ ಒಟ್ಟು 1,660 ಪ್ರಕರಣಗಳಲ್ಲಿ 750,85,87,682 ಕೋಟಿ ರು ಮೊತ್ತವನ್ನು ಭೂ ಕಂದಾಯ ಬಾಕಿ ಎಂದು 278 ಬಿಲ್ಡರ್‍ಗಳಿಗೆ ವಸೂಲಾತಿ ಆದೇಶ ಹೊರಡಿಸಿತ್ತು. 1,660 ಪ್ರಕರಣಗಳ ಪೈಕಿ 103 ಪ್ರಕರಣಗಳಲ್ಲಿ ಲೋಕ್ ಅದಾಲತ್‌ನಲ್ಲಿ ರಾಜಿ ಮೂಲಕ 54,66,ಕ59,913 ರು.ಗಳನ್ನು ವಸೂಲಿ ಮಾಡಿದೆ. ಹಾಗೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ 130 ಪ್ರಕರಣಗಳಲ್ಲಿ 37,21,87,582 ರುಗ.ಳನ್ನು ವಸೂಲಿ ಮಾಡಿರುವುದು ಗೊತ್ತಾಗಿದೆ.
ಒಟ್ಟು 233 ಪ್ರಕರಣಗಳಿಂದ ಒಟ್ಟು 91,88,47,495 ರು.ಗಳನ್ನು ವಸೂಲಿ ಮಾಡಲಾಗಿದೆ. ಉಳಿದ 1,427 ಪ್ರಕರಣಗಳಲ್ಲಿ ಒಟ್ಟಾರೆ 666,97,40,187 ರು.ಗಳನ್ನು ಭೂ ಕಂದಾಯ ಬಾಕಿ ಇದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕೊಟ್ಟಿರುವ ಉತ್ತರದಿಂದ ತಿಳಿದು ಬಂದಿದೆ.
ವಸೂಲಾತಿ ಚುರುಕುಗೊಳಿಸುವ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಒಂದು ಅಧಿಕಾರಯುಕ್ತ ವಿಶೇಷ ಕೋಶವನ್ನು ರಚಿಸಲು ಕಂದಾಯ ಮತ್ತು ಆರ್ಥಿಕ ಇಲಾಖೆಯೊಡನೆ ಸಮಾಲೋಚನೆ ನಡೆಸುತ್ತಿದೆ.
ಕೇಂದ್ರ ಸರ್ಕಾರವು ಗ್ರಾಹಕರ ಹಿತಾಸಕ್ತಿಗಾಗಿ ರಿಯಲ್ ಎಸ್ಟೇಟ್ ವಲಯವನ್ನು ನಿಯಂತ್ರಿಸಲು ಮತ್ತು ಪಾರದರ್ಶಕತೆಯನ್ನು ತರಲು ರಿಯಲ್ ಎಸ್ಟೇಟ್ ವಲಯವನ್ನು ನಿಯಂತ್ರಿಸಲು ಮತ್ತು ಪಾರದರ್ಶಕತೆಯನ್ನು ತರಲು ರಿಯಲ್ ಎಸ್ಟೇಟ್ ಅಧಿನಿಯಮ 2016ನ್ನು ಜಾರಿಗೆ ತಂದಿದೆ. ಇದು 2017ರ ಜುಲೈ 11ರಿಂದಲೇ ಜಾರಿಯಲ್ಲಿದೆ.
ರೇರಾ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸುವ ಪ್ರತಿಯೊಬ್ಬ ಬಿಲ್ಡರ್‍ಗಳಿಗೂ ಪ್ರಕರಣವಾರು ದಂಡ ವಿಧಿಸಿ ಈ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲಿ ಮಾಡಲು ಆದೇಶ ಹೊರಡಿಸುತ್ತದೆ. ಭೂ ಕಂದಾಯದ ಬಾಕಿ ಮೊತ್ತವನ್ನು ವಸೂಲಿ ಮಾಡಲು ಅಧಿಕಾರ ಹೊಂದಿರುವ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ರೆವಿನ್ಯೂ ರಿಕವರಿ ಸರ್ಟಿಫಿಕೇಟ್‌ಗಳೊಂದಿಗೆ ಕಳಿಸಿಕೊಡಲಾಗುತ್ತದೆ.
ಈ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲಿ ಮಾಡಲು ನಿಯಮಗಳಲ್ಲಿ ಅವಕಾಶ ಇರುವುದರಿಂದ ಈ ಮೊತ್ತವನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ವಸೂಲಿ ಮಾಡಿ ರೇರಾಗೆ ಜಮೆ ಮಾಡುತ್ತಾರೆ ಎಂದು ಉತ್ತರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ರೇರಾ ಕಾಯ್ದೆ ಮತ್ತು ನಿಯಮಗಳಡಿಯಲ್ಲಿ ರಾಜ್ಯದ ಬೆಂಗಳೂರು ನಗರ ಜಿಲ್ಲೆ ಸೇರಿದಂತೆ 7 ಜಿಲ್ಲೆಗಳಲ್ಲಿ 423.51 ಕೋಟಿ ರು.ಪ್ರಮಾಣದಲ್ಲಿ ಭೂ ಕಂದಾಯ ಬಾಕಿ ಇತ್ತು. ಒಂದೂವರೆ ವರ್ಷದಲ್ಲಿ ಈ ಮೊತ್ತವು 243.46 ಕೋಟಿ ರು ಹೆಚ್ಚಳವಾಗಿದೆ.
ದಂಡ ಪರಿಹಾರದ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲು ಮಾಡುವ ವಿಷಯವನ್ನು ಸಕಾಲ ವ್ಯಾಪ್ತಿಗೊಳಪಡಿಸುವ ಸಂಬಂಧ ರೇರಾ ಪ್ರಾಧಿಕಾರ ನಡೆಸಿದ್ದ ಸಭೆಯಲ್ಲಿ 423.51 ಕೋಟಿ ರು ಪ್ರಮಾಣದಲ್ಲಿ ಭೂ ಕಂದಾಯ ಬಾಕಿ ಇರುವ ವಿಚಾರವು ಚರ್ಚೆಗೆ ಬಂದಿದೆ. ಈ ಸಂಬಂಧ 2023ರ ಸೆ.26ರಂದು ಸಭೆ ನಡೆದಿತ್ತು.
ರೇರಾ ಕಾಯ್ದೆ ಅಡಿಯಲ್ಲಿ ವಿಧಿಸಲಾಗುವ ದಂಡ, ಪರಿಹಾರದ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ವಸೂಲು ಮಾಡುವ ಪ್ರಕ್ರಿಯೆಗೆ ತಗುಲುವ ವೆಚ್ಚಗಳನ್ನು ಭರಿಸಲು ಮತ್ತು ವಸೂಲಾತಿ ಶುಲ್ಕಗಳನ್ನು ವಿಧಿಸಲು ರೇರಾ ನಿಯಮಗಳಲ್ಲಿ ಸೂಕ್ತ ತಿದ್ದುಪಡಿ ತರುವ ಬಗ್ಗೆ ಕ್ರಮ ವಹಿಸಲು ವಸತಿ ಇಲಾಖೆಗೆ ಸೂಚಿಸಿತ್ತು.
ಈ ಬೆಳವಣಿಗೆ ನಡುವೆಯೇ ಎಷ್ಟು ಪ್ರಮಾಣದಲ್ಲಿ ವಸೂಲಾತಿ ಶುಲ್ಕವನ್ನು ನಿಗದಿಪಡಿಸಬಹುದು ಎಂದು ಮಾಹಿತಿ ನೀಡಬೇಕು ಎಂದು ಕಂದಾಯ ಇಲಾಖೆಗೆ ವಸತಿ ಇಲಾಖೆಯು ಸೂಚಿಸಿದೆ. ಈ ಸಂಬಂಧ 2023 ಅಕ್ಟೋಬರ್ 18ರಂದು ಅನಧಿಕೃತ ಟಿಪ್ಪಣಿ ಹೊರಡಿಸಿತ್ತು.
ಭೂ ಕಂದಾಯ ಬಾಕಿ ಉಳಿಸಿಕೊಂಡಿರುವ ಜಿಲ್ಲೆಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ. ಈ ಜಿಲ್ಲೆಯಲ್ಲಿ 415.73 ಕೋಟಿ ರು. ಬಾಕಿ ಇದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 73.46 ಲಕ್ಷ ರು., ಮೈಸೂರು ಜಿಲ್ಲೆಯಲ್ಲಿ 2.33 ಕೋಟಿ ರು., ಧಾರವಾಡದಲ್ಲಿ 27.33 ಲಕ್ಷ ರು., ಬೆಳಗಾವಿಯಲ್ಲಿ 69.29 ಲಕ್ಷ ರು., ದಕ್ಷಿಣ ಕನ್ನಡದಲ್ಲಿ 3.20 ಕೋಟಿ ರು., ಉಡುಪಿಯಲ್ಲಿ 53.26 ಲಕ್ಷ ರು. ಭೂ ಕಂದಾಯ ವಸೂಲಾತಿಗೆ ಬಾಕಿ ಇತ್ತು.
ರೇರಾ ಕಾಯ್ದೆ 2016ರ ಕಲಂ 40(1) ಹಾಗೂ ರೇರಾ ನಿಯಮ 25ರಡಿಯಲ್ಲಿ ದಂಡ/ಪರಿಹಾರದ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲು ಮಾಡುವ ಸಂಬಂಧ ಸಾಧಕ ಬಾಧಕಗಳ ಕುರಿತು ಚರ್ಚೆ ಕೂಡ ನಡೆದಿತ್ತು ಎಂದು ತಿಳಿದು ಬಂದಿದೆ.
423.51 ಕೋಟಿ ಭೂ ಕಂದಾಯ ಬಾಕಿ; ವಸೂಲಾತಿ ಶುಲ್ಕ ನಿಗದಿಗೆ ಕಂದಾಯ ಇಲಾಖೆಗೆ ವಸತಿ ಇಲಾಖೆ ಪತ್ರ
‘ರೇರಾ ಕಾಯ್ದೆಯು ಕೇಂದ್ರ ಸರ್ಕಾರದ ಕಾಯ್ದೆಯಾಗಿದೆ. ಇದನ್ನು ಸಂಬಂಧಪಟ್ಟ ತಹಶೀಲ್ದಾರ್‍ಗಳೇ ರೇರಾ ಕಾಯ್ದೆಯಡಿ ವಿಧಿಸುವ ದಂಡದ ಮೊತ್ತವನ್ನು ಭೂ ಕಂದಾಯ ಎಂದು ವಸೂಲು ಮಾಡಬೇಕಾಗುತ್ತದೆ. ಆದರೆ ತಹಶೀಲ್ದಾರ್‍ರು ಅರೆ ನ್ಯಾಯಿಕ ಪ್ರಾಧಿಕಾರವಾಗಿದ್ದು ರೇರಾ ಕಾಯ್ದೆಯಡಿ ವಿಧಿಸುವ ದಂಡದ ಮೊತ್ತವನ್ನು ಭೂ ಕಂದಾಯ ಎಂದು ವಸೂಲು ಮಾಡುವಲ್ಲಿ ಹಲವಾರು ಕಾನೂನಾತ್ಮಕ ತೊಡಕುಗಳೀವೆ,’ ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಚರ್ಚಿಸಿದ್ರು.
ದಂಡದ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ವಸೂಲು ಮಾಡುವಲ್ಲಿ ಕಂಡು ಬಂದಿರುವ ಕಾನೂನಾತ್ಮಕ ತೊಡಕುಗಳು ಮತ್ತು ಇದನ್ನು ವಸೂಲು ಮಾಡಲು ಹೆಚ್ಚು ಸಮಯಾವಕಾಶ ಬೇಕಿರುವುದರಿಂದ ಬೇರೆ ಸೇವೆಗಳ ರೀತಿಯಲ್ಲಿ ಸಕಾಲ ವ್ಯಾಪ್ತಿಗೆ ಸೇರ್ಪಡೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಎಲ್ಲಾ ಪ್ರಾದೇಶಿಕ ಆಯುಕ್ತರುಗಳೂ ಒಂದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.