ಬೆಂಗಳೂರು; 12 ನೇ ಶತಮಾನದ ಧೀಮಂತ ಸಮಾಜ ಸುಧಾರಕ ಮತ್ತು ಶರಣ ಚಳವಳಿಯ ನೇತಾರ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಬಸವ ಕಲ್ಯಾಣ ತಾಲೂಕಿನ ಕೊಹಿನೂರ್ ಹೋಬಳಿಯಲ್ಲಿನ 6 ಯೋಜನೆಗಳ ಕಾಮಗಾರಿಗಳಿಗೆ 3.65 ಕೋಟಿ ರು. ಅನುದಾನ ಒದಗಿಸಲು ಸಾಧ್ಯವಿಲ್ಲ ಎಂದು ಕೈ ಎತ್ತಿದೆ.
ಬಸವ ಕಲ್ಯಾಣ ತಾಲೂಕಿನ ಬೇಟಬೇರಾವಾಡಿಯಲ್ಲಿ ಇಂಗು ಕೆರೆ, ಲಾಡವಂತಿ ಬ್ಯಾರೇಜ್, ಎಕಲೂರು ತಾಂಡ ಇಂಗು ಕೆರೆ, ಖೇರ್ಡಾ (ಕೆ) ಬ್ಯಾರೇಜ್ ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆಯು ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಆರ್ಥಿಕ ಇಲಾಖೆಯು ‘ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಲ್ಲಿ ಸಾಕಷ್ಟು ಅನುದಾನವಿಲ್ಲ ಎಂದು ಕೈ ಚೆಲ್ಲಿದೆ.
ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ ಆರ್‍ಟಿಐ ಅಡಿಯಲ್ಲಿ ಸಮಗ್ರ ಕಡತವನ್ನು ಪಡೆದುಕೊಂಡಿದೆ.
ಬೀದರ್ ಬಸವಕಲ್ಯಾಣದ ಬೇಟಗೆರಾವಾಡಿಯಲ್ಲಿ ಹೆಚ್ಚಿನ ಮಳೆಯಿಂದಾಗಿ ಒಡ್ಡಿನ ಗಾರ್ಜಾ ಭಾಗದಲ್ಲಿ ಸೋರಿಕೆಯಾಗುತ್ತಿತ್ತು. ಕಟ್ ಓಪನ್ ಮಾಡಿ ದುರಸ್ತಿಗೊಳಿಸಲು 60.00 ಲಕ್ಷ ರು. , ಲಾಡವಂತಿಯಲ್ಲಿ ಹೆಚ್ಚಿನ ಮಳೆಯಿಂದಾಗಿ ಹಾಳಾಗಿರುವ ಬ್ಯಾರೇಜ್ ದುರಸ್ತಿಗೆ 50.00 ಲಕ್ಷ ರು., ಒಡ್ಡಿನ ಭಾಗ, ಕೋಡಿ ಹಾಗೂ ಕೂಡು ರಸ್ತೆ ಹಾಳಾಗಿರುವ ಎಕಲೂರು ತಾಂಡದಲ್ಲಿ ಇಂಗು ಕೆರೆ ನಿರ್ಮಾಣ ಮಾಡಲು 46.00 ಲಕ್ಷ ರು., ಕಾರಿಗೊಂಡ ತಾಂಡಕ್ಕೆ 70.00 ಲಕ್ಷ ರು., ಖೇರ್ಡಾ ಬ್ಯಾರೇಜ್ (ಕೆ) ದುರಸ್ತಿಗೆ 90.00 ಕ್ಷ ರು., ಖೇರ್ಡಾ (ಕೆ) ಬಿಸಿಬಿ ಗೆ 49.00 ಲಕ್ಷ ರು ಸೇರಿ ಒಟ್ಟಾರೆ 3.65 ಕೋಟಿ ರು ಗಳ ಅನುದಾನ ಒದಗಿಸಬೇಕು ಎಂದು ಸಣ್ಣ ನೀರಾವರಿ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು.
‘2024ರ ಜೂನ್ 11 ಮತ್ತು 12ರಂದು ಮಧ್ಯ ರಾತ್ರಿಯಿಂದ ಬೆಳಗಿನ ಜಾವದವರೆಗೆ ಕಡಿಮೆ ಅವಧಿಯಲ್ಲಿ 180 ಎಂ ಎಂ ಭಾರೀ ಮಳೆಯಿಂದಾಗಿ ನೀರಿನ ರಭಸಕ್ಕೆ ಪ್ರವಾಹ ಉಂಟಾಗಿದೆ. ಅಲ್ಲದೇ ಸಣ್ಣ ನೀರಾವರಿ ಯೋಜನೆಗಳಿಗೆ ಹಾನಿಯಾಗಿದೆ. ಈ ಬಗ್ಗೆ ಮುಖ್ಯ ಇಂಜಿನಿಯರ್ ವರದಿ ಸಲ್ಲಿಸಿದ್ದಾರೆ. ಈ ವರದಿಯಂತೆ ಅಂದಾಜು ಮೊತ್ತವನ್ನು ನಮೂದಿಸಿದೆ. ಇದಕ್ಕೆ ಅನುಮೋದನೆ ನೀಡಬೇಕು,’ ಎಂದು ಪ್ರಸ್ತಾವದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಅಲ್ಲದೇ ಸ್ಥಳೀಯ ಶಾಸಕರು, ತಹಶೀಲ್ದಾರ್, ಕಾರ್ಯನಿರ್ವಾಹಕ ಇಂಜಿನಿಯರ್, ಸಹಾಯಕ ಇಂಜಿನಿಯರ್‍ಗಳೂ ಸಹ ಪರಿವೀಕ್ಷಣೆ ಮಾಡಿ 2024ರ ಜೂನ್ 12 ಮತ್ತು 13ರಂದು ವರದಿ ಸಲ್ಲಿಸಿದ್ದರು.
‘ಈ ಯೋಜನೆಗಳ ಜಲಾನಯನ ಪ್ರದೇಶದಲ್ಲಿ ಕಡಿಮೆ ಅವಧಿಯಲ್ಲಿ ಸಾಕಷ್ಟು ಪ್ರಮಾಣದ ಭಾರೀ ಮಳೆ ಬಿದ್ದಿದೆ. ಈ ಯೋಜನೆಗಳಿಗೆ ಬೃಹತ್ ಪ್ರಮಾಣದಲ್ಲಿ ಹಾನಿಯಾಗಿದೆ. ಈ ಹಾನಿಯಾದ ಯೋಜನೆಗಳಿಗೆ ತಾತ್ಕಾಲಿಕವಾಗಿ ದುರಸ್ತಿಗೊಳಿಸಬೇಕು. ಹೊಲಗದ್ದೆಗಳಿಗೆ ನೀರು ನುಗ್ಗದಂತೆ ಕ್ರಮ ವಹಿಸಬೇಕು ಎಂದು ರೈತರು ಮನವಿ ಮಾಡಿಕೊಂಡಿದ್ದಾರೆ,’ ಎಂದು ವರದಿಯಲ್ಲಿ ವಿವರಿಸಿದ್ದರು.
ಅದೇ ರೀತಿ ಬಸವ ಕಲ್ಯಾಣ ತಾಲೂಕಿನಲ್ಲಿ ಒಡೆದ ಅಟ್ಟುರು, ಕೋಹಿನೂರು ಕೆರೆಗಳಿಗೆ ಹಾಗೂ 6 ಯೋಜನೆಗಳಿಗೆ ತಾತ್ಕಾಲಿಕವಾಗಿ ದುರಸ್ತಿಗೊಳಿಸಿ ಮಳೆಗಾಲದಲ್ಲಿ ರೈತರ ಹೊಲಗದ್ದೆಗಳಿಗೆ ನೀರು ನುಗ್ಗದಂತೆ ಹಾಗೂ ಇನ್ನು ಹೆಚ್ಚಿನ ಅನಾಹುತ ತಪ್ಪಿಸಲು ಪ್ರತಿ ಯೋಜನೆಗೆ 5 ಲಕ್ಷ ರು ನಂತೆ ಒಟ್ಟಾರೆ 30.00 ಲಕ್ಷ ರು. ಅನುದಾನ ಬಿಡುಗಡೆ ಮಾಡಬೇಕು ಎಂದೂ ಕೋರಿದ್ದರು.
ಹಾಗೆಯೇ ಈ ಕಾಮಗಾರಿಗಳನ್ನು 2024-25ನೇ ಸಾಲಿನಲ್ಲಿ ಕೈಗೊಳ್ಳಲು ಸಾಕಷ್ಟು ಅನುದಾನ ಇಲ್ಲದೇ ಇರುವುದರಿಂದ ಈ ಕಾಮಗಾರಿಗಳಿಗೆ ಹೆಚ್ಚುವರಿಯಾಗಿ ಅನುದಾನ ಒದಗಿಸಬೇಕು. ಮುಖ್ಯಮಂತ್ರಿಗಳ ವಿಶೇಷ ಅನುದಾಡಿಯಲ್ಲಿಯೂ ಯಾವುದೇ ಅನುದಾನ ಒದಗಿಸಿಲ್ಲ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಕಷ್ಟಸಾಧ್ಯವೆಂದ ಆರ್ಥಿಕ ಇಲಾಖೆ
ಈ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಪರಿಶೀಲಿಸಿದೆ. ಕೆರೆಗಳ ಆಧುನೀಕರಣ, ಪ್ರಧಾನ ಕಾಮಗಾರಿಗಳಡಿಯಲ್ಲಿ (ಲೆಕ್ಕ ಶೀರ್ಷಿಕೆ;4702-00-101-1-7- 139) ಈಗಾಗೇ ಕೈಗೊಂಡ ಕಾಮಗಾರಿಗಳ ಕಾರ್ಯಭಾರ ಅಧಿಕವಾಗಿರುವುದರಿಂದ ಹಾಗೂ ಇಲಾಖೆಯಲ್ಲಿ 2,948.75 ಕೋಟಿ ರು ಮೊತ್ತದ ಬಿಲ್‌ಗಳನ್ನು ಪಾವತಿಸಲು ಬಾಕಿ ಇದೆ. ಹೀಗಾಗಿ ಸದರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಕಷ್ಟಸಾಧ್ಯ. ಆದ್ದರಿಂದ ಈ ಪ್ರಸ್ತಾವನೆಯನ್ನು ಸದ್ಯಕ್ಕೆ ಮುಂದೂಡಬೇಕು,’ ಎಂದು ಆರ್ಥಿಕ ಇಲಾಖೆಯು ಸಣ್ಣ ನೀರಾವರಿ ಇಲಾಖೆಗೆ ತಿಳಿಸಿರುವುದು ಗೊತ್ತಾಗಿದೆ.
ಅದೇ ರೀತಿ ಸಣ್ಣ ನೀರಾವರಿ ಇಲಾಖೆಯಲ್ಲಿ 2024ರ ಏಪ್ರಿಲ್ 1ರಲ್ಲಿ 10,442.96 ಕೋಟಿ ಮೊತ್ತದ ಕಾಮಗಾರಿಗಳ ಕಾರ್ಯಭಾರವಿದೆ. 2024-25ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆಗೆ 1,960.61 ಕೋಟಿ ರು.ಗಳ ಅನುದಾನ ಒದಗಿಸಿದೆ. 2024-25ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆಗೆ 1,393.30 ಕೊಟಿ ರು.ಗಳ ಅಂದಾಜು ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಂಡ ನಂತರವೂ 9,875.65 ಕೋಟಿ ರು.ಗಳ ಮೊತ್ತದ ಕಾಮಗಾರಿಗಳ ಕಾರ್ಯಭಾರವಿದೆ ಎಂದೂ ವಿವರಿಸಿರುವುದು ತಿಳಿದು ಬಂದಿದೆ.
ಹಾಗೆಯೇ ಈ ಕಾಮಗಾರಿಗಳನ್ನು ಎಸ್‌ಡಿಆರ್‍ಎಫ್ ನಿಧಿಯ ಅಡಿಯಲ್ಲಿ ಕೈಗೊಳ್ಳಬೇಕು ಎಂದು ಆಡಳಿತ ಇಲಾಖೆಗೆ 2024ರ ಅಕ್ಟೋಬರ್ 1ರಂದು ತಿಳಿಸಿತ್ತು.
‘ಸಣ್ಣ ನೀರಾವರಿ ಇಲಾಖೆಯಡಿ ಅನುಮೋದಿತ ಅಧಿಕ ಕಾರ್ಯಭಾರವಿರುವುದರಿಂದ ಹಾಗೂ ಅಧಿಕ ಮೊತ್ತದ ಬಿಲ್‌ಗಳು ಪಾವತಿಗಾಗಿ ಬಾಕಿ ಇರುವುದರಿಂದ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹೆಚ್ಚುವರಿ ಅನುದಾನ ಒದಗಿಸಲು ಅವಕಾಶವಿಲ್ಲ. ಹೀಗಾಗಿ ಈ ಪ್ರಸ್ತಾವನೆಯನ್ನು ಮುಂದೂಡುವಂತೆ ಹಾಗೂ ಪ್ರಸ್ತಾಪಿತ ಕಾಮಗಾರಿಗಳನ್ನು ಎಸ್‌ಡಿಆರ್‍ಎಫ್ ನಿಧಿಯ ಅಡಿಯಲ್ಲಿ ಕೈಗೊಳ್ಳಲು ನಿಯಮಾನುಸಾರ ಪರಿಶೀಲಿಸಬೇಕು,’ ಎಂದು ಆಡಳಿತ ಇಲಾಖೆಗೆ ತಿಳಿಸಿರುವುದು ಗೊತ್ತಾಗಿದೆ.