ಸ್ವಾಧೀನಾನುಭವ ಪತ್ರವಿಲ್ಲದೇ ಒಳಚರಂಡಿ ಸೌಲಭ್ಯವೂ ಇಲ್ಲ; ನಕ್ಷೆ ಉಲ್ಲಂಘನೆಗೆ ಮದ್ದು ಅರೆದ ಸುಪ್ರೀಂಕೋರ್ಟ್

ಬೆಂಗಳೂರು; ಸ್ವಾಧೀನಾನುಭವ (ಓ ಸಿ) ಪ್ರಮಾಣ ಪತ್ರ ಪಡೆದಿರುವ ಕಟ್ಟಡಕ್ಕೆ ಮಾತ್ರ ಒಳಚರಂಡಿ, ವಿದ್ಯುತ್‌, ನೀರು ಮತ್ತಿತರೆ ಸೌಲಭ್ಯಗಳನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಮಹತ್ವದ ಆದೇಶವನ್ನು ಹೊರಡಿಸಿದೆ.

 

ರಿಟ್‌ ಅರ್ಜಿ (ಸಂಖ್ಯೆ 1800/2008) ಪ್ರಕರಣವೊಂದರಲ್ಲಿ ಸ್ವಾಧೀನಾನುಭವ ಪ್ರಮಾಣ ಪತ್ರ ಹೊಂದಿಲ್ಲದ ಕಟ್ಟಡಗಳಿಗೂ ಖಾಯಂ ನೀರು ಮತ್ತು ವಿದ್ಯುತ್‌ ಸಂಪರ್ಕ ನೀಡದಂತೆ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ಆದೇಶವನ್ನೇ ಎತ್ತಿ ಹಿಡಿದಿದೆ.

 

ಸುಪ್ರೀಂ ಕೋರ್ಟ್ ನೀಡಿರುವ ಈ ಆದೇಶವು ನಕ್ಷೆ ಉಲ್ಲಂಘನೆ ಮಾಡುವವರ ವಿರುದ್ಧ ಚಪ್ಪಡಿ ಕಲ್ಲು ಎಳೆದಂತಾಗಿದೆ. ಈ ಆದೇಶದ ಕುರಿತು ನಗರಾಭಿವೃದ್ದಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆಂದು ಗೊತ್ತಾಗಿದೆ.

 

 

ವಿಶೇಷವೆಂದರೇ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ಅವರು 2022ರ ಜನವರಿ 24ರಂದು ಪ್ರಸ್ತಾವನೆ ಸಲ್ಲಿಸಿದ್ದರು.

 

‘ಪ್ರಸ್ತುತ ಬೆಸ್ಕಾಂ ಸ್ವಾಧೀನಾನುಭವ ಪ್ರಮಾಣಪತ್ರವಿಲ್ಲದ ಕಟ್ಟಡಗಳಿಗೆ ಶಾಶ್ವತ ವಿದ್ಯುತ್‌ ಸಂಪರ್ಕವನ್ನು ನೀಡಲು ಸಾಧ್ಯವಿಲ್ಲ. ಹೀಗಾಗಿ ಬಿಬಿಎಂಪಿಯಿಂದ ಸ್ವಾಧೀನಾನುಭವ ಪ್ರಮಾಣ ಪತ್ರ ಇಲ್ಲದ ಕಟ್ಟಡಗಳಿಗೂ ಶಾಶ್ವತ ವಿದ್ಯುತ್‌ ಸರಬರಾಜು ಮಾಡಲು ಬೆಸ್ಕಾಂಗೆ ಅನುಮತಿ ನೀಡಬೇಕು ಎಂದು ಪ್ರಸ್ತಾವನೆಯಲ್ಲಿ ಕೋರಿದ್ದರು.

 

ಇದಕ್ಕೆ  ಬಿಬಿಎಂಪಿಯ ಹಿಂದಿನ ಮುಖ್ಯ ಆಯುಕ್ತ ಗೌರವ್‌ ಗುಪ್ತಾ, ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಅವರು ಒಪ್ಪಿಗೆ ಸೂಚಿಸಿದ್ದರು. ಅಲ್ಲದೇ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿ ಕಡತದಲ್ಲಿ ಸಹಿ ಕೂಡ ಮಾಡಿದ್ದರು.

 

 

ಹಿಂದಿನ ಮುಖ್ಯಮಂತ್ರಿಗಳ ಹೆಸರಿನಲ್ಲಿ ಸಿದ್ದಗೊಂಡಿದ್ದ ಟಿಪ್ಪಣಿಗೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಂಜುನಾಥ ಪ್ರಸಾದ್‌ ಅವರು ಸಹ ತಮ್ಮ ಹಸ್ತಾಕ್ಷರದಲ್ಲಿ ಬರೆದಿದ್ದರು ಎಂಬುದು ತಿಳಿದು ಬಂದಿದೆ.

 

ಆನಂತರ ಬದಲಾವಣೆಗೆ ಒಪ್ಪಿಗೆ ಸೂಚಿಸಿದ್ದ ನಗರಾಭಿವೃದ್ಧಿ ಇಲಾಖೆಯು ಬೆಸ್ಕಾಂಗೆ ಪತ್ರ ಬರೆದಿತ್ತು. ಹಾಗೆಯೇ ಬೆಸ್ಕಾಂ, ಕೆಇಆರ್‍‌ಸಿಗೆ ಮನವಿ ಸಲ್ಲಿಸಿತ್ತು. ಕೆಇಆರ್‌ಸಿಯು 2017ರ ಡಿಸೆಂಬರ್‍‌ 27ರಂದು ಹೊರಡಿಸಿದ್ದ ಅಧಿಸೂಚನಯನ್ನು ರದ್ದುಪಡಿಸಿತ್ತು. ಸ್ವಾಧೀನಾನುಭವ ಪ್ರಮಾಣ ಪತ್ರವಿಲ್ಲದ ಕಟ್ಟಡಗಳಿಗೂ ಸಹ ಶಾಶ್ವತ ವಿದ್ಯುತ್‌ ಸಂಪರ್ಕವನ್ನು ಒದಗಿಸಲು ಅವಕಾಶ ಕಲ್ಪಿಸಿತ್ತು. ಈ ಸಂಬಂಧ 2022ರ ಜುಲೈ 1ರಂದು ಹೊಸದಾಗಿ ಅಧಿಸೂಚನೆ ಹೊರಡಿಸಿತ್ತು.

 

 

ಸ್ವಾಧೀನಾನುಭವ ಪ್ರಮಾಣಪತ್ರ ಇಲ್ಲದ ಕಟ್ಟಡಗಳಿಗೂ ಖಾಯಂ ವಿದ್ಯುತ್‌ ಸಂಪರ್ಕ ನೀಡಲು ಇದ್ದ ನಿಯಮಬದ್ದ ಅಡಚಣೆಯನ್ನು ತೆಗೆದು ಹಾಕಿದ್ದ ಹಿಂದಿನ ಬಿಜೆಪಿ ಸರ್ಕಾರವು, ಬೆಂಗಳೂರಿನಲ್ಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಕುಮ್ಮಕ್ಕು ನೀಡಿದಂತಾಗಿತ್ತು. ಅಲ್ಲದೇ ನಕ್ಷೆ ಉಲ್ಲಂಘನೆ ಮಾಡಿ ಅಥವಾ ಅಕ್ರಮವಾಗಿ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಪ್ರಕರಣಗಳ ಸಂಖ್ಯೆಯಲ್ಲಿಯೂ ಗಣನೀಯವಾಗಿ ಹೆಚ್ಚಳವಾಗಿತ್ತು.

 

ಹೆಚ್ಚಿನ ವಿದ್ಯುತ್‌ ಸುಂಕ, ಆಸ್ತಿ ತೆರಿಗೆ ವಿಧಿಸುವುದಕ್ಕೂ ತಡೆ ಬಿದ್ದಿದ್ದರಿಂದಾಗಿ ಪೌರ ಸಂಸ್ಥೆಗಳ ಆದಾಯಕ್ಕೂ ಕಲ್ಲು ಹಾಕಿದಂತಾಯಿತು ಮತ್ತು ಇಷ್ಟೇ ಮೊತ್ತವು ನಷ್ಟ ಸಂಭವಿಸಲಿಕ್ಕೂ ಕಾರಣವಾಯಿತು.

 

ಆದರೀಗ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವು ಅನಧಿಕೃತವಾಗಿ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರ ಇಲ್ಲದೇ ಇರುವ ಕಟ್ಟಡಗಳ ಮಾಲೀಕರು ವಿದ್ಯುತ್‌ ಸೇರಿದಂತೆ ಮತ್ತಿತರೆ ಸೌಕರ್ಯಗಳನ್ನು ಪಡೆಯುವುದಕ್ಕೆ ಕೊನೆ ಹಾಡಿದೆ.

 

ಸುಪ್ರೀಂ ಕೋರ್ಟ್‌ ಆದೇಶದಲ್ಲೇನಿದೆ?

 

ಬಿಲ್ಡರ್‍‌ಗಳು ಕಟ್ಟಡದ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆದ ನಂತರವಷ್ಟೇ ಗ್ರಾಹಕರಿಗೆ ಹಸ್ತಾಂತರಿಸಲಾಗುವುದು ಎಂದು ಕಟ್ಟಡದ ಯೋಜನಾ ನಕ್ಷೆ ಅನುಮೋದನೆ ಸಮಯದಲ್ಲೇ ಮುಚ್ಚಳಿಕೆ ನೀಡಬೇಕು ಎಂದು ಸ್ಪಷ್ಟವಾಗಿ ಸೂಚಿಸಿದೆ.

 

 

ನಿರ್ಮಾಣ ಸ್ಥಳದಲ್ಲಿ ಅನುಮೋದಿತ ನಕ್ಷೆ ಪ್ರದರ್ಶಿಸಿರಬೇಕು. ಅಧಿಕಾರಿಗಳು ನಿಯಮಿತವಾಗಿ ಈ ನಿರ್ಮಾಣವನ್ನು ಪರಿಶೀಲನೆ ಮಾಡಬೇಕು. ಮತ್ತು ಪರಿಶೀಲನೆ ನಡೆಸಿರುವ ಸಂಂಬಂಧ ಕಚೇರಿಯಲ್ಲಿ ದಾಖಲೆಗಳನ್ನೂ ಇಡಬೇಕು ಎಂದು ಆದೇಶದಲ್ಲಿ ವಿವರಿಸಿದೆ.

 

ನಿರ್ಮಾಣ ಪೂರ್ಣಗೊಂಡ ನಂತರ ಸಕ್ಷಮ ಪ್ರಾಧಿಕಾರ ಅಥವಾ ಸಂಬಂಧಿಸಿದ ಅಧಿಕಾರಿಯು ಖುದ್ದು ಪರಿಶೀಲನೆ ನಡೆಸಬೇಕು. ನಕ್ಷೆ ಉಲ್ಲಂಘನೆ ಮಾಡಿಲ್ಲವೆಂದು ಖಾತರಿ ಪಡಿಸಿಕೊಂಡ ನಂತರವಷ್ಟೇ ವಾಸದ ಮತ್ತು ವಾಣಿಜ್ಯ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ನೀಡಬೇಕು. ಪರಿಶೀಲನೆ ಸಮಯದಲ್ಲಿ ನಕ್ಷೆ ಉಲ್ಲಂಘನೆ ಕಂಡು ಬಂದಲ್ಲಿ ಅದನ್ನು ತಕ್ಷಣವೇ ತೆರವು ಮಾಡಬೇಕು. ಅಲ್ಲಿಯವರೆಗೂ ಸ್ವಾಧೀನಾನುಭವ ಪ್ರಮಾಣ ಪತ್ರವನ್ನೇ ನೀಡಬಾರದು ಎಂದು ಕಟ್ಟಪ್ಪಣೆ ಹೊರಡಿಸಿದೆ.

 

 

ಮತ್ತೊಂದು ವಿಶೇಷವೆಂದರೇ ಸ್ವಾಧೀನಾನುಭವ ಪ್ರಮಾಣ ಪತ್ರ ಇರುವ ಕಟ್ಟಡಕ್ಕೆ ಮಾತ್ರ ವಿದ್ಯುತ್‌, ನೀರು, ಒಳಚರಂಡಿ ಮತ್ತಿತರೆ ಸೌಕರ್ಯಗಳನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಸ್ವಾಧೀನಾನುಭವ ಪ್ರಮಾಣ ಪತ್ರ ನೀಡಿದ ನಂತರವೂ ಒಂದೊಮ್ಮೆ ಯಾವುದಾದರೂ ನಕ್ಷೆ ಉಲ್ಲಂಘನೆ ಆಗಿರುವ ಕುರಿತು ದೂರುಗಳು ಅಧಿಕಾರಿಗಳ ಗಮನಕ್ಕೆ ಬಂದಲ್ಲಿ ತಕ್ಷಣವೇ ತೆರವುಗೊಳಿಸಬೇಕು. ಹಾಗೆಯೆ ಸ್ವಾಧೀನಾನುಭವ ಪ್ರಮಾಣ ಪತ್ರ ನೀಡಿದ್ದ ಅಧಿಕಾರಿಗಳು ತಪ್ಪು ಎಸಗಿದ್ದು ಕಂಡು ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಿದೆ.

 

 

ಇನ್ನು, ಸ್ವಾಧೀನಾನುಭವ ಪ್ರಮಾಣಪತ್ರ ಇಲ್ಲದ ಯಾವುದೇ ಕಟ್ಟಡಕ್ಕೆ ಯಾವುದೇ ವಾಣಿಜ್ಯ, ವ್ಯವಹಾರ ಪರವಾನಿಗೆ ನೀಡುವಂತಿಲ್ಲ. ಎಲ್ಲಾ ಬೆಳವಣಿಗೆಗಳೂ ವಲಯ ಯೋಜನೆಯಂತೆಯೇ ಇರಬೇಕು. ಯಾವುದಾದರೂ ಇಲಾಖೆ, ಸಂಸ್ಥೆ ಅಥವಾ ಸ್ಥಳೀಯ ಸಂಸ್ಥೆ ಇನ್ನೊಂದು ಇಲಾಖೆ, ಸಂಸ್ಥೆ ಅಥವಾ ಸ್ಥಳೀಯ ಸಂಸ್ಥೆಗೆ ಉಲ್ಲಂಘನೆ ಬಗ್ಗೆ ದೂರು ನೀಡಿದಲ್ಲಿ ತಕ್ಷಣವೇ ಆ ದೂರನ್ನು ಸ್ವೀಕರಿಸಿ, ಕ್ರಮ ಕೈಗೊಳ್ಳಬೇಕು ಎಂದೂ ಆದೇಶದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಈಗ ಬಾಕಿ ಇರುವ ಮೇಲ್ಮನವಿಗಳೂ ಸೇರಿದಂತೆ ಅನಧಿಕೃತ ನಿರ್ಮಾಣದ ಬಗ್ಗೆ ಸ್ವೀಕೃತ ಮೇಲ್ಮನವಿಗಳನ್ನು 90 ದಿನದೊಳಗಾಗಿ ಪ್ರಾಧಿಕಾರಗಳು ವಿಲೇವಾರಿ ಮಾಡಬೇಕು ಎಂದು ಸೂಚಿಸಿರುವ ಸುಪ್ರೀಂ ಕೋರ್ಟ್‌, ಹಣಕಾಸು ಸಂಸ್ಥೆ ಮತ್ತು ಬ್ಯಾಂಕ್‌ಗಳು ಸಹ ಸ್ವಾಧೀನಾನುಭವ ಪ್ರಮಾಣಪತ್ರ ಇಲ್ಲದ ಕಟ್ಟಡಗಳನ್ನು ಅಡಮಾನವಾಗಿ ಇರಿಸಿಕೊಳ್ಳುವಂತಿಲ್ಲ ಎಂದು ಹೇಳಿದೆ.

 

 

ಒಂದೊಮ್ಮೆ ಈ ಸೂಚನೆಗಳನ್ನು ಯಾರಾದರೂ ಮೀರಿದಲ್ಲೆ ಉಲ್ಲಂಘಿಸಿದಲ್ಲಿ ತಕ್ಷಣವೇ ನ್ಯಾಯಾಂಗ ನಿಂದನಾ ಅರ್ಜಿ ಸಲ್ಲಿಸಬೇಕು. ಮತ್ತು ಈ ಎಲ್ಲಾ ಸೂಚನೆಗಳು ಅಧೀನ ನ್ಯಾಯಾಲಯಗಳ ಗಮನಕ್ಕೆ ತರಬೇಕು. ಅಧೀನ ಸ್ಥಳೀಯ ಸಂಸ್ಥೆಗಳು, ಇತರೆ ಸಂಸ್ಥೆ, ಪ್ರಾಧಿಕಾರಗಳ ಗಮನಕ್ಕೆ ತರುವ ಸಲುವಾಗಿ ಸುತ್ತೋಲೆ ರೂಪದಲ್ಲಿ ಹೊರಡಿಸಬೇಕು ಎಂದು ಸರ್ಕಾರಕ್ಕೂ ಸೂಚಿಸಿದೆ.

 

 

 

 

ಸುಪ್ರೀಂ ಕೋರ್ಟ್‌ ಈ ಆದೇಶವನ್ನು ಹೊರಡಿಸುವ ಮುನ್ನ ನಿರ್ಮಾಣ ಸಮಯದಲ್ಲಿ ಎಲ್ಲಾ ಕಟ್ಟಡಗಳು ಹೆಚ್ಚಿನ ದರದಲ್ಲಿ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆಯಬಹುದಿತ್ತು. ಇದಕ್ಕೆ ದುಪ್ಪಟ್ಟು ದರದಲ್ಲಿ ವಿದ್ಯುತ್‌ ಶುಲ್ಕವನ್ನು ಪಾವತಿಸಬೇಕಿತ್ತು. ಕಟ್ಟಡಗಳು ಪೂರ್ಣಗೊಂಡ ನಂತರ ಈ ತಾತ್ಕಾಲಿಕ ಸಂಪರ್ಕಗಳನ್ನು ಖಾಯಂ ಸಾಮಾನ್ಯ ವಿದ್ಯುತ್‌ ಸಂಪರ್ಕಗಳಾಗಿ ಪರಿವರ್ತಿಸಲಾಗುತ್ತಿತ್ತು.

 

ಕಟ್ಟಡದ ಬೈಲಾ ಉಲ್ಲಂಘನೆಗಳ ವಿರುದ್ಧ ಮೂಲಭೂತ ಹೊಣೆಗಾರಿಕೆ ಹೊಂದಿದ್ದ ಬಿಬಿಎಂಪಿಯು 2015ರ ಆಗಸ್ಟ್‌ 7ರಂದು ಸುತ್ತೋಲೆಯನ್ನು ಹೊರಡಿಸಿತ್ತು.

 

 

ಇದರ ಪ್ರಕಾರ ಸ್ವಾಧೀನಾನುಭವ ಪ್ರಮಾಣ ಪತ್ರ ಇಲ್ಲದ ಕಟ್ಟಡಗಳಿಗೆ ಮೂಲಸೌಕರ್ಯ ಮತ್ತು ರಸ್ತೆ ಕತ್ತರಿಸುವ ಅನುಮತಿಯನ್ನೂ ಒದಗಿಸಬಾರದು ಎಂದು ಆದೇಶಿಸಿತ್ತು. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‍‌ಸಿ) 2017ರ ಡಿಸೆಂಬರ್‍‌ 27ರಂದು ಹೊರಡಿಸಿದ್ದ ಅಧಿಸೂಚನೆ ಪ್ರಕಾರ ಸಕ್ಷಮ ಪ್ರಾಧಿಕಾರದಿಂದ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆದ ನಂತರವಷ್ಟೇ ಬಹುಮಹಡಿ ಕಟ್ಟಡಗಳಿಗೆ (ಎಲ್‌ ಟಿ ವರ್ಗದ ಅಡಿಯಲ್ಲಿ) ವಿದ್ಯುತ್‌ ಸರಬರಾಜು ವ್ಯವಸ್ಥೆ ಕೈಗೊಳ್ಳಬೇಕಿತ್ತು.

 

 

ತಾತ್ಕಾಲಿಕವಾಗಿ ವಿದ್ಯುತ್‌ ಸಂಪರ್ಕ ಹೆಚ್ಚೆಂದರೇ 2 ವರ್ಷ ಮಾತ್ರ ಪಡೆಯಬಹುದಾಗಿತ್ತು. ಇದಕ್ಕಾಗಿ ದುಪ್ಪಟ್ಟು ಶುಲ್ಕ ಪಾವತಿಸಬೇಕಿತ್ತು. ಅದರೆ ಹೆಚ್ಚಿನ ಕಟ್ಟಡಗಳು ಮಂಜೂರಾದ ಯೋಜನೆಯನ್ನು ಉಲ್ಲಂಘಿಸಿದ್ದರಿಂದ ಅವಕ್ಕೆ ಸ್ವಾಧೀನಾನುಭವ ಪ್ರಮಾಣ ಪತ್ರ ದೊರೆಯುತ್ತಿರಲಿಲ್ಲ.

 

 

ಅಂತಹ ಕಟ್ಟಡಗಳು ಶಾಶ್ವತ ವಿದ್ಯುತ್‌ ಸಂಪರ್ಕವನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ದುಪ್ಪಟ್ಟು ದರದಲ್ಲಿ ತಾತ್ಕಾಲಿಕ ವಿದ್ಯುತ್‌ ಸಂಪರ್ಕಗಳ ಮೂಲಕವೂ 2 ವರ್ಷಗಳಿಗಿಂತ ಹೆಚ್ಚಿನ ಅವದಿಗೆ ಮುಂದುವರೆಯಲು ಸಾಧ್ಯವಾಗುತ್ತಿರಲಿಲ್ಲ. ಸ್ವಂತ ಬಳಕೆಗೆ ನಿರ್ಮಿಸುವ ಮನೆಗಳಿಗೆ ವಿನಾಯಿತಿ ಇತ್ತಾದರೂ ಸಹ ಹೆಚ್ಚಿನ ಮನೆಗಳು ಇದ್ದ ಕಟ್ಟಡಗಳಿಗೆ ಈ ನಿಯಮವು ಸಮಸ್ಯೆಯಾಗಿತ್ತು.

 

ಇದರಿಂದಾಗಿ ಬಹುಮಹಡಿ ಕಟ್ಟಡಗಳಲ್ಲಿ ನಕ್ಷೆ ಉಲ್ಲಂಘನೆ ನಿಯಂತ್ರಣಕ್ಕೆ ಬಂದಿತ್ತು. ನಕ್ಷೆ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಿಸುವವರಿಗೆ ಇದರಿಂದಾಗಿ ತೊಂದರೆ ಆಗಿದ್ದನ್ನು ಸ್ಮರಿಸಬಹುದು.

 

‘ಬೆಂಗಳೂರಿನ ಬಿಬಿಎಂಪಿಯ ಆಡಳಿತಾಧಿಕಾರಿಯಾಗಿದ್ದ ಕಾಲದಲ್ಲೇ ಬೆಂಗಳೂರಿನ ಅನಧಿಕೃತ ಮತ್ತು ನಕ್ಷೆ ಉಲ್ಲಂಘನೆ ಮಾಡಿರುವಂತಹ ಕಟ್ಟಡಗಳಿಗೂ ವಿದ್ಯುತ ಸಂಪರ್ಕ ಸಿಗುವುದಕ್ಕೆ ಕಾರಣಕರ್ತರಾದ ಅಂದಿನ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಈಗ “ರೇರಾ” ಅಂದರೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತೋಳವೇ ಕುರಿಕಾಯಲು ನೇಮಕವಾಗುವುದು ಅಂದರೆ ಇದೇ ಇರಬೇಕು,’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು.

SUPPORT THE FILE

Latest News

Related Posts