ಬೆಂಗಳೂರು; ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಗಳಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣಕ್ಕೆ ಸ್ಥಳ ಒದಗಿಸಲು ಅಸಮ್ಮತಿ ವ್ಯಕ್ತಪಡಿಸಿದ್ದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯು ಇದೀಗ ತುಮಕೂರು ಮಹಾನಗರಪಾಲಿಕೆ ಆವರಣದ ಕೃಷ್ಣ ರಾಜೇಂದ್ರ ಪುರಭವನದ ಮುಂಭಾಗ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ತಿರಸ್ಕರಿಸಿದೆ.
ತುಮಕೂರು ಮಹಾನಗರಪಾಲಿಕೆ ಆವರಣದ ಕೃಷ್ಣ ರಾಜೇಂದ್ರ ಪುರಭವನದ ಮುಂಭಾಗದದಲ್ಲಿ ಸಂವಿಧಾನಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡುವ ಸಂಬಂಧ ನಗರಾಭಿವೃದ್ದಿ ಇಲಾಖೆಯು ಕಾನೂನು ಇಲಾಖೆಯ ಅಭಿಪ್ರಾಯ ಕೋರಿತ್ತು. ಆದರೀಗ ಕಾನೂನು ಇಲಾಖೆಯು ನಗರಾಭಿವೃದ್ಧಿ ಇಲಾಖೆಯ ಪ್ರಸ್ತಾವನೆಗೆ ಸಹಮತಿ ವ್ಯಕ್ತಪಡಿಸಿಲ್ಲ.
ಆದರೂ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಅವರ ಸೂಚನೆ ಮೇರೆಗೆ ಈ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ (ನಅಇ 127 ತುಮಪಾ 2024 (ಇ) ಮಂಡಿಸಿದೆ. ಸಚಿವ ಸಂಪುಟಕ್ಕೆ ಮಂಡಿಸಿರುವ ಪ್ರಸ್ತಾವನೆಯ ರಹಸ್ಯ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಗಣ್ಯ ವ್ಯಕ್ತಿಗಳ ಪ್ರತಿಮೆಗಳನ್ನು ಸ್ಥಾಪಿಸಲು ನಿರ್ಬಂಧಿಸಿ ಸರ್ವೋಚ್ಚ ನ್ಯಾಯಾಲಯ ಮತ್ತು ರಾಜ್ಯ ಉನ್ನತ ನ್ಯಾಯಾಲಯವು ತೀರ್ಪು ನೀಡಿತ್ತು. ಈ ತೀರ್ಪನ್ನು ಮುಂದಿರಿಸಿದ್ದ ಕಾನೂನು ಇಲಾಖೆಯು ಶಹಾಪುರ ಗ್ರಾಮಾಂತರ ಹಳೇ ಬಸ್ ನಿಲ್ದಾಣದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕಾಗಿ ಸ್ಥಳ ಒದಗಿಸಲು ಸೂಕ್ತವಲ್ಲ ಎಂದು ಅಭಿಪ್ರಾಯ ನೀಡಿತ್ತು. ಆದರೂ ಸಚಿವ ಸಂಪುಟದ ಮುಂದೆ ಈ ಪ್ರಸ್ತಾವನೆ ಮಂಡಿಸಿದ್ದ ಇಲಾಖೆಯು ಇದಕ್ಕೆ ಈಗಾಗಲೇ ಅನುಮೋದನೆ ಪಡೆದುಕೊಂಡಿದೆ.
ಇದರ ಬೆನ್ನಲ್ಲೇ ತುಮಕೂರು ಮಹಾ ನಗರಪಾಲಿಕೆಯ ಕೃಷ್ಣರಾಜೇಂದ್ರ ಪುರಭವನದ ಮುಂಭಾಗದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ನಿರ್ಮಾಣ ಮಾಡುವ ಪ್ರಸ್ತಾವನೆಯು ಮುನ್ನೆಲೆಗೆ ಬಂದಿದೆ.
ಪ್ರಸ್ತಾವನೆಯಲ್ಲೇನಿದೆ?
ತುಮಕೂರು ಮಹಾನಗರಪಾಲಿಕೆ ಆವರಣದ ಕೃಷ್ಣರಾಜೇಂದ್ರ ಪುರಭವನದ ಮುಂಭಾಗದಲ್ಲಿ ಸಂವಿಧಾನಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಮಾಡುವ ಸಂಬಂಧ 2020ರ ಆಗಸ್ಟ್ 25ರಂದೇ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ (ವಿಷಯ ಸಂಖ್ಯೆ; 46/1) ಅನುಮೋದನೆ ಪಡೆದುಕೊಂಡಿತ್ತು.
ಈ ಸಂಬಂಧ 2020ರ ಡಿಸೆಂಬರ್ 8ರಂದು ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ಪ್ರಕಟಣೆ ಹೊರಡಿಸಲಾಗಿತ್ತು. ಮತ್ತು ಸಲಹೆ ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಈ ಕುರಿತು ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗಿರಲಿಲ್ಲ. ಹೀಗಾಗಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಬೇಕು ಎಂದು ತುಮಕೂರು ಜಿಲ್ಲಾಧಿಕಾರಿಗಳು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ನಿರ್ದೇಶಕರು ಇದನ್ನು ಸರ್ಕಾರಕ್ಕೆ ಮಂಡಿಸಿದ್ದರು ಎಂಬುದು ಸಚಿವ ಸಂಪುಟ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ವಿಶೇಷವೆಂದರೇ ಈ ಪ್ರತಿಮೆಗೆ ಒಟ್ಟಾರೆ 34.72 ಲಕ್ಷ ರು.ಗಳು ವೆಚ್ಚವಾಗಲಿದೆ. ಇದರಲ್ಲಿಲ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ವೈಯಕ್ತಿಕವಾಗಿ ತಮ್ ಸ್ವಂತ ಖರ್ಚಿನಲ್ಲಿ ಭರಿಸಲಿದ್ದಾರೆ. ಉಳಿದಂತೆ ಕೆಳಭಾಗದ ಪೀಠದ ಕಾಮಗಾರಿಗೆ ಅಂದಾಜು ಮೊತ್ತ 18.00 ಲಕ್ಷ ರು.ಗಳ ವೆಚ್ಚವನ್ನು ಪಾಲಿಕೆಯ ನಿಧಿಯಡಿಯಿಲ್ಲಿ ಭರಿಸಲಾಗುವುದು ಎಂದು ಪಾಲಿಕೆಯು ಆಯುಕ್ತರು ಸರ್ಕಾರಕ್ಕೆ ವರದಿ ಮಾಡಿದ್ದರು ಎಂಬುದು ಗೊತ್ತಾಗಿದೆ.
ಕಾನೂನು ಇಲಾಖೆ ಅಸಮ್ಮತಿ
ಕೃಷ್ಣರಾಜೇಂದ್ರ ಪುರಭವನದ ಮುಂಭಾಗದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡುವ ಪ್ರಸ್ತಾವನೆಗೆ ನಗರಾಭಿವೃದ್ದಿ ಇಲಾಖೆಯು ಕಾನೂನು ಇಲಾಖೆಯ ಅಭಿಪ್ರಾಯ ಕೋರಿತ್ತು. ಈ ಕಡತವನ್ನು ಪರಿಶೀಲಿಸಿದ್ದ ಕಾನೂನು ಇಲಾಖೆಯು ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿದೆ.
‘ಸಾರ್ವಜನಿಕ ಸ್ಥಳಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನು ಸ್ಥಾಪಿಸುವುದನ್ನು ಸರ್ವೋಚ್ಛ ಮತ್ತು ಉಚ್ಛ ನ್ಯಾಯಾಲಯವು ನಿರ್ಬಂಧಿಸಿ ತೀರ್ಪುಗಳನ್ನು ನೀಡಿದೆ. 2009ರ ಡಿಸೆಂಬರ್ 7ರಂದು (ಎಸ್‌ಎಲ್‌ಪಿ (ಕ್ರಿಮಿನಲ್ ) 8519/2006 ) ಆದೇಶ ನೀಡಿದೆ. ಹಾಗೆಯೇ ರಿಟ್ ಅರ್ಜಿ ಪ್ರಕರಣವೊಂದರಲ್ಲಿ ( 49960/2017) 2021ರ ಸೆ.7ರಂದು ನೀಡಿದ್ದ ಆದೇಶದ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆಗಳನ್ನು ಸ್ಥಾಪಿಸುವುದನ್ನು ನಿರ್ಬಂಧಿಸಿದೆ ಎಂದು ಕಾನೂನು ಇಲಾಖೆಯು ಈ ತೀರ್ಪುಗಳನ್ನು ತನ್ನ ಅಭಿಪ್ರಾಯದಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
‘ತುಮಕೂರು ಮಹಾನಗರಪಾಲಿಕೆ ಆವರಣದ ಕೃಷ್ಣರಾಜೇಂದ್ರ ಪುರಭವನದ ಮುಂಭಾಗದಲ್ಲಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆ ಮಾಡಲು ನಿಯಮಾವಳಿಗಳಲ್ಲಿ ಅವಕಾಶವಿಲ್ಲ,’ ಎಂದು ಕಾನೂನು ಇಲಾಖೆಯು ತನ್ನ ಅಭಿಪ್ರಾಯದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಈ ಪ್ರಸ್ತಾವನೆಗೆ ಒಳಾಡಳಿತ ಇಲಾಖೆಯು ಸಹಮತಿ ವ್ಯಕ್ತಪಡಿಸಿದೆ. ‘ಸಂವಿಧಾನಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಮಾಡಲು ಒಳಾಡಳಿತ ಇಲಾಖೆಯ ಯಾವುದೇ ಅಭ್ಯಂತರವಿಲ್ಲ,’ ಎಂದು ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.
ಕಾನೂನು ಇಲಾಖೆಯು ನೀಡಿರುವ ಅಭಿಪ್ರಾಯವನ್ನು ಆಧರಿಸಿ ಈ ಪ್ರಸ್ತಾವನೆಯನ್ನು ತಿರಸ್ಕರಿಸುವುದು ಸೂಕ್ತವಾಗಿದೆ ಎಂದುಆಡಳಿತ ಇಲಾಖೆಯು ಪ್ರತಿಕ್ರಿಯೆ ವ್ಯಕ್ತಪಡಿಸಿದೆ ಎಂಬುದು ಸಚಿವ ಸಂಪುಟದ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಆದರೂ ಸಚಿವ ಬೈರತಿ ಸುರೇಶ್ ಅವರ ಸೂಚನೆ ಮೇರೆಗೆ ನಗರಾಭಿವೃದ್ಧಿ ಇಲಾಖೆಯು ಈ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಮಂಡಿಸಿದೆ.
‘ಸರ್ವೋಚ್ಛ ನ್ಯಾಯಾಲಯವು ಎಸ್‌ಎಲ್‌ಪಿ 8519/2006ರ ಪ್ರಕರಣದಲ್ಲಿ ನೀಡಿರುವ ಆದೇಶ ಹಾಗೂ 2021ರಲ್ಲಿನ ನ್ಯಾಯಾಲಯದ ಆದೇಶ ಮತ್ತು ಪೌರಾಡಳಿತ ಇಲಾಖೆಯು 2012ರ ಡಿಸೆಂಬರ್ 17ರಂದು ಹೊರಡಿಸಿರುವ ಸುತ್ತೋಲೆ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನು ಸ್ಥಾಪಿಸುವುದನ್ನು ನಿರ್ಬಂಧಿಸಿರುವುದರಿಂದ ತುಮಕೂರು ಮಹಾನಗರಪಾಲಿಕೆಯ ಕೃಷ್ಣರಾಜೇಂದ್ರ ಪುರಭವನದ ಮುಂಭಾಗದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ತಿರಸ್ಕರಿಸಬಹುದು,’ ಎಂದು ಕೋರಿದೆ. ಹಾಗೆಯೇ ಈ ಪ್ರಸ್ತಾವನೆ ಕುರಿತು ಸಚಿವ ಸಂಪುಟವು ಸೂಕ್ತ ನಿರ್ಣಯ ಕೈಗೊಳ್ಳಬಹುದು ಎಂದೂ ಅನುಮೋದನೆ ಕೋರುವ ಕಂಡಿಕೆಯಲ್ಲಿ ಪ್ರಸ್ತಾವಿಸಿರುವುದು ಗೊತ್ತಾಗಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿನ ಶಹಾಪುರ ಗ್ರಾಮಾಂತರ ಹಳೇ ಬಸ್ ನಿಲ್ದಾಣದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣ ಮತ್ತು ಇದಕ್ಕೆ ಸ್ಥಳ ಒದಗಿಸುವ ಸಂಬಂಧ ಸಾರಿಗೆ ಇಲಾಖೆಯ ಪ್ರಸ್ತಾವನೆಯನ್ನೂ ಕಾನೂನು ಇಲಾಖೆಯು ತಿರಸ್ಕರಿಸಿತ್ತು.
ಸರ್ಕಾರಿ ಬಸ್ ನಿಲ್ದಾಣದಲ್ಲಿ ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಕಾನೂನು ಇಲಾಖೆ ಅಸಮ್ಮತಿ
ಸಾರ್ವಜನಿಕ ಜಾಗದಲ್ಲಿ ಯಾವುದೇ ಸಂತರ, ಶರಣರ, ಜನನಾಯಕರ, ಸ್ವಾತಂತ್ರ್ಯ ಹೋರಾಟಗಾರರ ಅಥವಾ ಗಣ್ಯ ವ್ಯಕ್ತಿಗಳ ಪ್ರತಿಮೆಗಳನ್ನು ಸ್ಥಾಪಿಸುವುದನ್ನು ನಿರ್ಬಂಧಿಸಿದೆ. ಈ ಸಂಬಂಧ ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯು 2012ರ ಜೂನ್ 11ರಂದು ಸುತ್ತೋಲೆ ಹೊರಡಿಸಿದೆ. ಅಲ್ಲದೆ ಪ್ರತಿಮೆ ಸ್ಥಾಪಿಸುವುದಕ್ಕೆ ಸಂಘ ಸಂಸ್ಥೆಗಳು ಮುಂದೆ ಬಂದಲ್ಲಿ ಪ್ರಾಥಮಿಕವಾಗಿ ಅಂತಹ ಸಂಘ, ಸಂಸ್ಥೆಗಳು ತಮಗೆ ಸೇರಿದ ನಿವೇಶನದಲ್ಲಿ ಪ್ರತಿಮೆ ನಿರ್ಮಿಸುವ ಮತ್ತು ಅವುಗಳ ಭದ್ರತೆ, ಸಂರಕ್ಷಣೆಗೆ ಸಂಬಂಧಿಸಿದಂತೆ ಮುಚ್ಚಳಿಕೆ ನೀಡಬೇಕು ಎಂದಿದೆ.
ಮಂಜೂರಾತಿ ಪಡೆದು ಸ್ಥಾಪಿಸಲಾಗುವ ಪ್ರತಿಮೆಗಳ ನಿರ್ವಹಣೆಯನ್ನು ಆಯಾ ಸಂಘ ಸಂಸ್ಥೆಗಳೇ ನಿರ್ವಹಿಸಬೇಕು ಎಂದು ಸುತ್ತೋಲೆಯಲ್ಲಿ ವಿವರಿಸಿತ್ತು. ಅದೇ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಪುತ್ಥಳಿ ನಿರ್ಮಾಣ ಮಾಡುವುದರ ಬಗ್ಗೆ ಸರ್ವೋಚ್ಛ ನ್ಯಾಯಾಲಯವು 2023ರ ಜನರಿ 18ರಂದು ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನಗಳನ್ನು ನೀಡಿತ್ತು.
‘ಇನ್ನು ಮುಂದೆ, ಸಾರ್ವಜನಿಕ ರಸ್ತೆಗಳು, ಪಾದಚಾರಿ ಮಾರ್ಗಗಳು, ಬದಿಯಲ್ಲಿ ಮತ್ತು ಇತರ ಸಾರ್ವಜನಿಕ ಬೀದಿ ದೀಪಗಳು ಅಥವಾ ವಿದ್ಯುದ್ದೀಕರಣ, ಟ್ರಾಫಿಕ್, ಟೋಲ್ ಅಥವಾ ಅಭಿವೃದ್ಧಿ ಮತ್ತು ಸುಂದರೀಕರಣಕ್ಕೆ ಸಂಬಂಧಿಸಿದ ನಿರ್ಮಾಣಗಳಲ್ಲಿ ಯಾವುದೇ ಕಟ್ಟಡವನ್ನು ಸ್ಥಾಪಿಸಲು ಅಥವಾ ಯಾವುದೇ ಕಟ್ಟಡವನ್ನು ನಿರ್ಮಿಸಲು ರಾಜ್ಯ ಸರ್ಕಾರವು ಯಾವುದೇ ಅನುಮತಿಯನ್ನು ನೀಡಬಾರದು,’ ಎಂದು ಸುಪ್ರೀಂ ಕೋರ್ಟ್ 2023ರ ಜನವರಿ 18ರಂದು ನೀಡಿದ್ದ ತೀರ್ಪಿನಲ್ಲಿ ಎಲ್ಎಲಾ ರಾಜ್ಯ ಸರ್ಕಾರಗಳಿಗೆ ನೀಡಿದ್ದ ನಿರ್ದೇಶನವನ್ನು ರಾಜ್ಯ ಕಾನೂನು ಇಲಾಖೆಯು ತನ್ನ ಟಿಪ್ಪಣಿಯಲ್ಲಿ ಉಲ್ಲೇಖಿಸಿತ್ತು.