ಅಕ್ರಮ ಹಣ ವರ್ಗಾವಣೆ; ವಿಟಿಯು ಹಾಲಿ ಕುಲಪತಿ ಸೇರಿ ಇತರರ ವಿರುದ್ಧ ತನಿಖೆಗೆ ಸಿಗದ ಪೂರ್ವಾನುಮತಿ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ನಡೆದಿದೆ ಎನ್ನಲಾಗಿರುವ ಲಕ್ಷಾಂತರ ರುಪಾಯಿಗಳ ಅಕ್ರಮ ವರ್ಗಾವಣೆ ಮತ್ತು ಅಕ್ರಮವಾಗಿ ಲಾಭ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟಿಯು ಹಾಲಿ ಕುಲಪತಿ ಡಾ ಎಸ್‌ ವಿದ್ಯಾಶಂಕರ್‌ ಸೇರಿದಂತೆ ಇನ್ನಿತರರ ವಿರುದ್ಧ ಲೋಕಾಯುಕ್ತ ಪೊಲೀಸ್‌ ತನಿಖೆಗೆ ಒಂದೂವರೆ ವರ್ಷವಾದರೂ ಪೂರ್ವಾನುಮತಿ ದೊರೆತಿಲ್ಲ.

 

ಅಕ್ರಮವಾಗಿ ಹಣ ವರ್ಗಾವಣೆ ಮತ್ತು ಅಕ್ರಮವಾಗಿ ಲಾಭ ಮಾಡಿಕೊಟ್ಟಿರುವುದನ್ನು ಮೈಸೂರಿನ ಲೋಕಾಯುಕ್ತ ಪೊಲೀಸರು ತನಿಖೆ ವೇಳೆಯಲ್ಲಿ ದೃಢಪಡಿಸಿಕೊಂಡಿದ್ದರು. ಈ ಸಂಬಂಧ ಈ ಪ್ರಕರಣದ ಕುರಿತು ವಿಸ್ತೃತ ತನಿಖೆ ನಡೆಸಲು ಅವರನ್ನು ವಿಚಾರಣೆಗೆ ಒಳಪಡಿಸಲು ರಾಜ್ಯಪಾಲರು ಸೇರಿದಂತೆ ಇನ್ನಿತರೆ ಸಕ್ಷಮ ಪ್ರಾಧಿಕಾರಗಳಿಂದ ಪೂರ್ವಾನುಮತಿ ದೊರಕಿಸಿಕೊಡಬೇಕು ಎಂದು ಒಂದೂವರೆ ವರ್ಷದ ಹಿಂದೆಯೇ ಪತ್ರ  ಬರೆದಿದ್ದರು. ಆದರೆ ಈ  ಪತ್ರಕ್ಕೆ ಧೂಳು ಮೆತ್ತಿಕೊಂಡಿದೆ.

 

ಬಿಜೆಪಿ ಅವಧಿಯಲ್ಲಿನ ಹಗರಣಗಳ ಕುರಿತು ತನಿಖೆ ನಡೆಸಲು ಕ್ರಮ ಕೈಗೊಳ್ಳುವುದಾಗಿ ಹೇಳುತ್ತಲೇ ಬಂದಿರುವ ಈಗಿನ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದು 2 ವರ್ಷವಾದರೂ ಆರೋಪಿತರ ವಿರುದ್ಧ ತನಿಖೆಗೆ ಇನ್ನೂ ಅನುಮತಿ ದೊರೆತಿಲ್ಲ. ಲೋಕಾಯುಕ್ತ ಪ್ರಕರಣಗಳಲ್ಲಿ ನಿಗದಿ ಕಾಲಾವಧಿಯಲ್ಲಿ ಪೂರ್ವಾನುಮತಿ ದೊರೆಯುತ್ತಿಲ್ಲ ಎಂದು ಖುದ್ದು ಲೋಕಾಯುಕ್ತ ಬಿ ಎಸ್‌ ಪಾಟೀಲ್‌ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದ ಬೆನ್ನಲ್ಲೇ ಕರ್ನಾಟಕ ರಾಜ್ಯ ಮುಕ್ತ ವಿವಿ ಯ ಪ್ರಕರಣವೂ ಮುನ್ನೆಲೆಗೆ ಬಂದಿದೆ.

 

ಪೂರ್ವಾನುಮತಿ ನೀಡಲು ವಿಳಂಬ ಧೋರಣೆ ಅನುಸರಿಸಿತ್ತಿರುವ ಸರ್ಕಾರ, ರಾಜ್ಯಪಾಲರ ನಡೆಯು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ.

 

ಲೋಕಾಯುಕ್ತ ಪೊಲೀಸ್‌ ವಿಭಾಗದ ಮೈಸೂರಿನ ಎಸ್ಪಿ ಸುರೇಶ್‌ ಬಾಬು ಅವರು ಲೋಕಾಯುಕ್ತ ಎಡಿಜಿಪಿ ಅವರಿಗೆ 2023ರ ನವೆಂಬರ್‌ 17ರಂದು ಬರೆದಿರುವ ಪತ್ರವು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ವಿದ್ಯಾಶಂಕರ್‌ ವಿರುದ್ಧ ರಾಜ್ಯಪಾಲರು, ಸುಮತಿ ಆರ್‌ ಗೌಡ ವಿರುದ್ಧ ತನಿಖೆಗೆ ಕುಲಪತಿಗಳು, ಡಾ ಎ ಖಾದರ್ ಪಾಷ ವಿರುದ್ಧ ತನಿಖೆಗೆ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕೆ ಎಲ್ ಎನ್ ಮೂರ್ತಿ ವಿರುದ್ಧ ಕುಲಪತಿಗಳು ವಿಚಾರಣೆಗೆ ಪೂರ್ವಾನುಮತಿ ನೀಡಬೇಕಿದೆ.

 

ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 ಅಡಿಯಲ್ಲಿ 120 (ಬಿ), 409, 420, 467, 468 ಐಪಿಸಿ ಅಡಿ ಅಪರಾಧ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ವಿಚಾರದಲ್ಲಿ ವಿಸ್ತೃತ ತನಿಖೆ ಅವಶ್ಯಕತೆ ಇರುತ್ತದೆ. ಆದ್ದರಿಂದ ಇವರ ವಿರುದ್ಧ ತನಿಖೆ, ವಿಚಾರಣೆ ಕೈಗೊಳ್ಳಲು ಸಕ್ರಮ ಪ್ರಾಧಿಕಾರಗಳಿಂದ ಪೂರ್ವಾನುಮತಿ ಕೊಡಿಸಿ ಕೊಡಬೇಕು ಎಂದು ಕೋರಿರುವುದು ತಿಳಿದು ಬಂದಿದೆ.

 

‘ಮೈಸೂರು ಮುಕ್ತ ವಿವಿ ಕುಲಪತಿಗಳಾಗಿದ್ದ ಡಾ ಎಸ್‌ ವಿದ್ಯಾಶಂಕರ್, ಹಣಕಾಸು ಅಧಿಕಾರಿ ಡಾ ಎ ಖಾದರ್ ಪಾಷ, ಸಹಾಯಕ ಪ್ರಾಧ್ಯಾಪಕರಾದ ಡಾ ಸುಮತಿ ಆರ್ ಗೌಡ, ಕುಲ ಸಚಿವ ಡಾ ಎಸ್‌ ಎಲ್‌ ಎನ್‌ ಮೂರ್ತಿ ಅವರು ಆಕ್ಸಿಸ್‌ ಬ್ಯಾಂಕ್‌ನಲ್ಲಿ ಅಕ್ರಮವಾಗಿ ಖಾತೆ ತೆರೆದು ಸ್ವಂತಕ್ಕೆ ಡ್ರಾ ಮಾಡಿಕೊಂಡು ಹಣ ದುರುಪಯೋಗಪಡಿಸಿಕೊಂಡಿಸಿರುವ ಕುರಿತು ತನಿಖೆ, ವಿಚಾರಣೆ ಕೈಗೊಳ್ಳಲು ಪೂರ್ವಾನುಮತಿ ಒದಗಿಸಿಕೊಡಬೇಕು,’ ಎಂದು ಲೋಕಾಯುಕ್ತ ಪೊಲೀಸ್‌ ವಿಭಾಗದ ಮೈಸೂರು ಎಸ್ಪಿಯು ಲೋಕಾಯುಕ್ತ ಎಡಿಜಿಪಿಗೆ ಬರೆದಿದ್ದ ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

 

 

ಈ ಪತ್ರ ಬರೆದು ಒಂದೂವರೆ ವರ್ಷವಾದರೂ ಇದುವರೆಗೂ ರಾಜ್ಯಪಾಲರಾದಿಯಾಗಿ ರಾಜ್ಯ ಸರ್ಕಾರದ ಸಕ್ಷಮ ಪ್ರಾಧಿಕಾರಗಳಿಂದ ಯಾವುದೇ ಅನುಮತಿಯೂ ದೊರೆತಿಲ್ಲ ಎಂದು ತಿಳಿದು ಬಂದಿದೆ.

 

ವಿಶ್ವವಿದ್ಯಾಲಯವು ಸ್ವಯಂ ನಿಧಿಯಡಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳ ದಾಖಲಾತಿ ಶುಲ್ಕ, ಪರೀಕ್ಷಾ ಶುಲ್ಕ, ಮತ್ತಿತರೆ ಶುಲ್ಕಗಳನ್ನು ಸಂಗ್ರಹಿಸುವ ಮೂಲಕ ವಿವಿಯ ಎಲ್ಲಾ ರೀತಿಯ ಹಣಕಾಸು ನಿಧಿಯನ್ನು ಸಂಗ್ರಹಿಸುತ್ತದೆ. ಹಣಕಾಸು ವೆಚ್ಚ ಮತ್ತು ಬ್ಯಾಂಕ್‌ ಖಾತೆಗಳ ನಿರ್ವಹಣೆಯನ್ನು ಕುಲಪತಿ ಮತ್ತು ರಿಜಿಸ್ಟ್ರಾರ್‌ ಅವರ ಆದೇಶದ ಪ್ರಕಾರ ಹಣಕಾಸು ಅಧಿಕಾರಿಯ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆದು ನಿರ್ವಹಿಸಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ.

 

ಆದರೆ ಮುಕ್ತ ವಿವಿಯ ಹಿಂದಿನ ಕುಲಪತಿ ಡಾ ಎಸ್‌ ವಿದ್ಯಾಶಂಕರ್‌ ಸೇರಿದಂತೆ ಇನ್ನಿತರರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಲೋಕಾಯುಕ್ತ ಪೊಲೀಸ್‌ ತನಿಖೆಯಲ್ಲಿ ವಿವರಿಸಿದೆ.

 

ಆಕ್ಸಿಸ್‌ ಬ್ಯಾಂಕ್‌ನಲ್ಲಿ ಅಕ್ರಮವಾಗಿ ಖಾತೆ

 

2021ರ ಸೆಪ್ಟಂಬರ್‌ನಲ್ಲಿ ಮೈಸೂರಿನ ಕುವೆಂಪು ನಗರ ಶಾಖೆಯಲ್ಲಿನ ಆಕ್ಸಿಸ್‌ ಬ್ಯಾಂಕ್‌ನಲ್ಲಿ ಕೋ ಆರ್ಡಿನೇಟರ್‌, ಎಕ್ಸಟರ್ನಲ್‌ ಎಕ್ಸಾಮ್‌ ಹೆಸರಿನಲ್ಲಿ ಖಾತೆ (ಸಂಖ್ಯೆ; 92011003895267) ತೆರೆದಿದ್ದರು. ಈ ಖಾತೆಯನ್ನು ಅದೇ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ ಸುಮತಿ ಆರ್ ಗೌಡ ಅವರು, ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಬದಲಿಗೆ ಕೋ ಆರ್ಡಿನೇಟರ್‌ ಆಗಿ ನಿರ್ವಹಿಸಿದ್ದರು.

 

 

ಈ ಖಾತೆಯ 2021ರ ಸೆ.28ರಿಂದ 2022ರ ಮೇ 7ವರೆಗಿನ ಹಣಕಾಸು ವಹಿವಾಟನ್ನು ಗಮನಿಸಿರುವ ಲೋಕಾಯುಕ್ತ ಪೊಲೀಸರು ಈ ಶಾಖೆಯಲ್ಲಿ ಕೋ ಆರ್ಡಿಟನೇಟರ್‌ ಎಕ್ಸಟರ್ನಲ್‌ ಎಕ್ಸಾಮಿನೇಷನ್ಸ್‌ ಪದನಾಮದಲ್ಲಿ ಖಾತೆ ತೆರೆದು ಹಣಕಾಸು ವ್ಯವಹಾರ ನಡೆಸಲಾಗಿದೆ ಎಂದು ಸಾಬೀತುಪಡಿಸಿದ್ದಾರೆ.

 

 

ಈ ಖಾತೆಯಲ್ಲಿ ಮಾಡಿದ ಮೊದಲ ವ್ಯವಹಾರ 2021ರ ಸೆ.28 ಆಗಿದೆ. ಖಾತೆ ತೆರೆದು ಸುಮಾರು 9 ತಿಂಗಳ ನಂತರ ಕೆಎಸ್‌ಒಯುನ ಅಂದಿನ ಉಪ ಕುಲಪತಿ ಡಾ ಎಸ್‌ ವಿದ್ಯಾಶಂಕರ್ ಅವರು 2022ರ ಜುಲೈ 14ರಂದು ತಮ್ಮ ಹೆಸರಿನಲ್ಲಿ ಕಚೇರಿ ಆದೇಶ ಹೊರಡಿಸಿದ್ದರು. ಇದರ ಪ್ರಕಾರ ಆಕ್ಸಿಸ್‌ ಬ್ಯಾಂಕ್‌ನಲ್ಲಿ ತೆರೆದಿದ್ದ ಈ ಖಾತೆಯನ್ನು ತೆರೆದು ನಿರ್ವಹಿಸಬೇಕು ಎಂದು ಡಾ ಸುಮತಿ ಆರ್ ಗೌಡ ಅವರಿಗೆ ಆದೇಶಿಸಿದ್ದರು.

 

ಹಳೆಯ ದಿನಾಂಕ ನಮೂದಿಸಿದ್ದರೇ ವಿದ್ಯಾಶಂಕರ್?

 

ಆದರೆ ಈ ಆದೇಶದ ಪೂರ್ವದಲ್ಲಿಯೇ ಡಾ ಸುಮತಿ ಆರ್ ಗೌಡ ಅವರು ಆಕ್ಸಿಸ್‌ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದರು. ಹಣಕಾಸು ವ್ಯವಹಾರ ನಡೆಸಿದ್ದರು. ಇದು ಸಂಶಯಾಸ್ಪದವಾಗಿದೆ. ಅಕ್ರಮವಾಗಿ ಈ ಖಾತೆಯನ್ನು ತೆರೆಯಲಾಗಿದೆ. ಹಣವನ್ನೂ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆಕ್ಷೇಪವೂ ಇದೆ. ಹೀಗಾಗಿ ಈ ಆರೋಪದಿಂದ ಪಾರಾಗಲು ಡಾ ಎಸ್‌ ವಿದ್ಯಾಶಂಕರ್‌ ಅವರು ಹಳೆಯ ದಿನಾಂಕವನ್ನು ನಮೂದಿಸಿ ಡಾ ಎಸ್‌ ಸುಮತಿ ಆರ್ ಗೌಡ ಅವರಿಗೆ ಆಕ್ಸಿಸ್‌ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ನಿಯೋಜಿಸಿದಂತೆ ದಾಖಲಾತಿ ಸೃಷ್ಟಿಸಿರುವುದು ಕಂಡು ಬಂದಿದೆ ಎಂದು ಲೋಕಾ ಪೊಲೀಸರ ತನಿಖೆ ವರದಿಯಲ್ಲಿ ವಿವರಿಸಲಾಗಿದೆ.

 

 

 

ಖಾತೆಯ ಹಣಕಾಸು ವ್ಯವಹಾರಗಳನ್ನು ಲೋಕಾಯುಕ್ತ ಪೊಲೀಸರು ಪರಿಶೀಲಿಸಿದ್ದಾರೆ. 2021ರ ಡಿಸೆಂಬರ್‌ 18ರಿಂದ 2022ರ ಮೇ 7ವರಗೆ ಒಟ್ಟು 21,00,00 ಲಕ್ಷ ರು.ಗಳನ್ನು 1 ಲಕ್ಷ ರು.ಗಳಿಂದ 5 ಲಕ್ಷ ರು ಮೌಲ್ಯದ ವಿವಿಧ ಚೆಕ್‌ಗಳ ಮೂಲಕ ಸ್ವಂತಕ್ಕೆ ಡ್ರಾ ಮಾಡಿಕೊಂಡಿರುವುದು ಕಂಡು ಬಂದಿದೆ. ಅಲ್ಲದೇ ಸುಮತಿ ಅರ್‌ ಗೌಡ ಅವರು ಆಕ್ಸಿಸ್‌ ಬ್ಯಾಂಕ್‌ನ ಖಾತೆಯಿಂದ ಕುಲಪತಿ ಡಾ ಎಸ್‌ ವಿದ್ಯಾಶಂಕರ್‌, ಅವರ ಆಪ್ತ ಕಾರ್ಯದರ್ಶಿ ವಿಶಾಲ್‌ ಎನ್ ರಾಜ್‌, ಕೆಎಸ್‌ಒಯುನ ತಾತ್ಕಾಲಿಕ ನೌಕರ ಸಿದ್ದರಾಜು, ಡಾ ಎ ಪಾರ್ಥ, ಮತ್ತು ರಂಗರಾಜು ಅವರುಗಳ ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿರುವುದನ್ನು ಪತ್ತೆ ಹಚ್ಚಿರುವುದು ಗೊತ್ತಾಗಿದೆ.

 

 

ಕರ್ನಾಟಕ ಹಣಕಾಸು ಸಂಹಿತೆ ನಿಯಮ 72(ಎ)ರಂತೆ ಸರ್ಕಾರಿ ಅಧಿಕಾರಿಯು ಒಂದು ಸಾವಿರಕ್ಕಿಂತ ಹೆಚ್ಚಿನ ಸರ್ಕಾರಿ ವೆಚ್ಚವನ್ನು ಕ್ರಾಸ್‌ ಚೆಕ್‌ ಮೂಲಕವೇ ಪಾವತಿಸುವಂತೆ ನಿರ್ದಿಷ್ಟಪಡಿಸಿದೆ. ಇದಕ್ಕೆ ಪೂರಕವಾಗಿ ಕರ್ನಾಟಕ ಸರ್ಕಾರದ ಆದೇಶದ (ಎಫ್‌ಡಿ 5 ಟಿಎಆರ್ 2017)ರ ಪ್ರಕಾರ ಯಾವುದೇ ಸರ್ಕಾರಿ ಅಧಿಕಾರಿಯು ಸರ್ಕಾರಿ ನಿಧಿಯ ಹಣವನ್ನು ಸ್ವಂತಕ್ಕೆ ಡ್ರಾ ಮಾಡುವುದು ಮತ್ತು ಸರ್ಕಾರಿ ಅಧಿಕಾರಿಗಳ ಖಾತೆಗೆ ವರ್ಗಾಯಿಸಿಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.

 

ಆದರೆ ಸುಮತಿ ಅರ್ ಗೌಡ ಅವರು ಕರ್ನಾಟಕ ಹಣಕಾಸು ಸಂಹಿತೆಯ ನಿಯಮ ಮತ್ತು ಆದೇಶಗಳನ್ನು ಉಲ್ಲಂಘಿಸಿ 21,00,00 ಲಕ್ಷ ರು.ಗಳನ್ನು ಸೆಲ್ಫ್‌ ಡ್ರಾ ಮಾಡಿದ್ದಾರೆ. ಅಲ್ಲದೇ ಸುಮಾರು 4,10,000 ರು.ಗಳನ್ನು ತನ್ನ ಹಾಗು ವಿಶ್ವವಿದ್ಯಾಲಯದ ಅಧಿಕಾರಿ ಸಿಬ್ಬಂದಿಗಳ ಖಾತೆಗೆ ವರ್ಗಾಯಿಸಿ ತಾನೂ ಅಕ್ರಮ ಲಾಭ ಮಾಡಿಕೊಂಡು ವಿಶ್ವವಿದ್ಯಾಲಯದ ನಿರ್ದಿಷ್ಟ ಅಧಿಕಾರಿ, ಸಿಬ್ಬಂದಿಗಳಿಗೂ ಅಕ್ರಮ ಲಾಭ ಮಾಡಿಕೊಟ್ಟಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತನಿಖೆ ವೇಳೆಯಲ್ಲಿ ಬಯಲು ಮಾಡಿದ್ದಾರೆ.

 

 

ಅದೇ ರೀತಿ ವಿಶ್ವವಿದ್ಯಾಲಯದ ವ್ಯವಹಾರ, ನಿಧಿಗಳ ಮೇಲ್ವಿಚಾರಣೆಯನ್ನು ನಡೆಸುವ ಜವಾಬ್ದಾರಿ ಹೊಂದಿದ್ದ ಹಣಕಾಸು ಅಧಿಕಾರಿ ಡಾ ಎ ಖಾದರ್‌ ಪಾಷ ಅವರು ಸಹ ಕರ್ತವ್ಯಲೋಪ ಎಸಗಿದ್ದಾರೆ ಎಂಬುದನ್ನೂ ಪತ್ತೆ ಹಚ್ಚಿದ್ದಾರೆ. ವಿವಿಯಲ್ಲಿರುವ ನಗದು, ಬ್ಯಾಂಕ್‌ ಖಾತೆಯಲ್ಲಿರುವ ಹಣ, ಹೂಡಿಕೆಗಳ ಮೇಲೆ ನಿರಂತರವಾಗಿ ಗಮನವಿಟ್ಟು ಮತ್ತು ವಾರ್ಷಿಕ ಲೆಕ್ಕಪತ್ರವನ್ನು ಸಿದ್ಧಪಡಿಸಿ ಹಣಕಾಸು ಸಮಿತಿಯ ಪರಿಶಿಲನೆಗೆ ಸಲ್ಲಿಸಬೇಕು. ನಂತರ ವ್ಯವಸ್ಥಾಪನ ಮಂಡಳಿಗೂ ಸಲ್ಲಿಸುವ ಜವಾಬ್ದಾರಿಯೂ ಹಣಕಾಸು ಅಧಿಕಾರಿಯದ್ದಾಗಿದೆ.

 

ಆದರೆ ಡಾ ಎ ಖಾದರ್ ಪಾಷ ಅವರು ಡಾ ಸುಮತಿ ಆರ್ ಗೌಡ ಅವರು ಆಕ್ಸಿಸ್‌ ಬ್ಯಾಂಕ್‌ನಲ್ಲಿ ನಿಯಮಬಾಹಿರವಾಗಿ ತೆರೆದಿದ್ದ ಬ್ಯಾಂಕ್‌ ಖಾತೆಯ ಅವ್ಯವಹಾರವನ್ನು ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ. ಮತ್ತು ಈ ಖಾತೆಯನ್ನು ವಿಶ್ವವಿದ್ಯಾಲಯದ ವಾರ್ಷಿಕ ಲೆಕ್ಕಪತ್ರಕ್ಕೆ ಸೇರಿಸದೇ ಮತ್ತು ಲೆಕ್ಕ ಪರಿಶೋಧನೆಗೆ ಒಳಪಡಿಸಿಲ್ಲ. ಇದರಿಂದಾಗಿ ಸುಮತಿ ಅರ್ ಗೌಡ ಹಾಗೂ ಇತರರಿಗೆ ಅಕ್ರಮ ಲಾಭ ಮಾಡಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಲೋಕಾಯುಕ್ತ ಪೊಲೀಸರ ತನಿಖೆಯು ಸಾಬೀತುಪಡಿಸಿದೆ.

 

ಹಾಗೆಯೇ ವಿಶ್ವವಿದ್ಯಾಲಯಲದ ರಿಜಿಸ್ಟ್ರಾರ್‌ ಡಾ ಕೆ ಎಲ್ ಎನ್ ಮೂರ್ತಿ ಅವರು ಸಹ, ಲೆಕ್ಕ ಪರಿಶೋಧನೆ, ಮತ್ತು ಲೆಕ್ಕ ಪತ್ರ ಇಲಾಖೆಗೂ ಈ ವ್ಯವಹಾರವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ. ಮತ್ತು ಅಕ್ರಮ ಲಾಭ ಮಾಡಿಕೊಟ್ಟಿರುವ ಕುರಿತು ಯಾವುದೇ ದಾಖಲೆಗಳನ್ನು ಲೆಕ್ಕ ಪರಿಶೋಧಕರಿಗೆ ನೀಡಿಲ್ಲ. ಇದರಿಂದಾಗಿ ಈ ವ್ಯವಹಾರದಲ್ಲಿ ಇವರೂ ಶಾಮೀಲಾಗಿದ್ದಾರೆ. ಅಕ್ರಮ ಪಾವತಿಗೆ ನೆರವಾಗಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

 

‘ಕುಲಪತಿ ಡಾ ಎಸ್‌ ವಿದ್ಯಾಶಂಕರ್, ಡಾ ಎ ಖಾದರ್ ಪಾಷ, ಡಾ ಸುಮತಿ ಆರ್‌ ಗೌಡ ಅವರು ಕಾನೂನುಬಾಹಿರವಾಗಿ ಜಂಟಿಯಾಗಿ ಈ ಖಾತೆ ಮೂಲಕ ಲಕ್ಷಾಂತರ ಮೊತ್ತವನ್ನು ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯ ನಿಧಿಯಿಂದ ದುರ್ಬಳಕೆ ಮಾಡಿಕೊಂಡು ಅಕ್ರಮ ಹಣ ಸಾಗಾಣಿಕ ಮೂಲಕ ಸ್ವಂತಕ್ಕೆ ಮತ್ತು ಕೆಲವು ನಿಗದಿತ ವ್ಯಕ್ತಿಗಳಿಗೆ ನಿಯಮಬಾಹಿರವಾಗಿ ಲಾಭ ಮಾಡಿಕೊಡಲಾಗಿರುತ್ತದೆ,’ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಹಣಕಾಸು ವ್ಯವಹಾರವನ್ನು ನಡೆಸಲು ಯಾವುದೇ ಅನುಮತಿ ಪಡೆಯದೇ ಖಾತೆ ತೆರೆದು 21.00 ಲಕ್ಷ ರು. ಸ್ವಂತಕ್ಕೆ ಡ್ರಾ ಮಾಡಿಕೊಂಡು ಇದರಲ್ಲಿನ 4.10 ಲಕ್ಷ ರುಗಳನ್ನು ತನ್ನ ಹಾಗೂ ಅಂದಿನ ಕುಲಪತಿ ಡಾ ಎಸ್‌ ವಿದ್ಯಾಶಂಕರ್‌ ಮತ್ತಿತರ ಸಿಬ್ಬಂದಿ ಖಾತೆಗೆ ವರ್ಗಾವಣೆ ಮಾಡಿ ತನಗೆ ಹಾಗೂ ಇತರರಿಗೆ ಅಕ್ರಮ ಲಾಭ ಮಾಡಿಕೊಂಡು ಸಾರ್ವಜನಿಕ ಹಣ ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ವಿದ್ಯಾಶಂಕರ್ ರಿಂದಲೇ ಸುಳ್ಳು ದಾಖಲೆ ಸೃಷ್ಟಿ?

 

ಪ್ರಸ್ತುತ ವಿಟಿಯು ಕುಲಪತಿ ಡಾ ಎಸ್‌ ವಿದ್ಯಾಶಂಕರ್ ಅವರು ನಿಯಮಬಾಹಿರವಾಗಿ ಆಕ್ಸಿಸ್‌ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಆದೇಶಿಸಿದ್ದರು. ಹಣಕಾಸು ಅಧಿಕಾರಿಯ ಕರ್ತವ್ಯ, ಜವಾಬ್ದಾರಿಯನ್ನುಕಡೆಗಣಿಸಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಕಂಪ್ಯೂಟರ್‌ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ ಸುಮತಿ ಅರ್ ಗೌಡ ಅವರಿಗೆ ಅನುಮತಿ ನೀಡಿದ್ದರು.

 

ತನ್ನ ಖಾತೆಗೆ ಹಾಗೂ ಇತರರ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡು ಅಕ್ರಮ ಲಾಭ ಮಾಡಿಕೊಂಡು ಸರ್ಕಾರಿ ಹಣ ದುರುಪಯೋಗ ಮಾಡಿಕೊಳ್ಳಲು ಕಾರಣರಾಗಿದ್ದಾರೆ. ಅಲ್ಲದೆ ಆಕ್ಸಿಸ್‌ ಬ್ಯಾಂಕ್‌ನಲ್ಲಿ ಖಾತೆ ತೆರೆದು 9 ತಿಂಗಳುಗಳ ನಂತರ ಖಾತೆ ತೆರೆಯುವಂತೆ ಡಾ ಸುಮತಿ ಆರ್ ಗೌಡ ಅವರಿಗೆ ಆದೇಶ ಪತ್ರ ನೀಡಿ ಸುಳ್ಳು ದಾಖಲಾತಿಯ ಸೃಷ್ಟಿಗೆ ಕಾರಣರಾಗಿದ್ದಾರೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.

 

ಈ ಖಾತೆಯಲ್ಲಿ 2022ರ ಹೊತ್ತಿಗೆ ಅಂದಾಜು 94.೦೦ ಲಕ್ಷ ಗಳಿಗೂ ಹೆಚ್ಚಿನ ವಹಿವಾಟು ನಡೆದಿದೆ. ಇದರಲ್ಲಿ ಸುಮತಿ ಆರ್ ಗೌಡ ಅವರು 21ಲಕ್ಷ ರು.ಗಳನ್ನು ಸ್ವಂತಕ್ಕೆ ಡ್ರಾ ಮಾಡಿಕೊಂಡಿರುವುದು ಕಂಡು ಬಂದಿದೆ.

 

ಸುಮತಿ ಆರ್ ಗೌಡರವರು 2021ರ ಡಿಸೆಂಬರ್‌ 8ರಂದು ಒಂದೇ ದಿನದಲ್ಲಿ 10.00 ಲಕ್ಷ ರು., 2022ರ ಮಾರ್ಚ್‌ನಲ್ಲಿ 3.00 ಲಕ್ಷ ರು., 2022ರ ಏಪ್ರಿಲ್‌ 30ರಂದು 2.00 ಲಕ್ಷ ರು., 2022ರ ಮೇ 7ರಂದು 5.00 ಲಕ್ಷ ರು., ಜುಲೈ 11ರಂದು 1.00 ಲಕ್ಷ, ನವೆಂಬರ್‌ 17ರಂದು 2.00 ಲಕ್ಷ ರು.ಗಳನ್ನು ಸೆಲ್ಫ್‌ ಡ್ರಾ ಮಾಡಿಕೊಂಡಿರುವುದು ಗೊತ್ತಾಗಿದೆ.

 

ಅದೇ ರೀತಿ ಕರಾಮುವಿಯ ಪ್ರಾದೇಶಿಕ ನಿರ್ದೇಶಕರುಗಳಾದ ರೋಹಿತ್ ಹಚ್ ಎಸ್, ಸುಧಾಕರ್, ಲೋಕೇಶ್ ಆರ್, ಗಿರೀಶ್, ದಿಲೀಪ್ ಹೆಸರುಗಳಿಗೆ 2022ರ ನವೆಂಬರ್‌ 21ರಿಂದ ಡಿಸೆಂಬರ್‌ 1ರವರೆಗೆ ತಲಾ ರೂ. 50-000ಸಾವಿರ ಪಾವತಿಯಾಗಿರುವುದು ತಿಳಿದು ಬಂದಿದೆ.

 

ಕರಾಮುವಿ ಕುಲಪತಿ ಆಪ್ತ ಸಹಾಯಕ ವಿಶಾಲ್ ಎನ್ ಹೆಸರಿಗೆ ರೂ.10000-00, ಡಾ‌.ಎಸ್ ವಿದ್ಯಾಶಂಕರ್ ಆಪ್ತ ಎಂದು ಹೇಳಲಾಗಿರುವ ಬೆಂಗಳೂರಿನ ಬಿಐಟಿ ಕಾಲೇಜಿನ ಅಧ್ಯಾಪಕ ಎಂದು ಹೇಳಲಾಗಿರುವ ಎ ಪಿ ಪಾರ್ಥ ಅವರಿಗೆ 45,000 ರು., ಬೆಂಗಳೂರು ಬಿಐಟಿ ಕಾಲೇಜಿನ ನಿವೃತ್ತಿ ಸಿಬ್ಬಂದಿ ರಂಗರಾಜು ಎಂಬುವರಿಗೆ 10,000 ರು., ಪ್ರಸನ್ನಕುಮಾರ್‌ ಎಂಬುವರಿಗೆ 1,40,000 ರು., ಪಾವತಿಯಾಗಿದೆ.

 

ಹಾಗೆಯೇ ಈ ಖಾತೆಯನ್ನು ಮುಕ್ತಾಯಗೊಳಿಸುವ ಒಂದು ವಾರ ಮೊದಲು 2023ರ ಜುಲೈ 14ರಂದು ಮೈಸೂರಿನ ತೊಳಸಿ ಜ್ಯುವೆಲ್ಲರ್ಸ್‌ ಹೆಸರಿಗೆ 3,26,714 ರು ಪಾವತಿಯಾಗಿದೆ. ರಾಜ್ಯಾದ್ಯಂತ ಹಲವು ಸಂಸ್ಥೆಗಳು ಹಾಗೂ ವ್ಯಕ್ತಿಗಳೊಂದಿಗೆ ವಹಿವಾಟು ಮಾಡಿದೆ.

SUPPORT THE FILE

Latest News

Related Posts