ಬೆಂಗಳೂರು; ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ, ಜೆಎಲ್‌ಆರ್, ಕೆಟಿಐಎಲ್ ಹಾಗೂ ಕರ್ನಾಟಕ ವಸ್ತು ಪ್ರದರ್ಶನ ಸಂಸ್ಥೆಗಳಿಗೆ ಸಲಹಾ ಸೇವೆ ಪಡೆಯಲು ನುರಿತ ಸಮಾಲೋಚಕ ಸಂಸ್ಥೆಯ ಸೇವಾವಧಿಯು ಪೂರ್ಣಗೊಂಡಿದ್ದರೂ ಹೊಸದಾಗಿ ಟೆಂಡರ್ ಕರೆಯದೇ ಸೇವಾವಧಿಯನ್ನು ಪದೇ ಪದೇ ವಿಸ್ತರಿಸಿರುವುದು ಇದೀಗ ಬಹಿರಂಗವಾಗಿದೆ.
ವಿಶೇಷವೆಂದರೇ ಪ್ರವಾಸೋದ್ಯಮ ಇಲಾಖೆಯ ಉನ್ನತ ಅಧಿಕಾರಿಗಳ ತಂಡವು ಈ ಬೆಳವಣಿಗೆಗಳ ಕುರಿತಾದ ಕಡತವನ್ನು ಸಚಿವ ಹೆಚ್ ಕೆ ಪಾಟೀಲ್ ಅವರಿಗೆ ಸಲ್ಲಿಸಿಯೇ ಇಲ್ಲ ಎಂಬ ಗುರುತರವಾದ ಆರೋಪವೊಂದು ಕೇಳಿ ಬಂದಿದೆ.
ಹೊಸದಾಗಿ ಟೆಂಡರ್ ಕರೆಯದೇ ನಾಲ್ಕನೇ ಬಾರಿಗೆ ಸೇವಾವಧಿ ವಿಸ್ತರಿಸಿತ್ತು. ಇದಕ್ಕೆ ಸರ್ಕಾರದ ಅನುಮೋದನೆಯನ್ನೇ ಪಡೆದುಕೊಂಡಿರಲಿಲ್ಲ. ಆದರೆ 2025ರ ಫೆ.21ರಂದು ಸರ್ಕಾರವು ಘಟನೋತ್ತರವಾಗಿ ಅನುಮೋದನೆ ನೀಡಿದೆ. ಇಲಾಖೆಯ ಉನ್ನತ ಅಧಿಕಾರಿಗಳ ತಂಡವು ವ್ಯವಸ್ಥಿತವಾಗಿ ಸಚಿವ ಎಚ್ ಕೆ ಪಾಟೀಲ್ ಅವರನ್ನೇ ಕತ್ತಲಲ್ಲಿಟ್ಟು ಈ ಎಲ್ಲಾ ಪ್ರಕ್ರಿಯೆಗಳನ್ನು ತಮ್ಮ ಹಂತದಲ್ಲಿ ಪೂರ್ಣಗೊಳಿಸಿದೆ ಎಂಬ ಆಪಾದನೆಯೂ ಕೇಳಿ ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಕಡತದ ಟಿಪ್ಪಣಿ ಹಾಳೆಗಳು ಮತ್ತು ಘಟನೋತ್ತರವಾಗಿ ನೀಡಿ ಅನುಮೋದನೆ ನೀಡಿ ಹೊರಡಿಸಿರುವ ಪತ್ರವೂ ‘ದಿ ಫೈಲ್’ಗೆ ಲಭ್ಯವಾಗಿದೆ.
ಪ್ರವಾಸೋದ್ಯಮ ಇಲಾಖೆ ಮತ್ತು ಇಲಾಖೆಯ ಅಂಗ ಸಂಸ್ಥೆಯಾಗಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ, ಜೆಎಲ್‌ಆರ್, ಕೆಟಿಐಎಲ್ ಹಾಗೂ ಕರ್ನಾಟಕ ವಸ್ತು ಪ್ರದರ್ಶನ ಸಸಂಸ್ಥೆಗಳಿಗೆ ಸಲಹಾ ಸೇವೆ ಪಡೆಯಲು ನುರಿತ ಸಮಾಲೋಚಕರನ್ನು ನೇಮಿಸುವ ಸಂಬಂಧ ಟೆಂಡರ್ ಆಹ್ವಾನಿಸಿತ್ತು.
ಇದರಲ್ಲಿ ಭಾಗವಹಿಸಿದ್ದ ಬಿಡ್‌ದಾರರ ಪೈಕಿ ಕೆಪಿಎಂಜಿ ಅಡ್ವೈಸರಿ ಸರ್ವಿಸ್ ಪ್ರೈ ಯಶಸ್ವಿ ಬಿಡ್‌ದಾರರಾಗಿ ಆಯ್ಕೆಯಾಗಿತ್ತು. ಕರಾರು ಒಪ್ಪಂದದ ಪ್ರಕಾರ ಈ ಸೇವಾವಧಿಯು 2023ರ ಏಪ್ರಿಲ್ 12ರಿಂದಲೇ ಅನ್ವಯವಾಗಿತ್ತು. ಇದರ ಮೊತ್ತ 3,21,73,658 ರು. ವಾಗಿತ್ತು ಎಂದು ಕಡತದ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಈ ಕರಾರು ಒಪ್ಪಂದವು 2023ರ ಮೇ 11ರಂದೇ ಅಂತ್ಯಗೊಂಡಿತ್ತು. ಹೀಗಾಗಿ ಹೊಸದಾಗಿ ಟೆಂಡರ್ ಪ್ರಕ್ರಿಯೆ ನಡೆಸಬೇಕಿತ್ತು. ಆದರೆ ಈ ಸೇವಾವಧಿಯನ್ನು 2023ರ ಮೇ 12ರಿಂದ ಮೇ 11ರವರೆಗೆ ಒಂದು ವರ್ಷದ ಅವಧಿಗೆ ಮುಂದುವರೆಸಲಾಗಿತ್ತು. ವಿಶೇಷವೆಂದರೇ ಈ ಒಪ್ಪಂದವೂ 2024ರ ಮೇ 11ರಂದು ಅಂತ್ಯಗೊಂಡಿದ್ದರೂ ಸಹ ಸೇವಾವಧಿಯನ್ನು 2024ರ ಮೇ 12ರಿಂದ ಅಗಸ್ಟ್ 11ರವರೆಗೆ ಮತ್ತೆ ಮೂರು ತಿಂಗಳ ಅವಧಿಗೆ ಮುಂದುವರೆಸಲಾಗಿತ್ತು.
ಹೀಗೆ ಸೇವಾವಧಿಯು 3 ಬಾರಿ ವಿಸ್ತರಣೆ ಮಾಡಲು ಉನ್ನತ ಅಧಿಕಾರಿಗಳ ತಂಡವು ಕಾರ್ಯಾಚರಿಸಿತ್ತೇ ವಿನಃ ವಿನಃ ಹೊಸದಾಗಿ ಟೆಂಡರ್ ಕರೆಯಲು ಮುಂದಾಗಿರಲಿಲ್ಲ. ಬದಲಿಗೆ ನಾಲ್ಕನೇ ಬಾರಿ ಸೇವಾವಧಿಯನ್ನು ವಿಸ್ತರಿಸಿತ್ತು. ಇದರ ಪ್ರಕಾರ 2024ರ ಆಗಸ್ಟ್ 12ರಿಂದ 2025ರ ಜನವರಿ 11ರವರೆಗೆ ಈ ಸೇವಾವಧಿಯು ವಿಸ್ತರಣೆಗೊಂಡಿತ್ತು.
ವಿಶೇಷವೆಂದರೇ ಈ ಬೆಳವಣಿಯು ಪ್ರವಾಸೋದ್ಯಮ ಸಚಿವ ಹೆಚ್ ಕೆ ಪಾಟೀಲ್ ಅವರ ಗಮನಕ್ಕೇ ಬಂದಿಲ್ಲ ಮತ್ತು ಕಡತವನ್ನೂ ಅವರ ಕಚೇರಿಗೂ ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.
2023ರ ಅಗಸ್ಟ್ 24ರಿಂದ 2025ರ ಫೆ.21ರವರೆಗಿನ ಇ-ಆಫೀಸ್ ಕಡತದ ಚಲನವಹಿ ಪ್ರಕಾರ ಇದಕ್ಕೆ ಸಂಬಂಧಿಸಿದ ಕಡತವು ಸಚಿವ ಹೆಚ್ ಕೆ ಪಾಟೀಲ್ ಅವರ ಬಳಿಗೆ ಹೋಗದೇ ಇರುವುದು ಕಂಡು ಬಂದಿದೆ.
2025ರ ಫೆ.24ರವರೆಗೂ ಇ-ಆಫೀಸ್ ಕಡತವು ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮತ್ತು ಕೆಳಗಿನ ಹಂತದ ಅಧಿಕಾರಿಗಳ ಲಾಗಿನ್‌ನಲ್ಲೇ ಇರುವುದು ಗೊತ್ತಾಗಿದೆ.
ಸಚಿವರ ಗಮನಕ್ಕೆ ತಾರದೆಯೇ ಸರ್ಕಾರದಿಂದಲೇ ಘಟನೋತ್ತರ ಅನುಮೋದನೆಯನ್ನು ಪಡೆಯುವಲ್ಲಿ ಉನ್ನತ ಅಧಿಕಾರಿಗಳ ತಂಡವು ಯಶಸ್ವಿಯಾಗಿದೆ.
ಸರ್ಕಾರವು ಘಟನೋತ್ತರವಾಗಿ ಅನುಮೋದನೆ ನೀಡಿರುವ ಕುರಿತು ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಪ್ರವಾಸೋದ್ಯಮ ನಿಗಮದ 2025ರ ಫೆ.21ರಂದು ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
2023ರ ಮೇ 12ರಿಂದ 2024ರ ಮೇ 11ರವರೆಗೆ ಒಂದು ವರ್ಷದ ಅವಧಿವರೆಗೆ ಗುತ್ತಿಗೆ ಪೂರ್ಣಗೊಂಡ ನಂತರವೂ ಸೇವಾವಧಿಯನ್ನು ಮುಂದುವರೆಸಲು ಕೆಪಿಎಂಜಿ ಸಂಸ್ಥೆಯ ಸೇವಾವಧಿಯನ್ನು ಸರ್ಕಾರಕ್ಕೆ ಕೋರಿತ್ತು.
40,21,707 (ತೆರಿಗೆ ಸಹಿತ) ಸೇವಾ ಶುಲ್ಕವನ್ನು 2024ರ ನವೆಂಬರ್‍ರವರೆಗೆ 3 ತಿಂಗಳ ಅವಧಿಗೆ ಸೇವೆ ಮುಂದುವರೆಸಲು ಕೋರಿತ್ತು. ಈ ಪಿಎಂಯುಗೆ ಸಂಬಂಧಿಸಿದಂತೆ ಅರ್ಹ/ಆಸಕ್ತ ಬಿಡ್‌ದಾರರನ್ನು ಆಯ್ಕೆ ಮಾಡುವ ಸಂಬಂಧ 2024ರ ಆಗಸ್ಟ್ 29ರಂದು ಇ-ಪ್ರೊಕ್ಯೂರ್‍ಮೆಂಟ್ ಮೂಲಕ ಟೆಂಡರ್ ಕರೆಯಲು ಸಭೆ ನಡೆದಿತ್ತು. ಆದರೆ ಇ ಆಫೀಸ್‌ನಲ್ಲಿ ತಾಂತ್ರಿಕ ದೋಷವಿದ್ದ ಕಾರಣ ಕಡತವನ್ನು ನೇರವಾಗಿ ಪ್ರಧಾನ ವ್ಯವಸ್ಥಾಪಕರಿಗೆ ಸಲ್ಲಿಕೆಯಾಗಿತ್ತು ಎಂದು ಗೊತ್ತಾಗಿದೆ.
ಪಿಎಂಯು ಗೆ ಸಂಬಂಧಿಸಿದಂತೆ ನೀಡಿದ್ದ ಗುತ್ತಿಗೆಯು ಒಂದು ವರ್ಷ ಮತ್ತು 3 ತಿಂಗಳವರೆಗೆ ವಿಸ್ತರಣೆಯಾಗಿತ್ತು. ಆದರೂ ಸಹ ಎರಡನೇ ಬಾರಿಗೂ ಸೇವಾವಧಿ ವಿಸ್ತರಿಸಲು ಕೋರಿತ್ತು.
ಕೆಪಿಎಂಜಿ ಅಡ್ವೈಸರಿ ಸರ್ವಿಸಸ್ ಪ್ರೈ ಲಿ ಸಂಸ್ಥೆಯಿಂದ ಸಲಹಾ ಸೇವೆಯನ್ನು ಪಡೆಯುವ ಸಂಬಂಧ 2024ರ ಮೇ 12ರಿಂದ 2024ರ ಆಗಸ್ಟ್ 11ರವರಗೆ ಅನ್ವಯವಾಗುವಂತೆ 3 ತಿಂಗಳ ಅವಧಿಗೆ ಟೆಂಡರ್‍ನಲ್ಲಿ ಸೂಚಿಸಿರುವ ಷರತ್ತು ಮತ್ತು ನಿಯಮಗಳಿಗೆ ಒಳಪಟ್ಟು 40,21,707 ರು. ಪಾವತಿಗೆ ಒಪ್ಪಿತ್ತು. ಈ ಸಂಬಂಧ ಕಚೇರಿ ಆದೇಶವನ್ನು ಜಾರಿ ಮಾಡಿತ್ತು.
ಈ ಸೇವಾವಧಿಯು 2024ರ ಆಗಸ್ಟ್ 11ಕ್ಕೆ ಮುಕ್ತಾಯಗೊಂಡ ಕಾರಣ ಸೇವಾ ಅವಧಿಯನ್ನು 2023ರ ಆಗಸ್ಟ್ 12ರಿಂದ 2025ರ ಜನವರಿ 11ರವರೆಗೆ ಶುಲ್ಕ ಮೊತ್ತದ 67,02,845 ರು.ಗಳಂತೆ 5 ತಿಂಗಳ ಅವಧಿಗೆ ವಿಸ್ತರಣೆ ಮಾಡುವಂತೆ ಈ ಸಂಸ್ಥೆಯು ಕೋರಿತ್ತು.
ಈ ಸೇವಾವಧಿಯು 2024ರ ಆಗಸ್ಟ್ 11ಕ್ಕೆ ಮುಕ್ತಾಯಗೊಂಡಿದ್ದರಿಂದ ಸದ್ಯ ಪಿಎಂಯುಗೆ ಸಂಬಂಧಿಸಿದಂತೆ ಅರ್ಹ/ಆಸಕ್ತಿ ಬಿಡ್‌ದಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಚಾಲ್ತಿಯಲ್ಲಿತ್ತು. ಆದರೂ ಸಹ ಸೇವಾವಧಿಯನ್ನು 2025ರ ಜನವರಿ 11ರವರೆಗೆ ಸೇವಾ ಶುಲ್ಕದ ಮೊತ್ತ 67,02,845 ರು.ಗಳಂತೆ 5 ತಿಂಗಳ ಅವಧಿಗೆ ಸಲಹೆ ಸೇವೆಯನ್ನು ಘಟನೋತ್ತರವಾಗಿ ಅನುಮೋದನೆ ಪಡೆದಿದೆ.
ಒಟ್ಟು 6 ತಿಂಗಳ ಬಿಲ್‌ನ ಎರಡು ಇನ್ವಾಯ್ಸ್‌ಗಳನ್ನು ಸಲ್ಲಿಸಲಾಗಿತ್ತು. ಮುಖ್ಯಮಂತ್ರಿಗಳ ಅನುಮೋದನೆ ಪ್ರಕಾರ ಒಟ್ಟು 80,43,413 ರು.ಗಳನ್ನು ಕೆಪಿಎಂಜಿ ಅಡ್ವೈಸರಿ ಸರ್ವಿಸ್ ಗೆ ನಿಗಮಕ್ಕೆ ಬಿಡುಗಡೆ ಮಾಡಬೇಕು ಎಂದು ಕಡತ ಮಂಡಿಸಲಾಗಿತ್ತು ಎಂದು ಗೊತ್ತಾಗಿದೆ.