ಜಲಜೀವನ್‌ ಮಿಷನ್‌ ಜಟಾಪಟಿ; ಜನವರಿ 2025ರ ಅಂತ್ಯಕ್ಕೆ 4,773.64 ಕೋಟಿ ಬಿಡುಗಡೆಗೆ ಬಾಕಿ, ಅಂಕಿ ಅಂಶ ಬಹಿರಂಗ

ಬೆಂಗಳೂರು; ಮಹತ್ವಾಕಾಂಕ್ಷೆ ತಾಲೂಕುಗಳೂ ಸೇರಿದಂತೆ  ಗ್ರಾಮೀಣಾಭಿವೃದ್ದಿ ಇಲಾಖೆಯು ವಿವಿಧ ಲೆಕ್ಕಶೀರ್ಷಿಕೆಗಳ ಮೂಲಕ   2024-25ನೇ ಸಾಲಿನಲ್ಲಿ  ಅನುಷ್ಠಾಗೊಳಿಸಿರುವ  ಜಲಜೀವನ್‌ ಮಿಷನ್‌ ಯೋಜನೆಗೆ ಇನ್ನೂ  4,773.64 ಕೋಟಿ ರು ಬಿಡುಗಡೆ ಬಾಕಿ ಇದೆ.

 

ಜಲಜೀವನ್‌ ಮಿಷನ್‌ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸಚಿವ ವಿ ಸೋಮಣ್ಣ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಜಟಾಪಟಿ ನಡೆಯುತ್ತಿರುವ ಬೆನ್ನಲ್ಲೇ 2024-25ನೇ ಸಾಲಿನ ಅನುದಾನ, ಬಿಡುಗಡೆ, ವೆಚ್ಚಕ್ಕೆ ಸಂಬಂಧಿಸಿದ ಅಂಕಿ ಅಂಶಗಳ ವಿವರಗಳು ಮುನ್ನೆಲೆಗೆ ಬಂದಿವೆ.

 

2024-25ನೇ ಸಾಲಿನ ಜನವರಿ 2025ರ ಅಂತ್ಯಕ್ಕೆ ಗ್ರಾಮೀಣಾಭಿವೃದ್ದಿ ಇಲಾಖೆಯ ಕಾರ್ಯಕ್ರಮವಾರು ಹಂಚಿಕೆಯಾಗಿರುವ ಅನುದಾನ, ಬಿಡುಗಡೆ ಮತ್ತು ಮಾಡಿರುವ ವೆಚ್ಚದ ವಿವರಗಳ ಕುರಿತು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯ ಸಭೆಯು ಚರ್ಚಿಸಿದೆ. 2025ರ ಫೆ.15ರಂದು ನಡೆದ ಸಭೆಯಲ್ಲಿ ಜಲ ಜೀವನ್‌ ಮಿಷನ್‌ ಯೋಜನೆಗೆ ವಿವಿಧ  ಲೆಕ್ಕ ಶೀರ್ಷಿಕೆಗಳಡಿಯಲ್ಲಿ  ಎಷ್ಟೆಷ್ಟು ಮೊತ್ತವು ಬಿಡುಗಡೆಯಾಗಿದೆ ಎಂದು ಇಲಾಖೆ ಅಧಿಕಾರಿಗಳು ಅಂಕಿ ಅಂಶಗಳ ಸಮೇತ ವಿವರ ಒದಗಿಸಿದ್ದಾರೆ.

 

ಈ ಸಭೆಗೆ ಮಂಡಿಸಲಾಗಿರುವ ಅಂಕಿ ಅಂಶಗಳ ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಇಲಾಖಾಧಿಕಾರಿಗಳು ಮಂಡಿಸಿರುವ ಅಂಕಿ ಅಂಶಗಳ ಪ್ರಕಾರ 2024-25ನೇ ಸಾಲಿಗೆ ಜಲಜೀವನ್‌ ಮಿಷನ್‌ ಯೋಜನೆಗೆ ವಿವಿಧ ಲೆಕ್ಕ ಶೀರ್ಷಿಕೆಗಳಡಿಯಲ್ಲಿ ಒಟ್ಟಾರೆ 10,.594.14 ಕೋಟಿ ರು ಅನುದಾನ ಒದಗಿಸಿಕೊಂಡಿತ್ತು. ಈ ಪೈಕಿ 5,820.5 ಕೋಟಿ ರು ಅನುದಾನ ಬಿಡುಗಡೆಯಾಗಿತ್ತು. ಇದರಲ್ಲಿ 2025ರ ಜನವರಿ ಅಂತ್ಯಕ್ಕೆ 5,790.55 ಕೋಟಿ ರು ವೆಚ್ಚವಾಗಿತ್ತು. ಬಿಡುಗಡೆಯಾಗಿದ್ದ ಅನುದಾನಕ್ಕೆ ಹೋಲಿಸಿದರೆ ಹೆಚ್ಚುವರಿಯಾಗಿ 29.95 ಕೋಟಿ ರು ವೆಚ್ಚ ಮಾಡಿರುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ.

 

ಮಹತ್ವಾಕಾಂಕ್ಷೆ ತಾಲೂಕುಗಳಡಿಯಲ್ಲಿ  ಜಲಜೀವನ್‌ ಮಿಷನ್‌ ಯೋಜನೆಯ ಗ್ರಾಮೀಣ ಕುಡಿಯುವ ನೀರು ಯೋಜನೆಗೆ ಕೇಂದ್ರ ಪುರಸ್ಕೃತ ಅಡಿಯಲ್ಲಿ ಕೇಂದ್ರವು ತನ್ನ ಆಯವ್ಯಯದಲ್ಲಿ 300.00 ಕೋಟಿ ರು ಒದಗಿಸಿಕೊಂಡಿತ್ತು. ಆದರೆ 2025ರ ಜನವರಿ ಅಂತ್ಯಕ್ಕೆ ಬಿಡಿಗಾಸನ್ನೂ ಬಿಚ್ಚಿಲ್ಲ. ಹೀಗಾಗಿ ಈ ತಾಲೂಕುಗಳಲ್ಲಿ ಜಲಜೀವನ್‌ ಮಿಷನ್‌ ಯೋಜನೆಗೆ ಶೂನ್ಯ ವೆಚ್ಚವಾಗಿದೆ.

 

 

ಅದೇ ರೀತಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಜಲಜೀವನ್‌ ಮಿಷನ್‌ (ಇಎಪಿ ಇಂಡ್ 9496) ಅಡಿಯಲ್ಲಿ ಆಯವ್ಯಯದಲ್ಲಿ 140.60 ಕೋಟಿ ರು ಒದಗಿಸಿಕೊಂಡಿತ್ತು. ಇದರಲ್ಲಿ ಜನವರಿ 2025ರ ಅಂತ್ಯಕ್ಕೆ 105.45 ಕೋಟಿ ರು ಬಿಡುಗಡೆ ಮಾಡಿದೆ. ಆದರೆ ಇದರಲ್ಲಿ ರಾಜ್ಯವು ಕೇವಲ 1.05 ಕೋಟಿಯನ್ನಷ್ಟೇ ವೆಚ್ಚ ಮಾಡಿರುವುದು ತಿಳಿದು ಬಂದಿದೆ.

 

ಹಾಗೆಯೇ ಬಾಹ್ಯಾನುದಾನಿತ ಕಾರ್ಯಕ್ರಮದಲ್ಲಿ ಅನುಷ್ಠಾನಗೊಂಡಿರುವ ಜಲಜೀವನ್‌ ಮಿಷನ್‌ ಯೋಜನೆಗೆ ಆಯವ್ಯಯದಲ್ಲಿ  703.0 ಕೋಟಿ ರು ಅನುದಾನ ಅಂದಾಜಿಸಿತ್ತು. ಇದರಲ್ಲಿ 500.00 ಕೋಟಿ ಪ್ರಾರಂಭಿಕ ಶಿಲ್ಕು ಇತ್ತು. ಈ ಲೆಕ್ಕ ಶೀರ್ಷಿಕೆಯಲ್ಲಿ ಒಟ್ಟಾರೆ 1,027.0 ಕೋಟಿ ರು ಅನುದಾನ ಲಭ್ಯವಿತ್ತು.   ಈ ಪೈಕಿ 527.00 ಕೋಟಿ ರು ಬಿಡುಗಡೆಯಾಗಿತ್ತು. ಆದರೆ 592.35 ಕೋಟಿ ರು ವೆಚ್ಚ ಮಾಡಿದೆ.

 

 

ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿನ ಜಲಜೀವನ್‌ ಮಿಷನ್‌ ಯೋಜನೆಗೆ ರಾಜ್ಯದ ಪಾಲು 4,950.00 ಕೋಟಿ ಮತ್ತು ಪ್ರಾರಂಭಿಕ ಶಿಲ್ಕು 2,797.54 ಕೋಟಿ ರು ಸೇರಿ ಒಟ್ಟಾರೆ 7,747.54 ಕೋಟಿ ರು ಇತ್ತು. ಇದರಲ್ಲಿ 2025ರ ಜನವರಿ ಅಂತ್ಯಕ್ಕೆ 4,450.00 ಕೋಟಿ ರು ಬಿಡುಗಡೆಯಾಗಿತ್ತು. ಇದರಲ್ಲಿ 4,719.07 ಕೋಟಿ ರು ವೆಚ್ಚವಾಗಿರುವುದು ಗೊತ್ತಾಗಿದೆ.

 

ಇಎಪಿ ಅಡಿಯಲ್ಲಿಯೂ ಜಲ ಜೀವನ್‌ ಮಿಷನ್‌ ಯೋಜನೆಗೆ 1,203.00 ಕೋಟಿ ರು ಅನುದಾನ ಒದಗಿಸಿಕೊಂಡಿತ್ತು. ಜನವರಿ 2025ರ ಅಂತ್ಯಕ್ಕೆ 592.34 ಕೋಟಿ ರು ವೆಚ್ಚ ಮಾಡಿದೆ.

 

 

ರಾಜ್ಯ, ಜಿಲ್ಲಾ ವಲಯದ ಅಭಿವೃದ್ಧಿ, ವೇತನ ಮತ್ತು ಹೊಸ ಯೋಜನೆಗಳಿಗಾಗಿ 2024-25ನೇ ಸಾಲಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಒಟ್ಟಾರೆ 37,621.96 ಕೋಟಿ ರು.ಗಳ ಬೇಡಿಕೆಯನ್ನು ಮಂಡಿಸಿತ್ತು.

 

2023-24ನೇ ಸಾಲಿನಲ್ಲಿ ಈ ವಲಯಗಳಿಗೆ ಒಟ್ಟಾರೆ 17,904.06 ಕೋಟಿ ರು. ಹಂಚಿಕೆ ಮಾಡಲಾಗಿತ್ತು. 2024-25ನೇ ಸಾಲಿನಲ್ಲಿ 19,717.9 ಕೋಟಿ ರು. ಹೆಚ್ಚುವರಿ ಬೇಡಿಕೆ ಪಟ್ಟಿಯನ್ನು ಸರ್ಕಾರದ ಮುಂದಿರಿಸಿತ್ತು.  ಇದರಲ್ಲಿ ಜಲಧಾರೆ, ಜಲಜೀವನ್‌ ಮಿಷನ್‌, ಗ್ರಾಮೀಣ ನೀರು ಸರಬರಾಜು, ಗ್ರಾಮ ಸಡಕ್‌, ಕೆರೆಗಳ ಪುನರುಜ್ಜೀವನ ಸೇರಿದಂತೆ ಇನ್ನಿತರೆ ಮಹತ್ವಾಕಾಂಕ್ಷೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ 22,647.04 ಕೋಟಿ ರು. ಅನುದಾನ ಬೇಕು ಎಂದು ಕೋರಿತ್ತು.

 

2024-25ನೇ ಸಾಲಿನಲ್ಲಿ 37,621.96 ಕೋಟಿ ರು. ಅನುದಾನ ಒದಗಿಸಬೇಕು ಎಂದು ಇಲಾಖೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿತ್ತು.

 

2023-24ನೇ ಸಾಲಿನಲ್ಲಿ ಒಟ್ಟು 27 ಕಾರ್ಯಕ್ರಮಗಳಿಗೆ 7,370.93 ಕೋಟಿ ರು. ಒದಗಿಸಲಾಗಿತ್ತು. ಈ ಪೈಕಿ ಇದುವರೆಗೂ 6,211.20 ಕೋಟಿ ರು. ವೆಚ್ಚವಾಗಿದೆ. ಈ ಕಾರ್ಯಕ್ರಮಗಳಿಗೆ ಆರ್ಥಿಕ ಇಲಾಖೆಯು 5,321.06ಕೋಟಿ ರು.ಗಳನ್ನು ಸೂಚಿಸಿತ್ತು. ಆದರೆ 890.14 ಕೋಟಿ ರು. ಹೆಚ್ಚುವರಿಯಾಗಿ ವೆಚ್ಚ ಮಾಡಿದೆ. ಅಲ್ಲದೇ 17,325.98 ಕೋಟಿ ರು. ಹೆಚ್ಚುವರಿ ಸೇರಿ 2024-25ನೇ ಸಾಲಿಗೆ ಒಟ್ಟಾರೆ 22,647.04 ಕೋಟಿ ರು. ಒದಗಿಸಬೇಕು ಎಂದು ಪ್ರಸ್ತಾವ ಸಲ್ಲಿಸಿತ್ತು.

 

ಜಿಲ್ಲಾ ವಲಯಗಳಲ್ಲಿರುವ 19 ಯೋಜನೆಗಳಿಗೆ 2023-24ನೇ ಸಾಲಿನಲ್ಲಿ 7,693.81 ಕೋಟಿ ರು. ಅನುದಾನ ಒದಗಿಸಲಾಗಿತ್ತು. ಈ ಪೈಕಿ ಇದುವರೆಗೆ 3,843.83 ಕೋಟಿ ರು. ವೆಚ್ಚವಾಗಿದೆ. ಈ ವಲಯದ ಕಾರ್ಯಕ್ರಮಗಳಿಗೆ ಹೆಚ್ಚುವರಿ 2,467.89 ಕೋಟಿ ರು. ಸೇರಿ ಒಟ್ಟಾರೆ 10,161.70 ಕೋಟಿ ರು. ಒದಗಿಸಬೇಕು ಎಂದು ಕೋರಿತ್ತು.

ಜಲಧಾರೆ, ಜಲಜೀವನ್‌ ಮಿಷನ್‌, ಗ್ರಾಮೀಣಾಭಿವೃದ್ಧಿಗೆ 37,621.96 ಕೋಟಿ ರು.ಗಳ ಬೇಡಿಕೆ

ಸಚಿವರು, ಶಾಸಕರು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ರಸ್ತೆ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲು ಸಲ್ಲಿಸಿರುವ ಕೋರಿಕೆ ಈಡೇರಿಸಲು ಸರ್ಕಾರದ ಬಳಿ 245.37 ಕೋಟಿ ರು. ಅನುದಾನವಿಲ್ಲ ಎಂದ ಇಲಾಖೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿರುವ ಬೆನ್ನಲ್ಲೇ ರಾಜ್ಯ ವಲಯಕ್ಕೆ ಕೋರಿರುವ ಅನುದಾನ ಒದಗಿಸದೇ ಇದ್ದಲ್ಲಿ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನೇ ಅರ್ಧಕ್ಕೆ ನಿಲ್ಲಿಸಬೇಕಾದ ಸ್ಥಿತಿಯೂ ಎದುರಾಗಿದೆ.

 

ರಾಜ್ಯದ ಎಲ್ಲಾ ಗ್ರಾಮೀಣ ಮನೆಗಳ ನಳ ಸಂಪರ್ಕ ಒದಗಿಸುವ ಗುರಿ ತಲುಪಲು ಒಟ್ಟಾರೆ 73,434.40 ಕೋಟಿ ರು. ಅವಶ್ಯಕತೆ ಇದೆ. 2024-25ನೇ ಸಾಲಿನಲ್ಲಿ ಒಟ್ಟು 14,300 ಕೋಟಿ ರು. ಅಗತ್ಯವಿತ್ತು. ಈ ಪೈಕಿ ಕೇಂದ್ರ ಸರ್ಕಾರದ ಪಾಲು 8,800 ಕೋಟಿ ರು., ರಾಜ್ಯದ ಪಾಲು 5,500 ಕೋಟಿ ರು. ಒದಗಿಸಬೇಕಿತ್ತು.

 

ಜಲಧಾರೆ ಒಳಗೊಂಡಂತೆ ಗ್ರಾಮೀಣ ನೀರು ಸರಬರಾಜು ಯೋಜನೆ (ಲೆಕ್ಕ ಶೀರ್ಷಿಕೆ; 4215-01-102-2-01) ಅಡಿಯಲ್ಲಿ 300 ಕೋಟಿ ರು. ನೀಡಿದ್ದರೂ ಇದುವರೆಗೆ ಕೇವಲ 15.39 ಕೋಟಿಯಷ್ಟೇ ವೆಚ್ಚವಾಗಿದೆ. ಆದರೂ 2024-25ನೇ ಸಾಲಿಗೆ ಹೆಚ್ಚುವರಿ 185 ಕೋಟಿ ರೂ ಸೇರಿದಂತೆ ಒಟ್ಟಾರೆ 485.00 ಕೋಟಿ ರು. ಅವಶ್ಯಕತೆ ಇದೆ ಎಂದು ಅಂದಾಜಿಸಿತ್ತು.

 

ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಜಲಜೀವನ್‌ ಮಿಷನ್‌ಗೆ ಕೇಂದ್ರದ ಪಾಲು (ಗ್ರಾಮೀಣ ಕುಡಿಯುವ ನೀರು) 2023-24ರಲ್ಲಿ 1,500 ಕೋಟಿ ರು. ಮತ್ತು ರಾಜ್ಯದ ಪಾಲು 3,233.76 ಕೋಟಿ ರು ಅಂದಾಜಿಸಲಾಗಿತ್ತು. ಈ ಪೈಕಿ 5,213.06 ಕೋಟಿ ರು. ವೆಚ್ಚವಾಗಿತ್ತು. ಹಿಂದಿನ ವರ್ಷದ ಅಂದಾಜಿಗಿಂತ ಹೆಚ್ಚುವರಿಯಾಗಿ 3,000 ಕೋಟಿ ರು. ಒದಗಿಸಬೇಕು ಎಂದು ಪ್ರಸ್ತಾವದಲ್ಲಿ ವಿವರಿಸಿತ್ತು.

 

ಗ್ರಾಮೀಣ ನೀರು ಸರಬರಾಜು ಯೋಜನೆಗಳು ಮತ್ತು ಕೊಳವೆ ಬಾವಿಗಳ ಯೋಜನೆಗಳ ನಿರ್ವಹಣೆಗೆ ಹಿಂದಿನ ಸಾಲಿನಲ್ಲಿ ನೀಡಿದ್ದ 250 ಕೋಟಿ ರು.ನಲ್ಲಿ 225.62 ಕೋಟಿ ರು. ವೆಚ್ಚವಾಗಿದೆ. ಹೀಗಾಗಿ ಬಾಕಿ ಕಾಮಗಾರಿಗಳನ್ನು ಪೂರೈಸಲು 2024-25ನೇ ಸಾಲಿನಲ್ಲಿ 15 ಕೋಟಿ ರು. ಹೆಚ್ಚುವರಿ ಸೇರಿದಂತೆ ಒಟ್ಟಾರೆ 715 ಕೋಟಿ ರು. ಅವಶ್ಯಕತೆ ಇತ್ತು.

SUPPORT THE FILE

Latest News

Related Posts