2.31 ಲಕ್ಷ ಮಂದಿ ನಿರುದ್ಯೋಗಿಗಳಿಂದ ಉದ್ಯೋಗಕ್ಕಾಗಿ ನೋಂದಣಿ; ಅಂಕಿ ಸಂಖ್ಯೆ ಬಹಿರಂಗ

ಬೆಂಗಳೂರು; ರಾಜ್ಯದ ಉದ್ಯೋಗ ವಿನಿಮಯ ಕೇಂದ್ರ ಕಚೇರಿಗಳಲ್ಲಿ 2024ರ ಡಿಸೆಂಬರ್‍‌ ಅಂತ್ಯಕ್ಕೆ 2.31 ಲಕ್ಷದಷ್ಟು ಮಂದಿ ಉದ್ಯೋಗ ಬಯಸಿ ನೋಂದಣಿ ಮಾಡಿಕೊಂಡಿದ್ದಾರೆ.

 

ಉದ್ಯೋಗ ಸೃಷ್ಟಿ ಮತ್ತು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಪ್ರತೀ ವರ್ಷವೂ ಸರ್ಕಾರಗಳ ಮೇಲೆ ನಿರುದ್ಯೋಗಿಗಳು ಒತ್ತಡ ಹೇರುತ್ತಲೇ ಇದ್ದಾರೆ. ಹಾಗೆಯೇ ಪ್ರತಿ ವರ್ಷವೂ ಉದ್ಯೋಗ ಬಯಸಿ ನೋಂದಣಿ ಮಾಡಿಸುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಲೇ ಇದೆ.

 

ಕಾರ್ಮಿಕ, ಉದ್ಯೋಗ ಮತ್ತು ತರಬೇತಿ ಇಲಾಖೆಯು ಸಿದ್ಧಪಡಿಸಿರುವ ಇತ್ತೀಚಿನ ವರದಿಯಲ್ಲಿ ವಿವಿಧ ವಲಯಗಳಲ್ಲಿ ಉದ್ಯೋಗ ಸೃಷ್ಟಿ, ಉದ್ಯೋಗ ಬಯಸಿ ನೋಂದಣಿ ಮಾಡಿಕೊಂಡಿರುವವರ ಅಂಕಿ ಸಂಖ್ಯೆ ಸಹಿತ ಹಲವು ಸಂಗತಿಗಳನ್ನು ದಾಖಲಿಸಿದೆ. ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ವರದಿ ಕುರಿತು ಸಚಿವ ಸಂತೋಷ್‌ ಲಾಡ್‌ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

ಮಾರ್ಚ್‌ 2024ರ ಅಂತ್ಯಕ್ಕೆ 2.318 ಲಕ್ಷ ಮಂದಿ ಉದ್ಯೋಗ ಬಯಸಿ ನೋಂದಣಿ ಮಾಡಿಕೊಂಡಿದ್ದರೇ ಡಿಸೆಂಬರ್‍‌ 2024ರ ಅಂತ್ಯಕ್ಕೆ 2.316 ಲಕ್ಷ ಮಂದಿ ನೋಂದಣಿ ಮಾಡಿಸಿದ್ದರು. ಇದರಲ್ಲಿ 0.073ರಷ್ಟು ಇಳಿಕೆಯಾಗಿತ್ತು.

 

ಮೆಟ್ರಿಕ್ಯುಲೇಷನ್‌ ವಿಭಾಗದಲ್ಲಿ ಮತ್ತು ಸ್ಟೆನೋಗ್ರಾಫರ್ಸ್‌ ವಲಯದಲ್ಲಿ ಶೇ.4.16ರಷ್ಟು  ಹೆಚ್ಚಳವಾಗಿದೆ . ಸ್ನಾತಕೋತ್ತರ ವಿಭಾಗದಲ್ಲಿ 0.43ರಷ್ಟು ಇಳಿಕೆಯಾಗಿದೆ. ಪದವೀಧರ ವಲಯದಲ್ಲಿಯೂ ಶೇ.0.06ರಷ್ಟು ಇಳಿಕೆಯಾಗಿದೆ.

 

ಡಿಪ್ಲೋಮಾ ಪದವೀಧರರ ಸಂಖ್ಯೆಯಲ್ಲಿ ಶೇ.7.86, ಐಟಿಐ ಮತ್ತು ಇತರೆ ವಿಭಾಗಗಳಲ್ಲಿ ಶೇ.9.70ರಷ್ಟು ಪದವಿ ಪಡೆದು ಉದ್ಯೋಗಕ್ಕಾಗಿ ನೋಂದಣಿ ಮಾಡಿಸಿದ್ದಾರೆ. ಅದೇ ರೀತಿ ಮೆಟ್ರಿಕ್ಯುಲೇಷನ್‌ಗಿಂತ ಕೆಳಗೆ ಇರುವವರು ಶೇ. 19.55ರಷ್ಟು ಮಂದಿ ಉದ್ಯೋಗ ಬಯಸಿ ನೋಂದಣಿ ಮಾಡಿರುವುದು ಗೊತ್ತಾಗಿದೆ.

 

 

 

2023ರ ಮಾರ್ಚ್‌ ಅಂತ್ಯಕ್ಕೆ 2,503 ಸಂಖ್ಯೆಯ ಸ್ನಾತಕೋತ್ತರ ಪದವೀಧರರು ಉದ್ಯೋಗ ಬಯಸಿ ನೋಂದಣಿ ಮಾಡಿಸಿದ್ದರೇ ಇದೇ ವಿಭಾಗದಿಂದ 2024ರ ಮಾರ್ಚ್‌ ಅಂತ್ಯಕ್ಕೆ 2,321 ಮತ್ತು ಡಿಸೆಂಬರ್‍‌ 2024ರ ಅಂತ್ಯಕ್ಕೆ 2,311 ಮಂದಿ ನೋಂದಣಿ ಮಾಡಿಸಿರುವುದು ಗೊತ್ತಾಗಿದೆ. ಅದೇ ರೀತಿ 2023ರ ಮಾರ್ಚ್‌ ಅಂತ್ಯಕ್ಕೆ 34,270 ಮಂದಿ ಪದವೀಧರರು, 2024ರ ಮಾರ್ಚ್‌ ಅಂತ್ಯಕ್ಕೆ 34,710, ಡಿಸೆಂಬರ್‍‌ 2024ರ ಅಂತ್ಯಕ್ಕೆ 34,688 ಮಂದಿ ಉದ್ಯೋಗ ಬಯಸಿ ನೋಂದಣಿ ಮಾಡಿಸಿರುವುದು ತಿಳಿದು ಬಂದಿದೆ.

 

2023 ಮಾರ್ಚ್‌ ಅಂತ್ಯಕ್ಕೆ 10,077ಸಂಖ್ಯೆಯ ಡಿಪ್ಲೋಮಾ ಪದವೀಧರರು ಉದ್ಯೋಗ ಬಯಸಿ ನೋಂದಣಿ ಮಾಡಿಸಿದ್ದಾರೆ. 2024ರ ಮಾರ್ಚ್‌ ಅಂತ್ಯಕ್ಕೆ 13,623, 2024ರ ಡಿಸೆಂಬರ್‍‌ ಅಂತ್ಯಕ್ಕೆ 12,552 ಮಂದಿ ಡಿಪ್ಲೋಮಾ ಪದವೀಧರರು ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ಹಾಗೆಯೇ ಐಟಿಐ, ಅಪ್ರೆಂಟಿಷಿಪ್‌, ಇತರೆ ವಿಭಾಗಗಳ ಪದವೀಧರರು 2023 ಮಾರ್ಚ್‌ ಅಂತ್ಯಕ್ಕೆ 46,307 ಸಂಖ್ಯೆಯಲ್ಲಿ ಇದ್ದರೇ 2024ರ ಮಾರ್ಚ್‌ ಅಂತ್ಯಕ್ಕೆ ಈ ಸಂಖ್ಯೆಯು 13,623ಕ್ಕೇರಿತ್ತು. ಡಿಸೆಂಬರ್‍‌ 2024ರ ಅಂತ್ಯಕ್ಕೆ ಈ ಸಂಖ್ಯೆಯು 12,552ಕ್ಕೆ ಇಳಿದಿರುವುದು ಗೊತ್ತಾಗಿದೆ.

 

ಮೆಟ್ರಿಕ್ಯುಲೇಷನ್‌ ಮತ್ತು ಸ್ಟೇನೋಗ್ರಾಫರ್ಸ್‌ ವಿಭಾಗದಲ್ಲಿ 2023ರ ಮಾರ್ಚ್‌ ಅಂತ್ಯಕ್ಕೆ 1,55,562ರಷ್ಟು ಮಂದಿ ಉದ್ಯೋಗ ಬಯಸಿದ್ದರು. 2024ರ ಮಾರ್ಚ್‌ ಅಂತ್ಯಕ್ಕೆ 1,40,348, 2024ರ ಡಿಸೆಂಬರ್‍‌ ಅಂತ್ಯಕ್ಕೆ 1,46,180ರಷ್ಟು ಇರುವುದು ತಿಳಿದು ಬಂದಿದೆ.

 

ಮೆಟ್ರಿಕ್ಯುಲೇಷನ್‌ಗಿಂತ ಕೆಳಗಿರುವವರ ಸಂಖ್ಯೆಯು 2023ರ ಮಾರ್ಚ್‌ ಅಂತ್ಯಕ್ಕೆ 12,066 ರಷ್ಟಿತ್ತು. 2024ರ ಮಾರ್ಚ್‌ ಅಂತ್ಯಕ್ಕೆ 9,508, 2024ರ ಡಿಸೆಂಬರ್‍‌ ಅಂತ್ಯಕ್ಕೆ 7,649ರಷ್ಟಿದೆ. ಒಟ್ಟಾರೆ 2023ರ ಮಾರ್ಚ್‌ ಅಂತ್ಯಕ್ಕೆ 2,60,785 ಮಂದಿ ಉದ್ಯೋಗಕ್ಕಾಗಿ ನೋಂದಣಿ ಮಾಡಿಸಿದ್ದರೇ 2024ರ ಮಾರ್ಚ್‌ ಅಂತ್ಯಕ್ಕೆ 2,31,851, ಡಿಸೆಂಬರ್‍‌ 2024ರ ಅಂತ್ಯಕ್ಕೆ 2,31,681 ಮಂದಿ ಉದ್ಯೋಗಕ್ಕಾಗಿ ನೋಂದಣಿ ಮಾಡಿಸಿದ್ದರು.

 

2023ರ ಮಾರ್ಚ್‌ ಮತ್ತು 2024ರ ಮಾರ್ಚ್‌ ಅಂತ್ಯದಲ್ಲಿದ್ದ ಅಂಕಿ ಸಂಖ್ಯೆಯಲ್ಲಿ 23,934, 2024ರ ಮಾರ್ಚ್‌ ಅಂತ್ಯ ಮತ್ತು ಡಿಸೆಂಬರ್‍‌ 2024ರ ಅಂತ್ಯದವರೆಗಿನ ಅಂಕಿ ಸಂಖ್ಯೆಯಲ್ಲಿ 170 ರಷ್ಟೇ ವ್ಯತ್ಯಾಸವಿರುವುದು ಗೊತ್ತಾಗಿದೆ.

 

 

2024ರ ಏಪ್ರಿಲ್‌ ಮತ್ತು ಡಿಸೆಂಬರ್‍‌ ಮಧ್ಯೆ ಪ್ರತಿ ತಿಂಗಳು ಸರಾಸರಿ 1,078ರಂತೆ 9,704 ಮಂದಿಯಷ್ಟೇ ಉದ್ಯೋಗ ಪಡೆದಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೇ ತಿಂಗಳಿಗೆ ಸರಾಸರಿ 777ರಂತೆ 6,220 ಮಂದಿಗೆ ಉದ್ಯೋಗ ದೊರೆತಿತ್ತು. ಹಾಗೆಯೇ 2023-24ನೇ ಸಾಲಿನ 2024ರ ಡಿಸೆಂಬರ್‍‌ ಅಂತ್ಯಕ್ಕೆ 8,166ರಷ್ಟು ಮಂದಿಗೆ ಉದ್ಯೋಗ ಲಭಿಸಿತ್ತು. ಇದು ಕೂಡ ತಿಂಗಳಿಗೆ ಸರಾಸರಿ 680ರಷ್ಟಿತ್ತು ಎಂದು ವರದಿಯಿಂದ ತಿಳಿದು ಬಂದಿದೆ.

 

ಅದೇ ರೀತಿ 2016-17ನೇ ಸಾಲಿನಲ್ಲಿ 2,062 ಹುದ್ದೆಗಳಿಗೆ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿತ್ತು. 2017-18ರಲ್ಲಿ 1,100, 2018-19ರಲ್ಲಿ 260, 2019-20ರಲ್ಲಿ 400, 2020-21ರಲ್ಲಿ 83, 2021-22ರಲ್ಲಿ 264, 2022-23ರಲ್ಲಿ 528, 2023-24ರಲ್ಲಿ 790, 2024-25ರ ಡಿಸೆಂಬರ್‍‌ ಅಂತ್ಯಕ್ಕೆ 1,396ರಷ್ಟು ಹುದ್ದೆ ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿತ್ತು. ಈ ಅಂಕಿ ಸಂಖ್ಯೆಗಳು ಖಾಸಗಿ ವಲಯದಲ್ಲೇ ಅತೀ ಹೆಚ್ಚಿವೆ.

 

ಉದ್ಯೋಗ ಮೇಳದಲ್ಲಿ ಉದ್ಯೋಗ ದೊರಕಿಸಿಕೊಂಡಿರುವವರ ಸಂಖ್ಯೆಯನ್ನು ವರದಿಯಲ್ಲಿ ದಾಖಲಿಸಿದೆ. 2016-17ರಲ್ಲಿ 8,200, 2017-18ರಲ್ಲಿ 14,362, 2018-19ರಲ್ಲಿ 25,300, 2019-20ರಲ್ಲಿ 12,987, 2020-21ರ್‍ಲಿ 9,322, 2021-22ರಲ್ಲಿ 3,359, 2022-23ರಲ್ಲಿ 16,553, 2023-24ರಲ್ಲಿ 8,166, 2024-25ರ ಡಿಸೆಂಬರ್‍‌ ಅಂತ್ಯಕ್ಕೆ 9,704 ಮಂದಿಗೆ ಉದ್ಯೋಗ ಲಭಿಸಿರುವುದನ್ನು ವರದಿಯಲ್ಲಿ ವಿವರಿಸಿದೆ.

 

ಅದೇ ರೀತಿ ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿಯು 2024ರ ಮಾರ್ಚ್‌ 2024ರ ಅಂತ್ಯಕ್ಕೆ ಶೇ.0.711ರಿಂದ 24.187 ಲಕ್ಷಕ್ಕೆ ಏರಿಕೆಯಾಗಿದೆ.  ಸೆಪ್ಟಂಬರ್‍‌ ಅಂತ್ಯದವರೆಗೆ  ಈ ಪ್ರಮಾಣವು 24.359 ಲಕ್ಷದಷ್ಟಿದೆ. ಸಾರ್ವಜನಿಕ ವಲಯದಲ್ಲಿ 10.285 ಲಕ್ಷ, (ಶೇ. 42.22), ಖಾಸಗಿ ವಲಯದಲ್ಲಿ 14,074 ಲಕ್ಷ (ಶೇ.57.78) ರಷ್ಟಿದೆ. ಸಾರ್ವಜನಿಕ ವಲಯದಲ್ಲಿ ಶೇ.1.380ರಷ್ಟು ಮತ್ತು ಖಾಸಗಿ ವಲಯದಲ್ಲಿ ಶೇ.0.228ರಷ್ಟು ಏರಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

 

 

ಕೇಂದ್ರ ಸರ್ಕಾರದ ವಲಯದಲ್ಲಿ 2023ರ ಮಾರ್ಚ್‌ ಅಂತ್ಯಕ್ಕೆ 0.920 ಲಕ್ಷ ಇದ್ದರೇ 2024ರ ಮಾರ್ಚ್‌ ಅಂತ್ಯಕ್ಕೆ 0.911, ಸೆಪ್ಟಂಬರ್‍‌ ಅಂತ್ಯಕ್ಕೆ 0.912 ರಷ್ಟಿದೆ. ಮಾರ್ಚ್‌ ಮತ್ತು ಸೆಪ್ಟಂಬರ್‍‌ ಮಧ್ಯೆ ಸೇ. 0.110ರಷ್ಟು ವ್ಯತ್ಯಾಸವಿದೆ. ಅದೇ ರೀತಿ ರಾಜ್ಯ ಸರ್ಕಾರದ ವಲಯದಲ್ಲಿ 2023ರ ಮಾರ್ಚ್‌ ಅಂತ್ಯಕ್ಕೆ 5.386ರಷ್ಟಿತ್ತು. 2024ರ ಮಾರ್ಚ್‌ ಅಂತ್ಯಕ್ಕೆ ಶೇ.5.309, 2024ರ ಸೆಪ್ಟಂಬರ್‍‌ ಅಂತ್ಯಕ್ಕೆ ಶೇ.5.448ರಷ್ಟಿತ್ತು. ಮಾರ್ಚ್‌ ಮತ್ತು ಸೆಪ್ಟಂಬರ್‍‌ ಮಧ್ಯೆ ಶೇ.2.618ರಷ್ಟು ವ್ಯತ್ಯಾಸವಿದೆ.

 

 

ಖಾಸಗಿ ವಲಯದಲ್ಲಿ 2023ರ ಮಾರ್ಚ್‌ ಅಂತ್ಯಕ್ಕೆ 13.278 ಲಕ್ಷ ವಿತ್ತು. 2024ರ ಮಾರ್ಚ್‌ ಅಂತ್ಯಕ್ಕೆ 13.416, ಸೆಪ್ಟಂಬರ್‍‌ ಅಂತ್ಯಕ್ಕೆ 13.446 ಲಕ್ಷದಷ್ಟಿದೆ. ಮಾರ್ಚ್‌ ಮತ್ತು ಸೆಪ್ಟಂಬರ್‍‌ ಮಧ್ಯೆ  0.224ರಷ್ಟು ಶೇಕಡವಾರು  ವ್ಯತ್ಯಾಸವಿದೆ.

SUPPORT THE FILE

Latest News

Related Posts