ಬೆಂಗಳೂರು; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ನಿಶ್ಚಿತ ಠೇವಣಿಗಳ ವ್ಯವಹಾರಗಳನ್ನು ಸಮಪರ್ಕಕವಾಗಿ ನಿರ್ವಹಿಸಿಲ್ಲ. ಅಲ್ಲದೇ ನಿಶ್ಚಿತ ಠೇವಣಿಗಳ ಹೂಡಿಕೆಯ ಖಾತರಿ ಪ್ರಮಾಣ ಪತ್ರಗಳನ್ನೂ ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿಲ್ಲ.
ಅದಷ್ಟೇ ಅಲ್ಲ ನರ್ಮ್ ಯೋಜನೆಯಡಿ ಬಿಡುಗಡೆಯಾಗಿದ್ದ ಅನುದಾನವನ್ನೂ ನಿಶ್ಚಿತ ಠೇವಣಿಯಾಗಿ ಹೂಡಿಕೆ ಮಾಡಲಾಗಿದೆ. ಇದಕ್ಕೆ ನಿಯಮಗಳಲ್ಲಿ ಅವಕಾಶಗಳು ಇರದಿದ್ದರೂ ಸಹ ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲೇ 11.57 ಕೋಟಿ ರು.ಗಳನ್ನು ಹೂಡಿಕೆ ಮಾಡಲಾಗಿತ್ತು. ಈ ಸಂಬಂಧ ಲೆಕ್ಕ ಪರಿಶೋಧಕರು 2023ರ ಜೂನ್ 22ರಂದೇ ವಿಚಾರಣೆ ಪತ್ರ ಕಳಿಸಿದ್ದರೂ ಸಹ ಮುಡಾ ಅಧಿಕಾರಿಗಳು ಯಾವುದೇ ಉತ್ತರವನ್ನೂ ನೀಡಿಲ್ಲ.
ಮುಡಾದಲ್ಲಿನ ಬದಲಿ ನಿವೇಶನ ಅಕ್ರಮಗಳ ರೂವಾರಿ ಎಂದು ಜಾರಿ ನಿರ್ದೇಶನಾಲಯವು ಗುರುತಿಸಿದ್ದ ಜಿ ಟಿ ದಿನೇಶ್ ಕುಮಾರ್, ಡಾ ಡಿ ಬಿ ನಟೇಶ್, ಜಿ ಲಕ್ಷ್ಮಿಕಾಂತ ರೆಡ್ಡಿ ಅವರು ಆಯುಕ್ತರಾಗಿದ್ದ ಅವಧಿಯಲ್ಲೇ ಲೆಕ್ಕ ಪರಿಶೋಧಕರಿಗೆ ಮಾಹಿತಿ ಮತ್ತು ದಾಖಲೆಗಳನ್ನೂ ನೀಡದೇ ಕರ್ತವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.
2021-22ನೇ ಸಾಲಿಗೆ ಸಂಬಂಧಿಸಿದಂತೆ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯ ಅಧಿಕಾರಿಗಳು ಹಣಕಾಸಿನ ಚಟುವಟಿಕೆಗಳಲ್ಲಿನ ಹಲವು ಲೋಪಗಳನ್ನು ಎತ್ತಿ ಹಿಡಿದಿದ್ದಾರೆ.
ಲೆಕ್ಕ ಪರಿಶೋಧನೆಯ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ನಿಶ್ಚಿತ ಠೇವಣಿಗಳ ವ್ಯವಹಾರಗಳಲ್ಲಿ ಮುಡಾ ಅಧಿಕಾರಿಗಳು ಎಸಗಿರುವ ಲೋಪಗಳನ್ನು ಲೆಕ್ಕ ಪರಿಶೋಧಕರು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಬದಲಿ ನಿವೇಶನ, ತುಂಡು ಭೂಮಿ ಮಂಜೂರು; ಸರ್ಕಾರಿ ಲೆಕ್ಕ ಪರಿಶೋಧನೆಗೂ ಕಡತ ಹಾಜರುಪಡಿಸದ ಅಧಿಕಾರಿಗಳು
ಲೆಕ್ಕ ಪರಿಶೋಧಕರು ಬಯಲು ಮಾಡಿದ ನ್ಯೂನತೆಗಳೇನು?
2021-22ನೇ ಆರ್ಥಿಕ ವರ್ಷದ ಅಂತ್ಯಕ್ಕೆ ಪ್ರತಿ ಬ್ಯಾಂಕ್‌ನಲ್ಲಿ ಉಳಿದಿರುವ ನಿಶ್ಚಿತ ಠೇವಣಿಗಳ ಮೇಲಿನ ಹೂಡಿಕೆಯ ಖಾತರಿ ಪ್ರಮಾಣ ಪತ್ರವನ್ನು ಪಡೆದು ಲೆಕ್ಕ ಪರಿಶೋಧಕರಿಗೆ ಹಾಜರುಪಡಿಸಿಲ್ಲ. ಮತ್ತು ಈ ನಿಶ್ಚಿತ ಠೇವಣಿಗಳ ಪ್ರಾರಂಭಿಕ ಶಿಲ್ಕು ಮತ್ತು ಅಂತಿಮ ಶಿಲ್ಕುಗಳನ್ನು ವಾರ್ಷಿಕ ಲೆಕ್ಕಪತ್ರಗಳಲ್ಲಿ ಪರಿಗಣಿಸದೇ ಲೆಕ್ಕ ಪತ್ರ ನಿರ್ವಹಿಸಿದ್ದಾರೆ. ಮುಡಾ ಅಧಿಕಾರಿಗಳ ಈ ನಿರ್ಲಕ್ಷ್ಯವನ್ನು ಲೆಕ್ಕ ಪರಿಶೋಧಕರು ಗಂಭೀರವಾಗಿ ಪರಿಗಣಿಸಿರುವುದು ಗೊತ್ತಾಗಿದೆ.
ಹಾಗೆಯೇ ಅವಧಿ ಪೂರ್ವವಾಗಿ ನಿಶ್ಚಿತ ಠೇವಣಿಯನ್ನು ಹಿಂಪಡೆದಲ್ಲಿ ವಿಧಿಸುವ ದಂಡದ ಮೊತ್ತವನ್ನು ಕಡಿತಗೊಳಿಸುವ ಕುರಿತು ಬ್ಯಾಂಕ್‌ಗಳೊಂದಿಗೆ ಹೂಡಿಕೆ ಮುನ್ನವೇ ಕರಾರು ಮಾಡಿಕೊಳ್ಳಬೇಕಿತ್ತು. ಇದು ದಂಡ ವಿಧಿಸುವುದನ್ನು ತಡೆಗಟ್ಟುತ್ತದೆ. ಆದರೆ ಈ ಸಂಬಂಧ ಕೈಗೊಂಡಿರುವ ಅಗತ್ಯ ಕ್ರಮಗಳ ಕುರಿತು ಮುಡಾವು ಯಾವುದೇ ಮಾಹಿತಿಯನ್ನು ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಮೂಲೆ, ಮಧ್ಯಂತರ, ಸಿ ಎ ನಿವೇಶನಗಳ ಹಂಚಿಕೆ; ಹರಾಜು ಮೊತ್ತ ಸ್ವೀಕೃತದಲ್ಲೇ 90.76 ಕೋಟಿ ರು ವ್ಯತ್ಯಾಸ
ಹೂಡಿಕೆಗಳಿಗೆ ಸಂಬಂಧಿಸಿದಂತೆ 2020ರ ಮಾರ್ಚ್ 12ರಲ್ಲಿ ಆರ್ಥಿಕ ಇಲಾಖೆಯು ಸುತ್ತೋಲೆ ಹೊರಡಿಸಿತ್ತು. ಇದರ ಪ್ರಕಾರ ಹೂಡಿಕೆಗಳನ್ನು 01 ವರ್ಷದ ಅವಧಿಗೆ ಮಾತ್ರ ಮಾಡಬೇಕಿತ್ತು. ಅವಧಿ ಮುಗಿದ ನಂತರ ಹೊಸದಾಗಿ ಇ-ಟೆಂಡರ್ ಪ್ರಕ್ರಿಯೆ ಮೂಲಕ ಹೂಡಿಕೆ ಮಾಡಬೇಕಿತ್ತು. ಆದರೆ ಪ್ರಾಧಿಕಾರವು ಅವಧಿ ಪೂರ್ಣಗೊಂಡ ಹೂಡಿಕೆಗಳನ್ನು ಹೊಸದಾಗಿ ಹೂಡಿಕೆ ಮಾಡದೇ ನವೀಕರಿಸಲಾಗಿತ್ತು. ಮುಡಾ ಅಧಿಕಾರಿಗಳ ಈ ಕ್ರಮಕ್ಕೆ ಲೆಕ್ಕ ಪರಿಶೋಧಕರು ಆಕ್ಷೇಪಿಸಿರುವುದು ವರದಿಯಿಂದ ತಿಳಿದು ಬಂದಿದೆ.
3,493 ನಿವೇಶನಗಳಿಗೆ ಭೂಮಿ ಖರೀದಿ ವ್ಯವಹಾರ; ಲೆಕ್ಕಪರಿಶೋಧನೆಗೆ ಸಿಗದ ಸಬ್ ರಿಜಿಸ್ಟ್ರಾರ್ ದಾಖಲೆಗಳು
ಇನ್ನು ನಿಶ್ಚಿತ ಠೇವಣಿಗಳ ವ್ಯವಹಾರಗಳನ್ನು ನಗದು ಪುಸ್ತಕದಲ್ಲಿ ದಾಖಲಿಸುತ್ತಿಲ್ಲ. ಬದಲಿಗೆ ನೇರವಾಗಿ ವ್ಯವಹರಿಸಲಾಗುತ್ತಿದೆ. ಕೆಲವು ವ್ಯವಹಾರಗಳು ಲೆಕ್ಕ ಪತ್ರಗಳಿಂದ ಕೈಬಿಟ್ಟು ಹೋಗುವ ಸಾಧ್ಯತೆಗಳೂ ಇವೆ. ಇದು ನಷ್ಟಕ್ಕೆ ಕಾರಣವಾಗಬಹುದು ಎಂದು ಲೆಕ್ಕ ಪರಿಶೋಧಕರ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಹಾಗೆಯೇ ವಾರ್ಷಿಕ ಲೆಕ್ಕ ಪತ್ರಗಳ ಪರಿಶೀಲನೆ ಪ್ರಕಾರ ಹೊಸ ನಿಶ್ಚಿತ ಠೇವಣಿಗಳ ಅವಧಿಯನ್ನು ಲೆಕ್ಕ ಪತ್ರಗಳಲ್ಲಿ ದಾಖಲಿಸಿಲ್ಲ. ಹಾಗೂ ಸಕ್ಷಮ ಅಧಿಕಾರಿಯು ಸಹ ಇದನ್ನು ದೃಢೀಕರಿಸಿಲ್ಲ ಎಂಬುದು ವರದಿಯಿಂದ ತಿಳಿದು ಬಂದಿದೆ.
ಹುಣಸೂರು ರಸ್ತೆ ಓಆರ್‍ಆರ್ ಜಂಕ್ಷನ್, ಜೆಎಸ್‌ಎಸ್ ನಂಜನಗೂಡು ರಸ್ತೆ, ಕೆಆರ್‍ಎಸ್ ರಸ್ತೆ, ಬೆಂಗಳೂರು ಮೈಸೂರು ರಸ್ತೆ ಗ್ರೇಡ್ ಸಪರೇಟರ್ ಕಾಮಗಾರಿ ಕೈಗೊಳ್ಳಲು ನರ್ಮ್ ಯೋಜನೆಯಡಿ 2013-14ನೇ ಸಾಲಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಕೆಯುಐಡಿಎಫ್‌ಸಿ ಮೂಲಕ 14.98 ಕೋಟಿ ರು. ಅನುದಾನ ಬಿಡುಗಡೆಯಾಗಿತ್ತು. ಈ ಪೈಕಿ ಮೈಸೂರು ಹುಣಸೂರು ರಸ್ತೆಯಲ್ಲಿನ ಕಾಮಗಾರಿ ಮಾತ್ರ ನಿರ್ವಹಿಸಿತ್ತು.
ಉಳಿದ ಮೂರು ಕಾಮಗಾರಿಗಳನ್ನು 2018ರ ಮಾರ್ಚ್ 19ರಂದು ರದ್ದುಪಡಿಸಲಾಗಿತ್ತು. ಹೀಗಾಗಿ ಈ ಮೂರು ಕಾಮಗಾರಿಗಳ ಅನುದಾನ 11.57 ಕೋಟಿ ರು.ಗಳನ್ನು ಮುಡಾ ಅಧಿಕಾರಿಗಳು ನಿಶ್ಚಿತ ಠೇವಣಿ ರೂಪದಲ್ಲಿ ಬ್ಯಾಂಕ್ ಆಫ್ ಬರೋಡದಲ್ಲಿ ಹೂಡಿಕೆ ಮಾಡಿದ್ದರು.
ಸರ್ಕಾರದ ಹೂಡಿಕೆಗಳ ಮಾರ್ಗಸೂಚಿ ಕುರಿತಂತೆ ಆರ್ಥಿಕ ಇಲಾಖೆಯು 2020ರ ಮಾರ್ಚ್ 12ರಂತೆ ಹೊರಡಿಸಿದ್ದ ಸುತ್ತೋಲೆ ಪ್ರಕಾರ ಹೆಚ್ಚುವರಿ ಅನುದಾನವನ್ನಷ್ಟೇ ಹೂಡಿಕೆ ಮಾಡಿ ನಿರ್ವಹಿಸಬೇಕು. ಸರ್ಕಾರವು ನಿರ್ದಿಷ್ಟ ಉದ್ದೇಶಕ್ಕೆ ಬಿಡುಗಡೆಗೊಳಿಸಿರುವ ಅನುದಾನವನ್ನು ಸರ್ಕಾರದ ಪೂರ್ವಾನುಮತಿಯಿಲ್ಲದೆಯೇ ನಿಶ್ಚಿತ ಠೇವಣಿಯಾಗಿ ಹೂಡಿಕೆ ಮಾಡಲು ಅವಕಾಶವಿಲ್ಲ.
ಅನುಮೋದನೆಯಿಲ್ಲದೇ 223 ಕೋಟಿ ರು ವರ್ಗಾವಣೆ!; ಮುಡಾ ಅಕ್ರಮ ಬಯಲು ಮಾಡಿದ ಲೆಕ್ಕ ಪರಿಶೋಧನೆ
ಅಲ್ಲದೇ ನರ್ಮ್ ಯೋಜನೆಯಡಿ ಬಿಡುಗಡೆಯಾದ ಅನುದಾನದ ಕಾಮಗಾರಿಗಳನ್ನು ರದ್ದುಪಡಿಸಿದ್ದರೂ ಸಹ ಸರ್ಕಾರಕ್ಕೆ 11.57 ಕೋಟಿ ರು.ಗಳನ್ನು ಹಿಂತಿರಿಗಿಸಿರಲಿಲ್ಲ. ಬದಲಿಗೆ ನಿಶ್ಚಿತ ಠೇವಣಿಯನ್ನಾಗಿ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲಾಗಿತ್ತು. ಇದಕ್ಕೆ ಲೆಕ್ಕ ಪರಿಶೋಧಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.