ಬೆಂಗಳೂರು; ಕರ್ನಾಟಕ ನೀರಾವರಿ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕರು ನಿವೃತ್ತ ಅಂಚಿನಲ್ಲಿದ್ದಾಗ ಇಎಂಡಿ ಮತ್ತು ಎಫ್‌ಎಸ್‌ಡಿ ಶೀರ್ಷಿಕೆಯಲ್ಲಿದ್ದ 1,250 ಕೋಟಿ ರು.ಗಳನ್ನು ಕಾನೂನುಬಾಹಿರವಾಗಿ ಪಾವತಿಸಿದ್ದಾರೆ ಎಂಬ ಗುರುತರವಾದ ಆರೋಪವು ಕೇಳಿ ಬಂದಿದೆ.
ಗುತ್ತಿಗೆದಾರರಿಂದ ಕಟಾಯಿಸಿದ್ದ ಇಎಂಡಿ ಮತ್ತು ಎಫ್‌ಎಸ್‌ಡಿ ಸಂಪೂರ್ಣ ಮೊತ್ತವನ್ನು ಕಾಮಗಾರಿಗಳ ಬಿಲ್ ಪಾವತಿಗೆ ಕರ್ನಾಟಕ ನೀರಾವರಿ ನಿಗಮವು ಉಪಯೋಗಿಸಿಕೊಂಡಿತ್ತು ಎಂಬುದು ಸಹ ಇದೀಗ ಬಹಿರಂಗವಾಗಿದೆ.
ಈ ಕುರಿತು ಕಿರಣ್ ಎಂಬುವರು ಕರ್ನಾಟಕ ನೀರಾವರಿ ನಿಗಮದ ಹಾಲಿ ವ್ಯವಸ್ಥಾಪಕ ನಿರ್ದೇಶಕರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. 2025ರ ಜನವರಿ 13ರಂದು ಸಲ್ಲಿಸಿರುವ ದೂರಿನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ವಿವಿಧ ಕಾಮಗಾರಿಗಳನ್ನು ನಿರ್ವಹಿಸಿದ್ದ ಗುತ್ತಿಗೆದಾರರು ನಿಗಮದಲ್ಲಿ ಭದ್ರತಾ ಮತ್ತು ಮೇಲ್ವಿಚಾರಣೆ ಠೇವಣಿ ರೂಪದಲ್ಲಿ ಬಹು ಕೋಟಿ ರು.ಗಳನ್ನು ಇರಿಸಿದ್ದರು. ಗುತ್ತಿಗೆದಾರರು ಕಾಮಗಾರಿಗಳನ್ನು ಪೂರ್ಣಗೊಳಿಸಿದ ನಂತರ ಭದ್ರತಾ ಮತ್ತು ಮೇಲ್ವಿಚಾರಣೆ ಠೇವಣಿ (ಇಎಂಡಿ ಮತ್ತು ಎಫ್‌ಎಸ್‌ಡಿ) ಪಾವತಿಸಬೇಕು. ಆದರೆ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕರು ತಮ್ಮ ಅವಧಿಯ ಕೊನೆ ದಿನದಲ್ಲಿ ತಮಗೆ ಬೇಕಾದ ಕಂಪನಿಗಳಿಗೆ ಕಾನೂನಿನ ಪಾವತಿಸಿದ್ದಾರೆ ಎಂದು ಕಿರಣ್ ಅವರು ಆಪಾದಿಸಿರುವುದು ದೂರಿನಿಂದ ತಿಳಿದು ಬಂದಿದೆ.
‘ಕರ್ನಾಟಕ ನೀರಾವರಿ ನಿಗಮದ ನಿಯಮಿತದ ಹಿಂದಿನ ವ್ಯವಸ್ಥಾಪಕ ನಿರ್ದೇಶಕರು ತಮ್ಮ ನಿವೃತ್ತಿ ಅಂಚಿನಲ್ಲಿದ್ದಾಗ ನಿಗಮದಲ್ಲಿ ಇರಿಸಿದ ಇಎಂಡಿ ಮತ್ತು ಎಫ್‌ಎಸ್‌ಡಿ ಸುಮಾರು 1,250 ಕೋಟಿ ರು.ಗಳಷ್ಟು ಹಣವನ್ನು ತಮಗೆ ಬೇಕಾದ ಕಂಪನಿಗಳಿಗೆ ಕಾನೂನುಬಾಹಿರವಾಗಿ ನೀಡಿರುತ್ತಾರೆ. ಮತ್ತು ಸೂಕ್ತವಾದ ಅರ್ಹತೆಯುಳ್ಳ ಪರಿಣಿತ ಮೂರನೇ ವ್ಯಕ್ತಿಯ ತಪಾಸಣೆ ಸಂಸ್ಥೆಯೊಂದಿಗೆ ಸಮಾಲೋಚಿಸದೇ ಜನಪ್ರತಿನಿಧಿಗಳಿಗೆ ಮತ್ತು ಸಾರ್ವಜನಿಕರಿಗೆ ವಂಚಿಸಿದ್ದಾರೆ. ಈ ಮೂಲಕ ಸರ್ಕಾರದ ಹಣವನ್ನು ಲೂಟಿ ಮಾಡಿದ್ದಾರೆ,’ ಎಂದು ಕಿರಣ್ ಅವರು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರ, ಅವ್ಯವಹಾರ ಪ್ರಕರಣಗಳನ್ನು ತನಿಖೆಗೊಳಪಡಿಸಲಾಗುವುದು ಎಂದು ಅಬ್ಬರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರು ಕರ್ನಾಟಕ ನೀರಾವರಿ ನಿಗಮದಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆಗೆ ಮುಂದಾಗಿಲ್ಲ.
ನಿಯಮ ಉಲ್ಲಂಘನೆ, ಇಂಜಿನಿಯರ್‌ಗಳಿಗೆ ಅವಮಾನ; ಅನರ್ಹರನ್ನೇ ಎಂಡಿಯನ್ನಾಗಿಸಿದ ಸಿಎಂ, ಡಿಸಿಎಂ
ಕರ್ನಾಟಕ ನೀರಾವರಿ ನಿಗಮದಲ್ಲಿ ಗುತ್ತಿಗೆದಾರರಿಂದ ನಿರ್ವಹಿಸಿದ್ದ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದ ಗುತ್ತಿಗೆದಾರರು ಬಿಲ್‌ಗಳ ಕ್ಲೈಮ್ ಅರ್ಜಿಗಳನ್ನು ಸಲ್ಲಿಸಿದ್ದರು. 2023ರ ಮಾರ್ಚ್ 31ರ ಅಂತ್ಯಕ್ಕೆ ಗುತ್ತಿಗೆದಾರರು ಸಲ್ಲಿಸಿದ್ದ ಬಿಲ್ ಕ್ಲೈಮ್‌ನ ಮೊತ್ತವು 1,257.17 ಕೋಟಿ ರು.ಗಳಷ್ಟಿತ್ತು. ಅಲ್ಲದೇ 2023ರ ಮಾರ್ಚ್ 31ರ ಅಂತ್ಯಕ್ಕೆ 74.09 ಕೋಟಿ ರು.ಗಳ ಇಎಂಡಿ/ಎಫ್‌ಎಸ್‌ಡಿ ಮೊತ್ತಗಳ ಇಂಡೆಂಟ್ ಕೂಡ ಸ್ವೀಕರಿಸಿತ್ತು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರ ಪತ್ರದಿಂದ ಗೊತ್ತಾಗಿದೆ.
ಜಿಎಸ್‌ಟಿ ಅನುಷ್ಠಾನಕ್ಕೂ ಮುನ್ನ ಮತ್ತು ಅನುಷ್ಠಾನಗೊಂಡ ನಂತರದ ಅವಧಿಯಲ್ಲಿ (2017 ಜುಲೈ 1ರ ಪೂರ್ವದಲ್ಲಿ) ಬಾಕಿ ಕಾಮಗಾರಿಗಳ ಮೊತ್ತ ಪಾವತಿ ಸಂಬಂಧ 2018ರ ಆಗಸ್ಟ್ 27ರಂದು ನಿಗಮದ 85ನೇ ಮಂಡಳಿ ಸಭೆಯಲ್ಲಿ ಚರ್ಚಿಸಿತ್ತು. ಜಿಎಸ್‌ಟಿ ಮತ್ತು ಅದರ ಪೂರ್ವದಲ್ಲಿನ ದರಗಳ ವ್ಯತ್ಯಾಸದ ಮೊತ್ತವು ಗುತ್ತಿಗೆದಾರರಿಂದ ಬರಬೇಕಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಆಯಾ ಗುತ್ತಿಗೆದಾರರಿಗೆ ಇಎಂಡಿ ಮತ್ತು ಎಫ್‌ಎಸ್‌ಡಿ ಮರು ಪಾವತಿಯನ್ನು ತಡೆ ಹಿಡಿದಿತ್ತು.
ಇದನ್ನು ಕೆಲ ಗುತ್ತಿಗೆದಾರರು ಇಎಂಡಿ ಮತ್ತು ಎಫ್‌ಎಸ್‌ಡಿ ಮರು ಪಾವತಿ ಕುರಿತು ಉಚ್ಛ ನ್ಯಾಯಾಲಯದ ಮೊರೆ (ರಿಟ್ ಪಿಟಿಷನ್ 9721/2019) ಹೊಕ್ಕಿದ್ದರು.
ಜಿಎಸ್‌ಟಿ ಪೂರ್ವದಲ್ಲಿ ಕಾರ್ಯಗತಗೊಳಿಸಿದ್ದ ಕಾಮಗಾರಿಗಳ ಬಿಲ್‌ಗಳನ್ನು ಕೆ-ವ್ಯಾಟ್ ಅಡಿಯಲ್ಲಿ ಲೆಕ್ಕಚಾರ ಮಾಡಲು ರಾಜ್ಯ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಹೈಕೋರ್ಟ್ ನೀಡಿದ್ದ ಈ ನಿರ್ದೇಶನ ಆಧರಿಸಿ ಗುತ್ತಿಗೆದಾರರು ಇಎಂಡಿ ಮತ್ತು ಎಫ್‌ಎಸ್‌ಡಿ ಮರು ಪಾವತಿಸಬೆಕು ಎಂದು ನಿಗಮಕ್ಕೆ ಕೋರಿಕೆ ಸಲ್ಲಿಸಿದ್ದರು.
ಗುತ್ತಿಗೆದಾರರಿಂದ ಕಟಾಯಿಸಿದ್ದ ಇಎಂಡಿ ಮತ್ತು ಎಫ್‌ಎಸ್‌ಡಿ ಸಂಪೂರ್ಣ ಮೊತ್ತವನ್ನು ಕಾಮಗಾರಿಗಳ ಬಿಲ್ ಪಾವತಿಗೆ ಉಪಯೋಗಿಸಿಕೊಂಡಿದ್ದರು.
‘ಈ ಹಿಂದೆ ನಿಗಮದಲ್ಲಿ ಗುತ್ತಿಗೆದಾರರಿಂದ ಕಟಾಯಿಸಿದ್ದ ಇಎಂಡಿ ಮತ್ತು ಎಫ್‌ಎಸ್‌ಡಿ ಸಂಪೂರ್ಣ ಮೊತ್ತವನ್ನು ಕಾಮಗಾರಿಗಳ ಬಿಲ್‌ಗಳ ಪಾವತಿಗೆ ಉಪಯೋಗಿಸಿಕೊಂಡಿದ್ದು ಇಎಂಡಿ, ಎಫ್‌ಎಸ್‌ಡಿಯ ಯಾವುದೇ ಮೊತ್ತವೂ ನಿಗಮದಲ್ಲಿ ಲಭ್ಯವಿರುವುದಿಲ್ಲ. ಆದ್ದರಿಂದ ಪ್ರಸ್ತುತ ಗುತ್ತಿಗೆದಾರರು ಸಲ್ಲಿಸುತ್ತಿರುವ ಇಎಂಡಿ ಮತ್ತು ಎಫ್‌ಎಸ್‌ಡಿ ಮೊತ್ತವನ್ನು ಮರುಪಾವತಿಸಲು ಕಷ್ಟ ಸಾಧ್ಯವಾಗುತ್ತಿದೆ,’ ಎಂದು ನಿಗಮದ ನಿರ್ದೇಶಕರು, ಸರ್ಕಾರಕ್ಕೆ ಬರೆದಿದ್ದ ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
2023ರ ಡಿಸೆಂಬರ್ 22ರ ಅಂತ್ಯಕ್ಕೆ ನಿಗಮದಲ್ಲಿ 4,102.54 ಕೋಟಿ ರು ಕಾಮಗಾರಿಗಳ ಬಿಲ್‌ಗಳು ಪಾವತಿಗೆ ಬಾಕಿ ಇತ್ತು. ಬಂಡವಾಳ ಲೆಕ್ಕ ಶೀರ್ಷಿಕೆಯಡಿ ಸರ್ಕಾರದಿಂದ 583.26 ಕೋಟಿ ರು. ಕೂಡ ಬಿಡುಗಡೆಗೆ ಬಾಕಿ ಇತ್ತು. ಈ ಹಣವನ್ನು ಬಿಡುಗಡೆ ಮಾಡಿದರೂ ಸಹ ಇನ್ನೂ 3,519.28 ಕೋಟಿ ರು. ಅನುದಾನ ಕೊರತೆ ಉಂಟಾಗಿತ್ತು. ಅಲ್ಲದೇ 2023-24ನೇ ಸಾಲಿನಲ್ಲಿಯೇ ಹೆಚ್ಚುವರಿ ಅನುದಾನದ ಅವಶ್ಯಕತೆಯೂ ಇತ್ತು. ಆದ್ದರಿಂದ ಇಎಂಡಿ ಮತ್ತು ಎಫ್‌ಎಸ್‌ಡಿ ಪಾವತಿಸಲು ಕ್ರಮ ವಹಿಸಿದ್ದಲ್ಲಿ ಕಾಮಗಾರಿ ಬಾಕಿ ಬಿಲ್ ಪಾವತಿಸಲು ಅನುದಾನ ಕೊರತೆ ಉಂಟಾಗುತ್ತದೆ ಎಂದೂ ಪತ್ರದಲ್ಲಿ ವಿವರಿಸಿದ್ದರು.
‘ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ 2021-22ನೇ ಸಾಲಿನಿಂದ ನವೆಂಬರ್ 23ರ ಅಂತ್ಯದವರೆಗೂ ಪಾವತಿಗೆ ಬಾಕಿ ಇರುವ ಗುತ್ತಿಗೆದಾರರ ಇಎಂಡಿ ಮತ್ತು ಎಫ್ಎಸ್‌ಡಿ ಮೊತ್ತ 74.09 ಕೋಟಿ ರು.ಗಳ ಪಾವತಿಗೆ ಹಾಗೂ ಮಾರ್ಚ್ 2024ರ ಅಂತ್ಯಕ್ಕೆ ಇನ್ನು ಸ್ವೀಕರಿಸಬಹುದಾದ ಇಎಂಡಿ ಮತ್ತು ಎಫ್‌ಎಸ್‌ಡಿ ಇಂಡೆಂಟ್ ಮೊತ್ತ 100 ಕೋಟಿ ರು ಸೇರಿ ಒಟ್ಟಾರೆ 174.09 ಕೋಟಿ ರು ತುರ್ತಾಗಿ ಅವಶ್ಯವಿದೆ. ಹೆಚ್ಚುವರಿ ಅನುದಾನವನ್ನು ಒದಗಿಸಬೇಕು,’ ಎಂದು ನಿಗಮದ ಹಾಲಿ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರವನ್ನು ಕೋರಿದ್ದರು.