ಬೆಂಗಳೂರು; ಕೋವಿಡ್-19ರ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಿಂದ ಅನುಮೋದನೆ ಇಲ್ಲದೇ ಅನರ್ಹಗೊಂಡಿದ್ದ ಪ್ರಯೋಗಾಲಯಗಳು ಮತ್ತು ಆಸ್ಪತ್ರೆಗಳ ಸೇವೆ ಪಡೆದಿರುವುದು ಸೇರಿದಂತೆ ಇನ್ನಿತರೆ ಲೋಪ ದೋಷಗಳು ಮತ್ತು ಅಕ್ರಮಗಳ ಕುರಿತಂತೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಕಾರ್ಯದರ್ಶಿ ಸೇರಿದಂತೆ ಇನ್ನಿತರೆ ಅಧಿಕಾರಿಗಳಿಗೆ ನಗರಾಭಿವೃದ್ದಿ ಇಲಾಖೆಯು ನೋಟೀಸ್ ಜಾರಿಗೊಳಿಸಿದೆ.
ಕೋವಿಡ್ 19ರ ವೆಚ್ಚಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಕುನ್ಹಾ ಅವರು ನೀಡಿದ್ದ ವಿಚಾರಣೆ ವರದಿ ಆಧರಿಸಿ ಬಿಬಿಎಂಪಿಯ ಉನ್ನತ ಅಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಿದೆ. ಈ ಪೈಕಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಕಾರ್ಯದರ್ಶಿ ಐಎಎಸ್ ಅಧಿಕಾರಿ ರಾಜೇಂದ್ರ, ನಿವೃತ್ತ ಐಎಎಸ್ ಅಧಿಕಾರಿ ಅನಿಲ್, ಹಾಗೂ ನಗರ, ಗ್ರಾಮಾಂತರ ಯೋಜನೆ ಇಲಾಖೆಯ ಹಾಲಿ ನಿರ್ದೇಶಕ ಆರ್ ವೆಂಕಟಾಚಲಪತಿ ಸೇರಿದಂತೆ ಹಲವು ಉನ್ನತ ಅಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಿದೆ.
ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್ ಆರ್ ಉಮಾಶಂಕರ್ ಅವರು ಬಿಬಿಎಂಪಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಿದ್ದಾರೆ. ಇದರ ಪ್ರತಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ನೋಟೀಸ್ ನೀಡಿರುವ ಅಧಿಕಾರಿಗಳು ಬಿಬಿಎಂಪಿಯಲ್ಲಿ ಕೋವಿಡ್ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಅವಧಿಯಲ್ಲಿ ಕೋವಿಡ್ ಸಂಬಂಧ ಆಗಿದ್ದ ವೆಚ್ಚಗಳ ಕುರಿತು ಮೈಕಲ್ ಕುನ್ಹಾ ಅವರ ನೇತೃತ್ವದ ವಿಚಾರಣೆ ಆಯೋಗವು ಹಲವು ಆಕ್ಷೇಪಣೆಗಳನ್ನು ಎತ್ತಿತ್ತು. ವಿಚಾರಣೆ ಆಯೋಗವು ಎತ್ತಿರುವ ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಕಂಡಿಕೆವಾರು ಮತ್ತು ಪುಟ ಸಂಖ್ಯೆವಾರು ಹೇಳಿಕೆ ನೀಡಬೇಕು ಎಂದು ನೋಟೀಸ್‌ನಲ್ಲಿ ಸೂಚಿಸಿರುವುದು ಗೊತ್ತಾಗಿದೆ.
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಕಾರ್ಯದರ್ಶಿಯಾಗಿರುವ ರಾಜೇಂದ್ರ ಅವರು ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಿಂದ ಅನುಮೋದನೆ ಇಲ್ಲದೆಯೇ, ಅನರ್ಹ ಮತ್ತು ಗೊತ್ತುಪಡಿಸದೇ ಇರುವ ಪ್ರಯೋಗಾಲಯ ಹಾಗೂ ಆಸ್ಪತ್ರೆಗಳ ಸೇವೆಗಳನ್ನು ಪಡೆದುಕೊಂಡಿದ್ದರು. ಈ ಕುರಿತು ವಿಚಾರಣೆ ಆಯೋಗದ ವರದಿಯಲ್ಲಿ (ಪುಟ ಸಂಖ್ಯೆ 1326ರಿಂದ 1335- ಕಂಡಿಕೆ ಸಂಖ್ಯೆ 6.1ರಿಂದ 6.13) ಆಕ್ಷೇಪಣೆಗಳನ್ನು ಎತ್ತಿತ್ತು.
ಅಲ್ಲದೇ ಕಿದ್ವಾಯಿ ಸಂಸ್ಥೆಯಿಂದ ಕೋವಿಡ್ 19ರ ಗಂಟಲು ದ್ರವ ಮಾದರಿ ಪರೀಕ್ಷೆಗಳಲ್ಲಿನ ಲೋಪ ದೋಷಗಳನ್ನೂ ವಿಚಾರಣೆ ಆಯೋಗವು (ಪುಟ ಸಂಖ್ಯೆ 1338ರಿಂದ 1343, ಕಂಡಿಕೆ ಸಂಖ್ಯೆ 6.16.2ರಿಂದ 6.16.9) ಪತ್ತೆ ಹಚ್ಚಿತ್ತು.
ಅದೇ ರೀತಿ ವೈದ್ಯಕೀಯ ಉಪಕರಣಗಳು ಮತ್ತು ಸಲಕರಣೆಗಳಲ್ಲಿನ ಖರೀದಿ ಪ್ರಕ್ರಿಯೆಯಲ್ಲಿ ಲೋಪಗಳು ಮತ್ತು ಅನುದಾನ ದುರ್ಬಳಕೆ ಆಗಿರುವುದು (ಪುಟ ಸಂಖ್ಯೆ 1410- ಕಂಡಿಕೆ ಸಂಖ್ಯೆ 9.4, ಪುಟ ಸಂಖ್ಯೆ 1441, ಕ್ರಮ ಸಂಖ್ಯೆ 35, ಕಡತ ಸಂಖ್ಯೆ 35),
ಕಮರ್ಷಿಯಲ್ ವಾಹನಗಳು, ಅಂಬ್ಯುಲೆನ್ಸ್ ವಾಹನಗಳು, ಶವ ಸಾಗಿಸುವ ವಾಹನಗಳ ನಿಯೋಜನೆ ಮತ್ತು ಸೇವೆಗಳ ಮೇಲ್ವಿಚಾರಣೆಯಲ್ಲಿ ಲೋಪ ದೋಷಗಳ (ಪುಟ ಸಂಖ್ಯೆ 1394 ಕಂಡಿಕೆ ಸಂಖ್ಯೆ 8.18.5) ಕುರಿತು ವಿಚಾರಣೆ ಆಯೋಗವು ಪತ್ತೆ ಹಚ್ಚಿತ್ತು.
ಕೋವಿಡ್ 19ರ ಕುರಿತು ವಿಚಾರಣೆ ವರದಿಯ ಈ ಕಂಡಿಕೆಗಳ ಬಗ್ಗೆ 15 ದಿನದೊಳಗಾಗಿ ಲಿಖಿತ ಹೇಳಿಕೆಗಳನ್ನು ಸಲ್ಲಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್ ಆರ್ ಉಮಾಶಂಕರ್ ಅವರು ಸೂಚಿಸಿರುವುದು ಪತ್ರದಿಂದ ಗೊತ್ತಾಗಿದೆ.
ಅದೇ ರೀತಿ ಕಿದ್ವಾಯಿ ಪ್ರಕರಣ ಹೊರತುಪಡಿಸಿ ಇನ್ನೆರಡು ಅಂಶಗಳ ಕುರಿತು ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಅವರಿಗೂ ಸಹ ಹೇಳಿಕೆ ನೀಡಲು ನಿರ್ದೇಶಿಸಿರುವುದು ತಿಳಿದು ಬಂದಿದೆ.
ಹಾಗೆಯೇ ಕೋವಿಡ್ ಕೇರ್ ಸೆಂಟರ್‍ನಲ್ಲಿ ಎಷ್ಟು ಜನ ರೋಗಿಗಳನ್ನು ದಾಖಲು ಮಾಡಲಾಗಿದೆ ಎಂಬ ಮಾಹಿತಿ ಕಡತದಲ್ಲಿ ಲಭ್ಯವಾಗಿಸದ ಕುರಿತು, ವೈಟ್ ಪೆಟಲ್ಸ್ ಅವರು ಊಟವನ್ನು ಸರಬರಾಜು ಮಾಡಿರುವ ಕುರಿತು ಬಿಲ್ ಆಗಲೀ ಪ್ರಮಾಣ ಪತ್ರವಾಗಲೀ ಕಡತದಲ್ಲಿ ಲಭ್ಯವಾಗಿಸದೇ ಇರುವುದು,
ಬ್ಲೀಚಿಂಗ್ ಪೌಡರ್ ಮತ್ತು ಪೆನಾಯಿಲ್‌ಗಳನ್ನು ಖರೀದಿಸಲು ಪಾಲಿಕೆ ಆಯುಕ್ತರಿಂದ ಅಥವಾ ಸರ್ಕಾರದಿಂದಾಗಲೀ ಅನುಮೋದನೆ ಪಡೆಯದ ಕುರಿತು, ಈ ಕಡತಗಳಲ್ಲಿ ಬಿಲ್, ಇನ್ ವಾಯ್ಸ್, ಸ್ಟಾಕ್ ಪ್ರಮಾಣ ಪತ್ರ ಅಥವಾ ಸರಬರಾಜು ಮಾಡಿರುವ ಬಗ್ಗೆ ಯಾವುದೇ ದಾಖಲೆಗಳನ್ನು ಕಡತದಲ್ಲಿ ನೀಡದೇ ಇರುವ (ಪುಟ ಸಂಖ್ಯೆ 1660, ಕಂಡಿಕೆ ಸಂಖ್ಯೆ 13, ಪುಟ ಸಂಖ್ಯೆ 1661-1663, ಕಂಡಿಕೆ ಸಂಖ್ಯೆ (1ರಿಂದ 09) ಕುರಿತು ನಗರ, ಗ್ರಾಮಾಂತರ ಯೋಜನೆ ನಿರ್ದೇಶಕ ಆರ್ ವೆಂಕಟಾಚಲಪತಿ ಅವರಿಗೂ ನೋಟೀಸ್ ಜಾರಿಗೊಳಿಸಿದೆ ಎಂದು ಗೊತ್ತಾಗಿದೆ.
15 ದಿನದೊಳಗೆ ಈ ಸಂಬಂಧ ಹೇಳಿಕೆ ನೀಡಬೇಕು ಎಂದು ನಿರ್ದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ ಡ್ರಗ್ ಲಾಜಿಸ್ಟಿಕ್ ಮತ್ತು ವೇರ್‌ಹೌಸಿಂಗ್ ಸೊಸೈಟಿ ಮೂಲಕ ಖರೀದಿಸಿದ್ದ ಔಷಧ ಸಾಮಗ್ರಿ ಮತ್ತು ವೈದ್ಯಕೀಯ ಸಲಕರಣೆ, ಉಪಕರಣಗಳ ಖರೀದಿಯಲ್ಲಿ ಭಾರೀ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳನ್ನು ಬೆನ್ನೆತ್ತಿದ್ದ ‘ದಿ ಫೈಲ್’ ತನಿಖಾ ತಂಡ ಕೋವಿಡ್ ಭ್ರಷ್ಟಾಚಾರದ 50 ಮುಖಗಳನ್ನು ಅನಾವರಣಗೊಳಿಸಿತ್ತು.
ಸರಣಿ ರೂಪದಲ್ಲಿ ದಾಖಲೆಗಳನ್ನಾಧರಿಸಿ ಏಪ್ರಿಲ್ 21ರಿಂದ ಆಗಸ್ಟ್ 25ರವರೆಗೆ ಒಟ್ಟು 50 ತನಿಖಾ ವರದಿಗಳನ್ನು ಪ್ರಕಟಿಸಿದೆ. ‘ದಿ ಫೈಲ್’ ಪ್ರಕಟಿಸಿದ ಹಲವು ವರದಿಗಳನ್ನಾಧರಿಸಿಯೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ಧ ಗುಡುಗಿದ್ದರು. ಅಲ್ಲದೆ ‘ದಿ ಫೈಲ್’ ವರದಿಯಲ್ಲಿದ್ದ ದಾಖಲೆಗಳನ್ನೇ ಬಿಡುಗಡೆ ಮಾಡಿದ್ದರಲ್ಲದೆ ಇಡೀ ಖರೀದಿ ಪ್ರಕ್ರಿಯೆಗಳನ್ನು ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದರು.
ಕೋವಿಡ್ ಅಕ್ರಮಗಳು; ‘ದಿ ಫೈಲ್’ ಹೊರಗೆಳೆದಿದ್ದ ಪ್ರಕರಣಗಳು ಕುನ್ಹಾ ವರದಿಯಲ್ಲಿ ಉಲ್ಲೇಖ
ಈ ಬೆಳವಣಿಗೆ ನಡುವೆಯೇ ಆಡಳಿತ ಪಕ್ಷವೂ ಅಕ್ರಮಗಳು ನಡೆದಿದೆ ಎಂಬ ಆರೋಪವನ್ನು ತಳ್ಳಿ ಹಾಕಿತ್ತಲ್ಲದೇ ಮತ್ತಿತರೆ ದಾಖಲೆಗಳನ್ನು ಬಿಡುಗಡೆ ಮಾಡಿತ್ತು. ಆದರೆ ಈ ದಾಖಲೆಗಳ ನೈಜತೆ ಕುರಿತು ಅನುಮಾನಗಳನ್ನು ಬೆನ್ನೆತ್ತಿದ್ದ ‘ದಿ ಫೈಲ್’ ತನಿಖಾ ತಂಡ ಮತ್ತಷ್ಟು ದಾಖಲೆಗಳನ್ನಾಧರಿಸಿ ವರದಿ ಪ್ರಕಟಿಸಿತ್ತು.
ತಜ್ಞರಲ್ಲದವರಿಂದ ಸಿಟಿ ಸ್ಕ್ಯಾನ್ ನಿರ್ವಹಣೆ; ವರದಿಗಳ ವಿಶ್ವಾಸರ್ಹತೆ ಪ್ರಶ್ನಾರ್ಹ, ಆಘಾತಕಾರಿ ಸಂಗತಿ ಬಹಿರಂಗ
ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮತ್ತು ಅಂದಾಜು ಸಮಿತಿಯೂ ತನಿಖೆಗೆ ಕೈಗೆತ್ತಿಕೊಂಡಿದೆ. ನಮ್ಮ ವರದಿಗಳನ್ನು ಉಲ್ಲೇಖಿಸಿ ಕರ್ನಾಟಕ ರಾಷ್ಟ್ರಸಮಿತಿಯೂ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದೂರನ್ನೂ ದಾಖಲಿಸಿದೆ. ದೂರನ್ನು ಸ್ವೀಕರಿಸಿದೆಯಲ್ಲದೆ ಭ್ರಷ್ಟಾಚಾರ ನಿಗ್ರಹ ತಡೆ ಕಾಯ್ದೆಯಡಿಯಲ್ಲಿ ತನಿಖೆ ಕೈಗೊಂಡಿರುವ ಎಸಿಬಿ, ಅಧಿಕಾರಿಗಳ ವಿಚಾರಣೆಗೆ ಪೂರ್ವಾನುಮತಿ ಕೋರಿ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದನ್ನು ಸ್ಮರಿಸಬಹುದು.