ಸಚಿವ ಎಂ ಸಿ ಸುಧಾಕರ್ ವಿರುದ್ಧ ಸರ್ಕಾರಿ ಜಮೀನು ಕಬಳಿಕೆ ಆರೋಪ; ಮಾಜಿ ಶಾಸಕರಿಂದ ಸರ್ಕಾರಕ್ಕೆ ದೂರು ಸಲ್ಲಿಕೆ

ಬೆಂಗಳೂರು; ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಅವರು ಕಾರ್ಯದರ್ಶಿಯಾಗಿರುವ ಚಿಂತಾಮಣಿ ಎಜುಕೇಷನಲ್‌ ಸೊಸೈಟಿ (ಕಿಶೋರ ವಿದ್ಯಾಭವನ)ಯು ಸರ್ಕಾರಿ ಜಾಗ ಮಂಜೂರಾತಿ ಉದ್ದೇಶಗಳನ್ನೇ ಉಲ್ಲಂಘಿಸಿದೆ ಎಂಬ ಗಂಭೀರವಾದ ಆರೋಪವು ಕೇಳಿ ಬಂದಿದೆ.

 

ಅಲ್ಲದೇ ಮಂಜೂರಾತಿ ಷರತ್ತಿನ ಪ್ರಕಾರ ಆಟದ ಮೈದಾನವನ್ನು ನಿರ್ಮಾಣ ಮಾಡದೇ ನಿಯಮ ಉಲ್ಲಂಘಿಸಿದ್ದರೂ ಸಹ ಅಧಿಕಾರಿಗಳು,  ಇದೇ ಸಂಘಕ್ಕೆ ಮತ್ತೊಮ್ಮೆ ಅಕ್ರಮವಾಗಿ ಮಂಜೂರು ಮಾಡಲು ಶಿಫಾರಸ್ಸು ಮಾಡಿದ್ದಾರೆ.  ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಅವರ ರಾಜಕೀಯ ಪ್ರಭಾವಕ್ಕೆ  ಮಣಿದಿದ್ದಾರೆ ಎಂಬ ಗುರುತರವಾದ ಆಪಾದನೆಗೆ ಅಧಿಕಾರಿಗಳು ಗುರಿಯಾಗಿದ್ದಾರೆ.

 

ಚಿಂತಾಮಣಿ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಎಂ ಕೃಷ್ಣಾರೆಡ್ಡಿ ಅವರು ಈ ಸಂಬಂಧ 2024ರ ಅಕ್ಟೋಬರ್‍‌ 14ರಂದೇ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಈ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್‌ ಖರ್ಗೆ ಅವರು ಟ್ರಸ್ಟಿಗಳಾಗಿರುವ ಸಿದ್ದಾರ್ಥ ವಿಹಾರ ಟ್ರಸ್ಟ್‌ , ಸಿ ಎ ನಿವೇಶನದ ವಿವಾದದಲ್ಲಿ  ಸಿಲುಕಿರುವ ಬೆನ್ನಲ್ಲೇ ಇದೀಗ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಅವರು ಕಾರ್ಯದರ್ಶಿಯಾಗಿರುವ ಚಿಂತಾಮಣಿ ಎಜುಕೇಷನಲ್‌ ಸೊಸೈಟಿಯ ಸರ್ಕಾರಿ ಜಮೀನು ಮಂಜೂರಾತಿ ಪ್ರಕರಣವು ಮುನ್ನೆಲೆಗೆ ಬಂದಿದೆ.

 

ಈ ಸೊಸೈಟಿಯು ಮುನ್ನೆಡೆಸುತ್ತಿರುವ ಶಾಲೆಗೆ ಆಟದ ಮೈದಾನದ ಉದ್ಧೇಶಕ್ಕಾಗಿ ಕರ್ನಾಟಕ ರಿಲ್ಕಟೇಷನ್‌ ರೂಲ್‌ 19(2) (ಸಿ) ಕರ್ನಾಟಕ ಭೂ ಮಂಜೂರಾತಿ ನಿಯಮ 1969ರಂತೆ 50 ವರ್ಷಗಳ ಅವಧಿಗೆ 0-17.00 ಗುಂಟೆ ಸರ್ಕಾರಿ ಖರಾಬ್ ಜಮೀನು  ಗುತ್ತಿಗೆ ರೂಪದಲ್ಲಿ  ಮಂಜೂರಾಗಿತ್ತು. ಆದರೆ ಈ ವಿದ್ಯಾ ಸಂಸ್ಥೆಯು ಆಟದ ಮೈದಾನದ ಷರತ್ತುಗಳನ್ನು ಉಲ್ಲಂಘಿಸಿದೆ. ಆದರೂ ಈ ಜಾಗವನ್ನು ಪುನಃ ಪಡೆಯಲು ಸಂಘದ ಕಾರ್ಯದರ್ಶಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಅವರು ಈ ಜಮೀನನ್ನು ಶಾಶ್ವತ ಮಂಜೂರಾತಿ ಮಾಡಿಸಿಕೊಳ್ಳಲು ರಾಜಕೀಯ   ಪ್ರಭಾವ ಬೀರಿದ್ದಾರೆ ಎಂದು ಮಾಜಿ ಶಾಸಕ ಎಂ ಕೃಷ್ಣಾರೆಡ್ಡಿ ಅವರು ದೂರಿನಲ್ಲಿ ಆರೋಪಿಸಿರುವುದು ಗೊತ್ತಾಗಿದೆ.

 

ದೂರಿನಲ್ಲೇನಿದೆ?

 

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಸಬಾ ಹೋಬಳಿಯ ಮಾಳಪ್ಪಲ್ಲಿ ಗ್ರಾಮದ ಸರ್ವೆ ನಂಬರ್ 70ರಲ್ಲಿ 0-17.00 ಗುಂಟೆ ಸರ್ಕಾರಿ ಖರಾಬು ತೋಪ್‌ ಜಮೀನನ್ನು ಚಿಂತಾಮಣಿ ಎಜುಕೇಷನಲ್‌ ಸೊಸೈಟಿ (ಕಿಶೋರ್ ವಿದ್ಯಾಭವನ)ಗೆ 1979ರ ಸೆ.27ರಲ್ಲಿ 50 ವರ್ಷಗಳ ಅವಧಿಗೆ ಗುತ್ತಿಗೆ ರೂಪದಲ್ಲಿ ಮಂಜೂರಾಗಿತ್ತು.  ಅಲ್ಲದೇ ಈ ವಿದ್ಯಾ ಸಂಸ್ಥೆಗೆ ಮಂಜೂರಾತಿ ಆದ ಅವಧಿಗೆ ಮುನ್ನ ಈ ಜಮೀನನ್ನು ಅಂದಿನ ಉಪ ವಿಭಾಗಾಧಿಕಾರಿಗಳು  1972ರ ಆಗಸ್ಟ್‌ 24ರಲ್ಲಿ  ತಾಲೂಕು ಅಧಿಕಾರಿಗಳ ವಸತಿ ಗೃಹಕ್ಕೆ ಮೀಸಲಿಟ್ಟಿದ್ದರು.

 

 

ಅಲ್ಲದೇ ಆರ್‍‌ಟಿಸಿ ಮತ್ತು ಖಾತೆಗೆ ಆದೇಶ ಮಾಡಿ, ಯಾವುದೇ ರೀತಿ ಅತಿಕ್ರಮಗಳು ಆಗದಂತೆ ಹಾಗೂ ಯಾಔಉದೇ ರೀತಿಯ ಮಂಜೂರಾತಿಗಳಿಗೆ ಆಸ್ಪದ ನೀಡದಂತೆ 1974ರ ಮಾರ್ಚ್‌ 16ರಂದು ಆದೇಶ ಹೊರಡಿಸಿದ್ದರು. ಸರ್ಕಾರಿ ಉಪಯೋಗಕ್ಕೆ ಮೀಸಲಾಗಿದ್ದ ಸರ್ಕಾರಿ ಜಮೀನನ್ನು ಅಂದಿನ ಸಚಿವ ಎ ಚೌಡರೆಡ್ಡಿ ಅವರು ತಮ್ಮ ಪ್ರಭಾವ ಬಳಸಿ ಸರ್ಕಾರದ ಆಸ್ತಿಯನ್ನು ಭೂ ಕಬಳಿಕೆ ಮಾಡುವ ಉದ್ದೇಶದಿಂದ 50 ವರ್ಷಗಳ ಅವಧಿಗೆ ತಮ್ಮ ಸಂಸ್ಥೆಗೆ ಅಕ್ರಮವಾಗಿ ಗುತ್ತಿಗೆ ಪಡೆದಿದ್ದರು ಎಂದು ಎಂ ಕೃಷ್ಣಾರೆಡ್ಡಿ ಅವರು ದೂರಿನಲ್ಲಿ ಆಪಾದಿಸಿರುವುದು ಗೊತ್ತಾಗಿದೆ.

 

ಈ ಸರ್ಕಾರಿ ಜಮೀನನ್ನು ಅಕ್ರಮ ಮತ್ತು ಅನಧಿಕೃತವಾಗಿ ವಿದ್ಯಾಸಂಸ್ಥೆಗಳಿಗೆ ಆಟದ ಮೈದಾನ ಉದ್ದೇಶಕ್ಕಾಗಿ ಮಂಜೂರು ಮಾಡಿಸಿಕೊಂಡಿದ್ದಾರೆ. ನಂತರದ ವರ್ಷಗಳಲ್ಲಿ   ಜಮೀನಿನ ಮಂಜೂರಾತಿ ಷರತ್ತುಗಳನ್ನು ಕರ್ನಾಟಕ ಭೂ ಮಂಜೂರಾತಿ 1969 ನಯಮ 19(4)(ಎ)ರಂತೆ ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿರುವುದು ತಿಳಿದು ಬಂದಿದೆ.

 

‘ಇಂತಹ ಅಕ್ರಮ ಮಂಜೂರಾತಿಯನ್ನು ಶಾಸಕರು ಹಾಗೂ ಸಚಿವರಾದ ಡಾ ಎಂ ಸಿ ಸುಧಾಕರ್ ಅವರು ತಮ್ಮ ರಾಜಕೀಯ ಪ್ರಭಾವ ಬಳಸಿ ತಮ್ಮ ವಿದ್ಯಾಸಂಸ್ಥೆಗೆ ಪುನಃ ಜಮೀನು ಮಂಜೂರು ಮಾಡಿಸಿಕೊಳ್ಳಲು ತಹಸೀಲ್ದಾರ್‍‌, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳೊಂದಿಗೆ ಶಾಮೀಲಾಗಿ  ತಮ್ಮ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ,’ ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಡಾ ಎಂ ಸಿ ಸುಧಾಕರ್‍‌ ಹಾಗೂ ಅವರ ಕುಟುಂಬದ ಸದಸ್ಯರು ಮಾಳಪ್ಪಲ್ಲಿ ಗ್ರಾಮದ ಸರ್ವೆ ನಂಬರ್ 75ರಲ್ಲಿನ 5 ಎಕರೆ 25 ಗುಂಟೆ ವಿಸ್ತೀರ್ಣದ  ಸರ್ಕಾರಿ ಖರಾಬು ತೋಪ್ ಜಮೀನಿನಲ್ಲಿ ಅಕ್ರಮವಾಗಿ 99 ವರ್ಷಗಳ ಅವಧಿಗೆ ಬಾಡಿಗೆ ಕರಾರು ಪತ್ರ ನೋಂದಣಿ ಮಾಡಿಸಿಕೊಂಡಿದ್ದಾರೆ. ಸರ್ಕಾರದ ಜಾಗದಲ್ಲಿ ವಿದ್ಯಾ ಸಂಸ್ಥೆ ನಡೆಸುತ್ತಿದ್ದಾರೆ. ಇದು ಸರ್ಕಾರದ ಸ್ವತ್ತು ಎಂದು ತಹಶೀಲ್ದಾರ್‍‌ ಅವರು 2016ರ ಮೇ 3ರಂದು ಆದೇಶ (ಆರ್ ಆರ್ ಟಿ (ಡಿಸ್) 01/2008-09)  ಹೊರಡಿಸಿದ್ದರು ಎಂದು ದೂರಿನಲ್ಲಿ ಎಂ ಕೃಷ್ಣಾರೆಡ್ಡಿ ಅವರು  ಗಮನ ಸೆಳೆದಿದ್ದಾರೆ.

 

ಇದೇ ಮಾಳಪ್ಪಲ್ಲಿ ಗ್ರಾಮದ ಸರ್ವೆ ನಂಬರ್ 70ರಲ್ಲಿನ 0-17.00 ಗುಂಟೆ ಜಮೀನಿನ ಶಾಲಾ ಆಟದ ಮೈದಾನದ ಉದ್ದೇಶಕ್ಕಾಗಿ 50 ವರ್ಷಗಳ ಅವಧಿಗೆ ಗುತ್ತಿಗೆಗೆ ಪಡೆದಿದ್ದಾರೆ. ನಂತರ ಇದೇ ಗ್ರಾಮದ ಮತ್ತೊಂದು ಸರ್ವೆ ನಂಬರ್‍‌ 76ರಲ್ಲಿ 4-13 ಎಕರೆ ಜಮೀನನ್ನೂ ಸಹ ಶಾಲಾ ಆಟದ ಮೈದಾನದ ಉದ್ದೇಶಕ್ಕಾಗಿ ಅಕ್ರಮವಾಗಿ 35 ವರ್ಷಗಳ ಅವಧಿಗೆ ಸರ್ಕಾರದಿಂದಲೇ ಗುತ್ತಿಗೆ ಪಡೆದಿದ್ದಾರೆ ಎಂದು ದೂರಿದ್ದಾರೆ.

 

ಅದೇ ರೀತಿ ಇದೇ ಗ್ರಾಮದ ಮತ್ತೊಂದು ಸರ್ವೆ ನಂಬರ್‍‌ 39ರಲ್ಲಿನ 4-00 ಎಕರೆ ವಿಸ್ತೀರ್ಣದ ಜಾಗವಿದೆ. ಈ ಜಮೀನಿನಲ್ಲಿ   ಬಡ ವಕ್ಕಲಿಗರ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡುವ ಉದ್ದೇಶ ಹೊಂದಿತ್ತು. ಆದರೆ ತಮ್ಮ ಸಂಸ್ಥೆಯಾದ ಚಿಂತಾಮಣಿ ವಕ್ಕಲಿಗ ಟ್ರಸ್ಟ್‌ಗೆ ಮಂಜೂರಾತಿ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ರಾಜಕೀಯ ಪ್ರಭಾವ ಬಳಸಿ ಸರ್ಕಾರವನ್ನು ವಂಚಿಸಲಾಗಿದೆ. ಈ ಜಾಗದಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡಿರುವುದಿಲ್ಲ. ‘ಸರ್ಕಾರದ ಜಮೀನುಗಳನ್ನು ಭೂ ಕಬಳಿಕೆ ಮಾಡಿಕೊಂಡು ಸರ್ಕಾರದ ಆಸ್ತಿಗಳನ್ನು ಲೂಟಿ ಹೊಡೆಯುವ ಉದ್ದೇಶದಿಂದ ಅಧಿಕಾರಿಗಳೊಂದಿಗೆ ಶಾಮೀಲಾಗಿ ಸರ್ಕಾರದ ಆಸ್ತಿಗಳನ್ನು ಗುತ್ತಿಗೆ ರೂಪದಲ್ಲಿ ಮಂಜೂರಾತಿ ಪಡೆಯವುದು ಇವರ ಏಕೈಕ ಉದ್ದೇಶವಾಗಿದೆ,’ ಎಂದೂ ದೂರಿನಲ್ಲಿ ಆಪಾದಿಸಿರುವುದು ತಿಳಿದು ಬಂದಿದೆ.

 

ಶಾಲಾ ಮಕ್ಕಳಿಗೆ ಆಟದ ಮೈದಾನ ಉದ್ದೇಶಕ್ಕೆ ಸರ್ಕಾರಿ ಜಮೀನನ್ನು ಮಂಜೂರಾತಿ ಮಾಡಿಸಿಕೊಂಡು ನಂತರ ಆಟದ ಮೈದಾನವನ್ನೂ ನಿರ್ಮಾಣ ಮಾಡದೆಯೇ ಸರ್ಕಾರದ ಆಸ್ತಿಯನ್ನು ಕಬಳಿಕೆ ಮಾಡುವುದೇ ಇವರ ದುರುದ್ದೇಶವಾಗಿದೆ ಎಂದು ಎಂ ಕೃಷ್ಣಾರೆಡ್ಡಿ ಅವರು ದೂರಿನಲ್ಲಿ ಆರೋಪಿಸಿರುವುದು ಗೊತ್ತಾಗಿದೆ.

 

 

‘ಶಾಲಾ ಆಟದ ಮೈದಾನದ ಉದ್ದೇಶಗಳಿಗಾಗಿ ಸರ್ಕಾರದಿಂದ ಮಂಜೂರಾತಿ ಪಡೆದು ಶೈಕ್ಷಣಿಕ ಉದ್ದೇಶಗಳಿಗಾಗಿ ಮೀಸಲಿಟ್ಟ ಜಮೀನು ದುರ್ಬಳಕೆ ಆಗುತ್ತಿದೆ. ಭೂ ಮಂಜೂರಾತಿ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಚಿಂತಾಮಣಿ ಎಜುಕೇಷನಲ್ ಸೊಸೈಟಿಗೆ ಪುನಃ ಸರ್ಕಾರದ ಜಮೀನನ್ನು ಮಂಜೂರು ಮಾಡಬಾರದು. ಈ ಹಿಂದಿನ ತಹಶೀಲ್ದಾರ್‍‌ ಆದೇಶವನ್ನು ಜಾರಿಗೊಳಿಸಬೇಕು. ಇದನ್ನು ಸರ್ಕಾರದ ಉದ್ದೇಶಕ್ಕೆ ಬಳಕೆ ಮಾಡಬೇಕು. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿರುವ ಈ ವಿದ್ಯಾಸಂಸ್ಥೆ ವಿರುದ್ಧ ಕ್ರಮ ಜರುಗಿಸಬೇಕು. ಅಲ್ಲದೇ ಈ ಅಕ್ರಮದಲ್ಲಿ ಭಾಗಿಯಾಗಿರುವ ಕಂದಾಯ ಇಲಾಖೆಯ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿ, ನೌಕರರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು,’ ಎಂದು ಮಾಜಿ ಶಾಸಕ ಎಂ ಕೃಷ್ಣಾರೆಡ್ಡಿ ಅವರು ದೂರಿನಲ್ಲಿ ಕೋರಿರುವುದು ತಿಳಿದು ಬಂದಿದೆ.

SUPPORT THE FILE

Latest News

Related Posts