ಬೆಂಗಳೂರು; ರಾಜಮನೆತನಕ್ಕೆ ಟಿಡಿಆರ್ ನೀಡಲು ಅಧಿಕಾರವಿಲ್ಲದಿದ್ದರೂ ಸಹ ದುಸ್ಸಾಹಸಕ್ಕೆ ಕೈ ಹಾಕಿದ್ದ ಬಿಬಿಎಂಪಿಯ ಹಿಂದಿನ ಆಯುಕ್ತ ಭರತ್ ಲಾಲ್ ಮೀನಾ ಅವರು ಸರ್ಕಾರದ ಅನುಮತಿಯನ್ನೇ ಪಡೆದಿರಲಿಲ್ಲ!
ರಸ್ತೆ ಅಗಲೀಕರಣಕ್ಕಾಗಿ ಅರಮನೆ ಮೈದಾನದ ಭಾಗಶಃ ಆಸ್ತಿಗಳನ್ನು ಭೂಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವನೆಯನ್ನು ತಮ್ಮ ಹಂತದಲ್ಲೇ ಸಿದ್ಧಪಡಿಸಿದ್ದ ಭರತ್ ಲಾಲ್ ಮೀನಾ ಅವರು ಟಿಡಿಆರ್ ನೀಡಲಾಗುವುದು ಎಂದು ಏಕಾಏಕೀ ಉಲ್ಲೇಖಿಸಿರುವುದು ಸಹ ಚರ್ಚೆಗೆ ಗ್ರಾಸವಾಗಿದೆ.
ಜಯಮಹಲ್ ಮತ್ತು ಬಳ್ಳಾರಿ ರಸ್ತೆಯ ಅಗಲೀಕರಣಕ್ಕಾಗಿ ಅರಮನೆ ಮೈದಾನದ ಭಾಗ ಅಗತ್ಯವಿರುವ ಬಗ್ಗೆ ಭರತ್ ಲಾಲ್ ಮೀನಾ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಸರ್ಕಾರದ ಉತ್ತರ ಬರುವ ಮುನ್ನವೇ ಅರಮನೆ ಮೈದಾನದ ಆಸ್ತಿಯ ಭಾಗಶಃ ಆಸ್ತಿಯನ್ನು ಪಡೆದು ರಸ್ತೆ ಅಗಲೀಕರಣಕ್ಕೆ ಸ್ವಯಂ ಮುಂದಾಗಿದ್ದರು.
ಇದಕ್ಕೆ ಸಂಬಂಧಿಸಿದ ಕೆಲ ದಾಖಲೆಗಳು ಮತ್ತು ಪತ್ರ ವ್ಯವಹಾರಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಲಭ್ಯವಿರುವ ಪತ್ರಗಳ ಪ್ರಕಾರ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದ ಸಂದರ್ಭದಲ್ಲಿ ಆಯುಕ್ತರಾಗಿದ್ದ ಭರತ್ ಲಾಲ್ ಮೀನಾ ಅವರಿಗೆ ಟಿ.ಡಿ.ಆರ್ ನೀಡಲು ಅಧಿಕಾರವೂ ಇರಲಿಲ್ಲ ಮತ್ತು ಅವರು ಸರ್ಕಾರದ ಅನುಮತಿಯನ್ನೂ ಪಡೆದಿರಲಿಲ್ಲ ಎಂದು ದಾಖಲೆಗಳಿಂದ ತಿಳಿದು ಬಂದಿದೆ.
ಮತ್ತೊಂದು ವಿಶೇಷವೆಂದರೇ ಮೇಕ್ರಿ ಸರ್ಕಲ್ ಅಂಡರ್ ಪಾಸ್ ನಿರ್ಮಾಣ ಸಂದರ್ಭದಲ್ಲೂ (2001) ರಾಜ ವಂಶಸ್ಥರಿಗೆ ಭೂ ಪರಿಹಾರ ನೀಡಲಾಗಿತ್ತು.
ಪ್ರತಿ. ಚ.ಮೀಗೆ 57.44 ರು. ಭೂಪರಿಹಾರ ನೀಡಿ 13,000 ಚ.ಮೀ ಅರಮನೆ ಮೈದಾನದ ಸ್ವತ್ತನ್ನು ಭೂಸ್ವಾಧೀನಪಡಿಸಿಕೊಂಡಿತ್ತು.
ಅಂದರೆ 13,000 ಚ.ಮೀ ಸ್ವತ್ತನ್ನು 4,88,814 ರು ನೀಡಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು ಎಂಬುದು ದಾಖಲೆಯಿಂದ ಗೊತ್ತಾಗಿದೆ.
ಆದರೀಗ ಸರ್ವೋಚ್ಛ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಜಯಮಹಲ್ ಮತ್ತು ಬಳ್ಳಾರಿ ರಸ್ತೆ ಅಗಲೀಕರಣಕ್ಕೆ ಪ್ರತಿ ಚ.ಮೀ. ಗೆ 2,83,000 ರು ಮೊತ್ತದ ಟಿ.ಡಿ.ಆರ್ ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ.
ಜಯಮಹಲ್ ಮತ್ತು ಬಳ್ಳಾರಿ ರಸ್ತೆಯ ಅಗಲೀಕರಣಕ್ಕಾಗಿ ಅರಮನೆ ಮೈದಾನದ ಭಾಗ ಅಗತ್ಯವಿದೆ. ಇದಕ್ಕಾಗಿ ಎಸ್ ಎಲ್ ಪಿ ದಾಖಲು ಮಾಡಬೇಕು ಎಂದು ಬಿಬಿಎಂಪಿಯ ಹಿಂದಿನ ಆಯುಕ್ತ ಭರತ್ ಲಾಲ್ ಮೀನಾ ಅವರು ಸರ್ಕಾರಕ್ಕೆ 2009ರ ನವೆಂಬರ್ 20ರಂದು ಪತ್ರ ಬರೆದಿದ್ದರು.
ಇದಕ್ಕೆ ಸರ್ಕಾರವು ಯಾವ ಉತ್ತರವನ್ನೂ ನೀಡಿರಲಿಲ್ಲ. ಸರ್ಕಾರದಿಂದ ಉತ್ತರ ಬರುವ ಮುನ್ನವೇ ಅರಮನೆ ಮೈದಾನದ ಆಸ್ತಿಯ ಭಾಗಶಃ ಆಸ್ತಿಯನ್ನು ಪಡೆದು ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದರು ಎಂಬುದು ಲಭ್ಯವಿರುವ ದಾಖಲೆಗಳಿಂದ ಮೇಲ್ನೋಟಕ್ಕೆ ಕಂಡು ಬರುತ್ತದೆ.
ಭರತ್‌ಲಾಲ್ ಮೀನಾ ಅವರು ಈ ಸಂಬಂಧ ಮೈಸೂರು ರಾಜ ಮನೆತನದ ಪ್ರಿನ್ಸ್ಸ್ ಅಕಾಡೆಮಿಯ ಮೀನಾಕ್ಷಿ ದೇವಿ ಎಂಬುವರಿಗೆ ಟಿಡಿಆರ್ ನೀಡಲಾಗುವುದು ಸ್ವಯಂ ಪ್ರೇರಿತವಾಗಿ 2009ರ ಡಿಸೆಂಬರ್ 26ರಂದು ಪತ್ರ ಬರೆದಿದ್ದರು. ರಾಜ ಮನೆತನದವರು ಈ ಪತ್ರವನ್ನು ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅಲ್ಲದೇ “ಬಿಬಿಎಂಪಿಯೇ ಟಿ.ಡಿ.ಆರ್. ಕೊಡಲು ಮುಂದೆ ಬಂದಿದೆ” ಎಂದು ನ್ಯಾಯಾಲಯಕ್ಕೆ ಹೇಳಿದ್ದರು ಎಂದು ಗೊತ್ತಾಗಿದೆ.
‘ಸರ್ವೋಚ್ಛ ನ್ಯಾಯಾಲಯವು ಇದನ್ನು ಗಂಭೀರವಾಗಿ ಪರಿಗಣಿಸಿತ್ತು. ಇದರ ಪರಿಣಾಮ ಟಿಡಿಆರ್ ಎನ್ನುವ ವಿಕಲ್ಪದಿಂದ ಬಿಬಿಎಂಪಿಯು ಹೊರಬರಲಾಗಲಿಲ್ಲ. ಆ ನಂತರ ನಡೆದ ಬೆಳವಣಿಗೆಗಳಲ್ಲಿ ಇದೇ ಪತ್ರವು ರಾಜ್ಯ ಸರ್ಕಾರಕ್ಕೆ ದುಸ್ವಪ್ನದಂತೆ ಕಾಡುತ್ತಲೇ ಇದೆ,’ ಎನ್ನುತ್ತಾರೆ ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.
ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಖಾಸಗಿ ಜಮೀನನ್ನು ಪಡೆಯಲು ಟಿ.ಡಿ.ಆರ್. ನೀಡಲು ಅಧಿಕಾರವು ಆಯಾ ಭಾಗದ ಯೋಜನಾ ಪ್ರಾಧಿಕಾರಕ್ಕೆ ಮಾತ್ರ ಇದೆ. ಅಗತ್ಯವಿದ್ದಲ್ಲಿ ಸರ್ಕಾರವು ನಿರ್ದಿಷ್ಟ ರಸ್ತೆಗಳ ಹೆಸರು ದಾಖಲಿಸಿ ಇತರ ಸಂಸ್ಥೆಗೆ ಅಧಿಕಾರ ನೀಡಬಹುದು.
ಬೆಂಗಳೂರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಯೋಜನಾ ಪ್ರಾಧಿಕಾರವಾಗಿದೆ. ಬಿಬಿಎಂಪಿಗೆ ಕೆಲವು ರಸ್ತೆ ಅಗಲೀಕರಣಕ್ಕೆ ಟಿ.ಡಿ.ಆರ್. ನೀಡಲು ಅನುಮತಿ ನೀಡಲಾಗಿದ್ದರೂ ಅದರಲ್ಲಿ ಬಳ್ಳಾರಿ ರಸ್ತೆ ಅಥವಾ ಜಯಮಹಲ್ ರಸ್ತೆಯೇ ಇರಲಿಲ್ಲ. ಇದಲ್ಲದೇ ಭರತ್ ಲಾಲ್ ಮೀನಾ ಅವರು 2009ರ ಅಕ್ಟೋಬರ್ 5ರಂದು ಹೊರಡಿಸಿದ ಟಿಡಿಆರ್ ಅಡಿ ರಸ್ತೆ ಅಗಲೀಕರಣದ ಕಛೇರಿ ಆದೇಶದಲ್ಲೂ ಬಳ್ಳಾರಿ ರಸ್ತೆ ಅಥವಾ ಜಯಮಹಲ್ ರಸ್ತೆ ಸೇರಿರಲಿಲ್ಲ.
ಆದರೂ ಭರತ್ ಲಾಲ್ ಮೀನಾ ಅವರು 2009ರ ಡಿಸೆಂಬರ್ 26ರಂದು ಸ್ವಯಂ ಪ್ರೇರಿತವಾಗಿ ಬರೆದಿದ್ದ ಪತ್ರವೇ ಮೈಸೂರು ರಾಜ ಮನೆತನಕ್ಕೆ ಟಿಡಿಆರ್ ರೂಪದಲ್ಲಿ 3,011.66 ಕೋಟಿ ರು ನೀಡುವ ಪರಿಸ್ಥಿತಿಯನ್ನು ತಂದೊಡ್ಡಲು ಮೂಲ ಕಾರಣವಾಗಿದೆ ಎಂಬ ಮಾತು, ಅಧಿಕಾರಿ ವರ್ಗದಲ್ಲಿ ಕೇಳಿ ಬರುತ್ತಿದೆ.
ಆದರೆ ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ 3,011.66 ಕೋಟಿ ರು ಮೌಲ್ಯದ ಟಿಡಿಆರ್ ವಿತರಿಸಬೇಕಿದೆ.
ಮೈಸೂರು ರಾಜ ಮನೆತನಕ್ಕೆ 3,011.66 ಕೋಟಿ ರು ಮೊತ್ತದ ಟಿಡಿಆರ್; ಬೊಕ್ಕಸಕ್ಕೆ ಹೊರೆಯಾಗಲಿದೆಯೇ?
ಈ ಸಂಬಂಧ ಬಿಬಿಎಂಪಿಯ ಮುಖ್ಯ ಆಯುಕ್ತರು ಮುಖ್ಯ ಕಾರ್ಯದರ್ಶಿಗೆ ಈಚೆಗಷ್ಠೇ ಪತ್ರ ಬರೆದಿದ್ದನ್ನು ಸ್ಮರಿಸಬಹುದು.
ಜಯಮಹಲ್ ಮತ್ತು ಬಳ್ಳಾರಿ ರಸ್ತೆ ಅಗಲೀಕರಣ ಉದ್ದೇಶಕ್ಕಾಗಿ ಅರಮನೆ ಮೈದಾನದ ಆಸ್ತಿಯ ಭಾಗಶಃ ಜಾಗವನ್ನು ವಶಕ್ಕೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್ ಅವರು ಅಸಮ್ಮತಿ ವ್ಯಕ್ತಪಡಿಸಿದ್ದರು.
1,400 ಕೋಟಿ ಟಿಡಿಆರ್; ರಾಜ್ಯದ ಹಿತಾಸಕ್ತಿಯಿಲ್ಲ, ಸಮರ್ಥನೀಯವಲ್ಲವೆಂಬ ಅಭಿಪ್ರಾಯ ಬದಿಗೊತ್ತಲಿದೆಯೇ?
ಅಲ್ಲದೇ ಬಿಬಿಎಂಪಿಯು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ತಿರಸ್ಕೃತಗೊಂಡಿತ್ತು.
ಅರಮನೆ ಮೈದಾನಕ್ಕೆ ಟಿಡಿಆರ್; ತಿರಸ್ಕೃತವಾಗಿದ್ದ ಪ್ರಸ್ತಾವನೆಗೆ ಮರು ಜೀವ, ಕಾಣದ ‘ಕೈ’ಗಳ ಪ್ರಭಾವ?
ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿಯೇ ಬಿಬಿಎಂಪಿಯ ಹಳೆಯ ಪ್ರಸ್ತಾವನೆ ಮತ್ತು
ಮೈಸೂರು ರಾಜಮನೆತನಕ್ಕೆ ಟಿಡಿಆರ್; ನಿವೃತ್ತ ಐಎಎಸ್ ಭರತ್‌ಲಾಲ್ ಮೀನಾ ಸ್ವಯಂ ಪ್ರಸ್ತಾವ, ಪತ್ರ ಬಹಿರಂಗ
ಮತ್ತು ಭರತ್ ಲಾಲ್ ಮೀನಾ ಅವರು ಬರೆದಿದ್ದ ಪತ್ರವನ್ನೂ ಹಿಂಪಡೆದುಕೊಂಡಿತ್ತು.