ಬೆಂಗಳೂರು; ಜಯಮಹಲ್ ಮತ್ತು ಬಳ್ಳಾರಿ ರಸ್ತೆ ಅಗಲೀಕರಣ ಉದ್ದೇಶಕ್ಕಾಗಿ ಅರಮನೆ ಮೈದಾನದ ಆಸ್ತಿಯ ಭಾಗಶಃ ಜಾಗವನ್ನು ವಶಕ್ಕೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಹಿಂದಿನ ಬಿಜೆಪಿ ಸರ್ಕಾರವು ತಿರಸ್ಕೃರಿಸಿತ್ತು.
ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು ಮಾತ್ರವಲ್ಲದೇ ಈ ವಿವಾದವು ಇತ್ಯರ್ಥವಾಗುವವರೆಗೂ ಟಿಡಿಆರ್ ನೀಡಲು ಅವಕಾಶವಿಲ್ಲ. ಒಂದೊಮ್ಮೆ ಬಿಬಿಎಂಪಿಯು ಟಿಡಿಆರ್ ನೀಡಿದಲ್ಲಿ ಮೇಲ್ಮನವಿದಾರರು ತಕ್ಷಣವೇ ಮಾರಾಟ ಮಾಡುತ್ತಾರೆ. ಹಾಗೂ ಬಿಲ್ಡರ್‍ಗಳು ಅವುಗಳನ್ನು ತಕ್ಷಣವೇ ಉಪಯೋಗಿಸಿಕೊಳ್ಳುತ್ತಾರೆ ಎಂದೂ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ನಗರಾಭಿವೃದ್ಧಿ ಇಲಾಖೆಯು ಸ್ಪಷ್ಟವಾಗಿ ಹೇಳಿತ್ತು.
ಈ ಸಂಬಂಧ ‘ದಿ ಫೈಲ್’ ಆರ್‍ಟಿಐ ಅಡಿಯಲ್ಲಿ ಸಮಗ್ರ ಕಡತವನ್ನು ಪಡೆದುಕೊಂಡಿದೆ.
ಈ ಪ್ರಕರಣದಲ್ಲಿ ಟಿಡಿಆರ್ ನೀಡಲು ಅವಕಾಶವಿಲ್ಲ ಮತ್ತು ಇದು ರಾಜ್ಯ ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂಬುದನ್ನು ಖಾತ್ರಿ ಪಡಿಸಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಬಿಬಿಎಂಪಿಯ ಮುಖ್ಯ ಆಯುಕ್ತರು 3,011.66 ಕೋಟಿ ರು ಮೌಲ್ಯದ ಟಿಡಿಆರ್ ವಿತರಿಸಬೇಕು ಎಂದು ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿವೆ.
ಅಲ್ಲದೇ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 2022ರ ಸೆ.16ರಂದು ನಡೆದಿದ್ದ ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ಮತ್ತೊಮ್ಮೆ ತುರ್ತಾಗಿ ಪರಿಶೀಲಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು 2023ರ ಆಗಸ್ಟ್ 4ರಂದೇ ಸೂಚಿಸಿದ್ದರು.

ಟಿಡಿಆರ್ ನೀಡಿಕೆ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ನೆಪವಾಗಿರಿಸಿಕೊಂಡಿರುವ ಈಗಿನ ಕಾಂಗ್ರೆಸ್ ಸರ್ಕಾರವು, ಮೈಸೂರು ರಾಜಮನೆತನದ ಕಾನೂನು ವಾರಸುದಾರರು ಮತ್ತು ಉತ್ತರಾಧಿಕಾರಿತ್ವದ ಹಕ್ಕನ್ನು ಸ್ಥಾಪಿಸುವವರಿಗೆ ಟಿಡಿಆರ್ ನೀಡಲು ಎಲ್ಲಿಲ್ಲದ ಅತ್ಯುತ್ಸಾಹ ತೋರುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ಹಿಂದೆ ಕಾಂಗ್ರೆಸ್‌ನ ಕಾಣದ ಕೈಗಳಿವೆ ಎಂಬ ಮಾತುಗಳು ಕೇಳಿ ಬಂದಿವೆ.
ಭೂ ಸ್ವಾಧೀನಕ್ಕೆ 37.28 ಲಕ್ಷ, ಟಿಡಿಆರ್ ಮೌಲ್ಯ 1,396 ಕೋಟಿ
ಬೆಂಗಳೂರು ಅರಮನೆ ಜಾಗಕ್ಕೆ ಸಂಬಂಧಿಸಿದಂತೆ (ಸಿವಿಲ್ ಅಪೀಲ್ ಸಂಖ್ಯೆ 3303/97) ಸರ್ವೋಚ್ಛ ನ್ಯಾಯಾಲಯದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸುವ ಸಂಬಂಧ ಇಲಾಖೆ ಅಧಿಕಾರಿಗಳ ಸಭೆ ನಡೆದಿತ್ತು. ಈ ಸಭೆಯಲ್ಲಿ ಮಹತ್ವಪೂರ್ಣ ಸಂಗತಿಗಳ ಕುರಿತು 2021ರಲ್ಲೇ ಚರ್ಚೆಯಾಗಿತ್ತು.

ಈ ಸಭೆಯಲ್ಲಿಯೂ ಟಿಡಿಆರ್ ನೀಡುವ ಕುರಿತು ಮತ್ತು ಟಿಡಿಆರ್ ನೀಡಿದ ನಂತರದ ಬೆಳವಣಿಗಳ ಬಗ್ಗೆಯೂ ಅಧಿಕಾರಿಗಳು ಅವಲೋಕಿಸಿದ್ದರು. ಸರ್ವೋಚ್ಛ ನ್ಯಾಯಾಲಯವು ಐಎ ನಂ 2 ಮತ್ತು 11ರಲ್ಲಿ ನೀಡಿರುವ ಆದೇಶದಂತೆ 15 ಎಕರೆ 39 ಗುಂಟೆ ಜಾಗದ ಭೂ ಸ್ವಾಧೀನ ವೆಚ್ಚವು 37,28,813 ರು. ಆಗಲಿದೆ. ಆದರೆ ಭೂ ಪರಿಹಾರದ ಬದಲಿಗೆ ಬಿಬಿಎಂಪಿಯು ಟಿಡಿಆರ್ ನೀಡಿದಲ್ಲಿ ಆಗ ಟಿಡಿಆರ್ ಮೌಲ್ಯವು 1,396 ಕೋಟಿ ರು. ಗಳಾಗಲಿದೆ ಎಂದು ಅಂದಾಜಿಸಿದ್ದರು.
‘ಒಂದು ವೇಳೆ ಬಿಬಿಎಂಪಿಯು ಟಿಡಿಆರ್ ನೀಡಿದಲ್ಲಿ ಅಪೀಲುದಾರರು ತಕ್ಷಣವೇ ಅವುಗಳನ್ನು ಬಿಲ್ಡ್‌ರ್‍ಗಳಿಗೆ ಮಾರಾಟ ಮಾಡುತ್ತಾರೆ. ಮತ್ತು ಬಿಲ್ಡರ್‍ಗಳು ಅವುಗಳನ್ನು ತಕ್ಷಣವೇ ಉಪಯೋಗಿಸಿಕೊಳ್ಳುತ್ತಾರೆ. ನಂತರ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣವು ಇತ್ಯರ್ಥವಾಗಿ ಒಂದು ವೇಳೆ ಅಪೀಲುದಾರರ ವಿರುದ್ಧ ತೀರ್ಪು ಬಂದಲ್ಲಿ ಸುಮಾರು 1,400 ಕೋಟಿ ಮೌಲ್ಯದ ಟಿಡಿಆರ್‍ನ್ನು ವಸೂಲು ಮಾಡಲು ಸಾಧ್ಯವಾಗುವುದಿಲ್ಲ,’ ಎಂಬ ಅಂಶವನ್ನು ಉಲ್ಲೇಖಿಸಿರುವುದು ಸಭೆ ನಡವಳಿಯಿಂದ ತಿಳಿದು ಬಂದಿದೆ.

2022ರಲ್ಲೇ ಪ್ರಸ್ತಾವನೆ ಕೈಬಿಟ್ಟಿದ್ದೇಕೆ?
ಟಿಡಿಅರ್ ನೀಡುವ ಪ್ರಸ್ತಾವನೆ ಕುರಿತು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ 2022ರ ಸೆ.16ರಂದು ಸಭೆ ನಡೆದಿತ್ತು. ಈ ಸಭೆಯಲ್ಲಿ ಟಿಡಿಆರ್ ನೀಡುವ ಪ್ರಸ್ತಾವನೆಯನ್ನು ಕೈಬಿಡಲು ತೀರ್ಮಾನಿಸಲಾಗಿತ್ತು.
‘ಲಭ್ಯವಿರುವ ದಾಖಲೆಗಳನ್ನು ಪರಿಗಣಿಸಿದಲ್ಲಿ ಅಧಿನಿಯಮದಲ್ಲಿ ನಿಗದಿಪಡಿಸಲಾದ ಪರಿಹಾರದ ಮೊತ್ತಕ್ಕೆ ಹಾಗೂ ರಾಜ್ಯ ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿರುವ ಅಭಿವೃದ್ಧಿ ಹಕ್ಕುಗಳ ರೂಪದ ಪರಿಹಾರ (ಟಿಡಿಆರ್) ವನ್ನು ವಿತರಿಸುವ ಬದಲಿಗೆ ಲಭ್ಯವಿರುವ ಜಾಗದಲ್ಲಿ ರಸ್ತೆಯನ್ನು ವಿಸ್ತರಿಸಬಹುದು,’ ಎಂದು ಸಭೆಯು ತೀರ್ಮಾನಿಸಿರುವುದು ಗೊತ್ತಾಗಿದೆ.
ಈ ಸಂಬಂಧ 2022ರ ಡಿಸೆಂಬರ್ 8ರಂದು ಹಿಂದಿನ ಸರ್ಕಾರವು ಆದೇಶವನ್ನೂ ಹೊರಡಿಸಿತ್ತು.
ಸ್ವತ್ತಿನ ಮಾಲೀಕತ್ವದ ಕುರಿತು ಸಕ್ಷಮ ನ್ಯಾಯಾಲಯಗಳಲ್ಲಿ ಯಾವುದೇ ವಿವಾದ ಇದ್ದಲ್ಲಿ, ವಿವಾದವು ಇತ್ಯರ್ಥವಾಗುವವರೆಗೆ ಟಿಡಿಆರ್ ನೀಡಲು ಅವಕಾಶವಿಲ್ಲ. ಮತ್ತು ಇದು ರಾಜ್ಯ ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿದೆ. ಬಿಬಿಎಂಪಿ ಬಳಿ ಲಭ್ಯವಿರುವ ಜಾಗದಲ್ಲಿ ರಸ್ತೆಯನ್ನು ವಿಸ್ತರಿಸಲು ಪರ್ಯಾಯ ಮಾರ್ಗೋಪಾಯಗಳನ್ನು ಯೋಜಿಸಬೇಕು. ಈ ಸಂಬಂಧ ಬಿಬಿಎಂಪಿಯು ಈಗಾಗಲೇ ಕ್ರಮ ವಹಿಸಿದೆ.

ಹೀಗಾಗಿ ಪ್ರಶ್ನಿತ ಬೆಂಗಳೂರು ಅರಮನೆ ಮೈದಾನದ ಸ್ವತ್ತಿನ ಭಾಗಶಃ 15 ಎಕರೆ 39 ಗುಂಟೆ ಜಾಗವನ್ನು ಜಯಮಹಲ್ ರಸ್ತೆ ಮತ್ತು ಬಳ್ಳಾರಿ ರಸ್ತೆ ವಿಸ್ತರಣೆ ಉದ್ದೇಶಕ್ಕಾಗಿ ಬಿಬಿಎಂಪಿ ವಶಕ್ಕೆ ಪಡೆಯುವ ಪ್ರಸ್ತಾವನೆಯನ್ನು ಕೈಬಿಟ್ಟು ಆದೇಶಿಸಿದೆ,’ ಎಂದು ವಿವರಿಸಿತ್ತು.

ಮೈಸೂರು ರಾಜಮನೆತನದ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಅವರ ಕಾನೂನು ವಾರಸುದಾರರಿಗೆ ಉತ್ತರಾಧಿಕಾರತ್ವ ಹಕ್ಕುಗಳನ್ನು ಹೊಂದಿರುವವರಿಗೆ ಟಿಡಿಆರ್ ರೂಪದಲ್ಲಿ ಅಗಾಧ ಮೊತ್ತದ ಪರಿಹಾರ ಪಾವತಿಸುವುದರಲ್ಲಿ ರಾಜ್ಯದ ಹಿತಾಸಕ್ತಿ ಅಡಗಿಲ್ಲ ಎಂದು ಮುಖ್ಯಮಂತ್ರಿಗಳ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್ ಅವರು ಅಭಿಪ್ರಾಯ ನೀಡಿದ್ದರು.
1,400 ಕೋಟಿ ಟಿಡಿಆರ್; ರಾಜ್ಯದ ಹಿತಾಸಕ್ತಿಯಿಲ್ಲ, ಸಮರ್ಥನೀಯವಲ್ಲವೆಂಬ ಅಭಿಪ್ರಾಯ ಬದಿಗೊತ್ತಲಿದೆಯೇ?
ಮೈಸೂರು ರಾಜಮನೆತನದ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಅವರ ಕಾನೂನು ವಾರಸುದಾರರಿಗೆ ಕರ್ನಾಟಕ ಸ್ಟಾಂಪ್ ಕಾಯ್ದೆಯ ಪ್ರಕಾರ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳ (ಟಿಡಿಆರ್) ಒಟ್ಟು ಮೊತ್ತವು ಬರೋಬ್ಬರಿ 3,011.66 ಕೋಟಿ ರು ಆಗಲಿದೆ.
ಮೈಸೂರು ರಾಜ ಮನೆತನಕ್ಕೆ 3,011.66 ಕೋಟಿ ರು ಮೊತ್ತದ ಟಿಡಿಆರ್; ಬೊಕ್ಕಸಕ್ಕೆ ಹೊರೆಯಾಗಲಿದೆಯೇ?
ಈ ಕುರಿತು ಬಿಬಿಎಂಪಿಯ ಈಗಿನ ಮುಖ್ಯ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದಿರುವುದನ್ನು ಸ್ಮರಿಸಬಹುದು.





