ಬೆಂಗಳೂರು; ಶೈಕ್ಷಣಿಕ ವರ್ಷ ಅಂತ್ಯಗೊಳ್ಳುತ್ತಿದ್ದರೂ ಸಹ ಪರಿಶಿಷ್ಟ ಜಾತಿಯ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವೇ ಮಂಜೂರಾಗಿಲ್ಲ. ಅಲ್ಲದೇ ತಾಂತ್ರಿಕ ಅಡಚಣೆಗಳ ನಿವಾರಣೆಗೆ ವೇಗ ನೀಡಿಲ್ಲ. ಈ ಸಂಗತಿಯು ಸರ್ಕಾರದ ಗಮನಕ್ಕೆ ಬಂದಿದೆ.
ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನಭಾಗ್ಯ ಮತ್ತು ಶಕ್ತಿ ಯೋಜನೆ ಫಲಾನುಭವಿಗಳಿಗೆ ಅನುದಾನ ಬಿಡುಗಡೆಗೆ ತೋರುತ್ತಿರುವ ಉತ್ಸಾಹವನ್ನು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಿಸುವುದರಲ್ಲಿ ತೋರುತ್ತಿಲ್ಲ.
ಶೈಕ್ಷಣಿಕ ವರ್ಷ ಅಂತ್ಯಗೊಳ್ಳುತ್ತಿದ್ದರೂ ಇಲ್ಲಿಯವರೆಗೆ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರಾಗಿಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಖುದ್ದು ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದ್ದರು. ಇದಕ್ಕೆ 2024ರ ಡಿಸೆಂಬರ್ 18ರಂದು ಉತ್ತರ ನೀಡಿರುವ ಸಮಾಜ ಕಲ್ಯಾಣ ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರು ಹೌದು, ಗಮನಕ್ಕೆ ಬಂದಿದೆ ಎಂಬ ಉತ್ತರವನ್ನೂ ನೀಡಿದ್ದಾರೆ.
ಉತ್ತರದಲ್ಲೇನಿದೆ?
2024-25ನೇ ಸಾಲಿನಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಕಾರ್ಯಕ್ರಮದಡಿಯಲ್ಲಿ ಅರ್ಜಿ ಸಲ್ಲಿಸಿದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರಾತಿ ಹಾಗೂ ಪಾವತಿಯು ಪ್ರಗತಿಯಲ್ಲಿದೆ. ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ಮತ್ತು ಕೇಂದ್ರ ಪುರಸ್ಕೃತ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಒಟ್ಟಾರೆ 9,12,801 ಅರ್ಜಿಗಳನ್ನು ಸ್ವೀಕರಿಸಿರುವುದು ಉತ್ತರದಿಂದ ಗೊತ್ತಾಗಿದೆ.
ಸ್ವೀಕರಿಸಿರುವ ಅರ್ಜಿಗಳ ಪೈಕಿ ಇದುವರೆಗೆ 8,07,515 ಅರ್ಜಿಗಳಿಗೆ ಅನುಮೋದನೆ ನೀಡಿದೆ. ಈ ಪೈಕಿ 7,55,125 ವಿದ್ಯಾರ್ಥಿಗಳಿಗೆ ಒಟ್ಟಾರೆ 107.34 ಕೋಟಿ ರು. ವಿದ್ಯಾರ್ಥಿ ವೇತನ ಪಾವತಿಯಾಗಿದೆ. ಸ್ವೀಕರಿಸಿರುವ ಅರ್ಜಿಗಳ ಅಂಕಿ ಅಂಶಗಳ ಪ್ರಕಾರ ಇನ್ನೂ 1,05,286 ವಿದ್ಯಾರ್ಥಿಗಳ ಅರ್ಜಿಗಳನ್ನು ಅನುಮೋದಿಸಲು ಬಾಕಿ ಇದೆ. ಈ ಅರ್ಜಿಗಳಿಗೆ ಅನುಮೋದನೆ ಸಿಕ್ಕ ನಂತರವಷ್ಟೇ ವಿದ್ಯಾರ್ಥಿ ವೇತನವು ಮಂಜೂರಾಗಲಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಮೆಟ್ರಿಕ್ ಪೂವ್ ವಿದ್ಯಾರ್ಥಿ ವೇತನ (1ರಿಂದ 8ನೇ ತರಗತಿ) ಒಟ್ಟು 4,63,347 ಅರ್ಜಿಗಳನ್ನು ಸ್ವೀಕರಿಸಿದೆ. ಈ ಪೈಕಿ 4,58,899 ಅರ್ಜಿಗಳಿಗೆ ಅನುಮೋದನೆ ನೀಡಿದೆ. ಅನುಮೋದಿಸಲು 4,448 ಅರ್ಜಿಗಳು ಬಾಕಿ ಇವೆ. ಅನುಮೋದನೆ ಪಡೆದುಕೊಂಡಿರುವ ವಿದ್ಯಾರ್ಥಿಗಳಿಗೆ 51.73 ಕೋಟಿ ರು. ಪಾವತಿಸಿದೆ.
ಅದೇ ರೀತಿ ಕೇಂದ್ರ ಪುರಸ್ಕೃತ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ 2,18,161 ಅರ್ಜಿಗಳನ್ನು ಸ್ವೀಕರಿಸಿರುವ ಸರ್ಕಾರವು 2,14,732 ಅರ್ಜಿಗಳಿಗೆ ಅನುಮೋದನೆ ನೀಡಿದೆ. 29.82 ಕೋಟಿ ರು. ಪಾವತಿಸಿದೆ. 3,429 ಅರ್ಜಿಗಳಿಗೆ ಇನ್ನಷ್ಟೇ ಅನುಮೋದನೆ ಸಿಗಬೇಕಿದೆ.
ಹಾಗೆಯೇ ಕೇಂದ್ರ ಸರ್ಕಾರದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ 2,31,293 ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಪೈಕಿ 1,33,884 ಸಂಖ್ಯೆಯ ಅರ್ಜಿಗಳನ್ನಷ್ಟೇ ಅನುಮೋದಿಸಿರುವ ಸರ್ಕಾರವು 25.79 ಕೋಟಿ ರು. ಪಾವತಿಸಿದೆ. 97,409 ಅರ್ಜಿಗಳಿಗೆ ಅನುಮೋದನೆ ನೀಡಲು ಬಾಕಿ ಇರಿಸಿಕೊಂಡಿರುವುದು ತಿಳಿದು ಬಂದಿದೆ.
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ (9 ಮತ್ತು 10ನೇ ತರಗತಿ) ಮತ್ತು ಕೇಂದ್ರ ಪುರಸ್ಕೃತ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಕಾರ್ಯಕ್ರಮದಡಿಯಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಂಬಂಧಪಟ್ಟ ಶಾಲೆ, ಕಾಲೇಜಿನ ನೋಡಲ್ ಅಧಿಕಾರಿಗಳು ಕಡ್ಡಾಯವಾಗಿ ಆಧಾರ್ ಆಧರಿತ ಬಯೋಮೆಟ್ರಿಕ್ ದೃಢೀಕರಿಸಬೇಕಿದೆ.
ಬಯೋ ಮೆಟ್ರಿಕ್ ದೃಢೀಕರಣವಾದ ವಿದ್ಯಾರ್ಥಿಗಳ ವಿವರಗಳನ್ನು ಮಾತ್ರ ಕೇಂದ್ರದ ಪಾಲಿನ ಶೇ. 60ರಷ್ಟು ಮೊತ್ತವನ್ನು ಪಾವತಿಸಲು ಎಪಿಐ ಮೂಲಕ ಎನ್ ಎಸ್ ಪಿ ಪೋರ್ಟಲ್‌ಗೆ ವರ್ಗಾವಣೆ ಮಾಡಬೇಕು ಎಂದು ಕೇಂದ್ರ ಸರ್ಕಾರವು ನಿರ್ದೇಶನ ನೀಡಿದೆ. ಆದರೆ ಶೈಕ್ಷಣಿಕ ವರ್ಷ ಅಂತ್ಯಗೊಳ್ಳುತ್ತಿದ್ದರೂ ರಾಜ್ಯದಲ್ಲಿ ಮಾತ್ರ ಈ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಗೊತ್ತಾಗಿದೆ.
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ರಾಜ್ಯದ ಪಾಲಿನ ಶೆ. 40ರಷ್ಟು ಮೊತ್ತವನ್ನು ಈಗಾಗಲೇ ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡಲಾಗಿದೆ ಎಂದು ಸಚಿವರು ಉತ್ತರ ನೀಡಿದ್ದಾರಾದರೂ ಎನ್ ಎಸ್ ಪಿ ಪೋರ್ಟಲ್‌ಗೆ ವಿವರಗಳನ್ನು ಸಲ್ಲಿಸುವಲ್ಲಿ ಆಗಿರುವ ವಿಳಂಬವು ಲಕ್ಷಾಂತರ ಸಂಖ್ಯೆಯ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದ ವಂಚಿತರಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನಭಾಗ್ಯ ಮತ್ತು ಶಕ್ತಿ ಯೋಜನೆ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಿ ಬೀಗುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ, ವಿವಿಧ ಸಮುದಾಯಗಳ ಅಭಿವೃದ್ಧಿ, ರೈತರ ಮಕ್ಕಳಿಗೆ ಮತ್ತು ಪರಿಶಿಷ್ಟ ಜಾತಿ ಯ 1ರಿಂದ 8ನೇ ತರಗತಿ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಇನ್ನಿತರೆ ಇಲಾಖಾವಾರು ಫಲಾನುಭವಿ ಕಾರ್ಯಕ್ರಮಗಳಿಗೆ ಕಳೆದ 6 ತಿಂಗಳಲ್ಲಿ ನಿರೀಕ್ಷಿತ ಅನುದಾನ ಬಿಡುಗಡೆ ಮಾಡಿರಲಿಲ್ಲ.
ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ರಾಜ್ಯ ಯೋಜನೆಯಡಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ (1ರಿಂದ 8 ನೇ ತರಗತಿ) ಕ್ಕೆಂದು 114.63 ಕೋಟಿ ರು. ನೀಡಿದ್ದರೂ ಸಹ ಅಕ್ಟೋಬರ್ ಅಂತ್ಯದವರೆಗೆ ಕೇವಲ 0.39 ಕೋಟಿ ರು. ಮಾತ್ರ ಬಿಡುಗಡೆ ಮಾಡಿದೆ. ಆದರೆ ಇದರಲ್ಲಿಯೂ ನಯಾಪೈಸೆಯನ್ನೂ ವೆಚ್ಚ ಮಾಡಿರಲಿಲ್ಲ.
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಕೇಂದ್ರ ಪುರಸ್ಕೃತ ಯೋಜನೆ ಅಡುಗೆಯವರು, ಸಹಾಯಕರುಗಳಿಗೆ ಗೌರವ ಧನ, ಅಡುಗೆ ಮನೆ ನಿರ್ವಹಣೆ (ಪ್ರಧಾನ ಮಂತ್ರಿ ಪೋಷಣ ಶಕ್ತಿ)ಗೆಂದು 216.97 ಕೋಟಿ ರು ನೀಡಿದ್ದರೂ ಅಕ್ಟೋಬರ್ ಅಂತ್ಯದವರೆಗೆ ಬಿಡಿಗಾಸನ್ನೂ ನೀಡಿರಲಿಲ್ಲ.
ಗ್ಯಾರಂಟಿಗಳಿಗೆ ಭರಪೂರ ಅನುದಾನ; ಹಿಂದುಳಿದ, ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕಿಲ್ಲ ಬಿಡಿಗಾಸು
ಹಿಂದುಳಿದ ವರ್ಗಗಳ ಚಾಂಪಿಯನ್ ಎಂಬ ಖ್ಯಾತಿ ಪಡೆದಿರುವ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ವರ್ಷದಲ್ಲೇ ಹಿಂದುಳಿದ ವರ್ಗಗಳಿಗೆ ಸೇರಿದ 39,332 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶವೇ ದೊರೆತಿರಲಿಲ್ಲ.
ಹಿಂದುಳಿದ ವರ್ಗದ 39,332 ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಲ್ಲಿ ದೊರೆಯದ ಪ್ರವೇಶಾತಿ
2023-24ನೇ ಸಾಲಿಗೆ ಕೇಂದ್ರ ಪುರಸ್ಕೃತ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಕಾರ್ಯಕ್ರಮದಡಿಯಲ್ಲಿ ಒಟ್ಟಾರೆ 61.91 ಕೋಟಿ ರು ಅನುದಾನ ಬಿಡುಗಡೆಯಾಗಿದೆ. ಈ ಅನುದಾನ ಬಳಸಿಕೊಂಡು 1,54,305 ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಪಾವತಿಸಿದೆ. 2024-25ನೇ ಸಾಲಿಗೆ ಅಗತ್ಯವಿರುವ ಅನುದಾನ ಬಿಡುಗಡೆ ಕುರಿತು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ, ವರ್ಷದಿಂದಲೂ ಬಾಕಿ;ಬಡಮಕ್ಕಳ ಶಿಷ್ಯ ವೇತನಕ್ಕೂ ಹಣವಿಲ್ಲವೇ?
ಅದೇ ರೀತಿ ಕೇಂದ್ರ ಸರ್ಕಾರದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಒಟ್ಟಾರೆ 257.35 ಕೋಟಿ ರು ಅನುದಾನ ಬಿಡುಗಡೆಯಾಗಿತ್ತು. ಈ ಅನುದಾನ ಬಳಸಿಕೊಂಡು 2,93,777 ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಪಾವತಿಸಿದೆ. ಪ್ರಸಕ್ತ ಸಾಲಿಗೆ ಅನುದಾನ ಬಿಡುಗಡೆ ಕೋರಿ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ತಿಳಿದು ಬಂದಿದೆ.
ಹಾಗೆಯೇ 2023-24ನೇ ಸಾಲಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಕಾರ್ಯಕ್ರಮದಡಿ 400 ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಈ ಅನುದಾನವನ್ನು ಬಳಸಿಕೊಂಡು 2020-21, 2021-22 ಮತ್ತು 2022-23ನೇ ಆರ್ಥಿಕ ವರ್ಷದಲ್ಲಿ ಬಾಕಿ ಇದ್ದ 3,49,743 ಅರ್ಹ ವಿದ್ಯಾರ್ಥಿಗಳಿಗೆ ಪಾವತಿ ಮಾಡಲು 312.22 ಕೋಟಿ ರು. ವಿನಿಯೋಗಿಸಿತ್ತು.
ಉಳಿಕೆ ಅನುದಾನದಲ್ಲಿ 2023-24ನೇ ಸಾಲಿನ 1,42,418 ಅರ್ಹ ವಿದ್ಯಾರ್ಥಿಗಳಿಗೆ ಶುಲ್ಕ ಮರು ಪಾವತಿ ಮಂಜೂರಾಗಿದೆ. ಈ ಕಾರ್ಯಕ್ರಮದಡಿಯಲ್ಲಿ 2020-21, 2021-22, 2022-23 ಮತ್ತು 2023-24ನೇ ಸಾಲಿನಲ್ಲಿ ಒಟ್ಟು 4,90,372 ವಿದ್ಯಾರ್ಥಿಗಳು ಶುಲ್ಕ ಮರುಪಾವತಿ ಪಡೆಯಲು ಅರ್ಹರಿದ್ದಾರೆ. ಈ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮಾಡಲು 263.59 ಕೋಟಿ ರು ಅನುದಾನದ ಅವಶ್ಯಕತೆ ಇದೆ. ಈ ಕುರಿತೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.