ಮೈಸೂರು ರಾಜಮನೆತನಕ್ಕೆ ಟಿಡಿಆರ್; ನಿವೃತ್ತ ಐಎಎಸ್‌ ಭರತ್‌ಲಾಲ್‌ ಮೀನಾ ಸ್ವಯಂ ಪ್ರಸ್ತಾವ, ಪತ್ರ ಬಹಿರಂಗ

ಬೆಂಗಳೂರು; ಜಯಮಹಲ್‌ ಮತ್ತು ಬಳ್ಳಾರಿ ರಸ್ತೆಯಲ್ಲಿನ ವಾಹನ ದಟ್ಟಣೆಯನ್ನು ನಿರ್ವಹಿಸಲು ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದ್ದ ಬಿಬಿಎಂಪಿಯ ಹಿಂದಿನ ಆಯುಕ್ತ ಭರತ್‌ಲಾಲ್‌ ಮೀನಾ ಅವರು ಅರಮನೆ ಮೈದಾನದ ಆಸ್ತಿಯ ಭಾಗಶಃ ಆಸ್ತಿಯನ್ನು ಪಡೆದು ರಸ್ತೆ ಅಗಲೀಕರಣಕ್ಕೆ ಸ್ವಯಂ ಮುಂದಾಗಿದ್ದರು.

 

ಅಲ್ಲದೇ ಈ ಸಂಬಂಧ ಬರೆದಿದ್ದ ಪತ್ರದಲ್ಲಿ ಟಿಡಿಆರ್‍‌ ನೀಡಲಾಗುವುದು ಎಂದು  ಮೈಸೂರು ರಾಜ ಮನೆತನದ ಪ್ರಿನ್ಸ್‌ಸ್‌ ಅಕಾಡೆಮಿಯ ಮೀನಾಕ್ಷಿ ದೇವಿ ಎಂಬುವರಿಗೆ ಸ್ವಯಂ ಪ್ರೇರಿತವಾಗಿ ಪತ್ರ ಬರೆದಿದ್ದರು.

 

ಭರತ್‌ಲಾಲ್ ಮೀನಾ ಅವರು 2009ರಲ್ಲೇ ಸ್ವಯಂ ಪ್ರೇರಿತವಾಗಿ ಬರೆದಿದ್ದ ಪತ್ರವೇ ಮೈಸೂರು ರಾಜ ಮನೆತನಕ್ಕೆ ಟಿಡಿಆರ್‍‌ ರೂಪದಲ್ಲಿ 3,011.66 ಕೋಟಿ ರು ನೀಡುವ ಪರಿಸ್ಥಿತಿಯನ್ನು ತಂದೊಡ್ಡಲು ಮೂಲ ಕಾರಣವಾಗಿದೆ ಎಂಬ ಮಾತು, ಅಧಿಕಾರಿ ವರ್ಗದಲ್ಲಿ ಕೇಳಿ ಬರುತ್ತಿದೆ.

 

2009ರ ಡಿಸೆಂಬರ್‍‌ನಲ್ಲಿ ಬರೆದಿದ್ದ ಪತ್ರಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಮೀನಾಕ್ಷಿ ದೇವಿ ಅವರಿಗೆ ಪತ್ರದಲ್ಲೇನಿದೆ?

 

ಬೆಂಗಳೂರು ಮಹಾನಗರದಲ್ಲಿ ಅತಿಯಾದ ಸಂಚಾರಿ ದಟ್ಟಣೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯು ಬೆಂಗಳೂರು ನಗರದ ಅನೇಕ ಪ್ರಮುಖ ರಸ್ತೆಗಳನ್ನ ಅಗಲೀಕರಣಗೊಳಿಸಲು ಟಿಡಿಆರ್‍‌ ನಿಯಮಗಳ ಅನ್ವಯ ಕ್ರಮ ಕೈಗೊಂಡಿರುತ್ತದೆ.

 

ಜಯಮಹಲ್‌ ರಸ್ತೆಯನ್ನು ಮೇಖ್ರಿ ವೃತ್ತದಿಂದ ಕಂಟೋನ್‌ಮೆಂಟ್‌ ರೈಲ್ವೇ ಸ್ಟೇಷನ್‌ ವರೆಗೆ 30/45 ಮೀ ವರೆಗೆ ಅಗಲೀಕರಣಗೊಳಿಸಲು ಯೋಜಿಸಿದೆ. ಈ ಅಗಲೀಕರಣಕ್ಕೆ ಅರಮನೆ ಆಸ್ತಿಯಿಂದ 38,240 ಚ ಮೀಟರ್‍‌ (9 ಎಕರೆ 18 ಗುಂಟೆ) ಜಾಗದ ಅವಶ್ಯಕತೆ ಇರುತ್ತದೆ. ಹಾಗೂ ಬಳ್ಳಾರಿ ರಸ್ತೆಯನ್ನು ಬಿಡಿಎ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ (ಸರಪಳಿ 2.55 ಕಿ ಮೀನಿಂದ 4.05ವರೆಗೆ) 45. ಮೀಟರ್‍‌ಗೆ ಅಗಲೀಕರಣಗೊಳಿಸಲು ಯೋಜಿಸಿದ್ದು ಈ ಅಗಲೀಕರಣಕ್ಕೆ 26,416 ಚ ಮೀ ( 6 ಎಕರೆ 21 ಗುಂಟೆ) ಜಾಗದ ಅವಶ್ಯಕತೆ ಇರುತ್ತದೆ ಎಂದು ತಿಳಿಸಿದ್ದರು.

 

 

ಕಾನೂನು ಕೋಶದ ಮುಖ್ಯಸ್ಥರು ಮತ್ತು ಡಿಪಿಎಆರ್‍‌ ಉಪ ಕಾರ್ಯದರ್ಶಿ, ಕನ್ನಡ ಸಂಸ್ಕೃತಿ ಪ್ರವಾಸೋದ್ಯಮ ಇಲಾಖೆ ನೀಡಿರುವ ಕಾನೂನು ಸಲಹೆಯಂತೆ ಬೆಂಗಳೂರು ಅರಮನೆ ಭಾಗಶಃ ಜಾಘವನ್ನು (ಒಟ್ಟು 15 ಎಕರೆ 39 ಗುಂಟೆ) ಸರ್ವೋಚ್ಛ ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಿ ಪಡೆಯಲು ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಂಡಿರುತ್ತದೆ.

 

ಮೇಲಿನ ಎರಡೂ ರಸ್ತೆಗಳು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಪ್ರಮುಖ ರಸ್ತೆಗಳಾಗಿವೆ. ಪ್ರತಿ ದಿನಕ್ಕೆ 1,40,000 ವಾಹನಗಳ ಸಂಚಾರವಿದೆ. ಈ ವಾಹನ ದಟ್ಟಣೆಯನ್ನು ಕಡಿಮೆ ಆಡುವ ದೃಷ್ಟಿಯಿಂದ ಹಾಗೂ ಸಾರ್ವಜನಿಕ ದೃಷ್ಟಿಯಿಂದ ಬಳ್ಳಾರಿ ರಸ್ತೆ ಅಗಲೀಕರಣಕ್ಕೆ ನಿಮ್ಮ ಸ್ವಾಧೀನಾನುಭವದಲ್ಲಿರುವ ಬಳ್ಳಾರಿ ರಸ್ತೆಗೆ ಅಭಿಮುಖವಾಗಿರುವ ಆಸ್ತಿಯಿಂದ (3,227 ಇಂದ 3,3855) ಸರ್ವೋಚ್ಛ ನ್ಯಾಯಾಲಯದ ಅಂತಿಮ ತೀರ್ಪಿಗೆ ಬದ್ಧವಾಗಿರುವ ಷರತ್ತಿಗೆ ಒಳಪಟ್ಟಂತೆ 3110.00 ಚ ಮೀ ಜಾಗವನ್ನು ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಗೆ ಹಸ್ತಾಂತರಿಸಲು ಸೂಕ್ತ ಒಪ್ಪಿಗೆ ನೀಡಬೇಕು ಎಂದು ಪತ್ರದಲ್ಲಿ ಕೋರಿದ್ದರು.

 

 

‘ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ ವತಿಯಿಂದ ಕರ್ನಾಟಕ ಪಟ್ಟಣ ಹಾಗೂ ಪ್ರದೇಶ ಯೋಜನೆ ಕಾಯ್ದೆ ಅನ್ವಯ ಹಸ್ತಾಂತರಿಸಬಹುದಾದ ಅಭಿವೃದ್ಧಿ ಹಕ್ಕುಗಳ ಪ್ರಮಾಣ ಪತ್ರ (ಟಿಡಿಆರ್‍‌) ನೀಡುವ ನಿಯಮಾವಳಿಯಂತೆ ರಸ್ತೆ ಅಗಲೀಕರಣಕ್ಕೆ ಸ್ವಾಧೀನಪಡಿಸಿಕೊಂಡ ಅಗತ್ಯ ಜಮೀನಿಗೆ ಟಿಡಿಆರ್‍‌ ನೀಡಲಾಗುತ್ತದೆ. ಹಾಗೂ ಬಿಬಿಎಂಪಿ ವತಿಯಿಂದ ಈಗಿರುವ ಆವರಣ ಗೋಡೆಯನ್ನು ಸ್ಥಳಾಂತರಿಸಿ ನಿರ್ಮಿಸಿ ಕೊಡಲಾಗುವುದು,’ ಎಂಬ ಅಂಶವನ್ನು ಪತ್ರದಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ರಸ್ತೆ ಅಗಲೀಕರಣಕ್ಕೆ ಟಿಡಿಆರ್‍‌ ನಿಯಮಾವಳಿ ಅನ್ವಯ ಹಸ್ತಾಂತರಿಸುವ ಅಭಿವೃದ್ಧಿ ಹಕ್ಕುಗಳು ಸರ್ವೋಚ್ಛ ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಭರತ್‌ಲಾಲ್‌ ಮೀನಾ ಅವರು 2009ರ ಡಿಸೆಂಬರ್‍‌ 26ರಂದು ಅವರು ಬೆಂಗಳೂರು ಅರಮನೆ ಮೈದಾನದ ಪ್ರಿನ್ಸ್‌ಸ್‌ ಅಕಾಡೆಮಿಯ ಮೀನಾಕ್ಷಿ ದೇವಿ ಅವರಿಗೆ ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಹಾಗೆಯೇ ಇದೇ ವಿಷಯಕ್ಕೆ ಸಂಬಂಧಿಸಿದಂತೆ 2009ರ ನವೆಂಬರ್‍ 20ರಲ್ಲಿ ಭರತ್‌ ಲಾಲ್‌ ಮೀನಾ ಅವರು ‌ ಮತ್ತೊಂದು ಪತ್ರವನ್ನು ಡಿಪಿಎಆರ್‍‌ನ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಬರೆದಿದ್ದರು.

 

ಈ ಪತ್ರದಲ್ಲೇನಿದೆ?

 

ಬೆಂಗಳೂರು ಮಹಾನಗರದಲ್ಲಿ ಅತಿಯಾದ ಸಂಚಾರಿ ದಟ್ಟಣೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯು 91 ಪ್ರಮುಖ ರಸ್ತೆಗಳನ್ನು (154 ಕಿ ಮೀ) ಅಗಲೀಕರಣಗೊಳಿಸಲು ಗುರುತಿಸಿದೆ. ಈ ರಸ್ತೆಗಳನ್ನು ಎರಡು ಹಂತದಲ್ಲಿ 24/30/45 ಮೀಟರ್‍‌ಗೆ ಹಸ್ತಾಂತರಿಸಬಹುದಾದ ಅಭಿವೃದ್ಧಿ ಹಕ್ಕುಗಳ ಪ್ರಮಾಣ ಪತ್ರ ಯೋಜನೆಯಡಿಯಲ್ಲಿ ಅಗಲೀಕರಣಗೊಳಿಸಲು 2005ರ ಮಾರ್ಚ್‌ 2ರಂದು 45 ರಸ್ತೆಗಳನ್ನು ಮತ್ತು 2007ರ ಡಿಸೆಂಬರ್‍‌ 5ರಂದು 46 ರಸ್ತೆಗಳನ್ನು ಸರ್ಕಾರಿ ಅಧಿಸೂಚನೆಯಂತೆ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯು ಪ್ರಕಟಿಸಿದೆ.

 

 

ಜಯಮಹಲ್‌ ರಸ್ತೆಯನ್ನು ಮೇಖ್ರಿ ವೃತ್ತದಿಂದ ಕಂಟೋನ್‌ಮೆಂಟ್‌ ರೈಲ್ವೇ ಸ್ಟೇಷನ್‌ ವರೆಗೆ 30/45 ಮೀ ವರೆಗೆ ಅಗಲೀಕರಣಗೊಳಿಸಲು ಯೋಜಿಸಿದೆ. ಈ ಅಗಲೀಕರಣಕ್ಕೆ ಅರಮನೆ ಆಸ್ತಿಯಿಂದ 38,240 ಚ ಮೀಟರ್‍‌ (9 ಎಕರೆ 18 ಗುಂಟೆ) ಜಾಗದ ಅವಶ್ಯಕತೆ ಇರುತ್ತದೆ. ಹಾಗೂ ಬಳ್ಳಾರಿ ರಸ್ತೆಯನ್ನು ಬಿಡಿಎ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ (ಸರಪಳಿ 2.55 ಕಿ ಮೀನಿಂದ 4.05ವರೆಗೆ) 45. ಮೀಟರ್‍‌ಗೆ ಅಗಲೀಕರಣಗೊಳಿಸಲು ಯೋಜಿಸಿದ್ದು ಈ ಅಗಲೀಕರಣಕ್ಕೆ 26,416 ಚ ಮೀ ( 6 ಎಕರೆ 21 ಗುಂಟೆ) ಜಾಗದ ಅವಶ್ಯಕತೆ ಇದೆ ಎಂದು ಸರ್ಕಾರಕ್ಕೆ ಬರೆದಿದ್ದ ಪತ್ರದಲ್ಲಿ ವಿವರಿಸಿದ್ದರು.

 

‘ಕಾನೂನು ಕೋಶದ ಮುಖ್ಯಸ್ಥರು ಮತ್ತು ಡಿಪಿಎಆರ್‍‌ ಉಪ ಕಾರ್ಯದರ್ಶಿ, ಕನ್ನಡ ಸಂಸ್ಕೃತಿ ಪ್ರವಾಸೋದ್ಯಮ ಇಲಾಖೆ ನೀಡಿರುವ ಕಾನೂನು ಸಲಹೆಯಂತೆ ಬೆಂಗಳೂರು ಅರಮನೆ ಭಾಗಶಃ ಜಾಗವನ್ನು (ಒಟ್ಟು 15 ಎಕರೆ 39 ಗುಂಟೆ) ಸರ್ವೋಚ್ಛ ನ್ಯಾಯಾಲಯದಲ್ಇ ಅಪೀಲು ಸಲ್ಲಿಸಿ ಪಡೆಯಲು ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಂಡಿರುತ್ತದೆ ಎಂದು ಮೊದಲಿನ ಪತ್ರದಲ್ಲಿನ ಎಲ್ಲಾ ಅಂಶಗಳನ್ನು ಎರಡನೇ ಪತ್ರದಲ್ಲಿಯೂ ವಿಸ್ತರಿಸಿ ಬರೆದಿದ್ದರು.

 

 

ಇದರ ಜತೆಗೆ ಕಾನೂನು ಕೋಶದ ಸಲಹೆಯಂತೆ ಮೇಲಿನ ಜಾಗವನ್ನು ಪಡೆಯುವ ಬಗ್ಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ರಾಜ್ಯ ಸರ್ಕಾರವು ಘನ ಸರ್ವೋಚ್ಛ ನ್ಯಾಯಾಲಯದಲ್ಲಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಬೇಕು ಎಂದು ಕೋರಿರುವುದು ಗೊತ್ತಾಗಿದೆ.

 

ಆದರೆ ಈಗಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿನ 3,011.66 ಕೋಟಿ ರು ಮೌಲ್ಯದ ಟಿಡಿಆರ್‍‌ ವಿತರಿಸಬೇಕಿದೆ.

 

ಮೈಸೂರು ರಾಜ ಮನೆತನಕ್ಕೆ 3,011.66 ಕೋಟಿ ರು ಮೊತ್ತದ ಟಿಡಿಆರ್; ಬೊಕ್ಕಸಕ್ಕೆ ಹೊರೆಯಾಗಲಿದೆಯೇ?

 

ಈ ಸಂಬಂಧ ಬಿಬಿಎಂಪಿಯ ಮುಖ್ಯ ಆಯುಕ್ತರು ಮುಖ್ಯ ಕಾರ್ಯದರ್ಶಿಗೆ ಈಚೆಗಷ್ಠೇ ಪತ್ರ ಬರೆದಿದ್ದನ್ನು ಸ್ಮರಿಸಬಹುದು.

 

ಜಯಮಹಲ್ ಮತ್ತು ಬಳ್ಳಾರಿ ರಸ್ತೆ ಅಗಲೀಕರಣ ಉದ್ದೇಶಕ್ಕಾಗಿ ಅರಮನೆ ಮೈದಾನದ ಆಸ್ತಿಯ ಭಾಗಶಃ ಜಾಗವನ್ನು ವಶಕ್ಕೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ ಕೆ ಅತೀಕ್‌ ಅವರು ಅಸಮ್ಮತಿ ವ್ಯಕ್ತಪಡಿಸಿದ್ದರು.

 

1,400 ಕೋಟಿ ಟಿಡಿಆರ್; ರಾಜ್ಯದ ಹಿತಾಸಕ್ತಿಯಿಲ್ಲ, ಸಮರ್ಥನೀಯವಲ್ಲವೆಂಬ ಅಭಿಪ್ರಾಯ ಬದಿಗೊತ್ತಲಿದೆಯೇ?

 

ಅಲ್ಲದೇ  ಬಿಬಿಎಂಪಿಯು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ತಿರಸ್ಕೃತಗೊಂಡಿತ್ತು.

 

ಅರಮನೆ ಮೈದಾನಕ್ಕೆ ಟಿಡಿಆರ್; ತಿರಸ್ಕೃತವಾಗಿದ್ದ ಪ್ರಸ್ತಾವನೆಗೆ ಮರು ಜೀವ, ಕಾಣದ ‘ಕೈ’ಗಳ ಪ್ರಭಾವ?

 

ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿಯೇ ಬಿಬಿಎಂಪಿಯ ಹಳೆಯ ಪ್ರಸ್ತಾವನೆ ಮತ್ತು ಪತ್ರವನ್ನೂ ಹಿಂಪಡೆದುಕೊಂಡಿತ್ತು.

SUPPORT THE FILE

Latest News

Related Posts