ಬೆಂಗಳೂರು; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಹೆಚ್ಚುವರಿಯಾಗಿ 33,484 ಚದರಅಡಿ ವಿಸ್ತಿರ್ಣದ ಜಾಗವನ್ನು ಹೆಚ್ಚುವರಿಯಾಗಿ ಮಂಜೂರು ಮಾಡಿತ್ತು ಎಂಬ ಮತ್ತೊಂದು ಬಲವಾದ ಆರೋಪ ಕೇಳಿ ಬಂದಿದೆ.
ಇದೇ 14 ಬದಲಿ ನಿವೇಶನಗಳ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆಯೇ ಮತ್ತೊಬ್ಬ ಮಹಿಳೆಯೊಬ್ಬರು ಸಿದ್ದರಾಮಯ್ಯ ಅವರ ಪತ್ನಿ ವಿರುದ್ಧ ಸಿವಿಲ್ ದಾವೆ ಹೂಡಿರುವ ಬೆನ್ನಲ್ಲೇ ಹೆಚ್ಚುವರಿಯಾಗಿ 33,484 ಚದರ ಅಡಿ ವಿಸ್ತೀರ್ಣದ ಜಾಗವನ್ನು ಮಂಜೂರು ಮಾಡಲಾಗಿದೆ ಎಂಬ ಆರೋಪವು ಮುನ್ನೆಲೆಗೆ ಬಂದಿದೆ.
ಈಗಾಗಲೇ ಸಿದ್ದರಾಮಯ್ಯ ಅವರು ಸೇರಿದಂತೆ ಇನ್ನಿತರರ ವಿರುದ್ಧ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿರುವ ಸ್ನೇಹಮಯಿ ಕೃಷ್ಣ ಅವರೇ ಈ ಹೊಸ ಆರೋಪ ಮಾಡಿದ್ದಾರೆ. ಈ ಸಂಬಂಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಪತ್ರವನ್ನು ಬರೆದಿದ್ದಾರೆ. ಈ ಪತ್ರವನ್ನು ತಮ್ಮ ಫೇಸ್‌ಬುಕ್‌ನಲ್ಲಿಯೂ ಹಂಚಿಕೊಂಡಿದ್ದಾರೆ.
ಪ್ರೋತ್ಸಾಹದಾಯಕ ಯೋಜನೆ ನಿಯಮಾವಳಿಯ 1991ರ ಪ್ರಕಾರ 14 ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಮುಡಾವು ಹೇಳಿಕೊಂಡಿತ್ತು. ಆದರೆ ಈ ನಿಯಮಾವಳಿಯನ್ನು ಉಲ್ಲಂಘಿಸಿದೆ ಎಂದು ಮುಡಾ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಸ್ನೇಹಮಯಿ ಕೃಷ್ಣ ಅವರು ಆರೋಪಿಸಿದ್ದಾರೆ.
‘ಪಾರ್ವತಿ ಅವರಿಗೆ ಮುಡಾವು ನೋಂದಣಿ ಮಾಡಿಕೊಟ್ಟಿರುವ 14 ಕ್ರಯಪತ್ರಗಳನ್ನು ಗಮನಿಸಿದಾಗ ಪ್ರೋತ್ಸಾಹಾಯಕ ಯೋಜನೆಯ ನಿಯಮಾವಳಿಯ 1991ರ ನಿಯಮ ಅನ್ವಯವಾಗುತ್ತದೆ ಎಂದು ತಿಳಿಸಿರುವುದು ಕಂಡು ಬಂದಿರುತ್ತದೆ. ಈ ನಿಯಮಾವಳಿಯನ್ನು ಗಮನಿಸಿದಾಗ 3 ಎಕರೆಗಿಂತ ಹೆಚ್ಚಿನ 4 ಒಳಗಿನ ಜಮೀನುಗಳನ್ನು ವಶಪಡಿಸಿಕೊಂಡಲ್ಲಿ 60/40 ಅಳತೆಯ ಎರಡು ನಿವೇಶನಗಳನ್ನು ಅಂದರೆ 4,800 ಚ ಅಡಿ ನಿವೇಶನಗಳನ್ನು ಮೇಲ್ಮನವಿದಾರರ ಹೆಂಡತಿ ಪಾರ್ವತಿ ಅವರಿಗೆ ನೀಡಬೇಕಾಗುತ್ತದೆ. ಆದರೆ ದಾಖಲೆಗಳನ್ನು ಗಮನಿಸಿದಾಗ 38,284 ಚ.ಅಡಿ ನಿವೇಶನವನ್ನು ನೀಡಿರುವುದು, ಕಂಡು ಬರುತ್ತದೆ,’ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಅದೇ ರೀತಿ ‘ಸರ್ವೆ ನಂಬರ್ 464ರ 3.16 ಎಕರೆ ಪಾರ್ವತಿ ಅವರದ್ದೇ ಎಂದು ಪರಿಗಣಿಸಿದ್ದರೂ ಸಹ ನಿಯಮದ ಪ್ರಕಾರ 4,800 ಚ ಅಡಿ ನಿವೇಶನಗಳನ್ನು ನೀಡದೇ 38,284 ಚ ಅಡಿ ನಿವೇಶನಗಳನ್ನು ನೀಡಲು ಕಾರಣವೇನು,’ ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಕೆಸರೆ ಗ್ರಾಮದ ಸರ್ವೆ ನಂಬರ್ 464ರ 3.16 ಎಕರೆ ಜಮೀನಿಗೆ ಮಾಲೀಕರು ಎಂದು ಹೇಳುವ ದೇವರಾಜು ಅವರು ಆನಂತರ ಮಲ್ಲಿಕಾರ್ಜುನ ಅವರು ತದನಂತರ ಪಾರ್ವತಿ ಅವರು ತಮ್ಮ ಜಮೀನಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಬೇಡಿ, ನಿವೇಶನಗಳನ್ನು ರಚಿಸಬೇಡಿ ಮತ್ತು ಮಾರಾಟ ಮಾಡಬೇಡಿ ಎಂದು ಅಂದಿನಿಂದ ಇಂದಿನವರೆಗೆ ಮನವಿ ಪತ್ರ ನೀಡಿರುವುದಿಲ್ಲ. ಮತ್ತು ಪ್ರಾಧಿಕಾರದ ಅಭಿವೃದ್ಧಿ ಕೆಲಸಗಳನ್ನು ಮಾಡುವುದನ್ನು ತಡೆಯುವ ಪ್ರಯತ್ನವನ್ನು ನಡೆಸಿರುವುದಿಲ್ಲ ಎಂದು ಪತ್ರದಲ್ಲಿ ಸ್ನೇಹಮಯಿ ಕೃಷ್ಣ ಅವರು ಪತ್ರದಲ್ಲಿ ವಿವರಿಸಿದ್ದಾರೆ.
‘ಈ ಅಂಶವನ್ನು ಗಮನಿಸಿದಾಗ ದುರುದ್ದೇಶಪೂರ್ವಕವಾಗಿ ಅಂದರೆ ಪ್ರಾಧಿಕಾರದ ಮೇಲೆ ತಪ್ಪನ್ನು ಹೊರಿಸಿ ಅಕ್ರಮವಾಗಿ ಹೆಚ್ಚಿನ ಲಾಭ ಪಡೆಯುವ ಸಂಚನ್ನು ರೂಪಿಸಿರುತ್ತಾರೆ,’ ಎಂದು ಪತ್ರದಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.
1998ರ ಮೇ 18ರಂದು ಕೆಸರೆ ಗ್ರಾಮದ ಸರ್ವೆ ನಂಬರ್ 462ರ 0.37 ಗುಂಟೆ ಜಮೀನು ಮತ್ತು ಸರ್ವೆ ನಂಬರ್ 464ರ ಲ್ಲಿನ 3.16 ಎಕರೆ ಜಮೀನನ್ನು ಭೂ ಸ್ವಾಧೀನದಿಂದ ಕೈಬಿಟ್ಟು ಆದೇಶ ಮಾಡಲಾಗಿದೆ ಎಂದು ಹೇಳಲಾಗಿರುತ್ತದೆ. ಈ ರೀತಿ ತಮ್ಮ ಜಮೀನುಗಳನ್ನು ಭೂ ಸ್ವಾಧೀನದಿಂದ ಕೈಬಿಡುವಂತೆ ಸಾಕಷ್ಟು ಸಾಮಾನ್ಯ ಭೂ ಮಾಲೀಕರು ಮನವಿ ಪತ್ರ ಸಲ್ಲಿಸಿರುತ್ತಾರೆ. ಅವರುಗಳ ಮನವಿಯನ್ನು ಪರಿಗಣಿಸಿ ಅವರ ಜಮೀನುಗಳನ್ನು ಭೂ ಸ್ವಾಧೀನದಿಂದ ಕೈಬಿಡಲು ನಿರಾಕರಿಸಲಾಗಿದೆ. ಸದರಿ ಭೂ ಮಾಲೀಕರು ನ್ಯಾಯಾಲಯಗಳಲ್ಲಿ ಈ ಸಂಬಂಧ ದಾವೆಗಳನ್ನು ಹೂಡಿದಾಗ ಪ್ರಾಧಿಕಾರದ ಪರವಾಗಿ ವಕೀಲರನ್ನು ನೇಮಿಸಿ, ಅವರ ಅರ್ಜಿಗಳನ್ನು ವಜಾ ಮಾಡಿಸಲಾಗಿದೆ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಆಧರೆ ಸಿದ್ದರಾಮಯ್ಯನವರಂತಹ ಪ್ರಭಾವಿಗಳ ಪ್ರಭಾವಕ್ಕೆ ಒಳಗಾಗಿ ದೇವರಾಜು ಅವರಂತಹ ಭೂ ಮಾಲೀರು ಅರ್ಜಿಗಳನ್ನುಸಲ್ಲಿಸಿದಾಗ ಯಾವುದೇ ರೀತಿಯ ತಕರಾರು ಮಾಡದೇ ಯಾವುದೇ ಬಲವಾದ ಕಾರಣಗಳು ಇಲ್ಲದಿದ್ದರೂ ಸಹ ಭೂ ಸ್ವಾಧೀನ ಪ್ರಕ್ರಿಯೆಯಿಂದ ಜಮೀನನ್ನು ಕೈ ಬಿಡಲಾಗಿದೆ ಎಂಬ ಅಂಶವನ್ನು ಉಲ್ಲೇಖಿಸಿರುವುದು ತಿಳಿದು ಬಂದಿದೆ.
‘ಕಾನೂನಿನಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿ ಅವಾರ್ಡ್ ಅವಾರ್ಡ್ ನಿರ್ಣಯವಾದ ನಂತರ ಭೂಮಿಯನ್ನು ಸ್ವಾಧೀನದಿಂದ ಕೈಬಿಡಲು ಅವಕಾಶವಿಲ್ಲ. ಹೀಗಿದ್ದರೂ ಕಾನೂನುಬಾಹಿರವಾಗಿ ಈ ಜಮೀನನ್ನು ಕೈಬಿಡಲು ಸಾಧ್ಯವಾಯಿತು, ಯಾರ ಪ್ರಭಾವ ಕೆಲಸ ಮಾಡಿದೆ ಮತ್ತು 1998ರಲ್ಲಿ ಭೂ ಸ್ವಾಧೀನದಿಂದ ಕೈಬಿಟ್ಟಿರುವ ವಿಚಾರವನ್ನು ತಿಳಿಸಿ ಭೂ ಮಾಲೀಕರು ಎಂದು ಹೇಳುವವರು ಪ್ರಾಧಿಕಾರಕ್ಕೆ ಮನವಿ ಪತ್ರವನ್ನು ಏಕೆ ಕೊಟ್ಟಿಲ್ಲ,’ ಎಂದೂ ಪ್ರಶ್ನಿಸಿದ್ದಾರೆ.
ಈ ಆದೇಶದ ಮಾಹಿತಿ ಇದ್ದರೂ ಸಹ ಸದರಿ ಜಮೀನಿನಲ್ಲಿ ಬಡಾವಣೆ ರಚನೆ ಮಾಡಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿರುವ ಕೃಷ್ಣ ಅವರು ಸಾಮಾನ್ಯ ಭೂ ಮಾಲೀಕರ ಮನವಿಗೆ ಸ್ಪಂದಿಸದೇ ಪ್ರಭಾವಿ ವ್ಯಕ್ತಿಗಳ ಮನವಿಗೆ ಸ್ಪಂದಿಸಲು ಕಾರಣವೇನು, ಎಂಬ ಬಗ್ಗೆ ಈ ಎಲ್ಲಾ ಅಂಶಗಳ ಬಗೆಗಿನ ಮಾಹಿತಿಯನ್ನು ಮತ್ತು ದಾಖಲೆಯನ್ನು ನ್ಯಾಯಾಲಯಕ್ಕೆ ನೀಡಿ ಈ ಅಂಶಗಳ ಬಗ್ಗೆ ತನಿಖೆ ನಡೆಯಬೇಕಾದ ಅನಿವಾರ್ಯತೆ ಇರುವುದನ್ನು ಮನವರಿಕೆ ಮಾಡಿಕೊಡಬೇಕು ಎಂದು ಪ್ರಾಧಿಕಾರದ ಆಯುಕ್ತರನ್ನು ಕೋರಿರುವುದು ಗೊತ್ತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ 14 ಬದಲಿ ನಿವೇಶನಗಳನ್ನು ನೀಡುವ ಸಂಬಂಧ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿದ್ದ ಸಭೆಯಲ್ಲಿ ಅಂದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಅವರ ಪುತ್ರ ಹಾಗೂ ಶಾಸಕ ಯತೀಂದ್ರ ಅವರು ಮೂಕ ಪ್ರೇಕ್ಷಕರಾಗಿದ್ದರು ಎಂಬುದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿರುವುದು ಚರ್ಚೆಗೆ ಗ್ರಾಸವಾಗಿತ್ತು.
ಬದಲಿ ನಿವೇಶನ; ಅರ್ಜಿದಾರ, ಪುತ್ರ ಮೂಕಪ್ರೇಕ್ಷಕರಲ್ಲ, ಎ ಸಿ ಕೊಠಡಿಯಲ್ಲೇ ತಯಾರಾಗಿತ್ತೇ ತಪಾಸಣೆ ವರದಿ?
ಬದಲಿ ನಿವೇಶನ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೊಳಪಡಿಸಲು ರಾಜ್ಯಪಾಲರು ನೀಡಿದ್ದ ಅನುಮತಿಯನ್ನು ಎತ್ತಿ ಹಿಡಿದಿರುವ ರಾಜ್ಯ ಉಚ್ಛ ನ್ಯಾಯಾಲಯವು ನೀಡಿರುವ ತೀರ್ಪಿನಲ್ಲಿ ಈ ಅಂಶವನ್ನು ಉಲ್ಲೇಖಿಸಿತ್ತು. ಅದೇ ರೀತಿ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ನೀಡಿರುವ ಸ್ಥಳ ತಪಾಸಣೆ ವರದಿಯ ಕುರಿತೂ ಅವಲೋಕಿಸಿತ್ತು.
ಸಿಎಂ ಪತ್ನಿಗೆ ಬದಲಿ ನಿವೇಶನ; ತಹಶೀಲ್ದಾರ್ ವರದಿಯಲ್ಲಿ ಉಲ್ಲೇಖವಾಗದ ಉದ್ಯಾನ, ರಸ್ತೆ ವಿವರ
‘ಈ ಜಮೀನಿನಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿಲ್ಲ, ಮರಗಳು ಬೆಳೆದಿಲ್ಲ, ಕಟ್ಟಡಗಳು ತಲೆ ಎತ್ತಿಲ್ಲ ಮತ್ತು ಭೂ ಸ್ವಾಧೀನದಿಂದ ಕೈಬಿಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ವರದಿಯಲ್ಲಿ ನಿರೂಪಣೆ ಮಾಡಿದ್ದರು. ಆಗ ಕೃಷಿ ಭೂಮಿಯ ಅಸ್ತಿತ್ವವೇ ಸಂದೇಹವಿದ್ದುದರಿಂದ ಅವರು ಏನನ್ನು ಪರಿಶೀಲಿಸಿದರು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು,’ ಎಂದು ಉಲ್ಲೇಖಿಸಿದ್ದರು.
ಸಿಎಂ ಪತ್ನಿಗೆ ಬದಲಿ ನಿವೇಶನ ಪ್ರಕರಣ; ಮೂಲ ಜಮೀನಿನ ಸ್ಥಳದಲ್ಲಿದ್ದ ರಸ್ತೆಯನ್ನೇ ಮುಚ್ಚಿಟ್ಟರೇ ಜಿಲ್ಲಾಧಿಕಾರಿ?
ಅದೇ ರೀತಿ 60-40, 50;50ರ ಅನುಪಾತದ ಬಗ್ಗೆಯೂ ನ್ಯಾಯಾಲಯವು ಅವಲೋಕಿಸಿತ್ತು.
60;40 ರ ಬದಲಿಗೆ 50;50 ಅನುಪಾತದಲ್ಲಿ ಬದಲಿ ನಿವೇಶನ; ಸಿದ್ದರಾಮಯ್ಯರ ಮೊದಲ ಅವಧಿಯಲ್ಲೇ ಚಮತ್ಕಾರ!
ಈ ಎಲ್ಲಾ ಅಂಶಗಳ ಕುರಿತು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಅವಲೋಕಿಸಿರುವುದನ್ನು ಸ್ಮರಿಸಬಹುದು.