ಮುಡಾ ವ್ಯಾಪ್ತಿಯಲ್ಲಿಲ್ಲದ ವರುಣ, ಶ್ರೀರಂಗಪಟ್ಟಣದಲ್ಲಿ ಕಾಮಗಾರಿ; ಮುನ್ನೆಲೆಗೆ ಬಂದ ಜಿಲ್ಲಾ ಸಮಿತಿ ನಡವಳಿ

ಬೆಂಗಳೂರು; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೊಳಪಡದ ವರುಣ ಮತ್ತು ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳನ್ನು 06 ಪ್ಯಾಕೇಜ್‌ಗಳ ಮೂಲಕ ಟೆಂಡರ್‍‌ ಆಹ್ವಾನಿಸಿರುವುದು ಸೇರಿದಂತೆ ತಾಂತ್ರಿಕ ಬಿಡ್‌ ಅನುಮೋದನೆ ನೀಡಿರುವ ಎಲ್ಲಾ ದಾಖಲಾತಿಗಳನ್ನು ನಗರ ಮತ್ತು ಗ್ರಾಮಾಂತರ ಯೋಜನೆಯ ಆಯುಕ್ತರು ಹಾಗೂ  ಮೈಸೂರು ಜಿಲ್ಲಾಧಿಕಾರಿಗಳು ನಡವಳಿ ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ಹಾಗೂ ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರಗಳಲ್ಲಿ ಮುಡಾದಿಂದ ಕೈಗೆತ್ತಿಕೊಳ್ಳಲಾದ 387 ಕೋಟಿ ರು ವೆಚ್ಚದ ಕಾಮಗಾರಿಗಳ ವಿವರ ನೀಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಸೂಚಿಸಿದ್ದರು.

 

ಇದರ ಬೆನ್ನಲ್ಲೇ ಮೈಸೂರು ಜಿಲ್ಲಾಧಿಕಾರಿ ಮತ್ತು ನಗರ, ಗ್ರಾಮಾಂತರ ಯೋಜನೆ ಆಯುಕ್ತರು 2024ರ ಸೆ.23ರಂದು  ಎಲ್ಲಾ ವಿವರಗಳನ್ನೂ ಸಲ್ಲಿಸಿರುವುದು ಮುನ್ನೆಲೆಗೆ ಬಂದಿದೆ.

 

 

ವರುಣ ಮತ್ತು ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳನ್ನು ನಿರ್ವಹಿಸಲು 2023ರ ನವೆಂಬರ್‍‌ 28ರಂದೇ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಕಾಮಗಾರಿಗಳನ್ನು ಒಟ್ಟಾರೆಯಾಗಿ 06 ಪ್ಯಾಕೇಜ್‌ ಮೂಲಕ ಟೆಂಡರ್ ಆಹ್ವಾನಿಸಲು 2024ರ ಫೆ.14ರಂದು ಅನುಮೋದಿಸಿತ್ತು.

 

 

 

2024ರ ಮಾರ್ಚ್‌ 12ರಂದು ಇ-ಪ್ರೊಕ್ಯೂರ್‍‌ಮೆಂಟ್‌ ಮೂಲಕ (ಟೆಂಡರ್ ಪ್ರಕಟಣೆ ಸಂಖ್ಯೆ; ಮೈನಪ್ರಾ/ಅಅ/ಪಿಬಿ/ಟಎನ್/16/2023-24 ದಿನಾಂಕ 12.03.2024) ಮೂಲಕ ಕೆಟಿಪಿಪಿ ಕಾಯ್ದೆ ಅನುಸಾರ ಎರಡನೇ ಬಾರಿಗೆ ಟೆಂಡರ್‍‌ ಆಹ್ವಾನಿಸಿತ್ತು ಎಂಬುದು ಜಿಲ್ಲಾಧಿಕಾರಿಗಳು ಸಲ್ಲಿಸಿರುವ ವರದಿಯಿಂದ ತಿಳಿದು ಬಂದಿದೆ.

 

2024ರ ಆಗಸ್ಟ್‌ 26ರಂದು ಜಿಲ್ಲಾಮಟ್ಟದ ಟೆಂಡರ್‍‌ ಪರಿಶೀಲನಾ ಸಮಿತಿ ಸಭೆ ನಡೆದಿತ್ತು. ಶ್ರೀರಂಗಪಟ್ಟಣದ ಹೊಸನಾದೂರು, ಮೊಗರಹಳ್ಳಿ, ಬೆಳಗೊಳ, ಹುಲಿಕೆರೆಯಲ್ಲಿ ರಸ್ತೆಗಳ ಅಭಿವೃದ್ಧಿಗೆ ಟೆಂಡರ್‍‌ ಆಹ್ವಾನಿಸಿತ್ತು. ತಾಂತ್ರಿಕ ಬಿಡ್‌ನಲ್ಲಿ ಲಕ್ಷ್ಮೇಗೌಡ ಜಿ ಎಲ್‌ (ಎಲ್‌ ಜಿ ಕನ್ಸ್‌ಟ್ರಕ್ಷನ್ಸ್‌, ಸುರೇಶ್‌ ಬಾಬು ತಾಂತ್ರಿಕವಾಗಿ ಅರ್ಹರಾಗಿದ್ದರು. ವೆಂಕಟರಾಮಿ ರೆಡ್ಡಿ ಕನಲಾ (ಕೆವಿಆರ್ ಕನ್ಸ್‌ಟ್ರಕ್ಷನ್ಸ್‌ ಹೈಟ್ಸ್‌ ಪ್ರೈವೈಟ್‌ ಲಿಮಿಟೆಡ್) ಅವರನ್ನು ತಾಂತ್ರಿಕವಾಗಿ ಅನರ್ಹಗೊಳಿಸಲಾಗಿತ್ತು.

 

 

ಅದೇ ರೀತಿ ನಂಜನಗೂಡು ತಾಲೂಕು ತಾಂಡವಪುರ ಗ್ರಾಮದಲ್ಲಿ ಒಳಚರಂಡಿ ಕಾಮಗಾರಿಗಳ ಪುನರ್‍‌ ಸ್ಥಾಪನೆ ಮತ್ತು ಹೆಚ್ಚುವರಿಯಾಗಿ ಎಸ್‌ಟಿಪಿ ನಿರ್ಮಾಣ, ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪ್ಯಾಕೆಜ್‌ 1ರಲ್ಲಿ 865.00 ಲಕ್ಷ ರು. ವೆಚ್ಚಕ್ಕೆ ಅನುಮೋದನೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

 

ಹೆಜ್ಜೀಜಿ, ಬಸವಪುರ, ಬಾಂಚಳ್ಳಿ ಹುಂಡಿ, ಚಿಕ್ಕಯ್ಯನಛತ್ರದಲ್ಲಿ ಹೆಚ್ಚುವರಿ ಒಳಚರಂಡಿ ಮತ್ತು ಯುಜಿಡಿ ಕಾಮಗಾರಿಗೆ ಪ್ಯಾಕೇಜ್‌ ಟೆಂಡರ್‍‌ ಕರೆಯಲು 2024ರ ಫೆ.14ರಂದು ಸರ್ಕಾರವು ಅನುಮತಿ ನೀಡಿತ್ತು.
ಅಲ್ಲದೇ ತಾಂಡಪುರ, ಬಸವಪುರ (ವಿಷಯ ಸಂಖ್ಯೆ 1, 2, 3) ಮತ್ತಿತರ ಕಡೆಗಳಲ್ಲಿ ಕಾಮಗಾರಿ ನಿರ್ವಹಿಸಲು ಮೊದಲನೇ ಬಾರಿ ಕರೆದಿದ್ದ ಟೆಂಡರ್‍‌ನಲ್ಲಿ ಯಾವ ಗುತ್ತಿಗೆದಾರೂ ಭಾಗವಹಿಸಿರಲಿಲ್ಲ.

 

 

ವಾಜಮಂಗಲ, ತೊರೆಮಾವು, ಚಿಕ್ಕಹಳ್ಳಿಯಲ್ಲಿ ರಸ್ತೆ ಕಾಮಗಾರಿ ಮತ್ತು ಯುಜಿಡಿ ಕಾಮಗಾರಿ ನಿರ್ವಹಿಸಲು ಒಬ್ಬರು ಮಾತ್ರ ಭಾಗವಹಿಸಿದ್ದರು. ಆದ್ದರಿಂದ 2ನೇ ಬಾರಿ ಟೆಂಡರ್ ಕರೆದಿತ್ತು ಎಂದು ಜಿಲ್ಲಾಧಿಕಾರಿ ಅವರು ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

2ನೇ ಬಾರಿ ಕರೆದಿದ್ದ ಟೆಂಡರ್‍‌ನಲ್ಲಿಯೂ ಒಬ್ಬ ಬಿಡ್‌ದಾರರು ಮಾತ್ರ ಭಾಗವಹಿಸಿದ್ದರು. ಹೀಗಾಗಿ ಏಕ ಬಿಡ್‌ ಟೆಂಡರ್‍‌ನ ತಾಂತ್ರಿಕ ಬಿಡ್‌ ಅನುಮೋದನೆಗೆ ಮತ್ತು ಹೊಸನಾದೂರು, ಮೊಗರಹಳ್ಳಿ, ಬೆಳಗೊಳ, ಹುಲಿಕೆರೆಯಲ್ಲಿನ ಕಾಮಗಾರಿಗಳನ್ನು ನಿರ್ವಹಿಸುವ ಟೆಂಡರ್‍‌ನಲ್ಲಿ ಭಾಗವಹಿಸಿ ಅರ್ಹತೆ ಪಡೆದಿದ್ದ ಗುತ್ತಿಗೆದಾರರ ತಾಂತ್ರಿಕ ಬಿಡ್‌ನ್ನು ಅನುಮೋದಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.

 

 

ಮುಡಾ ವ್ಯಾಪ್ತಿಯಲ್ಲಿ ಇಲ್ಲದಿದ್ದೂ ಮುಖ್ಯಮಂತ್ರಿಯ ಸೂಚನೆ ಮೇರೆಗೆ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮುಡಾ ಆರ್ಥಿಕ ಸಂಕಷ್ಟದಲ್ಲಿದ್ರೂ ಭಾರೀ ಮೊತ್ತದ ಕಾಮಗಾರಿ ಕೈಗೊಂಡು ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿ ಮುಡಾ ನಿವೃತ್ತ ಅಧಿಕಾರಿ ಪಿ ಎಸ್‌ ನಟರಾಜ್‌ ಅವರು ರಾಜ್ಯಪಾಲರಿಗೆ ಆ.27ರಂದು ದೂರು ನೀಡಿದ್ದರು.

 

ಈ ದೂರು ಗಂಭೀರ ಸ್ವರೂಪದ್ದಾಗಿದ್ದು ಪ್ರಕರಣವನ್ನು ಸಮಗ್ರವಾಗಿ ಪರಿಶೀಲಿಸಬೇಕು. ಈ ಸಂಬಂಧ ಅಗತ್ಯ ದಾಖಲೆಗಳನ್ನು ಆದಷ್ಟು ಶೀಘ್ರದಲ್ಲಿ ವಿಸ್ತೃತ ವರದಿಯನ್ನು ಸಲ್ಲಿಸಬೇಕು ಎಂದು ರಾಜ್ಯಪಾಲರು ಸೆ.5ರಂದು ಮುಖ್ಯ ಕಾರ್ಯದರ್ಶಿಗೆ ಬರೆದಿದ್ದ ಪತ್ರದಲ್ಲಿ ನಿರ್ದೇಶನ ನೀಡಿದ್ದರು.

 

ದೂರಿನಲ್ಲೇನಿತ್ತು?

 

ಮುಖ್ಯಮಂತ್ರಿ ಸೂಚನೆ ಮೇರೆಗೆ ವರುಣ ಕ್ಷೇತ್ರದ 24 ಗ್ರಾಮಗಳಲ್ಲಿ ಹಾಗೂ ಶ್ರೀರಂಗಪಟ್ಟಣ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ 377 ಕೊಟಿ ಮೊತ್ತದ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಅಲ್ಲದೇ ವರುಣ ಕ್ಷೇತ್ರಕ್ಕೆ 40 ಕೊಟಿ ಹಾಗೂ ಶ್ರೀರಂಗಪಟ್ಟಣಕ್ಕೆ 15 ಕೋಟಿ ಬಳಕೆ ಸಂಬಂಧ 2023ರ ಸೆ.6ರಂದು ನಡೆದ ಮುಡಾ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಲಾಗಿತ್ತು.

 

ಈ ಸಂಬಂಧ ಸರ್ಕಾರದ ಮಾರ್ಗದರ್ಶನ ಕೋರಿ ಮುಡಾದಿಂದ ಪ್ರಸ್ತಾವ ಸಲ್ಲಿಸಲಾಗಿತ್ತು. ಈ ಕಾಮಗಾರಿಗಳನ್ನು ನಿರ್ವಹಿಸಲು ಸರ್ಕಾರವು ಎರಡೇ ತಿಂಗಳಲ್ಲಿ ಅನುಮೋನೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ನಟರಾಜು ಅವರು ದೂರಿನಲ್ಲಿ ವಿವರಿಸಿದ್ದರು.

 

ಮುಡಾ ವ್ಯಾಪ್ತಿಯಲ್ಲಿ ಬರದ ಪ್ರದೇಶಗಳ ಕಾಮಗಾರಿಗೆ ಅನುದಾನ ವಿನಿಯೋಗಿಸುವುದು ಕನಾfಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರ ಪರಿಚ್ಛೇಧ 15 ಮತ್ತು 25ಕ್ಕೆ ವಿರುದ್ಧವಾಗಿದೆ. ಈ ಕಾಮಗಾರಿಗಳಿಗೆ ಒಪ್ಪಿಗೆ ನೀಡುವಾಗ ಅಧಿಕಾರಿಗಳು ಮುಖ್ಯಮಂತ್ರಿಯವರ ಮೌಖಿಕ ಸೂಚನೆ ಮೇರೆಗೆ ಎಂದು ಉಲ್ಲೇಖಿಸಿದ್ದಾರೆ. ಇದು ಕಾನೂನುಬಾಹಿರವಾಗಿದ್ದು ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿದ್ದರು.

SUPPORT THE FILE

Latest News

Related Posts