ಬೆಂಗಳೂರು; ಗುತ್ತಿಗೆ ಕಾಮಗಾರಿಗಳಲ್ಲಿ ಅಲ್ಪಸಂಖ್ಯಾತರ ಪ್ರವರ್ಗ 2 ಬಿ ಗೆ ಶೇ. 4ರಷ್ಟು ಮೀಸಲಾತಿ ನೀಡುವ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧದ ಕಡತವು, 2024ರ ಅಕ್ಟೋಬರ್ 25 ರಿಂದಲೂ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಅವರ ಬಳಿಯೇ ಇದೆ.
ಈ ಪ್ರಸ್ತಾವವು ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿಗಳ ಸಚಿವಾಲಯದ ಹೆಸರಿನಲ್ಲಿ ಅಧಿಕಾರೇತರ ಖಾಸಗಿ ವ್ಯಕ್ತಿಯೊಬ್ಬರು ವಾಟ್ಸಾಪ್ ಗುಂಪಿನಲ್ಲಿ ಹಂಚಿಕೆ ಮಾಡಿದ್ದರು. ಇದರ ಬೆನ್ನಲ್ಲೇ ಈ ಸಂಬಂಧದ ಕಡತದ ಇ-ಆಫೀಸ್ ಚಲನವಹಿ ಪಟ್ಟಿಯೂ ‘ದಿ ಫೈಲ್’ಗೆ ಲಭ್ಯವಾಗಿದೆ.
ಇ-ಆಫೀಸ್ ಚಲನವಹಿ ಪ್ರಕಾರ ಪ್ರಸ್ತಾವ ಸಲ್ಲಿಕೆಯಾದ ದಿನದಿಂದಲೇ ಈ ಕಡತವು ಶರವೇಗದಲ್ಲಿ ಚಲಿಸಿದೆ. 2024ರ ಅಕ್ಟೋಬರ್ 19ರಂದು ಆರ್ಥಿಕ ಇಲಾಖೆಗೆ ಈ ಕಡತವು ಬಂದಿತ್ತು. ಇಲಾಖೆಯ ಅಧಿಕಾರಿ ಗೋಪಾಲ್ ಅವರ ಲಾಗಿನ್‌ನಲ್ಲಿ ಬೆಳಿಗ್ಗೆ 11.31ರಲ್ಲಿದ್ದ ಈ ಕಡತವು ಅದೇ ದಿನ ಮಧ್ಯಾಹ್ನ 12.07ಕ್ಕೆ ಇಲಾಖೆಯ ಅಧೀನ ಕಾರ್ಯದರ್ಶಿ ಕಾಂತಮ್ಮ ಅವರ ಲಾಗಿನ್‌ನಲ್ಲಿರುವುದು ತಿಳಿದು ಬಂದಿದೆ.
ಹಾಗೆಯೇ ಅದೇ ದಿನದಂದು ಈ ಕಡತವು ಮಧ್ಯಾಹ್ನ 1.36ಕ್ಕೆ ಇಲಾಖೆಯ ಉಪ ಕಾರ್ಯದರ್ಶಿ ಶ್ರೀಕೃಷ್ಣ ಬುಗ್ಯಾಟಾಗೋಳ್ ಅವರ ಲಾಗಿನ್‌ನಲ್ಲಿತ್ತು. ಅದೇ ದಿನ ಮಧ್ಯಾಹ್ನ 3.47ಕ್ಕೆ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಪಿ ಸಿ ಜಾಫರ್ ಅವರ ಲಾಗಿನ್ ನಲ್ಲಿ ಈ ಕಡತವಿತ್ತು ಇದು ಎಂಬುದು ಗೊತ್ತಾಗಿದೆ.
ಇದಾದ ನಂತರ ಈ ಕಡತವು 2024ರ ಅಕ್ಟೋಬರ್ 21ರ ಕೆಳ ಹಂತದ ಅಧಿಕಾರಿಗಳ ಲಾಗಿನ್‌ನಲ್ಲಿತ್ತು. ಅಕ್ಟೋಬರ್ 22ರಂದು ಈ ಕಡತವು ಸಂಸದೀಯ ಮತ್ತು ಶಾಸನ ರಚನೆ ಇಲಾಖೆಯ ಕಾರ್ಯದರ್ಶಿ ಜಿ ಶ್ರೀಧರ್ ಅವರ ಲಾಗಿನ್‌ನಲ್ಲಿತ್ತು. ಆ ನಂತರ ಅದೇ ದಿನ ಸಂಜೆ ಇಲಾಖೆಯ ಮತ್ತೊಬ್ಬ ಅಧಿಕಾರಿ ಶ್ರೀನಿವಾಸ್ ಅವರ ಲಾಗಿನ್‌ನಲ್ಲಿತ್ತು.
2024ರ ಅಕ್ಟೋಬರ್ 24ರ ಮಧ್ಯಾಹ್ನ 3.23ಕ್ಕೆ ಈ ಕಡತವು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಕರಡು ವಿಭಾಗದ ಅಧಿಕಾರಿಯ ಲಾಗಿನ್‌ನಲ್ಲಿತ್ತು. ಇದಾದ ನಂತರ ಈ ಕಡತವು ನೇರವಾಗಿ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಅವರಿಗೆ ರವಾನೆಯಾಗಿದೆ. ಅಂದಿನಿಂದಲೂ ಈ ಕಡತವು ಸಚಿವರ ಲಾಗಿನ್‌ನಲ್ಲೇ ಇರುವುದು ತಿಳಿದು ಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿರುವ ದಾಖಲೆ ಬಹಿರಂಗವಾಗಿದ್ದರೂ ಸಹ ಇದೊಂದು ಹೊಸ ಸುಳ್ಳು ಎಂದು ಮುಖ್ಯಮಂತ್ರಿ ಸಚಿವಾಲಯದ ಹೆಸರಿನಲ್ಲಿ ಸಿಎಂ ಮೀಡಿಯಾ ಗ್ರೂಪ್ 1 ನಲ್ಲಿ ನೀಡಿದ್ದ ಸ್ಪಷ್ಟನೆಯು ಚರ್ಚೆಗೆ ಗ್ರಾಸವಾಗಿತ್ತು.
ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಪ್ರಸ್ತಾವ; ಸತ್ಯದ ತಲೆಯ ಮೇಲೆ ಹೊಡೆದ ಹಾಗೆ ಸುಳ್ಳು ಹೇಳಿದರೇ ಸಿಎಂ?
ಗುತ್ತಿಗೆ ಕಾಮಗಾರಿಗಳಲ್ಲಿ 2 ಕೋಟಿ ವರೆಗೆ ಎಸ್‌ಸಿ ಮತ್ತು ಎಸ್ ಟಿ ಜನಾಂಗಕ್ಕೆ ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ಅಲ್ಪಸಂಖ್ಯಾತರ ಪ್ರವರ್ಗ ಬಿ ಗೆ ಶೇ.4ರಷ್ಟು ಮೀಸಲಾತಿ ನೀಡಲು ಅನುಮೋದನೆ ನೀಡಿದ್ದರು. ಈ ಕುರಿತು ‘ದಿ ಫೈಲ್’ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ.4ರಷ್ಟು ಮೀಸಲಾತಿ; ಮುಖ್ಯಮಂತ್ರಿ ಅನುಮೋದನೆ, ಕಾಯ್ದೆ ತಿದ್ದುಪಡಿಗೆ ಚಾಲನೆ
‘ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತರ ಸಮುದಾಯದ ಪ್ರವರ್ಗ 2 ಬಿ ಗೆ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಕಲ್ಪಿಸಿಲ್ಲ. ಈ ಸೌಲಭ್ಯವನ್ನು ಅಲ್ಪಸಂಖ್ಯಾತರ ಪ್ರವರ್ಗ ಬಿ ಗೆ ಶೇ.4ರಷ್ಟು ಮೀಸಲಾತಿ ಸೌಲಭ್ಯವನ್ನು ವಿಸ್ತರಿಸಿ ಸೂಕ್ತ ಆದೇಶ ನೀಡಬೇಕು,’ ಎಂದು ಮನವಿಯಲ್ಲಿ ಕೋರಿದ್ದರು.
ಈ ಪತ್ರವನ್ನು ಪರಿಶೀಲಿಸಿ ಮಂಡಿಸಿ ಎಂದು ಅದೇ ದಿನದಂದು ಸಿದ್ದರಾಮಯ್ಯ ಅವರು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು. ಈ ಪತ್ರದ ಕುರಿತು ಆರ್ಥಿಕ ಇಲಾಖೆಯು ಪರಿಶೀಲಿಸಿತ್ತು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೇ.4ರಷ್ಟು ಮೀಸಲಾತಿ ನೀಡಲು ಅನುಮೋದನೆ ನೀಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ
ಈ ಸಂಬಂಧ ಕೆಟಿಪಿಪಿ ಕಾಯ್ದೆಯ 1999ರ 6ನೇಪ್ರಕರಣಕ್ಕೆ ತಿದ್ದುಪಡಿ ಮಾಡಲಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
‘ಟೆಂಡರ್ ಆಹ್ವಾನಿಸುವ ಪ್ರಾಧಿಕಾರವು ಅಧಿಸೂಚಿತ ಇಲಾಖೆಗಳಿಂದ ನಿಯಮಿಸಿದ ಪ್ರಕ್ರಿಯೆಗಳನ್ನು ಅನುಸರಿಸುವ ಮೂಲಕ ಕೈಗೊಳ್ಳಬೇಕಾದ ಅಗತ್ಯ ನೋಟೀಸ್, ಪತ್ರ ವ್ಯವಹಾರಗಳು ಮತ್ತು ಪ್ರಕಟಣೆಗಳನ್ನು ಹೊರಡಿಸುವಾಗ ನಿರ್ಮಾಣ ಕಾಮಗಾರಿಗಳ ಮೌಲ್ಯ ಒಂದು ಕೋಟಿ ರು.ಗಳಿಗೆ ಮೀರದ ಅಂಥ ಕಾಮಗಾರಿಗಳ ಸಂಖ್ಯೆಯ ಶೇ.4ರಷ್ಟನ್ನು ಮೀರದಂತೆ ಅಲ್ಪಸಂಖ್ಯಾತರ ಪ್ರವರ್ಗ 2 ಬಿ ರಲ್ಲಿ ನಿರ್ದಿಷ್ಟಪಡಿಸಿದ ಅಲ್ಪಸಂಖ್ಯಾತರ ಜಾತಿಗಳಿಗೆ ಸೇರಿದ ಟೆಂಡರ್‍ದಾರರುಗಳಿಗೆ ನೀಡಬೇಕು. ಅಲ್ಲದೇ ಎರಡು ಬಾರಿಗಳಲ್ಲಿ ಆಹ್ವಾನಿಸಿರುವುದಕ್ಕೆ ಪ್ರತಿಕ್ರಿಯೆಯಾಗಿ ಅಲ್ಪಸಂಖ್ಯಾತರ ಪ್ರವರ್ಗ 2 ಬಿ ಗೆ ಸೇರಿದ ವ್ಯಕ್ತಿಗಳಿಂದ ಟೆಂಡರ್ ಸ್ವೀಕರಿಸದಿದ್ದಲ್ಲಿ ಅಂಥ ಕಾಮಗಾರಿಗಳನ್ನು ಇತರರಿಗೆ ಟೆಂಡರ್ ನೀಡಬಹುದು,’ ಎಂದು 6ನೇ ಪ್ರಕರಣದಲ್ಲಿ ತಿದ್ದುಪಡಿ ತರಲಿರುವುದು ಗೊತ್ತಾಗಿದೆ.
ಎಸ್‌ಸಿ ಮತ್ತು ಎಸ್ ಟಿ ಜನಾಂಗಕ್ಕೆ ಗುತ್ತಿಗೆ ಕಾಮಗಾರಿಗಳಲ್ಲಿ 50 ಲಕ್ಷದವರೆಗೆ ಗುತ್ತಿಗೆ ಮೀಸಲಾತಿಯನ್ನು ಕಾಂಗ್ರೆಸ್ ಸರ್ಕಾರವು 2016ರಲ್ಲೇ ಕಲ್ಪಿಸಿತ್ತು. ಇದಾದ ನಂತರ ಇದನ್ನು 1 ಕೋಟಿಗೆ ಹೆಚ್ಚಳ ಮಾಡಲಾಗಿತ್ತು.
50 ಲಕ್ಷದಿಂದವರೆಗಿನ ಟೆಂಡರ್ ಮೀಸಲಾತಿಯನ್ನು 1 ಕೋಟಿವರೆಗೆ ವಿಸ್ತರಿಸುವ ಪ್ರಸ್ತಾವನೆಯು ಬಿಜೆಪಿ ಸರಕಾರದ ಮುಂದಿರಲಿಲ್ಲ. ತಾಂತ್ರಿಕವಾಗಿ ಅರ್ಹಗೊಂಡು ಅತಿಕಡಿಮೆ ದರಗಳನ್ನು ನಮೂದಿಸಿದ ಗುತ್ತಿಗೆದಾರರಿಂದ ದರಪಟ್ಟಿ ದರಗಳಿಗಿಂತ ಕಡಿಮೆಯಿರುವ ಮೊತ್ತಕ್ಕೆ ಹೆಚ್ಚುವರಿ ಸೆಕ್ಯೂರಿಟಿ ಡೆಪಾಸಿಟ್ ಪಡೆದುಕೊಂಡು ಗುತ್ತಿಗೆ ಕರಾರನ್ನು ಮಾಡಿಕೊಳ್ಳಲಾಗುತ್ತದೆ.
ಈ ಗುತ್ತಿಗೆದಾರರು ವಿಶಿಷ್ಟ ವಿವರಣೆಯ ಹಾಗೂ ಗುತ್ತಿಗೆ ಕರಾರಿನ ನಿಯಮಾವಳಿಯಂತೆ ಗುಣಮಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸಿದ ನಂತರವಷ್ಟೇ ಹೆಚ್ಚುವರಿ ಸೆಕ್ಯೂರಿಟಿ ಡೆಪಾಸಿಟ್ ಮೊತ್ತವನ್ನು ಗುತ್ತಿಗೆದಾರರಿಗೆ ಹಿಂತಿರುಗಿಸಲಾಗುತ್ತಿದೆ.