ನೇಹಾ ಹಿರೇಮಠ್‌ ಹತ್ಯೆ ಪ್ರಕರಣ; ತ್ವರಿತ ನ್ಯಾಯಾಲಯ ಸ್ಥಾಪನೆ ಪ್ರಸ್ತಾವ ತಿರಸ್ಕೃತ, ರಿಜಿಸ್ಟ್ರಾರ್ ಜನರಲ್ ಪತ್ರ

ಬೆಂಗಳೂರು; ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ತ್ವರಿತ ನ್ಯಾಯಾಲಯ ಸ್ಥಾಪಿಸುವ ಪ್ರಸ್ತಾವನೆಯನ್ನು ಹೈಕೋರ್ಟ್ ತಿರಸ್ಕರಿಸಿದೆ.

 

ಈ ಸಂಬಂಧ ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್‍‌ ಜನರಲ್  ಕೆ ಎಸ್‌ ಭರತ್‌ ಕುಮಾರ್‍‌ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 2024ರ ಅಕ್ಟೋಬರ್‍‌ 30ರಂದು ಬರೆದಿರುವ ಪತ್ರವು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ನೇಹಾ ಹಿರೇಮಠ್‌ ಹತ್ಯೆ ಪ್ರಕರಣವನ್ನು ಅಗತ್ಯವಿದ್ದರೆ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಮೂರು ತಿಂಗಳ ಹಿಂದೆಯಷ್ಟೇ ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ನೇಹಾ ಹಿರೇಮಠ್‌ ಅವರ ತಂದೆ ನಿರಂಜನ ಅವರು ಬೇಸರ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್  ಅವರು ಕಾನೂನು ಇಲಾಖೆಗೆ ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.

 

 

 

 

ಕುಮಾರಿ ನೇಹಾ ಹಿರೇಮಠ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ತ್ವರಿತ ನ್ಯಾಯಾಲಯ ಸ್ಥಾಪನೆ ಪ್ರಸ್ತಾವನೆಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ಅಲ್ಲದೇ ಈ ಪ್ರಕರಣವನ್ನು ಜಿಲ್ಲಾ ನ್ಯಾಯಾಲಯವು ಆದ್ಯತೆ ಮೇಲೆ ವಿಚಾರಣೆ ನಡೆಸಿ ಮತ್ತು ಪ್ರಕರಣವನ್ನು ವಿಲೇ ಮಾಡಬೇಕು ಎಂದು 2024ರ ಆಗಸ್ಟ್‌ 3ರಂದೇ ಪತ್ರದಲ್ಲಿ ಸೂಚಿಸಲಾಗಿದೆ ಎಂದು ರಿಜಿಸ್ಟ್ರಾರ್‍‌ ಜನರಲ್ ಅವರು ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಈ ಪ್ರಕರಣವನ್ನು ತ್ವರಿತ ನ್ಯಾಯಾಲಯದಲ್ಲಿಯೇ ವಿಚಾರಣೆ ನಡೆಸಬೇಕು ಎಂದು ಕಾನೂನು ಸಚಿವ ಹೆಚ್‌ ಕೆ ಪಾಟೀಲ್‌ ಮತ್ತು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ಚೌಧುರಿ ಅವರು ಪತ್ರ ಬರೆದಿದ್ದರು.

 

ತ್ವರಿತ ನ್ಯಾಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಹಲವು ಸಚಿವರೂ ಸಹ ಹೇಳಿಕೆ ನೀಡಿದ್ದರು. ಆದರೆ ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರು ಸಹ ಭರವಸೆ ನೀಡಿದ್ದರು. ಅಗತ್ಯ ಬಿದ್ದರಷ್ಟೇ ತ್ವರಿತ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದು ಹೇಳಿದ್ದರು.

 

ಹುಬ್ಬಳ್ಳಿಯ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್‌ ಹತ್ಯೆ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಂಡಿತ್ತು.

 

ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಕೊಲೆ ಸಂಬಂಧ ರಾಜ್ಯಾದ್ಯಂತ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ನೇಹಾ ಹಿರೇಮಠ್ ಹತ್ಯೆ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆಗೆ ‌ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮತಿ ನೀಡಿದ್ದರು.    ಈ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಕಾನೂನು ಸಚಿವ ಎಚ್.ಕೆ. ಪಾಟೀಲ್ ಆದೇಶ ನೀಡಿದ್ದರು.

 

ಈ ಸಂಬಂಧ ಸರ್ಕಾರವು ಬರೆದಿದ್ದ ಪತ್ರಕ್ಕೆ ಹೈಕೋರ್ಟ್‌ ರಿಜಿಸ್ಟ್ರಾರ್‍‌ ಜನರಲ್‌ ಕೆ ಎಸ್‌ ಭರತ್‌ ಕುಮಾರ್‍‌ ಅವರು 2024ರ ಮೇ 31ರಂದೇ ಪತ್ರ ಬರೆದಿದ್ದರು. ಸರ್ಕಾರವು ಬರೆದಿದ್ದ ಪತ್ರವನ್ನು ಹೈಕೋರ್ಟ್‌ನ ಸಮಿತಿ ಮುಂದೆ ಇಡಲಾಗಿದೆ ಎಂದು ಸರ್ಕಾರಕ್ಕೆ ಬರೆದಿದ್ದ ಪತ್ರದಲ್ಲಿ ತಿಳಿಸಿದ್ದರು.

 

 

 

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಹೊರಗೆ 23 ವರ್ಷದ ನೇಹಾ ಹಿರೇಮಠ್ ಅವರನ್ನು ಆಕೆಯ ಮಾಜಿ ಸಹಪಾಠಿ ಫಯಾಜ್ ಖೋಂಡುನಾಯ್ಕ್ ಚಾಕುವಿನಿಂದ ಇರಿದು ಕೊಂದಿದ್ದರು. ಆಕೆ ಪ್ರಥಮ ವರ್ಷದ ಎಂಸಿಎ ವಿದ್ಯಾರ್ಥಿನಿಯಾಗಿದ್ದಳು.

SUPPORT THE FILE

Latest News

Related Posts