ಪಹಣಿ ಕಾಲಂ 9ರಲ್ಲಿ ವಕ್ಫ್‌ ಆಸ್ತಿ ನಮೂದು; ಸಿದ್ದರಾಮಯ್ಯರ ಮೊದಲ ಅವಧಿಯಲ್ಲೇ ಸೂಚನೆ, ಮುನ್ನೆಲೆಗೆ ಬಂದ ಸುತ್ತೋಲೆ

ಬೆಂಗಳೂರು:  ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ವಕ್ಫ್‌ ಆಸ್ತಿಗಳಿಗೆ ಖಾತೆ ಮಾಡಲು ಸುತ್ತೋಲೆ ಹೊರಡಿಸಲಾಗಿತ್ತು.

 

ಆಸ್ತಿಗಳ ಪಹಣಿಯಲ್ಲಿ ವಕ್ಫ್‌ ಪದ ನಮೂದು ಮಾಡಿರುವ ಪ್ರಕರಣಗಳು ರಾಜಕೀಯ ಕಿಚ್ಚು ಹೊತ್ತಿಸಿರುವ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಹೊರಡಿಸಿದ್ದ ಸುತ್ತೋಲೆಯು ಮುನ್ನೆಲೆಗೆ ಬಂದಿದೆ.

 

ವಿಜಯಪುರ ಜಿಲ್ಲೆಯ ಬಸವ ಕಲ್ಯಾಣ ಮತ ಕ್ಷೇತ್ರದಲ್ಲಿರುವ 3,436.35 ಗುಂಟೆ ವಿಸ್ತೀರ್ಣದ ವಕ್ಫ್‌ ಜಮೀನಿನ ಖಾತೆ ಮಾಡುವುದಕ್ಕೆ ಸಂಬಂಧಿಸಿದಂತೆ ವಕ್ಫ್‌ ಖಾತೆ ಸಚಿವ ಜಮೀರ್‍‌ ಅಹ್ಮದ್‌ ಖಾನ್‌ ಅವರು ವಿಧಾನಸಭೆಗೆ 2024ರ ಜುಲೈನಲ್ಲೇ  ಲಿಖಿತ ಉತ್ತರ ನೀಡಿದ್ದರು. ಇದೇ ಉತ್ತರದಲ್ಲಿ 2016ರಲ್ಲಿ ಹೊರಡಿಸಿದ್ದ ಸುತ್ತೋಲೆ ಕುರಿತಾಗಿ ಮಾಹಿತಿ ನೀಡಿರುವುದು ಗೊತ್ತಾಗಿದೆ.

 

ಜಮೀರ್‍‌ ಉತ್ತರದಲ್ಲೇನಿದೆ?

 

ಬಸವ ಕಲ್ಯಾಣ ಮತ ಕ್ಷೇತ್ರದಲ್ಲಿ ವಕ್ಫ್‌ ಜಮೀನು 3,436.35 ಗುಂಟೆ ಜಮೀನು ಇದೆ. (ಸರ್ಕಾರದ ಸುತ್ತೋಲೆ ಸಂಖ್ಯೆ ಆರ್‍‌ಡಿ 48 ಎಲ್‌ಜಿಪಿ2016 ದಿನಾಂಕ 28.10.2016ರಂತೆ ) ವಕ್ಫ್‌ ಅಸ್ತಿಗಳಿಗೆ ಖಾತೆ ಇಂದೀಕರಣ ಮಾಡಲು ಸೂಚಿಸಲಾಗಿರುತ್ತದೆ. ರೈತರ ಜಮೀನಿನ ಪಹಣಿಯಲ್ಲಿ ವಕ್ಫ್‌ ಮಂಡಳಿ ಎಂದು ನಮೂದಿಸಿದ್ದ ಪ್ರಕರಣಗಳು ಇರುವುದಿಲ್ಲ. ವಕ್ಫ್‌ ಆಸ್ತಿಗಳಿಗೆ ಮಾತ್ರ ಖಾತಾ ಇಂದೀಕರಣ ಮಾಡಲಾಗುತ್ತಿದೆ ಎಂದು ಉತ್ತರಿಸಿದ್ದರು.

 

 

 

 

ಬಸವ ಕಲ್ಯಾಣ ಮತ ಕ್ಷೇತ್ರದಲ್ಲಿ ವಕ್ಫ್‌ ಜಮೀನು ಎಷ್ಟು ಎಕರೆ ಇದೆ, ಕಳೆದ ಮೂರು ವರ್ಷಗಳಿಂದ ಇಲ್ಲಿಯವರೆಗೆ ರೈತರ ಜಮೀನು ಪಹಣಿ ಕಾಲಂ ನಂ 9 ಮತ್ತು 11ರಲ್ಲಿ ವಕ್ಫ್‌ ಮಂಡಳಿ ಎಂದು ನಮೂದಿಸಿದ ಪ್ರಕರಣಗಳು ಎಷ್ಟು ಎಂದು ಬಸವ ಕಲ್ಯಾಣ ಶಾಸಕ ಶರಣು ಸಲಗಾರ್‍‌ ಅವರು 2024ರ ಜುಲೈ 15ರಂದು ಪ್ರಶ್ನೆ ಕೇಳಿದ್ದರು.

 

ಅಲ್ಲದೇ 2016ರ ಅಕ್ಟೋಬರ್‍‌ 4ರಂದು ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್‌ ಖಾತೆ ಸಚಿವರಾಗಿದ್ದ ತನ್ವೀರ್‍‌ ಸೇಠ್‌ ಅಧ್ಯಕ್ಷತೆಯಲ್ಲಿ  ಸಭೆ ಕೂಡ ನಡೆದಿತ್ತು.

 

 

 

ಸುತ್ತೋಲೆಯಲ್ಲೇನಿದೆ?

 

ವಕ್ಫ್‌ ಆಸ್ತಿಗಳಿಗೆ ಸಂಬಂಧಿಸಿದಂತೆ ಖಾತೆ ಬದಲಾವಣೆ ಆಗದೇ ಇರುವ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಬಾಕಿ ಇರುವ ಕುರಿತು ಸಭೆಯಲ್ಲಿ ಚರ್ಚೆಯಾಗಿತ್ತು. ಇವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಂದಾಯ ದಾಖಲೆಗಳಲ್ಲಿ ಖಾತೆ ಬದಲಾವಣೆ ಕುರಿತಂತೆ ತಕ್ಷಣ ಕ್ರಮ ವಹಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಗಿತ್ತು ಎಂಬುದು ಸುತ್ತೋಲೆಯಿಂದ ತಿಳಿದು ಬಂದಿದೆ.

 

ಹೀಗಾಗಿ ‘ ರಾಜ್ಯದ ಎಲ್ಲಾ ವಕ್ಫ್‌ ಅಧಿಕಾರಿಗಳು ವಕ್ಫ್‌ ಆಸ್ತಿ ಕುರಿತಂತೆ ಖಾತೆ ಆಗಬೇಕಾದ ಆಸ್ತಿಗಳ ಪಟ್ಟಿಯನ್ನು ತಕ್ಷಣವೇ ಖಾತೆ ಮಾಡುವ ಸಕ್ಷಮ ಕಂದಾಯ ಪ್ರಾಧಿಕಾರಗಳಿಗೆ ವಕ್ಫ್‌ ಕಾಯ್ದೆ 1995ರ ಕಲಂ 5ರ ಪ್ರಕಾರ ರಾಜ್ಯಪತ್ರದಲ್ಲಿ ಪ್ರಕಟಗೊಂಡಿರುವ ಅಧಿಸೂಚನೆಯ ಪ್ರತಿಗಳು ಹಾಗೂ ವಕ್ಫ್‌ ಎಂದು ನೋಂದಾಯಿಸಲಾಗಿರುವ ದೃಢೀಕರಣ  ಪ್ರತಿಗಳನ್ನು ಲಗತ್ತಿಸಿ ವಕ್ಫ್‌ ಸಂಸ್ಥೆಯ ಮುಖ್ಯಸ್ಥರು ಅಥವಾ ಜಿಲ್ಲಾ ವಕ್ಫ್‌ ಅಧಿಕಾರಿ, ವಕ್ಫ್‌ ನಿರೀಕ್ಷಕರು ವಕ್ಫ್‌ ನಿಯಮಗಳ ಅನುಸಾರ ಖಾತೆ ಬದಲಾವಣೆಗಾಗಿ ಕಂದಾಯ ಸಕ್ಷಮ ಪ್ರಾಧಿಕಾರಗಳಿಗೆ ಅರ್ಜಿ ಸಲ್ಲಿಸಬೇಕು,’ ಎಂದು ನಿರ್ದೇಶಿಸಿತ್ತು.

 

 

 

ವಕ್ಫ್‌ ಸಂಸ್ಥೆಯ ಹೆಸರಿನ ಮುಂದೆ ವಕ್ಫ್‌ ಆಸ್ತಿ ಎಂಬುದಾಗಿ ಪಹಣಿ ಕಲಂ 9ರಲ್ಲಿ ನಮೂದಿಸಲು ತ್ವರಿತಗತಿಯಲ್ಲಿ ಕ್ರಮ ವಹಿಸಬೇಕು ಎಂದು ಸೂಚಿಸಲಾಗಿತ್ತು. ಹಾಗೆಯೇ ವಕ್ಫ್‌ ಆಸ್ತಿಗಳಿಗೆ ಸಂಬಂಧಿಸಿಂತೆ ಪೋಡಿ, ದುರಸ್ತಿ ಹಾಗೂ ಹದ್ದುಬಸ್ತು ಕಾರ್ಯವನ್ನು ಸಹ ಆದ್ಯತೆ  ಮೇಲೆ ಕೈಗೊಂಡು ಪೂರ್ಣಗೊಳಿಸಬೇಕು ಎಂದು ಆದೇಶಿಸಲಾಗಿತ್ತು. ಈ ದಿಸೆಯಲ್ಲಿ ಲೋಪಗಳು ಕಂಡು ಬಂದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮವನ್ನು ಸಂಬಂಧಪಟ್ಟ ಅಧಿಕಾರಿ, ನೌಕರರ ವಿರುದ್ಧ ಜರುಗಿಸಲಾಗುವುದು ಎಂದು ಎಚ್ಚರಿಸಿರುವುದು ಸುತ್ತೋಲೆಯಿಂದ ಗೊತ್ತಾಗಿದೆ.

 

 

 

ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ 21,767 ವಕ್ಫ್‌ ಆಸ್ತಿಗಳ ಖಾತೆ ಬದಲಾವಣೆ ಮಾಡಲು 7 ತಿಂಗಳ ಹಿಂದೆಯೇ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಲಾಗಿತ್ತು. ಈಗಿನ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾಗಿದ್ದ ಸಂದರ್ಭದಲ್ಲೇ ವಕ್ಪ್‌ ಆಸ್ತಿ ಖಾತೆ ಬದಲಾವಣೆ ಮಾಡಲು  ಪತ್ರವನ್ನು ಬರೆದಿದ್ದರು.

 

21,767 ವಕ್ಫ್‌ ಆಸ್ತಿಗಳ ಖಾತೆ ಬದಲಾವಣೆ; 7 ತಿಂಗಳ ಹಿಂದೆಯೇ ಕಂದಾಯ ಇಲಾಖೆಗೆ ಸೂಚನೆ, ಪತ್ರ ಬಹಿರಂಗ

 

ರಾಜ್ಯಮಟ್ಟದ ವಕ್ಫ್‌ ಆಸ್ತಿಗಳ ಕಾರ್ಯಪಡೆಯು ಸಾಧಿಸಿರುವ ಕುರಿತು ಪ್ರಗತಿ ಪರಿಶೀಲನೆ ಕುರಿತು 2024ರ ಏಪ್ರಿಲ್‌ 15ರಂದೇ ಸಭೆ ನಡೆದಿತ್ತು. ಈ  ಸಭೆಯಲ್ಲಿ ಕಂದಾಯ ಇಲಾಖೆಯೊಂದರಲ್ಲೇ 21,767 ವಕ್ಫ್‌ ಆಸ್ತಿಗಳ ಖಾತೆ ಬದಲಾವಣೆಯಾಗಿಲ್ಲ ಎಂಬ ಸಂಗತಿಯ ಕುರಿತು ಚರ್ಚೆಯಾಗಿತ್ತು.

 

‘ಕಂದಾಯ ಇಲಾಖೆಯಲ್ಲಿ ಒಟ್ಟು 21,767 ವಕ್ಫ್‌ ಆಸ್ತಿಗಳ ಖಾತೆ ಬದಲಾವಣೆಯಾಗಬೇಕಿದ್ದು ಈ ವಕ್ಫ್‌ ಆಸ್ತಿಗಳ ಮಾಹಿತಿಯನ್ನು ಭೂಮಿ ತಂತ್ರಾಂಶದಡಿಯಲ್ಲಿ ನೋಂದಾಯಿಸಬೇಕಿದೆ,’ ಎಂದು ಪತ್ರದಲ್ಲಿ ತಿಳಿಸಿದ್ದರು.

 

ಅಲ್ಲದೇ ನೋಂದಾಯಿಸಲ್ಪಡದ ಆಸ್ತಿಗಳ ವಿವರಗಳನ್ನು ಆಡಳಿತಾತ್ಮಕವಾಗಿ ಅಧಿನಿಯಮದಡಿ ತರಬೇಕು. ಕಂದಾಯ ಇಲಾಖೆಗೆ ಸಲ್ಲಿಸಿರುವ 328 ಪ್ರಸ್ತಾವನೆಗಳ ಬಗ್ಗೆ ಪರಿಶೀಲಿಸಿ, ಲಭ್ಯವಿರುವ ಸರ್ಕಾರಿ ಜಮೀನಿನಲ್ಲಿ ಖಬರಸ್ತಾನ್‌ ಜಮೀನುಗಳಿಗೆ ಮಂಜೂರಾತಿ ನೀಡಬೇಕು. ಹಾಗೂ ಲಭ್ಯವಿಲ್ಲದ ಸಂದಭ್ದಲ್ಲಿ ನಿಯಮಾನುಸಾರ ಖಾಸಗಿ ಜಮೀನು ಖರೀದಿಸಿ ವಿತರಿಸಲು ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದರು.

 

ರಾಜ್ಯದಲ್ಲಿ ಅನಧಿಕೃತ ಒತ್ತುವರಿ ವಿಚಾರವಾಗಿ ಈವರೆಗೆ ಒಟ್ಟು 3,720 ಪ್ರಕರಣ ದಾಖಲಾಗಿದೆ. ಒತ್ತುವರಿಯನ್ನು ತೆರವುಗೊಳಿಸುವ ನಿಟ್ಟಿನಲ್ಲಿ ವಕ್ಫ್ ಕಾಯ್ದೆ ಕಲಂ – 54 ರ ಪ್ರಕಾರ ಈಗಾಗಲೇ ಪ್ರಕರಣ ದಾಖಲು ಮಾಡಿದೆ. ಕರ್ನಾಟಕ ವಕ್ಫ್‌ ನ್ಯಾಯಾಧೀಕರಣಕ್ಕೆ ಒತ್ತುವರಿ ತೆರವು ಆದೇಶಕ್ಕಾಗಿ ಒಟ್ಟು 1458 ಅರ್ಜಿ ಸಲ್ಲಿಕೆಯಾಗಿವೆ.

 

ಈವರೆಗೆ ಒಟ್ಟು 319 ಎಕರೆ ಹಾಗೂ 9 ಗುಂಟೆ ಹಾಗೂ 128453.9 ಚದರ ಅಡಿ ವಕ್ಫ್‌ ಅಸ್ತಿಯನ್ನು ಒತ್ತುವರಿದಾರರಿಂದ ತೆರವುಗೊಳಿಸಿ ಸಂಬಂಧಪಟ್ಟ ವಕ್ಫ್‌ ಸಂಸ್ಥೆಯ ಸ್ವಾಧೀನಕ್ಕೆ ಪಡೆದಿತ್ತು.

 

ರಾಯಚೂರು ಜಿಲ್ಲೆಯೊಂದರಲ್ಲೇ 423 ಎಕರೆ 17 ಗುಂಟೆ ಮತ್ತು 89649 ಚದರ ಅಡಿ ವಕ್ಫ್ ಬೋರ್ಡ್ ಆಸ್ತಿಯನ್ನು ಅತಿಕ್ರಮಣವಾಗಿದೆ. ವಕ್ಫ್‌ ಆಸ್ತಿ ವಿಚಾರವಾಗಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್‍‌ ಮಾಣಿಪ್ಪಾಡಿ ಅವರು ದನಿ ಎತ್ತಿದ್ದರು. ಅಲ್ಲದೇ ವಕ್ಫ್‌ ಆಸ್ತಿ ಅತಿಕ್ರಮಣದಲ್ಲಿ 2ರಿಂದ 3 ಲಕ್ಷ ಕೋಟಿ ರು ಅಕ್ರಮ ನಡೆದಿದೆ ಎಂಬ ಆರೋಪವೂ ಕೇಳಿ ಬಂದಿತ್ತು.

 

ಒಂದು ಬಾರಿ ವಕ್ಫ್‌ ಸ್ವತ್ತು ಎಂದು ಘೋಷಿಸಿದ ಮೇಲೆ ಅದು ಎಂದೆಂದಿಗೂ ವಕ್ಫ್‌ ಸ್ವತ್ತಾಗಿಯೇ ಉಳಿಯುತ್ತದೆ ಎಂದು ಸರ್ವೋಚ್ಛ ನ್ಯಾಯಾಲಯವು ಆಂಧ್ರಪ್ರದೇಶ ವಕ್ಫ್‌ ಮಂಡಳಿ ಹಾಗೂ ಇತರರು ಪ್ರಕರಣದಲ್ಲಿ ತಿಳಿಸಿತ್ತು. ಆದರೆ ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಕಚೇರಿಗಳಲ್ಲಿ ರಾಜ್ಯದ ವಕ್ಫ್‌ ಆಸ್ತಿಗಳ ಹಕ್ಕುಗಳ ವರ್ಗಾವಣೆ ಮಾಡುತ್ತಿದ್ದರು. ಇದು ಸರ್ಕಾರದ ಗಮನಕ್ಕೂ ಬಂದಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರೂ ಸಹ ವಿಧಾನಸಭೆಗೆ ಲಿಖಿತ ಉತ್ತರ ನೀಡಿದ್ದರು.

 

 

ಪೌರಾಡಳಿತ ನಿರ್ದೇಶನದ ಸುತ್ತೋಲೆ ಮೇರೆಗೆ 2023ರ ಆಗಸ್ಟ್‌ 1ರಿಂದ ಅನ್ವಯವಾಗುವಂತೆ ಸ್ಥಳೀಯ ಸಂಸ್ಥೆ ಮತ್ತು ವಕ್ಫ್‌ ಬೋರ್ಡ್‌ ಆಸ್ತಿಗಳಿಗೆ ಸಂಬಂಧಿಸಿದಂತೆ ಇಲಾಖೆಗಳು ಹಕ್ಕು ವರ್ಗಾವಣೆಗೆ ಕೋರಿಕೆ ಸಲ್ಲಿಸಿದಲ್ಲಿ ಮಾತ್ರ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ಹಕ್ಕು ವರ್ಗಾವಣೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನಕ್ಕೆ ಮಾಹಿತಿ ಒದಗಿಸಿದ್ದರು.

the fil favicon

SUPPORT THE FILE

Latest News

Related Posts