ಅನಧಿಕೃತ ಮಳಿಗೆ ತೆರವಿಗೆ ನಿರ್ಲಕ್ಷ್ಯ; ವಲಯ ಆಯುಕ್ತ ಕರೀಗೌಡರ ವಿರುದ್ಧ ಮುಖ್ಯ ಆಯುಕ್ತರಿಗೆ ದೂರು

ಬೆಂಗಳೂರು; ಹೆಣ್ಣೂರು ಸಮೀಪದ ಬಾಬುಸಾಪಾಳ್ಯದಲ್ಲಿ 6 ಅಂತಸ್ತಿನ ಕಟ್ಟಡ ಕುಸಿದು ಬಿದ್ದ ದುರ್ಘಟನೆಯಿಂದ ಬಿಬಿಎಂಪಿ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ಈ ಮಧ್ಯೆ ಯಲಹಂಕ ವಲಯ ಆಯುಕ್ತ ಐಎಎಸ್‌ ಅಧಿಕಾರಿ ಕರಿಗೌಡ ಅವರ ವಿರುದ್ಧವೂ ದೂರು ಸಲ್ಲಿಕೆಯಾಗಿದೆ.

 

ಯಲಹಂಕದಲ್ಲಿರುವ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನಲ್ಲಿ ನಿರ್ಮಾಣವಾಗಿದೆ ಎನ್ನಲಾಗಿರುವ ಅನಧಿಕೃತವಾಗಿ ಮಳಿಗೆಗಳನ್ನು ತೆರವುಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ನ ಡಾ ಸುನೀಲಕುಮಾರ ಹೆಬ್ಬಿ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಈ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅನಧಿಕೃತ ಮಳಿಗೆ, ಕಟ್ಟಡಗಳನ್ನು ತಕ್ಷಣವೇ ನೆಲಸಮಗೊಳಿಸಬೇಕು ಎಂದು ಬಿಬಿಎಂಪಿ ಆದೇಶ ಹೊರಡಿಸಿತ್ತು. ಆದರೆ ಯಲಹಂಕದ ಕೇಂದ್ರೀಯ ಅಪಾರ್ಟ್‌ಮೆಂಟ್‌ನಲ್ಲಿ ನಿರ್ಮಾಣವಾಗಿರುವ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಿಲ್ಲ. ಮಳಿಗೆಗಳಿಗೆ ನೀಡಲಾಗಿದ್ದ ವಿದ್ಯುತ್‌ ಸಂಪರ್ಕವನ್ನು ಬೆಸ್ಕಾಂ ಕಡಿತಗೊಳಿಸಿದೆ. ಆದರೂ ಬಿಬಿಎಂಪಿ ವಲಯ ಆಯುಕ್ತರು ಅನಧಿಕೃತವಾಗಿ ನಿರ್ಮಾಣವಾಗಿರುವ ಮಳಿಗೆಗಳನ್ನು ತೆರವುಗೊಳಿಸುತ್ತಿಲ್ಲ ಎಂದು ಸುನೀಲ್‌ ಕುಮಾರ್‍‌ ಹೆಬ್ಬಿ ಅವರು ದೂರಿನಲ್ಲಿ ವಿವರಿಸಿದ್ದಾರೆ.

 

 

ಅಲ್ಲದೇ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನ ನಿವೇಶನದಲ್ಲಿ ಅನಧಿಕೃತವಾಗಿ ಮಳಿಗೆಗಳನ್ನು ನಿರ್ಮಿಸಿರುವುದು ಕಂಡು ಬಂದಿದೆ ಎಂದು ಖುದ್ದು ಬಿಬಿಎಂಪಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಸಹ 2024ರ ಆಗಸ್ಟ್‌ 29ರಂದೇ ಸ್ಥಿರೀಕರಣ ಆದೇಶವನ್ನೂ ಹೊರಡಿಸಿದ್ದರು.

 

 

‘ಬಿಬಿಎಂಪಿ ಕಾಯ್ದೆ 2020 ಚಾಲ್ತಿಯಲ್ಲಿರುವ ಕಟ್ಟಡ ಉಪ ವಿಧಿಗಳು ಹಾಗೂ ಬಿಬಿಎಂಪಿ ವಲಯ ನಿಯಮಾವಳಿಗಳು 2015ನ್ನು ಉಲ್ಲಂಘಿಸಿರುವುದು ನನಗೆ ಮನಃಪೂರ್ತಿಯಾಗಿ ದೃಢಪಟ್ಟಿದೆ. ಆದ ಕಾರಣ ಅನಧಿಕೃತವಾಗಿ ನಿರ್ಮಾಣವಾಗಿರುವ ಕಟ್ಟಡವನ್ನು ಕೆಡವಿ ಹಾಕಲು/ ತೆರವುಗೊಳಿಸಬೇಕು,’ ಎಂದು ಆದೇಶಿಸಿರುವುದು ಗೊತ್ತಾಗಿದೆ.

 

 

ಇದೇ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನ ಮಾಲೀಕರು ಕಟ್ಟಡ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಸಹ ಬೆಸ್ಕಾಂಗೆ 2024ರಲ್ಲಿ ಪತ್ರ ಬರೆದಿತ್ತು.

 

ಅಗ್ನಿಶಾಮಕ ಇಲಾಖೆ ಪತ್ರದಲ್ಲೇನಿದೆ?

 

ಈ ಕಟ್ಟಡದ ಎತ್ತರವು 29.60 ಮೀಟರ್‍‌ ಇದೆ. ರಾಷ್ಟ್ರೀಯ ಕಟ್ಟಡ ಸಂಹಿತೆಯಂತೆ ಮತ್ತು ಸರ್ಕಾರದ ಅಧಿಸೂಚನೆಯಂತೆ ಈ ಕಟ್ಟಡವು ಬಹುಮಹಡಿ ಕಟ್ಟಡಗಳ ವ್ಯಾಪ್ತಿಗೆ ಒಳಪಡುತ್ತದೆ. ಆದರೆ ಕಟ್ಟಡದ ಮಾಲೀಕರು ಬಿಲ್ಡಿಂಗ್‌ ಬೈಲಾ ನ್ಯಾಷನಲ್‌ ಬಿಲ್ಡಿಂಗ್‌ ಕೋಡ್‌ ಝೋನಿಂಗ್‌ ರೆಗ್ಯುಲೇಷನ್ಸ್‌ಗಳನ್ನು ಉಲ್ಲಂಘಿಸಿದ್ದಾರೆ ಎಂದು ಅಗ್ನಿಶಾಮಕ ಇಲಾಖೆಯ ನಿರ್ದೇಶಕ ಶಿವಶಂಕರ್‍‌ ಅವರು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಸರ್ಕಾರದ ಅಧಿಸೂಚನೆ ಪ್ರಕಾರ ಬಹುಮಹಡಿ ಕಟ್ಟಡವನ್ನು ನಿರ್ಮಿಸಿರುವ ಪೂರ್ವದಲ್ಲಿ ಸಕ್ಷಮ ಪ್ರಾಧಿಕಾರಗಳು ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯಬೇಕು. ನಂತರ ನಿರಾಕ್ಷೇಪಣಾ ಪತ್ರದಲ್ಲಿ ತಿಳಿಸಿರುವಂತೆ ರಾಷ್ಟ್ರೀಯ ಕಟ್ಟಡ ಸಂಹಿತೆ ಪ್ರಕಾರ ಕಟ್ಟಡವನ್ನು ನಿರ್ಮಾಣ ಮಾಡಿದ ನಂತರ ಕ್ಲಿಯರೆನ್ಸ್‌ ಪ್ರಮಾಣ ಪತ್ರ ಪಡೆಯಬೇಕು. ಅಲ್ಲದೇ ಪ್ರತಿ 2 ವರ್ಷಕ್ಕೊಮ್ಮೆ ಕ್ಲಿಯರೆನ್ಸ್‌ ಪ್ರಮಾಣ ಪತ್ರವನ್ನು ನವೀಕರಿಸಬೇಕು. ಆದರೆ ಈ ಕಟ್ಟಡದ ಮಾಲೀಕರಿಗೆ ಅಂತಿಮ ಸೂಚನಾ ಪತ್ರ ಹೊರಡಿಸಿದ್ದರೂ ಸಹ ಇದುವರೆಗೂ ಕ್ಲಿಯರೆನ್ಸ್‌ ಪ್ರಮಾಣ ಪತ್ರವನ್ನು ನವೀಕರಿಸಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

 

ಹಾಗೆಯೇ ಇದೇ ಯಲಹಂಕ ವಲಯ ವ್ಯಾಪ್ತಿಯ ಅಮೃತಹಳ್ಳಿಯಲ್ಲಿನ ತಲಕಾವೇರಿ ಬಡಾವಣೆಯಲ್ಲಿಯೂ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಮತ್ತೊಂದು ಆಪಾದನೆಯೂ ಕೇಳಿ ಬಂದಿದೆ.

 

ಯಲಹಂಕ ಬಿಬಿಎಂಪಿ ವಲಯ ವ್ಯಾಪ್ತಿಯ ಅಮೃತಹಳ್ಳಿಯಲ್ಲಿನ ತಲಕಾವೇರಿ ಬಡಾವಣೆಯ 3ನೇ ಮುಖ್ಯರಸ್ತೆ,7 ನೇ ಅಡ್ಡರಸ್ತೆಯಲ್ಲಿ (ನಿವೇಶನ ಸಂಖ್ಯೆ. 252) ಸುಕನ್ಯ ಕೋಂ. ಎನ್.ಯು.ಶಿವ ಎಂಬುವವರು 2022ರ ಫೆ.14ರಂದು ಕಟ್ಟಡ ನಿರ್ಮಾಣಕ್ಕೆ ಅನುಮತಿ ಹಾಗೂ ನಕ್ಷೆ ಅನುಮೋದನೆ ಪಡೆದಿದ್ದಾರೆ. ಈ ಅನುಮತಿ ಪತ್ರದಲ್ಲಿ ನಿರ್ಮಾಣ ಕಾರ್ಯವನ್ನು ಎರಡು ವರ್ಷಗೊಳಗೆ ಪೂರ್ಣಗೊಳಿಸಬೇಕೆಂಬ ಷರತ್ತು ಒಳಗೊಂಡಂತೆ ಹಲವಾರು ಷರತ್ತುಗಳನ್ನು ವಿಧಿಸಲಾಗಿದೆ. ಆದರೆ ಈ ಕಟ್ಟಡ ನಿರ್ಮಾಣ ಕಾರ್ಯವು ಸುಮಾರು ಮೂರು ವರ್ಷಗಳಾದರೂ ಮುಂದುವರೆದಿದೆ ಎಂಬ ಆರೋಪ ಕೇಳಿ ಬಂದಿದೆ.

 

ಈ ಸಂಬಂಧ 2024ರ ಮೇ 29ರಂದೇ ಬಿಬಿಎಂಪಿ ಅಧಿಕಾರಿಗಳು ಈ ಕಟ್ಟಡದ ತಪಾಸಣೆ ನಡೆಸಿದ್ದರು ಎಂದು ಗೊತ್ತಾಗಿದೆ. ಈ ಕಟ್ಟಡ ನಿರ್ಮಾಣದಲ್ಲಿ ನಿಯಮಗಳ ಉಲ್ಲಂಘನೆಯಾಗಿರುವುದನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿದ ಬಂದಿದೆ. ಈ ಸಂಬಂಧ 2024ರ ಜೂನ್‌ 6ರಂದು ಕಾರಣ ಕೇಳಿ ನೋಟೀಸ್ ಮತ್ತು ತಾತ್ಕಾಲಿಕ ಆದೇಶ ನೀಡಿದ್ದರು ಎಂದು ಹೇಳಲಾಗಿದೆ. ಬಹುಪಾಲು ಕಟ್ಟಡ ನಿರ್ಮಾಣ ಹಾಗೂ ಎತ್ತರ (ಮಹಡಿಗಳ ಸಂಖ್ಯೆ) ದಲ್ಲಿ ಶೇ.100ರಷ್ಟು ಉಲ್ಲಂಘನೆಯಾಗಿದೆ ಎಂದು ಎಂದು ತಿಳಿಸಿ, ಉಲ್ಲಂಘನೆಯನ್ನು ತೆರವುಗೊಳಿಸಬೇಕು ಎಂದು ಆದೇಶದಲ್ಲಿ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

 

‘ಈ ಪ್ರಕರಣದ ಬಗ್ಗೆ ಸ್ಥಳೀಯರ ದೂರುಗಳನ್ನು ಉಲ್ಲೇಖಿಸಿ ವಕೀಲರೊಬ್ಬರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಈ ಪ್ರಸಂಗವನ್ನು ಗಮನಿಸಿದರೆ ಕೇವಲ ಹಣ ಮಾಡುವ ದಂದೆಯಾಗಿ ಈ ನೋಟೀಸ್‌ಗಳನ್ನು ಬಳಸಲಾಗುತ್ತಿದೆ ಎಂಬ ಸಂಶಯ ಮೂಡುತ್ತಿದೆ. ಕಾರಣ ನಿರ್ಮಾಣದ ಸ್ಥಳಕ್ಕೆ ಬಂದು ಪರಿಶೀಲನೆ ಮಾಡುತ್ತಾರೆ. ನೋಟೀಸ್ ನೀಡುತ್ತಾರೆ. ಕಾಮಗಾರಿ ನಿಲ್ಲಿಸಲು ಹಾಗೂ ಕಟ್ಟಡ ನಿರ್ಮಾಣದ ಉಲ್ಲಂಘನೆ ಭಾಗಗಳನ್ನು ತೆರವುಗೊಳಿಸಲು ಸೂಚಿಸಿರುತ್ತಾರೆ. ಆದರೆ ಕಟ್ಟಡ ನಿರ್ಮಾಣದ ಕಾಮಗಾರಿ ನಿಲ್ಲುವುದಿಲ್ಲ ಹಾಗೂ ಕಟ್ಟಡದ ನಿರ್ಮಾಣದಲ್ಲಿ ಉಲ್ಲಂಘನೆ ಭಾಗಗಳನ್ನು ಮಾಲೀಕರು ತೆರವುಗೊಳಿಸುವುದಿಲ್ಲ.,’ ಎನ್ನುತ್ತಾರೆ ಸ್ಥಳೀಯ ನಿವಾಸಿಯೊಬ್ಬರು.

SUPPORT THE FILE

Latest News

Related Posts