120 ದಿನಗಳಾದರೂ ಕಡತಗಳ ಮಾಹಿತಿ ಒದಗಿಸದ ಸಿಎಂ ಸಚಿವಾಲಯ; ಹಿರಿಯ ಅಧಿಕಾರಿಯಿಂದ ತಡೆ?

ಬೆಂಗಳೂರು; ಮುಖ್ಯಮಂತ್ರಿ ಅವರ ಅನುಮೋದನೆಗೆ ಸ್ವೀಕೃತವಾಗಿರುವ, ಅನುಮೋದನೆ ನೀಡಿರುವ, ಅನುಮೋದನೆಗೆ ಬಾಕಿ ಇರುವುದಕ್ಕೆ ಸಂಂಧಿಸಿದಂತೆ ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಎಷ್ಟು ಕಡತಗಳು ಬಾಕಿ ಇವೆ ಎಂಬ ಕುರಿತಾದ ಮಾಹಿತಿಯನ್ನು ಮುಖ್ಯಮಂತ್ರಿಗಳ ಸಚಿವಾಲಯದ ಕಚೇರಿಗಳು 120 ದಿನಗಳಾದರೂ ಮಾಹಿತಿ ಒದಗಿಸಿಲ್ಲ.

 

ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾರ್ಯದರ್ಶಿ,  ಜಂಟಿ ಕಾರ್ಯದರ್ಶಿ, ಆಪ್ತ ಕಾರ್ಯದರ್ಶಿ,  ಉಪ ಕಾರ್ಯದರ್ಶಿ ಸೇರಿದಂತೆ ಒಟ್ಟಾರೆ 12ಕ್ಕೂ ಹೆಚ್ಚು ಅಧಿಕಾರಿಗಳು ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತ್ಯೇಕವಾದ ಕಚೇರಿ ಮತ್ತು ಸಿಬ್ಬಂದಿಯನ್ನೂ ಒದಗಿಸಿದೆ. ಮುಖ್ಯಮಂತ್ರಿ ಸಚಿವಾಲಯದ ಪ್ರತೀ ಕಚೇರಿಯಲ್ಲಿ ಮಾಹಿತಿ ಹಕ್ಕು ಅಧಿಕಾರಿಯನ್ನು ನೇಮಿಸಲಾಗಿದೆ. ಆದರೂ ಆರ್‌ಟಿಐ ಅಡಿಯಲ್ಲಿ ಕೋರಿದ್ದ ಮಾಹಿತಿ ನೀಡಿಲ್ಲ.

 

ಈ ಕಚೇರಿಗಳಲ್ಲಿನ ಕಡತಗಳ ಮಾಹಿತಿಗಾಗಿ ‘ದಿ ಫೈಲ್‌’ 2024ರ ಜೂನ್‌ 1ರಂದೇ ಆರ್‍‌ಟಿಐ ಅಡಿಯಲ್ಲಿ ಮಾಹಿತಿ ಕೋರಿತ್ತು.

 

 

 

ಮಾಹಿತಿ ಕೋರಿ ಅರ್ಜಿ ಸಲ್ಲಿಕೆಯಾಗಿ 120 ದಿನಗಳಾದರೂ ಕಡತಗಳ ಕುರಿತಾದ ಮಾಹಿತಿಯನ್ನೇ ಒದಗಿಸಿಲ್ಲ. ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳ ಈ ನಡೆಯು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

 

ಸಚಿವಾಲಯವೂ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳು ಆಡಳಿತಾತ್ಮಕ ತೀರ್ಮಾನ, ಅನುದಾನ, ಯೋಜನೆ ಸೇರಿದಂತೆ ಇನ್ನಿತರೆ ಮಹತ್ವದ ವಿಷಯಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಅನುಮೋದನೆ ಕೋರಿ ಕಡತಗಳನ್ನು ಮಂಡಿಸುತ್ತವೆ. ಈ ಕಡತಗಳಿಗೆ ನಿರ್ದಿಷ್ಟ ದಿನದೊಳಗೆ ಮುಖ್ಯಮಂತ್ರಿ ಅನುಮೋದನೆ ನೀಡಬೇಕು. ಅನುಮೋದನೆ ನೀಡಿದ ನಂತರ ಕಡತಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಹಿಂದಿರುಗಿಸಲಾಗುತ್ತದೆ.

 

ಹೀಗೆ ಮುಖ್ಯಮಂತ್ರಿಗಳ ಅನುಮೋದನೆ ಕೋರಿ ಸಚಿವಾಲಯ ಸೇರಿದಂತೆ ಇಲಾಖೆಗಳಿಂದ ಎಷ್ಟು ಕಡತಗಳನ್ನು ಮುಖ್ಯಮಂತ್ರಿಗಳ ಸಚಿವಾಲಯವು ಸ್ವೀಕರಿಸಿದೆ, ಎಷ್ಟು ಕಡತಗಳಿಗೆ ಮುಖ್ಯಮಂತ್ರಿಯ  ಅನುಮೋದನೆ ದೊರೆತಿದೆ, ಅನುಮೋದನೆ ನೀಡುವ ಸಲುವಾಗಿ ಎಷ್ಟು ಕಡತಗಳನ್ನು ಮುಖ್ಯಮಂತ್ರಿಗಳ ಸಚಿವಾಲಯ ಅಧಿಕಾರಿಗಳು ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಮಾಹಿತಿಗಳನ್ನು  ಆರ್‍‌ಟಿಐ ಅಡಿಯಲ್ಲಿ 120 ದಿನಗಳಾದರೂ ಒದಗಿಸಿಲ್ಲ.

 

ಆರ್‍‌ಟಿಐ ಅಡಿ ಮಾಹಿತಿ ಕೋರಿ ಸಲ್ಲಿಸುವ ಅರ್ಜಿಗಳಿಗೆ 30 ದಿನದೊಳಗೆ ಮಾಹಿತಿ ನೀಡಬೇಕು. ಒಂದೊಮ್ಮೆ ಕಡತವು ಪರಿಶೀಲನೆಯಲ್ಲಿದ್ದರೇ, ಕಡತವು ಚಲನವಲನದಲ್ಲಿದ್ದರೇ, ಕಡತಗಳಲ್ಲಿನ ವಿಷಯಗಳಿಗೆ ಸಂಬಂಧಿಸಿದಂತೆ ವಿಷಯಗಳಲ್ಲಿ ತೀರ್ಮಾನ ಕೈಗೊಂಡಿದ್ದರೇ, ತೀರ್ಮಾನ ಕೈಗೊಳ್ಳಲು ಬಾಕಿ ಇದ್ದರೇ ಅರ್ಜಿದಾರರಿಗೆ ಈ ಕುರಿತು ಮಾಹಿತಿ ಒದಗಿಸಬೇಕು. ಇಲ್ಲವೇ ಅರ್ಜಿಯನ್ನು ಸಕಾರಣಗಳೊಂದಿಗೆ ತಿರಸ್ಕರಿಸಬೇಕು ಅಥವಾ ಹಿಂಬರಹ ನೀಡಬೇಕು. ಆದರೆ ಮುಖ್ಯಮಂತ್ರಿಗಳ ಸಚಿವಾಲಯವು 120 ದಿನಗಳಾದರೂ ಆರ್‍‌ಟಿಐ ಅರ್ಜಿಗೆ ಇದುವರೆಗೂ  ಒಂದೇ ಒಂದು ಹಿಂಬರಹವನ್ನೂ ನೀಡಿಲ್ಲ.

 

ಕಡತಗಳ ಕುರಿತಾದ ಮಾಹಿತಿಯನ್ನು ಆರ್‍‌ಟಿಐ ಅಡಿ ಒದಗಿಸಬಾರದು ಎಂದು ಮುಖ್ಯಮಂತ್ರಿಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಮ್ಮ ಅಧೀನ ಅಧಿಕಾರಿಯೊಬ್ಬರಿಗೆ ತಡೆಯೊಡ್ಡಿದ್ದಾರೆ. ಹೀಗಾಗಿ 120 ದಿನಗಳಾದರೂ ಮಾಹಿತಿ ನೀಡಲಾಗುತ್ತಿಲ್ಲ. ಕಡತಗಳ ಮಾಹಿತಿ ನೀಡದಂತೆ ಮೇಲಾಧಿಕಾರಿಗಳ ಒತ್ತಡವೂ ಇದೆ ಎಂದು ಮುಖ್ಯಮಂತ್ರಿಗಳ ಸಚಿವಾಲಯದ ಮತ್ತೊಬ್ಬ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಪ್ರತಿಕ್ರಿಯಿಸಿದರು.

 

ಕಚೇರಿಗಳಲ್ಲಿ ಕೆಲಸ ಮಾಡದ ಶೇ.47ರಷ್ಟು ಸಿಬ್ಬಂದಿ; ರಾಶಿ ರಾಶಿ ಕಡತಗಳು, ಆಡಳಿತ ವ್ಯವಸ್ಥೆ ಕುಂಠಿತ

ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ ಕೆ ಅತೀಕ್‌, ತ್ರಿಲೋಕ್‌ ಚಂದ್ರ (ಈಗವರು ವರ್ಗಾವಣೆಗೊಂಡಿದ್ದಾರೆ) ಆಪ್ತ ಕಾರ್ಯದರ್ಶಿ ಎನ್‌ ವೆಂಕಟೇಶಯ್ಯ, ಜಂಟಿ ಕಾರ್ಯದರ್ಶಿ ಬಿ ಶಿವಸ್ವಾಮಿ, ಎಂ ರಾಮಯ್ಯ (ನಿವೃತ್ತ ಅಧಿಕಾರಿ), ಉಪ ಕಾರ್ಯದರ್ಶಿ ಅರುಣ್‌ ಪುರ್ಟಾಡೋ, ಮಹದೇವ, ವೈಷ್ಣವಿ, ಚಿರಂಜೀವಿ ಅವರು ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

 

ಮುಖ್ಯಮಂತ್ರಿಗಳ ಹೆಚ್ಚುವರಿ ಎಲ್ ಕೆ ಅತೀಕ್‌ ಅವರಿಗೆ ಡಿಪಿಎಆರ್‍‌, ಇ-ಆಡಳಿತ, ಹಣಕಾಸು, ನಗರಾಭಿವೃದ್ಧಿ, ಕಾನೂನು ಸಂಸದೀಯ ವ್ಯವಹಾರಗಳು, ಜಲ ಸಂಪನ್ಮೂಲ, ಪಿಡಬ್ಲ್ಯೂಡಿ, ಗೃಹ, ವಾಣಿಜ್ಯ ಮತ್ತು ಕೈಗಾರಿಕೆ, ಐಟಿ, ಬಿಟಿ, ವಿಜ್ಞಾನ ತಂತ್ರಜ್ಞಾನ, ಇಂಧನ, ಮೂಲಸೌಕರ್ಯ, ನೀತಿ ನಿರೂಪಣೆ, ಅಂತರರಾಜ್ಯ ಜಲ ವಿವಾದ, ಭಾರತ ಸರ್ಕಾರದೊಂದಿಗೆ ವ್ಯವಹರಿಸುವುದು ಮತ್ತು ಈ ಇಲಾಖೆಗಳಿಗೆ ಸಂಬಂಧಿಸಿದ ಸಚಿವ ಸಂಪುಟದ ವಿಷಯಗಳನ್ನು ಹಂಚಿಕೆ ಮಾಡಿದೆ.

 

 

ಮುಖ್ಯಮಂತ್ರಿಗಳ ಕಾರ್ಯದರ್ಶಿ ಆಗಿದ್ದ ಡಾ ತ್ರಿಲೋಕ್‌ ಚಂದ್ರ (ಈಗ ಬಿ ಬಿ ಕಾವೇರಿ) ಅವರಿಗೆ ಡಿಪಿಎಆರ್‍‌ (ಸೇವೆಗಳು) ಕೆಎಎಸ್‌ ಅಧಿಕಾರಿಗಳ ವರ್ಗಾವಣೆ ವಿಷಯಗಳು, ನಗರಾಭಿವೃದ್ಧಿ (ಪೌರಾಡಳಿತ) ಗ್ರಾಮೀಣಾಭಿವೃದ್ದಿ ಪಂಚಾಯತ್‌ರಾಜ್‌, ಅರಣ್ಯ, ಪರಿಸರ ಜೀವಿಶಾಸ್ತ್ರ, ಆರೋಗ್ಯ ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಗಣಿ ಮತ್ತು ಭೂ ವಿಜ್ಞಾನ, ವಾರ್ತಾ ಸಾರ್ವಜನಿಕ ಸಂಪರ್ಕ ಮತ್ತು ಈ ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿದ ವರ್ಗಾವಣೆ ಮತ್ತು ಸಚಿವ ಸಂಪುಟಕ್ಕೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸುತ್ತಾರೆ.

 

ಜಂಟಿ ಕಾರ್ಯದರ್ಶಿ ಬಿ ಶಿವಸ್ವಾಮಿ ಅವರು ಸಣ್ಣ ನೀರಾವರಿ, ಪಶು ಸಂಗೋಪನೆ, ಆಹಾರ, ನಾಗರಿಕ ಸರಬರಾಜು, ಮೀನುಗಾರಿಕೆ, ಒಳನಾಡು, ಜಲ ಸಾರಿಗೆ, ಸಹಕಾರ, ಎಲ್ಲಾ ಇಲಾಖೆಗಳ ಅಧಿಕಾರಿಗಳ ವರ್ಗಾವಣೆ, ಸಚಿವ ಸಂಪುಟಕ್ಕೆ ಸಂಬಂಧಿಸಿದ ವಿಷಯಗಳೂ, ವಿಶೇಷವಾಗಿ ಮೈಸೂರು ವಿಭಾಗದ ವಿಧಾನಸಭೆ, ವಿಧಾನ ಪರಿಷತ್‌ ಸದಸ್ಯರು, ಲೋಕಸಭೆ ಸದಸ್ಯರಿಗೆ ಸಂಬಂಧಿಸಿದ ವಿಷಯಗಳ ನಿರ್ವಹಣೆ ಮಾಡುವ ಅಧಿಕಾರ, ಕಾರ್ಯವ್ಯಾಪ್ತಿ ಹೊಂದಿದ್ದಾರೆ.

 

 

ಮತ್ತೊಬ್ಬ ಜಂಟಿ ಕಾರ್ಯದರ್ಶಿ ಎಂ ರಾಮಯ್ಯ (ನಿವೃತ್ತ ಕೆಎಎಸ್‌ ಅಧಿಕಾರಿ) ಶಾಲಾ ಶಿಕ್ಷಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಕೌಶಲ್ಯಾಭಿವೃದ್ಧಿ, ಈ ಇಲಾಖೆಗಳ ಅಧಿಕಾರಿಗಳ ವರ್ಗಾವಣೆ ವಿಷಯಗಳು ಮತ್ತು ಈ ಇಲಾಖೆಗಳಿಗೆ ಸಂಬಂಧಿಸಿದಂತೆ ಸಚಿವ ಸಂಪುಟದ ವಿಷಯಗಳ ಕಾರ್ಯವ್ಯಾಪ್ತಿ ಹೊಂದಿದ್ದಾರೆ.

 

ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಡಾ ವೆಂಕಟೇಶಯ್ಯ ಅವರು ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ, ಕಾರ್ಮಿಕ, ಉನ್ನತ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ, ಸಾರಿಗೆ, ಗೃಹ ಕಚೇರಿ ಕೃಷ್ಣ ಮತ್ತು ಮುಖ್ಯಮಂತ್ರಿಗಳ ನಿವಾಸ, ಸಚಿವ ಸಂಪುಟದ ವಿಷಯಗಳು, ಬೆಂಗಳೂರು ವಿಭಾಗದ ಶಾಸಕರು (ವಿಧಾನಸಭೆ-ವಿಧಾನ ಪರಿಷತ್‌), ಸಂಸದರು, ಮುಖ್ಯಮಂತ್ರಿಯೊಂದಿಗೆ ನಡೆಯುವ ಸಭೆ, ಸಮಾರಂಭಗಳ ಸಮನ್ವಯ ಕುರಿತಾದ ವಿಷಯಗಳನ್ನು ನಿರ್ವಹಿಸುತ್ತಿದ್ದಾರೆ.

 

ಮತ್ತೊಬ್ಬ ಹೆಚ್ಚುವರಿ ಕಾರ್ಯದರ್ಶಿ ಜಿಯಾವುಲ್ಲಾ (ನಿವೃತ್ತ ಐಎಎಸ್‌) ಅವರು ಅಲ್ಪಸಂಖ್ಯಾತರು, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ, ಪ್ರವಾಸೋದ್ಯಮ, ವಸತಿ, ಕಬ್ಬು , ಸಕ್ಕರೆ ನಿರ್ದೇಶನಾಲಯ, ಬಾಹ್ಯ ನೆರವಿನ ಯೋಜನೆಗಳ ಸಮನ್ವಯ, ನಿರ್ವಹಣೆ, ಮೂಲಸೌಕರ್ಯಗಳ ವಿಷಯಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರದೊಂದಿಗೆ ಪತ್ರ ವ್ಯವಹಾರಗಳು, ಬೆಳಗಾವಿ ವಿಭಾಗದ ಶಾಸಕರು (ವಿಧಾನಸಭೆ-ವಿಧಾನ ಪರಿಷತ್‌), ಸಂಸದರಿಗೆ ಸಂಬಂಧಿಸಿದ ವಿಷಯಗಳು, ಈ ಇಲಾಖೆಗಳ ಸಚಿವ ಸಂಪುಟದ ವಿಷಯಗಳ ಹೊಣೆಗಾರಿಕೆ ಹೊಂದಿದ್ದಾರೆ.

 

ಜಂಟಿ ಕಾರ್ಯದರ್ಶಿ ಬಿ ಗೋಪಾಲ್‌ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿ ಹೊಣೆಗಾರಿಕೆ ಹೊಂದಿದ್ದಾರೆ. ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಕೆ ಚಿರಂಜೀವಿ ಅವರು ವಿವಿಐಪಿ, ಗಣ್ಯರು ಮತ್ತು ಸಾರ್ವಜನಿಕ ಸಭೆ, ಶಿಷ್ಟಾಚಾರ, ಸಾರ್ವಜನಿಕ ದೂರು (ಜನತಾ ದರ್ಶನ) ಕುರಿತಾದ ವಿಷಯಗಳು, ಉಪ ಕಾರ್ಯದರ್ಶಿ ಅರುಣ್‌ ಪುರ್ಟಾಡೋ ಅವರು ಭಾರತ ಸರ್ಕಾರದ ಅನುದಾನಗಳು, ಮುಖ್ಯಮಂತ್ರಿಗಳ ಸಚಿವಾಲಯದ ಆಡಳಿತಾತ್ಮಕ ವಿಷಯಗಳು, ಶಾಸನಸಭೆಗಳ ವಿಷಯಗಳ ನಿರ್ವಹಣೆ, ಫ್ಲಾಗ್‌ ಶಿಫ್‌ ಯೋಜನೆಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ.

 

 

ಹಾಗೆಯೇ ಮತ್ತೊಬ್ಬ ವಿಶೇಷ ಕರ್ತವ್ಯಾಧಿಕಾರಿ ರಮೇಶ್‌ ಪಿ ಕೋನರೆಡ್ಡಿ ಅವರು ಎಂಐಎಸ್‌ನ ನಿರ್ವಹಣೆ, ಕಲ್ಬುರ್ಗಿ ವಿಭಾಗದ ವಿಷಯಗಳು ಮತ್ತು ಈ ವಿಭಾಗದ ಶಾಸಕರು, ಸಂಸದರ ವಿಷಯಗಳ ಕಾರ್ಯವ್ಯಾಪ್ತಿ ಹೊಂದಿದ್ದಾರೆ. ಇನ್ನೊಬ್ಬ ವಿಶೇಷ ಕರ್ತವ್ಯಾಧಿಕಾರಿ ಆರ್‍‌ ಮಹದೇವ ಅವರು ಕೃಷಿ, ತೋಟಗಾರಿಕೆ, ರೇಷ್ಮೆ, ಜವಳಿ, ಕೈಮಗ್ಗ, ಯೋಜನೆ, ಸಾಂಖ್ಯಿಕ, ನಿಗಮ ಮಂಡಳಿಗಳಿಗೆ ಅಧಿಕಾರೇತರ ಸದಸ್ಯರ ನೇಮಕ, ಶಾಸಕರು, ಸಂಸದರೊಂದಿಗೆ ಪತ್ರ ವ್ಯವಹಾರಗಳು, ಈ ಇಲಾಖೆಗಳ ಸಚಿವ ಸಂಪುಟಕ್ಕೆ ಸಂಬಂಧಿಸಿದ ವಿಷಯಗಳ ಅಧಿಕಾರ ವ್ಯಾಪ್ತಿ ಹೊಂದಿದ್ದಾರೆ.

 

ವಿಶೇಷ ಕರ್ತವ್ಯಾಧಿಕಾರಿ ಕೆ ಎನ್‌ ವಿಜಯ ಅವರು ವರುಣ ವಿಧಾನಸಭೆ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳ ನಿರ್ವಹಣೆ ಮಾಡಲಿದ್ದಾರೆ.

the fil favicon

SUPPORT THE FILE

Latest News

Related Posts