ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ಅಕ್ರಮ ವರ್ಗಾವಣೆ; ಬಿ ನಾಗೇಂದ್ರ ಮಾಸ್ಟರ್‍‌ ಮೈಂಡ್‌, ಇಡಿ ಹೇಳಿಕೆ ಬಿಡುಗಡೆ

ಬೆಂಗಳೂರು;  ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಗಳು ಸೂಕ್ತ ಅನುಮತಿ ಇಲ್ಲದೆಯೇ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದನ್ನು ಜಾರಿ ನಿರ್ದೇಶನಾಲಯವು ದೃಢಪಡಿಸಿದೆ.

 

ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದಿದೆ ಎನ್ನಲಾಗಿರುವ ಹಣ ಅಕ್ರಮ ವರ್ಗಾವಣೆ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಯೂನಿಯನ್‌ ಬ್ಯಾಂಕ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ವಿಚಾರಣೆ ನಡೆಸಿರುವ ಹೈಕೋರ್ಟ್‌, ಆದೇಶವನ್ನು ಕಾಯ್ದಿರಿಸಿರುವ ಬೆನ್ನಲ್ಲೇ ಇದೀಗ ಜಾರಿ ನಿರ್ದೇಶನಾಲಯವು ಈ ಅಕ್ರಮದ ಕುರಿತು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.

 

ಸಚಿವರಾಗಿದ್ದ ಬಿ ನಾಗೇಂದ್ರ ಅವರ ಪ್ರಭಾವ ಮತ್ತು ಸೂಕ್ತ ಅನುಮತಿ ಇಲ್ಲದೇ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು ಎಂದು ತನಿಖೆಯಿಂದ ಸಾಬೀತುಪಡಿಸಿರುವುದು ಪತ್ರಿಕಾ ಹೇಳಿಕೆಯಿಂದ ತಿಳಿದು ಬಂದಿದೆ.

 

ಈ ಹಗರಣದಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿದ್ದ ಸತ್ಯನಾರಾಯಣ ವರ್ಮ, ಏಕತಾರಿ ಸತ್ಯನಾರಾಯಣ, ಜೆ ಜಿ ಪದ್ಮನಾಭ, ನಾಗೇಶ್ವರ್‍‌ ರಾವ್‌, ನೆಕ್ಕುಂಡಿ ನಾಘರಾಜ್‌ ಮತ್ತು ವಿಜಯಕುಮಾರ್‍‌ ಗೌಡ ಸೇರಿದಂತೆ ಒಟ್ಟು 24 ಮಂದಿ ಆರೋಪಿಯನ್ನಾಗಿಸಿದೆ. ಇಡೀ ಪ್ರಕರಣದಲ್ಲಿ ಸಚಿವರಾಗಿದ್ದ ಬಿ ನಾಗೇಂದ್ರ ಅವರೇ ಮಾಸ್ಟರ್‍‌ ಮೈಂಡ್‌ ಎಂದು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಸುಮಾರು 89.62 ಕೋಟಿಯನ್ನು ವಾಲ್ಮೀಕಿ ನಿಗಮದ ಖಾತೆಗಳಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ನಕಲಿ ಖಾತೆಗಳಿಗೆ ಹಣ ವರ್ಗಾಯಿಸಿ ನಕಲಿ ಸಂಸ್ಥೆಗಳ ಮೂಲಕ ಮನಿ ಲಾಂಡರಿಂಗ್ ಮಾಡಲಾಗಿದೆ. 187 ಕೋಟಿಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ರಾಜ್ಯ ಖಜಾನೆಯಿಂದ 43.33 ಕೋಟಿ ರೂ.ಗಳನ್ನು ಕಾನೂನು ಬಾಹಿರವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಠೇವಣಿ ಮಾಡಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಅಲ್ಲದೇ 20.19 ಕೋಟಿ ರುಪಾಯಿಗಳನ್ನು ಬಳ್ಳಾರಿ ಲೋಕಸಭೆ ಚುನಾವಣೆಗೆ ದುರ್ಬಳಕೆ ಮಾಢಿಕೊಳ್ಳಲಾಗಿದೆ ಮತ್ತು ಸಚಿವ ಬಿ ನಾಗೇಂದ್ರ ಅವರ ವೈಯಕ್ತಿಕ ವೆಚ್ಚಕ್ಕೆ ಬಳಕೆ ಮಾಡಿರುವುದನ್ನೂ ಇಡಿ ತನಿಖೆಯು ದೃಢಪಡಿಸಿದೆ.
ಹಾಗೆಯೆ ಸಚಿವರಾಗಿದ್ದ ಬಿ ನಾಗೇಂದ್ರ ಅವರ ಸೂಚನೆ ಮೇರೆಗೆ ನಗದು ವ್ಯವಹಾರವನ್ನು ವಿಜಯಕುಮಾರ್‍‌ ಗೌಡ ಎಂಬುವರ ಮೊಬೈಲ್‌ ಫೋನ್‌ನಲ್ಲಿದ್ದ ಚುನಾವಣೆ ವೆಚ್ಚದ ವಿವರಗಳನ್ನು ಇಡಿ ಪಡೆದಿರುವುದು ಗೊತ್ತಾಗಿದೆ.

 

‘ಹಗರಣ ಬೆಳಕಿಗೆ ಬಂದ ನಂತರ ಬಿ.ನಾಗೇಂದ್ರ ತನ್ನ ಮೊಬೈಲ್ ಫೋನ್ ಗಳನ್ನು ನಾಶಪಡಿಸುವ ಮೂಲಕ ತನಿಖೆಗೆ ಅಡ್ಡಿಪಡಿಸಿದ್ದಾರೆ,’ ಎಂದು ಜಾರಿ ನಿರ್ದೇಶನಾಲಯವು ತನ್ನ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

 

ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದಿರುವ ಬಹು ಕೋಟಿ ಹಗರಣವನ್ನೇ ಪ್ರಬಲ ಅಸ್ತ್ರವನ್ನಾಗಿಸಿಕೊಂಡಿರುವ ಪ್ರತಿಪಕ್ಷಗಳು, ಉಭಯ ಸದನಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿರುವ ಹೊತ್ತಿನಲ್ಲೇ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಡೀ ಸರ್ಕಾರವೇ ಈ ಹಗರಣವನ್ನು ನೇರವಾಗಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ತಲೆಗೆ ಕಟ್ಟಿತ್ತು.

 

ವಾಲ್ಮೀಕಿ ಅಭಿವೃದ್ದಿ ನಿಗಮದ 89 ಕೋಟಿ ಹಗರಣ; ಯೂನಿಯನ್‌ ಬ್ಯಾಂಕ್‌ನ ತಲೆಗೆ ಕಟ್ಟಿದ ಸರ್ಕಾರ

ಅಲ್ಲದೇ ಆದಾಯ ತೆರಿಗೆ ಇಲಾಖೆಯನ್ನೂ ಎಳೆದು ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರೀಕೃತ ಬ್ಯಾಂಕ್‌ ಆಗಿರುವ ಯೂನಿಯನ್‌ ಬ್ಯಾಂಕ್‌ನಲ್ಲೇ ಕಳ್ಳತನ ನಡೆದಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಸರಣಿ ರೂಪದಲ್ಲಿ ಸ್ಪಷ್ಟೀಕರಣ ನೀಡಿದ್ದರು.

 

ವಾಲ್ಮೀಕಿ ಅಭಿವೃದ್ದಿ ನಿಗಮದ ಅಕ್ರಮ; 6 ತಿಂಗಳ ನಂತರವೂ ನಿಯಮಬಾಹಿರವಾಗಿ ಕಾರ್ಯನಿರ್ವಹಿಸಿದ್ದ ಪದ್ಮನಾಭ್‌

ಅಲ್ಲದೇ ಭ್ರಷ್ಟಾಚಾರ ತಡೆ ಕಾಯ್ದೆ (ತಿದ್ದುಪಡಿ) 2018ರ ಸೆಕ್ಷನ್‌ 17(ಎ) ಅಡಿಯಲ್ಲಿ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರಾದ ಸುಚಿಸ್ಮಿತಾ ರೌಲ್‌ ಅವರನನ್ನು ತನಿಖೆ, ವಿಚಾರಣೆ ನಡೆಸಲು ಅನುಮತಿ ಸಾರಾಂಶವನ್ನು ಮುಂದಿರಿಸಿತ್ತು.

 

ಅನುಮತಿ ಸಾರಾಂಶದಲ್ಲೇನಿತ್ತು?

 

ಎಂ ಜಿ ರಸ್ತೆಯ ಶಾಖೆಯ ಮುಖ್ಯ ವ್ಯವಸ್ಥಾಪಕರಾದ ಸುಚಿಸ್ಮಿತಾ ರೌಲ್‌ ಅವರು ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಯ ಇ-ಮೇಲ್‌ ಐಡಿ ಮತ್ತು ಸಹಿ ಮಾಡಿದವರ ಮೊಬೈಲ್‌ ಸಂಖ್ಯೆಯನ್ನು ಮಾರ್ಪಾಡು ಮಾಡಲು ಕೋರಿಕೆ ಸ್ವೀಕರಿಸುವಾಗ ಸಹಿ ಮಾಡಿದವರ ಸಹಿಗಳ ನೈಜತೆ ಪರಿಶೀಲಿಸಲು ವಿಫಲರಾಗಿದ್ದಾರೆ ಎಂದು ಹೇಳಲಾಗಿತ್ತು.

 

ಇ-ಮೇಲ್‌ ಐಡಿಯನ್ನು mdkmvstdcl@gmail.com ಎಂದು ಬದಲಾಯಿಸಲು ಮತ್ತು ಮೊಬೈಲ್‌ ಸಂಖ್ಯೆಯನ್ನು 6026137043ಗೆ ಬದಲಾಯಿಸುವಂತೆ ಕೋರಿಕೆ ಸ್ವೀಕರಿಸಲಾಗಿತ್ತು. ಆದರೆ ಇದನ್ನು ವೆಬ್‌ಸೈಟ್‌ ಅಥವಾ ನಿಗಮದ ಕಚೇರಿಗೆ ವೈಯಕ್ತಿಕ ಭೇಟಿ ಮೂಲಕ ವಿವರಗಳನ್ನು ಪರಿಶೀಲಿಸಿಲ್ಲ. ಚೆಕ್‌ ಬುಕ್‌ಗಳ ವಿತರಣೆಗಾಗಿ ಕೋರಿಕೆ ಸಲ್ಲಿಸಿದಾಗ ಸಹಿ ಮಾಡಿದವರನ್ನೂ ಗುರುತಿಸಲು ವಿಫಲರಾಗಿರುತ್ತಾರೆ ಎಂದು ಸಾರಾಂಶದಲ್ಲಿ ಉಲ್ಲೇಖಿಸಿತ್ತು.

 

2024ರ ಮಾರ್ಚ್‌ 4ರಂದು ಚೆಕ್ ಪುಸ್ತಕವನ್ನು ಹಸ್ತಾಂತರಿಸುವಾಗ ತಮ್ಮ ಸಂವಹನದಲ್ಲಿ ಶಿವಕುಮಾರ್‍‌ ಅವರ ಗುರುತನ್ನು ಪರಿಶೀಲಿಸಲು ವಿಫಲರಾಗಿದ್ದಾರೆ. ಇದಲ್ಲದೇ ಅದೇ ಗ್ರಾಹಕರಿಗೆ ಸ್ಥಿರ ಠೇವಣಿ ವಿರುದ್ಧ 45.00 ಕೊಟಿ ರು ಒಒಡಿ ಮಿತಿಯನ್ನು ಮಂಜೂರು ಮಾಡುವಾಗ ಅವರು ಹೇಳಿದ ನಿಗಮದ ಆರ್ಟಿಕಲ್‌ ಆಫ್‌ ಅಸೋಸಿಯೇಷನ್‌ ಮತ್ತು ಮೆಮೊರಂಡಮ್‌ ಆಫ್‌ ಅಸೋಸಿಯೇಷನ್‌ ಪಡೆಯಲು ವಿಫಲರಾಗಿದ್ದಾರೆ ಎಂದು ಸಾರಾಂಶದಲ್ಲಿ ಪ್ರಸ್ತಾಪಿಸಿತ್ತು.

 

ಸ್ಥಿರ ಠೇವಣಿ ವಿರುದ್ಧ ಒಒಡಿ ಸೌಲಭ್ಯ ಪಡೆಯಲು ನಿಗಮವು ಸಕ್ಷಮ ಪ್ರಾಧಿಕಾರವಾಗಿದೆ. ಆಕೆಯ ಉಪಸ್ಥಿತಿಯಲ್ಲಿ ಅಧಿಕೃತ ಸಹಿದಾರರ ಸಹಿ ಪಡೆಯಲು ಅವರು ವಿಫಲರಾಗಿರುತ್ತಾರೆ. ಠೇವಣಿಗಳ ವಿರುದ್ಧ ಒಒಡಿ ಮಂಜೂರಾತಿಗೆ ಯಾವುದೇ ಕೋರಿಕೆ ಸಲ್ಲಿಸಿಲ್ಲ ಎಂದು ನಿರಾಕರಿಸಿದ್ದರು. ಆಕೆಯ ಮೇಲಿನ ಸಂಪೂರ್ಣ ನಿರ್ಲಕ್ಷ್ಯದ ಕೃತ್ಯಗಳಿಂದಾಗಿ ನಿಗಮದ ಖಾತೆಯಿಂದ ಒಟ್ಟು 89.63 ಕೋಟಿಯನ್ನು ಮೋಸದಿಂದ ವರ್ಗಾಯಿಸಲಾದ ಹಣವನ್ನು ಐಟಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳಿಗೆ ವರ್ಗಾಯಿಸಲಾಗಿದೆ ಎಂದು ಸಾರಾಂಶದಲ್ಲಿ ವಿವರಿಸಿತ್ತು.

 

ಸಿದ್ದರಾಮಯ್ಯ ಅವರ ಸ್ಪಷ್ಟನೆ ಏನು?

 

ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ 89.63 ಕೋಟಿ ರು.ಗಳನ್ನು ಅಕ್ರಮವಾಗಿ ಹೈದರಾಬಾದ್‌ನ ಆರ್‍‌ ಬಿ ಎಲ್‌ ಬ್ಯಾಂಕ್‌ಗೆ ವರ್ಗಾವಣೆ ಆಗಿರುತ್ತದೆ. ( ಈ 89.63 ಕೋಟಿ ರು.ಗಳಲ್ಲಿ 5 ಕೋಟಿ ವಾಪಸ್‌ ಬಂದಿರುತ್ತದೆ. 89.63 ಕೋಟಿ ರು.ಗಳಲ್ಲಿ 45,02,98,000 ರುಗ.ಳು ಉಳಿತಾಯ ಖಾತೆಯಿಂದ ವರ್ಗಾವಣೆ ಆಗಿರುತ್ತವೆ. ಇನ್ನುಳಿದ 44.60 ಕೊಟಿ ರು.ಗಳು ನಿಮಗವು ಇಟ್ಟಿದ್ದ ಫಿಕ್ಸೆಡ್‌ ಡಿಪಾಸಿಟ್‌ ಮೇಲೆ ಓವರ್‍‌ ಡ್ರಾಫ್ಟ್‌ ತೆಗೆದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts