ಸರ್ಕಾರದ ಅನುಮೋದನೆಯಿಲ್ಲದೇ ವಿವೇಕಾನಂದ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ; ಮಂಗಳೂರು ವಿವಿಗೆ ನೋಟೀಸ್‌

ಬೆಂಗಳೂರು; ಕಲ್ಲಡ್ಕ ಪ್ರಭಾಕರ್ ಭಟ್‌ ಅವರು ಅಧ್ಯಕ್ಷರಾಗಿರುವ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿರುವ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿಗೆ ಸರ್ಕಾರದ ಪೂರ್ವಾನುಮತಿಯಿಲ್ಲದೆಯೇ ಸ್ವಾಯತ್ತ  ಸ್ಥಾನಮಾನ ನೀಡಿತ್ತು.  ಹಾಗೆಯೇ ಈ ಸ್ವಾಯತ್ತ ಸ್ಥಾನಮಾನ ನೀಡುವ ಮುನ್ನ ರಾಜ್ಯ ಸರ್ಕಾರದ ಪೂರ್ವಾನುಮೋದನೆ ಪಡೆಯಬೇಕು ಎಂದು ಯುಜಿಸಿ ಸ್ಪಷ್ಟವಾಗಿ ಹೇಳಿದ್ದರೂ ಸಹ ಮಂಗಳೂರು ವಿಶ್ವವಿದ್ಯಾಲಯವು ಇದನ್ನು ಬದಿಗೊತ್ತಿತ್ತು.

 

ಸರ್ಕಾರದ ಪೂರ್ವಾನುಮತಿಯಿಲ್ಲದೆಯೇ ಸ್ವಾಯತ್ತ ಸ್ಥಾನಮಾನ ನೀಡಿದ್ದ ಮಂಗಳೂರು ವಿಶ್ವವಿದ್ಯಾಲಯಕ್ಕೀಗ ರಾಜ್ಯ ಕಾಂಗ್ರೆಸ್‌ ಸರ್ಕಾರವು ಕುಲಸಚಿವರಿಗೆ ಕಾರಣ ಕೇಳುವ ನೋಟೀಸ್‌ ನೀಡಿದೆ.

 

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ 1915ರಲ್ಲೇ ಪ್ರಾರಂಭವಾಗಿರುವ ವಿವೇಕಾನಂದ ವಿದ್ಯಾರ್ವಧಕ ಸಂಘವು ಸ್ನಾತಕ, ಸ್ನಾತಕೋತ್ತರ ಸೇರಿದಂತೆ ವಿವಿಧ ತರಗತಿಗಳನ್ನು ನಡೆಸುತ್ತಿದೆ. ಈ ಪೈಕಿ ವಿವೇಕಾನಂದ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಕೂಡ ಒಂದು. ಈ ಕಾಲೇಜಿಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಮಂಗಳೂರು ವಿಶ್ವವಿದ್ಯಾಲಯವು 2022-23ರಿಂದ 2031-32ರವರೆಗೆ ಸ್ವಾಯತ್ತ ಸ್ಥಾನಮಾನ ನೀಡಿತ್ತು. ಈ ಸಂಬಂಧ 2022ರ ಆಗಸ್ಟ್‌ 10ರಂದು ಮಂಗಳೂರು ವಿಶ್ವವಿದ್ಯಾಲಯವು ಕಾಲೇಜಿನ ಪ್ರಾಂಶುಪಾಲರಿಗೆ ಪತ್ರವನ್ನೂ ಬರೆದಿತ್ತು. ಈ ಪತ್ರದ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ನೀಡುವ ಸಂಬಂಧ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯದ ಅಧಿನಿಯಮ 2000ರ ಪ್ರಕರಣ 64 ಅನ್ವಯ ಸರ್ಕಾರದ ಪೂರ್ವಾನುಮತಿ ಪಡೆಯುವುದು ಅವಶ್ಯಕ. ಆದರೆ ಮಂಗಳೂರು ವಿಶ್ವವಿದ್ಯಾಯವು ಸರ್ಕಾರದ ಪೂರ್ವಾನುಮತಿ ಪಡೆಯದೇ ಸ್ವಾಯತ್ತ ಸ್ಥಾನಮಾನ ನೀಡಿತ್ತು. ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000 ಪ್ರಕರಣ 64ರ ಸ್ಪಷ್ಟ ಉಲ್ಲಂಘನೆ ಮಾಡಿದೆ ಎಂದು ಉನ್ನತ ಶಿಕ್ಷಣ ಇಲಾಖೆಯು ಕಾರಣ ಕೇಳುವ ನೋಟೀಸ್‌ ನೀಡಿದೆ.

 

ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಿಗೆ 2024ರ ಸೆ.30ರಂದು ಕಾರಣ ಕೇಳುವ ನೋಟೀಸ್‌ (ಇ-ಕ್ರಮಾಂಕ; ಇಡಿ 173 ಯುಡಿವಿ 2023, ದಿನಾಂಕ 30/09/2024)

 

ನೋಟೀಸ್‌ ನಲ್ಲೇನಿದೆ?

 

ವಿವೇಕಾನಂದ ಕಲಾ, ವಾಣಿಜ್ಯ, ವಿಜ್ಞಾನ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ನೀಡಲು ವಿಶ್ವವಿದ್ಯಾಲಯ ಅನುದಾನ ಆಯೋಗವು ಸ್ವಾಯತ್ತ ಸ್ಥಾನಮಾನ ನೀಡಿದೆ. ಈ ಸಂಬಂಧ ಪತ್ರ (22-1/2022 2023ರ ಮೇ 31ರಂದು (ಎಸಿ) ಬರೆದಿದೆ. ಇದರ ಅನ್ವಯ ಸರ್ಕಾರದ ಅನುಮೋದನೆ ಕೋರಿ ವಿಶ್ವವಿದ್ಯಾಲಯವು 2024ರ ಆಗಸ್ಟ್‌ 8ರಂದು ಬರೆದಿರುವ ಪತ್ರದಲ್ಲಿ ಸ್ಪಷ್ಟ ವಿವರಣೆಯೊಂದಿಗೆ ಪ್ರಸ್ತಾವನೆ ಸಲ್ಲಿಸಿದೆ.

 

ಈ ವಿವರಣೆಯನ್ನು ಪರಿಶೀಲಿಸಲಾಗಿದೆ. ಸಂಯೋಜಿತ ಕಾಲೇಜುಗಳಿಗೆ ಸ್ವಾಯತ್ತ ಸ್ಥಾನಮಾನ ನೀಡುವ ಸಂಬಂಧ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000 ಪ್ರಕರಣ 64ರ ಅನ್ವಯ ವಿಶ್ವವಿದ್ಯಾಲಯವು ಶ್ರೀ ವಿವೇಕಾನಂದ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ನೀಡಲು ಸರ್ಕಾರದ ಪೂರ್ವಾನುಮತಿ ಪಡೆಯುವುದು ಅವಶ್ಯವಾಗಿರುತ್ತದೆ.

 

ಆದರೆ ಮಂಗಳೂರು ವಿಶ್ವವಿದ್ಯಾಲಯವು ಸರ್ಕಾರದ ಪೂರ್ವಾನುಮತಿ ಪಡೆಯದೇ ಸ್ವಾಯತ್ತ ಸ್ಥಾನಮಾನ ನೀಡಿರುವುದು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000 ಪ್ರಕರಣ 64ರ ಸ್ಪಷ್ಟ ಉಲ್ಲಂಘನೆ ಮಾಡಿರುತ್ತದೆ ಎಂದು ಕಾರಣ ಕೇಳುವ ನೋಟೀಸ್‌ನಲ್ಲಿ ತಿಳಿಸಿರುವುದು ಗೊತ್ತಾಗಿದೆ.

 

‘ಈ ಹಿನ್ನೆಲೆಯಲ್ಲಿ ಸರ್ಕಾರದ ಪೂರ್ವಾನುಮತಿ ಪಡೆಯದೇ ತೆಗೆದುಕೊಂಡಿರುವಂತಹ ಈ ನಿರ್ಣಯಕ್ಕೆ ಕಾರಣಕರ್ತರಾದ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಗಳ ವಿರುದ್ದ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000 ಪ್ರಕರಣ 8ರ ಅನ್ವಯ ಏಕೆ ಕ್ರಮ ಕೈಗೊಳ್ಳಬಾರದು ಎಂಬ ಬಗ್ಗೆ ಸೂಕ್ತ ಕಾರಣ, ಸ್ಪಷ್ಟೀಕರಣದೊಂದಿಗೆ ಲಿಖಿತ ಹೇಳಿಕೆಯನ್ನು 15 ದಿನದೊಳಗಾಗಿ ಸರ್ಕಾರಕ್ಕೆ ಸಲ್ಲಿಸಬೇಕು. ತಪ್ಪಿದ್ದಲ್ಲಿ ತಾವುಗಳು ಹೇಳುವುದು ಏನೂ ಇಲ್ಲವೆಂದು ಭಾವಿಸಿ ಏಕಪಕ್ಷೀಯವಾಗಿ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು,’ ಎಂದು ನೋಟೀಸ್‌ನಲ್ಲಿ ಎಚ್ಚರಿಕೆಯನ್ನು ನೀಡಿರುವುದು ತಿಳಿದು ಬಂದಿದೆ.

 

ಈ ನೋಟೀಸ್‌ ನೀಡುವ ಮುನ್ನ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಸಚಿವ ಡಾ ಎಂ ಸಿ ಸುಧಾಕರ್‍‌ ಅವರೊಂದಿಗೆ ಚರ್ಚಿಸಿದ್ದಾರೆ. ಮತ್ತು ಸಚಿವರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಮೌಖಿಕವಾಗಿ ಮಾಹಿತಿ ನೀಡಿದ್ದಾರೆ ಎಂದು ಗೊತ್ತಾಗಿದೆ.

 

2022-23ನೇ ಸಾಲಿನಿಂದ ಸ್ವಾಯತ್ತ ಸ್ಥಾನಮಾನ ಪಡೆಯಲು ವಿಶ್ವವಿದ್ಯಾಲಯದ ಅನುಮದೋನೆಯೊಂದಿಗೆ ಯುಜಿಸಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಸಂಬಂಧ ಯುಜಿಸಿಯು ತಜ್ಞರ ಸಮಿತಿ ರಚಿಸಿತ್ತು.

 

 

ಈ ಸಮಿತಿಗೆ ವಿಶ್ವವಿದ್ಯಾಲಯದ ಪ್ರತಿನಿದಿಯಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಡೀನ್‌ ಮಂಜುನಾಥ ಪಟ್ಟಾಭಿ ಅವರನ್ನು ನೇಮಿಸಿತ್ತು.

 

 

ಈ ಸಮಿತಿಯು 2022-23ರಿಂದ 2031-32ರವರೆಗೆ ಯುಜಿಸಿ ವಿನಿಯಮ 2018ರ ಪ್ರಕಾರ ಸ್ವಾಯತ್ತ ಸ್ಥಾನಮಾನ ನೀಡಲು ನಿರ್ಣಯ ಮಾಡಿತ್ತು. ಅಲ್ಲದೇ ಸಂಯೋಜಿತ ಕಾಲೇಜಿಗಳಿಗೆ ಸ್ವಾಯತ್ತ ಸ್ಥಾನಮಾನ ನೀಡಬೇಕಾದರೇ ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆಯಬೇಕು ಎಂದು ವ್ಯಾಖ್ಯಾನಿಸಿತ್ತು. ಇದನ್ನಾಧರಿಸಿ ಮಂಗಳೂರು ವಿಶ್ವವಿದ್ಯಾಲಯವು 2022ರ ಆಗಸ್ಟ್‌ 10ರಂದು ಸ್ವಾಯತ್ತ ಸ್ಥಾನಮಾನ ನೀಡಿ ಆದೇಶ ಹೊರಡಿಸಿತ್ತು.

the fil favicon

SUPPORT THE FILE

Latest News

Related Posts