42.97 ಕೋಟಿ ರು ಬಳಕೆ ಪ್ರಮಾಣಪತ್ರ; ಕಲ್ಲೇಶ್‌ ಅಮಾನತು ಆದೇಶ ಕಡತ ಬಹಿರಂಗಪಡಿಸದ ಸರ್ಕಾರ

ಬೆಂಗಳೂರು; ಕೇಂದ್ರ ಸರ್ಕಾರವು ಬಿಡುಗಡೆಗೊಳಿಸಿದ್ದ 42.97 ಕೋಟಿ ರು. ಅನುದಾನದ ಬಳಕೆ ಪ್ರಮಾಣ ಪತ್ರ ಸಲ್ಲಿಸದೇ ಕರ್ತವ್ಯಲೋಪ ಎಸಗಿರುವ  ಆರೋಪಕ್ಕೆ ಸಂಬಂಧಿಸಿದಂತೆ  ಬಿ ಕಲ್ಲೇಶ್‌ ಅವರ ಅಮಾನತು ಆದೇಶ ಹೊರಡಿಸಿದ್ದ ಸರ್ಕಾರವು ಇದೀಗ ಆ ಸಂಬಂಧಿತ  ಕಡತವನ್ನು ಒದಗಿಸಲು   ನಿರಾಕರಿಸಿದೆ.

 

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿರುವ ಬಿ ಕಲ್ಲೇಶ್‌ ಅವರು  ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧವೇ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ ಸರ್ಕಾರದ ಬೆನ್ನಿಗೆ ನಿಂತಿದ್ದರು. ಈ   ಪ್ರಕರಣದ ಬೆನ್ನಲ್ಲೇ ಸರ್ಕಾರವು ಕಲ್ಲೇಶ್‌ ಅಮಾನತು ಆದೇಶದ ಕಡತವನ್ನೇ ಒದಗಿಸಲು ನಿರಾಕರಿಸಿರುವುದು ಮುನ್ನೆಲೆಗೆ ಬಂದಿದೆ.

 

42.97 ಕೋಟಿ ರು. ಮೊತ್ತ ಅನುದಾನ ಬಳಕೆ ಮಾಡಿರುವ ಪ್ರಮಾಣ ಪತ್ರಗಳನ್ನೇ ಸಲ್ಲಿಸಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಬಿ ಕಲ್ಲೇಶ್‌ ಅವರನ್ನು ಸರ್ಕಾರವು 2024ರ ಜೂನ್‌ 22ರಂದು  ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು.  ಆದರೀಗ  ಸರ್ಕಾರವು ಇದೀಗ ಇದೇ ಆದೇಶಕ್ಕೆ ಸಂಬಂಧಿಸಿದ  ಕಡತವನ್ನು ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ  ಬಹಿರಂಗಪಡಿಸಲು ನಿರಾಕರಿಸಿದೆ.

 

42.97 ಕೋಟಿ ರು. ಅನುದಾನ ಬಳಕೆಗೆ ಸಂಬಂಧಿಸಿದ ಪ್ರಮಾಣ ಪತ್ರ ಸಲ್ಲಿಸದೇ ಇರುವ ಪ್ರಕರಣವು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಮಧ್ಯೆ ಸಂಬಂಧವಿದೆ ಎಂಬ ಅನುಮಾನಗಳಿಗೆ ಸರ್ಕಾರವು ನೀಡಿರುವ ಉತ್ತರವು ಹೆಚ್ಚು ಪುಷ್ಠಿ ನೀಡಿದಂತಾಗಿದೆ.

 

ಈ ಆದೇಶಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ 2024ರ ಜುಲೈ 1ರಂದು ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಅರ್ಜಿ ಸಲ್ಲಿಸಿತ್ತು.

 

ಈ ಅರ್ಜಿಯನ್ನು ಒಂದು ತಿಂಗಳವರೆಗೂ ನಿರ್ದೇಶನಾಲಯ ಮತ್ತು ಇಲಾಖೆಯು  ತನ್ನ ಬಳಿಯೇ ಇಟ್ಟುಕೊಂಡಿತ್ತು. ಇದೀಗ 2024ರ ಆಗಸ್ಟ್‌ 3ರಂದು ಕಡತ ಒದಗಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಇದಕ್ಕೆ ಮಾಹಿತಿ ಹಕ್ಕು ಅಧಿನಿಯಮ ಕಲಂ 8(ಹೆಚ್‌) ನ್ನು ಮುಂದಿರಿಸಿದೆ.

‘ತನಿಖಾ ಕ್ರಮಕ್ಕೆ ಅಥವಾ ಅಪರಾಧಿಗಳ ದಸ್ತಗಿರಿಗೆ ಅಥವಾ ಪ್ರಾಸಿಕ್ಯೂಷನ್‌ ಕಾರ್ಯಕ್ಕೆ ಅಡಚಣೆಯನ್ನುಂಟು ಮಾಡುವಂತಹ ಮಾಹಿತಿ’ಯನ್ನು ಒದಗಿಸಲು ಮಾಹಿತಿ ಹಕ್ಕು ಅಧಿನಿಯಮದ ಸೆಕ್ಷನ್‌ 8(ಹೆಚ್‌)ರಡಿ ನಿರ್ಬಂಧವಿದೆ. ಆದರೆ ಕಲ್ಲೇಶ್‌ ಬಿ ಅವರನ್ನು ಅಮಾನತು ಮಾಡಿರುವ ಆದೇಶಕ್ಕೂ ಈ ಕಲಂಗೂ ಸಂಬಂಧವೇ ಇಲ್ಲ.

 

ಆದರೂ ಸರ್ಕಾರವು ಸೆಕ್ಷನ್‌ 8(ಹೆಚ್‌)ನ್ನು ಮುಂದಿರಿಸಿ  42.97 ಕೋಟಿ ರು. ಮೊತ್ತ ಅನುದಾನ ಬಳಕೆ ಪ್ರಮಾಣ ಪತ್ರದ ಸಂಬಂಧದ ಕಡತವನ್ನು ಒದಗಿಸಲು ನಿರಾಕರಿಸಿದೆ. ಸರ್ಕಾರದ ಈ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಕೇಂದ್ರ ಸರ್ಕಾರವು ರಾಜ್ಯಕ್ಕೆ ಕಳೆದೆರಡು ವರ್ಷಗಳಲ್ಲಿ ಬಿಡುಗಡೆ ಮಾಡಿದ್ದ ಒಟ್ಟು ಅನುದಾನದ ಪೈಕಿ 42.97 ಕೋಟಿ ರು. ಮೊತ್ತ ಅನುದಾನ ಬಳಕೆ ಮಾಡಿರುವ ಪ್ರಮಾಣ ಪತ್ರಗಳನ್ನೇ ಸಲ್ಲಿಸಿರಲಿಲ್ಲ.   ಇದರಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ 21.59 ಕೋಟಿ ರು. ಪೈಕಿ 5.23 ಕೋಟಿ ರು ಮೊತ್ತಕ್ಕೆ ಬಳಕೆ ಪ್ರಮಾಣ ಪತ್ರ ಸಲ್ಲಿಸಿರಲಿಲ್ಲ.  ಹೀಗಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಬಿ ಕಲ್ಲೇಶ್‌ ಅವರನ್ನು ಸೇವೆಯಿಂದಲೇ ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು.

 

ಪಿವಿಟಿಜಿ ಯೋಜನೆಯಡಿ ಕೇಂದ್ರ ಸರ್ಕಾರವು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ 2021-22 ಹಾಗೂ 2022-23ನೇ ಸಾಲಿನಲ್ಲಿ ರಾಜ್ಯಕ್ಕೆ 21.59 ಕೋಟಿ ರು ಅನುದಾನ ಬಿಡುಗಡೆಗೊಳಿಸಿತ್ತು. ಈ ಪೈಕಿ 5.23 ಕೋಟಿ ರು.ಗ ಅನುದಾನಕ್ಕೆ ಬಳಕೆ ಪ್ರಮಾಣ ಪತ್ರ ಸಲ್ಲಿಕೆಯಾಗಿರಲಿಲ್ಲ ಎಂಬುದು ಆದೇಶದಲ್ಲಿ ವಿವರಿಸಲಾಗಿತ್ತು.

 

ಹಾಗೆಯೇ ಎಸ್‌ಎನ್‌ಎ ಖಾತೆಯಲ್ಲಿ ಬಾಕಿ ಇರುವ 2.47 ಕೋಟಿ ರು ಮತ್ತು ಎಸ್‌ಎನ್‌ಎ ಮತ್ತೊಂದು ಖಾತೆಯಲ್ಲಿನ ಬಾಕಿ ಇರುವ 60.83 ಲಕ್ಷ ರು.ಗಳ ವರ್ಗಾವಣೆಗೆ ಬಾಕಿ ಇತ್ತು. ಈ ಬಗ್ಗೆ ಕೇಂದ್ರ ಸರ್ಕಾರದಿಂದ 08 ನೆನಪೋಲೆಗಳು ಸ್ವೀಕೃತಗೊಂಡಿದ್ದರೂ ನಿಗದಿತ ಅವಧಿಯಲ್ಲಿ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸದ ಬಿ ಕಲ್ಲೇಶ್‌ ಅವರು ಕರ್ತವ್ಯಲೋಪ ಎಸಗಿದ್ದರು ಎಂಬುದು ಇಲಾಖೆಯ ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿತ್ತು.

 

ಈ ಸಂಬಂಧ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಬಿ ಕಲ್ಲೇಶ್‌ ಅವರಿಗೆ ಕಾರಣ ಕೇಳುವ ನೋಟೀಸ್‌ ಜಾರಿಗೊಳಿಸಿತ್ತು. ಅವರು ಲಿಖಿತ ಸಮಜಾಯಿಷಿಯಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಸಮರ್ಥನೀಯ ಹೇಳಿಕೆ ಸಲ್ಲಿಸಿಲ್ಲ ಎಂಬುದು ಆದೇಶದಿಂದ ಗೊತ್ತಾಗಿದೆ.

 

2022-23ನೇ ಸಾಲಿನಲ್ಲಿ ರಾಜ್ಯಕ್ಕೆ ಬಿಡುಗಡೆಗೊಳಿಸಿದ್ದ ಒಟ್ಟು 42.97 ಕೋಟಿ ರು ಅನುದಾನಕ್ಕೆ ಬಳಕೆ ಪ್ರಮಾಣ ಪತ್ರವನ್ನ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರಲಿಲ್ಲ. ಹಣಕಾಸು ಪ್ರಗತಿ ವರದಿಯನ್ನೂ ಸಲ್ಲಿಸಿರಲಿಲ್ಲ. ಇದಕ್ಕೆ ರಾಜ್ಯ ಸರ್ಕಾರವೇ ಜವಾಬ್ದಾರಿ ಎಂದು 2024ರ ಮೇ 6ರಂದು ಪತ್ರ ಬರೆದಿತ್ತು .

 

ಈ ಕುರಿತು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ಹಲವಾರು ಸಭೆಗಳು ನಡೆದಿದ್ದವು. ಆದರೂ ಬಿ ಕಲ್ಲೇಶ್‌ ಅವರು ಈ ಸಂಬಂಧ ಯಾವುದೇ ಕ್ರಮಕೈಗೊಂಡಿರಲಿಲ್ಲ. ಬಳಕೆ ಪ್ರಮಾಣ ಪತ್ರಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸದೇ ಕರ್ತವ್ಯ ಲೋಪ ಎಸಗಿದ್ದರು ಎಂಬುದು ತಿಳಿದು ಬಂದಿದೆ.

 

ಅಲ್ಲದೇ ವಸತಿ ನಿಲಯಗಳ ಪರಿವೀಕ್ಷಣೆ ಮಾಡಿರಲಿಲ್ಲ. ವಿದ್ಯಾರ್ಥಿ ನಿಲಯ ಹಾಗೂ ವಸತಿ ನಿಲಯಗಳಲ್ಲಿ ಬೇಡಿಕೆ ಪಡೆಯದೇ ಸಾಮಗ್ರಿಗಳನ್ನು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕರ ಕಚೇರಿಯಿಂದ ಕೇಂದ್ರೀಕೃತ ಟೆಂಡರ್ ಮುಖಾಂತರ ಖರೀದಿಸಿ ವಸತಿ ನಿಲಯಗಳಿಗೆ ಸರಬರಾಜು ಮಾಡಿದ್ದರು.

 

ಸಾರ್ವಜನಿಕರ ಹಣ ಸಮರ್ಪಕವಾಗಿ ನಿಯೋಜಿತ ಕಾರ್ಯಕ್ರಮಗಳಿಗೆ ಬಳಕೆಯಾಗಿರಲಿಲ್ಲ. ಮತ್ತು ವಸತಿ, ಆಶ್ರಮ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಶೇ.75ಕ್ಕಿಂತ ಕಡಿಮೆ ಇದ್ದು ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಬೇತಿ ಮೂಲಕ ಗುಣಾತ್ಮಕ ಶಿಕ್ಷಣ ನೀಡಲು ಅಗತ್ಯ ಕ್ರಮವಹಿಸದೇ ಇರುವುದು ಕಂಡು ಬಂದಿತ್ತು.

 

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವನ್ನು ಕತ್ತಲಲ್ಲಿಟ್ಟಿದ್ದ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಅಧಿಕಾರಿಗಳು ಓವರ್‍‌ ಡ್ರಾಫ್ಟ್‌ ಸೌಲಭ್ಯ ಮತ್ತು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಅನಧಿಕೃತವಾಗಿ ಬೇರೆ ಬೇರೆ ಖಾತೆಗಳಿಗೆ 94.73 ಕೋಟಿ ರುಪಾಯಿ ವರ್ಗಾವಣೆ ಮಾಡಿದ್ದರು.

ನಕಲಿ ದಾಖಲೆ ಸೃಷ್ಟಿಸಿ ಅನಧಿಕೃತ ಖಾತೆಗಳಿಗೆ 94.73 ಕೋಟಿ ವರ್ಗಾವಣೆ; ನಿಗಮವನ್ನೇ ಕತ್ತಲಲ್ಲಿಟ್ಟಿದ್ದ ಬ್ಯಾಂಕ್‌!

ನಿಗಮದ ಲೆಕ್ಕ ಅಧೀಕ್ಷಕ ಚಂದ್ರಶೇಖರ್‍‌ ಆತ್ಮಹತ್ಯೆ ಪ್ರಕರಣವು ರಾಜಕೀಯಕರಣಗೊಳ್ಳುತ್ತಿದ್ದಂತೆ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್‍‌ ಅವರು ಠಾಣೆಗೆ ನೀಡಿರುವ ದೂರಿನಲ್ಲಿ ಬ್ಯಾಂಕ್‌ನ ಮೋಸದ ಚಟುವಟಿಕೆಗಳನ್ನು ವಿವರಿಸಿದ್ದರು.

 

ರಾಜಶೇಖರ್‍‌ ಅವರು ನೀಡಿದ್ದ ದೂರಿನ ಆಧಾರದ ಮೇಲ್‌ ಬ್ಯಾಂಕ್‌ನ ಎಂ ಡಿ ಹಾಗೂ ಸಿಇಒ ಮನಿಮೇಖಲೈ ಮತ್ತಿತರರ ವಿರುದ್ಧ ಎಫ್‌ಐಆರ್‍‌ ದಾಖಲಾಗಿದೆ. ಬ್ಯಾಂಕ್‌ನ ಅಧಿಕಾರಿಗಳು ನಿಗಮ ಮತ್ತು ನಿಗಮದ ಅಧಿಕಾರಿಗಳ ಗಮನಕ್ಕೂ ತಾರದೆಯೇ ನಿಗಮಕ್ಕೆ ಸೇರಿದ 94.73 ಕೋಟಿ ರು.ಗಳನ್ನು ಅನಧಿಕೃತವಾಗಿ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದರು ಎಂದು ಎಫ್‌ಐಆರ್‍‌ನಲ್ಲಿ ಉಲ್ಲೇಖಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts